ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
azadi ka amrit mahotsav

ಒಂಬತ್ತು ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ 1 ಕೋಟಿಗೂ ಅಧಿಕ ಎಚ್‌ಪಿವಿ ಲಸಿಕೆ ಡೋಸ್‌ಗಳನ್ನು ನೀಡಿರುವ ಭಾರತದ ಸಾಧನೆಯನ್ನು ಶ್ಲಾಘಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ


ರೋಗ ತಡೆಗಟ್ಟುವ ಆರೋಗ್ಯ ಸೇವೆಗಳನ್ನು ಬಲಪಡಿಸುವ ಹಾಗೂ ಗರ್ಭಕಂಠದ ಕ್ಯಾನ್ಸರ್‌ನಿಂದ ಹದಿಹರೆಯದ ಹೆಣ್ಣುಮಕ್ಕಳನ್ನು ರಕ್ಷಿಸುವ ಭಾರತದ ಪ್ರಯಾಣದಲ್ಲಿ ಇದೊಂದು ಮಹತ್ವದ ಮೈಲಿಗಲ್ಲು ಎಂದು ಬಣ್ಣಿಸಿದ ಪ್ರಧಾನಮಂತ್ರಿ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ರಾಜ್ಯ ಸರ್ಕಾರಗಳು ಹಾಗೂ ಆರೋಗ್ಯ ವೃತ್ತಿಪರರ ಸಾಮೂಹಿಕ ಪ್ರಯತ್ನಗಳನ್ನು ಶ್ಲಾಘಿಸಿದ ಭಾರತದ ಗೌರವಾನ್ವಿತ ಉಪರಾಷ್ಟ್ರಪತಿ ಶ್ರೀ ಸಿ. ಪಿ. ರಾಧಾಕೃಷ್ಣನ್

ಎಚ್‌ಪಿವಿ ಲಸಿಕಾಕರಣವನ್ನು ಉತ್ತೇಜಿಸುವಲ್ಲಿ ಹಾಗೂ ಆರೋಗ್ಯವಂತ, ವಿಕಸಿತ ಭಾರತ ನಿರ್ಮಿಸುವಲ್ಲಿ ಪ್ರಧಾನಮಂತ್ರಿಯವರ ದೂರದೃಷ್ಟಿ ಮತ್ತು ನಾಯಕತ್ವವನ್ನು ಉಲ್ಲೇಖಿಸಿದ ಕೇಂದ್ರ ಆರೋಗ್ಯ ಸಚಿವ ಶ್ರೀ ಜಗತ್ ಪ್ರಕಾಶ್ ನಡ್ಡಾ

1 ಕೋಟಿ ಎಚ್‌ಪಿವಿ ಲಸಿಕೆ ಡೋಸ್‌ಗಳನ್ನು ನೀಡಿರುವ ಭಾರತವನ್ನು ಅಭಿನಂದಿಸಿದ ವಿಶ್ವ ಆರೋಗ್ಯ ಸಂಸ್ಥೆಯ ಆಗ್ನೇಯ ಏಷ್ಯಾ ವಲಯ; ಗರ್ಭಕಂಠದ ಕ್ಯಾನ್ಸರ್‌ನಿಂದ ಹೆಣ್ಣುಮಕ್ಕಳನ್ನು ರಕ್ಷಿಸುವ ಸಾಮೂಹಿಕ ಪ್ರಯತ್ನಗಳಿಗೆ ಮನ್ನಣೆ

ಸುಮಾರು 1.2 ಕೋಟಿ 14 ವರ್ಷದ ಹೆಣ್ಣುಮಕ್ಕಳ ವಾರ್ಷಿಕ ಗುರಿ ಸಮೂಹದಲ್ಲಿ ಅಭಿಯಾನವು ಶೇ.87ರಷ್ಟು ಲಸಿಕಾಕರಣ ವ್ಯಾಪ್ತಿಯನ್ನು ಸಾಧಿಸಿದೆ

ಆರು ರಾಜ್ಯಗಳು ಗುರುತಿಸಲಾದ ಗುರಿ ಜನಸಂಖ್ಯೆಯಲ್ಲಿ ಶೇ.100ರಷ್ಟು ಲಸಿಕಾಕರಣ ಸಾಧಿಸಿವೆ; 12 ರಾಜ್ಯಗಳು ಶೇ.80ರಷ್ಟು ವ್ಯಾಪ್ತಿಯನ್ನು ದಾಟಿವೆ

