ಸಂಪುಟ
azadi ka amrit mahotsav

16ನೇ ಹಣಕಾಸು ಆಯೋಗದ ಅವಧಿಗೆ (2026-27ರಿಂದ 2030-31ನೇ ಹಣಕಾಸು ವರ್ಷದವರೆಗೆ) ₹1,141 ಕೋಟಿ ವೆಚ್ಚದಲ್ಲಿ ʼಅಂಚೆ ಕಾರ್ಯಾಚರಣೆʼಯೋಜನೆಯನ್ನು ಮುಂದುವರಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ


ಅಂಚೆ ಜಾಲದ ಆಧುನೀಕರಣ, ಪಾರ್ಸೆಲ್ ಮತ್ತು ಅಂಚೆ ನಿರ್ವಹಣಾ ವ್ಯವಸ್ಥೆ ಬಲಪಡಿಸುವುದು, ಗ್ರಾಮೀಣ ಸಂಪರ್ಕ ಸುಧಾರಣೆ ಹಾಗೂ ನಾಗರಿಕ ಕೇಂದ್ರಿತ ಸೇವೆಗಳನ್ನು ಉತ್ತಮಗೊಳಿಸುವುದು ಯೋಜನೆಯ ಉದ್ದೇಶವಾಗಿದೆ

ಇ-ಕಾಮರ್ಸ್ ಸರಕು ಸಾಗಣೆ, ಆರ್ಥಿಕ ಒಳಗೊಳ್ಳುವಿಕೆ, ಅಂತಾರಾಷ್ಟ್ರೀಯ ಅಂಚೆ ಕಾರ್ಯಾಚರಣೆ ಮತ್ತು ಅಂಚೆ ಇಲಾಖೆಯ ಸೇವೆಗಳ ಡಿಜಿಟಲ್ ಪರಿವರ್ತನೆಗೆ ಆದ್ಯತೆ ನೀಡಲಾಗುವುದು

ಪ್ರಕಟಣಾ ದಿನಾಂಕ: 25 NOV 2026 3:29PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು, 16ನೇ ಹಣಕಾಸು ಆಯೋಗದ ಅವಧಿಯಲ್ಲಿ ಅಂದರೆ 2026-27ರಿಂದ 2030-31ನೇ ಹಣಕಾಸು ವರ್ಷದವರೆಗೆ, ₹1,141 ಕೋಟಿಗಳ ಪ್ರಸ್ತಾವಿತ ವೆಚ್ಚದೊಂದಿಗೆ ಕೇಂದ್ರ ವಲಯದ ‘ಅಂಚೆ ಕಾರ್ಯಾಚರಣೆ’ ಯೋಜನೆಯನ್ನು ಮುಂದುವರಿಸಲು ಅನುಮೋದನೆ ನೀಡಿದೆ. ದೇಶಾದ್ಯಂತ ಅಂಚೆ ಮೂಲಸೌಕರ್ಯವನ್ನು ಬಲಪಡಿಸುವುದು, ಕಾರ್ಯಾಚರಣೆಯ ದಕ್ಷತೆಯನ್ನು ಸುಧಾರಿಸುವುದು ಹಾಗೂ ಸರಕು ಸಾಗಣೆ, ಇ-ಕಾಮರ್ಸ್ ಮತ್ತು ಡಿಜಿಟಲ್ ಸೇವೆಗಳ ವಿತರಣೆಗೆ ಹೆಚ್ಚುತ್ತಿರುವ ಅಗತ್ಯಗಳನ್ನು ಪೂರೈಸಲು ಬೆಂಬಲ ನೀಡುವುದು ಈ ಯೋಜನೆಯ ಉದ್ದೇಶವಾಗಿದೆ.

