ಪ್ರಕಟಣಾ ದಿನಾಂಕ:
23 NOV 2026 4:54PM by PIB Bengaluru
ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಆಹ್ವಾನದ ಮೇರೆಗೆ, ನೇಪಾಳದ ಪ್ರಧಾನಮಂತ್ರಿ ಗೌರವಾನ್ವಿತ ಬಾಲೇಂದ್ರ ಶಾ ಅವರು 2026 ನವೆಂಬರ್ 22 ರಿಂದ 23 ರವರೆಗೆ ಭಾರತಕ್ಕೆ ಅಧಿಕೃತ ಭೇಟಿ ನೀಡಿದರು. ಉಭಯ ಪ್ರಧಾನಮಂತ್ರಿಗಳು ನವದೆಹಲಿಯಲ್ಲಿ ಸ್ನೇಹಪೂರ್ಣ, ಮಹತ್ವಪೂರ್ಣ ಮತ್ತು ದೂರದೃಷ್ಟಿಯ ಮಾತುಕತೆಗಳನ್ನು ನಡೆಸಿದರು ಹಾಗೂ ದ್ವಿಪಕ್ಷೀಯ ಸಂಬಂಧಗಳ ಸಮಗ್ರ ಪರಾಮರ್ಶೆ ನಡೆಸಿದರು.
ಭಾರತ ಮತ್ತು ನೇಪಾಳದ ನಡುವಿನ ಪುರಾತನ, ನಾಗರಿಕತೆಯ ಸಂಬಂಧಗಳು ಪರಸ್ಪರ ಗೌರವ ಮತ್ತು ಹಿತಾಸಕ್ತಿಯ ತತ್ವಗಳ ಜೊತೆಗೆ ಆಳವಾದ ಜನರ-ನಡುವಿನ ಸಂಪರ್ಕಗಳಿಂದ ಶಕ್ತಿಯನ್ನು ಪಡೆದುಕೊಂಡು ಬಹುಮುಖಿ ಪಾಲುದಾರಿಕೆಯಾಗಿ ಬೆಳೆದಿವೆ ಎಂಬುದನ್ನು ಉಭಯ ನಾಯಕರು ಒಪ್ಪಿಕೊಂಡರು.
2026ರ ಆಗಸ್ಟ್ನಲ್ಲಿ ರಸುವಾ–ತ್ರಿಶೂಲಿ ಜಲಾನಯನ ಪ್ರದೇಶ ಮತ್ತು ಇತರೆಡೆಗಳಲ್ಲಿ ಸಂಭವಿಸಿದ ಪ್ರವಾಹ ಹಾಗೂ ಭೂಕುಸಿತದ ನಂತರ ಭಾರತ ನೀಡಿದ ತ್ವರಿತ ಮಾನವೀಯ ಮತ್ತು ಶೋಧ-ರಕ್ಷಣಾ ನೆರವಿಗಾಗಿ ನೇಪಾಳ ತನ್ನ ಕೃತಜ್ಞತೆಯನ್ನು ವ್ಯಕ್ತಪಡಿಸಿತು. ನೇಪಾಳದ ಪುನರ್ನಿರ್ಮಾಣ ಪ್ರಯತ್ನಗಳಿಗೆ ಹೆಚ್ಚಿನ ಬೆಂಬಲ ನೀಡುವ ನಿಟ್ಟಿನಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳಲು ನಾಯಕರು ಒಪ್ಪಿಕೊಂಡರು.
ದ್ವಿಪಕ್ಷೀಯ ಪಾಲುದಾರಿಕೆಯು ಸಮಕಾಲೀನ ರಾಜಕೀಯ, ಆರ್ಥಿಕ ಮತ್ತು ತಾಂತ್ರಿಕ ವಾಸ್ತವಗಳನ್ನು ಪ್ರತಿಬಿಂಬಿಸಬೇಕು ಹಾಗೂ ನವೀಕರಿಸಿದ ಮತ್ತು ದೂರದೃಷ್ಟಿಯ ಕಾನೂನು ಚೌಕಟ್ಟನ್ನು ಆಧರಿಸಿರಬೇಕು ಎಂದು ಉಭಯ ನಾಯಕರು ಸಮ್ಮತಿಸಿದರು. ಇದರ ಅಡಿಯಲ್ಲಿ 1950ರ ‘ಶಾಂತಿ ಮತ್ತು ಸ್ನೇಹ ಒಪ್ಪಂದ’ ಸೇರಿದಂತೆ ಅಸ್ತಿತ್ವದಲ್ಲಿರುವ ದ್ವಿಪಕ್ಷೀಯ ಒಪ್ಪಂದಗಳನ್ನು ಪರಸ್ಪರ ಒಪ್ಪಿಗೆಯ ಆಧಾರದ ಮೇಲೆ ಪರಾಮರ್ಶಿಸಬಹುದಾಗಿದೆ. ಜಲಸಂಪನ್ಮೂಲ, ಇಂಧನ, ವ್ಯಾಪಾರ-ವಾಣಿಜ್ಯ ಮತ್ತು ಗಡಿಗೆ ಸಂಬಂಧಿಸಿದ ಎಲ್ಲಾ ಬಾಕಿ ಇರುವ ವಿಷಯಗಳನ್ನು ಪರಸ್ಪರ ಚರ್ಚೆ ಮತ್ತು ಸಂವಾದದ ಮೂಲಕ ಪರಿಹರಿಸಿಕೊಳ್ಳಲು ನಿರ್ಧರಿಸಲಾಯಿತು.
ಭಾರತ-ನೇಪಾಳ ಸಂಬಂಧವನ್ನು ಎರಡೂ ದೇಶಗಳ ಜನರಿಗೆ, ವಿಶೇಷವಾಗಿ ಯುವಜನತೆಗೆ ಸ್ಪಷ್ಟ ಪ್ರಯೋಜನಗಳನ್ನು ನೀಡುವ ಆಧುನಿಕ ಮತ್ತು ಫಲಿತಾಂಶ-ಆಧಾರಿತ ಪಾಲುದಾರಿಕೆಯಾಗಿ ಪರಿವರ್ತಿಸಲು, ಉಭಯ ನಾಯಕರು ಈ ‘ಜಂಟಿ ದೃಷ್ಟಿಕೋನ’ವನ್ನು ಅಂಗೀಕರಿಸಿದ್ದಾರೆ. ಇದು ಈ ಕೆಳಗಿನ ಹತ್ತು ಆಧಾರಸ್ತಂಭಗಳ ಮೇಲೆ ಗಮನ ಕೇಂದ್ರೀಕರಿಸಿ ಭವಿಷ್ಯದ ದ್ವಿಪಕ್ಷೀಯ ಪಾಲುದಾರಿಕೆಗೆ ಮಾರ್ಗಸೂಚಿಯನ್ನು ಒದಗಿಸುತ್ತದೆ.
I. ಸಮಗ್ರ ಆರ್ಥಿಕ ಮತ್ತು ಅಭಿವೃದ್ಧಿ ಸಹಭಾಗಿತ್ವ
ಭಾರತದ ರಾಷ್ಟ್ರೀಯ ದೃಷ್ಟಿಕೋನವಾದ ‘ವಿಕಸಿತ ಭಾರತ 2047’ ಮತ್ತು ನೇಪಾಳದ ರಾಷ್ಟ್ರೀಯ ಆಕಾಂಕ್ಷೆಯಾದ ‘ಸಮುನ್ನತ ನೇಪಾಳ’ ಹಲವಾರು ಪೂರಕ ಅಂಶಗಳನ್ನು ಹೊಂದಿದ್ದು, ಎರಡೂ ದೇಶಗಳ ನಡುವಿನ ವ್ಯಾಪಕ ಆರ್ಥಿಕ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು ಇವುಗಳನ್ನು ಬಳಸಿಕೊಳ್ಳಬಹುದಾಗಿದೆ. ಇದರಲ್ಲಿ ಈ ಕೆಳಗಿನವು ಸೇರಿವೆ:
i. ಹೆಚ್ಚು ಸಮಗ್ರವಾದ ಆರ್ಥಿಕ ಪಾಲುದಾರಿಕೆಗೆ ಅನುಕೂಲವಾಗುವಂತೆ ಎರಡೂ ದೇಶಗಳ ನಡುವಿನ ವ್ಯಾಪಾರ ಮತ್ತು ಹೂಡಿಕೆಗೆ ಸಂಬಂಧಿಸಿದ ಚೌಕಟ್ಟುಗಳು/ಒಪ್ಪಂದಗಳನ್ನು ಪರಾಮರ್ಶಿಸುವುದು.
