ಪ್ರಕಟಣಾ ದಿನಾಂಕ:
25 NOV 2026 3:25PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಕುರಿತ ಸಚಿವ ಸಂಪುಟ ಸಮಿತಿಯು, ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ವಿನ್ಯಾಸ, ನಿರ್ಮಾಣ, ಹಣಕಾಸು, ಕಾರ್ಯಾಚರಣೆ ಮತ್ತು ಹಸ್ತಾಂತರ (ಡಿಬಿಎಫ್ಒಟಿ) ಆಧಾರದ ಮೇಲೆ ಕಾಮರಾಜರ್ ಬಂದರು ಲಿಮಿಟೆಡ್ನಲ್ಲಿ (ಕೆಪಿಎಲ್) ಎರಡನೇ ಕಂಟೇನರ್ ಟರ್ಮಿನಲ್ ಅಭಿವೃದ್ಧಿಪಡಿಸುವ ಪ್ರಸ್ತಾವನೆಗೆ ಅನುಮೋದನೆ ನೀಡಿದೆ. ಜಿಎಸ್ಟಿ ಸೇರಿದಂತೆ ಈ ಯೋಜನೆಯ ಅಂದಾಜು ವೆಚ್ಚ ₹4,288.26 ಕೋಟಿಗಳಾಗಿದೆ. ಈ ಯೋಜನೆಯಡಿ 900 ಮೀಟರ್ ಉದ್ದದ ಕಂಟೇನರ್ ಟರ್ಮಿನಲ್ ನಿರ್ಮಿಸಲಾಗುತ್ತಿದ್ದು, 18 ಮೀಟರ್ ಆಳ (ಡ್ರಾಫ್ಟ್) ಮತ್ತು ವಾರ್ಷಿಕ 2.0 ಮಿಲಿಯನ್ ಟ್ವೆಂಟಿ-ಫುಟ್ ಇಕ್ವಿವಲೆಂಟ್ ಯುನಿಟ್ಸ್ (ಟಿಇಯು) ಕಂಟೇನರ್ ನಿರ್ವಹಣಾ ಸಾಮರ್ಥ್ಯವನ್ನು ಹೊಂದಿರಲಿದೆ. ಈ ಯೋಜನೆಯನ್ನು ಎರಡು ಹಂತಗಳಲ್ಲಿ ಅನುಷ್ಠಾನಗೊಳಿಸಲಾಗುತ್ತದೆ.
ತಗಲುವ ವೆಚ್ಚ:
ಪಿಪಿಪಿ ಘಟಕದ ಅಂದಾಜು ಯೋಜನಾ ವೆಚ್ಚ ಜಿಎಸ್ಟಿ ಸೇರಿದಂತೆ ₹4,288.26 ಕೋಟಿಗಳಾಗಿದ್ದು, ಇದರಲ್ಲಿ ಮೊದಲನೇ ಹಂತಕ್ಕೆ ₹2,429.32 ಕೋಟಿ ಮತ್ತು ಎರಡನೇ ಹಂತಕ್ಕೆ ₹1,858.94 ಕೋಟಿ ವೆಚ್ಚವಾಗಲಿದೆ. ಡಿಬಿಎಫ್ಒಟಿ ಮಾದರಿಯಡಿ ಆಯ್ಕೆಯಾದ ಗುತ್ತಿಗೆ ಒಪ್ಪಂದದಾರರು (ಕನ್ಸೆಷನೈರ್) ಈ ಹೂಡಿಕೆಗೆ ಅಗತ್ಯವಾದ ಹಣಕಾಸು ವ್ಯವಸ್ಥೆ ಮಾಡಲಿದ್ದಾರೆ. ಇದಲ್ಲದೆ, ಯೋಜನಾ ಪ್ರಸ್ತಾವನೆಯಲ್ಲಿ ಉಲ್ಲೇಖಿಸಿರುವಂತೆ, ಹೂಳೆತ್ತುವ (ಡ್ರೆಡ್ಜಿಂಗ್) ಕಾಮಗಾರಿಗಾಗಿ ಕೆಪಿಎಲ್ ಪ್ರತ್ಯೇಕವಾಗಿ ಅಂದಾಜು ₹450 ಕೋಟಿ ವೆಚ್ಚ ಭರಿಸಲಿದೆ.
