ಜಲ ಶಕ್ತಿ ಸಚಿವಾಲಯ
azadi ka amrit mahotsav

14ನೇ ಜಿಲ್ಲಾಧಿಕಾರಿಗಳ ಪೇಯಜಲ್ ಸಂವಾದವನ್ನು ಆಯೋಜಿಸಿದ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ


ಜೆಜೆಎಂ 2.0 ಅಡಿಯಲ್ಲಿ ಸಮುದಾಯದ ಮಾಲೀಕತ್ವ, ಕೌಶಲ್ಯಾಭಿವೃದ್ಧಿ, ಕಾರ್ಯಾಚರಣೆ ಮತ್ತು ನಿರ್ವಹಣೆ, ಜಲಮೂಲ ಸುಸ್ಥಿರತೆ ಹಾಗೂ 24x7 ಗ್ರಾಮೀಣ ನೀರು ಸರಬರಾಜು ಕುರಿತ ನವೀನ ಪದ್ಧತಿಗಳನ್ನು ಪ್ರದರ್ಶಿಸಿದ ಹಿಮಾಚಲ ಪ್ರದೇಶ, ಗುಜರಾತ್, ಅಸ್ಸಾಂ ಮತ್ತು ತ್ರಿಪುರಾದ ನಾಲ್ಕು ಜಿಲ್ಲೆಗಳು

ಪ್ರಕಟಣಾ ದಿನಾಂಕ: 19 NOV 2026 3:38PM by PIB Bengaluru

ಜಲಶಕ್ತಿ ಸಚಿವಾಲಯದ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು ಇಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ 14 ನೇ ಆವೃತ್ತಿಯ ಜಿಲ್ಲಾಧಿಕಾರಿಗಳ ಪೇಯಜಲ್ ಸಂವಾದವನ್ನು ಆಯೋಜಿಸಿತು. ಜಲ ಜೀವನ್ ಮಿಷನ್ 2.0 ಅನುಷ್ಠಾನವನ್ನು ವೇಗಗೊಳಿಸುವುದು ಮತ್ತು ಉತ್ತಮ ಪದ್ಧತಿಗಳನ್ನು ಹಂಚಿಕೊಳ್ಳುವ ಕುರಿತು ಸಮಾಲೋಚನೆ ನಡೆಸಲು ಹಿರಿಯ ಅಧಿಕಾರಿಗಳು, ಜಿಲ್ಲಾಧಿಕಾರಿಗಳು/ಜಿಲ್ಲಾ ದಂಡಾಧಿಕಾರಿಗಳು ಮತ್ತು ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಮಿಷನ್ ನಿರ್ದೇಶಕರನ್ನು ಈ ಸಂವಾದವು ಒಂದೆಡೆ ಸೇರಿಸಿತು.

ರಾಷ್ಟ್ರೀಯ ಜಲ ಜೀವನ್ ಮಿಷನ್ ಹೆಚ್ಚುವರಿ ಕಾರ್ಯದರ್ಶಿ ಮತ್ತು ಮಿಷನ್ ನಿರ್ದೇಶಕ ಶ್ರೀ ಕಮಲ್ ಕಿಶೋರ್ ಸೋನ್ ಅವರು ಈ ಸಂವಾದದ ಅಧ್ಯಕ್ಷತೆ ವಹಿಸಿದ್ದರು. ಡಿಡಿಡಬ್ಲ್ಯೂಎಸ್ ಮತ್ತು ರಾಷ್ಟ್ರೀಯ ಯೋಜನಾ ಮೇಲ್ವಿಚಾರಣಾ ಘಟಕಗಳ ಹಿರಿಯ ಅಧಿಕಾರಿಗಳೂ ಉಪಸ್ಥಿತರಿದ್ದರು.

ತಮ್ಮ ಆರಂಭಿಕ ನುಡಿಗಳಲ್ಲಿ, ಎನ್‌ಜೆಜೆಎಂ ಹೆಚ್ಚುವರಿ ಕಾರ್ಯದರ್ಶಿ ಮತ್ತು ಮಿಷನ್ ನಿರ್ದೇಶಕ ಶ್ರೀ ಕಮಲ್ ಕಿಶೋರ್ ಸೋನ್ ಅವರ ಪ್ರಸ್ತುತಿಯು, ದೇಶಾದ್ಯಂತದ ತಳಮಟ್ಟದ ಆವಿಷ್ಕಾರಗಳು ಮತ್ತು ಜಿಲ್ಲಾ ಮಟ್ಟದ ಅನುಭವಗಳನ್ನು ಹಂಚಿಕೊಳ್ಳಲು ಜಿಲ್ಲಾಧಿಕಾರಿಗಳ ಪೇಯಜಲ್ ಸಂವಾದವು ಪ್ರಮುಖ ವೇದಿಕೆಯಾಗಿ ವಿಕಸನಗೊಂಡಿದೆ ಎಂದು ಪ್ರಮುಖವಾಗಿ ಪ್ರಸ್ತಾಪಿಸಿದರು. ವ್ಯಾಪಕ ಅನುಕರಣೆ ಮತ್ತು ನೀತಿ ಕಲಿಕೆಗೆ ಅನುಕೂಲವಾಗುವಂತೆ ಸಂವಾದದ ಸಂದರ್ಭದಲ್ಲಿ ಪ್ರಸ್ತುತಪಡಿಸಲಾದ ಉತ್ತಮ ಪದ್ಧತಿಗಳನ್ನು ಸಂಕಲಿಸಿ ಪ್ರಧಾನಮಂತ್ರಿ ಕಾರ್ಯಾಲಯ, ಸಂಪುಟ ಸಚಿವಾಲಯ, ನೀತಿ ಆಯೋಗ ಮತ್ತು ಇತರ ಪಾಲುದಾರ ಸಚಿವಾಲಯಗಳು ಸೇರಿದಂತೆ ಪ್ರಮುಖ ಸಂಸ್ಥೆಗಳೊಂದಿಗೆ ಹಂಚಿಕೊಳ್ಳಲಾಗುತ್ತದೆ ಎಂದು ಅವರು ಒತ್ತಿ ಹೇಳಿದರು.

