ಅಂಕಿಅಂಶಗಳು ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ
ಪ್ರಕಟಣಾ ದಿನಾಂಕ:
20 NOV 2026 6:07PM by PIB Bengaluru
ಕೇಂದ್ರ ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯವು 2026ರ ನವೆಂಬರ್ 23ರಂದು ಮುಂಬೈನಲ್ಲಿ ‘ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ), ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಮತ್ತು ಕೈಗಾರಿಕಾ ಉತ್ಪಾದನಾ ಸೂಚ್ಯಂಕದ (ಐಐಪಿ) ಹೊಸ ಸರಣಿಗಳ ಕುರಿತು ದತ್ತಾಂಶ ಬಳಕೆದಾರರ ಸಮ್ಮೇಳನವನ್ನು ಆಯೋಜಿಸುತ್ತಿದೆ. 2026ರಲ್ಲಿ ಈ ಮೂರು ಪ್ರಮುಖ ಸೂಚ್ಯಂಕಗಳ ಹೊಸ ಸರಣಿಗಳನ್ನು ಬಿಡುಗಡೆ ಮಾಡಿದ ಹಿನ್ನೆಲೆಯಲ್ಲಿ ಈ ಸಮ್ಮೇಳನವನ್ನು ಆಯೋಜಿಸಲಾಗುತ್ತಿದೆ. ಈ ಸೂಚ್ಯಂಕಗಳ ಹೊಸ ಸರಣಿಗಳಲ್ಲಿನ ಪದ್ಧತಿಗೆ ಸಂಬಂಧಿಸಿದ ಬದಲಾವಣೆಗಳು, ಬಳಸಲಾದ ದತ್ತಾಂಶ ಮೂಲಗಳು ಮತ್ತು ಪ್ರಮುಖ ಸುಧಾರಣೆಗಳ ಕುರಿತು ದತ್ತಾಂಶ ಬಳಕೆದಾರರಿಗೆ ಪರಿಚಯಿಸುವುದು ಸಮ್ಮೇಳನದ ಉದ್ದೇಶವಾಗಿದೆ.
- 2022-23ರ ಮೂಲ ವರ್ಷವನ್ನು ಆಧರಿಸಿದ ರಾಷ್ಟ್ರೀಯ ಲೆಕ್ಕಪತ್ರಗಳ ಹೊಸ ಸರಣಿಯನ್ನು 2026ರ ಫೆಬ್ರವರಿ 27ರಂದು ಬಿಡುಗಡೆ ಮಾಡಲಾಯಿತು. ಬಳಿಕ, ಐಐಪಿ ಮತ್ತು ಉತ್ಪಾದಕರ ಬೆಲೆ ಸೂಚ್ಯಂಕದ (ಪಿಪಿಐ) ಪರಿಷ್ಕೃತ ಸರಣಿಗಳನ್ನು ಸೇರ್ಪಡೆಗೊಳಿಸಿ 2026ರ ಆಗಸ್ಟ್ನಲ್ಲಿ ಇದನ್ನು ನವೀಕರಿಸಲಾಯಿತು. ಕಂಪನಿಗಳ ವ್ಯವಹಾರಗಳ ಸಚಿವಾಲಯದ (MCA) ದತ್ತಾಂಶ, ಅಸಂಘಟಿತ ವಲಯದ ಉದ್ಯಮಗಳ ವಾರ್ಷಿಕ ಸಮೀಕ್ಷೆ (ASUSE) ಮತ್ತು ಆವರ್ತಕ ಕಾರ್ಮಿಕ ಬಲ ಸಮೀಕ್ಷೆಯ (PLFS) ದತ್ತಾಂಶ ಸೇರಿದಂತೆ ವಿವಿಧ ಮೂಲಗಳ ಬಳಕೆಯನ್ನು