29.33 ಲಕ್ಷಕ್ಕೂ ಅಧಿಕ ಹೆಣ್ಣುಮಕ್ಕಳಿಗೆ ಲಸಿಕೆ ನೀಡುವ ಮೂಲಕ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿದೆ; ಬಿಹಾರದಲ್ಲಿ 13.70 ಲಕ್ಷಕ್ಕೂ ಅಧಿಕ ಹಾಗೂ ಗುಜರಾತ್‌ನಲ್ಲಿ 7.75 ಲಕ್ಷಕ್ಕೂ ಅಧಿಕ ಹೆಣ್ಣುಮಕ್ಕಳಿಗೆ ಲಸಿಕೆ ನೀಡಲಾಗಿದೆ

ಪ್ರಕಟಣಾ ದಿನಾಂಕ: 23 NOV 2026 6:44PM by PIB Bengaluru

ರೋಗ ತಡೆಗಟ್ಟುವ ಆರೋಗ್ಯ ಸೇವೆಗಳನ್ನು ಬಲಪಡಿಸುವ ಹಾಗೂ ಹೆಣ್ಣುಮಕ್ಕಳ ಆರೋಗ್ಯವನ್ನು ರಕ್ಷಿಸುವ ಭಾರತದ ನಿರಂತರ ಪ್ರಯತ್ನಗಳು ಮಹತ್ವದ ಮೈಲಿಗಲ್ಲನ್ನು ತಲುಪಿವೆ. ರಾಷ್ಟ್ರೀಯ ಎಚ್‌ಪಿವಿ ಲಸಿಕಾ ಅಭಿಯಾನದಡಿ ಒಂಬತ್ತು ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ ಹ್ಯೂಮನ್ ಪ್ಯಾಪಿಲೋಮಾವೈರಸ್ (ಎಚ್‌ಪಿವಿ) ಲಸಿಕೆಯ 1 ಕೋಟಿಗೂ ಅಧಿಕ ಡೋಸ್‌ಗಳನ್ನು ನೀಡಿರುವ ಸಾಧನೆಯನ್ನು ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ. ಗರ್ಭಕಂಠದ ಕ್ಯಾನ್ಸರ್‌ಗೆ ಕಾರಣವಾಗಬಹುದಾದ ಎಚ್‌ಪಿವಿ ಸೋಂಕುಗಳಿಂದ ಹದಿಹರೆಯದ ಹೆಣ್ಣುಮಕ್ಕಳನ್ನು ರಕ್ಷಿಸುವ ನಿಟ್ಟಿನಲ್ಲಿ ಈ ಸಾಧನೆಯು ಮಹತ್ವದ ಹೆಜ್ಜೆಯಾಗಿದೆ. ಅಲ್ಲದೆ, ದೇಶಾದ್ಯಂತ ರೋಗ ತಡೆಗಟ್ಟುವ ಆರೋಗ್ಯ ಸೇವೆಗಳ ವ್ಯಾಪ್ತಿ ವಿಸ್ತರಿಸುತ್ತಿರುವುದನ್ನು ಇದು ಪ್ರತಿಬಿಂಬಿಸುತ್ತದೆ.

ತಮ್ಮ ಸಂದೇಶದಲ್ಲಿ ಪ್ರಧಾನಮಂತ್ರಿಯವರು ಈ ಸಾಧನೆಯನ್ನು ರೋಗ ತಡೆಗಟ್ಟುವ ಆರೋಗ್ಯ ಸೇವೆಗಳತ್ತ ಭಾರತದ ಪ್ರಯಾಣದಲ್ಲಿನ ಮಹತ್ವದ ಮೈಲಿಗಲ್ಲು ಎಂದು ಬಣ್ಣಿಸಿದ್ದಾರೆ. ನೀಡಲಾಗುವ ಪ್ರತಿಯೊಂದು ಲಸಿಕೆ ಡೋಸ್‌ ಕೂಡ ಹೆಣ್ಣುಮಕ್ಕಳನ್ನು ಗರ್ಭಕಂಠದ ಕ್ಯಾನ್ಸರ್‌ನಿಂದ ರಕ್ಷಿಸುವ ಹಾಗೂ ಅವರಿಗೆ ಆರೋಗ್ಯಕರ ಭವಿಷ್ಯವನ್ನು ಖಾತರಿಪಡಿಸುವ ನಿಟ್ಟಿನಲ್ಲಿ ಇಡುವ ಹೆಜ್ಜೆಯಾಗಿದೆ ಎಂದು ಅವರು ಹೇಳಿದ್ದಾರೆ. ಈ ಸಾಧನೆಗೆ ಕೊಡುಗೆ ನೀಡಿದ ಎಲ್ಲ ಪಾಲುದಾರರ ಪ್ರಯತ್ನಗಳನ್ನು ಅವರು ಶ್ಲಾಘಿಸಿದ್ದಾರೆ.

