ಲೋಕಸಭಾ ಸಚಿವಾಲಯ
azadi ka amrit mahotsav

ಮಹಿಳೆಯರ ಪ್ರಾತಿನಿಧ್ಯ ಪಂಚಾಯತ್‌ಗಳಿಂದ ಸಂಸತ್ತಿನವರೆಗೆ ವಿಸ್ತರಿಸಬೇಕು; ನಾರಿ ಶಕ್ತಿ ವಂದನ್ ಅಧಿನಿಯಮ್ ಅನುಷ್ಠಾನಗೊಳ್ಳುವ ಭರವಸೆ ಇದೆ: ಲೋಕಸಭಾಧ್ಯಕ್ಷರು


ನೀತಿ ನಿರೂಪಣೆ ಮತ್ತು ಶಾಸನ ರಚನೆಯಲ್ಲಿ ಮಹಿಳೆಯರ ಹೆಚ್ಚಿನ ಪಾಲ್ಗೊಳ್ಳುವಿಕೆಯಿಂದ ಪ್ರಜಾಪ್ರಭುತ್ವ ಹೆಚ್ಚು ಜನಸ್ಪಂದನಶೀಲ ಮತ್ತು ಉತ್ತರದಾಯಿಯಾಗುತ್ತದೆ: ಲೋಕಸಭಾಧ್ಯಕ್ಷರು

ಕೃತಕ ಬುದ್ಧಿಮತ್ತೆ ಮತ್ತು ತಂತ್ರಜ್ಞಾನವು ಪ್ರಜಾಪ್ರಭುತ್ವ ಸಂಸ್ಥೆಗಳ ಪಾರದರ್ಶಕತೆ, ಉತ್ತರದಾಯಿತ್ವ ಮತ್ತು ಕಾರ್ಯಕ್ಷಮತೆಯನ್ನು ಬಲಪಡಿಸಬಲ್ಲವು: ಲೋಕಸಭಾಧ್ಯಕ್ಷರು

ಮಹಿಳಾ ಜನಪ್ರತಿನಿಧಿಗಳ ಡಿಜಿಟಲ್ ಸಬಲೀಕರಣ ಮತ್ತು ಸಾಮರ್ಥ್ಯವರ್ಧನೆಗೆ ಸಾಂಸ್ಥಿಕ ಚೌಕಟ್ಟು ರೂಪಿಸಲಾಗುವುದು: ಲೋಕಸಭಾಧ್ಯಕ್ಷರು

ಬೆಂಗಳೂರಿನಲ್ಲಿ ಮೊದಲ ಕಾಮನ್‌ವೆಲ್ತ್ ಮಹಿಳಾ ಸಂಸದೀಯರ (ಸಿಡಬ್ಲ್ಯುಪಿ) ಭಾರತ ಪ್ರಾದೇಶಿಕ ಸಮ್ಮೇಳನ ಉದ್ಘಾಟಿಸಿದ ಲೋಕಸಭಾಧ್ಯಕ್ಷರು; ಕರ್ನಾಟಕದ ಮುಖ್ಯಮಂತ್ರಿ ಸೇರಿದಂತೆ ಇತರ ಗಣ್ಯರು ಭಾಗಿ

