ಕೃಷಿ ಸಚಿವಾಲಯ
azadi ka amrit mahotsav

ಕೃಷಿ ಸಚಿವಾಲಯ ಮತ್ತು ಗ್ರಾಮೀಣ ಅಭಿವೃದ್ಧಿ ಸಚಿವಾಲಯ ಜಂಟಿಯಾಗಿ ದೆಹಲಿಯಲ್ಲಿ ಆಯೋಜಿಸಿದ್ದ ಬಡತನ ನಿರ್ಮೂಲನೆಯಲ್ಲಿ ಎರಡೂ ಸಚಿವಾಲಯಗಳ ಪಾತ್ರ ಕುರಿತ ಕಾರ್ಯಾಗಾರ; ಕೇಂದ್ರ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅಧ್ಯಕ್ಷತೆಯಲ್ಲಿ ಸಮಾಪನ


“ನೀವು ಕೇವಲ ಯೋಜನೆಗಳನ್ನು ರೂಪಿಸುವ ಬದಲಾಗಿ ರಾಷ್ಟ್ರವನ್ನೇ ಕಟ್ಟಿದ್ದೀರಿ. ಈ ಅಭಿವೃದ್ಧಿ ಪಯಣದ ನಿಜವಾದ ಚಾಲನಾಶಕ್ತಿ ನೀವೇ ಆಗಿದ್ದೀರಿ; ”ಅಧಿಕಾರಿಗಳು ಮತ್ತು ಉದ್ಯೋಗಿಗಳನ್ನು ಹುರಿದುಂಬಿಸಿ ಮಾತನಾಡಿದ ಕೇಂದ್ರ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್

“ದೇಶದಲ್ಲಿ ಕಡು ಬಡತನವು ಶೇಕಡ 27.1ರಿಂದ ಶೇಕಡ 2.6ಕ್ಕೆ ತಗ್ಗಿದೆ; ಇನ್ನೂ ಬಡತನದ ಬೇಗೆಯಲ್ಲಿ ಇರುವವರನ್ನು ಅದರಿಂದ ಹೊರತರುವ ದೃಢ ಸಂಕಲ್ಪ ನಮ್ಮದು”: ಶ್ರೀ ಶಿವರಾಜ್ ಸಿಂಗ್ ಚೌಹಾಣ್

“ಕೃಷಿ ವಲಯದ ಬೆಳವಣಿಗೆ ದರ ಐತಿಹಾಸಿಕ ಶೇಕಡ 4.45ರಷ್ಟನ್ನು ತಲುಪಿದೆ. ಇದು ಭಾರತದ ಕೃಷಿ ವಲಯವನ್ನು 'ಹಸಿರು ಕ್ರಾಂತಿ'ಯ ಕಾಲಘಟ್ಟವನ್ನೂ ಮೀರಿ ಮುನ್ನಡೆಸಿದೆ”: ಕೇಂದ್ರ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್

“ಲಖ್ಪತಿ ದೀದಿಗಳು, ಪಕ್ಕಾ ಮನೆಗಳು, ಗ್ರಾಮೀಣ ರಸ್ತೆಗಳು, ವಿಕಸಿತ ಭಾರತ, ಜಲಾನಯನ ಪ್ರದೇಶ ಅಭಿವೃದ್ಧಿ ಮುಂತಾದವು ಗ್ರಾಮೀಣ ಬಡವರ ಜೀವನ ಬದಲಾಯಿಸಿವೆ”: ಶ್ರೀ ಶಿವರಾಜ್ ಸಿಂಗ್

ಐಸಿಎಆರ್ ಆವಿಷ್ಕಾರಗಳು ರೈತರ ಆದಾಯ ಹೆಚ್ಚಿಸಿವೆ; ಇಲ್ಲಿ ಹೂಡಿಕೆ ಮಾಡುವ ಪ್ರತಿ ರೂಪಾಯಿಗೂ 13.85 ರೂ.ನಷ್ಟು ಆರ್ಥಿಕ ಪ್ರತಿಫಲ ಲಭಿಸುತ್ತಿದೆ

“ಈ ಸಾಧನೆಯನ್ನು ಸಂತೋಷದಿಂದ ಮತ್ತು ವಿಶೇಷ ಸಂದರ್ಭದಂತೆ ಸಂಭ್ರಮಿಸಿ”: ವಿಭಾಗಾಧಿಕಾರಿಗಳಿಂದ ಹಿಡಿದು ಕಾರ್ಯದರ್ಶಿಗಳ ತನಕ ಎಲ್ಲರ ಪ್ರಯತ್ನಗಳು ಇವೆ: ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಶ್ಲಾಘನೆ

ನೌಕರನ ನಡುವೆ ಕುಳಿತು ನೇರ ಸಂವಾದ ನಡೆಸಿ, ಅವರಿಂದ ಸಲಹೆಗಳನ್ನು ಪಡೆದ ಶ್ರೀ ಶಿವರಾಜ್ ಸಿಂಗ್ ಚೌಹಾಣ್; ಮುಕ್ತ ವ್ಯಾಪಾರ ಒಪ್ಪಂದಗಳ ಮೂಲಕ ಜಾಗತಿಕ ಮಾರುಕಟ್ಟೆಗಳಲ್ಲಿ ಛಾಪು ಮೂಡಿಸುವುದು ಮುಂದಿನ ಗುರಿಯಾಗಿದೆ