ವಿವರಗಳು:
(i) ಈ ಯೋಜನೆಯಡಿ 30 ಮೀಟರ್ ಅಗಲದ ಬರ್ತ್ ಮತ್ತು ವಾರ್ಷಿಕ 2.0 ಮಿಲಿಯನ್ ಟಿಇಯು ಕಂಟೇನರ್ ನಿರ್ವಹಣಾ ಸಾಮರ್ಥ್ಯ ಹೊಂದಿರುವ 900 ಮೀಟರ್ ಉದ್ದದ ಎರಡನೇ ಕಂಟೇನರ್ ಟರ್ಮಿನಲ್ ಅಭಿವೃದ್ಧಿಪಡಿಸಲಾಗುತ್ತದೆ. ಈ ಟರ್ಮಿನಲ್ ಅನ್ನು ಎರಡು ಹಂತಗಳಲ್ಲಿ ನಿರ್ಮಿಸಲಾಗುತ್ತದೆ. ಮೊದಲನೇ ಹಂತದಲ್ಲಿ 1.1 ಮಿಲಿಯನ್ ಟಿಇಯು ಮತ್ತು ಎರಡನೇ ಹಂತದಲ್ಲಿ 0.9 ಮಿಲಿಯನ್ ಟಿಇಯು ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಲಾಗುತ್ತದೆ.
(ii) ಈ ಟರ್ಮಿನಲ್ ಅನ್ನು 18 ಮೀಟರ್ ಆಳದೊಂದಿಗೆ, 24,346 ಟಿಇಯು ಸಾಮರ್ಥ್ಯದ ಹಾಗೂ ಒಟ್ಟಾರೆ 400 ಮೀಟರ್ ಉದ್ದದ ಬೃಹತ್ ಕಂಟೇನರ್ ಹಡಗುಗಳು ಸೇರಿದಂತೆ ದೊಡ್ಡ ಗಾತ್ರದ ಕಂಟೇನರ್ ಹಡಗುಗಳ ನಿರ್ವಹಣೆಗೆ ಅನುಗುಣವಾಗಿ ವಿನ್ಯಾಸಗೊಳಿಸಲಾಗಿದೆ. ಇದರಿಂದ ದೊಡ್ಡ ಗಾತ್ರದ ಮುಖ್ಯ ಸಾಗಣೆ ಹಡಗುಗಳನ್ನು ನಿರ್ವಹಿಸುವ ಕೆಪಿಎಲ್ನ ಸಾಮರ್ಥ್ಯ ಹೆಚ್ಚಲಿದ್ದು, ಅಂತಾರಾಷ್ಟ್ರೀಯ ಹಡಗು ಮಾರ್ಗಗಳೊಂದಿಗಿನ ಸಂಪರ್ಕವೂ ಸುಧಾರಿಸಲಿದೆ.
