ಲೋಕಸಭಾ ಸಚಿವಾಲಯ
azadi ka amrit mahotsav

ಮಹಿಳಾ ನಾಯಕತ್ವ, ನಾವೀನ್ಯತೆ ಮತ್ತು ಸಾಮೂಹಿಕ ಕ್ರಿಯೆಯು ಜಾಗತಿಕ ಸವಾಲುಗಳಿಗೆ ಪರಿಹಾರಗಳನ್ನು ರೂಪಿಸಬಲ್ಲವು: ಲೋಕಸಭಾ ಸ್ಪೀಕರ್


ಬ್ರಿಕ್ಸ್ ಯಾವುದೇ ದೇಶಕ್ಕೆ ಸವಾಲಲ್ಲ; ಇದು ಎಲ್ಲಾ ರಾಷ್ಟ್ರಗಳ ಸಮೃದ್ಧಿ ಮತ್ತು ಕಲ್ಯಾಣಕ್ಕಾಗಿ ಇರುವ ವೇದಿಕೆ: ಲೋಕಸಭಾ ಸ್ಪೀಕರ್

ತಾಂತ್ರಿಕ ಪ್ರಗತಿಯು ಮಾನವ-ಕೇಂದ್ರಿತ ದೃಷ್ಟಿಕೋನ, ನೈತಿಕ ಮೌಲ್ಯಗಳು, ಸಹಾನುಭೂತಿ ಮತ್ತು ಹೊಣೆಗಾರಿಕೆಯಿಂದ ಕೂಡಿರಬೇಕು: ಲೋಕಸಭಾ ಸ್ಪೀಕರ್

ಹವಾಮಾನ ಬದಲಾವಣೆ, ಭಯೋತ್ಪಾದನೆ, ಸೈಬರ್ ಅಪರಾಧಗಳು ಮತ್ತು ಮಾದಕವಸ್ತು ಕಳ್ಳಸಾಗಣೆಯನ್ನು ಎದುರಿಸಲು ಬ್ರಿಕ್ಸ್ ರಾಷ್ಟ್ರಗಳ ನಡುವೆ ಬಲವಾದ ಸಹಕಾರ ಅಗತ್ಯ: ಲೋಕಸಭಾ ಸ್ಪೀಕರ್

'ಮಹಿಳಾ ಸಬಲೀಕರಣ'ದ ಪರಿಕಲ್ಪನೆಯನ್ನು ಮೀರಿ, 'ಮಹಿಳಾ ನೇತೃತ್ವದ ಅಭಿವೃದ್ಧಿ'ಯನ್ನು ಸಾಕಾರಗೊಳಿಸುವತ್ತ ನಾವು ಸಾಗಬೇಕು: ಲೋಕಸಭಾ ಸ್ಪೀಕರ್

ಬನಸ್ಥಲಿ ವಿದ್ಯಾಪೀಠದಲ್ಲಿ ನಡೆದ 'ಬ್ರಿಕ್ಸ್ ಮಹಿಳಾ ನಾಯಕಿಯರ ಶೃಂಗಸಭೆ'ಯ ಉದ್ಘಾಟನಾ ಸಮಾರಂಭದಲ್ಲಿ ಲೋಕಸಭಾ ಸ್ಪೀಕರ್ ಭಾಷಣ