ಪ್ರಕಟಣಾ ದಿನಾಂಕ: 23 NOV 2026 9:11PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ, ಬಡತನ ನಿರ್ಮೂಲನೆಯ ಕ್ಷೇತ್ರದಲ್ಲಿ ಭಾರತವು ಹಿಂದೆಂದೂ ಕಾಣದ, ಅಸಾಧಾರಣವಾದ ಮತ್ತು ಐತಿಹಾಸಿಕ ಮೈಲಿಗಲ್ಲುಗಳನ್ನು ಸಾಧಿಸಿದೆ. ವಿಶ್ವ ಬ್ಯಾಂಕ್‌ನ ಇತ್ತೀಚಿನ ವರದಿಯ ಪ್ರಕಾರ, ದೇಶದಲ್ಲಿ ಸುಮಾರು 50 ಕೋಟಿ(500 ದಶಲಕ್ಷ) ಜನರು ಬಡತನದಿಂದ ಹೊರಬಂದಿದ್ದಾರೆ, ಕಡು ಬಡತನದ ಪ್ರಮಾಣ ಶೇಕಡ 27.1ರಿಂದ ಕೇವಲ ಶೇಕಡ 2.6ಕ್ಕೆ ತಗ್ಗಿದೆ. ಈ ಗಮನಾರ್ಹ ಪ್ರಗತಿಯು ಕೃಷಿ ಮತ್ತು ಅದಕ್ಕೆ ಸಂಬಂಧಿಸಿದ ಚಟುವಟಿಕೆಗಳು, ಕೃಷಿ ಸಂಶೋಧನೆ, ಭೂ ಸಂಪನ್ಮೂಲಗಳು ಹಾಗೂ ಗ್ರಾಮೀಣ ಅಭಿವೃದ್ಧಿ ಸೇರಿದಂತೆ ವಿವಿಧ ವಲಯಗಳು ಮತ್ತು ಸರ್ಕಾರಿ ಉಪಕ್ರಮಗಳ ಕೊಡುಗೆಯನ್ನು ಪ್ರತಿಬಿಂಬಿಸುತ್ತಿದೆ. ಈ ಸಾಧನೆಯಲ್ಲಿ ಈ ಕ್ಷೇತ್ರಗಳು ವಹಿಸಿದ ಪಾತ್ರವನ್ನು ಮೌಲ್ಯಮಾಪನ ಮಾಡಲು, ಮುಂದಿನ ಹಾದಿಗಾಗಿ ಕಾರ್ಯತಂತ್ರ ವಿಷಯ ಚರ್ಚಿಸಲು, ನವದೆಹಲಿಯ ಡಾ. ಅಂಬೇಡ್ಕರ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿಂದು ಒಂದು ದಿನದ ವಿಶೇಷ ಕಾರ್ಯಾಗಾರ ಆಯೋಜಿಸಲಾಗಿತ್ತು. ಈ ಜಂಟಿ ಕಾರ್ಯಾಗಾರದ ಅಧ್ಯಕ್ಷತೆಯನ್ನು ಕೇಂದ್ರ ಕೃಷಿ ಮತ್ತು ಕೃಷಿಕರ ಕಲ್ಯಾಣ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ವಹಿಸಿದ್ದರು. ಕೇಂದ್ರ ಕೃಷಿ ಮತ್ತು ಕೃಷಿಕರ ಕಲ್ಯಾಣ ರಾಜ್ಯ ಖಾತೆ ಸಚಿವರಾದ ಶ್ರೀ ಭಾಗೀರಥ್ ಚೌಧರಿ ಹಾಗೂ ಕೇಂದ್ರ ಗ್ರಾಮೀಣಾಭಿವೃದ್ಧಿ ರಾಜ್ಯ ಖಾತೆ ಸಚಿವರಾದ ಶ್ರೀ ಕಮಲೇಶ್ ಪಾಸ್ವಾನ್ ಅವರು ಸಹ ಭಾಗವಹಿಸಿದ್ದರು. ದೇಶದ ಈ ಪ್ರಗತಿಯನ್ನು ಬಣ್ಣಿಸಿದ ಶ್ರೀ ಚೌಹಾಣ್, ಇದನ್ನು "ಅಸಾಧಾರಣ, ಊಹಿಸಲಾಗದ ಮತ್ತು ಅಭೂತಪೂರ್ವ ಪವಾಡ" ಎಂದು ಬಣ್ಣಿಸಿದರು.

ಈ ಕಾರ್ಯಾಗಾರವು 4 ಇಲಾಖೆಗಳ ಕಾರ್ಯಗಳು ಮತ್ತು ಉಪಕ್ರಮಗಳ ಪರಿಶೀಲನೆಗೆ ಒಳಪಡಿಸಲಾಗಿದ್ದ ಹಿರಿಯ ಅಧಿಕಾರಿಗಳನ್ನು ಒಂದೆಡೆ ಸೇರಿಸಿತು. ಇದರಲ್ಲಿ ಕೃಷಿ ಮತ್ತು ಕೃಷಿಕರ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಶ್ರೀ ಅತೀಶ್ ಚಂದ್ರ, ಗ್ರಾಮೀಣಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಶ್ರೀ ರೋಹಿತ್ ಕನ್ಸಾಲ್, ಭೂ ಸಂಪನ್ಮೂಲ ಇಲಾಖೆಯ ಕಾರ್ಯದರ್ಶಿ ಶ್ರೀ ದಿಲೀಪ್ ಕುಮಾರ್ ಹಾಗೂ ಕೃಷಿ ಸಂಶೋಧನೆ ಮತ್ತು ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಮತ್ತು ಭಾರತೀಯ ಕೃಷಿ ಸಂಶೋಧನಾ ಮಂಡಳಿಯ(ಐಸಿಎಆರ್) ಮಹಾನಿರ್ದೇಶಕ ಡಾ. ಎಂ. ಎಲ್. ಜಾಟ್ ಅವರು ಭಾಗವಹಿಸಿದ್ದರು. ಇವರೊಂದಿಗೆ, ಈ 4 ಇಲಾಖೆಗಳ ಹಿರಿಯ ಅಧಿಕಾರಿಗಳು, ವಿಜ್ಞಾನಿಗಳು, ವಿಭಾಗ ಅಧಿಕಾರಿಗಳು, ಸಹಾಯಕ ವಿಭಾಗ ಅಧಿಕಾರಿಗಳು ಹಾಗೂ ಇತರೆ ಅನೇಕ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ವಿವಿಧ ಹಂತಗಳ ಸಿಬ್ಬಂದಿಯ ಈ ಭಾಗವಹಿಸುವಿಕೆಯು, ಕಾರ್ಯಾಗಾರವು ಕೇವಲ ಇಲಾಖೆಗಳ ಸಾಧನೆಗಳನ್ನು ಪರಿಶೀಲಿಸುವುದು ಮಾತ್ರವಲ್ಲದೆ, ನೀತಿಗಳು ಮತ್ತು ಯೋಜನೆಗಳನ್ನು ಯೋಜನಾ ಹಂತದಿಂದ ಅನುಷ್ಠಾನದ ಹಂತಕ್ಕೆ ಕೊಂಡೊಯ್ಯುವಲ್ಲಿ ಶ್ರಮಿಸಿದ ಎಲ್ಲರ ಕೊಡುಗೆಯನ್ನು ಗುರುತಿಸುವ ಮೇಲೂ ಗಮನ ಹರಿಸಿತು ಎಂಬುದನ್ನು ಪ್ರತಿಬಿಂಬಿಸಿತು.