(iii) ಚೆನ್ನೈ–ಎನ್ನೋರ್ ಕೈಗಾರಿಕಾ ಮತ್ತು ಆರ್ಥಿಕ ವಲಯ ಹಾಗೂ ಅದಕ್ಕೆ ಹೊಂದಿಕೊಂಡಿರುವ ವಿಶಾಲ ದಕ್ಷಿಣ ಒಳನಾಡು ಪ್ರದೇಶದಿಂದ ಹೆಚ್ಚುತ್ತಿರುವ ಕಂಟೇನರ್ ಆಧಾರಿತ ರಫ್ತು-ಆಮದು (ಎಕ್ಸಿಮ್) ಸರಕು ಸಾಗಣೆಯ ಬೇಡಿಕೆಯನ್ನು ಪೂರೈಸುವುದು ಈ ಯೋಜನೆಯ ಉದ್ದೇಶವಾಗಿದೆ. ವಾಹನಗಳು ಮತ್ತು ವಾಹನ ಬಿಡಿಭಾಗಗಳು, ಎಂಜಿನಿಯರಿಂಗ್ ಉತ್ಪನ್ನಗಳು, ಎಲೆಕ್ಟ್ರಾನಿಕ್ಸ್, ರಾಸಾಯನಿಕಗಳು ಹಾಗೂ ಇತರ ಉತ್ಪಾದಿತ ಸರಕುಗಳು ಈ ಪ್ರದೇಶದಲ್ಲಿ ಪ್ರಮುಖ ಸರಕು ಉತ್ಪಾದಕ ವಲಯಗಳಾಗಿವೆ.
(iv) 2025–26ನೇ ಹಣಕಾಸು ವರ್ಷದಲ್ಲಿ ಕೆಪಿಎಲ್ 49.08 ಮಿಲಿಯನ್ ಟನ್ ಸರಕು ಮತ್ತು 1,008 ಹಡಗುಗಳನ್ನು ನಿರ್ವಹಿಸಿದ್ದು, ಇದರಲ್ಲಿ 7 ಲಕ್ಷಕ್ಕೂ ಅಧಿಕ ಟಿಇಯು ಕಂಟೇನರ್ ಸಾಗಣೆ ಸೇರಿದೆ. ಪ್ರಸ್ತುತ ಕಂಟೇನರ್ ಟರ್ಮಿನಲ್ ವಾರ್ಷಿಕ 0.8 ಮಿಲಿಯನ್ ಟಿಇಯು ಸ್ಥಾಪಿತ ಸಾಮರ್ಥ್ಯ ಹೊಂದಿದ್ದು, 2025–26ನೇ ಹಣಕಾಸು ವರ್ಷದಲ್ಲಿ ಸುಮಾರು 0.7 ಮಿಲಿಯನ್ ಟಿಇಯು ಕಂಟೇನರ್ಗಳನ್ನು ನಿರ್ವಹಿಸಿದೆ. ಇದು ಅದರ ಸಾಮರ್ಥ್ಯದ ಸುಮಾರು ಶೇ.88ರಷ್ಟು ಬಳಕೆಯಾಗಿದೆ.
(v) ಕಳೆದ ಐದು ವರ್ಷಗಳಲ್ಲಿ ಭಾರತದಲ್ಲಿ ಕಂಟೇನರ್ ಸಾಗಣೆಯು ಸಂಯುಕ್ತ ವಾರ್ಷಿಕ ಬೆಳವಣಿಗೆ ದರದಲ್ಲಿ (ಸಿಎಜಿಆರ್) ಸುಮಾರು ಶೇ.7ರಷ್ಟು ಏರಿಕೆಯಾಗಿದೆ. ಇದೇ ಅವಧಿಯಲ್ಲಿ ಕೆಪಿಎಲ್ನ ಕಂಟೇನರ್ ಸಾಗಣೆಯು ಸುಮಾರು ಶೇ.9.9ರಷ್ಟು ಬೆಳವಣಿಗೆ ದಾಖಲಿಸಿದೆ. ಕಾರ್ಯಸಾಧ್ಯತಾ ಅಧ್ಯಯನದ ಪ್ರಕಾರ, ಆಗ್ನೇಯ ಪ್ರದೇಶದಲ್ಲಿ ಕಂಟೇನರ್ ಸಾಗಣೆಯು ನಿರಂತರವಾಗಿ ಹೆಚ್ಚಾಗುವ ನಿರೀಕ್ಷೆಯಿದ್ದು, ಕೆಪಿಎಲ್ನ ನಿರ್ವಹಣಾ ಸಾಮರ್ಥ್ಯವನ್ನು ಹೆಚ್ಚಿಸುವ ಅಗತ್ಯವನ್ನು ಇದು ಸಮರ್ಥಿಸುತ್ತದೆ.