1.65 ಲಕ್ಷ ಅಂಚೆ ಕಚೇರಿಗಳನ್ನು ಒಳಗೊಂಡಿರುವ ವಿಶ್ವದ ಅತಿದೊಡ್ಡ ಅಂಚೆ ಜಾಲಗಳಲ್ಲಿ ಒಂದಾದ ಭಾರತೀಯ ಅಂಚೆ ಇಲಾಖೆಯು, ಗ್ರಾಮೀಣ ಪ್ರದೇಶಗಳಲ್ಲಿರುವ 1,49,655 ಅಂಚೆ ಕಚೇರಿಗಳು ಸೇರಿದಂತೆ ದೇಶಾದ್ಯಂತ ತನ್ನ ಸೇವೆಗಳನ್ನು ಮುಂದುವರಿಸಿದೆ. ವಿಶೇಷವಾಗಿ ದೂರದ ಮತ್ತು ಸೇವಾ ಸೌಲಭ್ಯಗಳು ಸಮರ್ಪಕವಾಗಿ ತಲುಪದ ಪ್ರದೇಶಗಳಲ್ಲಿ ಪತ್ರಗಳು, ಪಾರ್ಸೆಲ್‌ಗಳು, ಬ್ಯಾಂಕಿಂಗ್, ವಿಮೆ ಹಾಗೂ ನಾಗರಿಕ ಕೇಂದ್ರಿತ ಇತರ ಸೇವೆಗಳನ್ನು ಒದಗಿಸುವ ಪ್ರಮುಖ ವೇದಿಕೆಯಾಗಿ ಭಾರತೀಯ ಅಂಚೆ ಇಲಾಖೆ ಕಾರ್ಯನಿರ್ವಹಿಸುತ್ತಿದೆ.

ತನ್ನ ಪ್ರಮುಖ ಅಂಚೆ ಕಾರ್ಯಾಚರಣೆಗಳ ಜೊತೆಗೆ, ಅಂಚೆ ಕಚೇರಿ ಉಳಿತಾಯ ಬ್ಯಾಂಕ್ (ಪಿಒಎಸ್‌ಬಿ), ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (ಐಪಿಪಿಬಿ), ಅಂಚೆ ಜೀವ ವಿಮೆ (ಪಿಎಲ್‌ಐ), ಆಧಾರ್ ನೋಂದಣಿ ಮತ್ತು ಮಾಹಿತಿ ನವೀಕರಣ, ಅಂಚೆ ಕಚೇರಿ ಪಾಸ್‌ಪೋರ್ಟ್ ಸೇವಾ ಕೇಂದ್ರಗಳ ಮೂಲಕ ಪಾಸ್‌ಪೋರ್ಟ್ ಸೇವೆಗಳು, ಕೆವೈಸಿ ಪರಿಶೀಲನಾ ಸೇವೆಗಳು ಹಾಗೂ ಡಾಕ್‌ಘರ್ ನಿರ್ಯಾತ ಕೇಂದ್ರಗಳ (ಡಿಎನ್‌ಕೆ) ಮೂಲಕ ಗ್ರಾಮೀಣ ಕುಶಲಕರ್ಮಿಗಳಿಗೆ ಬೆಂಬಲ ನೀಡುವಂತಹ ವಿವಿಧ ಸಾರ್ವಜನಿಕ ಸೇವೆಗಳನ್ನು ಭಾರತೀಯ ಅಂಚೆ ಇಲಾಖೆ ಒದಗಿಸುತ್ತಿದೆ.