ಅಮೆರಿಕದ ಒಟ್ಟು ಜನಸಂಖ್ಯೆಗಿಂತಲೂ ಹೆಚ್ಚಿನ ಸಂಖ್ಯೆಯ ಅಂದರೆ 50 ಕೋಟಿ(500 ದಶಲಕ್ಷ) ಜನರನ್ನು ಬಡತನದಿಂದ ಮೇಲೆತ್ತಿದ್ದು ಒಂದು ಪವಾಡವೇ ಸರಿ

ಕೃಷಿ ಮತ್ತು ಕೃಷಿಕರ ಕಲ್ಯಾಣ ಇಲಾಖೆ, ಐಸಿಎಆರ್, ಗ್ರಾಮೀಣಾಭಿವೃದ್ಧಿ ಇಲಾಖೆ ಹಾಗೂ ಭೂ ಸಂಪನ್ಮೂಲ ಇಲಾಖೆಯ ಅಧಿಕಾರಿಗಳು ಮತ್ತು ನೌಕರರನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವ ಮತ್ತು ಮಾರ್ಗದರ್ಶನದಲ್ಲಿ ಭಾರತ ಸಾಧಿಸಿರುವ ಈ ಮೈಲಿಗಲ್ಲು ನಿಜಕ್ಕೂ ಅಸಾಧಾರಣ, ಗಮನಾರ್ಹ ಮತ್ತು ಊಹಿಸಲು ಅಸಾಧ್ಯವಾದುದು ಎಂದು ಬಣ್ಣಿಸಿದರು. ಜಗತ್ತಿನ ಬೇರೆ ಯಾವುದೇ ದೇಶವೂ ಇಷ್ಟು ವೇಗವಾಗಿ ಬಡತನ ಕಡಿಮೆ ಮಾಡಿಲ್ಲ ಎಂಬುದನ್ನು ಸ್ವತಃ ವಿಶ್ವ ಬ್ಯಾಂಕ್ ಕೂಡ ಒಪ್ಪಿಕೊಂಡಿದೆ. ಸುಮಾರು 50 ಕೋಟಿ ಜನರು ಬಡತನ ರೇಖೆಯಿಂದ ಹೊರ ಬಂದಿರುವುದು ಒಂದು ಐತಿಹಾಸಿಕ ಬೆಳವಣಿಗೆಯಾಗಿದೆ. ವಿಶೇಷವಾಗಿ, ಇದರಲ್ಲಿ ಒಳಗೊಂಡಿರುವ ಜನರ ಬೃಹತ್ ಸಂಖ್ಯೆಯನ್ನು ಪರಿಗಣಿಸಿದರೆ ಇದು ಅತ್ಯಂತ ಮಹತ್ವದ್ದಾಗಿದೆ. ಈ ಪ್ರಗತಿಯು ಪ್ರಧಾನಿ ಅವರ ನಾಯಕತ್ವ, ದೂರದೃಷ್ಟಿ ಮತ್ತು ಕಠಿಣ ಪರಿಶ್ರಮದ ಫಲವಾಗಿದೆ. ಈ ಪ್ರಕ್ರಿಯೆಯಲ್ಲಿ ಸಂಬಂಧಿತ ಸಚಿವಾಲಯಗಳ ಪ್ರತಿಯೊಬ್ಬ ಅಧಿಕಾರಿ ಮತ್ತು ನೌಕರರು ನೀಡಿರುವ ಕೊಡುಗೆ ಗುರುತಿಸುವುದು ಕೂಡ ಮುಖ್ಯ ಎಂದು ಪ್ರತಿಪಾದಿಸಿದರು. ಈ ಸಾಧನೆಯು ಯಾವುದೇ ಒಬ್ಬ ವ್ಯಕ್ತಿ ಅಥವಾ ಇಲಾಖೆಯ ಕೆಲಸವಲ್ಲ. ಬದಲಾಗಿ, ಅಭಿವೃದ್ಧಿಯನ್ನು ತಲುಪಿಸಲು ಮತ್ತು ಜನರ ಜೀವನ ಮಟ್ಟ ಸುಧಾರಿಸಲು ಸರ್ಕಾರಿ ವ್ಯವಸ್ಥೆಯಲ್ಲಿ ಕೆಲಸ ಮಾಡುವ ಎಲ್ಲರ ಸಾಮೂಹಿಕ ಪ್ರಯತ್ನದ ಪ್ರತಿಬಿಂಬವಾಗಿದೆ ಎಂದು ಅವರು ಹೇಳಿದರು.

“ನೀವು ಕೇವಲ ಯೋಜನೆಗಳನ್ನು ರೂಪಿಸದೆ, ರಾಷ್ಟ್ರವನ್ನೇ ನಿರ್ಮಿಸಿದ್ದೀರಿ”: ಈ ಸಾಧನೆಯನ್ನು ಸಂಭ್ರಮಿಸಿ

ಅಧಿಕಾರಿಗಳು ಮತ್ತು ನೌಕರರನ್ನು ಹುರಿದುಂಬಿಸಿ ಮಾತನಾಡಿದ ಕೇಂದ್ರ ಸಚಿವರಾದ ಶ್ರೀ ಚೌಹಾಣ್, ಈ ಯಶಸ್ಸು ತಾನಾಗಿಯೇ ಬಂದಿದ್ದಲ್ಲ. ಸರ್ಕಾರಿ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಕೊಡುಗೆ ನೀಡಿದ ಪ್ರತಿಯೊಬ್ಬರ ಕಠಿಣ ಪರಿಶ್ರಮ, ಸಮರ್ಪಣಾ ಭಾವ ಮತ್ತು ನಿರಂತರ ಪ್ರಯತ್ನಗಳು ಇದರ ಹಿಂದಿವೆ. ದೇಶವು ಇಂತಹ ಮಹತ್ವದ ಸಾಧನೆ ಮಾಡಿದಾಗ, ಅದರಿಂದ ಉಂಟಾಗುವ ಸಂತೋಷ ಮತ್ತು ಹೆಮ್ಮೆ ಪ್ರತಿಯೊಬ್ಬರ ಮುಖದಲ್ಲೂ ಎದ್ದು ಕಾಣಬೇಕು. ಕಾರ್ಯಾಗಾರದಲ್ಲಿ ಭಾಗವಹಿಸಿದವರು ಸಂತೋಷ ಮತ್ತು ಸಂಭ್ರಮದ ಭಾವನೆಯೊಂದಿಗೆ ಪಾಲ್ಗೊಳ್ಳಬೇಕು. “ನೀವು ಕೇವಲ ಯೋಜನೆಗಳನ್ನು ರೂಪಿಸದೆ, ರಾಷ್ಟ್ರವನ್ನೇ ನಿರ್ಮಿಸಿದ್ದೀರಿ” ಎಂದು ಪ್ರಧಾನ ಮಂತ್ರಿ ಅವರು ಒತ್ತಿ ಹೇಳಿದ್ದನ್ನು ಶ್ರೀ ಚೌಹಾಣ್ ನೆನಪಿಸಿಕೊಂಡರು. ಸಾಮಾನ್ಯವಾಗಿ ಇಂತಹ ಪರಿಶೀಲನಾ ಸಭೆಗಳಲ್ಲಿ ಹಿರಿಯ ಅಧಿಕಾರಿಗಳು ಮಾತ್ರ ಭಾಗವಹಿಸುತ್ತಾರೆ, ಆದರೆ ಈ ಕಾರ್ಯಾಗಾರವನ್ನು ವಿಭಿನ್ನವಾಗಿ ನಡೆಸಲು ತಾನು ಉದ್ದೇಶಪೂರ್ವಕವಾಗಿ ನಿರ್ಧರಿಸಿದ್ದೆ. ವಿಭಾಗ ಅಧಿಕಾರಿಗಳು ಮತ್ತು ಸಹಾಯಕ ವಿಭಾಗ ಅಧಿಕಾರಿಗಳಿಂದ ಹಿಡಿದು ಕಾರ್ಯದರ್ಶಿಗಳ ತನಕ ಎಲ್ಲ ಹಂತದ ಸಹೋದ್ಯೋಗಿಗಳು ಇಲ್ಲಿ ಉಪಸ್ಥಿತರಿರಬೇಕು ಎಂದು ಬಯಸಿದ್ದೆ. ಏಕೆಂದರೆ ಇವರೇ ಆಡಳಿತ ವ್ಯವಸ್ಥೆಯ ಅಡಿಪಾಯವಾಗಿದ್ದು, ಕಡತಗಳ ಮೇಲಿನ ಕೆಲಸವು ಈ ಹಂತಗಳಿಂದಲೇ ಆರಂಭವಾಗುತ್ತದೆ. ನೀವು ದೇಶದ ಅಭಿವೃದ್ಧಿ ಪಯಣಕ್ಕೆ ಕೇವಲ ಸಾಕ್ಷಿಗಳಲ್ಲ, ಬದಲಾಗಿ ಅದರ ನಿಜವಾದ ಚಾಲನಾಶಕ್ತಿ ಮತ್ತು ಪಾಲುದಾರರು ಆಗಿದ್ದೀರಿ. ಅಧಿಕಾರಿಗಳು ಮತ್ತು ನೌಕರರ ಜತೆ ನೇರ ಸಂವಾದ ನಡೆಸುವ ಉದ್ದೇಶದಿಂದ, ಶ್ರೀ ಚೌಹಾಣ್ ಅವರು ವೇದಿಕೆಯಿಂದ ಕೆಳಗಿಳಿದು ಅವರ ನಡುವೆ ಕುಳಿತುಕೊಂಡರು. ಅಲ್ಲಿ ಅವರು ನೌಕರರೊಂದಿಗೆ ಮಾತನಾಡುತ್ತಾ, ಅವರ ಕಾರ್ಯಕ್ಷೇತ್ರದ ಅನುಭವಗಳನ್ನು ತಿಳಿದುಕೊಂಡರಲ್ಲದೆ, ಅವರ ಸಲಹೆಗಳನ್ನು ಆಲಿಸಿದರು.