ಜಿಲ್ಲಾ ನೀರು ಮತ್ತು ನೈರ್ಮಲ್ಯ ಸಮಿತಿಗಳ ನಿಯಮಿತ ಮಾಸಿಕ ಸಭೆಗಳನ್ನು ಖಚಿತಪಡಿಸಿಕೊಳ್ಳಲು, ಸಾಕ್ಷ್ಯ ಆಧಾರಿತ ಯೋಜನೆಗಾಗಿ ನಿರ್ಧಾರ ಬೆಂಬಲ ವ್ಯವಸ್ಥೆಯನ್ನು ಸಕ್ರಿಯವಾಗಿ ಬಳಸಲು ಮತ್ತು ಜಿಲ್ಲಾ ಮಟ್ಟದ ಸುಧಾರಣಾ ಯೋಜನೆಗಳ (DIP) ಮೂಲಕ 'ಜಲ ಸೇವಾ ಆಂಕಲನ್' ಸಮಯದಲ್ಲಿ ಗುರುತಿಸಲಾದ ಕೊರತೆಗಳನ್ನು ಪರಿಶೀಲಿಸಲು ಅವರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು. ಜಲ ಜೀವನ್ ಮಿಷನ್ ಅಡಿಯಲ್ಲಿ ನಿರ್ಮಿಸಲಾದ ಗ್ರಾಮೀಣ ನೀರು ಸರಬರಾಜು ಮೂಲಸೌಕರ್ಯವನ್ನು ಉಳಿಸಿಕೊಳ್ಳಲು 16 ನೇ ಹಣಕಾಸು ಆಯೋಗದ ಅಡಿಯಲ್ಲಿರುವ ಅವಕಾಶಗಳನ್ನು ಬಳಸಿಕೊಳ್ಳುವಂತೆ, ಸಮುದಾಯದ ಪಾಲ್ಗೊಳ್ಳುವಿಕೆಯನ್ನು ಬಲಪಡಿಸುವಂತೆ ಮತ್ತು ಐಟಿಐಗಳು (ITIs), ಆರ್‌ಎಸ್‌ಇಟಿಐಗಳು (RSETIs), ಎಸ್‌ಆರ್‌ಎಲ್‌ಎಂಗಳು (SRLMs) ನಂತಹ ಸರ್ಕಾರಿ ಸಂಸ್ಥೆಗಳು ಹಾಗೂ ವ್ಯವಸ್ಥೆಗಳ ಮೂಲಕ ಕೌಶಲ್ಯಾಭಿವೃದ್ಧಿಯನ್ನು ಉತ್ತೇಜಿಸುವಂತೆ ಅವರು ರಾಜ್ಯಗಳು ಮತ್ತು ಜಿಲ್ಲೆಗಳಿಗೆ ಕರೆ ನೀಡಿದರು.

ಎನ್‌ಜೆಜೆಎಂ ನಿರ್ದೇಶಕಿ ಶ್ರೀಮತಿ ಪೂಜಾ ಭಟ್ ಅವರು ಜಲ ಜೀವನ್ ಮಿಷನ್ 2.0 ಅಡಿಯಲ್ಲಿ ಕೌಶಲ್ಯಾಭಿವೃದ್ಧಿಯ ಕುರಿತು ಪ್ರಸ್ತುತಿ ನೀಡಿದರು. ಗ್ರಾಮೀಣ ಕುಡಿಯುವ ನೀರಿನ ವಲಯದಿಂದ ಹೊರಹೊಮ್ಮುತ್ತಿರುವ ಉದ್ಯೋಗ ಸಾಮರ್ಥ್ಯವನ್ನು ಪ್ರಮುಖವಾಗಿ ಪ್ರಸ್ತಾಪಿಸಿದ ಅವರು, ನೀರು ಸರಬರಾಜು ವ್ಯವಸ್ಥೆಗಳ ಕಾರ್ಯಾಚರಣೆ ಮತ್ತು ನಿರ್ವಹಣೆಗಾಗಿ ಕೌಶಲ್ಯಪೂರ್ಣ ಸ್ಥಳೀಯ ಕಾರ್ಯಪಡೆಯನ್ನು ಸೃಷ್ಟಿಸಲು ಗಮನಾರ್ಹ ಅವಕಾಶಗಳಿವೆ ಎಂದು ಅಧ್ಯಯನಗಳು ಸೂಚಿಸಿವೆ ಎಂಬುದನ್ನು ಅವರು ಹಂಚಿಕೊಂಡರು. ಜಿಲ್ಲಾ ಮಟ್ಟದ ತಾಂತ್ರಿಕ ಘಟಕಗಳ ಬೆಂಬಲದೊಂದಿಗೆ ಜಲ ಜೀವನ್ ಮಿತ್ರರು, ಬಹು-ಕೌಶಲ್ಯ ತಂತ್ರಜ್ಞರು, ಡಿಪ್ಲೊಮಾ ಆಪರೇಟರ್‌ಗಳು ಮತ್ತು ಮೇಲ್ವಿಚಾರಣಾ ಸಿಬ್ಬಂದಿಯನ್ನು ಒಳಗೊಂಡ ಪ್ರಸ್ತಾವಿತ ಚೌಕಟ್ಟಿನ ಕುರಿತು ಅವರು ವಿವರಿಸಿದರು. ನೀರಿನ ಗುಣಮಟ್ಟದ ಕಣ್ಗಾವಲು, ಸಮುದಾಯ ಸಂಘಟನೆ ಮತ್ತು ಜಲ ಆಸ್ತಿಗಳ ರಕ್ಷಣೆಯಲ್ಲಿ ಮಹಿಳೆಯರು ಹೆಚ್ಚಿನ ಪಾತ್ರ ವಹಿಸಲು ಸಶಕ್ತಗೊಳಿಸಲು ಪ್ರಯತ್ನಿಸುವ 'ಸುಜಲಾಂ ಶಕ್ತಿ' ಉಪಕ್ರಮದ ಕುರಿತೂ ಅವರು ಒತ್ತಿ ಹೇಳಿದರು.