ಅಂಚೆ ಮೂಲಸೌಕರ್ಯವನ್ನು ಆಧುನೀಕರಿಸಲು, ಕೊನೆಯ ಹಂತದ ವಿತರಣಾ ವ್ಯವಸ್ಥೆಯನ್ನು ಬಲಪಡಿಸಲು, ಸರಕು ಸಾಗಣೆ ದಕ್ಷತೆಯನ್ನು ಸುಧಾರಿಸಲು, ಹಣಕಾಸು ಒಳಗೊಳ್ಳುವಿಕೆಯನ್ನು ಉತ್ತೇಜಿಸಲು ಹಾಗೂ ದೇಶಾದ್ಯಂತ ಗ್ರಾಹಕ ಕೇಂದ್ರಿತ ಸೇವೆಗಳ ವಿತರಣೆಯನ್ನು ಉತ್ತಮಗೊಳಿಸಲು ಈ ಯೋಜನೆಯು ನೆರವಾಗಲಿದೆ. ಈ ಪ್ರಸ್ತಾವನೆಯು ಡಿಜಿಟಲ್ ಇಂಡಿಯಾ, ಆತ್ಮನಿರ್ಭರ ಭಾರತ ಮತ್ತು ವಿಕಸಿತ ಭಾರತ ಅಭಿಯಾನಗಳ ಉದ್ದೇಶಗಳಿಗೂ ಪೂರಕವಾಗಿದೆ.

2026-27ರಿಂದ 2030-31ನೇ ಹಣಕಾಸು ವರ್ಷದವರೆಗೆ ಐದು ವರ್ಷಗಳ ಅವಧಿಯಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ.

ಅಂಚೆ ಕಾರ್ಯಾಚರಣೆ ಯೋಜನೆಯು ಈ ಕೆಳಗಿನ ಆರು ಉಪಯೋಜನೆಗಳನ್ನು ಒಳಗೊಂಡಿದೆ:

1. ಗ್ರಾಮೀಣ ವ್ಯವಹಾರ ಮತ್ತು ಅಂಚೆ ಜಾಲದ ಲಭ್ಯತೆ – ₹120 ಕೋಟಿ - ಮೂಲಸೌಕರ್ಯ ಉನ್ನತೀಕರಣ, ಏಕರೂಪದ ಬ್ರ್ಯಾಂಡಿಂಗ್ ಮತ್ತು ಸಂಪನ್ಮೂಲಗಳ ಉತ್ತಮ ಬಳಕೆಗೆ ಒತ್ತು ನೀಡುವ ಮೂಲಕ, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿನ ಅಂಚೆ ಕಚೇರಿಗಳನ್ನು ದಕ್ಷ ಹಾಗೂ ನಾಗರಿಕ ಕೇಂದ್ರಿತ ಸೇವಾ ಕೇಂದ್ರಗಳಾಗಿ ಪರಿವರ್ತಿಸುವುದು ಈ ಉಪಯೋಜನೆಯ ಉದ್ದೇಶವಾಗಿದೆ. ಸೇವೆಗಳು ಸಮರ್ಪಕವಾಗಿ ತಲುಪದ ಪ್ರದೇಶಗಳಲ್ಲಿ ಕೊನೆಯ ಹಂತದ ವಿತರಣೆಯನ್ನು ಸುಧಾರಿಸುವುದರ ಜೊತೆಗೆ, ಅಂಚೆ ಮತ್ತು ನಾಗರಿಕ ಕೇಂದ್ರಿತ ಸೇವೆಗಳಿಗೆ ಜನರ ಪ್ರವೇಶವನ್ನು ಹೆಚ್ಚಿಸುವುದು, ಆರ್ಥಿಕ ಒಳಗೊಳ್ಳುವಿಕೆ, ಡಿಜಿಟಲ್ ಸಂಪರ್ಕ ಹಾಗೂ ಸ್ಥಳೀಯ ಆರ್ಥಿಕ ಅಭಿವೃದ್ಧಿಯನ್ನು ಬಲಪಡಿಸುವ ಗುರಿಯನ್ನು ಈ ಘಟಕ ಹೊಂದಿದೆ.