ಗೌರವಾನ್ವಿತ ಭಾರತದ ಉಪರಾಷ್ಟ್ರಪತಿ ಶ್ರೀ ಸಿ. ಪಿ. ರಾಧಾಕೃಷ್ಣನ್ ಅವರೂ ಒಂಬತ್ತು ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ 1 ಕೋಟಿಗೂ ಅಧಿಕ ಎಚ್‌ಪಿವಿ ಲಸಿಕೆ ಡೋಸ್‌ಗಳನ್ನು ನೀಡಿರುವ ಸಾಧನೆಯನ್ನು ಪ್ರಶಂಸಿಸಿದ್ದಾರೆ. ಗರ್ಭಕಂಠದ ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಇದೊಂದು ಮಹತ್ವದ ಮೈಲಿಗಲ್ಲು ಎಂದು ಅವರು ಬಣ್ಣಿಸಿದ್ದಾರೆ. ದೇಶಾದ್ಯಂತದ ಈ ಅಭಿಯಾನವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವಲ್ಲಿ ತೊಡಗಿಸಿಕೊಂಡಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ರಾಜ್ಯ ಸರ್ಕಾರಗಳು ಹಾಗೂ ಆರೋಗ್ಯ ವೃತ್ತಿಪರರ ಪ್ರಯತ್ನಗಳನ್ನು ಅವರು ಪ್ರಶಂಸಿಸಿದ್ದಾರೆ. ರೋಗ ತಡೆಗಟ್ಟುವ ಆರೋಗ್ಯ ಸೇವೆಗಳನ್ನು ಬಲಪಡಿಸುವ, ಹದಿಹರೆಯದ ಹೆಣ್ಣುಮಕ್ಕಳನ್ನು ರಕ್ಷಿಸುವ ಹಾಗೂ ಮಹಿಳೆಯರ ಮುಂದಿನ ಪೀಳಿಗೆಗೆ ಆರೋಗ್ಯಕರ ಭವಿಷ್ಯವನ್ನು ನಿರ್ಮಿಸುವ ನಿಟ್ಟಿನಲ್ಲಿ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವ ಮತ್ತು ಸರ್ಕಾರದ ನಿರಂತರ ಬದ್ಧತೆಯನ್ನು ಉಪರಾಷ್ಟ್ರಪತಿಯವರು ಸ್ಮರಿಸಿದ್ದಾರೆ.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಶ್ರೀ ಜಗತ್ ಪ್ರಕಾಶ್ ನಡ್ಡಾ ಅವರು ರೋಗ ತಡೆಗಟ್ಟುವ ಆರೋಗ್ಯ ಸೇವೆಗಳ ಕುರಿತಾದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವ ಮತ್ತು ಅಚಲ ಬದ್ಧತೆಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಆರೋಗ್ಯಕರ ಹಾಗೂ ವಿಕಸಿತ ಭಾರತ ನಿರ್ಮಿಸುವ ನಿಟ್ಟಿನಲ್ಲಿ ಹಂತ ಹಂತವಾಗಿ ಮಹತ್ವದ ಮೈಲಿಗಲ್ಲುಗಳನ್ನು ಸಾಧಿಸಲು ಪ್ರಧಾನಮಂತ್ರಿಯವರ ದೂರದೃಷ್ಟಿ ಮತ್ತು ನಾಯಕತ್ವ ನಿರಂತರ ಸ್ಫೂರ್ತಿ ನೀಡುತ್ತಿವೆ ಎಂದು ಅವರು ಹೇಳಿದ್ದಾರೆ. 1 ಕೋಟಿಗೂ ಅಧಿಕ ಎಚ್‌ಪಿವಿ ಲಸಿಕೆ ಡೋಸ್‌ಗಳನ್ನು ನೀಡಿರುವ ಸಾಧನೆಯನ್ನು ಉಲ್ಲೇಖಿಸಿದ ಶ್ರೀ ನಡ್ಡಾ, ಗರ್ಭಕಂಠದ ಕ್ಯಾನ್ಸರ್‌ನಿಂದ ಭಾರತದ ಹೆಣ್ಣುಮಕ್ಕಳನ್ನು ರಕ್ಷಿಸುವ ನಿಟ್ಟಿನಲ್ಲಿ ಇದೊಂದು ಮಹತ್ವದ ಹೆಜ್ಜೆಯಾಗಿದೆ ಎಂದು ತಿಳಿಸಿದ್ದಾರೆ. ದೇಶದ ಪ್ರತಿಯೊಬ್ಬ ಅರ್ಹ ಹೆಣ್ಣುಮಗಳಿಗೂ ಈ ಮಹತ್ವದ ರಕ್ಷಣೆ ತಲುಪುವಂತೆ ನೋಡಿಕೊಳ್ಳುವ ಬದ್ಧತೆಯನ್ನು ಅವರು ಪುನರುಚ್ಚರಿಸಿದ್ದಾರೆ. ಆ ಮೂಲಕ ಆರೋಗ್ಯವಂತ ಹಾಗೂ ಬಲಿಷ್ಠ ಭಾರತ ನಿರ್ಮಿಸುವ ಸಾಮೂಹಿಕ ಸಂಕಲ್ಪವನ್ನು ಮುನ್ನಡೆಸುವುದಾಗಿ ಹೇಳಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ಆಗ್ನೇಯ ಏಷ್ಯಾ ವಲಯವೂ 14 ವರ್ಷದ ಹೆಣ್ಣುಮಕ್ಕಳಿಗೆ 1 ಕೋಟಿ (10 ಮಿಲಿಯನ್) ಡೋಸ್‌ಗಳಿಗೂ ಅಧಿಕ ಎಚ್‌ಪಿವಿ ಲಸಿಕೆ ನೀಡಿರುವ ಭಾರತದ ಸಾಧನೆಯನ್ನು ಗುರುತಿಸಿದೆ. ಇದು ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವ ಪ್ರಯತ್ನಗಳಲ್ಲಿ ಮಹತ್ವದ ಮೈಲಿಗಲ್ಲು ಎಂದು ಅದು ಬಣ್ಣಿಸಿದೆ. ಈ ಪ್ರಗತಿಯನ್ನು ಸಾಧಿಸುವಲ್ಲಿ ಸರ್ಕಾರ, ಆರೋಗ್ಯ ಕಾರ್ಯಕರ್ತರು, ಸಮುದಾಯಗಳು, ಪೋಷಕರು ಹಾಗೂ ಪಾಲುದಾರರ ಸಾಮೂಹಿಕ ಬದ್ಧತೆಯನ್ನು ಡಬ್ಲ್ಯುಎಚ್‌ಒ-ಎಸ್‌ಇಎಆರ್‌ಒ ಶ್ಲಾಘಿಸಿದೆ. ಗರ್ಭಕಂಠದ ಕ್ಯಾನ್ಸರ್‌ನಿಂದ ಹೆಣ್ಣುಮಕ್ಕಳನ್ನು ರಕ್ಷಿಸುವ ಪ್ರಯತ್ನಗಳ ಭಾಗವಾಗಿ, ಎಚ್‌ಪಿವಿ ಲಸಿಕಾಕರಣದಿಂದ ದೊರೆಯುವ ರಕ್ಷಣೆ ಪ್ರತಿಯೊಬ್ಬ ಹೆಣ್ಣುಮಗಳಿಗೂ ಲಭ್ಯವಾಗುವಂತೆ ನೋಡಿಕೊಳ್ಳುವ ಮಹತ್ವವನ್ನೂ ಅದು ಒತ್ತಿಹೇಳಿದೆ.