ಕುಡಿಯುವ ನೀರಿನ ಮೂಲಸೌಕರ್ಯದ ದೀರ್ಘಕಾಲೀನ ಸುಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ರಚನಾತ್ಮಕ ತರಬೇತಿ ಕಾರ್ಯಕ್ರಮಗಳು, ಸರ್ಕಾರಿ ತರಬೇತಿ ಸಂಸ್ಥೆಗಳೊಂದಿಗೆ ಒಗ್ಗೂಡಿಸುವಿಕೆ ಮತ್ತು ಕ್ಷೇತ್ರ ಮಟ್ಟದ ಸಿಬ್ಬಂದಿಗೆ ಪುನಶ್ಚೇತನ ತರಬೇತಿಯ ಮೂಲಕ ಸ್ಥಳೀಯ ಸಾಮರ್ಥ್ಯಗಳನ್ನು ಬಲಪಡಿಸುವ ಮಹತ್ವವ ಬಗ್ಗೆಯೂ  ಈ ಪ್ರಸ್ತುತಿಯು ಬೆಳಕು ಚೆಲ್ಲಿತು.

ಪ್ರಸ್ತುತಿಗಳ ಮೂಲಕ ಜಿಲ್ಲೆಗಳು ಹಂಚಿಕೊಂಡ ನವೀನ ಉತ್ತಮ ಪದ್ಧತಿಗಳು

ಪೇಯಜಲ್ ಸಂವಾದದ ಸಮಯದಲ್ಲಿ, ಒಟ್ಟು ನಾಲ್ಕು ಜಿಲ್ಲೆಗಳು ತಮ್ಮ ಪ್ರಗತಿ ಮತ್ತು ಉತ್ತಮ ಕ್ಷೇತ್ರ ಪದ್ಧತಿಗಳನ್ನು ಪ್ರಸ್ತುತಪಡಿಸಿದವು, ಇದು ಜೆಜೆಎಂ 2.0 ಅಡಿಯಲ್ಲಿ ಇತರ ರಾಜ್ಯಗಳ ಜಿಲ್ಲೆಗಳು ಉತ್ತಮವಾಗಿ ಅಭಿವೃದ್ಧಿ ಹೊಂದಲು ಮತ್ತಷ್ಟು ಸಹಾಯ ಮಾಡುತ್ತದೆ. ಪ್ರತಿಯೊಂದು ಪ್ರಸ್ತುತಿಯನ್ನು ಆಯಾ ಜಿಲ್ಲಾಧಿಕಾರಿ/ಜಿಲ್ಲಾ ದಂಡಾಧಿಕಾರಿಗಳು ನೀಡಿದರು.