ii. ಸುಧಾರಿತ ಪ್ರವೇಶ ಮತ್ತು ಸಂಪರ್ಕವನ್ನು ಬಲಪಡಿಸಲು ಹೊಸ ಸಾರಿಗೆ ಸಂಪರ್ಕ ಮತ್ತು ವಾಯು ಮಾರ್ಗಗಳನ್ನು ತೆರೆಯುವುದು.
iii. ಉತ್ಪಾದನೆ ಮತ್ತು ಇತರ ಸಂಸ್ಕರಣಾ ಕೈಗಾರಿಕೆಗಳಲ್ಲಿ ಪೂರೈಕೆ ಸರಪಳಿಗಳೊಂದಿಗೆ ಸಂಪರ್ಕ ಕಲ್ಪಿಸಲು ಭಾರತ-ನೇಪಾಳ ಗಡಿಯ ಸಮೀಪ ರಫ್ತು-ಆಧಾರಿತ ಉತ್ಪಾದನೆಗಾಗಿ ಗಡಿಯಾಚೆಗಿನ ವಿಶೇಷ ಆರ್ಥಿಕ ವಲಯಗಳು/ಪಾರ್ಕ್ಗಳ ಸ್ಥಾಪನೆಗೆ ಸಹಕಾರ ನೀಡುವುದು ಮತ್ತು ಐಟಿ ಪಾರ್ಕ್ಗಳ ಅಭಿವೃದ್ಧಿಯಲ್ಲಿ ಸಹಕರಿಸುವುದು.
iv. ಹೂಡಿಕೆದಾರರ ವಿಶ್ವಾಸ ಮತ್ತು ವ್ಯಾಪಾರ ಸುಗಮತೆ ಹೆಚ್ಚಿಸುವ ವ್ಯವಸ್ಥೆಗಳನ್ನು ಅಂತಿಮಗೊಳಿಸುವ ಮೂಲಕ ನೇಪಾಳದ ಆದ್ಯತೆಯ ವಲಯಗಳಲ್ಲಿ ಭಾರತೀಯ ಹೂಡಿಕೆಗಳನ್ನು ಉತ್ತೇಜಿಸುವುದು.
v. ನೇಪಾಳದಲ್ಲಿ ವಿಪತ್ತು ನಂತರದ ಪುನರ್ನಿರ್ಮಾಣ ಮತ್ತು ಹೊಸ ಮೂಲಸೌಕರ್ಯ ಯೋಜನೆಗಳಿಗಾಗಿ ₹3,500 ಕೋಟಿ (5,600 ಕೋಟಿ ನೇಪಾಳಿ ರೂ) ಅನುದಾನ ನೆರವು ಹಾಗೂ ಇಂಧನ ವಲಯದ ಯೋಜನೆಗಳಿಗಾಗಿ ₹11,500 ಕೋಟಿ (18,400 ಕೋಟಿ ನೇಪಾಳಿ ರೂ.) ಸಾಲ ಸೌಲಭ್ಯ ಸೇರಿದಂತೆ ಒಟ್ಟು ₹15,000 ಕೋಟಿ (24,000 ಕೋಟಿ ನೇಪಾಳಿ ರೂ.) ಅಭಿವೃದ್ಧಿ ನೆರವನ್ನು ಭಾರತ ನೀಡಲಿದೆ. ನಿರ್ದಿಷ್ಟ ಯೋಜನೆಗಳು ಮತ್ತು ಅಭಿವೃದ್ಧಿ ನೆರವು ನೀಡುವ ವಿಧಾನಗಳನ್ನು ಪರಸ್ಪರ ಸಮಾಲೋಚನೆಯ ಮೂಲಕ ಅಂತಿಮಗೊಳಿಸಲಾಗುವುದು.
II. ಭೌತಿಕ ಮತ್ತು ಡಿಜಿಟಲ್ ಸಂಪರ್ಕ:
ಸಂಪರ್ಕವು ಆರ್ಥಿಕ ಸಹಕಾರವನ್ನು ಗಾಢಗೊಳಿಸುವ ಮತ್ತು ಜನರಿಂದ ಜನರ ನಡುವಿನ ಸಂಬಂಧಗಳನ್ನು ಬಲಪಡಿಸುವ ಪ್ರಮುಖ ಸಾಧನವಾಗಿದೆ. ಈ ಕ್ಷೇತ್ರದಲ್ಲಿ ಸಾಧಿಸಿದ ಮಹತ್ವದ ಪ್ರಗತಿಯನ್ನು ಗುರುತಿಸಿ, ಇಬ್ಬರೂ ನಾಯಕರು ಅಯೋಧ್ಯಾ (ಭಾರತ) ಮತ್ತು ಜನಕಪುರ (ನೇಪಾಳ) ನಡುವೆ ನೇರ ತ್ವರಿತ ರೈಲು ಸೇವೆ ಮತ್ತು ಧಾರ್ಚುಲಾ (ಭಾರತ) ಮತ್ತು ದರ್ಚುಲಾ (ನೇಪಾಳ) ನಡುವೆ ಮಹಾಕಾಳಿ ನದಿಯ ಮೇಲೆ ವಾಹನ ಸೇತುವೆ ಆರಂಭವನ್ನು ಸ್ವಾಗತಿಸಿದರು. ಅವರು ಮುಂದುವರೆದು ಒಪ್ಪಿಕೊಂಡರು:
ಆರ್ಥಿಕ ಸಹಕಾರವನ್ನು ಆಳಗೊಳಿಸಲು ಮತ್ತು ಜನರ-ನಡುವಿನ ಸಂಬಂಧಗಳನ್ನು ಬಲಪಡಿಸಲು ಸಂಪರ್ಕವು ಪ್ರಮುಖ ಸಾಧನವಾಗಿದೆ. ಈ ಕ್ಷೇತ್ರದಲ್ಲಿನ ಗಮನಾರ್ಹ ಪ್ರಗತಿಯನ್ನು ಗುರುತಿಸಿ, ಉಭಯ ನಾಯಕರು ಅಯೋಧ್ಯೆ (ಭಾರತ) ಮತ್ತು ಜನಕ್ಪುರ (ನೇಪಾಳ) ನಡುವಿನ ನೇರ ಎಕ್ಸ್ಪ್ರೆಸ್ ರೈಲು ಸೇವೆ ಹಾಗೂ ಧಾರ್ಚುಲಾ (ಭಾರತ) ಮತ್ತು ದಾರ್ಚುಲಾ (ನೇಪಾಳ) ನಡುವೆ ಮಹಾಕಾಳಿ ನದಿಗೆ ಅಡ್ಡಲಾಗಿ ನಿರ್ಮಿಸಲಾದ ವಾಹನ ಸಂಚಾರ ಸೇತುವೆಯ ಉದ್ಘಾಟನೆಯನ್ನು ಸ್ವಾಗತಿಸಿದರು. ಅಲ್ಲದೆ, ಈ ಕೆಳಗಿನ ಅಂಶಗಳಿಗೆ ಸಮ್ಮತಿಸಿದರು:
i. ಭೈರಹವಾ (ನೇಪಾಳ) ಮತ್ತು ಸುನೌಲಿ (ಭಾರತ) ಯಲ್ಲಿ ನಡೆಯುತ್ತಿರುವ ಸಮಗ್ರ ತಪಾಸಣಾ ಕೇಂದ್ರಗಳ (ಐಸಿಪಿ) ನಿರ್ಮಾಣವನ್ನು ಚುರುಕುಗೊಳಿಸುವುದು ಹಾಗೂ ಬನ್ಬಾಸಾ (ಭಾರತ) ಮತ್ತು ದೋಧರಾ ಚಾಂದನಿಯಲ್ಲಿ (ನೇಪಾಳ) ಹೊಸ ‘ಐಸಿಪಿ’ಗಳನ್ನು ನಿರ್ಮಿಸುವುದು.
