ಪ್ರಕಟಣಾ ದಿನಾಂಕ:
20 NOV 2026 5:23PM by PIB Bengaluru
ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಪ್ರಸ್ತುತ ಮಧುಮೇಹಕ್ಕೆ ಸಂಬಂಧಿಸಿದ ಹನ್ನೆರಡಕ್ಕೂ ಹೆಚ್ಚು ಸಂಶೋಧನಾ ಯೋಜನೆಗಳು ಪ್ರಗತಿಯಲ್ಲಿದ್ದು, ಇವುಗಳಲ್ಲಿ ಹೆಚ್ಚಿನವು ಜೈವಿಕ ತಂತ್ರಜ್ಞಾನ ಇಲಾಖೆ (ಡಿಬಿಟಿ) ಮೂಲಕ ಹಾಗೂ ಕೆಲವು ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ (ಸಿಎಸ್ಐಆರ್) ಮೂಲಕ ನಡೆಯುತ್ತಿವೆ. ಈ ಮೂಲಕ ಮಧುಮೇಹ, ಆನುವಂಶಿಕ ಕಾಯಿಲೆಗಳು ಮತ್ತು ಮುಂದಿನ ತಲೆಮಾರಿನ ಆರೋಗ್ಯ ಪರಿಹಾರಗಳ ಸಂಶೋಧನೆಯಲ್ಲಿ ಭಾರತ ಜಾಗತಿಕ ಕೇಂದ್ರವಾಗಿ ಹೊರಹೊಮ್ಮುತ್ತಿದೆ ಎಂದು ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್ ಇಂದು ಹೇಳಿದರು.
ಮುಂದಿನ ತಲೆಮಾರಿನ ಆಣ್ವಿಕ ಮತ್ತು ಆನುವಂಶಿಕ ಪರಿಹಾರಗಳ ಮೂಲಕ ಮಧುಮೇಹವನ್ನು ತಡೆಗಟ್ಟುವ ಹಾಗೂ ನಿಯಂತ್ರಿಸುವ ನಿಟ್ಟಿನಲ್ಲಿ ಸಂಶೋಧನೆ ಹೆಚ್ಚು ಗಮನಹರಿಸುತ್ತಿದೆ ಎಂದು ಒತ್ತಿಹೇಳಿದ ಡಾ. ಸಿಂಗ್, ಭಾರತದ ಬೃಹತ್ ಜನಸಂಖ್ಯೆ ಮತ್ತು ಆನುವಂಶಿಕ ವೈವಿಧ್ಯತೆಯು ದೇಶಕ್ಕೆ ಮಾತ್ರವಲ್ಲದೆ ಇಡೀ ಜಗತ್ತಿಗೂ ಉಪಯುಕ್ತವಾಗಬಲ್ಲ ವೈಜ್ಞಾನಿಕ ಒಳನೋಟಗಳು ಮತ್ತು ಆರೋಗ್ಯ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ವಿಶಿಷ್ಟ ಅವಕಾಶವನ್ನು ಒದಗಿಸಿವೆ ಎಂದರು. ಭಾರತದ ಯುವಜನರಲ್ಲಿ ಸ್ಥೂಲಕಾಯ ಮತ್ತು ಮಧುಮೇಹವನ್ನು ತಡೆಗಟ್ಟುವುದು ಕೇವಲ ವೈದ್ಯಕೀಯ ಸವಾಲಲ್ಲ, ಅದೊಂದು ರಾಷ್ಟ್ರೀಯ ಹೊಣೆಗಾರಿಕೆಯಾಗಿದೆ. ಇದಕ್ಕಾಗಿ ಆರೋಗ್ಯ ಕ್ಷೇತ್ರದವರಷ್ಟೇ ಅಲ್ಲದೆ, ಎಲ್ಲರೂ ಒಗ್ಗೂಡಿ ಕಾರ್ಯನಿರ್ವಹಿಸಬೇಕಿದೆ ಎಂದು ಅವರು ಹೇಳಿದರು.