  • ಕಾಂಗ್ರಾ ನಗರ, ಹಿಮಾಚಲ ಪ್ರದೇಶ – ಶ್ರೀ ಹೇಮರಾಜ್ ಬೈರ್ವಾ, ಜಿಲ್ಲಾಧಿಕಾರಿ ಅವರು ಭೌಗೋಳಿಕವಾಗಿ ಒಂದು ಸವಾಲಾಗಿರುವ ಹಿಮಾಲಯ ಪ್ರದೇಶದಲ್ಲಿ ಸುಸ್ಥಿರ ಕುಡಿಯುವ ನೀರಿನ ಸೇವೆಗಳನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ, ಜಿಲ್ಲೆಯ ಪ್ರಯತ್ನಗಳನ್ನು ಪ್ರಸ್ತುತಪಡಿಸಿದರು. ಜಿಲ್ಲೆಯು ಶೇಕಡಾ 100 ರಷ್ಟು ವ್ಯಾಪ್ತಿಯನ್ನು ಸಾಧಿಸಿದೆ ಮತ್ತು 'ಹರ್ ಘರ್ ಜಲ್' ಪ್ರಮಾಣೀಕರಣದಲ್ಲಿ ಗಣನೀಯ ಪ್ರಗತಿ ಸಾಧಿಸಿದ್ದು, ಉಳಿದ ಗ್ರಾಮಗಳಿಗೆ ಪ್ರಮಾಣೀಕರಣ ಪ್ರಕ್ರಿಯೆಗಳು ಮುಂದುವರಿದಿವೆ ಎಂದು ಅವರು ತಿಳಿಸಿದರು. ಕಠಿಣ ಭೂಪ್ರದೇಶ, ಚದುರಿದ ಜನವಸತಿಗಳು, ವಿದ್ಯುತ್ ಅಡೆತಡೆಗಳು, ಹಳೆಯದಾದ ವಿತರಣಾ ವ್ಯವಸ್ಥೆಗಳು, ಮುಂಗಾರು ಸಂಬಂಧಿತ ಅಡಚಣೆಗಳು ಹಾಗೂ ಕಾರ್ಯಾಚರಣೆ ಮತ್ತು ನಿರ್ವಹಣಾ ಅಗತ್ಯಗಳಿಂದ ಉಂಟಾಗುವ ಸವಾಲುಗಳನ್ನು ಈ ಪ್ರಸ್ತುತಿಯು ಪ್ರಮುಖವಾಗಿ ತಿಳಿಸಿಕೊಟ್ಟಿತು. ಈ ಸವಾಲುಗಳನ್ನು ಎದುರಿಸಲು, ಕಾಂಗ್ರಾವು ಹಳೆಯ ಯೋಜನೆಗಳ ಪುನಶ್ಚೇತನ ಮತ್ತು ವರ್ಧನೆ, ಪಂಪಿಂಗ್ ವ್ಯವಸ್ಥೆಗಳ ಬಲವರ್ಧನೆ, ಹೆಚ್ಚುವರಿ ಶೇಖರಣಾ ಮೂಲಸೌಕರ್ಯ ಸೃಷ್ಟಿ ಮತ್ತು ಜಲಮೂಲ ಸುಸ್ಥಿರತಾ ಕ್ರಮಗಳ ಅನುಷ್ಠಾನಕ್ಕೆ ಆದ್ಯತೆ ನೀಡಿದೆ. ಜಿಲ್ಲೆಯು ತನ್ನ ವ್ಯಾಪಕ ನೀರಿನ ಗುಣಮಟ್ಟ ಕಣ್ಗಾವಲು ಜಾಲ ಮತ್ತು ವಿಡಬ್ಲ್ಯೂಎಸ್‌ಸಿಗಳ ಮೂಲಕ ಸಮುದಾಯದ ಪಾಲ್ಗೊಳ್ಳುವಿಕೆ, ಮಹಿಳಾ ಸದಸ್ಯರ ತರಬೇತಿ, ಜಾಗೃತಿ ಅಭಿಯಾನಗಳನ್ನೂ ಪ್ರದರ್ಶಿಸಿತು. ತಡೆಗಟ್ಟುವ ನಿರ್ವಹಣಾ ಪದ್ಧತಿಗಳು, ಕುಂದುಕೊರತೆ ಪರಿಹಾರ ವ್ಯವಸ್ಥೆಗಳು ಮತ್ತು ಕ್ಷೇತ್ರ ಮಟ್ಟದ ಪಾಲುದಾರರ ನಿರಂತರ ಸಾಮರ್ಥ್ಯ ವೃದ್ಧಿಯನ್ನು ಜಿಲ್ಲೆಯ ಕಾರ್ಯತಂತ್ರದ ಪ್ರಮುಖ ಆಧಾರಸ್ತಂಭಗಳಾಗಿ ಇಲ್ಲಿ ಪ್ರಮುಖವಾಗಿ ಪ್ರಸ್ತುತಪಡಿಸಲಾಯಿತು.

ಬಳಕೆದಾರರ ಶುಲ್ಕ ಸಂಗ್ರಹ ಕಾರ್ಯವಿಧಾನಗಳನ್ನು ಬಲಪಡಿಸುವ ಮತ್ತು ದೀರ್ಘಕಾಲೀನ ಜಲಮೂಲ ಸುಸ್ಥಿರತೆಯನ್ನು ಖಚಿತಪಡಿಸಿಕೊಳ್ಳುವ ಅಗತ್ಯವನ್ನು ಎನ್‌ಜೆಜೆಎಂ ಹೆಚ್ಚುವರಿ ಕಾರ್ಯದರ್ಶಿ ಮತ್ತು ಮಿಷನ್ ನಿರ್ದೇಶಕರು ಒತ್ತಿ ಹೇಳಿದರು. ಗುಡ್ಡಗಾಡು ಪ್ರದೇಶಗಳಲ್ಲಿ ಜಲಮೂಲ ಸುಸ್ಥಿರತೆಯ ಸವಾಲುಗಳನ್ನು ಎದುರಿಸಲು ಉತ್ತರಾಖಂಡದಲ್ಲಿ ಅಳವಡಿಸಿಕೊಳ್ಳಲಾದ ಯಶಸ್ವಿ ಅಂತರ-ಇಲಾಖಾ ಒಗ್ಗೂಡಿಸುವಿಕೆ ಮಾದರಿಗಳನ್ನು ಹಿಮಾಚಲ ಪ್ರದೇಶವು ಅಧ್ಯಯನ ಮಾಡಬಹುದು ಎಂದು ಅವರು ಸಲಹೆ ನೀಡಿದರು. ಯೋಜನೆ ಮತ್ತು ಮಧ್ಯಸ್ಥಿಕೆಗಳ ಮೇಲ್ವಿಚಾರಣೆಗಾಗಿ ನಿರ್ಧಾರ ಬೆಂಬಲ ವ್ಯವಸ್ಥೆಯ ಹೆಚ್ಚಿನ ಬಳಕೆಯನ್ನೂ ಅವರು ಪ್ರೋತ್ಸಾಹಿಸಿದರು.