ii. ಜಯನಗರ-ಬರ್ದಿಬಾಸ್ ಮತ್ತು ಜೋಗ್ಬನಿ-ವಿರಾಟ್ನಗರ ರೈಲು ಮಾರ್ಗಗಳ ಅಂತಿಮ ಹಂತದ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವುದು.
iii. ರಕ್ಸೌಲ್-ಕಠ್ಮಂಡು ರೈಲು ಸಂಪರ್ಕದ ಅಂತಿಮ ಸ್ಥಳ ಸಮೀಕ್ಷೆ (ಎಫ್ಎಲ್ಎಸ್) ಪೂರ್ಣಗೊಂಡಿರುವುದನ್ನು ಸ್ವಾಗತಿಸುತ್ತಾ, ಭಾರತ ಮತ್ತು ನೇಪಾಳದ ನಡುವೆ ಪರಸ್ಪರ ಕಾರ್ಯನಿರ್ವಹಿಸಬಹುದಾದ ರೈಲು ಜಾಲವನ್ನು ನಿರ್ಮಿಸಲು ನೇಪಾಳದಲ್ಲಿ ಪೂರ್ವ-ಪಶ್ಚಿಮ ರೈಲು ಸಂಪರ್ಕದ ಅಭಿವೃದ್ಧಿಗೆ ಸಹಕರಿಸಲು ನಾಯಕರು ಸಮ್ಮತಿಸಿದರು; ಇದರಲ್ಲಿ ಬರ್ದಿಬಾಸ್–ನಿಜ್ಗಢ್ ವಿಭಾಗ ಮತ್ತು ಬೀರ್ಗಂಜ್–ನಿಜ್ಗಢ್ ಸಂಪರ್ಕಕ್ಕೆ ಆದ್ಯತೆ ನೀಡಲಾಗುವುದು.
iv. ಹೊಸ ವಾಹನ ಸಂಚಾರ ಸೇತುವೆಗಳು ಮತ್ತು ವ್ಯಾಪಾರ ಕೇಂದ್ರಗಳ ಮೂಲಕ ಭಾರತ ಮತ್ತು ನೇಪಾಳದ ನಡುವಿನ ರಸ್ತೆ ಸಂಪರ್ಕವನ್ನು ಮತ್ತಷ್ಟು ಹೆಚ್ಚಿಸುವುದು.
v. ಸಿಲಿಗುರಿ (ಭಾರತ) ಮತ್ತು ಝಾಪಾ (ನೇಪಾಳ) ಸಂಪರ್ಕಿಸುವ ಹೊಸ ಪೈಪ್ಲೈನ್ ನಿರ್ಮಾಣ ಸೇರಿದಂತೆ ಗಡಿಯಾಚೆಗಿನ ಪೆಟ್ರೋಲಿಯಂ ಪೂರೈಕೆ ಮೂಲಸೌಕರ್ಯವನ್ನು ವಿಸ್ತರಿಸುವುದು ಹಾಗೂ ಭಾರತ ಮತ್ತು ನೇಪಾಳದ ನಡುವೆ ಅನಿಲ (ಗ್ಯಾಸ್) ಪೈಪ್ಲೈನ್ ಸಾಧ್ಯತೆಯನ್ನು ಪರಿಶೀಲಿಸುವುದು.
vi. ಭಾರತದ ‘ಯುಪಿಐ’ ಅನ್ನು ನೇಪಾಳದ ರಾಷ್ಟ್ರೀಯ ಪಾವತಿ ವ್ಯವಸ್ಥೆಯೊಂದಿಗೆ ಜೋಡಿಸಿರುವುದನ್ನು ಮುಂದುವರಿಸುತ್ತಾ, ಗಡಿಯಾಚೆಗಿನ ಚಿಲ್ಲರೆ ಪಾವತಿಗಳ ಅನುಷ್ಠಾನವನ್ನು ಚುರುಕುಗೊಳಿಸಲು ಉಭಯ ದೇಶಗಳು ಒಪ್ಪಿದವು.
vii. ‘ಪಿಎಂ ಗತಿ ಶಕ್ತಿ’ಯಂತಹ ವೇದಿಕೆಗಳ ಮೂಲಕ ಸಮಗ್ರ ಮೂಲಸೌಕರ್ಯ ಯೋಜನೆ ಮತ್ತು ಸಂಪರ್ಕದಲ್ಲಿ ಸಹಕರಿಸುವುದು; ಇದನ್ನು ನೇಪಾಳ ತನ್ನ ಭೌಗೋಳಿಕ ಮತ್ತು ಅಭಿವೃದ್ಧಿ ಆದ್ಯತೆಗಳಿಗೆ ಅನುಗುಣವಾಗಿ ಅಳವಡಿಸಿಕೊಳ್ಳಲು ಪರಿಗಣಿಸಬಹುದು.
viii. ಭಾರತ ಮತ್ತು ನೇಪಾಳದ ನಡುವಿನ ಅಂತಾರಾಷ್ಟ್ರೀಯ ಗಡಿಯನ್ನು ಮುಕ್ತ, ಸುರಕ್ಷಿತ ಮತ್ತು ಸುನಿಯಂತ್ರಿತವಾಗಿರಿಸುವುದು ಹಾಗೂ ಗಡಿಯಾಚೆಗಿನ ಅಪರಾಧ ಮತ್ತು ಅಕ್ರಮ ಚಟುವಟಿಕೆಗಳ ವಿರುದ್ಧ ಸಹಕಾರವನ್ನು ಬಲಪಡಿಸುವುದು.
III. ಇಂಧನ, ಜಲಸಂಪನ್ಮೂಲ ಮತ್ತು ಹವಾಮಾನ ಸದೃಢತೆ
ಇಂಧನ, ಜಲಸಂಪನ್ಮೂಲ ಮತ್ತು ಹವಾಮಾನ ಸದೃಢತೆ ಕ್ಷೇತ್ರಗಳಲ್ಲಿ ಸಹಕಾರವನ್ನು ಆಳಗೊಳಿಸಲು ಭಾರತ ಮತ್ತು ನೇಪಾಳಕ್ಕೆ ಇರುವ ಅಪಾರ ಸಾಮರ್ಥ್ಯವನ್ನು ಗುರುತಿಸಿ, ಸಾಂಸ್ಥಿಕ ಸಹಕಾರವನ್ನು ಬಲಪಡಿಸಲು, ಪರಸ್ಪರ ಲಾಭದಾಯಕ ಪಾಲುದಾರಿಕೆಗಳನ್ನು ಉತ್ತೇಜಿಸಲು ಮತ್ತು ಸುಸ್ಥಿರ,ಸ್ಥಿತಿಸ್ಥಾಪಕ ಹಾಗೂ ಒಳಗೊಳ್ಳುವ ಅಭಿವೃದ್ಧಿಯತ್ತ ಜಂಟಿ ಪ್ರಯತ್ನಗಳನ್ನು ಮುನ್ನಡೆಸಲು ಎರಡೂ ಕಡೆಯವರು ಒಪ್ಪಿಕೊಂಡರು. ಈ ನಿಟ್ಟಿನಲ್ಲಿ:
i. ವಿದ್ಯುತ್ ವಲಯದ ಸಹಕಾರಕ್ಕಾಗಿ ಇರುವ ‘ಭಾರತ-ನೇಪಾಳ ಜಂಟಿ ದೃಷ್ಟಿಕೋನ’ ದಾಖಲೆಗೆ ಅನುಗುಣವಾಗಿ, ನೇಪಾಳದ ಜಲವಿದ್ಯುತ್ ಮತ್ತು ಪ್ರಸರಣ ಮೂಲಸೌಕರ್ಯದಲ್ಲಿ ಹೆಚ್ಚಿನ ಹೂಡಿಕೆಗಳನ್ನು ಭಾರತ ಉತ್ತೇಜಿಸುತ್ತದೆ; ಇದಕ್ಕೆ ಪೂರಕವಾಗಿ ನೇಪಾಳವು ಅಂತಹ ಹೂಡಿಕೆಗಳಿಗೆ ಅನುಕೂಲಕರ ಮತ್ತು ಪರಸ್ಪರ ಲಾಭದಾಯಕ ನೀತಿ ಸೇರಿದಂತೆ ಸೂಕ್ತ ಸಹಕಾರ ಮತ್ತು ಸೌಲಭ್ಯಗಳನ್ನು ಒದಗಿಸುತ್ತದೆ. ಭಾರತ ಮತ್ತು ನೇಪಾಳದ ನಡುವೆ ವಿದ್ಯುತ್ ವ್ಯಾಪಾರವನ್ನು ವಿಸ್ತರಿಸುವ ದೃಷ್ಟಿಯಿಂದ, ಪರಸ್ಪರ ಲಾಭ ಮತ್ತು ಮಾರುಕಟ್ಟೆ ಬೇಡಿಕೆಯ ಆಧಾರದ ಮೇಲೆ ವಿದ್ಯುತ್ ವ್ಯಾಪಾರವನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆಯನ್ನು ಸಂಬಂಧಪಟ್ಟ ಪ್ರಾಧಿಕಾರಗಳು ಪರಿಶೀಲಿಸುತ್ತವೆ.