ನವೆಂಬರ್ 19ರಿಂದ 22ರವರೆಗೆ ಬೆಂಗಳೂರಿನಲ್ಲಿ ನಡೆಯುತ್ತಿರುವ ʼಆರ್ಎಸ್ಎಸ್ಡಿಐ 2026ʼ ಸಮ್ಮೇಳನದ ಉದ್ಘಾಟನಾ ಸಮಾರಂಭವನ್ನುದ್ದೇಶಿಸಿ ಡಾ. ಜಿತೇಂದ್ರ ಸಿಂಗ್ ಮಾತನಾಡಿದರು. ಈ ಸಮ್ಮೇಳನದಲ್ಲಿ ದೇಶದ ವಿವಿಧ ಭಾಗಗಳು ಹಾಗೂ ವಿದೇಶಗಳಿಂದ ಪ್ರಮುಖ ಮಧುಮೇಹ ತಜ್ಞರು, ವೈದ್ಯರು, ಸಂಶೋಧಕರು, ಶಿಕ್ಷಣ ತಜ್ಞರು ಮತ್ತು ಆರೋಗ್ಯ ವೃತ್ತಿಪರರು ಭಾಗವಹಿಸಿದ್ದಾರೆ. ಕರ್ನಾಟಕ ಸರ್ಕಾರದ ಬೃಹತ್ ಬೆಂಗಳೂರು ಅಭಿವೃದ್ಧಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಶ್ರೀ ಕೃಷ್ಣ ಬೈರೇಗೌಡ ಹಾಗೂ ಸಂಸದ ಡಾ. ಸಿ. ಎನ್. ಮಂಜುನಾಥ್ ಸೇರಿದಂತೆ ಹಲವು ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಫೆಲೋಶಿಪ್ಗಳ ವಿತರಣೆ, ಪ್ರಶಸ್ತಿ ಪುರಸ್ಕೃತರಿಗೆ ಗೌರವ ಸಮರ್ಪಣೆ ಹಾಗೂ ಪುಸ್ತಕಗಳು ಮತ್ತು ಮಾರ್ಗಸೂಚಿಗಳ ಬಿಡುಗಡೆಗಳೂ ನಡೆದವು.
ಭಾರತದ ವೈಜ್ಞಾನಿಕ ಮತ್ತು ಆರೋಗ್ಯ ಕ್ಷೇತ್ರದ ಸಾಮರ್ಥ್ಯಗಳಲ್ಲಿ ಮಹತ್ವದ ಪರಿವರ್ತನೆಯಾಗಿದೆ. ಈ ಹಿಂದೆ ಹೊರಗಿನ ಪರಿಹಾರಗಳನ್ನು ಅವಲಂಬಿಸಿದ್ದ ಭಾರತ ಈಗ ಸ್ವದೇಶಿ ಲಸಿಕೆಗಳು, ಚಿಕಿತ್ಸಾ ವಿಧಾನಗಳು, ಪ್ರತಿಜೀವಕಗಳು (ಆಂಟಿಬಯೋಟಿಕ್ಸ್) ಮತ್ತು ಸುಧಾರಿತ ವೈದ್ಯಕೀಯ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ಸಚಿವರು ಹೇಳಿದರು. ಭಾರತದ ಡಿಎನ್ಎ ಆಧಾರಿತ ಕೋವಿಡ್-19 ಲಸಿಕೆ, ಸ್ವದೇಶಿ ಆಂಟಿಬಯೋಟಿಕ್ಸ್, ಆನುವಂಶಿಕ ಚಿಕಿತ್ಸೆಗಳ ಸಂಶೋಧನೆ, ಬಯೋಸಿಮಿಲರ್ಗಳು ಮತ್ತು 'ಇಂಡಿಯಾ ಜೀನೋಮ್ ಸ್ಟಡಿ'ಯನ್ನು ಉಲ್ಲೇಖಿಸಿದ ಅವರು, ನವೀನ ವಿಧಾನಗಳ ಮೂಲಕ ಸಂಕೀರ್ಣ ಆರೋಗ್ಯ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುತ್ತಿರುವ ಭಾರತದ ಸಂಶೋಧನಾ ವ್ಯವಸ್ಥೆಯು ದೇಶವನ್ನು ವೈಜ್ಞಾನಿಕ ಸಂಶೋಧನೆಯಲ್ಲಿ ಮುಂಚೂಣಿಯ ಕೊಡುಗೆದಾರನನ್ನಾಗಿ ರೂಪಿಸಿದೆ ಎಂದರು. ಎಚ್ಪಿವಿ, ಡೆಂಗ್ಯೂ ಮತ್ತು ಮಲೇರಿಯಾದಂತಹ ಕಾಯಿಲೆಗಳ ವಿರುದ್ಧದ ಲಸಿಕೆ ಅಭಿವೃದ್ಧಿ ಪ್ರಕ್ರಿಯೆ ಹಾಗೂ ಆನುವಂಶಿಕ ಚಿಕಿತ್ಸಾ ಕ್ಷೇತ್ರದಲ್ಲಿನ ಪ್ರಗತಿಯನ್ನೂ ಅವರು ಉಲ್ಲೇಖಿಸಿದರು. ಇವೆಲ್ಲವೂ ಭಾರತದ ಜೈವಿಕ ವೈದ್ಯಕೀಯ ಸಂಶೋಧನೆಯ ವಿಸ್ತರಿಸುತ್ತಿರುವ ವ್ಯಾಪ್ತಿಯನ್ನು ತೋರಿಸುತ್ತವೆ ಎಂದರು.