ಪ್ರಕಟಣಾ ದಿನಾಂಕ: 21 NOV 2026 3:11PM by PIB Bengaluru

ಲೋಕಸಭಾ ಸ್ಪೀಕರ್ ಶ್ರೀ ಓಂ ಬಿರ್ಲಾ ಅವರು ಇಂದು ಬ್ರಿಕ್ಸ್ ರಾಷ್ಟ್ರಗಳ ಮಹಿಳಾ ನಾಯಕಿಯರನ್ನು ಉದ್ದೇಶಿಸಿ ಮಾತನಾಡುತ್ತಾ, ಜಾಗತಿಕ ಸವಾಲುಗಳನ್ನು ಎದುರಿಸಲು ಹಾಗೂ ಹೆಚ್ಚು ಶಾಂತಿಯುತ, ಸ್ಥಿರ ಮತ್ತು ಸಮೃದ್ಧ ಜಗತ್ತನ್ನು ರೂಪಿಸಲು ತಮ್ಮ ಸಾಮೂಹಿಕ ನಾಯಕತ್ವ, ಅನುಭವ ಮತ್ತು ನಾವೀನ್ಯತಾ ಸಾಮರ್ಥ್ಯಗಳನ್ನು ಬಳಸಿಕೊಳ್ಳುವಂತೆ ಕರೆ ನೀಡಿದರು. ರಾಜಸ್ಥಾನದ ಟೋಂಕ್‌ನಲ್ಲಿರುವ ಬನಸ್ಥಲಿ ವಿದ್ಯಾಪೀಠದಲ್ಲಿ ನಡೆದ 'ಬ್ರಿಕ್ಸ್ ಮಹಿಳಾ ನಾಯಕಿಯರ ಶೃಂಗಸಭೆ'ಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಅವರು, ಮಹಿಳೆಯರ ಆತ್ಮವಿಶ್ವಾಸ, ಸಕಾರಾತ್ಮಕ ದೃಷ್ಟಿಕೋನ ಮತ್ತು ನಾವೀನ್ಯತೆಯ ಸಾಮರ್ಥ್ಯವು ರಾಷ್ಟ್ರಗಳು ಹಾಗೂ ಮಾನವಕುಲ ಎದುರಿಸುತ್ತಿರುವ ಸಂಕೀರ್ಣ ಸಮಸ್ಯೆಗಳನ್ನು ಪರಿಹರಿಸಲು ಹೊಸ ದಾರಿಗಳನ್ನು ತೆರೆಯಬಲ್ಲದು ಎಂದು ಹೇಳಿದರು.