ಇನ್ನೂ ಬಡತನದ ಬೇಗೆಯಲ್ಲಿ ಇರುವವರನ್ನು ಅದರಿಂದ ಹೊರತರುವ ಸಂಕಲ್ಪ ಮಾಡಿ

ಜನರು ಕೇವಲ ತಮ್ಮ ಜೀವನೋಪಾಯಕ್ಕಾಗಿ ಮಾತ್ರವಲ್ಲದೆ, ತಮ್ಮ ಜೀವನಕ್ಕೆ ಒಂದು ಉದ್ದೇಶ ಕಂಡುಕೊಳ್ಳಲು ಮತ್ತು ದೇಶದ ಜನರಿಗೆ ಸೇವೆ ಸಲ್ಲಿಸಲು ಕೆಲಸ ಮಾಡುತ್ತಾರೆ ಎಂದು ಕೇಂದ್ರ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಹೇಳಿದರು. ಸರ್ಕಾರಿ ಯೋಜನೆಯೊಂದರ ಪಯಣದ ಪ್ರತಿಯೊಂದು ಹಂತದಲ್ಲೂ ನೌಕರರ ಕೊಡುಗೆ ಇರುತ್ತದೆ. ಒಂದು ಯೋಜನೆಯನ್ನು ತಳಮಟ್ಟದಿಂದ ರೂಪಿಸುವುದರಿಂದ ಹಿಡಿದು, ಸಚಿವ ಸಂಪುಟದಲ್ಲಿ ಪರಿಶೀಲಿಸಿ ಅನುಮೋದನೆ ಪಡೆಯುವ ತನಕ ಮತ್ತು ಅಂತಿಮವಾಗಿ ಅದನ್ನು ಜಾರಿಗೊಳಿಸುವ ತನಕ, ವಿವಿಧ ಹಂತಗಳಲ್ಲಿ ಕೆಲಸ ಮಾಡುವ ಜನರ ಶ್ರಮವು ಅದರ ಯಶಸ್ಸಿಗೆ ಅತ್ಯಗತ್ಯವಾಗಿರುತ್ತದೆ. ಪ್ರಧಾನ ಮಂತ್ರಿ ಅವರು ಮಾಡಿರುವ 2 ಪ್ರಮುಖ ಬದ್ಧತೆಗಳು ಈಗ ದೇಶದ ಮುಂದಿವೆ. ಮೊದಲನೆಯದಾಗಿ, ಬಡತನ ರೇಖೆಯಿಂದ ಮೇಲೆ ಬಂದಿರುವವರು ಯಾವುದೇ ಕಾರಣಕ್ಕೂ ಮತ್ತೆ ಅದರ ಕೆಳಗೆ ಹೋಗದಂತೆ ಖಚಿತಪಡಿಸಿಕೊಳ್ಳುವುದು. ಎರಡನೆಯದಾಗಿ, ಇನ್ನೂ ಬಡತನ ಅನುಭವಿಸುತ್ತಿರುವ ಉಳಿದ 2.6ರಿಂದ 2.7 ಪ್ರತಿಶತದಷ್ಟು ಜನರನ್ನು ತ್ವರಿತವಾಗಿ ಬಡತನದಿಂದ ಹೊರತರುವುದು ಮತ್ತು ಅವರ ಜೀವನಮಟ್ಟ ಸುಧಾರಿಸುವುದಾಗಿದೆ. ದೇಶದ ಅಭಿವೃದ್ಧಿಯ ಪ್ರಯೋಜನಗಳು ಇನ್ನೂ ಸಮರ್ಪಕವಾಗಿ ತಲುಪದ ಜನರನ್ನು ತಲುಪಲು ಸರ್ಕಾರ ಕೆಲಸ ಮಾಡುತ್ತಿರುವಾಗ, ಇಲ್ಲಿಯವರೆಗೆ ಸಾಧಿಸಲಾದ ಪ್ರಗತಿಯನ್ನು ಕಾಪಾಡಿಕೊಳ್ಳುವುದು ಮುಖ್ಯ. ಆದ್ದರಿಂದ, ಸಾಧಿಸಿದ ಪ್ರಗತಿಯನ್ನು ಉಳಿಸಿಕೊಳ್ಳುವ ಜತೆಗೆ, ಉಳಿದ ಜನರೂ ಕೂಡ ಉತ್ತಮ ಜೀವನ ನಡೆಸುವಂತೆ ಮಾಡುವುದು ಈಗ ನಮ್ಮ ಮುಂದಿರುವ ಜವಾಬ್ದಾರಿಯಾಗಿದೆ ಎಂದರು.

