ಜಲ ಶಕ್ತಿ ಸಚಿವಾಲಯ
azadi ka amrit mahotsav

2026ರ ‘ವಿಶ್ವ ಶೌಚಾಲಯ ದಿನ’ದಂದು 'ಸ್ವಚ್ಛ ಶೌಚಾಲಯ – ಘನತೆಯುತ ಭವಿಷ್ಯ' (ಎಸ್‌ಎಸ್‌ಜಿಬಿ) ಅಭಿಯಾನಕ್ಕೆ ಚಾಲನೆ ನೀಡಿದ ಜಲಶಕ್ತಿ ಸಚಿವಾಲಯ


ನವೆಂಬರ್ 19 ರಿಂದ ಡಿಸೆಂಬರ್ 10, 2026 ರವರೆಗೆ ದೇಶಾದ್ಯಂತ ನಡೆಯಲಿರುವ ಅಭಿಯಾನ, ‘ಮಾನವ ಹಕ್ಕುಗಳ ದಿನ’ದಂದು ಸಮಾರೋಪಗೊಳ್ಳಲಿದೆ

ಗ್ರಾಮೀಣ ಪ್ರದೇಶಗಳಲ್ಲಿ ಸಮುದಾಯ ಮತ್ತು ಸಾಂಸ್ಥಿಕ ಶೌಚಾಲಯಗಳ ಕಾರ್ಯಕ್ಷಮತೆ ಮತ್ತು ಲಭ್ಯತೆಯ ಮೌಲ್ಯಮಾಪನ ಹಾಗೂ ಸುಧಾರಣೆಗಳಿಗೆ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಕೈಗೊಂಡ ಕ್ರಮಗಳತ್ತ ಅಭಿಯಾನವು ಗಮನಹರಿಸಲಿದೆ

ಪ್ರಕಟಣಾ ದಿನಾಂಕ: 20 NOV 2026 9:01AM by PIB Bengaluru

ಜಲಶಕ್ತಿ ಸಚಿವಾಲಯದ ಕುಡಿಯುವ ನೀರು ಮತ್ತು ಸ್ವಚ್ಛತೆ ಇಲಾಖೆಯು (ಡಿಡಿಡಬ್ಲ್ಯೂಎಸ್‌) ನಿನ್ನೆ 2026ರ ‘ವಿಶ್ವ ಶೌಚಾಲಯ ದಿನ’ದಂದು ‘ಸ್ವಚ್ಛ ಭಾರತ ಮಿಷನ್ (ಗ್ರಾಮೀಣ್) [ಎಸ್‌ಬಿಎಂ(ಜಿ)] ಅಡಿಯಲ್ಲಿ 'ಸ್ವಚ್ ಶೌಚಾಲಯ – ಘನತೆಯುತ ಭವಿಷ್ಯ' (ಎಸ್‌ಎಸ್‌ಜಿಬಿ) ಅಭಿಯಾನವನ್ನು ಪ್ರಾರಂಭಿಸಿದೆ. ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಜಂಟಿ ಕಾರ್ಯದರ್ಶಿ ಹಾಗೂ ಸ್ವಚ್ಛ ಭಾರತ ಮಿಷನ್ (ಗ್ರಾಮೀಣ) ರಾಷ್ಟ್ರೀಯ ಮಿಷನ್ ನಿರ್ದೇಶಕರಾದ ಶ್ರೀಮತಿ ಐಶ್ವರ್ಯಾ ಸಿಂಗ್ ಅವರು ಈ ಅಭಿಯಾನ ಮತ್ತು ಅದರ ವರದಿ ಮಾಡುವ ಮಾಡ್ಯೂಲ್‌ಗೆ ಆನ್‌ಲೈನ್‌ ಮೂಲಕ ಚಾಲನೆ(ಇ-ಲಾಂಚ್) ನೀಡಿದರು.

ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಉಪ ಕಾರ್ಯದರ್ಶಿಗಳ ಸ್ವಾಗತ ಭಾಷಣ ಮತ್ತು ಅಭಿಯಾನದ ಹಿನ್ನೆಲೆಯ ಪರಿಚಯದೊಂದಿಗೆ ಕಾರ್ಯಕ್ರಮವು ಪ್ರಾರಂಭವಾಯಿತು. ನಂತರ ಇಲಾಖೆಯ ನಿರ್ದೇಶಕರು ಎಸ್‌ಬಿಎಂ(ಜಿ) ಪ್ರಗತಿಯ ಕುರಿತು ಸಂಕ್ಷಿಪ್ತ ಪ್ರಸ್ತುತಿಯನ್ನು ನೀಡಿದರು. ಈ ವೇಳೆ ಇದರಲ್ಲಿ ಸುಮಾರು 89.9% ಗ್ರಾಮಗಳಲ್ಲಿ ಬಯಲು ಬಹಿರ್ದೆಸೆ ಮುಕ್ತ ಪ್ಲಸ್ (ಒಡಿಎಫ್‌ ಪ್ಲಸ್‌ - ಮಾದರಿ) ಸ್ಥಾನಮಾನ ಸಾಧಿಸಿರುವುದು ಮತ್ತು ‘ಎಸ್‌ಬಿಎಂ(ಜಿ)’ ನ ಇತರ ಘಟಕಗಳ ಅಡಿಯಲ್ಲಿ ಸಾಧಿಸಿದ ಪ್ರಗತಿಯನ್ನು ಎತ್ತಿ ತೋರಿಸಲಾಯಿತು.

ಆ ಬಳಿಕ ಜಂಟಿ ಕಾರ್ಯದರ್ಶಿ ಹಾಗೂ ರಾಷ್ಟ್ರೀಯ ಮಿಷನ್ ನಿರ್ದೇಶಕರು 'ಸ್ವಚ್ಛ ಶೌಚಾಲಯ – ಘನತೆಯುತ ಭವಿಷ್ಯ' ಅಭಿಯಾನಕ್ಕೆ ಇ-ಚಾಲನೆ ನೀಡಿದರು. ಅಲ್ಲದೆ, ಅಭಿಯಾನದ ಪ್ರಗತಿಯನ್ನು ದಾಖಲಿಸಲು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗಾಗಿ ‘ಡಿಡಿಡಬ್ಲ್ಯೂಎಸ್‌’ ವಿನ್ಯಾಸಗೊಳಿಸಿರುವ ವರದಿ ಘಟಕವನ್ನೂ ಸಹ ಅವರು ಉದ್ಘಾಟಿಸಿದರು. ಇದು ಅಭಿಯಾನದ ಪ್ರಗತಿಯನ್ನು ವರದಿ ಮಾಡುತ್ತದೆ.

'ಸುರಕ್ಷಿತ ಶೌಚಾಲಯಗಳು. ಸಮಾನ ಭವಿಷ್ಯಗಳು.' ಎಂಬ ‘ವಿಶ್ವ ಶೌಚಾಲಯ ದಿನ-2026’ರ ವಿಶ್ವಸಂಸ್ಥೆ ಧ್ಯೇಯವಾಕ್ಯವು ಸ್ವಚ್ಛತೆಯನ್ನು ಲಿಂಗ ಸಮಾನತೆಯೊಂದಿಗೆ ಸಂಪರ್ಕಿಸುತ್ತದೆ. ಇದಕ್ಕೆ ಅನುಗುಣವಾಗಿ, ‘ಸ್ವಚ್ಛ ಶೌಚಾಲಯ – ಘನತೆಯುತ ಭವಿಷ್ಯ’ ಅಭಿಯಾನವು ಗ್ರಾಮೀಣ  ಸ್ವಚ್ಛತೆ ಸೌಲಭ್ಯಗಳನ್ನು ಸುಧಾರಿಸುವುದರ ಮೇಲೆ ಗಮನಹರಿಸುತ್ತದೆ, ವಿಶೇಷವಾಗಿ ಮಹಿಳೆಯರು, ಹುಡುಗಿಯರು ಮತ್ತು ದಿವ್ಯಾಂಗರ ಅಗತ್ಯಗಳಿಗೆ ಗಮನ ನೀಡುತ್ತದೆ.