ಬ್ರಿಕ್ಸ್ ರಾಷ್ಟ್ರಗಳ ನಡುವಿನ ಸಹಕಾರದ ಮಹತ್ವದ ಬಗ್ಗೆ ಹೇಳಿದ, ಶ್ರೀ ಬಿರ್ಲಾ, ಭೌಗೋಳಿಕ, ಆರ್ಥಿಕ ಮತ್ತು ರಾಜಕೀಯ ಪರಿಸ್ಥಿತಿಗಳಲ್ಲಿ ಭಿನ್ನತೆಗಳಿದ್ದರೂ, ಈ ದೇಶಗಳು ಹಲವು ಸಾಮಾನ್ಯ ಸವಾಲುಗಳನ್ನು ಎದುರಿಸುತ್ತಿವೆ ಮತ್ತು ಇವುಗಳಿಗೆ ಸಾಮೂಹಿಕ ಪ್ರತಿಕ್ರಿಯೆಯ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು. ಆರ್ಥಿಕ ಮತ್ತು ಸಾಮಾಜಿಕ ಪ್ರಗತಿಗೆ ಜಾಗತಿಕ ಶಾಂತಿ ಮತ್ತು ಸ್ಥಿರತೆ ಅತ್ಯಗತ್ಯ ಎಂದು ಪ್ರತಿಪಾದಿಸಿದ ಅವರು, ಒಂದು ದೇಶದಲ್ಲಿ ಉಂಟಾಗುವ ಅಶಾಂತಿಯು ಪ್ರಪಂಚದಾದ್ಯಂತ ದೂರಗಾಮಿ ಪರಿಣಾಮಗಳನ್ನು ಬೀರಬಲ್ಲದು ಎಂದು ಎಚ್ಚರಿಸಿದರು. ಬ್ರಿಕ್ಸ್ ರಾಷ್ಟ್ರಗಳು ಸಂವಾದ, ಸಹಕಾರ ಹಾಗೂ ಆಲೋಚನೆಗಳು ಮತ್ತು ಉತ್ತಮ ಪದ್ಧತಿಗಳನ್ನು ಹಂಚಿಕೊಳ್ಳಲು ಒಂದು ಪ್ರಮುಖ ವೇದಿಕೆಯನ್ನು ಒದಗಿಸುತ್ತವೆ; ಇದು ದೇಶಗಳು ತಮ್ಮ ಸಾಮಾನ್ಯ ಹಿತಾಸಕ್ತಿಗಳಿಗಾಗಿ ಮತ್ತು ಒಮ್ಮತದ ಪರಿಹಾರಗಳಿಗಾಗಿ ಒಟ್ಟಾಗಿ ಕೆಲಸ ಮಾಡಲು ಅನುವು ಮಾಡಿಕೊಡುತ್ತದೆ ಎಂದು ಅವರು ಹೇಳಿದರು. ತಂತ್ರಜ್ಞಾನದ, ವಿಶೇಷವಾಗಿ ಕೃತಕ ಬುದ್ಧಿಮತ್ತೆಯ (AI) ಪರಿವರ್ತನಾ ಸಾಮರ್ಥ್ಯವನ್ನು ಎತ್ತಿ ತೋರಿಸಿದ ಲೋಕಸಭಾ ಸ್ಪೀಕರ್ ಅವರು, ಆರೋಗ್ಯ, ಶಿಕ್ಷಣ, ಕೃಷಿ, ರಕ್ಷಣೆ, ಸೈಬರ್ ಭದ್ರತೆ ಮತ್ತು ಮಹಿಳಾ ಉದ್ಯಮಶೀಲತೆಯಂತಹ ಕ್ಷೇತ್ರಗಳಲ್ಲಿ ಇದರ ಜವಾಬ್ದಾರಿಯುತ ಬಳಕೆಗೆ ಕರೆ ನೀಡಿದರು. ತಾಂತ್ರಿಕ ಪ್ರಗತಿಯು ಮಾನವ-ಕೇಂದ್ರಿತ ದೃಷ್ಟಿಕೋನ, ನೈತಿಕ ಪರಿಗಣನೆಗಳು, ಸಹಾನುಭೂತಿ ಮತ್ತು ಹೊಣೆಗಾರಿಕೆಯಿಂದ ಕೂಡಿರಬೇಕು ಎಂದು ಅವರು ಹೇಳಿದರು. ಕೃತಕ ಬುದ್ಧಿಮತ್ತೆಯು ಮಾನವಕುಲಕ್ಕೆ ಸೇವೆ ಸಲ್ಲಿಸುವಂತೆ ಮತ್ತು ಸಾಮಾನ್ಯ ನಾಗರಿಕರ ಜೀವನವನ್ನು ಹೆಚ್ಚು ಸುರಕ್ಷಿತ ಹಾಗೂ ಉತ್ತಮವಾಗಿಸುವಂತೆ ನೋಡಿಕೊಳ್ಳುವುದು ಎಲ್ಲರ ಜಂಟಿ ಜವಾಬ್ದಾರಿಯಾಗಿದೆ ಎಂದು ಅವರು ತಿಳಿಸಿದರು.