ಹೆಚ್ಚಿಸುವ ಮೂಲಕ ಖಾಸಗಿ ಕಾರ್ಪೊರೇಟ್ ಮತ್ತು ಅಸಂಘಟಿತ ವಲಯಗಳ ಅಳತೆಯನ್ನು ಈ ಹೊಸ ಸರಣಿಯಲ್ಲಿ ಮತ್ತಷ್ಟು ಸುಧಾರಿಸಲಾಗಿದೆ. ಕೃಷಿ ವಲಯದ ಜೊತೆಗೆ ಉತ್ಪಾದನಾ ವಲಯದಲ್ಲಿಯೂ 'ಡಬಲ್ ಡಿಫ್ಲೇಶನ್' ಪದ್ಧತಿಯನ್ನು ಅಳವಡಿಸಿರುವುದು, ವಾರ್ಷಿಕ ಅಂದಾಜುಗಳಲ್ಲಿ ಪೂರೈಕೆ ಮತ್ತು ಬಳಕೆ ಕೋಷ್ಟಕಗಳ ಏಕೀಕರಣ, ಮಾನದಂಡಕ್ಕೆ ಅನುಗುಣವಾಗಿ ಅಂದಾಜುಗಳ ನಿಗದಿಗೆ ʼಪ್ರೊಪೋರ್ಷನಲ್ ಡೆಂಟನ್ʼ ವಿಧಾನವನ್ನು ಬಳಸಿರುವುದು ಹಾಗೂ ತ್ರೈಮಾಸಿಕ ಅಂದಾಜುಗಳಿಗಾಗಿ ಜಿಎಸ್ಟಿ ದತ್ತಾಂಶವನ್ನು ಬಳಸಿರುವುದು ಈ ಹೊಸ ಸರಣಿಯ ಇತರ ಪ್ರಮುಖ ವೈಶಿಷ್ಟ್ಯಗಳಾಗಿವೆ.
- 2024ರ ಮೂಲ ವರ್ಷವನ್ನು ಆಧರಿಸಿದ ಸಿಪಿಐನ ಹೊಸ ಸರಣಿಯನ್ನು 2026ರ ಫೆಬ್ರವರಿ 12ರಂದು ಬಿಡುಗಡೆ ಮಾಡಲಾಯಿತು. ಇದು 2023-24ರ ಗೃಹಬಳಕೆ ವೆಚ್ಚ ಸಮೀಕ್ಷೆಯನ್ನು (HCES) ಆಧರಿಸಿದ್ದು, ಉದ್ದೇಶದ ಆಧಾರದ ಮೇಲೆ ವೈಯಕ್ತಿಕ ಬಳಕೆಯ ವರ್ಗೀಕರಣ (COICOP) 2018ರ ಮಾನದಂಡವನ್ನು ಅಳವಡಿಸಿಕೊಂಡಿದೆ. ಈ ಸರಣಿಯಲ್ಲಿ ವಸ್ತು ಮತ್ತು ಸೇವೆಗಳ ಪಟ್ಟಿಯನ್ನು 358ಕ್ಕೆ ವಿಸ್ತರಿಸಲಾಗಿದ್ದು, ಇದರಲ್ಲಿ 50 ಸೇವೆಗಳು ಸೇರಿವೆ. 434 ಪಟ್ಟಣಗಳಾದ್ಯಂತ 1,465 ಗ್ರಾಮೀಣ ಮತ್ತು 1,395 ನಗರ ಮಾರುಕಟ್ಟೆಗಳಿಂದ ಹಾಗೂ 12 ಆನ್ಲೈನ್ ಮಾರುಕಟ್ಟೆಗಳಿಂದ ಬೆಲೆಗಳನ್ನು ಸಂಗ್ರಹಿಸಲಾಗುತ್ತಿದೆ. ಇದೇ ಮೊದಲ ಬಾರಿಗೆ ಗ್ರಾಮೀಣ ಪ್ರದೇಶಗಳ ಮನೆ ಬಾಡಿಗೆಯನ್ನೂ ಇದರಲ್ಲಿ ಸೇರಿಸಲಾಗಿದೆ. ಇಂಧನ, ವಿಮಾನ ಪ್ರಯಾಣ ದರಗಳು, ದೂರಸಂಪರ್ಕ ಶುಲ್ಕಗಳು ಮತ್ತು ಒಟಿಟಿ ಸೇವೆಗಳಂತಹ ವಿಭಾಗಗಳಿಗೆ ಆಡಳಿತಾತ್ಮಕ ದತ್ತಾಂಶ ಮತ್ತು ಇ-ಕಾಮರ್ಸ್ ದತ್ತಾಂಶವನ್ನು ಬಳಸಲಾಗುತ್ತಿದೆ.