ಸ್ವಚ್ ಶೌಚಾಲಯ – ಘನತೆಯುತ ಭವಿಷ್ಯ ಅಭಿಯಾನದ ಉದ್ದೇಶಗಳು ಹೀಗಿವೆ: -

  • ಸಮುದಾಯ ನೈರ್ಮಲ್ಯ ಸಂಕೀರ್ಣಗಳು (ಸಿಎಸ್‌ಸಿ) ಮತ್ತು ಸಾಂಸ್ಥಿಕ ಶೌಚಾಲಯಗಳ (ಶಾಲೆಗಳು, ಅಂಗನವಾಡಿ ಕೇಂದ್ರಗಳು ಮತ್ತು ಪಂಚಾಯತ್ ಭವನ ಇತ್ಯಾದಿ) ಸ್ಥಿತಿಗತಿಯನ್ನು ಮೌಲ್ಯಮಾಪನ ಮಾಡುವುದು ಮತ್ತು ಅಗತ್ಯವಿರುವಂತೆ ದುರಸ್ತಿ/ನಿರ್ವಹಣೆ/ಪುನಶ್ಚೇತನ ಕಾರ್ಯಗಳನ್ನು ಕೈಗೊಳ್ಳುವುದು. ಸಾಂಸ್ಥಿಕ ಶೌಚಾಲಯಗಳಿಗೆ ಸಂಬಂಧಿಸಿದಂತೆ ಸಂಬಂಧಪಟ್ಟ ಪ್ರಾಧಿಕಾರಗಳ (ಎಸ್‌ಎಂಸಿ/ಎಡಬ್ಲ್ಯೂಸಿ/ಜಿಪಿಕೆ/ಜಿಪಿಬಿ ಇತ್ಯಾದಿ) ಮೂಲಕ ಇದನ್ನು ಮಾಡಬಹುದು. ಅಗತ್ಯವಿರುವ ಕಡೆಗಳಲ್ಲಿ ತಮ್ಮ ವೈಯಕ್ತಿಕ ಗೃಹ ಶೌಚಾಲಯಗಳ (ಐಹೆಚ್‌ಹೆಚ್‌ಎಲ್‌) ದುರಸ್ತಿ/ನಿರ್ವಹಣೆಯನ್ನು ಕೈಗೊಳ್ಳಲು ವೈಯಕ್ತಿಕ ಕುಟುಂಬಗಳನ್ನೂ ಸಹ ಪ್ರೇರೇಪಿಸುವುದು.
  • ಗ್ರಾಮದ ಶೌಚಾಲಯಗಳ ವಿಧಗಳ ಮೌಲ್ಯಮಾಪನ ಮಾಡುವುದು ಮತ್ತು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ನಿಗದಿಪಡಿಸಿದ ಗುರಿಗಳಿಗೆ ಅನುಗುಣವಾಗಿ, ಸಾಧ್ಯವಿರುವಲ್ಲೆಲ್ಲಾ ಗುರುತಿಸಲಾದ ಏಕ-ಗುಂಡಿ ಶೌಚಾಲಯಗಳನ್ನು ಅವಳಿ-ಗುಂಡಿ ಶೌಚಾಲಯಗಳಾಗಿ ಹಾಗೂ ಇಂಗುಗುಂಡಿ ಇಲ್ಲದ ಸೆಪ್ಟಿಕ್ ಟ್ಯಾಂಕ್‌ಗಳನ್ನು ಇಂಗುಗುಂಡಿ ಸಹಿತ ಸೆಪ್ಟಿಕ್ ಟ್ಯಾಂಕ್‌ಗಳಾಗಿ ಮಾರ್ಪಡಿಸುವುದು.
  • ಮಲತ್ಯಾಜ್ಯ ನಿರ್ವಹಣೆ (ಎಫ್‌ಎಸ್‌ಎಂ) ನಿಯಮಗಳ ಪಾಲನೆಗಾಗಿ ಕಾರ್ಯನಿರ್ವಹಿಸುತ್ತಿರುವ ಅಥವಾ ಅಗತ್ಯವಿರುವ ಕಡೆಗಳಲ್ಲಿ ಯಾಂತ್ರೀಕೃತ ಹೂಳೆತ್ತುವಿಕೆಯ ಮೌಲ್ಯಮಾಪನ ಮತ್ತು ಯೋಜನೆ ರೂಪಿಸುವುದು.
  • ಸಮುದಾಯ ನೈರ್ಮಲ್ಯ ಸಂಕೀರ್ಣಗಳು (ಸಿಎಸ್‌ಸಿ) ಮತ್ತು ಸಾಂಸ್ಥಿಕ ಶೌಚಾಲಯಗಳ ನಿರ್ವಹಣೆ ಮತ್ತು ಸುಸ್ಥಿತಿಗಾಗಿ ಕಾರ್ಯಾಚರಣೆ ಮತ್ತು ನಿರ್ವಹಣೆ (ಒ&ಎಂ) ವ್ಯವಸ್ಥೆಗಳನ್ನು ಮೌಲ್ಯಮಾಪನ ಮಾಡುವುದು ಮತ್ತು ಬಲಪಡಿಸುವುದು.