ರಾಷ್ಟ್ರೀಯ ಎಚ್‌ಪಿವಿ ಲಸಿಕಾ ಅಭಿಯಾನ: ಪ್ರಗತಿ ಮತ್ತು ವ್ಯಾಪ್ತಿ

ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಫೆಬ್ರವರಿ 2026ರಲ್ಲಿ ಪ್ರಾರಂಭಿಸಿದ ರಾಷ್ಟ್ರೀಯ ಎಚ್‌ಪಿವಿ ಲಸಿಕಾ ಅಭಿಯಾನದಡಿ, ಪೋಷಕರ ಒಪ್ಪಿಗೆಯೊಂದಿಗೆ 14 ವರ್ಷದ ಹೆಣ್ಣುಮಕ್ಕಳಿಗೆ ಗೊತ್ತುಪಡಿಸಿದ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ, ಸುರಕ್ಷಿತವಾಗಿ ಹಾಗೂ ಸ್ವಯಂಪ್ರೇರಿತವಾಗಿ ಎಚ್‌ಪಿವಿ ಲಸಿಕೆಯ ಒಂದು ಡೋಸ್‌ ನೀಡಲಾಗುತ್ತಿದೆ. ಒಂಬತ್ತು ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ 1 ಕೋಟಿಗೂ ಅಧಿಕ ಲಸಿಕೆ ಡೋಸ್‌ಗಳನ್ನು ನೀಡಲಾಗಿದ್ದು, ಸುಮಾರು 1.2 ಕೋಟಿ ಹೆಣ್ಣುಮಕ್ಕಳ ವಾರ್ಷಿಕ ಗುರಿ ಸಮೂಹದಲ್ಲಿ ಶೇ.87ರಷ್ಟು ಲಸಿಕಾಕರಣ ವ್ಯಾಪ್ತಿಯನ್ನು ಸಾಧಿಸಲಾಗಿದೆ.