ನಿಖರ ವೈದ್ಯಕೀಯ ಚಿಕಿತ್ಸೆ ಮತ್ತು ಆಣ್ವಿಕ ಮಟ್ಟದ ಚಿಕಿತ್ಸಾ ವಿಧಾನಗಳ ಮೇಲೆ ಹೆಚ್ಚುತ್ತಿರುವ ಗಮನವು ಟೈಪ್-2 ಮಧುಮೇಹ, ಅದಕ್ಕೆ ಸಂಬಂಧಿಸಿದ ಚಯಾಪಚಯ ಅಸ್ವಸ್ಥತೆಗಳು ಹಾಗೂ ಅವುಗಳನ್ನು ತಡೆಗಟ್ಟುವ ಮಾರ್ಗಗಳನ್ನು ಅರ್ಥಮಾಡಿಕೊಳ್ಳಲು ಹೊಸ ಅವಕಾಶಗಳನ್ನು ತೆರೆದಿದೆ. ವಿಶೇಷವಾಗಿ ಯುವಜನರಲ್ಲಿ ಇಂತಹ ಕಾಯಿಲೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಇದು ಮಹತ್ವದ್ದಾಗಿದೆ ಎಂದು ಡಾ. ಜಿತೇಂದ್ರ ಸಿಂಗ್ ಹೇಳಿದರು. ಸರ್ಕಾರಿ ಸಂಶೋಧನಾ ಸಂಸ್ಥೆಗಳು, ಖಾಸಗಿ ವಲಯದ ಸಂಶೋಧಕರು, ವೈದ್ಯರು, ನವೋದ್ಯಮಗಳು ಮತ್ತು ವೈದ್ಯಕೀಯ ಸಂಘಟನೆಗಳ ನಡುವೆ ಹೆಚ್ಚಿನ ಸಹಯೋಗಕ್ಕೆ ಅವರು ಕರೆ ನೀಡಿದರು. ವೈಜ್ಞಾನಿಕ ಸಂಶೋಧನೆಗಳ ಫಲಿತಾಂಶಗಳನ್ನು ಪ್ರಾಯೋಗಿಕ ಆರೋಗ್ಯ ಪರಿಹಾರಗಳಾಗಿ ಪರಿವರ್ತಿಸಲು ಅನ್ವಯಿಕ ಸಂಶೋಧನೆ ಮತ್ತು ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಅತ್ಯಗತ್ಯ ಎಂದು ಅವರು ತಿಳಿಸಿದರು.
ಪ್ರಸ್ತುತ ನಡೆಯುತ್ತಿರುವ ಪ್ರಮುಖ ಸಂಶೋಧನಾ ಉಪಕ್ರಮಗಳಲ್ಲಿ ಭಾರತ-ಡೆನ್ಮಾರ್ಕ್ ಸಹಯೋಗದ ಅಧ್ಯಯನವೂ ಒಂದಾಗಿದೆ. ಮಧುಮೇಹ ಪೂರ್ವ ಹಂತದಲ್ಲಿರುವವರು ಮತ್ತು ಮಧುಮೇಹಿಗಳ ಕರುಳಿನ ಸೂಕ್ಷ್ಮಜೀವಿ ಸಮುದಾಯದಲ್ಲಿ ಕಂಡುಬರುವ ಭಾರತಕ್ಕೆ ನಿರ್ದಿಷ್ಟವಾದ ಬದಲಾವಣೆಗಳನ್ನು ಈ ಅಧ್ಯಯನದಲ್ಲಿ ಪರಿಶೀಲಿಸಲಾಗುತ್ತಿದೆ. ಚಯಾಪಚಯ ಅಸ್ವಸ್ಥತೆಗಳಲ್ಲಿ ಕರುಳಿನ ಸೂಕ್ಷ್ಮಜೀವಿಗಳ ಮಾದರಿಗಳ ಪಾತ್ರವನ್ನು ಇನ್ನಷ್ಟು ಚೆನ್ನಾಗಿ ಅರ್ಥಮಾಡಿಕೊಳ್ಳುವುದು ಇದರ ಉದ್ದೇಶವಾಗಿದೆ ಎಂದು ಅವರು ಹೇಳಿದರು.