ಹವಾಮಾನ ಬದಲಾವಣೆ, ಭಯೋತ್ಪಾದನೆ, ಸೈಬರ್ ಅಪರಾಧಗಳು ಮತ್ತು ಮಾದಕವಸ್ತು ಕಳ್ಳಸಾಗಣೆಯಂತಹ ಬೆದರಿಕೆಗಳನ್ನು ಎದುರಿಸಲು ಸಹಕಾರವನ್ನು ಬಲಪಡಿಸುವ ಅಗತ್ಯದ ಬಗ್ಗೆಯೂ ಶ್ರೀ ಬಿರ್ಲಾ ಹೇಳಿದರು. ವಿವಿಧ ದೇಶಗಳ ನಡುವೆ ನಾವೀನ್ಯತೆಗಳು, ಅನುಭವಗಳು ಮತ್ತು ಯಶಸ್ವಿ ಪದ್ಧತಿಗಳನ್ನು ಹಂಚಿಕೊಳ್ಳುವುದರಿಂದ ಹೊಸ ದೃಷ್ಟಿಕೋನಗಳು ಮೂಡಬಹುದು ಮತ್ತು ಉದಯೋನ್ಮುಖ ಜಾಗತಿಕ ಸಮಸ್ಯೆಗಳಿಗೆ ಹೆಚ್ಚು ಪರಿಣಾಮಕಾರಿಯಾಗಿ ಸ್ಪಂದಿಸಲು ಬ್ರಿಕ್ಸ್ (BRICS) ರಾಷ್ಟ್ರಗಳಿಗೆ ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

'ವಸುಧೈವ ಕುಟುಂಬಕಮ್' (ಜಗತ್ತೇ ಒಂದು ಕುಟುಂಬ) ಎಂಬ ಭಾರತದ ದೃಷ್ಟಿಕೋನವನ್ನು ಉಲ್ಲೇಖಿಸಿದ ಶ್ರೀ ಬಿರ್ಲಾ, ಬ್ರಿಕ್ಸ್ ಯಾವುದೇ ದೇಶಕ್ಕೆ ಸವಾಲಲ್ಲ ಅಥವಾ ಯಾರನ್ನೂ ಸವಾಲೊಡ್ಡುವುದು ಇದರ ಉದ್ದೇಶವಲ್ಲ ಎಂದು ಸ್ಪಷ್ಟಪಡಿಸಿದರು. ಬದಲಾಗಿ, ಇದರ ಮೂಲ ತತ್ವವು ಎಲ್ಲಾ ರಾಷ್ಟ್ರಗಳ ಸಮೃದ್ಧಿ ಮತ್ತು ಯೋಗಕ್ಷೇಮವನ್ನು ಒಳಗೊಂಡಿದೆ. ಭಾರತದ ದೃಷ್ಟಿಕೋನವು ಬ್ರಿಕ್ಸ್‌ನ ಆಚೆಗೂ ವಿಸ್ತರಿಸಿದೆ ಮತ್ತು ಜಾಗತಿಕ ಕಲ್ಯಾಣ ಹಾಗೂ ಸಹಕಾರದ ಪ್ರಯತ್ನದಲ್ಲಿ ಪ್ರತಿಯೊಂದು ದೇಶಕ್ಕೂ ತನ್ನದೇ ಆದ ಮಹತ್ವವಿದೆ ಎಂದು ಅವರು ಪುನರುಚ್ಚರಿಸಿದರು.

