ಗಿರೀಶ್ ಕಾಸರವಳ್ಳಿ ಅವರ ಸಾಮಾಜಿಕ ಪ್ರಜ್ಞೆಯುಳ್ಳ ' ಕಲಾತ್ಮಕ ಪರ್ಯಾಯ ಸಿನೆಮಾ' ದಿಂದ ಹಿಡಿದು, ಇಂದಿನ ಕೌಟುಂಬಿಕ ಕಥಾನಕಗಳು, ಜಾನಪದ ಮೂಲದ ಮಹಾಕಾವ್ಯಗಳು ಮತ್ತು ಸಾಕ್ಷ್ಯಚಿತ್ರ ಶೈಲಿಯ ಕಥೆಗಳವರೆಗೆ—ಹೀಗೆ ಕನ್ನಡ ಮತ್ತು ತುಳು ಸಿನೆಮಾಗಳ ವೈವಿಧ್ಯತೆ ಹಾಗೂ ಶ್ರೀಮಂತಿಕೆಯನ್ನು 57ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಐ ಎಫ್ ಎಫ್ ಐ) ಗೋವಾದಲ್ಲಿ ಪ್ರದರ್ಶಿಸುತ್ತಿದೆ.
ಕನ್ನಡ ಚಲನಚಿತ್ರಗಳು:
'ಕಾಂತಾರ: ಎ ಲೆಜೆಂಡ್ - ಚಾಪ್ಟರ್ 1': ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಈ ಚಿತ್ರವು, ಕದಂಬರ ಕಾಲಘಟ್ಟದ ಕಥೆಯನ್ನು ಒಳಗೊಂಡಿದೆ. ಅರಣ್ಯವಾಸಿ ಯುವಕ 'ಬೆರ್ಮೆ', ನೆರೆಯ 'ಬಾಂಗ್ರ' ರಾಜ್ಯಕ್ಕೆ ಪ್ರವೇಶಿಸಿದಾಗ, ಅಲ್ಲಿನ ಆಡಳಿತಗಾರರು ಅರಣ್ಯ ಸಮುದಾಯಗಳ ಮೇಲೆ ನಡೆಸುವ ದೌರ್ಜನ್ಯವನ್ನು ಕಣ್ಣಾರೆ ಕಾಣುತ್ತಾನೆ. ರಾಜಕುಮಾರ ಕುಲಶೇಖರನು ಬುಡಕಟ್ಟು ಜನಾಂಗದವರ ಮೇಲೆ ದಾಳಿ ಮಾಡಿ ಅನೇಕರನ್ನು ಕೊಂದಾಗ, ಬೆರ್ಮೆ ನ್ಯಾಯ ಮತ್ತು ಧರ್ಮಕ್ಕಾಗಿ ನಡೆಯುವ ಅವರ ಹೋರಾಟದಲ್ಲಿ ಕೈಜೋಡಿಸುತ್ತಾನೆ. ಈ ಕಥೆಯು ಜಾನಪದ, ನಂಬಿಕೆ ಮತ್ತು ಅರಣ್ಯ ಸಮುದಾಯಗಳನ್ನು ರಕ್ಷಿಸುವ ಹೋರಾಟವನ್ನು ಒಗ್ಗೂಡಿಸುತ್ತದೆ. ಈ ಚಿತ್ರವು 'ಇಂಡಿಯನ್ ಪನೋರಮಾ'ದ ಮುಖ್ಯವಾಹಿನಿ ಸಿನೆಮಾ ವಿಭಾಗ ಮತ್ತು ಅಂತಾರಾಷ್ಟ್ರೀಯ ಸ್ಪರ್ಧಾ ವಿಭಾಗ ಎರಡರಲ್ಲೂ ಪ್ರದರ್ಶನಗೊಳ್ಳುತ್ತಿದೆ.