ಕೃಷಿ ವಲಯದ ಬೆಳವಣಿಗೆ ದರ ಐತಿಹಾಸಿಕ 4.45% ತಲುಪಿದೆ; ಐಸಿಎಆರ್ ಸಂಶೋಧನೆಯು ಹೂಡಿಕೆ ಮಾಡಿದ ಮೊತ್ತಕ್ಕಿಂತ 13.85 ಪಟ್ಟು ಹೆಚ್ಚು ಪ್ರತಿಫಲ ನೀಡಿದೆ

ಕೃಷಿ ವಲಯದ ಸಾಧನೆಗಳನ್ನು ಪ್ರಸ್ತಾಪಿಸಿದ ಸಚಿವರಾದ ಶ್ರೀ ಚೌಹಾಣ್, ಕಳೆದ 12 ವರ್ಷಗಳಲ್ಲಿ ಗಮನಾರ್ಹ ಪ್ರಗತಿ ಸಾಧಿಸಲಾಗಿದೆ, ದೇಶವು ಹೆಮ್ಮೆಪಡುವಂತಹ ಕೆಲಸಗಳು ಕೃಷಿ ಕ್ಷೇತ್ರದಲ್ಲಿ ನಡೆದಿವೆ. ಹಸಿರು ಕ್ರಾಂತಿಯ ಕಾಲದಲ್ಲೂ ಕೃಷಿ ಬೆಳವಣಿಗೆ ದರ ಸಾಮಾನ್ಯವಾಗಿ ಶೇಕಡ 3ರಿಂದ 3.5ರ ವ್ಯಾಪ್ತಿಯಲ್ಲಿತ್ತು. ಭಾರತದಲ್ಲಿ ಒಂದೇ ದಶಕದಲ್ಲೇ ಕೃಷಿ ಬೆಳವಣಿಗೆ ದರ ಈಗ ಐತಿಹಾಸಿಕ ಮಟ್ಟ 4.45% ತಲುಪಿದ್ದು, ಇದು ಹಿಂದಿನ ಆ ಅವಧಿಯಲ್ಲಿ ದಾಖಲಾದ ಮಟ್ಟವನ್ನು ಮೀರಿಸಿದೆ. ಈ ವಲಯದ ಪ್ರಗತಿಗೆ ಕೊಡುಗೆ ನೀಡಿದ ಪ್ರಮುಖ ಉಪಕ್ರಮಗಳಲ್ಲಿ, ಕೃಷಿ ಮತ್ತು ಕೃಷಿಕರ ಕಲ್ಯಾಣ ಇಲಾಖೆಯ ಅಡಿ 'ಪಿಎಂ-ಕಿಸಾನ್ ಸಮ್ಮಾನ್ ನಿಧಿ' ಮೂಲಕ ಒದಗಿಸಲಾದ 4.66 ಲಕ್ಷ ಕೋಟಿ ರೂ.ಗಿಂತ ಹೆಚ್ಚಿನ ನೇರ ಆರ್ಥಿಕ ನೆರವು ನೀಡಲಾಗಿದೆ. ಈ ವಲಯವು 376.56 ದಶಲಕ್ಷ ಟನ್ ಆಹಾರ ಧಾನ್ಯಗಳ ಉತ್ಪಾದನೆ ಮತ್ತು 386.91 ದಶಲಕ್ಷ ಟನ್ ತೋಟಗಾರಿಕಾ ಉತ್ಪನ್ನಗಳ ಉತ್ಪಾದನೆಯನ್ನು ದಾಖಲಿಸಿದೆ. ಕೈಗೆಟುಕುವ ದರದಲ್ಲಿ ಕೃಷಿ ಸಾಲ, ಬೆಳೆ ವಿಮೆ, ನೈಸರ್ಗಿಕ ಕೃಷಿ, 10,000 ರೈತ ಉತ್ಪಾದಕ ಸಂಸ್ಥೆಗಳ ಸ್ಥಾಪನೆ ಮತ್ತು 'ಅಗ್ರಿ-ಸ್ಟಾಕ್'ನಂತಹ ಡಿಜಿಟಲ್ ಉಪಕ್ರಮಗಳು ರೈತರಿಗೆ ಹೆಚ್ಚಿನ ಬೆಂಬಲ ನೀಡಿವೆ, ಅವರ ಆದಾಯ  ಹೆಚ್ಚಿಸಲು ಸಹಕಾರಿಯಾಗಿವೆ. ಒಟ್ಟಾರೆಯಾಗಿ, ಈ ಕ್ರಮಗಳು ಕೃಷಿ ಉತ್ಪಾದನೆಯನ್ನು ಬಲಪಡಿಸುವಲ್ಲಿ ಮತ್ತು ರೈತರಿಗೆ ಲಭ್ಯವಿರುವ ಬೆಂಬಲ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ಆಗಿರುವ ಪ್ರಗತಿಯನ್ನು ಪ್ರತಿಬಿಂಬಿಸುತ್ತವೆ ಎಂದರು.