  • ವಲ್ಸಾದ್, ಗುಜರಾತ್ - ಜಿಲ್ಲಾಧಿಕಾರಿ ಶ್ರೀ ನಿತಿನ್ ವಿ. ಸಾಂಗ್ವಾನ್ ಅವರ ಪ್ರಸ್ತುತಿಯು, ಕಾರ್ಯಾಚರಣೆ ಮತ್ತು ನಿರ್ವಹಣೆ, ಸುಂಕ ಸಂಗ್ರಹ ಮತ್ತು ಕೌಶಲ್ಯಾಭಿವೃದ್ಧಿಯನ್ನು ಬಲಪಡಿಸುವ ನವೀನ ವಿಧಾನಗಳ ಮೇಲೆ ಕೇಂದ್ರೀಕೃತವಾಗಿತ್ತು. ಜಿಲ್ಲೆಯು ಶೇಕಡಾ 100 ರಷ್ಟು 'ಸುಜಲಾಂ ಭಾರತ್ ಐಡಿ'ಗಳು ಮತ್ತು 'ಸುಜಲ್ ಗಾಂವ್ ಐಡಿ' ಸೃಷ್ಟಿಯನ್ನು ಪೂರ್ಣಗೊಳಿಸಿದೆ ಎಂದು ಅವರು ಉಲ್ಲೇಖಿಸಿದರು. ಗ್ರಾಮ ಪಂಚಾಯಿತಿಗಳು, ಸ್ವ-ಸಹಾಯ ಗುಂಪುಗಳು ಮತ್ತು ಆಪರೇಟರ್‌ಗಳಿಗಾಗಿ ಕಾರ್ಯಕ್ಷಮತೆ ಆಧಾರಿತ ಪ್ರೋತ್ಸಾಹಕ ಕಾರ್ಯವಿಧಾನಗಳನ್ನು ಜಿಲ್ಲೆಯು ಪ್ರಮುಖವಾಗಿ ಪ್ರಸ್ತುತ ಪಡಿಸಿತು, ಇದು ಬಳಕೆದಾರರ ಶುಲ್ಕ ಸಂಗ್ರಹವನ್ನು ಗಮನಾರ್ಹವಾಗಿ ಸುಧಾರಿಸಿದೆ ಮತ್ತು ಗ್ರಾಮೀಣ ನೀರು ಸರಬರಾಜು ವ್ಯವಸ್ಥೆಗಳ ಆರ್ಥಿಕ ಸುಸ್ಥಿರತೆಯನ್ನು ಬಲಪಡಿಸಿದೆ. ವಲ್ಸಾದ್ ಮೇಲ್ಮೈ ನೀರು ಆಧಾರಿತ ಕುಡಿಯುವ ನೀರಿನ ವ್ಯವಸ್ಥೆಗಳನ್ನು ಉತ್ತೇಜಿಸುವಲ್ಲಿನ ಅನುಭವಗಳನ್ನೂ ಹಂಚಿಕೊಂಡಿತು, ಆ ಮೂಲಕ ಅಂತರ್ಜಲ ಮೂಲಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿದೆ. ಐಟಿಐಗಳು ಮತ್ತು ವೃತ್ತಿಪರ ಸಂಸ್ಥೆಗಳ ಮೂಲಕ ನೀಡಲಾದ ಉದ್ದೇಶಿತ ತರಬೇತಿ ಕಾರ್ಯಕ್ರಮಗಳು ನೀರು ಸರಬರಾಜು ಆಪರೇಟರ್‌ಗಳು, ಪಂಚಾಯಿತಿಗಳು ಮತ್ತು ಸಮುದಾಯ ಸಂಸ್ಥೆಗಳ ತಾಂತ್ರಿಕ ಸಾಮರ್ಥ್ಯಗಳನ್ನು ಹೇಗೆ ಬಲಪಡಿಸಿವೆ ಎಂಬುದನ್ನು ಜಿಲ್ಲೆಯು ತೋರಿಸಿಕೊಟ್ಟಿತು. ಸಮುದಾಯ ಜಾಗೃತಿ ಕಾರ್ಯಕ್ರಮಗಳು, ನಿಯಮಿತ ನೀರಿನ ಗುಣಮಟ್ಟದ ಮೇಲ್ವಿಚಾರಣೆ ಮತ್ತು ನವೀನ ಮೂಲಸೌಕರ್ಯ ಮ್ಯಾಪಿಂಗ್ ಉಪಕ್ರಮಗಳನ್ನೂ ಪ್ರಮುಖವಾಗಿ ಪ್ರಸ್ತಾಪಿಸಲಾಯಿತು.

ಸುಂಕ ಸಂಗ್ರಹ, ಕೌಶಲ್ಯಾಭಿವೃದ್ಧಿ ಮತ್ತು ಕಾರ್ಯಾಚರಣೆ ಹಾಗೂ ನಿರ್ವಹಣೆಯತ್ತ ಗುಜರಾತ್‌ನ ನವೀನ ವಿಧಾನವನ್ನು ಎನ್‌ಜೆಜೆಎಂ ಹೆಚ್ಚುವರಿ ಕಾರ್ಯದರ್ಶಿ ಮತ್ತು ಮಿಷನ್ ನಿರ್ದೇಶಕರು ಶ್ಲಾಘಿಸಿದರು. ಗ್ರಾಮ ಮಟ್ಟದ ಕಾರ್ಯಕರ್ತರಿಗೆ ನಿರಂತರ ತರಬೇತಿ ಮತ್ತು ಪುನಶ್ಚೇತನ ಕಾರ್ಯಕ್ರಮಗಳ ಮಹತ್ವವದ ಬಗ್ಗೆ ಒತ್ತಿ ಹೇಳಿದ ಅವರು, ಕೌಶಲ್ಯಾಭಿವೃದ್ಧಿ ಮತ್ತು ಸಮುದಾಯ ಆಧಾರಿತ ನಿರ್ವಹಣೆಗೆ ಗುಜರಾತ್‌ನ ವಿಧಾನಗಳಿಂದ ಕಲಿಯಲು ಆಸಕ್ತಿ ಹೊಂದಿರುವ ಇತರ ರಾಜ್ಯಗಳಿಗೆ ಅಧ್ಯಯನ ಪ್ರವಾಸಗಳಿಗೆ ಅನುಕೂಲ ಮಾಡಿಕೊಡುವಂತೆ ರಾಜ್ಯವನ್ನು ಪ್ರೋತ್ಸಾಹಿಸಿದರು.