'ರೂಬಿ-ಕ್ಯೂಬ್': ಪಿ. ಶೇಷಾದ್ರಿ ನಿರ್ದೇಶನದ ಈ ಚಿತ್ರವು, ಗಿರಿಧಾಮವೊಂದರಲ್ಲಿ ಅಲ್ಪಾವಧಿಯ ರಜೆಯನ್ನು ಕಳೆಯುವ ಒಂದು ಕುಟುಂಬದ ಮೂರು ತಲೆಮಾರುಗಳ ಕಥೆಯನ್ನು ಹೇಳುತ್ತದೆ. ಮನೋವಿಜ್ಞಾನಿ ರೋಹಿಣಿ, ತನ್ನ ಮಗಳು ಚಿತ್ರಾಳ ಮೂಲಕ, ತಾವು ದೂರವಾಗಿದ್ದ ಪತಿ ಮೂರ್ತಿಯವರೊಂದಿಗೆ ಮತ್ತೆ ಒಂದಾಗುತ್ತಾಳೆ. ಮಗಳು ಚಿತ್ರಾ ತನ್ನ ವೈವಾಹಿಕ ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾಳೆ. ಕುಟುಂಬವು ಒಟ್ಟಿಗೆ ಸಮಯ ಕಳೆಯುತ್ತಿದ್ದಂತೆ, ಹಳೆಯ ಮನಸ್ತಾಪಗಳು ಮತ್ತು ಬಗೆಹರಿಯದ ಭಾವನೆಗಳು ಹೊರಬರುತ್ತವೆ. ಇಲ್ಲಿ 'ರೂಬಿಕ್ಸ್ ಕ್ಯೂಬ್' ಸಂಬಂಧಗಳ ಸಂಕೀರ್ಣತೆಯ ಸಂಕೇತವಾಗುತ್ತದೆ; ತಾಳ್ಮೆ ಮತ್ತು ಪರಸ್ಪರ ತಿಳುವಳಿಕೆಯು ಹೇಗೆ ಜೀವನದಲ್ಲಿ ಮುಂದಿನ ದಾರಿಯನ್ನು ಕಂಡುಕೊಳ್ಳಲು ಸಹಾಯ ಮಾಡಬಲ್ಲದು ಎಂಬುದನ್ನು ಇದು ತೋರಿಸುತ್ತದೆ.

'ದಿ ಹಗ್ ಆಫ್ ಎಂಪ್ಟಿನೆಸ್': ಡಾ. ಪ್ರದೀಪ್ ಕೆಂಚನೂರು (ಡಾ. ಪ್ರದೀಪ್ ಕುಮಾರ್ ಶೆಟ್ಟಿ ಕೆ.) ನಿರ್ದೇಶನದ, ಈ ಚಿತ್ರವು ಚಂದ್ರಶೇಖರ್ ಎಂಬ ವ್ಯಕ್ತಿಯ ಕಥೆಯನ್ನು ಹೇಳುತ್ತದೆ. ಸಾಲ ಮರುಪಾವತಿಸಲು ವಿಫಲರಾದ ಕಾರಣ, 2003ರಲ್ಲಿ ಸುಳ್ಯ ಸಹಕಾರಿ ಬ್ಯಾಂಕ್ ಅವರ ಆಸ್ತಿಯನ್ನು ವಶಪಡಿಸಿಕೊಂಡಿರುತ್ತದೆ. ಈ ಕ್ರಮವು ಅನ್ಯಾಯವಾದದ್ದು ಎಂದು ನಂಬಿದ ಅವರು, ಎರಡು ದಶಕಗಳಿಗೂ ಹೆಚ್ಚು ಕಾಲ ಮುಂದುವರಿಯುವ ಕಾನೂನು ಹೋರಾಟವನ್ನು ಪ್ರಾರಂಭಿಸುತ್ತಾರೆ. ಶಾಶ್ವತ ನೆಲೆ ಇಲ್ಲದ ಕಾರಣ, ನ್ಯಾಯಕ್ಕಾಗಿ ಹೋರಾಡುವಾಗ ಅವರು ತಮ್ಮ ಕಾರಿನಲ್ಲೇ ವಾಸಿಸುತ್ತಾರೆ. ಈ ಸಾಕ್ಷ್ಯಚಿತ್ರವು ಅವರ ಸುದೀರ್ಘ ಹೋರಾಟ, ಏಕಾಂತ ಮತ್ತು ಅನಿಶ್ಚಿತ ಭವಿಷ್ಯದ ನಡುವೆಯೂ ಅವರು ತೋರುವ ದೃಢನಿಶ್ಚಯವನ್ನು ಚಿತ್ರಿಸುತ್ತದೆ.