ಇನ್ನೊಂದು ಡಿಬಿಟಿ ಬೆಂಬಲಿತ ಅಧ್ಯಯನದಲ್ಲಿ, ಜಿಎಲ್ಪಿ-1 ಉತ್ಪಾದಿಸುವ ಸಾಮರ್ಥ್ಯ ಹೊಂದಿರುವ ತಳೀಯವಾಗಿ ಮಾರ್ಪಡಿಸಿದ ಇ. ಕೋಲಿ ನಿಸ್ಲೆ 1917 ಬ್ಯಾಕ್ಟೀರಿಯಾವನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಜಠರ-ಕರುಳಿನ ಮೂಲಕ ಚಿಕಿತ್ಸಕ ಅಣುಗಳನ್ನು ದೇಹಕ್ಕೆ ತಲುಪಿಸುವ ಪ್ರೋಬಯಾಟಿಕ್ ಆಧಾರಿತ ವಿಧಾನವಾಗಿ ಇದನ್ನು ಅಭಿವೃದ್ಧಿಪಡಿಸುವ ಸಾಧ್ಯತೆಗಳಿವೆ. ಈ ಸಂಬಂಧ ಮಾನವರ ಮೇಲೆ ಅಧ್ಯಯನಗಳನ್ನು ಕೈಗೊಳ್ಳುವ ನಿರೀಕ್ಷೆಯಿದೆ. ಅಲ್ಲದೆ, ಬಿಆರ್ಐಸಿ-ಟಿಎಚ್ಎಸ್ಟಿಐನಲ್ಲಿ ನಡೆಯುತ್ತಿರುವ ಸಂಶೋಧನೆಯು ಜಿಎಲ್ಪಿ-1 ಅನಲಾಗ್ಗಳನ್ನು ಕರುಳಿಗೆ ಸಂಬಂಧಿಸಿದ ಬ್ಯಾಕ್ಟೀರಿಯಾಗಳಲ್ಲಿ ಉತ್ಪಾದಿಸುವ ಸಾಧ್ಯತೆಗಳನ್ನು ಪರಿಶೀಲಿಸುತ್ತಿದೆ. ಜಿಎಲ್ಪಿ-1 ಆಧಾರಿತ ಚಿಕಿತ್ಸಾ ವಿಧಾನಗಳನ್ನು ದೇಹಕ್ಕೆ ತಲುಪಿಸುವ ಹೊಸ ಮಾರ್ಗಗಳನ್ನು ಅನ್ವೇಷಿಸುವುದು ಇದರ ಉದ್ದೇಶವಾಗಿದೆ ಎಂದು ಸಚಿವರು ಹೇಳಿದರು.
ಹೃದಯ ಮತ್ತು ಚಯಾಪಚಯ ವ್ಯವಸ್ಥೆಗೆ ಸಂಬಂಧಿಸಿದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಲು ಗರ್ಭಧಾರಣೆಗೆ ಮುನ್ನಿನಿಂದ ಹಿಡಿದು ಬಾಲ್ಯದ ಆರಂಭಿಕ ಹಂತದವರೆಗೆ ಕೈಗೊಳ್ಳಬಹುದಾದ ಮಧ್ಯಸ್ಥಿಕೆಗಳ ಕುರಿತು ನಡೆಯುತ್ತಿರುವ ಸಂಶೋಧನೆಯನ್ನೂ ಸಚಿವರು ಪ್ರಸ್ತಾಪಿಸಿದರು. ಮಕ್ಕಳಲ್ಲಿ ರಕ್ತದಲ್ಲಿನ ಗ್ಲೂಕೋಸ್ ಮಟ್ಟ, ರಕ್ತದೊತ್ತಡ ಮತ್ತು ದೇಹದಲ್ಲಿ ಕೊಬ್ಬಿನ ಪ್ರಮಾಣವನ್ನು ನಿಯಂತ್ರಿಸುವುದು ಈ ಸಂಶೋಧನೆಯ ಪ್ರಮುಖ ಉದ್ದೇಶಗಳಾಗಿವೆ. ಮೈಸೂರಿನ ಗ್ರಾಮೀಣ ಭಾಗದಲ್ಲಿ ನಡೆಯುತ್ತಿರುವ 'ಐನ್ಸ್ಟೀನ್' (EINSTEIN) ಅಧ್ಯಯನವನ್ನೂ ಅವರು ಉಲ್ಲೇಖಿಸಿದರು. ಈ ಉಪಕ್ರಮಗಳು ತಡೆಗಟ್ಟುವ ಆರೋಗ್ಯ ಸೇವೆಗಳ ಕಾರ್ಯತಂತ್ರಗಳನ್ನು ಬಲಪಡಿಸಲು ಹಾಗೂ ಜೀವನದ ಆರಂಭಿಕ ಹಂತಗಳಿಂದಲೇ ಚಯಾಪಚಯ ಸಂಬಂಧಿತ ಅಪಾಯಗಳನ್ನು ಎದುರಿಸಲು ಅಗತ್ಯವಾದ ವೈಜ್ಞಾನಿಕ ಪುರಾವೆಗಳನ್ನು ಒದಗಿಸಬಲ್ಲವು ಎಂದು ಅವರು ಹೇಳಿದರು. ಗರ್ಭಾವಸ್ಥೆಯಲ್ಲಿ ತಾಯಿಯ ಪೌಷ್ಟಿಕತೆಯು ಮುಂದಿನ ಪೀಳಿಗೆಯ ಚಯಾಪಚಯ ಆರೋಗ್ಯದ ಮೇಲೆ ಬೀರುವ ಪರಿಣಾಮಗಳ ಕುರಿತ ಸಂಶೋಧನೆಯನ್ನೂ ಅವರು ಪ್ರಸ್ತಾಪಿಸಿದರು.
