ಲೋಕಸಭಾ ಸಚಿವಾಲಯ
azadi ka amrit mahotsav

ರಕ್ಷಣಾ ಭೂಮಿ ನಿರ್ವಹಣೆಯನ್ನು ಬಲಪಡಿಸಲು ಆಧುನಿಕ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆ (ಎಐ) ಬಳಸುವಂತೆ ಲೋಕಸಭಾ ಸ್ಪೀಕರ್ ಕರೆ


1.7 ದಶಲಕ್ಷ ಎಕರೆಗೂ ಹೆಚ್ಚು ರಕ್ಷಣಾ ಭೂಮಿಯನ್ನು ರಕ್ಷಿಸುವುದು ಮತ್ತು ಕಂಟೋನ್ಮೆಂಟ್ ಪರಂಪರೆಯನ್ನು ಸಂರಕ್ಷಿಸುವುದು ಪ್ರಮುಖ ಆದ್ಯತೆಗಳು: ಶ್ರೀ ಓಂ ಬಿರ್ಲಾ

ಕಾರ್ಯಾಚರಣೆಯ ಅಗತ್ಯಗಳು, ಒತ್ತುವರಿ ತೆರವು ಪ್ರಯತ್ನಗಳು ಮತ್ತು ಕಂಟೋನ್ಮೆಂಟ್ ಪರಂಪರೆಯ ನಡುವೆ ಸಮತೋಲನ ಕಾಯ್ದುಕೊಳ್ಳುವ ಕುರಿತು ಒತ್ತಿ ಹೇಳಿದ ಲೋಕಸಭಾ ಸ್ಪೀಕರ್

‘ರಕ್ಷಣಾ ಎಸ್ಟೇಟ್‌ಗಳ ಶತಮಾನೋತ್ಸವ ಉಪನ್ಯಾಸ-2026’ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಲೋಕಸಭಾ ಸ್ಪೀಕರ್

ಪ್ರಕಟಣಾ ದಿನಾಂಕ: 20 NOV 2026 2:52PM by PIB Bengaluru

ನವದೆಹಲಿ, 20 ನವೆಂಬರ್ 2026: ಆಧುನಿಕ ತಂತ್ರಜ್ಞಾನ, ಡಿಜಿಟಲೀಕರಣ ಮತ್ತು ಕೃತಕ ಬುದ್ಧಿಮತ್ತೆ (ಎಐ) ಮೂಲಕ ರಕ್ಷಣಾ ಭೂಮಿಯ ನಿರ್ವಹಣೆ ಹಾಗೂ ರಕ್ಷಣೆಯನ್ನು ಬಲಪಡಿಸುವಂತೆ ಲೋಕಸಭಾ ಸ್ಪೀಕರ್ ಶ್ರೀ ಓಂ ಬಿರ್ಲಾ ಅವರು ಇಂದು ರಕ್ಷಣಾ ಎಸ್ಟೇಟ್‌ಗಳ ಸಂಸ್ಥೆಗೆ ಕರೆ ನೀಡಿದರು. ನವದೆಹಲಿಯಲ್ಲಿ ನಡೆದ ರಕ್ಷಣಾ ಎಸ್ಟೇಟ್‌ಗಳ ಸಂಸ್ಥೆಯ ಶತಮಾನೋತ್ಸವ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ರಕ್ಷಣಾ ಆಸ್ತಿಗಳನ್ನು ಸುರಕ್ಷಿತವಾಗಿಡುವುದು, ಒತ್ತುವರಿಗಳನ್ನು ತಡೆಗಟ್ಟುವುದು ಮತ್ತು ಸಶಸ್ತ್ರ ಪಡೆಗಳ ಕಾರ್ಯಾಚರಣೆಯ ಅಗತ್ಯಗಳಿಗಾಗಿ ಸಕಾಲದಲ್ಲಿ ಭೂಮಿ ಲಭ್ಯವಾಗುವಂತೆ ನೋಡಿಕೊಳ್ಳುವುದು ಪ್ರಮುಖ ಆದ್ಯತೆಗಳಾಗಿರಬೇಕು ಎಂದು ಒತ್ತಿ ಹೇಳಿದರು.