2. ಅಂಚೆ ಜಾಲದ ಕಾರ್ಯಾಚರಣೆಗಳ ಸುಧಾರಣೆ – ₹575 ಕೋಟಿ - ಕೇಂದ್ರೀಕೃತ ವಿತರಣಾ ವ್ಯವಸ್ಥೆಗಳು, ಯಾಂತ್ರೀಕರಣ, ಸುಧಾರಿತ ಅಂಚೆ ತಂತ್ರಜ್ಞಾನ (ಎಪಿಟಿ 2.0) ಅಡಿಯಲ್ಲಿ ಉನ್ನತ ಮಾಹಿತಿ ತಂತ್ರಜ್ಞಾನ ಪರಿಹಾರಗಳು, ಜಿಐಎಸ್ ಆಧಾರಿತ ಸೇವೆಗಳು ಹಾಗೂ ಉನ್ನತೀಕರಿಸಿದ ಮೂಲಸೌಕರ್ಯಗಳ ಮೂಲಕ ಅಂಚೆ ಕಾರ್ಯಾಚರಣೆಗಳನ್ನು ಆಧುನೀಕರಿಸುವ ಗುರಿಯನ್ನು ಈ ಉಪಯೋಜನೆ ಹೊಂದಿದೆ. ಜತೆಗೆ, ವಿತರಣಾ ಅಂಚೆ ಕಚೇರಿಗಳು, ಅಂಚೆ ನಿರ್ವಹಣಾ ವ್ಯವಸ್ಥೆಗಳು, ಮೇಲ್ ಮೋಟಾರ್ ಸರ್ವೀಸ್ (ಎಂಎಂಎಸ್) ಕಾರ್ಯಾಗಾರಗಳು, ರಸ್ತೆ ಸಾರಿಗೆ ಜಾಲ ಹಾಗೂ ಆಧುನಿಕ ಸ್ಮಾರ್ಟ್ 24x7 ಅಂಚೆ ಪೆಟ್ಟಿಗೆಗಳನ್ನು ಬಲಪಡಿಸುವುದೂ ಈ ಉಪಕ್ರಮದಲ್ಲಿ ಸೇರಿದೆ. ಈ ಮೂಲಕ ಇಡೀ ಅಂಚೆ ಜಾಲದ ಕಾರ್ಯಾಚರಣೆಯ ದಕ್ಷತೆ, ಪಾರದರ್ಶಕತೆ, ಸೇವೆಯ ಗುಣಮಟ್ಟ ಮತ್ತು ಸರಕು ಸಾಗಣೆಯ ವಿಶ್ವಾಸಾರ್ಹತೆಯನ್ನು ಸುಧಾರಿಸುವ ಉದ್ದೇಶ ಹೊಂದಲಾಗಿದೆ.

