57th International Film Festival of India 2026
20 – 28 Nov 2026

‘ರೂಬಿ-ಕ್ಯೂಬ್’ ಮಾನವ ಸಂಬಂಧಗಳು ಮತ್ತು ಭಾರತೀಯ ಕುಟುಂಬ ವ್ಯವಸ್ಥೆಯ ಸಂಕೀರ್ಣತೆಗಳನ್ನು ಅನಾವರಣಗೊಳಿಸುತ್ತದೆ: 57ನೇ ಐಎಫ್‌ಎಫ್‌ಐನಲ್ಲಿ ಮಾಧ್ಯಮಗಳೊಂದಿಗೆ ಸಂವಾದ ನಡೆಸಿದ ನಿರ್ದೇಶಕರಾದ​​​​​​​ ಪಿ. ಶೇಷಾದ್ರಿ

ಪ್ರಕಟಣಾ ದಿನಾಂಕ: 22 NOV 2026 7:05PMby PIB Bengaluruಪ್ರಕಟಣೆ ಐ.ಡಿ.: 2340086Views: 7

57ನೇ ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ (ಐಎಫ್‌ಎಫ್‌ಐ) ಅಂಗವಾಗಿ ಇಂದು ಗೋವಾದ ಪಣಜಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕನ್ನಡ ಚಲನಚಿತ್ರ ‘ರೂಬಿ-ಕ್ಯೂಬ್’ ತಂಡವು ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಿತು. ಖ್ಯಾತ ಚಲನಚಿತ್ರ ನಿರ್ದೇಶಕ ಪಿ. ಶೇಷಾದ್ರಿ ಮತ್ತು ಚಿತ್ರದ ಮುಖ್ಯ ನಟಿ ವೈನಿಧಿ ಜಗದೀಶ್ ಈ ಸಂವಾದದಲ್ಲಿ ಭಾಗವಹಿಸಿದ್ದರು.

ತಮ್ಮ ಚಿತ್ರ ನಿರ್ಮಾಣದ ವಿಧಾನದ ಬಗ್ಗೆ ಮಾತನಾಡಿದ ಪಿ. ಶೇಷಾದ್ರಿ, ತಾವು ಕಥೆಗಳಿಗಾಗಿ ಸಕ್ರಿಯವಾಗಿ ಹುಡುಕಾಡುವುದಿಲ್ಲ; ಬದಲಿಗೆ ಕಥೆಗಳೇ ತಮ್ಮ ಬಳಿಗೆ ಬರುವಂತೆ ಕಾಯುತ್ತೇನೆ ಎಂದು ಹೇಳಿದರು. ಕಥೆಯೊಂದು ತಮಗೆ ನಿಜವಾಗಿಯೂ ಆಕರ್ಷಕವಾಗಿ ಕಂಡಾಗ ಮತ್ತು ಅದನ್ನು ತೆರೆಗೆ ತರಲೇಬೇಕು ಎಂದು ಮನಸ್ಸಿಗೆ ಅನಿಸಿದಾಗ ಮಾತ್ರ ತಾವು ಸಿನಿಮಾ ಮಾಡುವುದಾಗಿ ವಿವರಿಸಿದರು. ‘ರೂಬಿ-ಕ್ಯೂಬ್’ ತಮ್ಮ 13ನೇ ಚಲನಚಿತ್ರವಾಗಿದ್ದು, ಇದರ ಕಥನವು ನೈಜ ಜೀವನದ ಅನುಭವಗಳನ್ನು ಆಧರಿಸಿದೆ. ಭಾರತೀಯ ಕುಟುಂಬ ವ್ಯವಸ್ಥೆಯ ಸಂಕೀರ್ಣತೆಗಳು ಮತ್ತು ಅದರೊಳಗೆ ಮಾನವ ಸಂಬಂಧಗಳು ಕಾಲಕ್ರಮೇಣ ರೂಪಾಂತರಗೊಳ್ಳುವ ರೀತಿಯನ್ನು ಈ ಚಿತ್ರದಲ್ಲಿ ಕಟ್ಟಿಕೊಡಲಾಗಿದೆ ಎಂದು ಅವರು ತಿಳಿಸಿದರು.