(vi) ಈ ಯೋಜನೆಯನ್ನು 48 ತಿಂಗಳ ನಿರ್ಮಾಣ ಅವಧಿ ಸೇರಿದಂತೆ ಒಟ್ಟು 40 ವರ್ಷಗಳ ಗುತ್ತಿಗೆ ಒಪ್ಪಂದದ ಅವಧಿಗೆ ಡಿಬಿಎಫ್ಒಟಿ ಆಧಾರದ ಮೇಲೆ ಅನುಷ್ಠಾನಗೊಳಿಸಲಾಗುತ್ತದೆ. ಗುತ್ತಿಗೆ ಒಪ್ಪಂದ ನೀಡಿದ ದಿನಾಂಕದಿಂದ 24 ತಿಂಗಳೊಳಗೆ ಮೊದಲನೇ ಹಂತದ ಕಾಮಗಾರಿ ಪೂರ್ಣಗೊಳ್ಳಲಿದ್ದು, 25ನೇ ತಿಂಗಳಿನಲ್ಲಿ ವಾಣಿಜ್ಯ ಕಾರ್ಯಾಚರಣೆ ಆರಂಭವಾಗಲಿದೆ. ಎರಡನೇ ಹಂತದ ನಿರ್ಮಾಣ ಕಾಮಗಾರಿಯನ್ನು 25ನೇ ತಿಂಗಳಿನಿಂದ 48ನೇ ತಿಂಗಳವರೆಗೆ ಕೈಗೊಳ್ಳಲಾಗುತ್ತದೆ. 49ನೇ ತಿಂಗಳಿನಿಂದ ಪೂರ್ಣ ಪ್ರಮಾಣದ ವಾಣಿಜ್ಯ ಕಾರ್ಯಾಚರಣೆ ಆರಂಭವಾಗಲಿದೆ.
(vii) ಜಿಎಸ್ಟಿ ಸೇರಿದಂತೆ ಯೋಜನೆಯ ಅಂದಾಜು ವೆಚ್ಚ ₹4,288.26 ಕೋಟಿಗಳಾಗಿದ್ದು, ಇದರಲ್ಲಿ ಮೊದಲನೇ ಹಂತಕ್ಕೆ ₹2,429.32 ಕೋಟಿ ಮತ್ತು ಎರಡನೇ ಹಂತಕ್ಕೆ ₹1,858.94 ಕೋಟಿ ವೆಚ್ಚವಾಗಲಿದೆ. ಡಿಬಿಎಫ್ಒಟಿ ಚೌಕಟ್ಟಿನಡಿ ಆಯ್ಕೆಯಾದ ಗುತ್ತಿಗೆ ಒಪ್ಪಂದದಾರರು ಈ ವೆಚ್ಚಕ್ಕೆ ಹಣಕಾಸು ವ್ಯವಸ್ಥೆ ಮಾಡಲಿದ್ದಾರೆ. ಇದಲ್ಲದೆ, ಯೋಜನಾ ಪ್ರಸ್ತಾವನೆಯಲ್ಲಿ ಸೂಚಿಸಿರುವಂತೆ, ಹೂಳೆತ್ತುವ ಕಾಮಗಾರಿಗಾಗಿ ಕೆಪಿಎಲ್ ಅಂದಾಜು ₹450 ಕೋಟಿ ವೆಚ್ಚ ಮಾಡಲಿದೆ.