ಪ್ರಕಟಣಾ ದಿನಾಂಕ: 17 NOV 2026 3:32PM by PIB Bengaluru

ಪ್ರಜಾಪ್ರಭುತ್ವದ ಎಲ್ಲ ಸಂಸ್ಥೆಗಳಲ್ಲೂ ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯ ಕಲ್ಪಿಸುವ ಅಗತ್ಯವನ್ನು ಲೋಕಸಭಾಧ್ಯಕ್ಷರಾದ ಶ್ರೀ ಓಂ ಬಿರ್ಲಾ ಅವರು ಇಂದು ಒತ್ತಿಹೇಳಿದರು. ಮಹಿಳೆಯರು ಕೇವಲ ಭಾಗವಹಿಸುವವರಾಗಿ ಮಾತ್ರವಲ್ಲದೆ ನಾಯಕತ್ವ, ನೀತಿ ನಿರೂಪಣೆ ಮತ್ತು ಕಾನೂನು ರಚನೆಯಲ್ಲಿಯೂ ಪರಿಣಾಮಕಾರಿ ಪಾತ್ರವನ್ನು ಹೊಂದಿರಬೇಕು ಎಂದು ಶ್ರೀ ಬಿರ್ಲಾ ಅಭಿಪ್ರಾಯಪಟ್ಟರು. 2023 ರಲ್ಲಿ ಜಾರಿಗೆ ತರಲಾದ 'ನಾರಿ ಶಕ್ತಿ ವಂದನ್ ಅಧಿನಿಯಮ'ವನ್ನು ಉಲ್ಲೇಖಿಸಿದ ಅವರು, ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇಕಡಾ 33 ರಷ್ಟು ಪ್ರಾತಿನಿಧ್ಯ ನೀಡುವ ಅವಕಾಶವು ಅನುಷ್ಠಾನದತ್ತ ಸಾಗಲಿದೆ ಎಂಬ ಭರವಸೆ ವ್ಯಕ್ತಪಡಿಸಿದರು; ಇದು ಪಂಚಾಯತ್‌ಗಳಿಂದ ಸಂಸತ್ತಿನವರೆಗೂ ಮಹಿಳಾ ನಾಯಕತ್ವ ವಿಸ್ತರಿಸಲು ಅನುವು ಮಾಡಿಕೊಡುತ್ತದೆ ಎಂದರು. ಈಗಾಗಲೇ ಹಲವು ರಾಜ್ಯಗಳು ಪಂಚಾಯತ್‌ಗಳು ಮತ್ತು ನಗರಸಭೆಗಳಲ್ಲಿ ಮಹಿಳೆಯರಿಗೆ ಶೇಕಡಾ 50 ರಷ್ಟು ಪ್ರಾತಿನಿಧ್ಯವನ್ನು ಒದಗಿಸಿವೆ ಎಂದು ಅವರು ಹೇಳಿದರು. ಶಾಸನಸಭೆಗಳು ಮತ್ತು ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಗಳಲ್ಲಿ ಮಹಿಳೆಯರ ಹೆಚ್ಚಿನ ಪಾಲ್ಗೊಳ್ಳುವಿಕೆಯು ಬಲಿಷ್ಠ, ಹೆಚ್ಚು ಸಂವೇದನಾಶೀಲ ಮತ್ತು ಹೊಣೆಗಾರಿಕೆಯುಳ್ಳ ಪ್ರಜಾಪ್ರಭುತ್ವವನ್ನು ನಿರ್ಮಿಸಲು ಕೊಡುಗೆ ನೀಡುತ್ತದೆ. ಮಹಿಳೆಯರು ಸಾರ್ವಜನಿಕ ಜೀವನಕ್ಕೆ ಸಂವೇದನಾಶೀಲತೆ, ಬದ್ಧತೆ ಮತ್ತು ಬಲವಾದ ಜವಾಬ್ದಾರಿಯ ಪ್ರಜ್ಞೆಯನ್ನು ತರುತ್ತಾರೆ; ಸಮಾಜದ ಆಕಾಂಕ್ಷೆಗಳು ಮತ್ತು ಸವಾಲುಗಳನ್ನು ಪರಿಹರಿಸುವಲ್ಲಿ ಈ ಗುಣಗಳು ವಿಶೇಷವಾಗಿ ಮುಖ್ಯವಾಗಿವೆ ಎಂದು ಅವರು ಹೇಳಿದರು. ಪ್ರಜಾಪ್ರಭುತ್ವ ಸಂಸ್ಥೆಗಳನ್ನು ಬಲಪಡಿಸುವಲ್ಲಿ ಮಹಿಳೆಯರ ನಿರ್ಣಾಯಕ ಪಾತ್ರವನ್ನು ಎತ್ತಿ ತೋರಿಸಿದ ಶ್ರೀ ಬಿರ್ಲಾ, ನೀತಿ ನಿರೂಪಣೆ, ಶಾಸನ ರಚನೆ ಮತ್ತು ನಿರ್ಧಾರ ತೆಗೆದುಕೊಳ್ಳುವಿಕೆಯಲ್ಲಿ ಮಹಿಳೆಯರ ಹೆಚ್ಚಿನ ಪಾಲ್ಗೊಳ್ಳುವಿಕೆಯು ಪ್ರಜಾಪ್ರಭುತ್ವವನ್ನು ಹೆಚ್ಚು ಸ್ಪಂದನಾಶೀಲ, ಎಲ್ಲರನ್ನೂ ಒಳಗೊಳ್ಳುವ ಮತ್ತು ಉತ್ತರದಾಯಿಯನ್ನಾಗಿ ಮಾಡುತ್ತದೆ ಎಂದು ಹೇಳಿದರು. ಬೆಂಗಳೂರಿನಲ್ಲಿ ಮೊದಲ ಕಾಮನ್‌ವೆಲ್ತ್ ಮಹಿಳಾ ಸಂಸದೀಯರ (ಸಿಡಬ್ಲ್ಯುಪಿ) ಭಾರತ ಪ್ರಾದೇಶಿಕ ಸಮ್ಮೇಳನವನ್ನು ಉದ್ಘಾಟಿಸಿ ಶ್ರೀ ಬಿರ್ಲಾ ಅವರು ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ಕೃತಕ ಬುದ್ಧಿಮತ್ತೆ (ಎಐ) ಮತ್ತು ತಂತ್ರಜ್ಞಾನವು ಸಾಮಾಜಿಕ ಜೀವನದ ಪ್ರತಿಯೊಂದು ಕ್ಷೇತ್ರವನ್ನೂ ಪರಿವರ್ತಿಸುತ್ತಿವೆ ಎಂದು ತಿಳಿಸಿದ ಅವರು, ಅವುಗಳನ್ನು ಜವಾಬ್ದಾರಿಯುತವಾಗಿ ಮತ್ತು ಹೊಣೆಗಾರಿಕೆಯಿಂದ ಬಳಸಿದಾಗ ಆಡಳಿತದಲ್ಲಿ ಗಣನೀಯ ಸುಧಾರಣೆ ತರಬಲ್ಲವು ಎಂದು ಹೇಳಿದರು. ಜನಪ್ರತಿನಿಧಿಗಳು ನಾಗರಿಕರೊಂದಿಗಿನ ತಮ್ಮ ಸಂವಾದವನ್ನು ಬಲಪಡಿಸಲು, ಅವರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಸಕಾಲಿಕ ಹಾಗೂ ಪರಿಣಾಮಕಾರಿ ಪರಿಹಾರಗಳನ್ನು ಖಚಿತಪಡಿಸಿಕೊಳ್ಳಲು ತಂತ್ರಜ್ಞಾನ ಮತ್ತು ಇ-ಆಡಳಿತವನ್ನು ಬಳಸಿಕೊಳ್ಳಬೇಕು ಎಂದು ಅವರು ಒತ್ತಿ ಹೇಳಿದರು. ಪಾರದರ್ಶಕ, ಹೊಣೆಗಾರಿಕೆಯುಳ್ಳ ಮತ್ತು ದಕ್ಷ ಆಡಳಿತ ವ್ಯವಸ್ಥೆಗಳನ್ನು ಸ್ಥಾಪಿಸುವಲ್ಲಿ ತಂತ್ರಜ್ಞಾನವು ಪ್ರಮುಖ ಪಾತ್ರ ವಹಿಸುತ್ತದೆ ಎಂದರು. ಸಂಸದೀಯ ಸಮಿತಿಗಳು 'ಮಿನಿ ಸಂಸತ್ತು'ಗಳಾಗಿ ಕಾರ್ಯನಿರ್ವಹಿಸುತ್ತವೆ ಎಂದು ಉಲ್ಲೇಖಿಸಿದ ಲೋಕಸಭಾಧ್ಯಕ್ಷರು, ಈ ಸಮಿತಿಗಳು ಮಹಿಳೆಯರು ಎದುರಿಸುತ್ತಿರುವ ಸಾಮಾಜಿಕ-ಆರ್ಥಿಕ ಸವಾಲುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಅಮೂಲ್ಯ ಕೊಡುಗೆಗಳನ್ನು ನೀಡಿವೆ ಮತ್ತು ಸರ್ಕಾರಕ್ಕೆ ಮಹತ್ವದ ಶಿಫಾರಸುಗಳನ್ನು ಮಾಡಿವೆ ಎಂದು ಹೇಳಿದರು. ಎಐ ಮತ್ತು ತಂತ್ರಜ್ಞಾನವು ಅವುಗಳ ಮೇಲ್ವಿಚಾರಣೆ ಮತ್ತು ಪರಿಶೀಲನಾ ಕಾರ್ಯಗಳನ್ನು ಮತ್ತಷ್ಟು ಬಲಪಡಿಸಬಲ್ಲದು ಹಾಗೂ ಅವುಗಳ ಕೆಲಸವನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಬಲ್ಲದು. ಈ ನಿಟ್ಟಿನಲ್ಲಿ ಮಹಿಳಾ ಸಂಸದರು ಮತ್ತು ಶಾಸಕರ ತಿಳುವಳಿಕೆ ಹಾಗೂ ಸಾಮರ್ಥ್ಯಗಳನ್ನು ಹೆಚ್ಚಿಸಲು ಎಐ ಮತ್ತು ತಂತ್ರಜ್ಞಾನದ ಕುರಿತು ವಿಶೇಷ ಅಧಿವೇಶನವನ್ನು ಆಯೋಜಿಸಲಾಗುವುದು ಎಂದು ಅವರು ಹೇಳಿದರು.