ಈ ಚಿತ್ರವು ತನ್ನ ಪಾತ್ರಗಳ ಬದುಕಿನ ಮೂಲಕ ಮಾನವ ಜೀವನದ ಹಲವು ಸಮಸ್ಯೆಗಳು ಮತ್ತು ಸವಾಲುಗಳನ್ನು ಅನಾವರಣಗೊಳಿಸುತ್ತದೆ ಎಂದು ನಿರ್ದೇಶಕರು ವಿವರಿಸಿದರು. ಜೀವನವನ್ನು ರೂಬಿಕ್ಸ್ ಕ್ಯೂಬ್‌ಗೆ ಹೋಲಿಸಿದ ಅವರು, ಆ ಒಗಟಿನಲ್ಲಿ ಹಲವು ಬಣ್ಣಗಳು ಮತ್ತು ಸಂಯೋಜನೆಗಳಿರುವಂತೆ, ಮಾನವ ಬದುಕಿನಲ್ಲಿಯೂ ವಿಭಿನ್ನ ಛಾಯೆಗಳು ಮತ್ತು ಆಯಾಮಗಳಿರುತ್ತವೆ ಎಂದರು. ತಮ್ಮ ಚಿತ್ರಗಳು ನಿರ್ದಿಷ್ಟ ಸಂದೇಶವೊಂದನ್ನು ನೀಡಲೇಬೇಕೆಂಬ ಉದ್ದೇಶ ಹೊಂದಿರುವುದಿಲ್ಲ; ಬದಲಿಗೆ ಪ್ರೇಕ್ಷಕರೊಂದಿಗೆ ಭಾವನಾತ್ಮಕ ಸಂಬಂಧವನ್ನು ಬೆಸೆಯುವುದು ಅವುಗಳ ಆಶಯವಾಗಿದೆ ಎಂದು ಅವರು ಒತ್ತಿಹೇಳಿದರು. ಚಿತ್ರಗಳು ಹೆಚ್ಚಿನ ಪ್ರೇಕ್ಷಕರನ್ನು ತಲುಪಲು, ವ್ಯಾಪಕ ಮನ್ನಣೆ ಗಳಿಸಲು ಮತ್ತು ಚಲನಚಿತ್ರ ಪ್ರೇಮಿಗಳಿಂದ ಅರ್ಥಪೂರ್ಣ ಪ್ರತಿಕ್ರಿಯೆಗಳನ್ನು ಪಡೆಯಲು ಐಎಫ್‌ಎಫ್‌ಐ ಪ್ರಮುಖ ವೇದಿಕೆಯನ್ನು ಒದಗಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಚಿತ್ರದ ಮುಖ್ಯ ನಟಿ ವೈನಿಧಿ ಜಗದೀಶ್ ಅವರು ತಮ್ಮ ಪಾತ್ರದ ಭಾವನಾತ್ಮಕ ಆಯಾಮಗಳು ಹಾಗೂ ಚಿತ್ರದ ಕೇಂದ್ರ ಕಥಾವಸ್ತುವಿನ ಕುರಿತು ಮಾತನಾಡಿದರು. ಮಗಳು ತನ್ನ ತವರು ಮನೆಗೆ ಮರಳಿದಾಗ, ಅಲ್ಲಿ ತನ್ನ ತಂದೆ-ತಾಯಿಯ ನಡುವಿನ ಸಂಬಂಧದ ವಿವಿಧ ಮಜಲುಗಳನ್ನು ಕ್ರಮೇಣ ಅರಿತುಕೊಳ್ಳುವ ಸನ್ನಿವೇಶಗಳ ಸುತ್ತ ಚಿತ್ರದ ಕಥೆ ಹೆಣೆಯಲಾಗಿದೆ ಎಂದು ಅವರು ತಿಳಿಸಿದರು. ಬದಲಾಗುತ್ತಿರುವ ಸಂಬಂಧಗಳು, ನಿರೀಕ್ಷೆಗಳು ಮತ್ತು ಭಾವನಾತ್ಮಕ ಸವಾಲುಗಳನ್ನು ಎದುರಿಸುತ್ತಾ ವ್ಯಕ್ತಿಗಳು ತಮ್ಮದೇ ಆದ ರೀತಿಯಲ್ಲಿ ಬದುಕು ಸಾಗಿಸುವ ಇಂದಿನ ಕುಟುಂಬಗಳ ವಾಸ್ತವಿಕ ಚಿತ್ರಣವನ್ನು ಈ ಚಿತ್ರ ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದರು. ಚಿತ್ರದ ಕುರಿತು ವಿವರಿಸುತ್ತಾ, ಈ ಕಥೆಯು ಸೂಕ್ಷ್ಮ ಮತ್ತು ಸರಳ ನಿರೂಪಣೆಯನ್ನು ಹೊಂದಿದ್ದು, ನಾಟಕೀಯ ಅಭಿವ್ಯಕ್ತಿಗಳಿಗಿಂತ ದೈನಂದಿನ ಬದುಕಿನ ಮಾನವೀಯ ಅನುಭವಗಳಿಗೆ ಹೆಚ್ಚಿನ ಒತ್ತು ನೀಡುತ್ತದೆ ಎಂದರು.