  • ಸ್ಥಳೀಯ ಗೋಡೆ ಬರಹಗಳು/ಚಿತ್ರಕಲೆ, ಸೂಚನಾ ಫಲಕಗಳು ಮತ್ತು ಸುತ್ತಮುತ್ತಲಿನ ಪರಿಸರದ ಸುಧಾರಣೆಯ ಮೂಲಕ ಸಮುದಾಯ ನೈರ್ಮಲ್ಯ ಸಂಕೀರ್ಣಗಳು ಮತ್ತು ಸಾಂಸ್ಥಿಕ ಶೌಚಾಲಯಗಳನ್ನು ಆಕರ್ಷಕ, ಸ್ವಚ್ಛ ಮತ್ತು ಸುಸ್ಥಿತಿಯಲ್ಲಿರುವ ಸ್ಥಳಗಳಾಗಿ ಪರಿವರ್ತಿಸಲು ಸಮುದಾಯಗಳನ್ನು ಪ್ರೋತ್ಸಾಹಿಸುವುದು. ವೈಯಕ್ತಿಕ ಕುಟುಂಬಗಳೂ ಸಹ ತಮ್ಮ ಗೃಹ ಶೌಚಾಲಯಗಳಿಗೆ ಇದೇ ರೀತಿ ಮಾಡಲು ಪ್ರೇರೇಪಿಸಬಹುದು.
  • ಗ್ರಾಮದಲ್ಲಿ ಬಯಲು ಬಹಿರ್ದೆಸೆ ಮುಕ್ತ (ಒಡಿಎಫ್‌) ಸುಸ್ಥಿರತೆಯನ್ನು ಮೌಲ್ಯಮಾಪನ ಮಾಡುವುದು; ‘ಒಡಿಎಫ್‌’ ಸ್ಥಾನಮಾನವನ್ನು ಕಾಯ್ದುಕೊಳ್ಳಲು ತೀವ್ರವಾದ ವರ್ತನೆ ಬದಲಾವಣೆ ಸಂವಹನ (ಬಿಸಿಸಿ) ಮತ್ತು ಜಾಗೃತಿ ಅಭಿಯಾನಗಳ ಮೂಲಕ ಶೌಚಾಲಯಗಳ ನಿರಂತರ ಬಳಕೆಯನ್ನು ಉತ್ತೇಜಿಸುವುದು.
  • ಗ್ರಾಮ/ಗ್ರಾಮ ಪಂಚಾಯತ್‌ಗಳ 'ಸ್ವಚ್ಛ ಸೇವಾ ಆಕಲನ' (ಎಸ್‌ಎಸ್‌ಎ) ಸ್ಥಿತಿಗತಿಯನ್ನು ಮೌಲ್ಯಮಾಪನ ಮಾಡುವುದು ಮತ್ತು ಈಗಾಗಲೇ ಪೂರ್ಣಗೊಂಡಿಲ್ಲದಿದ್ದರೆ ನವೆಂಬರ್ 30, 2026 ರೊಳಗೆ ‘ಎಸ್‌ಎಸ್‌ಎ’ ಪೂರ್ಣಗೊಳ್ಳುವುದನ್ನು ಖಚಿತಪಡಿಸುವುದು; ಈಗಾಗಲೇ ‘ಎಸ್‌ಎಸ್‌ಎ’ ಸಲ್ಲಿಸಲಾಗಿದ್ದರೆ,ಗುರುತಿಸಲಾದ ಕೊರತೆಗಳನ್ನು ನಿವಾರಿಸುವ ಮುಂದಿನ ಕ್ರಮಗಳ ಕುರಿತು ಚರ್ಚಿಸುವುದು.
  • ವಿಶೇಷವಾಗಿ ಮಹಿಳೆಯರು, ವಿದ್ಯಾರ್ಥಿನಿಯರು ಮತ್ತು ದಿವ್ಯಾಂಗಜನರ/ವಿಕಲಚೇತನರ ಅಗತ್ಯಗಳಿಗೆ ಒತ್ತು ನೀಡಿ ನೈರ್ಮಲ್ಯದ ಮಹತ್ವ, ವೈಯಕ್ತಿಕ ಮತ್ತು ಸಮುದಾಯದ ಸ್ವಚ್ಛತೆಯ ನಿರ್ವಹಣೆ, ಸಾಬೂನಿನಿಂದ ಕೈ ತೊಳೆಯುವುದು, ‘ಎಪ್‌ಎಸ್‌ಎಂ’ ನಿಯಮಗಳ ಪಾಲನೆಯ ಮಹತ್ವ, ಘನತ್ಯಾಜ್ಯ ನಿರ್ವಹಣಾ ನಿಯಮಗಳು-2026ರ ಪಾಲನೆ, 4-ವಿಧದ ತ್ಯಾಜ್ಯ ವಿಂಗಡಣೆ ಮತ್ತು ಸ್ವಚ್ಛ ಸೇವಾ ಆಕಲನ ಸೇರಿದಂತೆ ವಿವಿಧ ವಿಷಯಗಳ ಕುರಿತು ಜಾಗೃತಿ ಮೂಡಿಸುವುದು.