3. ಪಾರ್ಸೆಲ್ ಜಾಲದ ಕಾರ್ಯಾಚರಣೆಗಳ ಸುಧಾರಣೆ – ₹278 ಕೋಟಿ - ಮರುವಿನ್ಯಾಸಗೊಳಿಸಲಾದ ವಿಂಗಡಣಾ ವ್ಯವಸ್ಥೆಗೆ ಅನುಗುಣವಾಗಿ ಪಾರ್ಸೆಲ್ ಹಬ್‌ಗಳ ನಿರ್ಮಾಣ ಮತ್ತು ಪಾರ್ಸೆಲ್ ಪ್ಯಾಕೇಜಿಂಗ್ ಘಟಕಗಳ (ಪಿಪಿಯು) ವಿಸ್ತರಣೆಯನ್ನು ಈ ಉಪಯೋಜನೆ ಒಳಗೊಂಡಿದೆ. ಪಾರ್ಸೆಲ್‌ಗಳ ಸಾಗಣೆಯನ್ನು ಸುಗಮಗೊಳಿಸುವುದು, ನಿರ್ವಹಣಾ ಹಂತಗಳನ್ನು ಕಡಿಮೆ ಮಾಡುವುದು, ಸಾಮರ್ಥ್ಯದ ಮೇಲಿನ ಒತ್ತಡವನ್ನು ತಗ್ಗಿಸುವುದು ಹಾಗೂ ಸಾಗಣೆ ಸಮಯವನ್ನು ಕಡಿಮೆ ಮಾಡುವುದು ಇದರ ಉದ್ದೇಶವಾಗಿದೆ. ಉದ್ದೇಶಿತ ಸೌಲಭ್ಯಗಳು, ಏಕರೂಪದ ಸುರಕ್ಷಿತ ಪ್ಯಾಕೇಜಿಂಗ್ ಮತ್ತು ಕಾರ್ಯಾಚರಣೆಯಲ್ಲಿ ಹೆಚ್ಚಿನ ನಮ್ಯತೆಯ ಮೂಲಕ ಇ-ಕಾಮರ್ಸ್ ಹಾಗೂ ಗ್ರಾಮೀಣ ಮಾರುಕಟ್ಟೆಗಳಿಂದ ಹೆಚ್ಚುತ್ತಿರುವ ಪಾರ್ಸೆಲ್ ಪ್ರಮಾಣವನ್ನು ನಿರ್ವಹಿಸಲು ಈ ಘಟಕ ನೆರವಾಗಲಿದೆ. ಜತೆಗೆ, ಗ್ರಾಹಕರ ವಿಶ್ವಾಸವನ್ನು ಹೆಚ್ಚಿಸುವುದು ಮತ್ತು ಸರಕು ಸಾಗಣೆ ವಲಯದಲ್ಲಿ ಭಾರತೀಯ ಅಂಚೆ ಇಲಾಖೆಯ ಸ್ಪರ್ಧಾತ್ಮಕತೆಯನ್ನು ಬಲಪಡಿಸುವ ಗುರಿಯನ್ನೂ ಹೊಂದಿದೆ.

4. ಮೂಲಸೌಕರ್ಯ ಉನ್ನತೀಕರಣ ಮತ್ತು ಅಂತಾರಾಷ್ಟ್ರೀಯ ಅಂಚೆಗಾಗಿ ಮೂಲಸೌಕರ್ಯ ವಿಸ್ತರಣೆ – ₹8 ಕೋಟಿ - ವಿದೇಶಿ ಅಂಚೆ ಕಚೇರಿಗಳು (ಎಫ್‌ಪಿಒ) ಮತ್ತು ಉಪ ವಿದೇಶಿ ಅಂಚೆ ಕಚೇರಿಗಳ (ಎಸ್‌ಎಫ್‌ಪಿಒ) ಮೂಲಸೌಕರ್ಯವನ್ನು ಉನ್ನತೀಕರಿಸುವ ಮೂಲಕ ಅಂತಾರಾಷ್ಟ್ರೀಯ ಅಂಚೆ ಸೇವೆಗಳನ್ನು ಬಲಪಡಿಸುವುದು ಈ ಉಪಯೋಜನೆಯ ಉದ್ದೇಶವಾಗಿದೆ. ಇದರಿಂದ ಅಂತಾರಾಷ್ಟ್ರೀಯ ಸರಕು ರವಾನೆಗಳ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಅನುಕೂಲವಾಗಲಿದೆ. ಅಂಚೆ ವಿಭಾಗಗಳು ಮತ್ತು ರೈಲ್ವೆ ಮೇಲ್ ಸೇವೆ (ಆರ್‌ಎಂಎಸ್) ವಿಭಾಗಗಳ ಮೂಲಕ ಮಾರುಕಟ್ಟೆ ಪ್ರಚಾರ ಮತ್ತು ಜಾಹೀರಾತು ಚಟುವಟಿಕೆಗಳನ್ನು ಕೈಗೊಳ್ಳುವುದೂ ಈ ಉಪಕ್ರಮದಲ್ಲಿ ಸೇರಿದೆ. ನಿಯಮಗಳ ಪಾಲನೆ, ತಂತ್ರಜ್ಞಾನ ಸಂಯೋಜನೆ ಮತ್ತು ರಫ್ತು ಸರಕು ಸಾಗಣೆಗೆ ಬೆಂಬಲವನ್ನು ಸುಧಾರಿಸುವುದರ ಜೊತೆಗೆ, ಭಾರತೀಯ ಅಂಚೆ ಇಲಾಖೆಯನ್ನು ವಿಶ್ವಾಸಾರ್ಹ ಅಂತಾರಾಷ್ಟ್ರೀಯ ಸರಕು ಸಾಗಣೆ ಸೇವಾ ಪೂರೈಕೆದಾರನಾಗಿ ರೂಪಿಸುವ ಗುರಿಯನ್ನು ಇದು ಹೊಂದಿದೆ.