ಪ್ರಗತಿಯಲ್ಲಿರುವ ಇತರ ಸಂಶೋಧನಾ ಯೋಜನೆಗಳ ಕುರಿತು ಮಾತನಾಡಿದ ಡಾ. ಜಿತೇಂದ್ರ ಸಿಂಗ್, ಗರ್ಭಾವಸ್ಥೆಯಲ್ಲಿ ಮಧುಮೇಹ (ಗೆಸ್ಟೇಷನಲ್ ಡಯಾಬಿಟಿಸ್) ಹೊಂದಿದ್ದ ಮಹಿಳೆಯರಲ್ಲಿ ಮುಂದೆ ಟೈಪ್-2 ಮಧುಮೇಹ ಬರುವ ಸಾಧ್ಯತೆಯನ್ನು ಮುನ್ಸೂಚಿಸಲು ಜೈವಿಕ ಗುರುತುಗಳನ್ನು (ಬಯೋಮಾರ್ಕರ್ಗಳು) ಗುರುತಿಸುವ ನಿಟ್ಟಿನಲ್ಲಿ ಎಕ್ಸೋಸೋಮ್ ಪ್ರೊಫೈಲಿಂಗ್ ಮತ್ತು ಮೆಟಬೊಲೊಮಿಕ್ಸ್ ತಂತ್ರಜ್ಞಾನಗಳನ್ನು ಸಂಯೋಜಿಸಿ ನಡೆಸಲಾಗುತ್ತಿರುವ ಸಂಶೋಧನೆಯನ್ನು ಉಲ್ಲೇಖಿಸಿದರು. ಟೈಪ್-2 ಮಧುಮೇಹ ಮತ್ತು ಚಯಾಪಚಯ ಕ್ರಿಯೆಯ ಅಸಮತೋಲನಕ್ಕೆ ಸಂಬಂಧಿಸಿದ ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆ (ಎಂಎಎಫ್ಎಲ್ಡಿ) ನಡುವಿನ ಸಂಬಂಧ, ಇದರಲ್ಲಿ ಎಸ್100ಎ6 (S100A6) ಮಾರ್ಗದ ಪಾತ್ರ ಹಾಗೂ ಸಂಭಾವ್ಯ ತಟಸ್ಥಗೊಳಿಸುವ ಮೊನೊಕ್ಲೋನಲ್ ಪ್ರತಿಕಾಯದ ಅಭಿವೃದ್ಧಿಗೆ ಸಂಬಂಧಿಸಿದ ಅಧ್ಯಯನಗಳ ಬಗ್ಗೆಯೂ ಅವರು ತಿಳಿಸಿದರು. ಹೈಪರ್ಇನ್ಸುಲಿನಿಮಿಯಾ, ಯಕೃತ್ತಿನ ಎಸ್ಐಆರ್ಟಿ1 ಮತ್ತು ದೇಹದಾದ್ಯಂತ ಇನ್ಸುಲಿನ್ ಪ್ರತಿರೋಧದ ಕುರಿತ ಸಂಶೋಧನೆಯನ್ನೂ ಅವರು ಪ್ರಸ್ತಾಪಿಸಿದರು. ರೈಬೋಸೋಮಲ್ ಪ್ರೋಟೀನ್ಗಳು ಮತ್ತು ಇನ್ಸುಲಿನ್ ಸಂಕೇತ ರವಾನೆಯ ಕುರಿತ ಅಧ್ಯಯನಗಳು ಹಾಗೂ ಮಧುಮೇಹದಿಂದ ಉಂಟಾಗುವ ಅಸ್ಥಿಪಂಜರದ ಸ್ನಾಯುಗಳ ಕ್ಷೀಣತೆಯನ್ನು ತಡೆಗಟ್ಟುವುದರ ಜೊತೆಗೆ ರಕ್ತದಲ್ಲಿನ ಗ್ಲೂಕೋಸ್ ನಿಯಂತ್ರಣವನ್ನು ಸುಧಾರಿಸುವ ಸಾಮರ್ಥ್ಯ ಹೊಂದಿರುವ ಅರಾಚಿಡೋನಿಕ್ ಆಮ್ಲದ ಕುರಿತ ಸಂಶೋಧನೆಯನ್ನೂ ಅವರು ಉಲ್ಲೇಖಿಸಿದರು.