ಎಚ್‌ಪಿವಿ ಲಸಿಕಾಕರಣದಲ್ಲಿ ರಾಜ್ಯವಾರು ಪ್ರಗತಿ

ಗುಜರಾತ್, ಉತ್ತರ ಪ್ರದೇಶ, ಆಂಧ್ರಪ್ರದೇಶ, ಮಿಜೋರಾಂ, ಮಧ್ಯಪ್ರದೇಶ ಮತ್ತು ಬಿಹಾರ ಸೇರಿದಂತೆ ಆರು ರಾಜ್ಯಗಳು ಗುರುತಿಸಲಾದ ಗುರಿ ಜನಸಂಖ್ಯೆಗೆ ಶೇ.100ರಷ್ಟು ಲಸಿಕಾಕರಣ ವ್ಯಾಪ್ತಿಯನ್ನು ಸಾಧಿಸಿವೆ. ಹನ್ನೆರಡು ರಾಜ್ಯಗಳು ಶೇ.80ರಷ್ಟು ವ್ಯಾಪ್ತಿಯನ್ನು ದಾಟಿವೆ.

ಅಸ್ಸಾಂ ಶೇ.95.63, ತೆಲಂಗಾಣ ಶೇ.95.28, ಕರ್ನಾಟಕ ಶೇ.93.16, ಉತ್ತರಾಖಂಡ ಶೇ.90.17, ಛತ್ತೀಸಗಢ ಶೇ.86.21 ಹಾಗೂ ರಾಜಸ್ಥಾನ ಶೇ.85.23ರಷ್ಟು ಲಸಿಕಾಕರಣ ವ್ಯಾಪ್ತಿಯನ್ನು ದಾಖಲಿಸಿವೆ. ಕೇರಳದಲ್ಲಿ ಶೇ.77.02, ತಮಿಳುನಾಡಿನಲ್ಲಿ ಶೇ.76.12 ಹಾಗೂ ಒಡಿಶಾದಲ್ಲಿ ಶೇ.74.90ರಷ್ಟು ವ್ಯಾಪ್ತಿ ದಾಖಲಾಗಿದೆ. ಕೇಂದ್ರಾಡಳಿತ ಪ್ರದೇಶವಾದ ದಾದ್ರಾ ಮತ್ತು ನಗರ ಹವೇಲಿ ಹಾಗೂ ದಮನ್ ಮತ್ತು ದಿಯುನಲ್ಲಿ ಶೇ.72.99ರಷ್ಟು ವ್ಯಾಪ್ತಿ ಸಾಧಿಸಲಾಗಿದೆ.

ಲಸಿಕೆ ಪಡೆದ ಹೆಣ್ಣುಮಕ್ಕಳ ಸಂಖ್ಯೆಯ ದೃಷ್ಟಿಯಿಂದ ಉತ್ತರ ಪ್ರದೇಶ 29.33 ಲಕ್ಷಕ್ಕೂ ಅಧಿಕ ಹೆಣ್ಣುಮಕ್ಕಳಿಗೆ ಲಸಿಕೆ ನೀಡುವ ಮೂಲಕ ಮೊದಲ ಸ್ಥಾನದಲ್ಲಿದೆ. ಬಿಹಾರದಲ್ಲಿ 13.70 ಲಕ್ಷಕ್ಕೂ ಅಧಿಕ ಹಾಗೂ ಗುಜರಾತ್‌ನಲ್ಲಿ 7.75 ಲಕ್ಷಕ್ಕೂ ಅಧಿಕ ಹೆಣ್ಣುಮಕ್ಕಳಿಗೆ ಲಸಿಕೆ ನೀಡಲಾಗಿದೆ. ಗ್ರಾಮೀಣ, ನಗರ, ದೂರದ ಹಾಗೂ ಭೌಗೋಳಿಕವಾಗಿ ಸವಾಲಿನ ಪ್ರದೇಶಗಳಿಗೂ ಲಸಿಕಾಕರಣ ಸೇವೆಗಳನ್ನು ತಲುಪಿಸಲು ರಾಜ್ಯಗಳು ಸ್ಥಳೀಯ ಅಗತ್ಯಗಳಿಗೆ ಅನುಗುಣವಾದ ವಿಧಾನಗಳನ್ನು ಅಳವಡಿಸಿಕೊಂಡಿವೆ. ಬಿಹಾರ, ತಮಿಳುನಾಡು ಮತ್ತು ಸಿಕ್ಕಿಂ ರಾಜ್ಯಗಳು ಕೈಗೊಂಡಿರುವ ಉಪಕ್ರಮಗಳನ್ನು ಸಹ ರಾಷ್ಟ್ರೀಯ ಅಭಿಯಾನದೊಂದಿಗೆ ಸಂಯೋಜಿಸಲಾಗಿದೆ.