(viii) ಈ ಯೋಜನೆಯನ್ನು ಪಾರದರ್ಶಕ ಮತ್ತು ಮುಕ್ತ ಜಾಗತಿಕ ಟೆಂಡರ್ ಪ್ರಕ್ರಿಯೆಯ ಮೂಲಕ ಅನುಷ್ಠಾನಗೊಳಿಸಲು ಪ್ರಸ್ತಾಪಿಸಲಾಗಿದೆ. ಗುತ್ತಿಗೆ ಒಪ್ಪಂದದಾರರು ಅಗತ್ಯ ಹಣಕಾಸು ವ್ಯವಸ್ಥೆ ಮಾಡಿಕೊಳ್ಳಲಿದ್ದು, ಗುತ್ತಿಗೆ ಒಪ್ಪಂದದ ಷರತ್ತುಗಳು ಮತ್ತು ಅನ್ವಯವಾಗುವ ಸುಂಕದ ಚೌಕಟ್ಟಿನ ನಿಯಮಗಳ ಪ್ರಕಾರ ಬಳಕೆದಾರರಿಂದ ಶುಲ್ಕ ಸಂಗ್ರಹಿಸುವ ಮೂಲಕ ತಮ್ಮ ಹೂಡಿಕೆಯನ್ನು ಮರಳಿ ಪಡೆಯಲಿದ್ದಾರೆ.
(ix) ಈ ಯೋಜನೆಯು ಸಾಗರಮಾಲಾ ಭಾರತ್ ವಿಷನ್ 2030 ಮತ್ತು ಮ್ಯಾರಿಟೈಮ್ ಅಮೃತ ಕಾಲ್ ವಿಷನ್ 2047ರ ಉದ್ದೇಶಗಳಿಗೆ ಅನುಗುಣವಾಗಿದೆ. ಭಾರತದ ಪೂರ್ವ ಕರಾವಳಿಯ ಪ್ರಮುಖ ಕಂಟೇನರ್ ಪ್ರವೇಶದ್ವಾರವಾಗಿ ಕೆಪಿಎಲ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸುವುದು, ಸಮುದ್ರ ಸಾರಿಗೆ ಮತ್ತು ಸರಕು ಸಾಗಣೆ ಸರಪಳಿಯ ದಕ್ಷತೆಯನ್ನು ಸುಧಾರಿಸುವುದು ಹಾಗೂ ರಫ್ತು-ಆಮದು ವ್ಯಾಪಾರದ ಬೆಳವಣಿಗೆಗೆ ಈ ಯೋಜನೆಯು ನೆರವಾಗುತ್ತದೆ.
ಅನುಷ್ಠಾನ ಕಾರ್ಯತಂತ್ರ ಮತ್ತು ಗುರಿಗಳು:
ಈ ಯೋಜನೆಯನ್ನು ಆಯ್ಕೆಯಾದ ಗುತ್ತಿಗೆ ಒಪ್ಪಂದದಾರರು ಡಿಬಿಎಫ್ಒಟಿ ಮಾದರಿಯಡಿ ಅನುಷ್ಠಾನಗೊಳಿಸಲಿದ್ದಾರೆ. 1.1 ಮಿಲಿಯನ್ ಟಿಇಯು ಸಾಮರ್ಥ್ಯದ ಮೊದಲನೇ ಹಂತವನ್ನು ಗುತ್ತಿಗೆ ಒಪ್ಪಂದ ನೀಡಿದ ದಿನಾಂಕದಿಂದ 24 ತಿಂಗಳೊಳಗೆ ಪೂರ್ಣಗೊಳಿಸಬೇಕಿದ್ದು, 25ನೇ ತಿಂಗಳಿನಲ್ಲಿ ವಾಣಿಜ್ಯ ಕಾರ್ಯಾಚರಣೆ ಆರಂಭವಾಗಲಿದೆ. 0.9 ಮಿಲಿಯನ್ ಟಿಇಯು ಸಾಮರ್ಥ್ಯದ ಎರಡನೇ ಹಂತವನ್ನು 48ನೇ ತಿಂಗಳೊಳಗೆ ಪೂರ್ಣಗೊಳಿಸಲಾಗುತ್ತದೆ. 49ನೇ ತಿಂಗಳಿನಿಂದ ಪೂರ್ಣ ಪ್ರಮಾಣದ ವಾಣಿಜ್ಯ ಕಾರ್ಯಾಚರಣೆ ಆರಂಭವಾಗಲಿದೆ. ಟೆಂಡರ್ ಸಲ್ಲಿಕೆಗೆ ನಿಗದಿಪಡಿಸಿದ ಕೊನೆಯ ದಿನಾಂಕಕ್ಕೂ ಮುನ್ನ ಪರಿಸರ ಮತ್ತು ಇತರ ಅಗತ್ಯ ಅನುಮತಿಗಳನ್ನು ನಿಗದಿತ ಕಾಲಮಿತಿಯೊಳಗೆ ಪಡೆಯುವ ಬಗ್ಗೆಯೂ ಯೋಜನಾ ಪ್ರಸ್ತಾವನೆಯಲ್ಲಿ ತಿಳಿಸಲಾಗಿದೆ.