1.7 ದಶಲಕ್ಷ ಎಕರೆಗೂ ಹೆಚ್ಚು ರಕ್ಷಣಾ ಭೂಮಿಯನ್ನು ನಿರ್ವಹಿಸುವ ಮತ್ತು ರಕ್ಷಿಸುವ ಸಂಸ್ಥೆಯ ಜವಾಬ್ದಾರಿಯ ವ್ಯಾಪ್ತಿಯನ್ನು ಉಲ್ಲೇಖಿಸಿದ ಶ್ರೀ ಬಿರ್ಲಾ ಅವರು, ಪರಿಣಾಮಕಾರಿ ಆಡಳಿತಕ್ಕಾಗಿ ನಿಖರ, ಸುರಕ್ಷಿತ ಮತ್ತು ಸುಲಭವಾಗಿ ಲಭ್ಯವಾಗುವ ಭೂ ದಾಖಲೆಗಳು ಅತ್ಯಗತ್ಯ ಎಂದು ತಿಳಿಸಿದರು. ಈಗಾಗಲೇ ನಡೆಯುತ್ತಿರುವ ಡಿಜಿಟಲ್ ಸುಧಾರಣೆಗಳನ್ನು ಶ್ಲಾಘಿಸಿದ ಅವರು, ಕೃತಕ ಬುದ್ಧಿಮತ್ತೆ ಮತ್ತು ಉದಯೋನ್ಮುಖ ತಂತ್ರಜ್ಞಾನಗಳು ಪ್ರಸ್ತುತ ಕಾರ್ಯಾಚರಣೆಯ ಬೇಡಿಕೆಗಳು ಹಾಗೂ ದೀರ್ಘಕಾಲೀನ ಆಡಳಿತಾತ್ಮಕ ಸವಾಲುಗಳನ್ನು ಎದುರಿಸಲು ಸಹಾಯ ಮಾಡಲಿವೆ ಎಂದರು.

ರಕ್ಷಣಾ ಭೂಮಿಯ ಒತ್ತುವರಿಯು ಪ್ರಮುಖ ಕಳವಳಕಾರಿ ವಿಷಯವಾಗಿದೆ ಎಂದು ಉಲ್ಲೇಖಿಸಿದ ಶ್ರೀ ಬಿರ್ಲಾ ಅವರು, ನಾಗರಿಕರಿಗೆ ಅನಾವಶ್ಯಕ ವಿವಾದಗಳು ಅಥವಾ ತೊಂದರೆಗಳಾಗದಂತೆ ಎಚ್ಚರಿಕೆ ವಹಿಸುತ್ತಲೇ, ಆಸ್ತಿಗಳನ್ನು ರಕ್ಷಿಸಲು ಹಾಗೂ ನಿಖರವಾದ ಸಮೀಕ್ಷೆ ಮತ್ತು ಅಳತೆಗಳನ್ನು ನಡೆಸಲು ಸಂಸ್ಥೆ ಕೈಗೊಳ್ಳುತ್ತಿರುವ ಪ್ರಯತ್ನಗಳನ್ನು ಪ್ರಶಂಸಿಸಿದರು. ರಾಷ್ಟ್ರೀಯ ಭದ್ರತೆಗಾಗಿ ರಕ್ಷಣಾ ಸಂಸ್ಥೆಗಳು ಮತ್ತು ಸಿಬ್ಬಂದಿಗೆ ಸಕಾಲದಲ್ಲಿ ಭೂಮಿ ಲಭ್ಯವಾಗುವುದು ಹಾಗೂ ಪೂರಕ ವಾತಾವರಣ ಕಲ್ಪಿಸುವುದು ಅತ್ಯಗತ್ಯ ಎಂದು ಅವರು ಒತ್ತಿ ಹೇಳಿದರು.

ಕಂಟೋನ್ಮೆಂಟ್‌ಗಳ(ದಂಡು ಪ್ರದೇಶ) ಐತಿಹಾಸಿಕ ಮತ್ತು ಪರಿಸರ ಮೌಲ್ಯದ ಕುರಿತು ಮಾತನಾಡಿದ ಶ್ರೀ ಬಿರ್ಲಾ ಅವರು, ಆಧುನಿಕ ಅಗತ್ಯಗಳಿಗೆ ತಕ್ಕಂತೆ ಅವುಗಳನ್ನು ಬದಲಾಯಿಸಿದರೂ ಅವುಗಳ ಮೂಲ ಸ್ವರೂಪ, ಹಸಿರು ಹೊದಿಕೆ, ಅರಣ್ಯಗಳು ಮತ್ತು ಪರಂಪರೆಯನ್ನು ರಕ್ಷಿಸಬೇಕು ಎಂದು ಅಭಿಪ್ರಾಯಪಟ್ಟರು. ತ್ವರಿತ ನಗರೀಕರಣದ ನಡುವೆಯೂ ಮಿಲಿಟರಿ ಕಂಟೋನ್ಮೆಂಟ್‌ಗಳ ವಿಶಿಷ್ಟ ಗುರುತನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಅಭಿವೃದ್ಧಿಯನ್ನು ಚಿಂತನಶೀಲವಾಗಿ ಯೋಜಿಸಬೇಕು ಎಂದು ಅವರು ಎಚ್ಚರಿಸಿದರು.