- ಜಿಡಿಪಿ, ಸಗಟು ಬೆಲೆ ಸೂಚ್ಯಂಕ (ಡಬ್ಲ್ಯುಪಿಐ) ಮತ್ತು ಉತ್ಪಾದಕರ ಬೆಲೆ ಸೂಚ್ಯಂಕದ (ಪಿಪಿಐ) ಮೂಲ ವರ್ಷಕ್ಕೆ ಹೊಂದಿಕೆಯಾಗುವಂತೆ 2022-23ರ ಮೂಲ ವರ್ಷವನ್ನು ಆಧರಿಸಿದ ಐಐಪಿಯ ಹೊಸ ಸರಣಿಯನ್ನು 2026ರ ಜೂನ್ 1ರಂದು ಬಿಡುಗಡೆ ಮಾಡಲಾಯಿತು. ಈ ಹೊಸ ಸರಣಿಯಲ್ಲಿ ಸಣ್ಣ ಪ್ರಮಾಣದ ಮತ್ತು ಅಪರೂಪದ ಭೂ ಖನಿಜಗಳು, ಅನಿಲ ಪೂರೈಕೆ ಹಾಗೂ ನೀರು ಪೂರೈಕೆ, ಒಳಚರಂಡಿ ಮತ್ತು ತ್ಯಾಜ್ಯ ನಿರ್ವಹಣೆಯ ಹೊಸ ವಲಯವನ್ನು ಸೇರ್ಪಡೆಗೊಳಿಸುವ ಮೂಲಕ ವ್ಯಾಪ್ತಿಯನ್ನು ವಿಸ್ತರಿಸಲಾಗಿದೆ. ಪರಿಷ್ಕೃತ ವಸ್ತುಗಳ ಪಟ್ಟಿ ಮತ್ತು ಕಾರ್ಖಾನೆಗಳ ಸಮೂಹವನ್ನು ಒಳಗೊಂಡಿರುವ ಈ ಸರಣಿಯಲ್ಲಿ, ಕಾರ್ಖಾನೆಗಳನ್ನು ಬದಲಾಯಿಸುವ ಅವಕಾಶವನ್ನೂ ಕಲ್ಪಿಸಲಾಗಿದೆ. ಅಲ್ಲದೆ, ಮೌಲ್ಯದ ರೂಪದಲ್ಲಿ ವರದಿಯಾಗಿರುವ ಉತ್ಪಾದನೆಯನ್ನು ಸರಿಹೊಂದಿಸಲು (ಡಿಫ್ಲೇಟ್ ಮಾಡಲು) ಉತ್ಪಾದನಾ ಉತ್ಪಾದಕರ ಬೆಲೆ ಸೂಚ್ಯಂಕದ (OPPI) ಬಳಕೆಯನ್ನೂ ಹೆಚ್ಚಿಸಲಾಗಿದೆ.
ಈ ಸಮ್ಮೇಳನದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ), ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ), ಅರ್ಥಶಾಸ್ತ್ರಜ್ಞರು, ಸಂಶೋಧಕರು, ಹಣಕಾಸು ಸಂಸ್ಥೆಗಳು ಮತ್ತು ಬ್ಯಾಂಕಿಂಗ್ ವಲಯದ ತಜ್ಞರು, ಶೈಕ್ಷಣಿಕ ವಲಯದ ಪ್ರತಿನಿಧಿಗಳು, ವಿಷಯ ತಜ್ಞರು, ಅಧಿಕೃತ ಅಂಕಿಅಂಶಗಳ ಬಳಕೆದಾರರು ಹಾಗೂ ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ.