ಕೃಷಿ ಸಂಶೋಧನೆ ಮತ್ತು ಶಿಕ್ಷಣ ಇಲಾಖೆ (ಡಿಎಆರ್‌ಇ/ಐಸಿಎಆರ್) ನೀಡಿದ ಪ್ರಸ್ತುತಿಯು, ವೈಜ್ಞಾನಿಕ ಸಂಶೋಧನೆ ಮತ್ತು ನಾವೀನ್ಯತೆಯಿಂದ ಉಂಟಾಗುವ ಆರ್ಥಿಕ ಲಾಭಗಳನ್ನು ಎತ್ತಿ ತೋರಿಸಿತು. ಕೃಷಿ ಸಂಶೋಧನೆ ಮತ್ತು ಶಿಕ್ಷಣದಲ್ಲಿ ಹೂಡಿಕೆ ಮಾಡಿದ ಪ್ರತಿ ರೂಪಾಯಿಯು 13.85 ರೂ.ನಷ್ಟು ಆರ್ಥಿಕ ಪ್ರಯೋಜನ ನೀಡಿದ್ದರೆ, ಪಶುಸಂಗೋಪನಾ ಸಂಶೋಧನೆಯಲ್ಲಿನ ಹೂಡಿಕೆಯು 20.81 ರೂ.ನಷ್ಟು ಪ್ರತಿಫಲ ನೀಡಿದೆ ಎಂದು ಅದು ತಿಳಿಸಿದೆ. 2014ರಿಂದ ಈಚೆಗೆ ಒಟ್ಟು 3,436 ಹೊಸ ಬೆಳೆ ತಳಿಗಳನ್ನು ಬಿಡುಗಡೆ ಮಾಡಲಾಗಿದ್ದು, ಅವುಗಳಲ್ಲಿ ಶೇಕಡ 93ರಷ್ಟು ತಳಿಗಳು ಹವಾಮಾನ ಬದಲಾವಣೆ ತಡೆದುಕೊಳ್ಳುವ ಸಾಮರ್ಥ್ಯ ಹೊಂದಿವೆ. ಜೈವಿಕವಾಗಿ ಪುಷ್ಟೀಕರಿಸಿದ ಬೆಳೆ ತಳಿಗಳ ಕೊಡುಗೆ, 19.78 ದಶಲಕ್ಷ ಟನ್ ಮೀನು ಉತ್ಪಾದನೆ ಮತ್ತು 500ಕ್ಕೂ ಹೆಚ್ಚು ಕೃಷಿ ಯಂತ್ರೋಪಕರಣಗಳ ಲಭ್ಯತೆ ಬಗ್ಗೆಯೂ ಈ ಪ್ರಸ್ತುತಿಯಲ್ಲಿ ಉಲ್ಲೇಖಿಸಲಾಗಿದೆ. ಇದಲ್ಲದೆ, ಕೃಷಿ ವಿಜ್ಞಾನ ಕೇಂದ್ರಗಳ ಮೂಲಕ ಡಿಜಿಟಲ್ ಸಂಪರ್ಕ ವ್ಯವಸ್ಥೆಯು ಪ್ರತಿ ವರ್ಷ 5 ಕೋಟಿ ರೈತರನ್ನು ತಲುಪುತ್ತಿದೆ. ಸಂಶೋಧನಾ ಆಧಾರಿತ ಇಂತಹ ಬೆಳವಣಿಗೆಗಳು, ತಾಂತ್ರಿಕ ಮಧ್ಯಸ್ಥಿಕೆಗಳು ಮತ್ತು ಜ್ಞಾನ ಹಂಚಿಕೆಯ ಪ್ರಯತ್ನಗಳು ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸಲು ಹಾಗೂ ಕೃಷಿ ವಿಜ್ಞಾನದ ಪ್ರಯೋಜನಗಳನ್ನು ದೇಶಾದ್ಯಂತ ಇರುವ ರೈತರಿಗೆ ತಲುಪಿಸಲು ಸಹಾಯಕವಾಗಿವೆ ಎಂದು ಅದು ತಿಳಿಸಿದೆ.

ಗ್ರಾಮೀಣ ಅಭಿವೃದ್ಧಿ ಮತ್ತು ಭೂ ಸಂಪನ್ಮೂಲ ಇಲಾಖೆಯ ಯೋಜನೆಗಳು ಹಳ್ಳಿಗಳ ಹಾಗೂ ಗ್ರಾಮೀಣ ಬಡವರ ಜೀವನ ಬದಲಾಯಿಸಿವೆ

ಗ್ರಾಮೀಣಾಭಿವೃದ್ಧಿ ಇಲಾಖೆ ಮತ್ತು ಭೂ ಸಂಪನ್ಮೂಲ ಇಲಾಖೆಗಳು ಜಾರಿಗೊಳಿಸಿದ ಯೋಜನೆಗಳ ಪ್ರಭಾವದ ಬಗ್ಗೆಯೂ ಈ ಕಾರ್ಯಾಗಾರದಲ್ಲಿ ಕೂಲಂಕಷವಾಗಿ ಪರಿಶೀಲಿಸಲಾಯಿತು. ದೇಶದಲ್ಲಿ ಬಡತನ ನಿರ್ಮೂಲನೆಯತ್ತ ಸಾಗುವ ಪ್ರಕ್ರಿಯೆಯಲ್ಲಿ ಈ ಇಲಾಖೆಗಳು ಅತ್ಯಂತ ಮಹತ್ವದ ಪಾತ್ರ ವಹಿಸಿವೆ ಎಂದು ಸಚಿವರಾದ ಶ್ರೀ ಚೌಹಾಣ್ ಹೇಳಿದರು. ವಿವಿಧ ಗ್ರಾಮೀಣಾಭಿವೃದ್ಧಿ ಉಪಕ್ರಮಗಳ ವ್ಯಾಪ್ತಿಯನ್ನು ಪ್ರಸ್ತುತಿಗಳ ಮೂಲಕ ಪ್ರದರ್ಶಿಸಲಾಯಿತು. 'ದೀನದಯಾಳ್ ಅಂತ್ಯೋದಯ ಯೋಜನೆ - ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ'(ಡೇ-ಎನ್‌ಆರ್‌ಎಲ್‌ಎಂ)ದ ಅಡಿ, 10 ಕೋಟಿಗೂ ಹೆಚ್ಚು ಮಹಿಳೆಯರನ್ನು ಸ್ವಸಹಾಯ ಗುಂಪುಗಳೊಂದಿಗೆ ಜೋಡಿಸಲಾಗಿದೆ. ಇಲ್ಲಿಯವರೆಗೆ 3.76 ಕೋಟಿ ಮಹಿಳೆಯರು 'ಲಖ್ಪತಿ ದೀದಿ'ಗಳಾಗಿದ್ದಾರೆ. 'ಪ್ರಧಾನ ಮಂತ್ರಿ ಆವಾಸ್ ಯೋಜನೆ - ಗ್ರಾಮೀಣ'(ಪಿಎಂಎವೈ-ಜಿ) ಅಡಿ 3.99 ಕೋಟಿ ಪಕ್ಕಾ ಮನೆಗಳ ನಿರ್ಮಾಣ ಸಾಧ್ಯವಾಗಿದೆ. ಹಾಗೆಯೇ 'ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ'(ಪಿಎಂಜಿಎಸ್‌ವೈ)ಯ ಮೂಲಕ 7.99 ಲಕ್ಷ ಕಿಲೋ ಮೀಟರ್ ಉದ್ದದ, ಎಲ್ಲಾ ಋತುಮಾನಗಳಿಗೂ ಸೂಕ್ತವಾದ ಗ್ರಾಮೀಣ ರಸ್ತೆ ಜಾಲ ನಿರ್ಮಿಸಲಾಗಿದೆ. 'ವಿಕಸಿತ ಭಾರತ - ಗ್ರಾಮೀಣ' ಉಪಕ್ರಮದ ಅಡಿ, ಗ್ರಾಮೀಣ ಕುಟುಂಬಗಳಿಗೆ ಈಗ 125 ದಿನಗಳ ಉದ್ಯೋಗದ ಖಾತ್ರಿ ನೀಡಲಾಗಿದೆ. ಸಾಮಾಜಿಕ ನೆರವು ಕಾರ್ಯಕ್ರಮಗಳು ಮತ್ತು ನೇರ ಲಾಭ ವರ್ಗಾವಣೆ(ಡಿಬಿಟಿT) ವ್ಯವಸ್ಥೆಯಲ್ಲಿ ಶೇಕಡ 99.9ರಷ್ಟು ಪಾರದರ್ಶಕತೆಯು, ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನೂ ಸಬಲೀಕರಣಗೊಳಿಸಲು ನೆರವಾಗಿವೆ. ಈ ಉಪಕ್ರಮಗಳು ಜೀವನೋಪಾಯಕ್ಕೆ ಬೆಂಬಲ ನೀಡುವುದು, ವಸತಿ ಒದಗಿಸುವುದು, ಸಂಪರ್ಕ ವ್ಯವಸ್ಥೆ ಸುಧಾರಿಸುವುದು ಮತ್ತು ಫಲಾನುಭವಿಗಳಿಗೆ ನೆರವು ತಲುಪಿಸುವ ಪ್ರಕ್ರಿಯೆಯನ್ನು ಬಲಪಡಿಸುವ ಮೂಲಕ ಗ್ರಾಮೀಣ ಕುಟುಂಬಗಳ ಜೀವನ ಬದಲಾಯಿಸಲು ಕೊಡುಗೆ ನೀಡಿವೆ.

