ಪ್ರಕಟಣಾ ದಿನಾಂಕ:
25 NOV 2026 3:27PM by PIB Bengaluru
ಸಿಲ್ಚಾರ್ ವಿಮಾನ ನಿಲ್ದಾಣದಲ್ಲಿರುವ ಪ್ರಸ್ತುತ ರಕ್ಷಣಾ ಭೂ-ಆವೃತ ನಾಗರಿಕ ಎನ್ಕ್ಲೇವ್ನ ತೀವ್ರ ಕಾರ್ಯಾಚರಣೆ ಮತ್ತು ಸ್ಥಳಾವಕಾಶದ ನಿರ್ಬಂಧಗಳನ್ನು ನಿವಾರಿಸಲು ಹಾಗೂ ನಿರಂತರ ಪ್ರಯಾಣಿಕರ ಹೆಚ್ಚಳಕ್ಕೆ ಅನುಗುಣವಾಗಿ ಸೌಲಭ್ಯ ಕಲ್ಪಿಸಲು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದಿಂದ ಅಸ್ಸಾಂನ ಸಿಲ್ಚಾರ್ನ ಡೊಲೂನಲ್ಲಿ 2,014 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಹೊಸ ಗ್ರೀನ್ಫೀಲ್ಡ್ ವಿಮಾನ ನಿಲ್ದಾಣದ ಅಭಿವೃದ್ಧಿಗೆ ಅನುಮೋದನೆ ನೀಡಿದೆ.
ಅಸ್ಸಾಂನ ಕಚಾರ್ ಜಿಲ್ಲೆಯಲ್ಲಿರುವ ಡೊಲೂ, ಬರಾಕ್ ಕಣಿವೆಯ ಕಾರ್ಯತಂತ್ರದ ಕೇಂದ್ರಬಿಂದುವಾಗಿ ಕಾರ್ಯನಿರ್ವಹಿಸುತ್ತದೆ. ಈ ಪ್ರದೇಶವು ತನ್ನ ವಿಸ್ತಾರವಾದ ಚಹಾ ತೋಟಗಳು, ಕೃಷಿ ಆಧಾರಿತ ಕೈಗಾರಿಕೆಗಳು ಹಾಗೂ ಪರಿಸರ ಮತ್ತು ಸಾಂಸ್ಕೃತಿಕ ಪ್ರವಾಸೋದ್ಯಮದ ಅಪಾರ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದೆ.
ಪ್ರಸ್ತಾವಿತ ಟರ್ಮಿನಲ್ ಕಟ್ಟಡವು ಒಟ್ಟು 12,351 ಚದರ ಮೀಟರ್ ವಿಸ್ತೀರ್ಣವನ್ನು ಹೊಂದಿರಲಿದ್ದು, ಜನದಟ್ಟಣೆಯ ಅವಧಿಯಲ್ಲಿ 800 ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಇದನ್ನು ಆಧುನಿಕ ಪ್ರಯಾಣಿಕರ ಸೌಲಭ್ಯಗಳು, ಸುಸ್ಥಿರ ಹಸಿರು ಕಟ್ಟಡದ ತತ್ವಗಳು ಮತ್ತು ಮಾಡ್ಯುಲರ್ ವಿಸ್ತರಣಾ ಸಾಮರ್ಥ್ಯದೊಂದಿಗೆ ವಿನ್ಯಾಸಗೊಳಿಸಲಾಗಿದೆ. ಇದಲ್ಲದೆ, ಈ ಯೋಜನೆಯು A-320 ವಿಮಾನಗಳ ಕಾರ್ಯಾಚರಣೆಗೆ ಸೂಕ್ತವಾದ 2,705 ಮೀಟರ್ x 45 ಮೀಟರ್ ಅಳತೆಯ ಕೋಡ್-4C ಅನುಸರಣೆಯ ರನ್ವೇ ಅಭಿವೃದ್ಧಿ, ಜೊತೆಗೆ 6 A-320 ವಿಮಾನಗಳನ್ನು ನಿಲ್ಲಿಸುವ ಸಾಮರ್ಥ್ಯವಿರುವ ಹೊಸ ಏಪ್ರನ್ ಮತ್ತು ಪ್ರತ್ಯೇಕ ಐಸೋಲೇಷನ್ ಬೇ ನಿರ್ಮಾಣವನ್ನು ಒಳಗೊಂಡಿದೆ.
ಅಪಾರ ಕಾರ್ಯತಂತ್ರದ ಮಹತ್ವದ ಯೋಜನೆಯಾಗಿರುವ ಡೊಲೂ ಗ್ರೀನ್ಫೀಲ್ಡ್ ವಿಮಾನ ನಿಲ್ದಾಣವು ದಕ್ಷಿಣ ಅಸ್ಸಾಂ ಮತ್ತು ನೆರೆಯ ರಾಜ್ಯಗಳ ಅಕ್ಕಪಕ್ಕದ ಪ್ರದೇಶಗಳಲ್ಲಿ ವೇಗವಾಗಿ ಹೆಚ್ಚುತ್ತಿರುವ ವಾಯು ಸಂಚಾರದ ಬೇಡಿಕೆಗಳನ್ನು ಪೂರೈಸಲಿದೆ. ಇದು ಅಸ್ತಿತ್ವದಲ್ಲಿರುವ ಮೂಲಸೌಕರ್ಯದ ಮೇಲಿನ ದಟ್ಟಣೆಯನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ, ವ್ಯಾಪಾರ ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸುವ ಮೂಲಕ ಪ್ರಾದೇಶಿಕ ಆರ್ಥಿಕ ಸಾಮರ್ಥ್ಯವನ್ನು ಅನಾವರಣಗೊಳಿಸುತ್ತದೆ ಮತ್ತು ಈಶಾನ್ಯ ಭಾರತವನ್ನು ವಿಶಾಲ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಬೆಳವಣಿಗೆಯ ಕಾರಿಡಾರ್ಗಳೊಂದಿಗೆ ಸಂಯೋಜಿಸುವ ವಿಶ್ವದರ್ಜೆಯ ಹೆಬ್ಬಾಗಿಲನ್ನು ಒದಗಿಸುತ್ತದೆ.
*****