ಪ್ರಮುಖ ಪರಿಣಾಮಗಳು:
(i) ವಾರ್ಷಿಕ ಹೆಚ್ಚುವರಿ 2.0 ಮಿಲಿಯನ್ ಟಿಇಯು ಸಾಮರ್ಥ್ಯವು ಹೆಚ್ಚುತ್ತಿರುವ ಕಂಟೇನರ್ ಸಾಗಣೆಯನ್ನು ನಿರ್ವಹಿಸುವ ಕೆಪಿಎಲ್ನ ಸಾಮರ್ಥ್ಯವನ್ನು ಬಲಪಡಿಸಲಿದೆ. ಅಲ್ಲದೆ, ತಮಿಳುನಾಡಿನ ಕೈಗಾರಿಕಾ ಸಮೂಹಗಳು ಮತ್ತು ಅಕ್ಕಪಕ್ಕದ ಒಳನಾಡು ಪ್ರದೇಶಗಳಿಂದ ಬರುವ ರಫ್ತು-ಆಮದು ಸರಕುಗಳಿಗೆ ಹೆಚ್ಚುವರಿ ಪ್ರವೇಶದ್ವಾರವಾಗಿ ಕಾರ್ಯನಿರ್ವಹಿಸಲಿದೆ.
(ii) ಟರ್ಮಿನಲ್ನ 18 ಮೀಟರ್ ಆಳ ಮತ್ತು ಬೃಹತ್ ಕಂಟೇನರ್ ಹಡಗುಗಳನ್ನು ನಿರ್ವಹಿಸುವ ಸಾಮರ್ಥ್ಯವು ಅಂತಾರಾಷ್ಟ್ರೀಯ ಸಂಪರ್ಕವನ್ನು ಸುಧಾರಿಸುವ ನಿರೀಕ್ಷೆಯಿದೆ. ಮುಖ್ಯ ಸಾಗಣೆ ಹಡಗುಗಳು ನೇರವಾಗಿ ಬಂದರಿಗೆ ಆಗಮಿಸಲು ಅನುಕೂಲ ಕಲ್ಪಿಸುವುದರ ಜೊತೆಗೆ, ವಿದೇಶಿ ಆಳಸಮುದ್ರದ ಕೇಂದ್ರ ಬಂದರುಗಳ ಮೇಲಿನ ಅವಲಂಬನೆ ಮತ್ತು ಅವುಗಳಿಗೆ ಸಂಬಂಧಿಸಿದ ಫೀಡರ್ ಹಡಗುಗಳ ಮೂಲಕ ಸರಕು ಸಾಗಣೆಯ ವೆಚ್ಚವನ್ನು ಕಡಿಮೆ ಮಾಡಲಿದೆ.