5. ಸೇವೆಯ ಗುಣಮಟ್ಟ ಸೇರಿದಂತೆ ಮಾರುಕಟ್ಟೆ ಪ್ರಚಾರ ಚಟುವಟಿಕೆಗಳು – ₹100 ಕೋಟಿ - ದೂರದರ್ಶನ, ಡಿಜಿಟಲ್, ರೇಡಿಯೋ, ಮುದ್ರಣ ಮತ್ತು ಹೊರಾಂಗಣ ಮಾಧ್ಯಮಗಳ ಮೂಲಕ ಬಹುಮಾಧ್ಯಮ ಪ್ರಚಾರ ಅಭಿಯಾನಗಳನ್ನು ನಡೆಸಿ, ಸೇವೆಗಳ ಪ್ರಚಾರ, ಬ್ರ್ಯಾಂಡಿಂಗ್, ಜನಸಂಪರ್ಕ ಮತ್ತು ಗ್ರಾಹಕರೊಂದಿಗೆ ಸಂವಹನವನ್ನು ಬಲಪಡಿಸುವುದಕ್ಕೆ ಈ ಉಪಯೋಜನೆ ಆದ್ಯತೆ ನೀಡುತ್ತದೆ. ಕಾರ್ಯಕ್ರಮಗಳು ಮತ್ತು ಪ್ರದರ್ಶನಗಳಲ್ಲಿ ಭಾಗವಹಿಸುವುದು, ಸಾಮಾಜಿಕ ಮಾಧ್ಯಮ ಅಭಿಯಾನಗಳು, ನೇರ ಮಾರುಕಟ್ಟೆ ಪ್ರಚಾರ ಹಾಗೂ ಗ್ರಾಮೀಣ ಮತ್ತು ಸೇವೆಗಳು ಸಮರ್ಪಕವಾಗಿ ತಲುಪದ ಪ್ರದೇಶಗಳಲ್ಲಿ ಜನರೊಂದಿಗೆ ತಳಮಟ್ಟದ ಸಂಪರ್ಕವನ್ನು ಗಾಢಗೊಳಿಸಲು ಡಾಕ್ ಚೌಪಾಲ್ ಚಟುವಟಿಕೆಗಳನ್ನು ವಿಸ್ತರಿಸುವುದೂ ಈ ಘಟಕದಲ್ಲಿ ಸೇರಿದೆ. ಇದರ ಜೊತೆಗೆ, ಸೇವೆಯ ಗುಣಮಟ್ಟವನ್ನು ಸುಧಾರಿಸಲು ಮತ್ತು ಗ್ರಾಹಕ ಕೇಂದ್ರಿತ ಕಾರ್ಯವಿಧಾನವನ್ನು ಬಲಪಡಿಸಲು ಮೂಲಸೌಕರ್ಯ ಉನ್ನತೀಕರಣ, ಸ್ಟುಡಿಯೊ ಸೌಲಭ್ಯಗಳು, ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (ಐಸಿಟಿ) ಸುಧಾರಣೆಗಳು, ಮಾರುಕಟ್ಟೆ ಸಂಶೋಧನೆ, ಪ್ರಭಾವಿಗಳ ಸಹಭಾಗಿತ್ವ ಹಾಗೂ ಮೂರನೇ ವ್ಯಕ್ತಿಯ ಮೌಲ್ಯಮಾಪನ ವ್ಯವಸ್ಥೆಗಳನ್ನೂ ರೂಪಿಸಲು ಉದ್ದೇಶಿಸಲಾಗಿದೆ.