ಪಂಚಾಯತ್‌ಗಳು, ನಗರ ಸ್ಥಳೀಯ ಸಂಸ್ಥೆಗಳು, ರಾಜ್ಯ ವಿಧಾನಸಭೆಗಳು ಮತ್ತು ಸಂಸತ್ತಿನಾದ್ಯಂತ ಚುನಾಯಿತ ಮಹಿಳಾ ಜನಪ್ರತಿನಿಧಿಗಳ ಸಾಮರ್ಥ್ಯವನ್ನು ಬಲಪಡಿಸಲು ಸಾಂಸ್ಥಿಕ ಚೌಕಟ್ಟನ್ನು ರೂಪಿಸುವ ಅಗತ್ಯವಿದೆ ಎಂದು ಲೋಕಸಭಾಧ್ಯಕ್ಷರು ಪ್ರತಿಪಾದಿಸಿದರು. ಪಂಚಾಯತ್ ಸರಪಂಚರು ಮತ್ತು ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರು ಸೇರಿದಂತೆ ಮಹಿಳಾ ಜನಪ್ರತಿನಿಧಿಗಳು ಸಾರ್ವಜನಿಕರೊಂದಿಗೆ ಸಂಪರ್ಕ ಸಾಧಿಸಲು, ಆಡಳಿತದ ಮೇಲ್ವಿಚಾರಣೆ ಮಾಡಲು ಹಾಗೂ ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು ಕೃತಕ ಬುದ್ಧಿಮತ್ತೆ, ತಂತ್ರಜ್ಞಾನ ಮತ್ತು ಡಿಜಿಟಲ್ ವೇದಿಕೆಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ನೆರವಾಗುವ ನಿಟ್ಟಿನಲ್ಲಿ ಈ ಉಪಕ್ರಮ ಗಮನಹರಿಸಬೇಕು ಎಂದು ಅವರು ತಿಳಿಸಿದರು. ಸಾರ್ವಜನಿಕ ಪ್ರತಿನಿಧಿಗಳು ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸುವ ಸಾಮರ್ಥ್ಯವು ನಾಗರಿಕರಿಗೆ, ವಿಶೇಷವಾಗಿ ಮಹಿಳೆಯರಿಗೆ ಮತ್ತು ತಳಮಟ್ಟದ ಜನರಿಗೆ ಒದಗಿಸುವ ಸೇವೆಗಳ ಫಲಿತಾಂಶಗಳ ಗುಣಮಟ್ಟದ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದು ಶ್ರೀ ಬಿರ್ಲಾ ಒತ್ತಿಹೇಳಿದರು. ಉದಯೋನ್ಮುಖ ಮಹಿಳಾ ನಾಯಕರಿಗೆ ಮಾರ್ಗದರ್ಶನ ನೀಡಲು ಹಾಗೂ ಅವರ ಶಾಸನಾತ್ಮಕ ಮತ್ತು ನಾಯಕತ್ವದ ಸಾಮರ್ಥ್ಯವನ್ನು ಬಲಪಡಿಸಲು ಅನುಭವಿ ಮಹಿಳಾ ಜನಪ್ರತಿನಿಧಿಗಳ ಮಾರ್ಗದರ್ಶನದ ಮಹತ್ವವನ್ನೂ ಅವರು ಒತ್ತಿ ಹೇಳಿದರು.