(iii) ಈ ಯೋಜನೆಯು ಸಮುದ್ರ ಸಾರಿಗೆ ಮತ್ತು ಸರಕು ಸಾಗಣೆ ವ್ಯವಸ್ಥೆಯ ದಕ್ಷತೆಯನ್ನು ಹೆಚ್ಚಿಸಲು, ವ್ಯಾಪಾರ ಮತ್ತು ಉತ್ಪಾದನಾ ವಲಯಕ್ಕೆ ಬೆಂಬಲ ನೀಡಲು, ಬಂದರಿನ ಆದಾಯ ಗಳಿಕೆಯ ಸಾಮರ್ಥ್ಯವನ್ನು ಬಲಪಡಿಸಲು ಹಾಗೂ ಭಾರತದ ಸಾಗರ ವಲಯದ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ಕೊಡುಗೆ ನೀಡುವ ನಿರೀಕ್ಷೆಯಿದೆ.
(iv) ನಿರ್ಮಾಣ ಹಂತದಲ್ಲಿ ನೇರ ಮತ್ತು ಪರೋಕ್ಷವಾಗಿ ಸುಮಾರು 750 ಜನರಿಗೆ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿದ್ದು, ಕಾರ್ಯಾಚರಣೆಯ ಹಂತದಲ್ಲಿ ಸುಮಾರು 800 ಉದ್ಯೋಗಾವಕಾಶಗಳು ಹೆಚ್ಚಾಗುವ ನಿರೀಕ್ಷೆಯಿದೆ.
(v) ದೇಶೀಯ ಬಂದರುಗಳ ಸಾಮರ್ಥ್ಯವನ್ನು ಹೆಚ್ಚಿಸುವ ಮೂಲಕ ಮತ್ತು ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಹಾಗೂ ಅಕ್ಕಪಕ್ಕದ ಒಳನಾಡು ಪ್ರದೇಶಗಳಲ್ಲಿನ ಕೈಗಾರಿಕೆಗಳು ಮತ್ತು ಮೂಲ ಉಪಕರಣ ತಯಾರಕರಿಗೆ (ಒಇಎಂ) ಸರಕು ಸಾಗಣೆ ಬೆಂಬಲವನ್ನು ಸುಧಾರಿಸುವ ಮೂಲಕ ಈ ಯೋಜನೆಯು ಆತ್ಮನಿರ್ಭರ ಭಾರತ ಉದ್ದೇಶಗಳಿಗೆ ಪೂರಕವಾಗಲಿದೆ.
(vi) ಪಿಪಿಪಿ ಘಟಕಕ್ಕೆ ಅಗತ್ಯವಾದ ಹೂಡಿಕೆಯನ್ನು ಆಯ್ಕೆಯಾದ ಗುತ್ತಿಗೆ ಒಪ್ಪಂದದಾರರು ಭರಿಸಲಿರುವುದರಿಂದ ಭಾರತ ಸರ್ಕಾರಕ್ಕೆ ಯಾವುದೇ ಹಣಕಾಸಿನ ಹೊರೆ ಉಂಟಾಗುವುದಿಲ್ಲ.
ಹಿನ್ನೆಲೆ:
(i) ಹಿಂದೆ ಎನ್ನೋರ್ ಪೋರ್ಟ್ ಲಿಮಿಟೆಡ್ ಎಂದು ಕರೆಯಲಾಗುತ್ತಿದ್ದ ಕಾಮರಾಜರ್ ಪೋರ್ಟ್ ಲಿಮಿಟೆಡ್ (ಕೆಪಿಎಲ್), ಭಾರತದ 12 ಪ್ರಮುಖ ಬಂದರುಗಳಲ್ಲಿ ಒಂದಾಗಿದೆ. ಇದು ಬಂದರುಗಳು, ಹಡಗುಸಾರಿಗೆ ಮತ್ತು ಜಲಮಾರ್ಗಗಳ ಸಚಿವಾಲಯದ ಅಧೀನದಲ್ಲಿರುವ ಚೆನ್ನೈ ಬಂದರು ಪ್ರಾಧಿಕಾರದ ಸಂಪೂರ್ಣ ಒಡೆತನದಲ್ಲಿದೆ. ತಮಿಳುನಾಡಿನ ಪೂರ್ವ ಕರಾವಳಿಯಲ್ಲಿ ಚೆನ್ನೈ ಕೈಗಾರಿಕಾ ಮತ್ತು ಆರ್ಥಿಕ ವಲಯದ ಸಮೀಪದಲ್ಲಿರುವ ಈ ಬಂದರು ಕಲ್ಲಿದ್ದಲು, ಪೆಟ್ರೋಲಿಯಂ, ತೈಲ ಮತ್ತು ಲೂಬ್ರಿಕೆಂಟ್ಗಳು, ಎಲ್ಎನ್ಜಿ, ಎಲ್ಪಿಜಿ, ಕಂಟೇನರ್ಗಳು, ವಾಹನಗಳು ಹಾಗೂ ಸಾಮಾನ್ಯ ಸರಕುಗಳು ಸೇರಿದಂತೆ ವಿವಿಧ ಬಗೆಯ ಸರಕುಗಳನ್ನು ನಿರ್ವಹಿಸುತ್ತದೆ.