ಇದಾದ ನಂತರ, ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಸಂವಾದದಲ್ಲಿ ಭಾಗವಹಿಸಿ, ಅಭಿಯಾನದ ಅನುಷ್ಠಾನಕ್ಕಾಗಿ ತಮ್ಮ ಉದ್ದೇಶಿತ ಕ್ರಿಯಾ ಯೋಜನೆಗಳ ಬಗ್ಗೆ ಮಾಹಿತಿ ನೀಡಿದವು. ಗುಜರಾತ್, ಮಧ್ಯಪ್ರದೇಶ, ಸಿಕ್ಕಿಂ ಮತ್ತು ಕರ್ನಾಟಕದ ‘ಎಸ್‌ಬಿಎಂ(ಜಿ)’ ತಂಡಗಳು ಅಭಿಯಾನಕ್ಕಾಗಿ ತಾವು ಯೋಜಿಸಿರುವ ಚಟುವಟಿಕೆಗಳನ್ನು ಹಂಚಿಕೊಂಡವು.

ಇ-ಚಾಲನೆ ಕಾರ್ಯಕ್ರಮದಲ್ಲಿ ಮಾತನಾಡಿದ ‘ಎಸ್‌ಬಿಎಂ(ಜಿ) ಜಂಟಿ ಕಾರ್ಯದರ್ಶಿ ಹಾಗೂ ರಾಷ್ಟ್ರೀಯ ಮಿಷನ್ ನಿರ್ದೇಶಕರಾದ ಶ್ರೀಮತಿ ಐಶ್ವರ್ಯಾ ಸಿಂಗ್ ಅವರು, 'ಸ್ವಚ್ಛ ಶೌಚಾಲಯ – ಘನತೆಯುತ ಭವಿಷ್ಯ' ಅಭಿಯಾನವನ್ನು 'ಎಲ್ಲರಿಗೂ ಗೌರವ ಮತ್ತು ಎಲ್ಲರಿಗೂ ನೈರ್ಮಲ್ಯ' ಎಂಬ ಆಶಯದ ಸುತ್ತ ವಿನ್ಯಾಸಗೊಳಿಸಲಾಗಿದೆ ಎಂದು ಒತ್ತಿ ಹೇಳಿದರು. ಶಾಲಾ ಮಕ್ಕಳನ್ನು ಸ್ವಚ್ಛತೆಯ ಭವಿಷ್ಯದ ರಕ್ಷಕರನ್ನಾಗಿ ರೂಪಿಸಲು; ಅವರಿಗೆ ಸ್ವಚ್ಛತೆ, ನೈರ್ಮಲ್ಯ ಮತ್ತು ಆರೋಗ್ಯದ ಮಹತ್ವ ಹಾಗೂ ಶೌಚಾಲಯಗಳನ್ನು ಸ್ವಚ್ಛವಾಗಿ ಮತ್ತು ಎಲ್ಲರಿಗೂ ಲಭ್ಯವಾಗುವಂತೆ ಇಡುವಲ್ಲಿ ಸಮುದಾಯದ ಪಾಲ್ಗೊಳ್ಳುವಿಕೆಯ ಕುರಿತು ಅರಿವು ಮೂಡಿಸಲು ಈ  ಅಭಿಯಾನವು ವಿಶೇಷ ಗಮನ ಹರಿಸುತ್ತದೆ ಎಂದು ಅವರು ತಿಳಿಸಿದರು.