ii. ಪರಸ್ಪರ ಪ್ರಯೋಜನಕ್ಕಾಗಿ ಜಲಸಂಪನ್ಮೂಲಗಳನ್ನು ಬಳಸಿಕೊಳ್ಳಲು ಮತ್ತು ಪ್ರವಾಹದಿಂದ ಉಂಟಾಗುವ ದುಷ್ಪರಿಣಾಮಗಳನ್ನು ತಗ್ಗಿಸಲು, ಪಂಚೇಶ್ವರ ಹಾಗೂ ಸಪ್ತಕೋಶಿ ಮತ್ತು ಸುನ್ಕೋಶಿ ವಿವಿಧೋದ್ದೇಶ ಯೋಜನೆಗಳು ಸೇರಿದಂತೆ ಚಾಲ್ತಿಯಲ್ಲಿರುವ ಮತ್ತು ಉದ್ದೇಶಿತ ಜಲವಿದ್ಯುತ್ ಹಾಗೂ ವಿವಿಧೋದ್ದೇಶ ಯೋಜನೆಗಳ ಅನುಷ್ಠಾನವನ್ನು ಎರಡೂ ಕಡೆಯವರು ವೇಗಗೊಳಿಸುತ್ತಾರೆ.
iii. ಜೀವ, ಜೀವನೋಪಾಯ ಮತ್ತು ಮೂಲಸೌಕರ್ಯಗಳನ್ನು ರಕ್ಷಿಸುವ ನಿಟ್ಟಿನಲ್ಲಿ ವಿಪತ್ತು ಅಪಾಯ ತಗ್ಗಿಸುವಿಕೆ, ಮುನ್ನೆಚ್ಚರಿಕೆ ಮತ್ತು ವಿಪತ್ತು ನಂತರದ ಚೇತರಿಕೆಯ ಕುರಿತು ಸಕ್ರಿಯ ಪಾಲುದಾರಿಕೆಗೆ ಎರಡೂ ಕಡೆಯವರು ಸಮ್ಮತಿಸಿದರು.
iv. ಜಲ-ಹವಾಮಾನ ದತ್ತಾಂಶವನ್ನು ನೈಜ-ಸಮಯದಲ್ಲಿ ಪರಸ್ಪರ ಹಂಚಿಕೊಳ್ಳಲು, ಹಿಮನದಿ ಸರೋವರಗಳ ಮೇಲ್ವಿಚಾರಣೆ ಮತ್ತು ಮುನ್ನೆಚ್ಚರಿಕೆ ವ್ಯವಸ್ಥೆಯನ್ನು ಸಾಂಸ್ಥಿಕಗೊಳಿಸಲು ಉಭಯ ದೇಶಗಳು ಸಮ್ಮತಿಸಿವೆ. ‘ಜಂಟಿ ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ’ (ಎಚ್ಎಡಿಆರ್) ಅಭ್ಯಾಸಗಳು, ಸಾಮರ್ಥ್ಯ ವೃದ್ಧಿ, ತರಬೇತಿ ಮತ್ತು ಮಾನವೀಯ ಬೆಂಬಲದ ರೂಪದಲ್ಲಿ ಎರಡೂ ದೇಶಗಳ ಸಂಬಂಧಪಟ್ಟ ಏಜೆನ್ಸಿಗಳ ನಡುವೆ ಸಹಕಾರವನ್ನು ಹೆಚ್ಚಿಸಲು ಸಮ್ಮತಿಸಿದರು.
v. ಅಂತಾರಾಷ್ಟ್ರೀಯ ಸೌರ ಮೈತ್ರಿಕೂಟ (ಐಎಸ್ಎ), ವಿಪತ್ತು ಸ್ಥಿತಿಸ್ಥಾಪಕ ಮೂಲಸೌಕರ್ಯ ಒಕ್ಕೂಟ (ಸಿಡಿಆರ್ಐ), ‘ಐಸಿಐಎಂಒಡಿ’ಮತ್ತು ಅಂತಾರಾಷ್ಟ್ರೀಯ ಬಿಗ್ ಕ್ಯಾಟ್ ಅಲೈಯನ್ಸ್ (ಐಬಿಸಿಎ) ಸೇರಿದಂತೆ ಬಹುಪಕ್ಷೀಯ ಸಂಸ್ಥೆಗಳಲ್ಲಿ ಸಹಕಾರವನ್ನು ಹೆಚ್ಚಿಸಲು ಸಮ್ಮತಿ.
vi. ನೇಪಾಳದಲ್ಲಿ ಹಸಿರು ಜಲಜನಕದ (ಪ್ರಾಯೋಗಿಕ ಯೋಜನೆ ಸೇರಿದಂತೆ ಸೌರಶಕ್ತಿಯಿಂದ ಭೂಗರ್ಭದವರೆಗೆ ಹೆಚ್ಚುವರಿ ಇಂಧನ ಮೂಲಗಳ ಅಭಿವೃದ್ಧಿಯಲ್ಲಿ ಸಹಕರಿಸಲು ಉಭುಯ ದೇಶಗಳು ಒಪ್ಪಿವೆ.
vii. ನೀತಿ-ನಿರೂಪಣೆ, ನಿಯಂತ್ರಣ, ಮಾನದಂಡಗಳು, ಅರಣ್ಯೀಕರಣ, ಅಪಾಯದ ಮ್ಯಾಪಿಂಗ್ ಮತ್ತು ಹವಾಮಾನ ಸದೃಢ ಕೃಷಿಯಂತಹ ಪರಿಸರ ಸಂಬಂಧಿತ ಕ್ಷೇತ್ರಗಳಲ್ಲಿ ನೇಪಾಳಿ ಯುವ ವೃತ್ತಿಪರರು, ಅಧಿಕಾರಿಗಳು ಮತ್ತು ತಜ್ಞರಿಗೆ ತರಬೇತಿ ನೀಡಲು ಭಾರತ ಅನುಕೂಲ ಮಾಡಿಕೊಡುತ್ತದೆ.
viii. ಜಲಮೂಲಗಳ ಪುನರುಜ್ಜೀವನ ಮತ್ತು ಅಂತರ್ಜಲ ಮಾಲಿನ್ಯವನ್ನು ತಡೆಗಟ್ಟುವಲ್ಲಿ ಭಾರತ ತನ್ನ ಪರಿಣತಿಯನ್ನು ಹಂಚಿಕೊಳ್ಳುತ್ತದೆ.