ಸ್ವಾತಂತ್ರ್ಯ ಹೋರಾಟದಿಂದ ರಾಷ್ಟ್ರ ನಿರ್ಮಾಣದವರೆಗೆ ಭಾರತದ ಪಯಣದಲ್ಲಿ ಮಹಿಳೆಯರು ಮಹತ್ವದ ಕೊಡುಗೆ ನೀಡಿದ್ದಾರೆ. ಇಂದು ಶಿಕ್ಷಣ, ವಿಜ್ಞಾನ, ತಂತ್ರಜ್ಞಾನ, ಸಂಶೋಧನೆ, ಉದ್ಯಮಶೀಲತೆ, ಕ್ರೀಡೆ, ರಕ್ಷಣೆ, ಬಾಹ್ಯಾಕಾಶ ಮತ್ತು ರಾಜಕೀಯ ಸೇರಿದಂತೆ ಬಹುತೇಕ ಎಲ್ಲ ಕ್ಷೇತ್ರಗಳಲ್ಲೂ ಅವರು ನಾಯಕತ್ವ ವಹಿಸುತ್ತಿದ್ದಾರೆ ಎಂದು ಶ್ರೀ ಬಿರ್ಲಾ ಅಭಿಪ್ರಾಯಪಟ್ಟರು. ತಂತ್ರಜ್ಞಾನ ಮತ್ತು ಡಿಜಿಟಲ್ ವೇದಿಕೆಗಳು ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಹೊಸ ಅವಕಾಶಗಳನ್ನು ಸೃಷ್ಟಿಸುವುದರ ಜೊತೆಗೆ, ಸಾಮಾಜಿಕ ಮತ್ತು ರಾಜಕೀಯ ಜೀವನದಲ್ಲಿ ಅವರ ಪಾಲ್ಗೊಳ್ಳುವಿಕೆಯನ್ನು ವಿಸ್ತರಿಸುತ್ತಿವೆ ಎಂದು ಅವರು ಹೇಳಿದರು. ಇದೇ ವೇಳೆ, ಮಹಿಳೆಯರ ಡಿಜಿಟಲ್ ಸಬಲೀಕರಣ ಮತ್ತು ಸುರಕ್ಷಿತ ಡಿಜಿಟಲ್ ಪರಿಸರವನ್ನು ಖಚಿತಪಡಿಸುವುದು ಪ್ರಮುಖ ಆದ್ಯತೆಗಳಾಗಿವೆ ಎಂದರು. ಕರ್ನಾಟಕದ ಶ್ರೀಮಂತ ಪ್ರಜಾಪ್ರಭುತ್ವ ಪರಂಪರೆಯನ್ನು ಉಲ್ಲೇಖಿಸಿದ ಲೋಕಸಭಾಧ್ಯಕ್ಷರು, 12ನೇ ಶತಮಾನದಲ್ಲಿ ಶ್ರೀ ಬಸವೇಶ್ವರರು ಸ್ಥಾಪಿಸಿದ ಅನುಭವ ಮಂಟಪವು ಈ ಪ್ರದೇಶದ ಪ್ರಜಾಪ್ರಭುತ್ವ ಪರಂಪರೆಯ ಪ್ರಮುಖ ಸಂಕೇತವಾಗಿದೆ ಎಂದು ಹೇಳಿದರು. ಕಿತ್ತೂರು ರಾಣಿ ಚೆನ್ನಮ್ಮ ಅವರ ಧೈರ್ಯ ಮತ್ತು ಶೌರ್ಯವನ್ನೂ ಸ್ಮರಿಸಿದ ಅವರು, ಅವರ ಪರಂಪರೆಯು ಇಂದಿಗೂ ಪೀಳಿಗೆಗಳಿಗೆ ಸ್ಫೂರ್ತಿ ನೀಡುತ್ತಿದೆ ಎಂದರು.