ಶಾಲೆಗಳು, ಆರೋಗ್ಯ ಸೌಲಭ್ಯಗಳು, ಕಂಪ್ಯೂಟರ್ ಶಿಕ್ಷಣ, ಕೌಶಲ್ಯ ತರಬೇತಿ, ಜಲ ಸಂರಕ್ಷಣೆ ಮತ್ತು ಮರುಬಳಕೆ ಹಾಗೂ ಪರಿಸರ ಸಂರಕ್ಷಣೆ ಸೇರಿದಂತೆ ಕಂಟೋನ್ಮೆಂಟ್ ನಿವಾಸಿಗಳಿಗಾಗಿ ಸಂಸ್ಥೆ ಕೈಗೊಂಡಿರುವ ನಾಗರಿಕ ಉಪಕ್ರಮಗಳನ್ನು ಅವರು ಶ್ಲಾಘಿಸಿದರು. ಅಲ್ಲದೆ, ಬದಲಾಗುತ್ತಿರುವ ಸಮುದಾಯದ ಅಗತ್ಯಗಳಿಗೆ ಸ್ಪಂದಿಸಲು ನಾಗರಿಕ ಸಮಾಜದೊಂದಿಗೆ ನಿರಂತರ ಸಂಪರ್ಕವನ್ನು ಕಾಯ್ದುಕೊಳ್ಳುವಂತೆ ಕರೆ ನೀಡಿದರು.

ಸಾಂಸ್ಥಿಕ ನಿರಂತರತೆಯನ್ನು ಒತ್ತಿ ಹೇಳಿದ ಶ್ರೀ ಬಿರ್ಲಾ ಅವರು, ಕಳೆದ ಒಂದು ಶತಮಾನದಲ್ಲಿ ರೂಪಿಸಲಾದ ಕಾನೂನುಗಳು, ನಿಯಮಗಳು ಮತ್ತು ಆಡಳಿತಾತ್ಮಕ ಚೌಕಟ್ಟುಗಳನ್ನು ಅಧ್ಯಯನ ಮಾಡುವಂತೆ ಹಾಗೂ ಮಾಜಿ ಅಧಿಕಾರಿಗಳಿಂದ ಕಲಿಯುವಂತೆ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಪ್ರೋತ್ಸಾಹಿಸಿದರು. ಈ ಸಾಂಸ್ಥಿಕ ಜ್ಞಾನಕ್ಕೆ ಯುವ ಸಿಬ್ಬಂದಿಯ ತಾಂತ್ರಿಕ ಚುರುಕುತನ ಜೊತೆಯಾದರೆ ಭವಿಷ್ಯಕ್ಕಾಗಿ ಬಲಿಷ್ಠ ವ್ಯವಸ್ಥೆಗಳನ್ನು ನಿರ್ಮಿಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.

ರಕ್ಷಣಾ ಎಸ್ಟೇಟ್‌ಗಳ ಸಂಸ್ಥೆಯು ತನ್ನ ಎರಡನೇ ಶತಮಾನಕ್ಕೆ ಕಾಲಿಡುತ್ತಿರುವ ಈ ಸಂದರ್ಭದಲ್ಲಿ, ತನ್ನ ಶ್ರೀಮಂತ ಪರಂಪರೆಯನ್ನು ದೂರದೃಷ್ಟಿಯೊಂದಿಗೆ ಬೆಸೆಯುವ ಸಂಸ್ಥೆಯನ್ನು ನಿರ್ಮಿಸುವತ್ತ ಗಮನಹರಿಸಬೇಕು ಎಂದು ಶ್ರೀ ಬಿರ್ಲಾ ಅಭಿಪ್ರಾಯಪಟ್ಟರು. ನಾವೀನ್ಯತೆ,ಪಾರದರ್ಶಕತೆ, ತಾಂತ್ರಿಕ ಪ್ರಗತಿ ಮತ್ತು ಸಾರ್ವಜನಿಕ ಸೇವೆಯ ನವೀಕೃತ ಬದ್ಧತೆಯ ಮೂಲಕ ಈ ಸಂಸ್ಥೆಯು ದೇಶದ ಅಮೂಲ್ಯ ರಕ್ಷಣಾ ಭೂಮಿಯನ್ನು ರಕ್ಷಿಸುವುದನ್ನು, ಸಶಸ್ತ್ರ ಪಡೆಗಳ ಕಾರ್ಯಾಚರಣೆಯ ಸನ್ನದ್ಧತೆಯನ್ನು ಬಲಪಡಿಸುವುದನ್ನು ಮತ್ತು ತನ್ನ ಕಂಟೋನ್ಮೆಂಟ್‌ಗಳ ವಿಶಿಷ್ಟ ಪರಂಪರೆಯನ್ನು ಸಂರಕ್ಷಿಸುವುದನ್ನು ಮುಂದುವರಿಸಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು. ಸಮರ್ಪಣಾ ಮನೋಭಾವ, ದೂರದೃಷ್ಟಿ ಮತ್ತು ರಾಷ್ಟ್ರೀಯ ಉದ್ದೇಶದ ಹಂಚಿಕೆಯ ಭಾವನೆಯೊಂದಿಗೆ ಈ ಜವಾಬ್ದಾರಿಯನ್ನು ಮುನ್ನಡೆಸುವಂತೆ ಅವರು ಎಲ್ಲಾ ಅಧಿಕಾರಿಗಳು ಮತ್ತು ನೌಕರರಿಗೆ ಕರೆ ನೀಡಿದರು.

 

*****


(ಪ್ರಕಟಣೆ ಐ.ಡಿ.: 2339062) ವಿಸಿಟರ್ ಕೌಂಟರ್ : 13
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Gujarati