ಸಮ್ಮೇಳನದ ಉದ್ಘಾಟನಾ ಅಧಿವೇಶನದಲ್ಲಿ ಕೇಂದ್ರ ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ ಕಾರ್ಯದರ್ಶಿ ಡಾ. ಸೌರಭ್ ಗರ್ಗ್, ಭಾರತೀಯ ರಿಸರ್ವ್ ಬ್ಯಾಂಕ್ನ ಉಪ ಗವರ್ನರ್ ಡಾ. ಪೂನಂ ಗುಪ್ತಾ, ಎಚ್ಡಿಎಫ್ಸಿಯ ಮಾಜಿ ಅಧ್ಯಕ್ಷ ಶ್ರೀ ದೀಪಕ್ ಪರೇಖ್ ಮತ್ತು ಕೇಂದ್ರ ಅಂಕಿಅಂಶಗಳ ಮಹಾನಿರ್ದೇಶಕ ಡಾ. ದಲಿಪ್ ಸಿಂಗ್ ಅವರು ಭಾಷಣ ಮಾಡಲಿದ್ದಾರೆ. ಇದಾದ ಬಳಿಕ ಜಿಡಿಪಿ, ಸಿಪಿಐ ಮತ್ತು ಐಐಪಿಯ ಹೊಸ ಸರಣಿಗಳ ಕುರಿತು ಮೂರು ತಾಂತ್ರಿಕ ಅಧಿವೇಶನಗಳು ನಡೆಯಲಿವೆ. ಈ ಅಧಿವೇಶನಗಳಲ್ಲಿ ಕೇಂದ್ರ ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್ನಿಂದ ಪ್ರಾತ್ಯಕ್ಷಿಕೆಗಳು ಮತ್ತು ಮುಕ್ತ ಚರ್ಚೆಗಳು ನಡೆಯಲಿವೆ. ಈ ಸೂಚ್ಯಂಕಗಳ ಪರಿಷ್ಕೃತ ಸರಣಿಗಳ ಸಂಕ್ಷಿಪ್ತ ಪರಿಕಲ್ಪನಾ ಟಿಪ್ಪಣಿಗಳನ್ನು ಒಳಗೊಂಡ ಕಿರುಪುಸ್ತಕವನ್ನು ಸಮ್ಮೇಳನದಲ್ಲಿ ಭಾಗವಹಿಸುವವರಿಗೆ ಹಂಚಲಾಗುತ್ತದೆ.
ಈ ಸಮ್ಮೇಳನವು ದತ್ತಾಂಶ ಬಳಕೆದಾರರು ಮತ್ತು ಅಧಿಕೃತ ದತ್ತಾಂಶ ಸಂಗ್ರಹಕಾರರಿಗೆ ಸೂಚ್ಯಂಕಗಳಲ್ಲಿನ ಬದಲಾವಣೆಗಳು, ಅವುಗಳ ವ್ಯಾಖ್ಯಾನ ಮತ್ತು ಪರಿಣಾಮಗಳ ಕುರಿತು ನೇರವಾಗಿ ಚರ್ಚಿಸಲು ಅಮೂಲ್ಯ ಅವಕಾಶವನ್ನು ಒದಗಿಸಲಿದೆ.
ಅಧಿಕೃತ ಅಂಕಿಅಂಶಗಳ ಕುರಿತು ಉತ್ತಮ ತಿಳುವಳಿಕೆಯನ್ನು ಬೆಳೆಸುವುದು ಮತ್ತು ಅವುಗಳ ಪರಿಣಾಮಕಾರಿ ಬಳಕೆಯನ್ನು ಉತ್ತೇಜಿಸುವುದು ಹಾಗೂ ಕೇಂದ್ರ ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ಮತ್ತು ದತ್ತಾಂಶ ಬಳಕೆದಾರ ಸಮುದಾಯದ ನಡುವಿನ ಸಂವಹನವನ್ನು ಮತ್ತಷ್ಟು ಬಲಪಡಿಸುವುದು ಈ ಸಮ್ಮೇಳನದ ಉದ್ದೇಶವಾಗಿದೆ.
ಈ ಮಹತ್ವದ ಸಮಾಲೋಚನಾ ಕಾರ್ಯಕ್ರಮದಲ್ಲಿ ಎಲ್ಲ ಪಾಲುದಾರರು ಸಕ್ರಿಯವಾಗಿ ಭಾಗವಹಿಸಿ ತಮ್ಮ ಅಭಿಪ್ರಾಯ ಮತ್ತು ಒಳನೋಟಗಳನ್ನು ಹಂಚಿಕೊಳ್ಳುವಂತೆ ಸಚಿವಾಲಯವು ಆಹ್ವಾನಿಸುತ್ತದೆ.
*****