ಎರಡು ದಿನಗಳ ಈ ಸಮ್ಮೇಳನವು ಕಾಮನ್‌ವೆಲ್ತ್ ರಾಷ್ಟ್ರಗಳ ಮಹಿಳಾ ಸಂಸದರು ಮತ್ತು ಶಾಸಕರಿಗೆ ತಮ್ಮ ಅನುಭವಗಳು, ನಾವೀನ್ಯತೆಗಳು ಹಾಗೂ ಉತ್ತಮ ಪದ್ಧತಿಗಳನ್ನು ಪರಸ್ಪರ ಹಂಚಿಕೊಳ್ಳಲು ಮಹತ್ವದ ವೇದಿಕೆಯಾಗಲಿದೆ ಎಂಬ ಆಶಯವನ್ನು ಶ್ರೀ ಬಿರ್ಲಾ ವ್ಯಕ್ತಪಡಿಸಿದರು. ಸಮ್ಮತಿ ಮತ್ತು ಅಸಮ್ಮತಿ ಸೇರಿದಂತೆ ವಿವಿಧ ದೃಷ್ಟಿಕೋನಗಳ ವಿನಿಮಯ, ಸಂವಾದ ಮತ್ತು ಚರ್ಚೆಗಳೇ ಪ್ರಜಾಪ್ರಭುತ್ವದ ಶಕ್ತಿಯಾಗಿವೆ ಎಂದು ಅವರು ಅಭಿಪ್ರಾಯಪಟ್ಟರು. ವಿವಿಧ ಶಾಸನಸಭೆಗಳಲ್ಲಿ ಅನುಸರಿಸಲಾಗುತ್ತಿರುವ ಯಶಸ್ವಿ ಪದ್ಧತಿಗಳನ್ನು ಹಂಚಿಕೊಳ್ಳುವುದರಿಂದ ಪ್ರಜಾಪ್ರಭುತ್ವ ಸಂಸ್ಥೆಗಳನ್ನು ಬಲಪಡಿಸಲು ಹಾಗೂ ಪಂಚಾಯತ್‌ಗಳಿಂದ ಸಂಸತ್ತಿನವರೆಗೆ ನವೀನ ಪ್ರಯತ್ನಗಳಿಗೆ ಉತ್ತೇಜನ ನೀಡಲು ಸಾಧ್ಯವಾಗಲಿದೆ ಎಂದು ಅವರು ಹೇಳಿದರು. ಸಮ್ಮೇಳನದ ಫಲಿತಾಂಶಗಳ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ ಲೋಕಸಭಾಧ್ಯಕ್ಷರು, ಮಹಿಳಾ ನಾಯಕತ್ವವು ರಾಷ್ಟ್ರವನ್ನು ಹೆಚ್ಚು ಒಳಗೊಳ್ಳುವಿಕೆ ಹೊಂದಿರುವ, ಸಮತೋಲಿತ ಮತ್ತು ನ್ಯಾಯಯುತ ಸಮಾಜದತ್ತ ಕೊಂಡೊಯ್ಯಲು ನೆರವಾಗುತ್ತದೆ. ಪ್ರಜಾಪ್ರಭುತ್ವ ಸಂಸ್ಥೆಗಳು ಮತ್ತಷ್ಟು ಬಲಿಷ್ಠ, ಉತ್ತರದಾಯಿ ಹಾಗೂ ಫಲಿತಾಂಶ ಆಧಾರಿತವಾಗಲಿದ್ದು, ಸಮಾಜದ ಕಟ್ಟಕಡೆಯ ವ್ಯಕ್ತಿಯ ಧ್ವನಿಗೂ ಕಿವಿಗೊಟ್ಟು, ಅವರ ಸಮಸ್ಯೆಗಳಿಗೆ ಸ್ಪಂದಿಸುವಂತಾಗುತ್ತವೆ ಎಂದು ಹೇಳಿದರು.