  • ಜೋರ್ಹತ್, ಅಸ್ಸಾಂ – ಜಿಲ್ಲಾಧಿಕಾರಿ ಶ್ರೀ ಜಯ್ ಶಿವಾನಿ ಅವರು, ನೀರು ಸರಬರಾಜು ಯೋಜನೆಗಳ ಸಂಪೂರ್ಣ ಕಾರ್ಯಕ್ಷಮತೆಯನ್ನು ಸಾಧಿಸಲು, ಸಮುದಾಯದ ಮಾಲೀಕತ್ವವನ್ನು ಬಲಪಡಿಸಲು ಮತ್ತು ಅಸ್ಸಾಂನಲ್ಲಿ 24x7 ಗ್ರಾಮೀಣ ನೀರು ಸರಬರಾಜು ವ್ಯವಸ್ಥೆಗಳಿಗೆ ಮುನ್ನುಡಿ ಬರೆಯಲು ಜಿಲ್ಲೆಯ ಪ್ರಯತ್ನಗಳನ್ನು ಪ್ರಮುಖವಾಗಿ ಪ್ರಸ್ತಾಪಿಸಿದರು. ಜಿಲ್ಲೆಯು ತನ್ನ ದೃಢವಾದ ಮೇಲ್ವಿಚಾರಣಾ ಚೌಕಟ್ಟು, ವಿಕೇಂದ್ರೀಕೃತ ಕಾರ್ಯಾಚರಣೆ ಮತ್ತು ನಿರ್ವಹಣಾ (O&M) ಕಾರ್ಯವಿಧಾನಗಳು ಹಾಗೂ ಸುಂಕ ಸಂಗ್ರಹವನ್ನು ಸುಧಾರಿಸುವ ನವೀನ ಪದ್ಧತಿಗಳನ್ನು ವಿವರಿಸಿತು. ಯೋಜನೆಗಳ ನಿಯಮಿತ ಮೇಲ್ವಿಚಾರಣೆ, ಸಕಾಲಿಕ ದುರಸ್ತಿ ಮತ್ತು ಪಂಚಾಯಿತಿಗಳು ಹಾಗೂ ಸ್ಥಳೀಯ ಸಂಸ್ಥೆಗಳ ಸಾಮರ್ಥ್ಯವನ್ನು ಬಲಪಡಿಸುವಲ್ಲಿ ಜೋರ್ಹತ್ ಗಮನಾರ್ಹ ಪ್ರಗತಿಯನ್ನು ವರದಿ ಮಾಡಿದೆ ಮತ್ತು ನೀರಿನ ಬಳಕೆದಾರರ ಸಮಿತಿಗಳು, ಜಲ ಮಿತ್ರರು ಮತ್ತು ಜಲ ದೂತರ ಮೂಲಕ ನವೀನ ಸುಂಕ ಸಂಗ್ರಹ ಮಾದರಿಗಳು ಹಾಗೂ ಬಲವಾದ ಸಮುದಾಯದ ಪಾಲ್ಗೊಳ್ಳುವಿಕೆಯನ್ನು ಪ್ರದರ್ಶಿಸಿದೆ. ಈ ಪ್ರಯತ್ನಗಳು ಗ್ರಾಮೀಣ ನೀರು ಸರಬರಾಜು ವ್ಯವಸ್ಥೆಗಳ ಕಾರ್ಯಕ್ಷಮತೆ ಮತ್ತು ಆರ್ಥಿಕ ಸುಸ್ಥಿರತೆ ಎರಡನ್ನೂ ಸುಧಾರಿಸಲು ಕೊಡುಗೆ ನೀಡಿವೆ. ನಿರಂತರ ನೀರು ಸರಬರಾಜಿಗೆ ಬದಲಾಗುವ ಮೊದಲು ಸಮುದಾಯಗಳನ್ನು ಸಿದ್ಧಪಡಿಸುವ, ಸ್ಥಳೀಯ ಸಂಸ್ಥೆಗಳನ್ನು ಬಲಪಡಿಸುವ ಮತ್ತು ಹಂತಹಂತದ ವಿಧಾನವನ್ನು ಅಳವಡಿಸಿಕೊಳ್ಳುವ ತನ್ನ ಅನುಭವವನ್ನು ಜಿಲ್ಲೆಯು ಹಂಚಿಕೊಂಡಿತು. ಜಿಲ್ಲೆಯ ಈ ಉಪಕ್ರಮವು ಅಸ್ಸಾಂನಾದ್ಯಂತ 24x7 ಗ್ರಾಮೀಣ ನೀರು ಸರಬರಾಜನ್ನು ವಿಸ್ತರಿಸಲು ಅಮೂಲ್ಯವಾದ ಕಲಿಕೆಗಳನ್ನು ನೀಡಿದೆ.