ಗಿರಿಧಾಮವೊಂದರಲ್ಲಿ ನಡೆಯುವ ಕಿರು ಪ್ರವಾಸದ ಹಿನ್ನೆಲೆಯಲ್ಲಿ ಸಾಗುವ ‘ರೂಬಿ-ಕ್ಯೂಬ್’ ಚಿತ್ರವು ಒಂದೇ ಸೂರಿನಡಿ ಕುಟುಂಬದ ಮೂರು ತಲೆಮಾರುಗಳನ್ನು ಒಟ್ಟುಗೂಡಿಸುತ್ತದೆ. ಮನೋವಿಜ್ಞಾನಿಯಾಗಿರುವ ರೋಹಿಣಿ ಮತ್ತು ಆಕೆಯ ಮಾಜಿ ಪತಿ ಮೂರ್ತಿ ಅವರ ಮಗಳು ಚಿತ್ರಾ ತನ್ನ ವೈವಾಹಿಕ ಜೀವನದಲ್ಲಿನ ಸವಾಲುಗಳನ್ನು ಎದುರಿಸುವ ಸಂದರ್ಭದಲ್ಲಿ ಇಬ್ಬರನ್ನೂ ಮತ್ತೆ ಒಂದುಗೂಡಿಸುತ್ತಾಳೆ. ಕುಟುಂಬದ ಸದಸ್ಯರು ಒಟ್ಟಿಗೆ ಸಮಯ ಕಳೆಯುತ್ತಿದ್ದಂತೆ, ಬಗೆಹರಿಯದ ಭಾವನೆಗಳು, ಹಳೆಯ ಸಂಬಂಧಗಳು ಮತ್ತು ಜವಾಬ್ದಾರಿಗಳ ಕುರಿತ ಪ್ರಶ್ನೆಗಳು ಕ್ರಮೇಣ ಮುನ್ನೆಲೆಗೆ ಬರುತ್ತವೆ.

ಐಎಫ್‌ಎಫ್‌ಐ 2026ರಲ್ಲಿ ನಡೆದ ಈ ಸಂವಾದವು ‘ರೂಬಿ-ಕ್ಯೂಬ್’ ಚಿತ್ರದ ಹಿಂದಿನ ಸೃಜನಶೀಲ ದೃಷ್ಟಿಕೋನ ಹಾಗೂ ಸಮಕಾಲೀನ ಕುಟುಂಬ ಸಂಬಂಧಗಳ ಕುರಿತ ಅದರ ಅನ್ವೇಷಣೆಯ ಬಗ್ಗೆ ಪ್ರೇಕ್ಷಕರು ಮತ್ತು ಮಾಧ್ಯಮ ಪ್ರತಿನಿಧಿಗಳಿಗೆ ಒಳನೋಟ ಒದಗಿಸಿತು. ಉತ್ಸವದಲ್ಲಿ ಈ ಚಿತ್ರದ ಪ್ರದರ್ಶನವು ವಿವಿಧ ದೇಶಗಳ ವೈವಿಧ್ಯಮಯ ಚಲನಚಿತ್ರ ಅಭಿವ್ಯಕ್ತಿಗಳು ಮತ್ತು ಕಥನ ಪರಂಪರೆಗಳನ್ನು ಸಂಭ್ರಮಿಸುವ ಐಎಫ್‌ಎಫ್‌ಐನ ಆಶಯಕ್ಕೆ ಮತ್ತಷ್ಟು ಮೆರುಗು ನೀಡಿದೆ.

ಪತ್ರಿಕಾಗೋಷ್ಠಿಯನ್ನು ಶ್ರೀ ಅನಿಮೇಶ್ ವಾಜೆ ಅವರು ನಿರೂಪಿಸಿದರು.

ಸಂಪೂರ್ಣ ಪತ್ರಿಕಾಗೋಷ್ಠಿಯನ್ನು ಇಲ್ಲಿ ವೀಕ್ಷಿಸಿ

 

Read IFFILOID here: https://www.pib.gov.in/iffi/57/iffiLoid.aspx?yr=2026&lang=1&reg=48

 

*****


Great films resonate through passionate voices. Share your love for cinema with #IFFI2026 and #StoriesWithoutBorders. Tag us @pibindia on Instagram and @PIB_India on X, and we will help amplify your festival moments!

For accredited journalists, critics, bloggers, and vloggers seeking 1-on-1 interviews with filmmakers and festival juries, write to us at:
iffi.mediadesk@pib.gov.in with the subject line: Take One with PIB.


Official Release ID: 2340086
•
Media Centre: Goa
•
Festival Dates: Nov 20 – 28, 2026