ಸ್ಥೂಲಕಾಯ ಮತ್ತು ಟೈಪ್-2 ಮಧುಮೇಹಕ್ಕೆ ಸಂಭಾವ್ಯ ಚಿಕಿತ್ಸಾ ಗುರಿಯಾಗಿ ಮ್ಯಾಕ್ರೋಫೇಜ್ ಜಿಐ (Gi) ಸಂಕೇತ ರವಾನೆಯ ಕುರಿತ ಉದಯೋನ್ಮುಖ ಸಂಶೋಧನೆಯನ್ನೂ ಸಚಿವರು ಉಲ್ಲೇಖಿಸಿದರು. ಈ ಸಂಶೋಧನೆಯ ಫಲಿತಾಂಶಗಳು ಸೆಪ್ಟೆಂಬರ್ 2026ರಲ್ಲಿ 'ಜರ್ನಲ್ ಆಫ್ ಕ್ಲಿನಿಕಲ್ ಇನ್ವೆಸ್ಟಿಗೇಷನ್'ನಲ್ಲಿ ಪ್ರಕಟವಾಗಿವೆ. ಇನ್ಸುಲಿನ್ ಅನ್ನು ಸಂಗ್ರಹಿಸುವುದು ಮತ್ತು ಸಾಗಿಸುವುದನ್ನು ಸುಲಭಗೊಳಿಸಲು ತಾಪಮಾನ ಬದಲಾವಣೆಗಳನ್ನು ತಡೆದುಕೊಳ್ಳುವ ಸಾಮರ್ಥ್ಯವಿರುವ ಇನ್ಸುಲಿನ್ ಅಭಿವೃದ್ಧಿಪಡಿಸುವ ಪ್ರಯತ್ನಗಳು ಹಾಗೂ ಬಾಯಿಯ ಮೂಲಕ ಸೇವಿಸಬಹುದಾದ ಇನ್ಸುಲಿನ್ ಅಭಿವೃದ್ಧಿಪಡಿಸಲು ನವೋದ್ಯಮಗಳು ನಡೆಸುತ್ತಿರುವ ಸಂಶೋಧನೆಯನ್ನೂ ಅವರು ಪ್ರಸ್ತಾಪಿಸಿದರು. ಹೊಸ ಆರೋಗ್ಯ ಪರಿಹಾರಗಳ ಅಭಿವೃದ್ಧಿಯಲ್ಲಿ ಸಂಸ್ಥೆಗಳ ಬೆಂಬಲ, ತಂತ್ರಜ್ಞಾನ ಅಭಿವೃದ್ಧಿ ಮತ್ತು ಹೊಸ ಪ್ರಯೋಗಗಳನ್ನು ಕೈಗೊಳ್ಳುವ ಮನೋಭಾವದ ಮಹತ್ವವನ್ನು ಈ ಪ್ರಯತ್ನಗಳು ಎತ್ತಿತೋರಿಸುತ್ತವೆ ಎಂದರು. ಲಿರಾಗ್ಲುಟೈಡ್ ಮತ್ತು ಇನ್ಸುಲಿನ್ ಲಿಸ್ಪ್ರೊ ಸೇರಿದಂತೆ ದೇಶೀಯ ಬಯೋಸಿಮಿಲರ್ಗಳ ಅಭಿವೃದ್ಧಿಯಲ್ಲಿಯೂ ಭಾರತ ಪ್ರಗತಿ ಸಾಧಿಸಿದ್ದು, ಕೈಗೆಟುಕುವ ದರದಲ್ಲಿ ಮಧುಮೇಹ ಚಿಕಿತ್ಸೆಯನ್ನು ಒದಗಿಸುವ ದೇಶದ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸಿದೆ ಎಂದು ಅವರು ಹೇಳಿದರು.