ಇದಕ್ಕೂ ಮುನ್ನ, ಲೋಕಸಭಾಧ್ಯಕ್ಷರು ಸಮ್ಮೇಳನದಲ್ಲಿ ಪಾಲ್ಗೊಂಡವರನ್ನು ಸ್ವಾಗತಿಸಿದರು. ಸಮ್ಮೇಳನವನ್ನು ಆಯೋಜಿಸುವಲ್ಲಿ ಉಪಕ್ರಮ ಹಾಗೂ ಪ್ರಯತ್ನಗಳನ್ನು ವಹಿಸಿದ ಭಾರತದ ಕಾಮನ್‌ವೆಲ್ತ್ ಮಹಿಳಾ ಸಂಸದೀಯರ ಸಮ್ಮೇಳನದ ಅಧ್ಯಕ್ಷೆ ಡಾ. ಡಿ. ಪುರಂದೇಶ್ವರಿ, ಕರ್ನಾಟಕದ ಮುಖ್ಯಮಂತ್ರಿ ಮತ್ತು ಕರ್ನಾಟಕ ವಿಧಾನಸಭೆ ಹಾಗೂ ವಿಧಾನ ಪರಿಷತ್ತಿನ ಸಭಾಧ್ಯಕ್ಷರಿಗೆ ಧನ್ಯವಾದಗಳನ್ನು ತಿಳಿಸಿದರು.

2047ರ ವೇಳೆಗೆ ವಿಕಸಿತ ಭಾರತದ ಗುರಿಯತ್ತ ಸಾಗುತ್ತಿರುವ ಸಂದರ್ಭದಲ್ಲಿ, ರಾಷ್ಟ್ರದ ಭವಿಷ್ಯ ರೂಪಿಸುವಲ್ಲಿ ಮಹಿಳೆಯರ ಪಾತ್ರ ನಿರ್ಣಾಯಕ: ಡಾ. ಡಿ. ಪುರಂದೇಶ್ವರಿ

ಸಭೆಯನ್ನುದ್ದೇಶಿಸಿ ಮಾತನಾಡಿದ ಸಿಡಬ್ಲ್ಯುಪಿ ಭಾರತ ಪ್ರಾದೇಶಿಕ ಘಟಕದ ಅಧ್ಯಕ್ಷೆ ಡಾ. ಡಿ. ಪುರಂದೇಶ್ವರಿ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಹಿಳಾ ಸಬಲೀಕರಣವನ್ನು ಸಾರ್ವಜನಿಕ ಹುದ್ದೆಗಳನ್ನು ಅಲಂಕರಿಸಿರುವ ಮಹಿಳೆಯರ ಸಂಖ್ಯೆಯಿಂದ ಮಾತ್ರ ಅಳೆಯಲು ಸಾಧ್ಯವಿಲ್ಲ ಎಂದು ಹೇಳಿದರು. ಶಾಸನಸಭೆಗಳ ಚರ್ಚೆಗಳಲ್ಲಿ ಅರ್ಥಪೂರ್ಣವಾಗಿ ಪಾಲ್ಗೊಳ್ಳುವ, ನೀತಿ ನಿರ್ಧಾರಗಳ ಮೇಲೆ ಪ್ರಭಾವ ಬೀರುವ, ನಾಯಕತ್ವ ವಹಿಸುವ ಹಾಗೂ ರಾಷ್ಟ್ರದ ಆಡಳಿತ ಮತ್ತು ಅಭಿವೃದ್ಧಿಗೆ ಕೊಡುಗೆ ನೀಡುವ ಅವರ ಸಾಮರ್ಥ್ಯದಲ್ಲಿಯೂ ಮಹಿಳಾ ಸಬಲೀಕರಣ ಪ್ರತಿಫಲಿಸಬೇಕು ಎಂದು ಅವರು ತಿಳಿಸಿದರು. ಮಹಿಳೆಯರಿಗೆ ಪ್ರಾತಿನಿಧ್ಯ ಕಲ್ಪಿಸುವುದಕ್ಕಷ್ಟೇ ಸೀಮಿತವಾಗದೆ, ಅವರು ಆತ್ಮವಿಶ್ವಾಸದಿಂದ ಹಾಗೂ ಪರಿಣಾಮಕಾರಿಯಾಗಿ ನಾಯಕತ್ವ ವಹಿಸಲು ಅನುಕೂಲಕರ ವಾತಾವರಣವನ್ನು ಸೃಷ್ಟಿಸುವತ್ತ ನಾವು ಸಾಗಬೇಕು ಎಂದು ಅವರು ಒತ್ತಿಹೇಳಿದರು. 2023ರ ನಾರಿ ಶಕ್ತಿ ವಂದನ್ ಅಧಿನಿಯಮ್ ಅನ್ನು ಶ್ಲಾಘಿಸಿದ ಅವರು, ಮಹಿಳೆಯರ ರಾಜಕೀಯ ಪ್ರಾತಿನಿಧ್ಯವನ್ನು ಬಲಪಡಿಸುವ ನಿಟ್ಟಿನಲ್ಲಿ ಈ ಕಾನೂನು ಐತಿಹಾಸಿಕ ಹೆಜ್ಜೆಯಾಗಿದೆ ಎಂದು ಹೇಳಿದರು. ಶಾಸನಸಭೆಗಳಲ್ಲಿ ಮಹಿಳೆಯರ ಹೆಚ್ಚಿನ ಪಾಲ್ಗೊಳ್ಳುವಿಕೆಯಿಂದ ಸಾರ್ವಜನಿಕ ನೀತಿ ನಿರೂಪಣೆ ಮತ್ತು ಪ್ರಜಾಸತ್ತಾತ್ಮಕ ಚರ್ಚೆಗಳಲ್ಲಿ ವಿಶಾಲವಾದ ದೃಷ್ಟಿಕೋನಗಳು, ಅನುಭವಗಳು ಹಾಗೂ ಕಾಳಜಿಗಳಿಗೆ ಅವಕಾಶ ದೊರೆಯಲಿದೆ ಎಂದು ಅವರು ಹೇಳಿದರು.