ಕೇಂದ್ರ ಮತ್ತು ರಾಜ್ಯಗಳ ಸಮನ್ವಯ ಹಾಗೂ ಸಮುದಾಯದ ಪಾಲ್ಗೊಳ್ಳುವಿಕೆ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳು, ಜಿಲ್ಲಾ ಆಡಳಿತಗಳು ಹಾಗೂ ಆರೋಗ್ಯ ತಂಡಗಳ ನಡುವಿನ ಸಮನ್ವಯದೊಂದಿಗೆ ಈ ಅಭಿಯಾನವನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಏಮ್ಸ್‌ನಂತಹ ಪ್ರಮುಖ ವೈದ್ಯಕೀಯ ಸಂಸ್ಥೆಗಳ ಮಕ್ಕಳ ತಜ್ಞರು, ಸ್ತ್ರೀರೋಗ ತಜ್ಞರು ಹಾಗೂ ಇತರ ಪರಿಣತರು ವಿಶ್ವಾಸಾರ್ಹ ಮತ್ತು ವೈಜ್ಞಾನಿಕ ಮಾಹಿತಿಯ ಮೂಲಕ ಜಾಗೃತಿ ಮೂಡಿಸುವ ಪ್ರಯತ್ನಗಳಿಗೆ ಬೆಂಬಲ ನೀಡಿದ್ದಾರೆ. ಶಿಕ್ಷಕರು, ಮಾನ್ಯತೆ ಪಡೆದ ಸಾಮಾಜಿಕ ಆರೋಗ್ಯ ಕಾರ್ಯಕರ್ತೆಯರು (ಆಶಾ), ಸಹಾಯಕ ನರ್ಸ್‌ಗಳು ಮತ್ತು ಸೂಲಗಿತ್ತಿಯರು (ಎಎನ್‌ಎಂ) ಹಾಗೂ ಇತರ ಮುಂಚೂಣಿ ಕಾರ್ಯಕರ್ತರು ಪೋಷಕರು ಮತ್ತು ಸಮುದಾಯಗಳೊಂದಿಗೆ ಸಂವಾದ ನಡೆಸಿ, ಅವರ ಆತಂಕಗಳನ್ನು ನಿವಾರಿಸುವುದರ ಜೊತೆಗೆ ತಿಳಿವಳಿಕೆಯ ಆಧಾರದ ಮೇಲೆ ಅಭಿಯಾನದಲ್ಲಿ ಪಾಲ್ಗೊಳ್ಳಲು ಪ್ರೋತ್ಸಾಹಿಸುತ್ತಿದ್ದಾರೆ.

ಡಿಜಿಟಲ್ ಮೇಲ್ವಿಚಾರಣೆ ಮತ್ತು ಲಸಿಕಾಕರಣದ ಲಭ್ಯತೆಗೆ ಯು-ವಿನ್ ವೇದಿಕೆಯ ಬೆಂಬಲ

ಯು-ವಿನ್ ವೇದಿಕೆಯು ನೈಜ ಸಮಯದ ಮೇಲ್ವಿಚಾರಣೆ, ಫಲಾನುಭವಿಗಳ ಪತ್ತೆಹಚ್ಚುವಿಕೆ ಹಾಗೂ ಡಿಜಿಟಲ್ ಲಸಿಕಾಕರಣ ದಾಖಲೆಗಳ ನಿರ್ವಹಣೆಗೆ ನೆರವಾಗುತ್ತದೆ. ಜಿಲ್ಲಾ ಮಟ್ಟದ ಪ್ರಗತಿಯನ್ನು ಮೇಲ್ವಿಚಾರಣೆ ಮಾಡಲು, ಲಸಿಕಾಕರಣ ವ್ಯಾಪ್ತಿಯಲ್ಲಿನ ಕೊರತೆಗಳನ್ನು ಗುರುತಿಸಲು, ಇನ್ನೂ ಲಸಿಕೆ ಪಡೆಯದ ಅರ್ಹ ಹೆಣ್ಣುಮಕ್ಕಳನ್ನು ಪತ್ತೆಹಚ್ಚಲು ಹಾಗೂ ಯೋಜನೆ ಮತ್ತು ಸಂಪನ್ಮೂಲ ಹಂಚಿಕೆಗೆ ನೆರವಾಗಲು ಇದು ಕಾರ್ಯಕ್ರಮ ನಿರ್ವಾಹಕರಿಗೆ ಸಹಾಯ ಮಾಡುತ್ತದೆ. ಪೋಷಕರು ತಮ್ಮ ಹೆಣ್ಣುಮಕ್ಕಳಿಗೆ ಎಚ್‌ಪಿವಿ ಲಸಿಕೆ ನೀಡಲು ಸಮಯ ನಿಗದಿಪಡಿಸಿಕೊಳ್ಳಲು ಹಾಗೂ ಡಿಜಿಟಲ್ ಲಸಿಕಾಕರಣ ಪ್ರಮಾಣಪತ್ರಗಳನ್ನು ಡೌನ್‌ಲೋಡ್ ಮಾಡಿಕೊಳ್ಳಲು ಈ ವೇದಿಕೆಯನ್ನು ಬಳಸಬಹುದು.

