ಪ್ರಕಟಣಾ ದಿನಾಂಕ:
18 NOV 2026 1:22PM by PIB Bengaluru
ಟರ್ಕಿಯ ಅಂಟಲ್ಯದಲ್ಲಿ ನಡೆದ ‘ಯುಎನ್‌ಎಫ್‌ಸಿಸಿಸಿ ಸಿಒಪಿ31’ ಸಮಾವೇಶದಲ್ಲಿ ಭಾರತದ ರಾಷ್ಟ್ರೀಯ ಹೇಳಿಕೆಯನ್ನು ನೀಡಿದ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವರಾದ ಶ್ರೀ ಭೂಪೇಂದರ್ ಯಾದವ್ ಅವರು, ಸಮಾನತೆ, ಹವಾಮಾನ ನ್ಯಾಯ ತತ್ವದಲ್ಲಿ ಬೇರೂರಿರುವ ಹವಾಮಾನ ಕ್ರಿಯೆಗೆ ಕರೆ ನೀಡಿದರು. ಇದೇ ವೇಳೆ, ‘ಸಾಮಾನ್ಯ, ಆದರೆ ವಿಭಿನ್ನ ಜವಾಬ್ದಾರಿಗಳು ಮತ್ತು ಆಯಾ ಸಾಮರ್ಥ್ಯಗಳ’ (ಸಿಬಿಡಿಆರ್‌ಸಿ-ಆರ್‌ಸಿ) ತತ್ವ ಅಳವಡಿಸಿಕೊಳ್ಳಲು ಕರೆ ನೀಡಿದರು. ‘ಸಂವಾದ, ಒಮ್ಮತ ಮತ್ತು ಕ್ರಿಯೆ’ ಎಂಬ ‘ಸಿಒಪಿ31’ ವಿಷಯವಸ್ತುವನ್ನು ಒತ್ತಿಹೇಳಿದ ಸಚಿವರು, ಪ್ರಾಮಾಣಿಕ ಸಂವಾದ, ಸಮಾನತೆ ಆಧಾರಿತ ಒಮ್ಮತ ಮತ್ತು ತುರ್ತು ಕ್ರಮಗಳು ಜಾಗತಿಕ ಹವಾಮಾನ ಪ್ರಯತ್ನಗಳಿಗೆ ಮಾರ್ಗದರ್ಶನ ನೀಡಬೇಕು ಎಂದು ಹೇಳಿದರು.

ಹವಾಮಾನ ಬದಲಾವಣೆಯ ಐತಿಹಾಸಿಕ ಜವಾಬ್ದಾರಿಯನ್ನು ಉಲ್ಲೇಖಿಸಿದ ಶ್ರೀ ಯಾದವ್, ಭೂಮಿಯ ತಾಪಮಾನ ಏರಿಕೆಯು ಕೆಲವು ದೇಶಗಳಲ್ಲಿ ಎರಡು ಶತಮಾನಗಳ ಕೈಗಾರಿಕೀಕರಣ ಮತ್ತು ಆರ್ಥಿಕ ಬೆಳವಣಿಗೆಯ ಪರಿಣಾಮವಾಗಿದೆ, ಇದು ನಿರಂತರ ಹಸಿರುಮನೆ ಅನಿಲ ಹೊರಸೂಸುವಿಕೆಗೆ ಕಾರಣವಾಗಿದೆ ಎಂದು ತಿಳಿಸಿದರು. 'ಉನ್ನತ ಮಹತ್ವಾಕಾಂಕ್ಷೆ'ಯ ಹೆಸರಿನಲ್ಲಿ ಈ ಐತಿಹಾಸಿಕ ಹೊರಸೂಸುವಿಕೆಯ ಪರಿಣಾಮಗಳನ್ನು ಪರಿಹರಿಸುವ ಹೊರೆಯನ್ನು 'ಜಾಗತಿಕ ದಕ್ಷಿಣ’ (ಅಭಿವೃದ್ಧಿಶೀಲ ರಾಷ್ಟ್ರಗಳು) ಹೊರಬೇಕು ಎಂದು ನಿರೀಕ್ಷಿಸುವುದು ಸಮರ್ಥನೀಯವಲ್ಲ ಎಂದು ಅವರು ಪ್ರತಿಪಾದಿಸಿದರು. ಹವಾಮಾನ ಉಪಕ್ರಮ ಮತ್ತು ಅಭಿವೃದ್ಧಿ, ಯೋಗ್ಯ ಜೀವನಮಟ್ಟ, ಆರೋಗ್ಯ ಮತ್ತು ಶಿಕ್ಷಣದ ತಮ್ಮ ನ್ಯಾಯಸಮ್ಮತ ಹಕ್ಕಿನ ನಡುವೆ ಆಯ್ಕೆ ಮಾಡಲು ಅಭಿವೃದ್ಧಿಶೀಲ ರಾಷ್ಟ್ರಗಳನ್ನು ಕೇಳಲಾಗುವುದಿಲ್ಲ ಎಂದು ಒತ್ತಿ ಹೇಳಿದ ಸಚಿವರು, ಉಳಿದಿರುವ ಕಾರ್ಬನ್ ಬಜೆಟ್‌ಗೆ ಸಮಾನ ಪ್ರವೇಶದ ವಿಷಯದಲ್ಲಿ ಯಾವುದೇ ಚೌಕಾಸಿಗೆ ಆಸ್ಪದವಿಲ್ಲ ಎಂದರು.