ಸಮ್ಮೇಳನದ ವಿಷಯದ ಕುರಿತು ಮಾತನಾಡಿದ ಸಿಡಬ್ಲ್ಯುಪಿ ಭಾರತ ಪ್ರಾದೇಶಿಕ ಘಟಕದ ಅಧ್ಯಕ್ಷರು, ಸಮ್ಮೇಳನದ ಚರ್ಚೆಗಳ ಫಲಿತಾಂಶಗಳು ನಿರ್ಣಯಗಳು ಮತ್ತು ಶಿಫಾರಸುಗಳಿಗೆ ಮಾತ್ರ ಸೀಮಿತವಾಗಬಾರದು ಎಂದು ಅಭಿಪ್ರಾಯಪಟ್ಟರು. ಲಿಂಗಸಂವೇದಿ ಸಂಸದೀಯ ಸಂಸ್ಥೆಗಳನ್ನು ಬಲಪಡಿಸಲು ಮತ್ತು ಮಹಿಳಾ ಜನಪ್ರತಿನಿಧಿಗಳ ನಾಯಕತ್ವದ ಸಾಮರ್ಥ್ಯವನ್ನು ಹೆಚ್ಚಿಸಲು ಕಾರ್ಯರೂಪಕ್ಕೆ ತರಬಹುದಾದ ಚೌಕಟ್ಟನ್ನು ರೂಪಿಸಲು ನಾವು ಪ್ರಯತ್ನಿಸಬೇಕು ಎಂದು ಅವರು ಸಲಹೆ ನೀಡಿದರು. 2047ರ ವೇಳೆಗೆ ವಿಕಸಿತ ಭಾರತದ ಗುರಿಯತ್ತ ಭಾರತ ಸಾಗುತ್ತಿರುವ ಸಂದರ್ಭದಲ್ಲಿ, ರಾಷ್ಟ್ರದ ಭವಿಷ್ಯ ರೂಪಿಸುವಲ್ಲಿ ಮಹಿಳೆಯರ ಪಾತ್ರ ನಿರ್ಣಾಯಕವಾಗಿರಲಿದೆ ಎಂದ ಅವರು, ಮಹಿಳೆಯರಿಗೆ ಸಮಾನ ಪಾಲ್ಗೊಳ್ಳುವಿಕೆ, ನಾಯಕತ್ವ ಮತ್ತು ಕೊಡುಗೆ ನೀಡುವ ಅವಕಾಶ ಕಲ್ಪಿಸದೆ ಅಭಿವೃದ್ಧಿ ಹೊಂದಿದ ಭಾರತವನ್ನು ಸಾಕಾರಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಕರ್ನಾಟಕದ ಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್ ಅವರು ಮುಖ್ಯ ಭಾಷಣ ಮಾಡಿದರು. ರಾಜ್ಯಸಭೆಯ ಉಪಸಭಾಪತಿ ಶ್ರೀ ಹರಿವಂಶ್, ಕರ್ನಾಟಕದ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಮತ್ತು ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷ ಶ್ರೀ ಜಿ. ಎಸ್. ಪಾಟೀಲ್ ಅವರು ಈ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದರು. ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿ ಶ್ರೀ ಸಲೀಂ ಅಹಮದ್ ಅವರು ಸ್ವಾಗತ ಭಾಷಣ ಮಾಡಿದರು. ಕರ್ನಾಟಕ ವಿಧಾನ ಪರಿಷತ್ತಿನ ಉಪಸಭಾಪತಿ ಡಾ. ಉಮಾಶ್ರೀ ಅವರು ವಂದನಾರ್ಪಣೆ ಮಾಡಿದರು.

ಭಾರತದ ಸಂಸತ್ತು ಮತ್ತು ರಾಜ್ಯಗಳ ಶಾಸನಸಭೆಗಳಿಂದ 135 ಮಹಿಳಾ ಜನಪ್ರತಿನಿಧಿಗಳು ಎರಡು ದಿನಗಳ ಈ ಸಮ್ಮೇಳನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ‘ಭದ್ರ ಬುನಾದಿ, ಸಶಕ್ತ ಧ್ವನಿಗಳು: ನೂತನ ಮಹಿಳಾ ಜನಪ್ರತಿನಿಧಿಗಳಿಗಾಗಿ ಸೈಬರ್‌ ಸುರಕ್ಷತೆ ಮತ್ತು ಮಾರ್ಗದರ್ಶನದ ಹಾದಿಗಳು’ ಎಂಬುದು ಸಮ್ಮೇಳನದ ವಿಷಯವಾಗಿದೆ.