(ii) 2025–26ನೇ ಹಣಕಾಸು ವರ್ಷದಲ್ಲಿ ಕೆಪಿಎಲ್ ಸುಮಾರು ₹1,280 ಕೋಟಿ ಆದಾಯ ದಾಖಲಿಸಿದ್ದು, ತೆರಿಗೆ ಪೂರ್ವ ಲಾಭವು ₹924 ಕೋಟಿಗಳಷ್ಟಿತ್ತು. ಕಳೆದ ಐದು ವರ್ಷಗಳಲ್ಲಿ ಬಂದರು ನಿರ್ವಹಿಸಿದ ಸರಕು ಸಾಗಣೆಯು ಸಂಯುಕ್ತ ವಾರ್ಷಿಕ ಬೆಳವಣಿಗೆ ದರದಲ್ಲಿ (ಸಿಎಜಿಆರ್) ಶೇ.13.64ರಷ್ಟು ಏರಿಕೆ ದಾಖಲಿಸಿದೆ. ಇದು ಬಂದರಿನ ಒಳನಾಡು ಪ್ರದೇಶದಲ್ಲಿ ಆರ್ಥಿಕ ಚಟುವಟಿಕೆಗಳು ಮತ್ತು ವ್ಯಾಪಾರ ವಿಸ್ತರಿಸುತ್ತಿರುವುದನ್ನು ಪ್ರತಿಬಿಂಬಿಸುತ್ತದೆ.
(iii)ಚೆನ್ನೈ–ಎನ್ನೋರ್ ಪ್ರದೇಶವು ಭಾರತದ ಪ್ರಮುಖ ಕೈಗಾರಿಕಾ ಮತ್ತು ಉತ್ಪಾದನಾ ಕೇಂದ್ರಗಳಲ್ಲಿ ಒಂದಾಗಿದೆ. ವ್ಯಾಪಾರ ಮತ್ತು ಕಂಟೇನರ್ ಆಧಾರಿತ ಸರಕು ಸಾಗಣೆ ವಿಸ್ತರಿಸುತ್ತಿರುವ ಹಿನ್ನೆಲೆಯಲ್ಲಿ, ತಮಿಳುನಾಡು, ದಕ್ಷಿಣ ಆಂಧ್ರಪ್ರದೇಶ ಹಾಗೂ ವಿಶಾಲ ದಕ್ಷಿಣ ಒಳನಾಡು ಪ್ರದೇಶಗಳಿಂದ ರಫ್ತು-ಆಮದು ಸರಕುಗಳ ಸಾಗಣೆಗೆ ಅನುಕೂಲ ಕಲ್ಪಿಸಲು ಹೆಚ್ಚುವರಿ ಕಂಟೇನರ್ ನಿರ್ವಹಣಾ ಸಾಮರ್ಥ್ಯ ಮತ್ತು ಬೃಹತ್ ಹಡಗುಗಳ ನಿರ್ವಹಣೆಗೆ ಸಮರ್ಥವಾದ ಸೌಲಭ್ಯಗಳ ಅಗತ್ಯವಿದೆ.
*****