ಉಳಿದಿದ್ದು ಸಂಪಿಗೆ ಮಾತ್ರ: ಅಭಿಷೇಕ್ ನಿರ್ದೇಶನದ ಕಿರುಚಿತ್ರವು, ತಾನು ಪ್ರೀತಿಸಿ ಕಳೆದುಕೊಂಡವಳ ನೆನಪುಗಳೊಂದಿಗೆ ಏಕಾಂಗಿಯಾಗಿ ಬದುಕುತ್ತಿರುವ ಮಂಜಣ್ಣನ ಕಥೆಯನ್ನು ಹೇಳುತ್ತದೆ. ಆಕೆಯ ಒಂದು ಫೋಟೋ ಹಾಳಾದಾಗ, ಮಂಜಣ್ಣ ಒಬ್ಬ ಕಲಾವಿದನನ್ನು ಸಂಪರ್ಕಿಸಿ, ನೆನಪಿನ ಶಕ್ತಿಯಿಂದ ಆಕೆಯ ಭಾವಚಿತ್ರವನ್ನು ಮತ್ತೆ ರಚಿಸಿಕೊಡುವಂತೆ ಕೋರುತ್ತಾನೆ. ಚಿತ್ರವನ್ನು ಪಡೆದ ನಂತರ, ಮಂಜಣ್ಣ ಒಬ್ಬ ನಿಗೂಢ ಅಪರಿಚಿತನನ್ನು ಭೇಟಿಯಾಗುತ್ತಾನೆ. ಈ ಅನಿರೀಕ್ಷಿತ ಭೇಟಿಯು ತನ್ನ ಭೂತಕಾಲವನ್ನು ನೋಡುವ ಅವನ ದೃಷ್ಟಿಕೋನವನ್ನೇ ಬದಲಾಯಿಸುತ್ತದೆ ಮತ್ತು ಅವನು ಊಹಿಸಿರದಂತಹ ಅಂತ್ಯದತ್ತ ಅವನನ್ನು ಕೊಂಡೊಯ್ಯುತ್ತದೆ. ಈ ಕಿರುಚಿತ್ರವು ವಿಯೋಗ, ನೆನಪು ಮತ್ತು ಭಾವನಾತ್ಮಕ ಬದಲಾವಣೆಗಳನ್ನು ಪರಿಶೋಧಿಸುತ್ತದೆ.

ತುಳು ಚಲನಚಿತ್ರಗಳು:
ಪಿಲಿ ಚನ್ನೆ: ಅನುಪಮಾ ಶರಧಿ ನಿರ್ದೇಶನದ ಈ ಚಿತ್ರವು, ತನ್ನ ಅಜ್ಜಿಯಿಂದ ಸಾಂಪ್ರದಾಯಿಕ ಗಿಡಮೂಲಿಕೆ ಚಿಕಿತ್ಸಾ ಪದ್ಧತಿಯನ್ನು ಕಲಿಯುವ ಬುಡಕಟ್ಟು ಜನಾಂಗದ ಮಹಿಳೆಯೊಬ್ಬಳ ಕಥೆಯನ್ನು ಒಳಗೊಂಡಿದೆ. ಮರಣಹೊಂದುವ ಮುನ್ನ, ಅಜ್ಜಿಯು ಆಕೆಗೆ ಒಂದು ಪವಿತ್ರ ಕಲ್ಲನ್ನು ನೀಡುತ್ತಾಳೆ; ಅರಣ್ಯದ ಚಿಕಿತ್ಸಾ ಜ್ಞಾನವು ಆ ಕಲ್ಲಿನಲ್ಲಿ ಅಡಗಿದೆ ಎಂದು ನಂಬಲಾಗುತ್ತದೆ. 