IV. ಉತ್ತಮ ಆಡಳಿತ(ಸುಶಾಸನ)
ಉತ್ತಮ ಆಡಳಿತಕ್ಕೆ ಸಂಬಂಧಿಸಿದಂತೆ ನೇಪಾಳದ ಆದ್ಯತೆಗಳು ಮತ್ತು ಭಾರತ ಅಳವಡಿಸಿಕೊಂಡಿರುವ ವಿಧಾನದ ನಡುವೆ, ವಿಶೇಷವಾಗಿ ಡಿಜಿಟಲ್ ತಂತ್ರಜ್ಞಾನದ ಅಳವಡಿಕೆ ಮತ್ತು ನಾಗರಿಕ-ಸರ್ಕಾರದ ಸಂವಹನವನ್ನು ಹೆಚ್ಚು ಪಾರದರ್ಶಕ, ಅನುಕೂಲಕರ ಮತ್ತು ಪರಿಣಾಮಕಾರಿಯನ್ನಾಗಿ ಮಾಡುವ ವಿಷಯಗಳಲ್ಲಿ ಗಮನಾರ್ಹ ಸಾಮ್ಯತೆ ಇದೆ. ಈ ನಿಟ್ಟಿನಲ್ಲಿ:
i. ಜಾಗತಿಕವಾಗಿ ಗುರುತಿಸಲ್ಪಟ್ಟ ಡಿಜಿಟಲ್ ಸಾರ್ವಭೌಮತ್ವ ಮತ್ತು ದತ್ತಾಂಶ ಸಂರಕ್ಷಣೆಯ ತತ್ವಗಳಿಗೆ ಅನುಗುಣವಾಗಿ, ‘ಡಿಜಿಟಲ್ ನೇಪಾಳ ಚೌಕಟ್ಟು’ ಅನುಷ್ಠಾನಗೊಳಿಸಲು ಡಿಜಿಟಲ್ ಗುರುತು, ಪಾವತಿಗಳು ಮತ್ತು ಇ-ಆಡಳಿತದಲ್ಲಿನ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯದ ತಾಂತ್ರಿಕ ಪರಿಣತಿ ಮತ್ತು ಉತ್ತಮ ಅಭ್ಯಾಸಗಳನ್ನು ವಿನಿಮಯ ಮಾಡಿಕೊಳ್ಳಲಾಗುವುದು.
ii. ‘ರಾಷ್ಟ್ರೀಯ ಉತ್ತಮ ಆಡಳಿತ ಕೇಂದ್ರ’ದ (ಎನ್ಸಿಜಿಜಿ) ಮೂಲಕ ಭಾರತದಲ್ಲಿ ನೇಪಾಳಿ ನಾಗರಿಕ ಸೇವಾ ಅಧಿಕಾರಿಗಳಿಗೆ ತರಬೇತಿ ವ್ಯವಸ್ಥೆ ಮಾಡಲಾಗುವುದು.
iii. ರಾಷ್ಟ್ರೀಯ ಮತ್ತು ಪ್ರಾಂತೀಯ ಮಟ್ಟದ ಶಾಸಕಾಂಗಗಳ ನಡುವೆ ಅನುಭವಗಳು ಮತ್ತು ಉತ್ತಮ ಅಭ್ಯಾಸಗಳನ್ನು ಎರಡೂ ಕಡೆಯವರು ಹಂಚಿಕೊಳ್ಳುತ್ತಾರೆ.
iv. ಭಾರತದ ಸಂಬಂಧಪಟ್ಟ ಸಂಸ್ಥೆಗಳಿಗೆ ಭೇಟಿಗಳ ವಿನಿಮಯ ಮತ್ತು ತರಬೇತಿ ಕಾರ್ಯಕ್ರಮಗಳ ಮೂಲಕ ಸ್ಥಳೀಯ ಆಡಳಿತದಲ್ಲಿ ಸಹಕಾರವನ್ನು ಬಲಪಡಿಸಲಾಗುವುದು.
V. ತಂತ್ರಜ್ಞಾನ, ಬಾಹ್ಯಾಕಾಶ ಮತ್ತು ನಾವೀನ್ಯತೆ
ತಂತ್ರಜ್ಞಾನದ ಹೆಚ್ಚಿನ ಅಳವಡಿಕೆ ಮತ್ತು ಬಳಕೆಯನ್ನು ಉತ್ತೇಜಿಸಲು, ತಂತ್ರಜ್ಞಾನದ ಕೇಂದ್ರವಾಗುವ ನೇಪಾಳದ ಉದ್ದೇಶಕ್ಕೆ ಅನುಗುಣವಾಗಿ ಹಾಗೂ ಈ ಕ್ಷೇತ್ರಗಳಲ್ಲಿ ಭಾರತದ ಶಕ್ತಿಯನ್ನು ಪರಿಗಣಿಸಿ, ಭಾರತ-ನೇಪಾಳ ಪಾಲುದಾರಿಕೆಯು ಈ ಕೆಳಗಿನ ಉಪಕ್ರಮಗಳನ್ನು ಜಾರಿಗೊಳಿಸಲು ಪ್ರಯತ್ನಿಸುತ್ತದೆ:
i. ಭಾರತದಲ್ಲಿ ನೇಪಾಳಿ ನವೋದ್ಯಮಗಳಿಗೆ ತರಬೇತಿ ಮತ್ತು ಮಾರ್ಗದರ್ಶನ ನೀಡುವುದು, ಕಠ್ಮಂಡುವಿನಲ್ಲಿ ‘ನವೋದ್ಯಮ ಉತ್ಕೃಷ್ಟತಾ ಕೇಂದ್ರ’ ಮತ್ತು ಪೋಖರಾದಲ್ಲಿ ‘ಡಿಜಿಟಲ್ ನೋಮ್ಯಾಡ್ಸ್ ಮತ್ತು ನಾವಿನ್ಯತಾ ಕೇಂದ್ರ’ ಸ್ಥಾಪಿಸುವುದು ಸೇರಿದಂತೆ ಭಾರತ-ನೇಪಾಳ ನವೋದ್ಯಮ ಪಾಲುದಾರಿಕೆ ಜಾಲದ ವಿಸ್ತರಣೆ.
ii. ಖಾಸಗಿ ಹೂಡಿಕೆಗೆ ಅನುಕೂಲ ಮಾಡಿಕೊಡುವ ಮೂಲಕ ನೇಪಾಳದಲ್ಲಿ ಡಿಜಿಟಲ್ ಪಾರ್ಕ್ಗಳು ಮತ್ತು ಡೇಟಾ ಸೆಂಟರ್ಗಳ ಅಭಿವೃದ್ಧಿ.
iii. ‘ಭಾಷಿಣಿ’ ಸಹಯೋಗದೊಂದಿಗೆ ನೇಪಾಳಿ ಭಾಷೆಗಾಗಿ ಲಾರ್ಜ್ ಲ್ಯಾಂಗ್ವೇಜ್ ಮಾಡೆಲ್ (ಎಲ್ಎಲ್ಎಂ) ಅಭಿವೃದ್ಧಿಪಡಿಸುವುದು ಸೇರಿದಂತೆ ಕೃತಕ ಬುದ್ಧಿಮತ್ತೆ (ಎಐ) ಕ್ಷೇತ್ರದಲ್ಲಿ ದ್ವಿಪಕ್ಷೀಯ ಸಹಕಾರವನ್ನು ಹೆಚ್ಚಿಸುವುದು.
iv. ಉಪಗ್ರಹ ಅಭಿವೃದ್ಧಿ, ಭೂ ವೀಕ್ಷಣೆ, ವಿಪತ್ತು ನಿರ್ವಹಣೆಗಾಗಿ ದೂರಸಂವೇದಿ ಬೆಂಬಲ ಮತ್ತು ಸಾಮರ್ಥ್ಯ ವೃದ್ಧಿಗಾಗಿ ನೇಪಾಳ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಹಾಗೂ ಸಂಬಂಧಪಟ್ಟ ನೇಪಾಳಿ ಏಜೆನ್ಸಿಗಳು ಭಾರತದ ‘ಇಸ್ರೊ’ ಮತ್ತು ‘ಇನ್-ಸ್ಪೇಸ್’ ಜೊತೆ ಸಹಕರಿಸುವ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಸಹಕಾರವನ್ನು ಬಲಪಡಿಸುವುದು.
v. 5ಜಿ/6ಜಿ ಮತ್ತು ಇತರ ಮುಂದಿನ ಪೀಳಿಗೆಯ ನೆಟ್ವರ್ಕ್ಗಳಂತಹ ಉದಯೋನ್ಮುಖ ದೂರಸಂಪರ್ಕ ತಂತ್ರಜ್ಞಾನಗಳಲ್ಲಿ ಸಹಕಾರವನ್ನು ಹೆಚ್ಚಿಸುವುದು.