ಎಚ್‌ಪಿವಿ ಲಸಿಕಾಕರಣ: ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವಲ್ಲಿ ಮಹತ್ವದ ಕ್ರಮ

ಹೆಚ್ಚಿನ ಅಪಾಯವನ್ನುಂಟುಮಾಡುವ ಹ್ಯೂಮನ್ ಪ್ಯಾಪಿಲೋಮಾವೈರಸ್ನ (ಎಚ್‌ಪಿವಿ) ಕೆಲವು ವಿಧಗಳ ನಿರಂತರ ಸೋಂಕು ಗರ್ಭಕಂಠದ ಕ್ಯಾನ್ಸರ್‌ನ ಬಹುತೇಕ ಪ್ರಕರಣಗಳಿಗೆ ಕಾರಣವಾಗುತ್ತದೆ. ಇಂತಹ ಸೋಂಕುಗಳನ್ನು ತಡೆಗಟ್ಟುವ ಅತ್ಯಂತ ಪರಿಣಾಮಕಾರಿ ಕ್ರಮಗಳಲ್ಲಿ ಎಚ್‌ಪಿವಿ ಲಸಿಕಾಕರಣವೂ ಒಂದಾಗಿದೆ. ವಿಶ್ವದಾದ್ಯಂತ 80 ಕೋಟಿಗೂ ಅಧಿಕ ಎಚ್‌ಪಿವಿ ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ. ಸುಮಾರು ಎರಡು ದಶಕಗಳ ಸಂಶೋಧನೆ ಮತ್ತು ನೈಜ ಜಗತ್ತಿನ ಅನುಭವಗಳು, ಲಸಿಕೆಯಲ್ಲಿ ಗುರಿಯಾಗಿಸಿಕೊಂಡಿರುವ ಎಚ್‌ಪಿವಿ ಸೋಂಕುಗಳು ಹಾಗೂ ಅವುಗಳಿಗೆ ಸಂಬಂಧಿಸಿದ ಕ್ಯಾನ್ಸರ್‌ಪೂರ್ವ ಸ್ಥಿತಿಗಳ ವಿರುದ್ಧ ಈ ಲಸಿಕೆಯು ಉತ್ತಮ ರಕ್ಷಣೆ ಒದಗಿಸುತ್ತದೆ ಎಂಬುದನ್ನು ತೋರಿಸಿವೆ. ಎಚ್‌ಪಿವಿ ಸೋಂಕಿಗೆ ಒಳಗಾಗುವ ಸಾಧ್ಯತೆ ಉಂಟಾಗುವುದಕ್ಕಿಂತ ಸಾಕಷ್ಟು ಮುಂಚಿತವಾಗಿಯೇ ರಕ್ಷಣೆ ಒದಗಿಸುವ ಉದ್ದೇಶದಿಂದ 14ನೇ ವಯಸ್ಸಿನಲ್ಲಿ ಲಸಿಕೆ ನೀಡಲಾಗುತ್ತದೆ.

ಫಲಾನುಭವಿಗಳ ಸುರಕ್ಷತೆಗೆ ಮೊದಲ ಆದ್ಯತೆ

ತರಬೇತಿ ಪಡೆದ ವೈದ್ಯಾಧಿಕಾರಿಗಳ ನೇರ ಮೇಲ್ವಿಚಾರಣೆಯಲ್ಲಿ ಗೊತ್ತುಪಡಿಸಿದ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಲಸಿಕಾಕರಣ ಶಿಬಿರಗಳನ್ನು ನಡೆಸಲಾಗುತ್ತದೆ. ಲಸಿಕಾಕರಣದ ನಂತರ ಉಂಟಾಗಬಹುದಾದ ಅಪರೂಪದ ಪ್ರತಿಕೂಲ ಘಟನೆಗಳನ್ನು (ಎಇಎಫ್‌ಐ) ತ್ವರಿತವಾಗಿ ಮೌಲ್ಯಮಾಪನ ಮಾಡಲು, ಮೇಲ್ವಿಚಾರಣೆ ನಡೆಸಲು ಹಾಗೂ ನಿರ್ವಹಿಸಲು ಈ ಕೇಂದ್ರಗಳನ್ನು 24×7 ಆರೋಗ್ಯ ಸೇವಾ ಕೇಂದ್ರಗಳೊಂದಿಗೆ ಸಂಪರ್ಕಿಸಲಾಗಿದೆ. ಈಗಾಗಲೇ ನಿಗದಿಪಡಿಸಿರುವ ಸುರಕ್ಷತಾ ನಿಯಮಾವಳಿಗಳು, ತರಬೇತಿ ಪಡೆದ ಸಿಬ್ಬಂದಿ ಹಾಗೂ ಸೂಕ್ತ ವೈದ್ಯಕೀಯ ವ್ಯವಸ್ಥೆಗಳು ಲಸಿಕಾ ಶಿಬಿರಗಳನ್ನು ಸುರಕ್ಷಿತವಾಗಿ ನಡೆಸಲು ನೆರವಾಗುತ್ತವೆ. ಪಾರದರ್ಶಕ ಸಂವಹನ, ವೈಜ್ಞಾನಿಕ ಪುರಾವೆಗಳು ಹಾಗೂ ಪೋಷಕರ ತಿಳಿವಳಿಕೆಯುಳ್ಳ ಒಪ್ಪಿಗೆಗೆ ಸಚಿವಾಲಯವು ನಿರಂತರವಾಗಿ ಒತ್ತು ನೀಡುತ್ತಿದೆ.