‘ಸಿಒಪಿ’ ನಿರ್ಧಾರಗಳು ಮತ್ತು ಅವುಗಳ ಅನುಷ್ಠಾನವು ಸಮಾನತೆ ಹಾಗೂ ‘ಸಿಬಿಡಿಆರ್-ಆರ್‌ಸಿ’ ಯಲ್ಲಿ ದೃಢವಾಗಿ ನೆಲೆಗೊಂಡಿರಬೇಕು ಎಂದು ಶ್ರೀ ಯಾದವ್ ಒತ್ತಿ ಹೇಳಿದರು. ತಗ್ಗಿಸುವಿಕೆ ಕಾರ್ಯಕ್ರಮವು (ಮಿಟಿಗೇಷನ್ ವರ್ಕ್ ಪ್ರೋಗ್ರಾಮ್ -ಎಂಡಬ್ಲ್ಯೂಪಿ) ಸುಗಮವಾಗಿ ಮತ್ತು ಕಡ್ಡಾಯವಲ್ಲದ ರೀತಿಯಲ್ಲಿ ಉಳಿಯಲು, ‘ಗ್ಲೋಬಲ್ ಸ್ಟಾಕ್‌ಟೇಕ್’ ಪಕ್ಷಗಳಿಗೆ ಮಾಹಿತಿ ನೀಡುವ ಸಾಧನವಾಗಿ ಕಾರ್ಯನಿರ್ವಹಿಸುವುದನ್ನು ಮುಂದುವರಿಸಬೇಕು ಮತ್ತು ನ್ಯಾಯಯುತ ಪರಿವರ್ತನಾ ಕಾರ್ಯವಿಧಾನವು (ಜೆಟಿಎಂ) ಸಮಾನತೆಯನ್ನು ಆಧರಿಸಿರಬೇಕು ಎಂದು ಅವರು ಕರೆ ನೀಡಿದರು. ಹವಾಮಾನ ಉಪಕ್ರಮದ ನೆಪದಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ದಂಡ ವಿಧಿಸುವ ಏಕಪಕ್ಷೀಯ ವ್ಯಾಪಾರ ಕ್ರಮಗಳ ವಿರುದ್ಧ ಎಚ್ಚರಿಸಿದ ಸಚಿವರು, ಅಭಿವೃದ್ಧಿ ಹೊಂದಿದ ದೇಶಗಳು ತಮ್ಮ ಹವಾಮಾನ ಹಣಕಾಸು ಜವಾಬ್ದಾರಿಗಳನ್ನು ಪ್ರಾಮಾಣಿಕವಾಗಿ ಮತ್ತು ತ್ವರಿತವಾಗಿ ಪೂರೈಸಬೇಕು ಎಂದು ಕರೆ ನೀಡಿದರು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತದ ಹವಾಮಾನ ಬದ್ಧತೆಗಳನ್ನು ಉಲ್ಲೇಖಿಸಿದ ಶ್ರೀ ಯಾದವ್, ಭಾರತದ ‘ರಾಷ್ಟ್ರೀಯವಾಗಿ ನಿರ್ಧರಿಸಲಾದ ಕೊಡುಗೆಗಳು’ (ಎನ್‌ಡಿಸಿ) 2047ರ ವೇಳೆಗೆ ಸುಸ್ಥಿರ ರೀತಿಯಲ್ಲಿ 'ವಿಕಸಿತ ಭಾರತ' ಗುರಿಯನ್ನು ಸಾಧಿಸುವ ಆಶಯಕ್ಕೆ ಹೊಂದಿಕೊಂಡಿವೆ ಎಂದು ಹೇಳಿದರು. ಸಮಕಾಲೀನ ಸಹಕಾರವನ್ನು ರೂಪಿಸುವಾಗ ಹವಾಮಾನ ಮತ್ತು ಜನಸಂಖ್ಯಾ ಬದಲಾವಣೆಗಳು ಹಾಗೂ ತಾಂತ್ರಿಕ ಪ್ರಗತಿಗಳನ್ನು ಪರಿಗಣಿಸುವ ಅಗತ್ಯವನ್ನು ಅವರು ಒತ್ತಿಹೇಳಿದರು. ‘ಸಿಒಪಿ31’ರ ಯಶಸ್ಸನ್ನು ಸ್ಪಷ್ಟವಾದ ಅನುಷ್ಠಾನ, ಅಗತ್ಯವಿರುವವರಿಗೆ ಸಂಪನ್ಮೂಲಗಳ ವಿತರಣೆ ಮತ್ತು ಸಾಬೀತಾದ ಪರಿಹಾರಗಳನ್ನು ಹೆಚ್ಚಿಸುವ ಮೂಲಕ ನಿರ್ಣಯಿಸಬೇಕು ಎಂದು ಒತ್ತಿಹೇಳಿದ ಶ್ರೀ ಯಾದವ್ ಅವರು, ವಿಶ್ವಾಸವನ್ನು ಬೆಳೆಸಲು ಸಂವಾದ, ಸಮಾನತೆಯನ್ನು ಎತ್ತಿಹಿಡಿಯಲು ಒಮ್ಮತ ಮತ್ತು ಹವಾಮಾನ ನ್ಯಾಯವನ್ನು ಒದಗಿಸುವ ಕ್ರಮಗಳಿಗೆ ಕರೆ ನೀಡಿದರು.
*****