ಅಸ್ಸಾಂನಲ್ಲಿ 24x7 ಗ್ರಾಮೀಣ ನೀರು ಸರಬರಾಜಿಗೆ ಮುನ್ನುಡಿ ಬರೆದಿದ್ದಕ್ಕಾಗಿ ಎನ್‌ಜೆಜೆಎಂ ಹೆಚ್ಚುವರಿ ಕಾರ್ಯದರ್ಶಿ ಮತ್ತು ಮಿಷನ್ ನಿರ್ದೇಶಕರು ಜೋರ್ಹತ್ ಅನ್ನು ಅಭಿನಂದಿಸಿದರು ಮತ್ತು ಕಾರ್ಯಕ್ಷಮತೆ, ಕಾರ್ಯಾಚರಣೆ ಮತ್ತು ನಿರ್ವಹಣೆ, ಸುಂಕ ಸಂಗ್ರಹ ಹಾಗೂ ಸಮುದಾಯದ ಮಾಲೀಕತ್ವಕ್ಕೆ ಸಂಬಂಧಿಸಿದ ಜಿಲ್ಲೆಯ ಉತ್ತಮ ಪದ್ಧತಿಗಳಿಂದ ಕಲಿಯಲು ಮತ್ತು ಅವುಗಳನ್ನು ಅಳವಡಿಸಿಕೊಳ್ಳಲು ಇತರ ಜಿಲ್ಲೆಗಳಿಗೆ ಕರೆ ನೀಡಿದರು. ಗ್ರಾಮಗಳು ಮತ್ತು ಗ್ರಾಮ ಪಂಚಾಯಿತಿಗಳಿಂದ ಪ್ರಾರಂಭಿಸಿ ಹಂತಹಂತವಾಗಿ ಸಂಪೂರ್ಣ ಗುರಿ ಸಾಧನೆಯತ್ತ ಸಾಗುವಂತೆ ಅವರು ಜಿಲ್ಲೆಯನ್ನು ಪ್ರೋತ್ಸಾಹಿಸಿದರು.

  • ಉನಕೋಟಿ, ತ್ರಿಪುರಾ – ಜಿಲ್ಲಾ ದಂಡಾಧಿಕಾರಿ ಮತ್ತು ಆಯುಕ್ತರಾದ ಶ್ರೀಮತಿ ಮೇಘಾ ಜೈನ್ ಅವರು ತಮ್ಮ ಪ್ರಸ್ತುತಿಯಲ್ಲಿ, ಬುಡಕಟ್ಟು ಮತ್ತು ಕಠಿಣ ಭೂಪ್ರದೇಶಗಳಲ್ಲಿ ಜನಭಾಗಿದಾರಿ, ಜಲಮೂಲ ಸುಸ್ಥಿರತೆ ಮತ್ತು ಕುಡಿಯುವ ನೀರಿನ ಸೇವಾ ವಿತರಣೆಯನ್ನು ಬಲಪಡಿಸುವತ್ತ ಗಮನಹರಿಸಿದ ಜಿಲ್ಲೆಯ ಉಪಕ್ರಮಗಳನ್ನು ಪ್ರಸ್ತುತಪಡಿಸಿದರು ಹಾಗೂ ಜಲ ಸಂರಕ್ಷಣೆ, ನೀರಿನ ಗುಣಮಟ್ಟದ ಮೇಲ್ವಿಚಾರಣೆ ಮತ್ತು ಆಸ್ತಿಗಳ ಸಮುದಾಯ ಮಾಲೀಕತ್ವವನ್ನು ಉತ್ತೇಜಿಸುವಲ್ಲಿ ಗ್ರಾಮ ಪಂಚಾಯಿತಿಗಳು, ಸ್ವ-ಸಹಾಯ ಗುಂಪುಗಳು, ಶಾಲಾ ಜಲ ಕ್ಲಬ್‌ಗಳು ಮತ್ತು ಸ್ಥಳೀಯ ಸಮುದಾಯಗಳ ಸಕ್ರಿಯ ಪಾಲ್ಗೊಳ್ಳುವಿಕೆಯ ಬಗ್ಗೆ ಒತ್ತಿ ಹೇಳಿದರು. ಅಂತರ್ಜಲ ಮರುಪೂರಣ, ಕೆರೆಗಳ ಪುನಶ್ಚೇತನ, ಬೂದು ನೀರಿನ ನಿರ್ವಹಣೆ ಮತ್ತು ಮಳೆನೀರು ಕೊಯ್ಲುಗಾಗಿ ಒಗ್ಗೂಡಿಸುವಿಕೆ ಆಧಾರಿತ ವಿಧಾನಗಳನ್ನೂ ಜಿಲ್ಲೆಯು ಪ್ರದರ್ಶಿಸಿತು. ಸಂಬಂಧಿತ ಇಲಾಖೆಗಳ ನಡುವಿನ ನಿಕಟ ಸಮನ್ವಯದ ಮೂಲಕ, ದೀರ್ಘಕಾಲೀನ ಜಲ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಕುಡಿಯುವ ನೀರಿನ ಸೇವಾ ವಿತರಣಾ ಮಧ್ಯಸ್ಥಿಕೆಗಳೊಂದಿಗೆ ಜಲಮೂಲ ಸುಸ್ಥಿರತಾ ಕ್ರಮಗಳನ್ನು ಸಂಯೋಜಿಸಲಾಗುತ್ತಿದೆ. ಸಂವಾದದ ಸಮಯದಲ್ಲಿ ಪ್ರಸ್ತುತಪಡಿಸಲಾದ ಗಮನಾರ್ಹ ಉದಾಹರಣೆಯೆಂದರೆ, ವಿಶೇಷವಾಗಿ ದುರ್ಬಲ ಬುಡಕಟ್ಟು ಗುಂಪಾದ (PVTG) ರಿಯಾಂಗ್ (Reang) ಸಮುದಾಯವು ವಾಸಿಸುವ ಜನವಸತಿಗಳಿಗಾಗಿ ನವೀನ ಮೇಲ್ಮೈ ನೀರು ಆಧಾರಿತ ಕುಡಿಯುವ ನೀರಿನ ಯೋಜನೆಯ ಅಭಿವೃದ್ಧಿ. ವೈಜ್ಞಾನಿಕ ಜಲಮೂಲ ಗುರುತಿಸುವಿಕೆ, ಸಮುದಾಯದ ಪಾಲ್ಗೊಳ್ಳುವಿಕೆ ಮತ್ತು ಸ್ಥಳೀಯ ಯೋಜನಾ ಪ್ರಕ್ರಿಯೆಗಳ ಮೂಲಕ, ಅಂತರ್ಜಲ ಆಧಾರಿತ ಪರಿಹಾರಗಳು ತಾಂತ್ರಿಕವಾಗಿ ಕಾರ್ಯಸಾಧ್ಯವಲ್ಲದ ಪ್ರದೇಶದಲ್ಲಿ ಕುಡಿಯುವ ನೀರಿನ ಸವಾಲುಗಳನ್ನು ಜಿಲ್ಲೆಯು ಯಶಸ್ವಿಯಾಗಿ ಪರಿಹರಿಸಿದೆ ಎಂದು ಅವರು ತಿಳಿಸಿಕೊಟ್ಟರು.