ಅರ್ಹ ಪ್ರತಿಯೊಬ್ಬ ಹೆಣ್ಣುಮಗಳಿಗೂ ಲಸಿಕೆ ತಲುಪಿಸುವ ಪ್ರಯತ್ನಗಳನ್ನು ಮುಂದುವರಿಸುವುದು

ಲಸಿಕಾಕರಣ ವ್ಯಾಪ್ತಿಯಲ್ಲಿನ ಕೊರತೆಗಳನ್ನು ನಿವಾರಿಸಲು ಹಾಗೂ ಅರ್ಹ ಎಲ್ಲ ಹೆಣ್ಣುಮಕ್ಕಳಿಗೂ ಲಸಿಕೆ ತಲುಪಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ರಾಜ್ಯ ಸರ್ಕಾರಗಳು, ಜಿಲ್ಲಾ ಆಡಳಿತಗಳು, ವೈದ್ಯಕೀಯ ವೃತ್ತಿಪರರು, ಮುಂಚೂಣಿ ಆರೋಗ್ಯ ಕಾರ್ಯಕರ್ತರು, ಶಿಕ್ಷಣ ಸಂಸ್ಥೆಗಳು ಮತ್ತು ಸಮುದಾಯಗಳೊಂದಿಗೆ ತನ್ನ ಪ್ರಯತ್ನಗಳನ್ನು ಮುಂದುವರಿಸಲಿದೆ. ಪೋಷಕರು ಮತ್ತು ಪಾಲಕರು ಹೆಚ್ಚಿನ ಮಾಹಿತಿ ಪಡೆಯಲು ಹಾಗೂ ಲಸಿಕೆ ಪಡೆಯಲು ಸಮಯ ನಿಗದಿಪಡಿಸಿಕೊಳ್ಳಲು ತಮ್ಮ ಸಮೀಪದ ಗೊತ್ತುಪಡಿಸಿದ ಸರ್ಕಾರಿ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಬಹುದು ಅಥವಾ ಯು-ವಿನ್ ವೇದಿಕೆಯನ್ನು ಬಳಸಬಹುದು.

ಒಂಬತ್ತು ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ 1 ಕೋಟಿಗೂ ಅಧಿಕ ಎಚ್‌ಪಿವಿ ಲಸಿಕೆ ಡೋಸ್‌ಗಳನ್ನು ನೀಡಿರುವ ಸಾಧನೆಯು ಗರ್ಭಕಂಠದ ಕ್ಯಾನ್ಸರ್‌ನಿಂದ ಹದಿಹರೆಯದ ಹೆಣ್ಣುಮಕ್ಕಳನ್ನು ರಕ್ಷಿಸುವ ಭಾರತದ ಪ್ರಯತ್ನಗಳಲ್ಲಿ ಮಹತ್ವದ ಪ್ರಗತಿಯನ್ನು ಸೂಚಿಸುತ್ತದೆ. ರಾಷ್ಟ್ರೀಯ ಎಚ್‌ಪಿವಿ ಲಸಿಕಾ ಅಭಿಯಾನವು ರೋಗ ತಡೆಗಟ್ಟುವ ಆರೋಗ್ಯ ಸೇವೆಗಳನ್ನು ಬಲಪಡಿಸುವ ಹಾಗೂ ಅರ್ಹ ಪ್ರತಿಯೊಬ್ಬ ಹೆಣ್ಣುಮಗಳಿಗೂ ಈ ಮಹತ್ವದ ರಕ್ಷಣೆ ಲಭ್ಯವಾಗುವಂತೆ ಮಾಡುವ ಸರ್ಕಾರದ ನಿರಂತರ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.

 

*****

 

 


(ಪ್ರಕಟಣೆ ಐ.ಡಿ.: 2340673) ವಿಸಿಟರ್ ಕೌಂಟರ್ : 5
ಪ್ರಕಟಣೆಯನ್ನು ಇದರಲ್ಲಿ ಓದಿ: Tamil , Assamese , English , Urdu , हिन्दी