ಮಹಿಳಾ ಸಬಲೀಕರಣಕ್ಕಾಗಿ ಭಾರತ ಕೈಗೊಂಡಿರುವ ಪ್ರಯತ್ನಗಳನ್ನು ವಿವರಿಸಿದ ಶ್ರೀ ಬಿರ್ಲಾ, 'ಸ್ವಸಹಾಯ ಗುಂಪುಗಳು', 'ಲಕ್ಷಪತಿ ದೀದಿ' ಮತ್ತು 'ಡ್ರೋನ್ ದೀದಿ' ಯಂತಹ ಉಪಕ್ರಮಗಳನ್ನು ಉಲ್ಲೇಖಿಸಿದರು. ಇವು ಮಹಿಳೆಯರು ಆರ್ಥಿಕವಾಗಿ ಸ್ವತಂತ್ರರಾಗಲು ಮತ್ತು ಸ್ವಾವಲಂಬಿಗಳಾಗಲು ಅವಕಾಶಗಳನ್ನು ಸೃಷ್ಟಿಸುತ್ತಿವೆ. ಆರ್ಥಿಕ ಸೇರ್ಪಡೆ ಹಾಗೂ ಸಾಮಾಜಿಕ-ಆರ್ಥಿಕ ಪರಿವರ್ತನೆಯಲ್ಲಿ ಮಹಿಳೆಯರು ನಿರ್ಣಾಯಕ ಪಾತ್ರ ವಹಿಸುತ್ತಿದ್ದಾರೆ ಎಂದು ಅವರು ಹೇಳಿದರು. ಭಾರತದ ಸಂವಿಧಾನವು ಪ್ರತಿಯೊಬ್ಬ ವ್ಯಕ್ತಿಗೂ ಸಮಾನತೆಯನ್ನು ಖಾತರಿಪಡಿಸುತ್ತದೆ ಮತ್ತು ಸಂವಿಧಾನ ಜಾರಿಗೆ ಬಂದಾಗಿನಿಂದಲೂ ಭಾರತದಲ್ಲಿ ಮಹಿಳೆಯರು ಮತದಾನದ ಹಕ್ಕನ್ನು ಹೊಂದಿದ್ದಾರೆ ಎಂದು ಅವರು ನೆನಪಿಸಿದರು. ಮಹಿಳೆಯರಿಗೆ ಸಮಾನ ಅವಕಾಶಗಳು, ಘನತೆ, ಸುರಕ್ಷತೆ ಮತ್ತು ಗೌಪ್ಯತೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ನಿರಂತರವಾಗಿ ಶ್ರಮಿಸುತ್ತಿದೆ ಎಂದು ಅವರು ತಿಳಿಸಿದರು.

'ನಾರಿ ಶಕ್ತಿ ವಂದನ ಅಧಿನಿಯಮ'ವು ಪಂಚಾಯತ್‌ಗಳಿಂದ ಸಂಸತ್ತಿನವರೆಗೆ ಮಹಿಳೆಯರ ರಾಜಕೀಯ ಭಾಗವಹಿಸುವಿಕೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಒಂದು ಐತಿಹಾಸಿಕ ಮತ್ತು ದೂರಗಾಮಿ ಉಪಕ್ರಮವಾಗಿದೆ ಎಂದು ಶ್ರೀ ಬಿರ್ಲಾ ಹೇಳಿದರು. ಶಿಕ್ಷಣ, ತಂತ್ರಜ್ಞಾನ, ಡಿಜಿಟಲ್ ಸೇವೆಗಳು ಮತ್ತು ಆರ್ಥಿಕ ಸಂಪನ್ಮೂಲಗಳಿಗೆ ಮಹಿಳೆಯರಿಗೆ ಸಮಾನ ಪ್ರವೇಶವನ್ನು ಕಲ್ಪಿಸುವುದು ಅತ್ಯಗತ್ಯ ಎಂದು ಹೇಳಿದ ಅವರು, ಕೇವಲ 'ಮಹಿಳಾ ಸಬಲೀಕರಣ'ದ ಪರಿಕಲ್ಪನೆಯನ್ನು ಮೀರಿ, 'ಮಹಿಳಾ ನೇತೃತ್ವದ ಅಭಿವೃದ್ಧಿ'ಯ ದೃಷ್ಟಿಕೋನವನ್ನು ಸಾಕಾರಗೊಳಿಸುವ ಅಗತ್ಯವಿದೆ ಎಂದು ಕರೆ ನೀಡಿದರು. ಇದರಿಂದ ಮಹಿಳೆಯರು ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಕೇವಲ ಭಾಗಿದಾರರಾಗಿ ಉಳಿಯದೆ, ಅಭಿವೃದ್ಧಿಯ ದಿಕ್ಕನ್ನು ರೂಪಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಲು ಸಾಧ್ಯವಾಗುತ್ತದೆ.