VI. ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ
ಕೌಶಲ್ಯ ಅಭಿವೃದ್ಧಿ ಮತ್ತು ಸಾಮರ್ಥ್ಯ ವೃದ್ಧಿಯ ಮಹತ್ವವನ್ನು ಗುರುತಿಸಿ, ತರಬೇತಿ, ಮಾನವ ಸಂಪನ್ಮೂಲ ಅಭಿವೃದ್ಧಿ ಮತ್ತು ಶೈಕ್ಷಣಿಕ ವಿನಿಮಯದಲ್ಲಿ ಬಲವಾದ ಸಹಕಾರವನ್ನು ಸಾಧಿಸಲು ಎರಡೂ ದೇಶಗಳು ಈ ಕೆಳಗಿನವುಗಳ ಮೂಲಕ ಶ್ರಮಿಸುತ್ತವೆ:
i. ‘ಐಐಟಿ’ ಯಿಂದ ಪ್ರಾರಂಭಿಸಿ, ನೇಪಾಳದಲ್ಲಿ ಪ್ರತಿಷ್ಠಿತ ಭಾರತೀಯ ಉನ್ನತ ಶಿಕ್ಷಣ ಸಂಸ್ಥೆಗಳ ಶಾಖೆಗಳು/ಕ್ಯಾಂಪಸ್ಗಳನ್ನು ತೆರೆಯುವ ಸಾಧ್ಯತೆಯನ್ನು ಪರಿಶೀಲಿಸಲಾಗುವುದು.
ii. ಅತ್ಯಂತ ಯಶಸ್ವಿಯಾಗಿ ನಡೆಯುತ್ತಿರುವ ವಿದ್ಯಾರ್ಥಿವೇತನ ಯೋಜನೆಗಳನ್ನು ಮುಂದುವರಿಸುತ್ತಾ, ನೇಪಾಳಿ ವಿದ್ಯಾರ್ಥಿಗಳಿಗೆ ಕಾನೂನು, ತಂತ್ರಜ್ಞಾನ ಮತ್ತು ‘ಎಐ’ನಂತಹ ಹೊಸ ವಿಭಾಗಗಳಲ್ಲಿ ವಿದ್ಯಾರ್ಥಿವೇತನ ಮತ್ತು ತರಬೇತಿ ಅವಕಾಶಗಳನ್ನು ಸೇರಿಸಲಾಗುವುದು.
iii. ಶೈಕ್ಷಣಿಕ ಮತ್ತು ತರಬೇತಿ ಸಂಸ್ಥೆಗಳ ನಡುವೆ ಬಲವಾದ ಸಹಯೋಗದ ಜೊತೆಗೆ ಅಧ್ಯಾಪಕರು ಮತ್ತು ತಜ್ಞರ ವಿನಿಮಯವನ್ನು ಉತ್ತೇಜಿಸಲಾಗುವುದು ಮತ್ತು ಸಾಂಸ್ಥಿಕಗೊಳಿಸಲಾಗುವುದು.
iv. ಉತ್ಪಾದನೆ, ಸೇವೆಗಳು ಮತ್ತು ಉದ್ಯಮಶೀಲತೆಗೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ನೇಪಾಳದ ಯುವಕರಿಗೆ ಕೌಶಲ್ಯ ಮತ್ತು ತರಬೇತಿ ನೀಡಲು ಭಾರತದ ನೆರವಿನೊಂದಿಗೆ ವೃತ್ತಿಪರ ತರಬೇತಿ ಸಂಸ್ಥೆಯನ್ನು ಸ್ಥಾಪಿಸಲಾಗುವುದು.
VII. ಕ್ರೀಡೆ
ಕ್ರೀಡೆಯ ಬೆಳವಣಿಗೆ ಮತ್ತು ಸಂಬಂಧಿತ ಮೂಲಸೌಕರ್ಯಗಳ ಅಭಿವೃದ್ಧಿಗೆ ನೇಪಾಳ ನೀಡುತ್ತಿರುವ ಒತ್ತನ್ನು ಬಲಪಡಿಸಲು, ಭಾರತ ಮತ್ತು ನೇಪಾಳ ಈ ಕೆಳಗಿನ ಪ್ರಮುಖ ಉಪಕ್ರಮಗಳಲ್ಲಿ ಒಟ್ಟಾಗಿ ಕೆಲಸ ಮಾಡುತ್ತವೆ:
i. ರಾಷ್ಟ್ರೀಯ ಮತ್ತು ಪ್ರಾಂತೀಯ ಮಟ್ಟದಲ್ಲಿ ಕ್ರಿಕೆಟ್ ಮೂಲಸೌಕರ್ಯದ ಅಭಿವೃದ್ಧಿಯನ್ನು ಬೆಂಬಲಿಸುವುದರ ಜೊತೆಗೆ ನೇಪಾಳದಲ್ಲಿ ‘ರಾಷ್ಟ್ರೀಯ ಕ್ರಿಕೆಟ್ ತರಬೇತಿ ಅಕಾಡೆಮಿ’ಯನ್ನು ಸ್ಥಾಪಿಸಲು ಭಾರತ ಬೆಂಬಲ ನೀಡುತ್ತದೆ.
ii. ನೇಪಾಳದ ಪ್ರಾಂತೀಯ ಕ್ರಿಕೆಟ್ ತಂಡಗಳ ಆಟಗಾರರಿಗೆ ಭಾರತದ ‘ರಾಷ್ಟ್ರೀಯ ತರಬೇತಿ ಅಕಾಡೆಮಿ’ಗಳಲ್ಲಿ ತರಬೇತಿ ಪಡೆಯಲು ಅವಕಾಶ ನೀಡಲಾಗುವುದು.
iii. ನೇಪಾಳದಲ್ಲಿ ಆಧುನಿಕ ಬಹು-ಕ್ರೀಡಾ ಕೇಂದ್ರಗಳ ಅಭಿವೃದ್ಧಿ ಸೇರಿದಂತೆ ಬ್ಯಾಡ್ಮಿಂಟನ್, ಟೆನಿಸ್, ಶೂಟಿಂಗ್ ಮತ್ತು ಅಥ್ಲೆಟಿಕ್ಸ್ನಂತಹ ಇತರ ಕ್ರೀಡೆಗಳಲ್ಲಿಯೂ ಇದೇ ರೀತಿಯ ಅವಕಾಶಗಳನ್ನು ಪರಿಶೀಲಿಸಲಾಗುವುದು.
iv. ಜಂಟಿ ಅನ್ವೇಷಣೆ ಕೈಗೊಳ್ಳುವುದು ಸೇರಿದಂತೆ ಪರ್ವತಾರೋಹಣ ಕ್ರೀಡೆಗಳಲ್ಲಿ ಸಹಯೋಗವನ್ನು ಪರಿಶೀಲಿಸಲಾಗುವುದು.
v. ಕ್ರಿಕೆಟ್, ಫುಟ್ಬಾಲ್ ಮತ್ತು ಇತರ ಕ್ರೀಡೆಗಳಲ್ಲಿ ಭಾರತ ಮತ್ತು ನೇಪಾಳದ ಆಟಗಾರರು ಪರಸ್ಪರ ದೇಶಗಳ ಕ್ರೀಡಾ ಲೀಗ್ಗಳಲ್ಲಿ ಭಾಗವಹಿಸುವ ಅವಕಾಶಗಳನ್ನು ಪರಿಶೀಲಿಸಲು ಎರಡೂ ದೇಶಗಳ ಸಂಬಂಧಪಟ್ಟ ಕ್ರೀಡಾ ಸಂಸ್ಥೆಗಳು/ಪ್ರಾಧಿಕಾರಗಳನ್ನು ಉತ್ತೇಜಿಸುವುದು.