'ಪಿಲಿ ಚನ್ನೆ' ತನ್ನ ಕೌಶಲ್ಯಗಳನ್ನು ಬಳಸಿ ತನ್ನ ಸಮುದಾಯಕ್ಕೆ ಸಹಾಯ ಮಾಡುತ್ತಾಳೆ ಮತ್ತು ಅವರ ನಂಬಿಕೆಯನ್ನು ಗಳಿಸಿಕೊಳ್ಳುತ್ತಾಳೆ. ದುರಾಸೆಯ ಗ್ರಾಮ ವೈದ್ಯ ಮತ್ತು ಗ್ರಾಮದ ಮುಖ್ಯಸ್ಥನು ಆ ಕಲ್ಲನ್ನು ತಮ್ಮದಾಗಿಸಿಕೊಳ್ಳಲು ಪ್ರಯತ್ನಿಸಿದಾಗ, ಆಕೆ ಅದನ್ನು ನೀಡಲು ನಿರಾಕರಿಸುತ್ತಾಳೆ. ಈ ಚಿತ್ರವು ಸಾಂಪ್ರದಾಯಿಕ ಜ್ಞಾನ, ಧೈರ್ಯ ಮತ್ತು ಪೂರ್ವಜರ ಜ್ಞಾನವನ್ನು ಸಂರಕ್ಷಿಸುವ ಕುರಿತು ಬೆಳಕು ಚೆಲ್ಲುತ್ತದೆ. ಇದು ಐಎಫ್ ಎಫ್ ಐ 2026 ರಲ್ಲಿ ತನ್ನ ವಿಶ್ವದ ಪ್ರಥಮ ಪ್ರದರ್ಶನ ಕಾಣಲಿದೆ.

ಗಿರೀಶ್ ಕಾಸರವಳ್ಳಿ ಕುರಿತ ವಿಶೇಷ ಸಂವಾದ:
ಐ ಎಫ್ ಎಫ್ ಐ 2026 ರಲ್ಲಿ ನವೆಂಬರ್ 21 ರಂದು " ಪರ್ಯಾಯ ಸಿನೆಮಾದ ನೈತಿಕ ಜಗತ್ತು: ಗಿರೀಶ್ ಕಾಸರವಳ್ಳಿ ಅವರ 50 ವರ್ಷಗಳು" ಎಂಬ ಶೀರ್ಷಿಕೆಯಡಿ ಸಂವಾದ ಕಾರ್ಯಕ್ರಮವೊಂದು ನಡೆಯಲಿದೆ. ನಮನ್ ರಾಮಚಂದ್ರನ್ ಅವರು ನಿರ್ವಹಿಸಲಿರುವ ಈ ಕಾರ್ಯಕ್ರಮವು, ಖ್ಯಾತ ಕನ್ನಡ ನಿರ್ದೇಶಕರ ಐದು ದಶಕಗಳ ಚಲನಚಿತ್ರ ಪಯಣವನ್ನು ಅವಲೋಕಿಸಲಿದೆ. ಅವರ ಚೊಚ್ಚಲ ಚಿತ್ರ 'ಘಟಶ್ರಾದ್ಧ'ದಿಂದ ಹಿಡಿದು 'ತಬರನ ಕಥೆ', 'ತಾಯಿ ಸಾಹೇಬ' ಮತ್ತು 'ದ್ವೀಪ'ದಂತಹ ಕೃತಿಗಳವರೆಗೆ, ಕಾಸರವಳ್ಳಿ ಅವರ ಚಲನಚಿತ್ರಗಳು ಸಾಮಾಜಿಕ ಅನ್ಯಾಯ, ನೈತಿಕ ಆಯ್ಕೆಗಳು ಮತ್ತು ಅಂಚಿನಲ್ಲಿರುವ ಜನರ ಬದುಕನ್ನು ಪರಿಶೋಧಿಸಿವೆ. ಈ ಸಂವಾದವು ಅವರ ಕಥೆ ಹೇಳುವ ಶೈಲಿ ಹಾಗೂ ಸಿನೆಮಾ ಮತ್ತು ಸಾಮಾಜಿಕ ಪ್ರಜ್ಞೆಯ ನಡುವಿನ ಸಂಬಂಧದ ಕುರಿತು ವಿಶ್ಲೇಷಣೆ ಮಾಡಲಿದೆ.

*****