ಭಾರತದ ಜನಸಂಖ್ಯೆಯಲ್ಲಿರುವ ವೈವಿಧ್ಯತೆ, ಜೀನೋಮ್ ಸಂಶೋಧನಾ ಸಾಮರ್ಥ್ಯ ಮತ್ತು ವಿಸ್ತರಿಸುತ್ತಿರುವ ವೈಜ್ಞಾನಿಕ ಮೂಲಸೌಕರ್ಯವು ಮಹತ್ವದ ವೈದ್ಯಕೀಯ ಸಂಶೋಧನೆಗೆ ಅಪಾರ ಅವಕಾಶಗಳನ್ನು ಒದಗಿಸಿವೆ ಎಂದು ಡಾ. ಜಿತೇಂದ್ರ ಸಿಂಗ್ ಹೇಳಿದರು. 84 ಜನಸಂಖ್ಯಾ ಗುಂಪುಗಳಿಗೆ ಸೇರಿದ 10,000 ವ್ಯಕ್ತಿಗಳನ್ನು ಒಳಗೊಂಡ 'ಇಂಡಿಯಾ ಜೀನೋಮ್ ಸ್ಟಡಿ'ಯನ್ನು ಉಲ್ಲೇಖಿಸಿದ ಅವರು, ದೇಶದ ಆನುವಂಶಿಕ ವೈವಿಧ್ಯತೆಯು ನಿಖರ ವೈದ್ಯಕೀಯ ಚಿಕಿತ್ಸೆಯ ಅಭಿವೃದ್ಧಿಗೆ ಹಾಗೂ ಜಾಗತಿಕ ಆರೋಗ್ಯ ಸಂಶೋಧನೆಗೆ ಕೊಡುಗೆ ನೀಡಲು ಮಹತ್ವದ ವೈಜ್ಞಾನಿಕ ಸಂಪನ್ಮೂಲವಾಗಬಲ್ಲದು ಎಂದರು.
ಸಾರ್ವಜನಿಕರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವುದು ಮತ್ತು ವೈಜ್ಞಾನಿಕ ಮಾಹಿತಿಯನ್ನು ಜವಾಬ್ದಾರಿಯುತವಾಗಿ ಜನರಿಗೆ ತಲುಪಿಸುವ ಅಗತ್ಯವನ್ನು ಒತ್ತಿಹೇಳಿದ ಸಚಿವರು, ಮಧುಮೇಹ, ಸ್ಥೂಲಕಾಯ, ಪೌಷ್ಟಿಕತೆ ಮತ್ತು ತೂಕ ಇಳಿಸುವ ಚಿಕಿತ್ಸೆಗಳ ಕುರಿತ ತಪ್ಪು ಮಾಹಿತಿಯನ್ನು ಹೋಗಲಾಡಿಸಲು ವೈದ್ಯಕೀಯ ಮತ್ತು ವೈಜ್ಞಾನಿಕ ಸಮುದಾಯ ಮುಂದಾಗಬೇಕು ಎಂದು ಕರೆ ನೀಡಿದರು. ತಾವೇ ಪೌಷ್ಟಿಕಾಂಶ ತಜ್ಞರೆಂದು ಹೇಳಿಕೊಳ್ಳುವವರಿಂದ ಹರಡಲಾಗುವ ತಪ್ಪು ಆಹಾರ ಸಲಹೆಗಳು, ಅವೈಜ್ಞಾನಿಕ ಪ್ರತಿಪಾದನೆಗಳು ಮತ್ತು ಸ್ಥೂಲಕಾಯ ನಿಯಂತ್ರಣಕ್ಕಾಗಿ ವೈದ್ಯರ ಶಿಫಾರಸಿಲ್ಲದೆ ಔಷಧಗಳನ್ನು ಬಳಸುವ ಪ್ರವೃತ್ತಿಯ ಬಗ್ಗೆ ಅವರು ಎಚ್ಚರಿಕೆ ನೀಡಿದರು. ಮಾಹಿತಿಯ ಕೊರತೆಗಿಂತ ತಪ್ಪು ಮಾಹಿತಿಯು ಹೆಚ್ಚು ಹಾನಿಯನ್ನುಂಟುಮಾಡಬಹುದು ಎಂದು ಅವರು ಹೇಳಿದರು. ಆರೋಗ್ಯಕ್ಕೆ ಸಂಬಂಧಿಸಿದ ನಿರ್ಧಾರಗಳು ವೈಜ್ಞಾನಿಕ ಪುರಾವೆಗಳು ಮತ್ತು ಜವಾಬ್ದಾರಿಯುತ ವೈದ್ಯಕೀಯ ಸಲಹೆಗಳನ್ನು ಆಧರಿಸಿರುವುದನ್ನು ಖಚಿತಪಡಿಸಿಕೊಳ್ಳಲು ವಿಶ್ವಾಸಾರ್ಹ ವೈಜ್ಞಾನಿಕ ತಜ್ಞರು ಸಮಾಜದೊಂದಿಗೆ ಸಕ್ರಿಯವಾಗಿ ಸಂವಹನ ನಡೆಸಬೇಕು ಎಂದು ಅವರು ಒತ್ತಿಹೇಳಿದರು.