VIII. ಸಂಸ್ಕೃತಿ ಮತ್ತು ಪ್ರವಾಸೋದ್ಯಮ
ಎರಡೂ ದೇಶಗಳ ನಡುವಿನ ಸಾಂಸ್ಕೃತಿಕ ಸಂಪರ್ಕಗಳು ದ್ವಿಪಕ್ಷೀಯ ಸಂಬಂಧದ ಪ್ರಮುಖ ಆಧಾರಸ್ತಂಭಗಳಲ್ಲಿ ಒಂದಾಗಿವೆ. ಈ ರೋಮಾಂಚಕ ಸಂವಹನವನ್ನು ಮತ್ತಷ್ಟು ಶ್ರೀಮಂತಗೊಳಿಸಲು:
i. ಧಾರ್ಮಿಕ ಪ್ರವಾಸೋದ್ಯಮ ಸರ್ಕ್ಯೂಟ್ಗಳು ಮತ್ತು ಹೊಸ ತಾಣಗಳನ್ನು ಅಭಿವೃದ್ಧಿಪಡಿಸಲು ಭಾರತ ಮತ್ತು ನೇಪಾಳ ಪಾಲುದಾರಿಕೆ ಹೊಂದಲಿವೆ.ಇದರಲ್ಲಿ ಜನಕ್ಪುರ–ಅಯೋಧ್ಯೆ, ಲುಂಬಿನಿ–ಬೋಧಗಯಾ–ಸಾರನಾಥ–ಕುಶಿನಗರ ಮತ್ತು ಕಠ್ಮಂಡು (ಪಶುಪತಿನಾಥ)–ವಾರಣಾಸಿಯನ್ನು ಸಂಪರ್ಕಿಸುವ ರಾಮಾಯಣ, ಬೌದ್ಧ ಮತ್ತು ಶಿವ–ಶಕ್ತಿ ಸರ್ಕ್ಯೂಟ್ಗಳ ಅಭಿವೃದ್ಧಿ ಹಾಗೂ ಸಹೋದರಿ-ನಗರ (ಸಿಸ್ಟರ್-ಸಿಟಿ) ಒಪ್ಪಂದಗಳು ಸೇರಿವೆ.
ii. ನೇಪಾಳ ಮತ್ತು ಭಾರತದಲ್ಲಿ ಪರ್ಯಾಯವಾಗಿ ವಾರ್ಷಿಕ ಯುವ ಸಾಂಸ್ಕೃತಿಕ ಉತ್ಸವವನ್ನು ಆಯೋಜಿಸಲು ಹಾಗೂ ಚಲನಚಿತ್ರ ನಿರ್ಮಾಣ, ರಂಗಭೂಮಿ ಮತ್ತು ಲಲಿತಕಲೆಗಳಲ್ಲಿ ಕಲಾವಿದರಿಗೆ ತರಬೇತಿ ಮತ್ತು ವಿನಿಮಯವನ್ನು ವಿಸ್ತರಿಸಲು ಉಭಯ ದೇಶಗಳು ಸಮ್ಮತಿಸಿವೆ.
iii. ಲುಂಬಿನಿ ಬೌದ್ಧ ವಿಶ್ವವಿದ್ಯಾಲಯದಲ್ಲಿ (ಎಲ್ಬಿಯು) ‘ನಳಂದ ಕೇಂದ್ರ’ವನ್ನು ಸ್ಥಾಪಿಸುವ ಮೂಲಕ ನಳಂದ ವಿಶ್ವವಿದ್ಯಾಲಯ ಮತ್ತು ಎಲ್ಬಿಯು ನಡುವಿನ ಸಹಯೋಗವನ್ನು ಬಲಪಡಿಸಲಾಗುವುದು.
iv. ಪ್ರವಾಸೋದ್ಯಮ ಮತ್ತು ಆತಿಥ್ಯ ಕ್ಷೇತ್ರದಲ್ಲಿ ಯುವ ಉದ್ಯಮಿಗಳ ನಡುವೆ ಸಹಯೋಗಕ್ಕೆ ಅನುಕೂಲ ಮಾಡಿಕೊಡಲು ಹಾಗೂ ದ್ವಿಮುಖ ಪ್ರವಾಸೋದ್ಯಮವನ್ನು ಉತ್ತೇಜಿಸಲು ಸಾಮಾಜಿಕ ಮಾಧ್ಯಮ ಪ್ರಭಾವಿಗಳು (ಇನ್ಫ್ಲುಯೆನ್ಸರ್ಸ್) ಮತ್ತು ಕಂಟೆಂಟ್ ಕ್ರಿಯೇಟರ್ಗಳ ಪರಿಚಯ ಭೇಟಿಗಳನ್ನು ಉತ್ತೇಜಿಸಲು ಉಭಯ ದೇಶಗಳ ಸಮ್ಮತಿ.
IX. ಆರೋಗ್ಯ
ದೇಶಾದ್ಯಂತ ಮೂಲಭೂತ ಆರೋಗ್ಯ ಸೇವೆಯ ಸಮಗ್ರ ಮಾದರಿಗೆ ನೇಪಾಳ ಸರ್ಕಾರ ನೀಡುತ್ತಿರುವ ಒತ್ತು ಆರೋಗ್ಯದ ಕಡೆಗಿನ ಭಾರತದ ಕಾರ್ಯವಿಧಾನದೊಂದಿಗೆ ಗಮನಾರ್ಹ ಸಾಮ್ಯತೆಯನ್ನು ಹೊಂದಿದೆ. ಅಸ್ತಿತ್ವದಲ್ಲಿರುವ ಪೂರಕ ಅಂಶಗಳ ದೃಷ್ಟಿಯಿಂದ ಮತ್ತು ಈ ಕ್ಷೇತ್ರದಲ್ಲಿ ಬಲವಾದ ಸಹಕಾರವನ್ನು ಬೆಳೆಸಲು, ಎರಡೂ ಕಡೆಯವರು ಈ ಕೆಳಗಿನವುಗಳಿಗೆ ಸಮ್ಮತಿಸಿದ್ದಾರೆ:
i. ನೇಪಾಳ ಸರ್ಕಾರದ ಅಗತ್ಯಗಳಿಗೆ ಅನುಗುಣವಾಗಿ ಆರೋಗ್ಯ ಕೇಂದ್ರಗಳು, ಹೆರಿಗೆ ಕೇಂದ್ರಗಳು ಮತ್ತು ಆಸ್ಪತ್ರೆಗಳ ನಿರ್ಮಾಣಕ್ಕಾಗಿ ‘ಅತ್ಯಧಿಕ-ಪರಿಣಾಮದ ಸಮುದಾಯ ಅಭಿವೃದ್ಧಿ ಯೋಜನೆ’ (ಎಚ್ಐಸಿಡಿಪಿ) ಮಾದರಿಯ ಅಡಿಯಲ್ಲಿ ಯೋಜನೆಗಳನ್ನು ಮುಂದುವರಿಸುವ ಮೂಲಕ ಆರೋಗ್ಯ ಮೂಲಸೌಕರ್ಯವನ್ನು ಬಲಪಡಿಸುತ್ತವೆ.
ii. ನೇಪಾಳದ ರಾಷ್ಟ್ರೀಯ ವೈದ್ಯಕೀಯ ಪ್ರಯೋಗಾಲಯವನ್ನು ಮೇಲ್ದರ್ಜೆಗೇರಿಸಲು ಸಹಕಾರ.
iii. ಕೈಗೆಟುಕುವ ದರದಲ್ಲಿ ಗುಣಮಟ್ಟದ ಔಷಧಿಗಳ ಲಭ್ಯತೆಯನ್ನು ಸುಧಾರಿಸಲು ಭಾರತ–ನೇಪಾಳ ಜನೌಷಧಿ ಕೇಂದ್ರಗಳ ಸ್ಥಾಪನೆ.
iv. ನೇಪಾಳದ ಆರೋಗ್ಯ ವೃತ್ತಿಪರರ ಸಾಮರ್ಥ್ಯ ವೃದ್ಧಿಗಾಗಿ ‘ಭಾರತೀಯ ತಾಂತ್ರಿಕ ಮತ್ತು ಆರ್ಥಿಕ ಸಹಕಾರ ಕಾರ್ಯಕ್ರಮ’ದ (ಐಟಿಇಸಿ) ಅಡಿಯಲ್ಲಿ ಆರೋಗ್ಯ ಸಂಬಂಧಿತ ಕ್ಷೇತ್ರಗಳಲ್ಲಿ ವಿಶೇಷ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ.
v. ಎರಡೂ ದೇಶಗಳ ಪ್ರಮುಖ ವೈದ್ಯಕೀಯ ಸಂಸ್ಥೆಗಳ ನಡುವೆ ಸಂಪರ್ಕವನ್ನು ಬೆಳೆಸುವುದು ಮತ್ತು ವಿದ್ಯಾರ್ಥಿ ಹಾಗೂ ಅಧ್ಯಾಪಕರ ವಿನಿಮಯವನ್ನು ಉತ್ತೇಜಿಸುವುದು.
vi. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮತ್ತು ನೇಪಾಳ ಆರೋಗ್ಯ ಸಂಶೋಧನಾ ಮಂಡಳಿ (ಎನ್ಎಚ್ಆರ್ಸಿ) ಹಾಗೂ ಭಾರತದ (ಸಿಡಿಎಸ್ಸಿಒ) ಮತ್ತು ನೇಪಾಳದ (ಔಷಧ ಆಡಳಿತ ಇಲಾಖೆ) ಔಷಧ ನಿಯಂತ್ರಣ ಪ್ರಾಧಿಕಾರಗಳ ನಡುವೆ ಸಂಶೋಧನಾ ಸಹಯೋಗವನ್ನು ಬಲಪಡಿಸುವುದು.