ಶಾಲಾ ನೈರ್ಮಲ್ಯ ಲೆಕ್ಕಪರಿಶೋಧನೆ  ಸೇರಿದಂತೆ ಅಭಿಯಾನದಲ್ಲಿ ಶಾಲಾ ಮಕ್ಕಳ ಭಾಗವಹಿಸುವಿಕೆಯನ್ನು ಸುಗಮಗೊಳಿಸಲು ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳು (ಎಸ್‌ಎಂಸಿ) ಹಾಗೂ ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸುವಂತೆ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ‘ಎಸ್‌ಬಿಎಂ(ಜಿ)’ ತಂಡಗಳಿಗೆ ಅವರು ಕರೆ ನೀಡಿದರು. ದೇಶದ ಪ್ರವಾಸಿ ತಾಣಗಳು ಸೇರಿದಂತೆ ಹೆಚ್ಚಿನ ಜನಸಂದಣಿ ಇರುವ ಸಾರ್ವಜನಿಕ ಪ್ರದೇಶಗಳಲ್ಲಿ ಸ್ವಚ್ಛ ಮತ್ತು ಕಾರ್ಯನಿರ್ವಹಿಸುವ ಸಮುದಾಯ ನೈರ್ಮಲ್ಯ ಸಂಕೀರ್ಣಗಳ (ಸಿಎಸ್‌ಸಿ) ಮಹತ್ವವನ್ನು ಅವರು ಎತ್ತಿ ತೋರಿಸಿದರು; ಇವು ಪ್ರವಾಸಿಗರ ಒಟ್ಟಾರೆ ಅನುಭವಕ್ಕೆ ನೇರವಾಗಿ ಮತ್ತು ಸ್ಥಳೀಯ ಆರ್ಥಿಕತೆಗೆ ಪರೋಕ್ಷವಾಗಿ ಕೊಡುಗೆ ನೀಡುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.

ಸಂಪೂರ್ಣ ಸ್ವಚ್ಛತೆಗಾಗಿ ಸಾರ್ವಜನಿಕರ ಸಹಭಾಗಿತ್ವದ ಮೂಲಕ ಇದನ್ನು ಯಶಸ್ವಿ ಅಭಿಯಾನವನ್ನಾಗಿಸಲು ವಿವಿಧ ಪಾಲುದಾರರ ಪಾಲ್ಗೊಳ್ಳುವಿಕೆಯನ್ನು ಖಚಿತಪಡಿಸಿಕೊಳ್ಳುವಂತೆ ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಮನವಿ ಮಾಡುವುದರೊಂದಿಗೆ ಇ-ಚಾಲನೆ ಕಾರ್ಯಕ್ರಮವು ಮುಕ್ತಾಯಗೊಂಡಿತು.

 

*****


(ಪ್ರಕಟಣೆ ಐ.ಡಿ.: 2338890) ವಿಸಿಟರ್ ಕೌಂಟರ್ : 4
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Nepali , Gujarati