6. ಅಂಚೆ ಚೀಟಿ ಸಂಗ್ರಹಣಾ ಚಟುವಟಿಕೆಗಳು – ₹60 ಕೋಟಿ - ಪ್ರದರ್ಶನಗಳು, ವಿಚಾರ ಸಂಕಿರಣಗಳು, ರಸಪ್ರಶ್ನೆಗಳು, ಶಾಲೆಗಳಲ್ಲಿ ಅಂಚೆ ಚೀಟಿ ಸಂಗ್ರಹಣಾ ಕ್ಲಬ್‌ಗಳ ಸ್ಥಾಪನೆ ಹಾಗೂ ಸುವಾಸನೆಯುಕ್ತ, ಹೊಲೊಗ್ರಾಫಿಕ್ ಮತ್ತು 3ಡಿ ಅಂಚೆ ಚೀಟಿಗಳು ಸೇರಿದಂತೆ ನಾವೀನ್ಯತೆಯಿಂದ ಕೂಡಿದ ಅಂಚೆ ಚೀಟಿಗಳ ವಿನ್ಯಾಸದ ಮೂಲಕ ಅಂಚೆ ಚೀಟಿ ಸಂಗ್ರಹಣೆಯನ್ನು ಉತ್ತೇಜಿಸುವ ಉಪಕ್ರಮಗಳನ್ನು ಈ ಯೋಜನೆ ಪ್ರಸ್ತಾಪಿಸಿದೆ. ಡಿಜಿಟಲ್ ಪ್ರಚಾರ ಚಟುವಟಿಕೆಗಳು, ‘ಢಾಯಿ ಆಖರ್’ ಪತ್ರ ಬರೆಯುವ ಸ್ಪರ್ಧೆ ಮತ್ತು ‘ಸ್ಪರ್ಶ್’ ವಿದ್ಯಾರ್ಥಿವೇತನದಂತಹ ಕಾರ್ಯಕ್ರಮಗಳು, ಉತ್ಪಾದನೆ ಮತ್ತು ವಿತರಣಾ ಕೇಂದ್ರಗಳ ಆಧುನೀಕರಣ, ಮಾರುಕಟ್ಟೆ ಸಂಶೋಧನೆ ಹಾಗೂ ಅಂತಾರಾಷ್ಟ್ರೀಯ ಸಹಯೋಗವೂ ಈ ಘಟಕದಲ್ಲಿ ಸೇರಿವೆ. ಅಂಚೆ ಚೀಟಿ ಸಂಗ್ರಹಣೆಯನ್ನು ಆಕರ್ಷಕ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಯಾಗಿ ಪುನರುಜ್ಜೀವನಗೊಳಿಸುವುದರ ಜೊತೆಗೆ, ಕಾರ್ಯಾಚರಣೆಯ ದಕ್ಷತೆ ಮತ್ತು ಆದಾಯ ಗಳಿಕೆಯ ಸಾಮರ್ಥ್ಯವನ್ನು ಸುಧಾರಿಸುವ ಉದ್ದೇಶವನ್ನು ಈ ಉಪಯೋಜನೆ ಹೊಂದಿದೆ.

 

*****

 


(ಪ್ರಕಟಣೆ ಐ.ಡಿ.: 2341314) ವಿಸಿಟರ್ ಕೌಂಟರ್ : 4
ಪ್ರಕಟಣೆಯನ್ನು ಇದರಲ್ಲಿ ಓದಿ: Telugu , English , Urdu , हिन्दी , Bengali , Bengali-TR , Assamese , Gujarati , Malayalam