2047ರ ವೇಳೆಗೆ ವಿಕಸಿತ ಭಾರತ ನಿರ್ಮಿಸುವ ಗುರಿಯನ್ನು ಹೊಂದಿರುವ ಭಾರತದಲ್ಲಿ, ಸುಮಾರು ಶೇ.70ರಷ್ಟು ಜನಸಂಖ್ಯೆಯು 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. ಹೀಗಾಗಿ ದೇಶದ ಯುವಜನರ ಆರೋಗ್ಯ, ಶಕ್ತಿ ಮತ್ತು ಉತ್ಪಾದಕ ಸಾಮರ್ಥ್ಯವನ್ನು ಕಾಪಾಡುವುದು ರಾಷ್ಟ್ರೀಯ ಆದ್ಯತೆಯಾಗಿದೆ ಎಂದು ಡಾ. ಜಿತೇಂದ್ರ ಸಿಂಗ್ ಹೇಳಿದರು. ಯುವ ಭಾರತೀಯರಲ್ಲಿ ಸ್ಥೂಲಕಾಯ ಮತ್ತು ಮಧುಮೇಹವನ್ನು ತಡೆಗಟ್ಟುವುದನ್ನು ಮಧುಮೇಹ ತಜ್ಞರು ಅಥವಾ ಆರೋಗ್ಯ ವೃತ್ತಿಪರರ ಹೊಣೆಗಾರಿಕೆಗೆ ಮಾತ್ರ ಸೀಮಿತಗೊಳಿಸದೆ, ವೈಜ್ಞಾನಿಕ ಸಂಸ್ಥೆಗಳು, ವೈದ್ಯಕೀಯ ವೃತ್ತಿಪರರು, ನೀತಿ ನಿರೂಪಕರು ಮತ್ತು ಒಟ್ಟಾರೆ ಸಮಾಜದ ಸಾಮೂಹಿಕ ಹೊಣೆಗಾರಿಕೆಯಾಗಿ ಪರಿಗಣಿಸಬೇಕು ಎಂದು ಅವರು ತಿಳಿಸಿದರು.
ಭಾರತದ ಪ್ರಸ್ತುತ ವೈಜ್ಞಾನಿಕ ಉಪಕ್ರಮಗಳೊಂದಿಗೆ ಹೆಚ್ಚಿನ ರೀತಿಯಲ್ಲಿ ಕೈಜೋಡಿಸಲು, ಸಂಶೋಧನಾ ಸಹಭಾಗಿತ್ವವನ್ನು ಬಲಪಡಿಸಲು ಹಾಗೂ ತಡೆಗಟ್ಟುವ, ಕೈಗೆಟುಕುವ ಮತ್ತು ಮುಂದಿನ ತಲೆಮಾರಿನ ಆರೋಗ್ಯ ಪರಿಹಾರಗಳ ಅಭಿವೃದ್ಧಿಗೆ ಕೊಡುಗೆ ನೀಡುವಂತೆ ಆರ್ಎಸ್ಎಸ್ಡಿಐ ಮತ್ತು ವೈದ್ಯಕೀಯ ಸಂಶೋಧನಾ ಸಮುದಾಯಕ್ಕೆ ಸಚಿವರು ಕರೆ ನೀಡಿದರು. ಮಧುಮೇಹ ಮತ್ತು ಚಯಾಪಚಯ ಆರೋಗ್ಯ ಕ್ಷೇತ್ರದಲ್ಲಿ ಭಾರತದ ವೈಜ್ಞಾನಿಕ ಪ್ರಗತಿಯು ವಿಕಸಿತ ಭಾರತ ನಿರ್ಮಾಣದ ರಾಷ್ಟ್ರೀಯ ಸಂಕಲ್ಪಕ್ಕೂ ಕೊಡುಗೆ ನೀಡಬಲ್ಲದು ಎಂದು ಅವರು ಹೇಳಿದರು.




*****