ಲೋಕಸಭಾ ಸ್ಪೀಕರ್ ಅವರು ಬನಸ್ಥಲಿ ವಿದ್ಯಾಪೀಠದ ಪರಂಪರೆಯನ್ನು ಶ್ಲಾಘಿಸಿದರು. ಕೇವಲ ಐವರು ವಿದ್ಯಾರ್ಥಿನಿಯರೊಂದಿಗೆ ಪ್ರಾರಂಭವಾದ ಈ ಸಂಸ್ಥೆಯು, ಇಂದು ಸುಮಾರು 18,000 ವಿದ್ಯಾರ್ಥಿನಿಯರನ್ನು ಹೊಂದಿರುವ ಮಹಿಳಾ ಶಿಕ್ಷಣದ ಪ್ರತಿಷ್ಠಿತ ಕೇಂದ್ರವಾಗಿ ಬೆಳೆದಿರುವುದನ್ನು ಸ್ಮರಿಸಿದರು. ಇದರ ಸಂಸ್ಥಾಪಕರಾದ ಪಂಡಿತ್ ಹೀರಾ ಲಾಲ್ ಶಾಸ್ತ್ರಿ ಮತ್ತು ಶ್ರೀಮತಿ ರತನ್ ಶಾಸ್ತ್ರಿ ಅವರಿಗೆ ಗೌರವ ಸಲ್ಲಿಸಿದರು. ಮಹಾತ್ಮ ಗಾಂಧಿಯವರ ಆದರ್ಶಗಳು, ಸ್ವಾತಂತ್ರ್ಯ ಚಳವಳಿ ಮತ್ತು ರಾಷ್ಟ್ರ ನಿರ್ಮಾಣದ ಸ್ಫೂರ್ತಿಯಿಂದ ಇವರ ದೂರದೃಷ್ಟಿ ಪ್ರೇರಿತವಾಗಿತ್ತು. ಈ ಸಂಸ್ಥೆಯ ವಿದ್ಯಾರ್ಥಿನಿಯರು ತಂತ್ರಜ್ಞಾನ, ವಿಮಾನಯಾನ ಮತ್ತು ಅಶ್ವಸವಾರಿ (ಕುದುರೆ ಸವಾರಿ) ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತರಬೇತಿ ಪಡೆಯುತ್ತಾರೆ ಮತ್ತು ಸಶಸ್ತ್ರ ಪಡೆಗಳು, ವಿಜ್ಞಾನ ಹಾಗೂ ಇತರ ಪ್ರಮುಖ ವಲಯಗಳಲ್ಲಿ ನಾಯಕತ್ವದ ಸ್ಥಾನಗಳನ್ನು ಅಲಂಕರಿಸಿದ್ದಾರೆ ಎಂದು ಅವರು ಉಲ್ಲೇಖಿಸಿದರು.

ಬ್ರಿಕ್ಸ್ ರಾಷ್ಟ್ರಗಳ ಮಹಿಳಾ ನಾಯಕಿಯರು ತಮ್ಮ ಅನುಭವಗಳನ್ನು ವಿನಿಮಯ ಮಾಡಿಕೊಳ್ಳಲು, ಉತ್ತಮ ಪದ್ಧತಿಗಳನ್ನು ಹಂಚಿಕೊಳ್ಳಲು ಮತ್ತು ದೀರ್ಘಕಾಲೀನ ಪಾಲುದಾರಿಕೆಗಳನ್ನು ರೂಪಿಸಿಕೊಳ್ಳಲು ಈ ಶೃಂಗಸಭೆಯು ಒಂದು ಅರ್ಥಪೂರ್ಣ ವೇದಿಕೆಯನ್ನು ಒದಗಿಸುತ್ತದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು. ಬನಸ್ಥಲಿ ವಿದ್ಯಾಪೀಠದಲ್ಲಿ ಹಂಚಿಕೊಳ್ಳಲಾದ ಹೊಸ ಆಲೋಚನೆಗಳು, ನಾವೀನ್ಯತೆಗಳು ಮತ್ತು ಅನುಭವಗಳು, ಮಾನವಕುಲದ ಕಲ್ಯಾಣಕ್ಕಾಗಿ ಒಟ್ಟಾಗಿ ಕೆಲಸ ಮಾಡಲು ಬ್ರಿಕ್ಸ್ ರಾಷ್ಟ್ರಗಳಿಗೆ ಸ್ಫೂರ್ತಿಯಾಗಲಿವೆ ಎಂದು ಅವರು ಆಶಿಸಿದರು. ಬದಲಾವಣೆಯ ಪ್ರಕ್ರಿಯೆಯಲ್ಲಿ ಮಹಿಳೆಯರು ಕೇವಲ ಭಾಗಿದಾರರಾಗಿರದೇ, ಆ ಬದಲಾವಣೆಯನ್ನು ರೂಪಿಸುವ ಪ್ರಮುಖ ರೂವಾರಿಗಳಾಗಿರಬೇಕು ಎಂಬುದನ್ನು ಇದು ಖಚಿತಪಡಿಸುತ್ತದೆ.