ಸಮ್ಮೇಳನದಲ್ಲಿ ಎರಡು ಸಮಗ್ರ ಅಧಿವೇಶನಗಳು ನಡೆಯಲಿವೆ: (i) ‘ಮಹಿಳೆಯರನ್ನು ಡಿಜಿಟಲ್ ಆಗಿ ಸಬಲೀಕರಣಗೊಳಿಸುವುದು: ಸುರಕ್ಷಿತ ಸೈಬರ್‌ಸ್ಪೇಸ್, ಸ್ಮಾರ್ಟ್ ಆಯ್ಕೆಗಳು’, ಮತ್ತು (ii) ‘ಮಹಿಳಾ ಜನಪ್ರತಿನಿಧಿಗಳಿಗೆ ಸಾಮರ್ಥ್ಯ ವೃದ್ಧಿ ಮತ್ತು ಮಾರ್ಗದರ್ಶನ’. ವಿಶಾಲವಾದ ಚರ್ಚೆಗಳಿಗೆ ಪೂರಕವಾದ ವಿಶೇಷ ಉಪಕ್ರಮವಾಗಿ, 'ಯುಎನ್ ವುಮೆನ್ ಇಂಡಿಯಾ' 17 ನವೆಂಬರ್ 2026 ರಂದು 'ಋತುಬಂಧ' ಕುರಿತು ಪೂರಕ ಕಾರ್ಯಕ್ರಮವನ್ನು ಆಯೋಜಿಸುತ್ತದೆ. 18 ನವೆಂಬರ್ 2026 ರಂದು ಕರ್ನಾಟಕದ ರಾಜ್ಯಪಾಲರಾದ ಡಾ. ಸುಧಾ ಯಾದವ್ ಅವರ ಸಮಾರೋಪ ಭಾಷಣದೊಂದಿಗೆ ಸಮ್ಮೇಳನವು ಮುಕ್ತಾಯಗೊಳ್ಳಲಿದೆ.

ಸಮ್ಮೇಳನದಿಂದ ನಿರೀಕ್ಷಿಸಲಾಗಿರುವ ಫಲಿತಾಂಶಗಳು:

  1. ಮಹಿಳಾ ಜನಪ್ರತಿನಿಧಿಗಳಿಗೆ ಸುರಕ್ಷಿತ ಮತ್ತು ಎಲ್ಲರನ್ನೂ ಒಳಗೊಳ್ಳುವ ಸೈಬರ್‌ಸ್ಪೇಸ್ ಹಾಗೂ ಡಿಜಿಟಲ್ ಸಬಲೀಕರಣವನ್ನು ಸೃಷ್ಟಿಸುವ ಕುರಿತು ಅನುಭವಗಳು, ದೃಷ್ಟಿಕೋನಗಳು ಮತ್ತು ಉತ್ತಮ ಪದ್ಧತಿಗಳ ವಿನಿಮಯಕ್ಕೆ ಅನುವು ಮಾಡಿಕೊಡುವುದು.
  2. ವಿಶೇಷವಾಗಿ ಹೊಸದಾಗಿ ಚುನಾಯಿತರಾದ ಮಹಿಳಾ ಜನಪ್ರತಿನಿಧಿಗಳಿಗೆ ಮಾರ್ಗದರ್ಶನ, ಸಾಮರ್ಥ್ಯ ವೃದ್ಧಿ ಮತ್ತು ನಾಯಕತ್ವ ವಿಕಾಸಕ್ಕಾಗಿ ಪರಿಣಾಮಕಾರಿ ಚೌಕಟ್ಟುಗಳನ್ನು ಗುರುತಿಸುವುದು.
  3. ಸಂಸದೀಯ ಪ್ರಕ್ರಿಯೆಗಳಲ್ಲಿ ಮಹಿಳೆಯರ ಅರ್ಥಪೂರ್ಣ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು ಸಾಂಸ್ಥಿಕ ರಕ್ಷಣೆಗಳು ಮತ್ತು ಕಾರ್ಯವಿಧಾನಗಳನ್ನು ಬಲಪಡಿಸುವ ಮಾರ್ಗಗಳನ್ನು ಅನ್ವೇಷಿಸುವುದು.
  4. ಮಹಿಳೆಯರ ಸಂಸದೀಯ ನಾಯಕತ್ವವನ್ನು ಮುನ್ನಡೆಸುವಲ್ಲಿ ಶಾಸನಸಭೆಗಳ ನಡುವೆ ಸಹಕಾರ ಮತ್ತು ಸಹಯೋಗವನ್ನು ಉತ್ತೇಜಿಸುವುದು.

 

*****


(ಪ್ರಕಟಣೆ ಐ.ಡಿ.: 2337492) ವಿಸಿಟರ್ ಕೌಂಟರ್ : 65
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Marathi , Gujarati , Tamil