ಭೂ ಸಂಪನ್ಮೂಲ ಇಲಾಖೆಯ ಅಡಿ, 'ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ'ಯ ಜಲಾನಯನ ಅಭಿವೃದ್ಧಿ ಘಟಕವು(ಡಬ್ಲ್ಯುಡಿಸಿ-ಪಿಎಂಕೆಎಸ್‌ವೈ) 3.40 ಕೋಟಿ ಹೆಕ್ಟೇರ್ ಪ್ರದೇಶದಲ್ಲಿ ಜಲ ಸಂರಕ್ಷಣೆ ಮತ್ತು ಭೂ ಸುಧಾರಣಾ ಕಾರ್ಯಗಳಿಗೆ ಬೆಂಬಲ ನೀಡಿದೆ. ಈ ಕ್ರಮಗಳಿಂದ 61.15 ಲಕ್ಷ ರೈತರು ನೇರವಾಗಿ ಪ್ರಯೋಜನ ಪಡೆದಿದ್ದಾರೆ. ಈ ಕಾರ್ಯಗಳು ನೀರಾವರಿ ಪ್ರದೇಶಗಳು ಮತ್ತು ಹಾಲಿನ ಉತ್ಪಾದನೆಯ ಹೆಚ್ಚಳಕ್ಕೆ ಕೊಡುಗೆ ನೀಡಿವೆ. ಜತೆಗೆ, ರೈತರ ಸರಾಸರಿ ವಾರ್ಷಿಕ ಆದಾಯದಲ್ಲಿ ಶೇಕಡ 70ರವರೆಗೆ ಬೆಳವಣಿಗೆ ದಾಖಲಾಗಿದೆ. ಕಾರ್ಯಾಗಾರದಲ್ಲಿ ಮಂಡಿಸಲಾದ ಅಂಕಿಅಂಶಗಳು, ಭೂ ಮತ್ತು ಜಲ ಸಂಪನ್ಮೂಲಗಳನ್ನು ಸುಧಾರಿಸುವಲ್ಲಿ, ಕೃಷಿ ಚಟುವಟಿಕೆಗಳನ್ನು ಬಲಪಡಿಸುವಲ್ಲಿ ಹಾಗೂ ಕೃಷಿ ಸಮುದಾಯಗಳ ಜೀವನೋಪಾಯಕ್ಕೆ ಬೆಂಬಲ ನೀಡುವಲ್ಲಿ ಜಲಾನಯನ ಅಭಿವೃದ್ಧಿಯ ಕೊಡುಗೆಯನ್ನು ಎತ್ತಿ ತೋರಿಸಿವೆ. ಈ ಯೋಜನೆಗಳಿಂದ ನೇರವಾಗಿ ಪ್ರಯೋಜನ ಪಡೆದ ರೈತರ ಸಂಖ್ಯೆ ಮತ್ತು ಅವರ ವಾರ್ಷಿಕ ಆದಾಯದಲ್ಲಿ ಕಂಡುಬಂದ ಸುಧಾರಣೆಯು ಈ ಕಾರ್ಯಕ್ರಮದ ಪ್ರಭಾವವನ್ನು ಪ್ರತಿಬಿಂಬಿಸುತ್ತಿವೆ.

ಬಜೆಟ್‌ಗಳು ಮತ್ತು ಯೋಜನೆಗಳನ್ನು ಸುಧಾರಿಸಲು ಸಲಹೆಗಳ ಕೋರಿಕೆ; ಸಾಧನೆಗಳನ್ನು ಸಾರ್ವಜನಿಕರಿಗೆ ತಲುಪಿಸಲು ಕರೆ