X. ಕೃಷಿ:
ಅನುಭವ ಹಂಚಿಕೆ, ತರಬೇತಿ ಮತ್ತು ಚೌಕಟ್ಟು ದಾಖಲೆಗಳ ಅಂತಿಮಗೊಳಿಸುವಿಕೆ ಸೇರಿದಂತೆ ಈ ಕ್ಷೇತ್ರದಲ್ಲಿ ಭಾರತ ಮತ್ತು ನೇಪಾಳ ಗಮನಾರ್ಹ ಸಂವಹನವನ್ನು ಹೊಂದಿವೆ. ಈ ವಲಯದಲ್ಲಿ ದೂರದೃಷ್ಟಿಯ ತೊಡಗಿಸಿಕೊಳ್ಳುವಿಕೆಯನ್ನು ಮತ್ತಷ್ಟು ಹೆಚ್ಚಿಸಲು, ಉಭಯ ದೇಶಗಳು ಇವುಗಳಿಗೆ ಸಮ್ಮತಿಸಿವೆ:
i. ನೇಪಾಳಿ ಕೃಷಿ ಉತ್ಪನ್ನಗಳಿಗೆ ಮೌಲ್ಯವರ್ಧನೆ ಒದಗಿಸಲು ಭಾರತದ ಅನುದಾನ ನೆರವಿನೊಂದಿಗೆ ಚಿತ್ವಾನ್ನಲ್ಲಿ ಕೃಷಿ-ಕೈಗಾರಿಕಾ ಪಾರ್ಕ್ ಸ್ಥಾಪನೆ.
ii. ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್) ಮತ್ತು ನೇಪಾಳ ಕೃಷಿ ಸಂಶೋಧನಾ ಮಂಡಳಿ (ಎನ್ಎಆರ್ಸಿ) ನಡುವಿನ 2026-2030ರ ಕಾರ್ಯಯೋಜನೆಯ ಅನುಷ್ಠಾನವನ್ನು ಚುರುಕುಗೊಳಿಸುವುದು.
iii. ನೇಪಾಳದ ಅಧಿಕಾರಿಗಳು, ರೈತರು ಮತ್ತು ಇತರ ಕೃಷಿ ಸಂಬಂಧಿತ ವೃತ್ತಿಪರರ ಸಾಮರ್ಥ್ಯ ವೃದ್ಧಿಗಾಗಿ ಕೃಷಿ ಮತ್ತು ಪಶುಸಂಗೋಪನೆ ಸಂಬಂಧಿತ ಕ್ಷೇತ್ರಗಳಲ್ಲಿ ವಿಶೇಷ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುವುದು.
iv. ನೇಪಾಳದಲ್ಲಿ ‘ಐಸಿಎಆರ್ ಉತ್ಕೃಷ್ಟತಾ ಕೇಂದ್ರ’ದ ಸ್ಥಾಪನೆ; ಪ್ರಮುಖ ಕೃಷಿ ವಿಶ್ವವಿದ್ಯಾಲಯಗಳನ್ನು ಜೋಡಿಸುವುದು ಹಾಗೂ ಕೃಷಿ ಮತ್ತು ಪಶುಸಂಗೋಪನೆಯಲ್ಲಿ ನೇಪಾಳಿ ಅಧಿಕಾರಿಗಳು, ರೈತರು, ಉದ್ಯಮಿಗಳಿಗೆ ವಿಶೇಷ ತರಬೇತಿಯನ್ನು ಆಯೋಜಿಸುವುದು.
ಅನುಷ್ಠಾನ ವಿಧಾನಗಳು
ನೇಪಾಳದ ವಿದೇಶಾಂಗ ಕಾರ್ಯದರ್ಶಿ ಮತ್ತು ಭಾರತದ ರಾಯಭಾರಿ ನೇತೃತ್ವದ ‘ಉನ್ನತ ಮಟ್ಟದ ಮೇಲ್ವಿಚಾರಣಾ ಕಾರ್ಯಪಡೆ’ಯನ್ನು ಸಕ್ರಿಯಗೊಳಿಸಲು ಉಭಯ ಪ್ರಧಾನಮಂತ್ರಿಗಳು ನಿರ್ಧರಿಸಿದರು. ಈ ಮೇಲ್ವಿಚಾರಣಾ ಕಾರ್ಯಪಡೆಯು ಆರು ತಿಂಗಳಿಗೊಮ್ಮೆಯಾದರೂ ಸಭೆ ಸೇರಿ ಉದ್ದೇಶಿತ ಯೋಜನೆಗಳು, ಆಲೋಚನೆಗಳು ಮತ್ತು ಉಪಕ್ರಮಗಳ ತ್ವರಿತ ಅನುಷ್ಠಾನವನ್ನು ಖಚಿತಪಡಿಸುತ್ತದೆ ಹಾಗೂ ಸಂಬಂಧಿತ ಅನುಮತಿಗಳು/ಅನುಮೋದನೆಗಳಿಗೆ ಅನುಕೂಲ ಮಾಡಿಕೊಡುತ್ತದೆ.
ಉನ್ನತ ಮಟ್ಟದ ಮೇಲ್ವಿಚಾರಣಾ ಕಾರ್ಯಪಡೆಯು ತನ್ನ ವರದಿಯನ್ನು ಎರಡೂ ದೇಶಗಳ ವಿದೇಶಾಂಗ ಸಚಿವರ ಸಹ-ಅಧ್ಯಕ್ಷತೆಯ ಭಾರತ-ನೇಪಾಳ ಜಂಟಿ ಆಯೋಗಕ್ಕೆ ಸಲ್ಲಿಕೆ ಮಾಡಲು ಎಂದು ಉಭಯ ನಾಯಕರು ಒಪ್ಪಿಕೊಂಡರು. ಭಾರತ-ನೇಪಾಳ ಜಂಟಿ ಆಯೋಗದ ಮುಂದಿನ ಸಭೆಯನ್ನು 2027ರಲ್ಲಿ ನಡೆಸಲು ನಾಯಕರು ನಿರ್ಧರಿಸಿದರು.
ಈ ‘ಜಂಟಿ ದೃಷ್ಟಿಕೋನ’ ದಾಖಲೆಯು ಎರಡು ಸ್ನೇಹಪರ ದೇಶಗಳ ನಡುವಿನ ಮಹತ್ವಾಕಾಂಕ್ಷೆಯ, ಆಧುನಿಕ ಮತ್ತು ಪರಸ್ಪರ ಲಾಭದಾಯಕ ಪಾಲುದಾರಿಕೆಗೆ ನೀಲನಕ್ಷೆಯನ್ನು ಒದಗಿಸುತ್ತದೆ ಎಂದು ಪ್ರಧಾನಮಂತ್ರಿಗಳು ವಿಶ್ವಾಸ ವ್ಯಕ್ತಪಡಿಸಿದರು. ಜೊತೆಗೆ ಈ ಹಂಚಿಕೆಯ ದೃಷ್ಟಿಕೋನವನ್ನು ಸಾಕಾರಗೊಳಿಸಲು ಶ್ರಮಿಸುವಂತೆ ಭಾರತ ಮತ್ತು ನೇಪಾಳದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
*****