2026ರ ನವೆಂಬರ್ 21 ರಿಂದ 23 ರವರೆಗೆ ನಡೆಯಲಿರುವ 'ಬ್ರಿಕ್ಸ್ ಮಹಿಳಾ ನಾಯಕಿಯರ ಶೃಂಗಸಭೆ'ಯು, ಮಹಿಳಾ ನಾಯಕತ್ವ, ರಾಜಕೀಯ ಭಾಗವಹಿಸುವಿಕೆ, ಸಾಮರ್ಥ್ಯ ವೃದ್ಧಿ, ಡಿಜಿಟಲ್ ಭದ್ರತೆ ಮತ್ತು ಸೈಬರ್ ಸುರಕ್ಷತೆಯಂತಹ ನಿರ್ಣಾಯಕ ವಿಷಯಗಳ ಕುರಿತು ಚರ್ಚಿಸಲು ಒಂದು ಪ್ರಮುಖ ಅಂತರರಾಷ್ಟ್ರೀಯ ವೇದಿಕೆಯಾಗಿದೆ. ವಿವಿಧ ರಾಷ್ಟ್ರಗಳ ನಡುವೆ ಅನುಭವಗಳು ಮತ್ತು ಉತ್ತಮ ಪದ್ಧತಿಗಳನ್ನು ಹಂಚಿಕೊಳ್ಳುವ ಮೂಲಕ, ಮಹಿಳಾ ಸಬಲೀಕರಣ ಮತ್ತು ನಾಯಕತ್ವವನ್ನು ಉತ್ತೇಜಿಸಲು ಸಹಕಾರದ ಹೊಸ ಮಾರ್ಗಗಳನ್ನು ಕಂಡುಕೊಳ್ಳುವುದು ಈ ಶೃಂಗಸಭೆಯ ಗುರಿಯಾಗಿದೆ. ಬ್ರಿಕ್ಸ್ ಮತ್ತು ಪಾಲುದಾರ ರಾಷ್ಟ್ರಗಳ ಮಹಿಳಾ ಸಂಸದರು, ನೀತಿ ನಿರೂಪಕರು, ಶಿಕ್ಷಣ ತಜ್ಞರು, ಉದ್ಯಮಿಗಳು ಮತ್ತು ಇತರ ಗಣ್ಯ ಪ್ರತಿನಿಧಿಗಳು ಈ ಶೃಂಗಸಭೆಯಲ್ಲಿ ಭಾಗವಹಿಸುತ್ತಿದ್ದಾರೆ.

 

*****


(ಪ್ರಕಟಣೆ ಐ.ಡಿ.: 2339568) ವಿಸಿಟರ್ ಕೌಂಟರ್ : 7
ಪ್ರಕಟಣೆಯನ್ನು ಇದರಲ್ಲಿ ಓದಿ: English , हिन्दी , Gujarati , Tamil