ಕಾರ್ಯಾಗಾರದ ಸಮಾರೋಪ ಅಧಿವೇಶನದಲ್ಲಿ ಕೇಂದ್ರ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಅಧಿಕಾರಿಗಳು ಮತ್ತು ನೌಕರರಿಗೆ ತಮ್ಮ ಆಲೋಚನೆಗಳು ಹಾಗೂ ಸಲಹೆಗಳನ್ನು ಹಂಚಿಕೊಳ್ಳುವಂತೆ ಮುಕ್ತಾಹ್ವಾನ ನೀಡಿದರು. ಇಲ್ಲಿಯವರೆಗೆ ಸಾಧನೆಗಳನ್ನು ಮಾಡಿದ್ದರೂ, ಇನ್ನೂ ಹೆಚ್ಚಿನ ಸುಧಾರಣೆಗೆ ಅವಕಾಶವಿದೆ. ಪಿಎಂ-ಕಿಸಾನ್ ಮತ್ತು ಇ-ನ್ಯಾಮ್ ನಂತಹ ಯೋಜನೆಗಳ ಕುರಿತು ಈಗಾಗಲೇ ಹಲವಾರು ಉಪಯುಕ್ತ ಸಲಹೆಗಳು ಬಂದಿವೆ. ರೈತರ ಆದಾಯ ಹೆಚ್ಚಿಸಲು ಸಹಾಯ ಮಾಡುವಂತಹ ಹೊಸ ಉಪಕ್ರಮಗಳನ್ನು ಪರಿಚಯಿಸುವ ಬಗ್ಗೆ, ಅಸ್ತಿತ್ವದಲ್ಲಿರುವ ಯೋಜನೆಗಳಲ್ಲಿ ಬದಲಾವಣೆ ತರುವ ಬಗ್ಗೆ ಅಥವಾ ಬಜೆಟ್‌ಗೆ ಸಂಬಂಧಿಸಿದಂತೆ ಯಾವುದೇ ಆಲೋಚನೆಗಳಿದ್ದರೆ, ಹಿಂಜರಿಕೆಯಿಲ್ಲದೆ ತಮಗೆ ಬರೆದು ತಿಳಿಸುವಂತೆ ಅವರು ಎಲ್ಲರನ್ನೂ ಪ್ರೋತ್ಸಾಹಿಸಿದರು. ಭವಿಷ್ಯದಲ್ಲಿ ಕೆಳಹಂತದಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರೊಂದಿಗೆ ಇಲಾಖಾವಾರು ಅನೌಪಚಾರಿಕ ಸಭೆಗಳನ್ನು ನಡೆಸುವುದಾಗಿ ಶ್ರೀ ಚೌಹಾಣ್ ತಿಳಿಸಿದರು. ಇಲಾಖೆಯ ಮುಖ್ಯಸ್ಥರಾಗಿ, ಹುದ್ದೆ ಅಥವಾ ಜವಾಬ್ದಾರಿಯ ಮಟ್ಟವನ್ನು ಲೆಕ್ಕಿಸದೆ, ಎಲ್ಲರಿಗೂ ತಾನು ಸುಲಭವಾಗಿ ಲಭ್ಯವಿರುವುದಾಗಿ ಮತ್ತು ಯಾರೇ ಆದರೂ ತಮ್ಮನ್ನು ಸಂಪರ್ಕಿಸಬಹುದು ಎಂದು ಅವರು ಸಹೋದ್ಯೋಗಿಗಳಿಗೆ ಭರವಸೆ ನೀಡಿದರು. ಸರ್ಕಾರಿ ಕಾರ್ಯಕ್ರಮಗಳನ್ನು ಸುಧಾರಿಸುವ ಮತ್ತು ಅವುಗಳನ್ನು ಹೆಚ್ಚು ಪರಿಣಾಮಕಾರಿಯಾಗಿಸುವ ಪ್ರಕ್ರಿಯೆಯಲ್ಲಿ, ತಮ್ಮ ಪ್ರಾಯೋಗಿಕ ಅನುಭವ ಮತ್ತು ಆಲೋಚನೆಗಳನ್ನು ನೀಡುವಂತೆ ಅವರು ಎಲ್ಲರನ್ನೂ ಆಹ್ವಾನಿಸಿದರು.

ವಿವಿಧ ಇಲಾಖೆಗಳ ಸಾಧನೆಗಳು ಮತ್ತು ಸಾರ್ವಜನಿಕ ಕಲ್ಯಾಣ ಉಪಕ್ರಮಗಳು ಕೇವಲ ಕಡತಗಳು ಹಾಗೂ ಔಪಚಾರಿಕ ಸಂವಹನಗಳಿಗೆ ಮಾತ್ರ ಸೀಮಿತವಾಗದೆ, ಅವು ಪರಿಣಾಮಕಾರಿಯಾಗಿ ಜನರನ್ನು ಮತ್ತು ರೈತರನ್ನು ತಲುಪುವುದನ್ನು ಖಚಿತಪಡಿಸಿಕೊಳ್ಳುವ ಅಗತ್ಯಕ್ಕೆ ವಿಶೇಷ ಒತ್ತು ನೀಡಬೇಕು ಎಂದು ಶ್ರೀ ಚೌಹಾಣ್ ಹೇಳಿದರು. ಇಲಾಖೆಗಳು ಕೈಗೊಳ್ಳುತ್ತಿರುವ ಕಾರ್ಯಗಳು ಮತ್ತು ಅವು ಜನರ ಜೀವನದ ಮೇಲೆ ಬೀರುವ ಪ್ರಭಾವದ ಬಗ್ಗೆ ಮಾಹಿತಿ ನೀಡುವುದು ಒಂದು ಪ್ರಮುಖ ಜವಾಬ್ದಾರಿಯಾಗಿದೆ. ಇದಕ್ಕೆ ಉದಾಹರಣೆಯೊಂದನ್ನು ನೀಡಿದ ಅವರು, ಅಧಿಕಾರಿಗಳು ನೇರವಾಗಿ ಕ್ಷೇತ್ರಕ್ಕೆ ತೆರಳಿ ಜನರೊಂದಿಗೆ ಬೆರೆತಾಗ, ಅದರಿಂದ ಮೂಡುವ ಸಕಾರಾತ್ಮಕ ಸಂದೇಶವು ಇಡೀ ದೇಶಕ್ಕೆ ತಲುಪುತ್ತದೆ. ಅಭಿವೃದ್ಧಿ ಪಯಣ ಇನ್ನೂ ಮುಗಿದಿಲ್ಲ. 2029, 2030-31 ಮತ್ತು 'ವಿಕಸಿತ ಭಾರತ @2047' ಗುರಿಗಳನ್ನು ನಿಗದಿತ ಸಮಯದೊಳಗೆ ಸಾಧಿಸಬೇಕಿದೆ ಎಂದು ತಿಳಿಸಿದರು. ಮುಕ್ತ ವ್ಯಾಪಾರ ಒಪ್ಪಂದಗಳ ಕುರಿತು ಪ್ರಸ್ತಾಪಿಸಿದ ಅವರು, ಭಾರತೀಯ ಕೃಷಿ ಉತ್ಪನ್ನಗಳು ಜಗತ್ತಿನಾದ್ಯಂತ ಇರುವ ಮಾರುಕಟ್ಟೆಗಳಲ್ಲಿ ತಮ್ಮ ಛಾಪು ಮೂಡಿಸುವಂತೆ ಮಾಡುವುದು ಮುಂದಿನ ಗುರಿಯಾಗಿದೆ. ಕೃಷಿ ಕ್ಷೇತ್ರದಲ್ಲಿ ಈಗಾಗಲೇ ಸಾಧಿಸಿರುವ ಪ್ರಗತಿಯನ್ನು ಇನ್ನಷ್ಟು ವಿಸ್ತರಿಸುವ ಮೂಲಕ, ಭಾರತೀಯ ಉತ್ಪನ್ನಗಳು ಜಾಗತಿಕ ಮಾರುಕಟ್ಟೆಗಳನ್ನು ತಲುಪುವುದನ್ನು ಹಾಗೂ ಅಲ್ಲಿ ಯಶಸ್ವಿಯಾಗಿ ಸ್ಪರ್ಧಿಸುವುದನ್ನು ಖಚಿತಪಡಿಸಿಕೊಳ್ಳಬೇಕಿದೆ ಎಂದು ಅವರು ಪ್ರತಿಪಾದಿಸಿದರು.

 

*****

 

 


(ಪ್ರಕಟಣೆ ಐ.ಡಿ.: 2340702) ವಿಸಿಟರ್ ಕೌಂಟರ್ : 3
ಪ್ರಕಟಣೆಯನ್ನು ಇದರಲ್ಲಿ ಓದಿ: English , हिन्दी , Assamese , Gujarati