ಜಲಮೂಲ ಸುಸ್ಥಿರತೆ, ಸಮುದಾಯದ ಮಾಲೀಕತ್ವ ಮತ್ತು ಒಗ್ಗೂಡಿಸುವಿಕೆಗೆ ಜಿಲ್ಲೆಯು ನೀಡಿದ ಒತ್ತನ್ನು ಎನ್‌ಜೆಜೆಎಂ ಹೆಚ್ಚುವರಿ ಕಾರ್ಯದರ್ಶಿ ಮತ್ತು ಮಿಷನ್ ನಿರ್ದೇಶಕರು ಶ್ಲಾಘಿಸಿದರು. ಮುಂಗಾರು ನಂತರದ ನೀರಿನ ಗುಣಮಟ್ಟ ಪರೀಕ್ಷೆಯ ಮಹತ್ವವನ್ನು ಒತ್ತಿ ಹೇಳಿದ ಅವರು, ಸಾರ್ವಜನಿಕ ಆರೋಗ್ಯವನ್ನು ಕಾಪಾಡಲು ನಿಯಮಿತ ನೀರಿನ ಗುಣಮಟ್ಟದ ಕಣ್ಗಾವಲನ್ನು ಖಚಿತಪಡಿಸಿಕೊಳ್ಳುವಂತೆ ಎಲ್ಲಾ ರಾಜ್ಯಗಳು ಮತ್ತು ಜಿಲ್ಲೆಗಳಿಗೆ ನಿರ್ದೇಶನ ನೀಡಿದರು.

14ನೇ ಜಿಲ್ಲಾಧಿಕಾರಿಗಳ ಪೇಯಜಲ್ ಸಂವಾದದ ಸಮಯದಲ್ಲಿ ನಡೆದ ಸಮಾಲೋಚನೆಗಳು, ಕುಡಿಯುವ ನೀರಿನ ಸೇವಾ ವಿತರಣೆಯನ್ನು ಬಲಪಡಿಸಲು ದೇಶಾದ್ಯಂತ ಜಿಲ್ಲೆಗಳು ಹೇಗೆ ನವೀನ ಮತ್ತು ಸ್ಥಳೀಯವಾಗಿ ಸೂಕ್ತವಾದ ವಿಧಾನಗಳನ್ನು ಅಳವಡಿಸಿಕೊಳ್ಳುತ್ತಿವೆ ಎಂಬುದನ್ನು ತೋರಿಸಿಕೊಟ್ಟವು. ಈ ಅನುಭವಗಳ ಹಂಚಿಕೆಯು ಯಶಸ್ವಿ ಪದ್ಧತಿಗಳ ವ್ಯಾಪಕ ಅನುಕರಣೆಯನ್ನು ಬೆಂಬಲಿಸುತ್ತದೆ ಮತ್ತು ಭಾರತದಾದ್ಯಂತ 'ಹರ್ ಘರ್ ಜಲ್' ಹಾಗೂ ಸುಸ್ಥಿರ ಗ್ರಾಮೀಣ ನೀರು ಸರಬರಾಜಿನ ದೃಷ್ಟಿಕೋನದತ್ತ ಪ್ರಗತಿಯನ್ನು ಮತ್ತಷ್ಟು ವೇಗಗೊಳಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.

 

*****


(ಪ್ರಕಟಣೆ ಐ.ಡಿ.: 2338544) ವಿಸಿಟರ್ ಕೌಂಟರ್ : 3
ಪ್ರಕಟಣೆಯನ್ನು ಇದರಲ್ಲಿ ಓದಿ: Urdu , English , हिन्दी , Gujarati