ಪ್ರಕಟಣಾ ದಿನಾಂಕ:
16 NOV 2026 5:00PM by PIB Bengaluru
ಕೇಂದ್ರ ವಾರ್ತಾ ಮತ್ತು ಪ್ರಸಾರ, ರೈಲ್ವೆ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಇಂದು ನವದೆಹಲಿಯ ಆಕಾಶವಾಣಿ ಭವನದ ರಂಗಭವನ ಸಭಾಂಗಣದಲ್ಲಿ ಭಾರತೀಯ ಪತ್ರಿಕಾ ಮಂಡಳಿ ಆಯೋಜಿಸಿದ್ದ ರಾಷ್ಟ್ರೀಯ ಪತ್ರಿಕಾ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿದರು.

ಪ್ರಜಾಪ್ರಭುತ್ವವನ್ನು ಬಲಪಡಿಸುವಲ್ಲಿ ಮಾಧ್ಯಮಗಳ ಮಹತ್ವದ ಪಾತ್ರವನ್ನು ಒತ್ತಿಹೇಳಿದ ಅವರು, ವೇಗವಾಗಿ ಬದಲಾಗುತ್ತಿರುವ ಮಾಧ್ಯಮ ಕ್ಷೇತ್ರ ಮತ್ತು ತಾಂತ್ರಿಕ ಪ್ರಗತಿಗೆ ಮಾಧ್ಯಮ ವೃತ್ತಿಪರರು ಹೊಂದಿಕೊಳ್ಳಬೇಕು ಎಂದು ಕರೆ ನೀಡಿದರು. ಜವಾಬ್ದಾರಿಯುತ ಪತ್ರಿಕೋದ್ಯಮದ ಮೌಲ್ಯಗಳನ್ನು ಎತ್ತಿಹಿಡಿಯುವ ಮತ್ತು ಸಮಾಜದ ಬಗೆಗಿನ ಹೊಣೆಗಾರಿಕೆಯನ್ನು ಮಾಧ್ಯಮಗಳು ನಿಭಾಯಿಸುವ ಮಹತ್ವವನ್ನು ಅವರು ಒತ್ತಿಹೇಳಿದರು.
ಈ ಕಾರ್ಯಕ್ರಮದಲ್ಲಿ ಭಾರತೀಯ ಪತ್ರಿಕಾ ಮಂಡಳಿಯ ಅಧ್ಯಕ್ಷೆ ನ್ಯಾಯಮೂರ್ತಿ (ನಿವೃತ್ತ) ರಂಜನಾ ಪ್ರಕಾಶ್ ದೇಸಾಯಿ, ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಚಂಚಲ್ ಕುಮಾರ್, ಮುಖ್ಯ ಭಾಷಣ ಮಾಡಿದ ಖ್ಯಾತ ಪತ್ರಕರ್ತ ಶ್ರೀ ರಜತ್ ಶರ್ಮಾ ಹಾಗೂ ಭಾರತೀಯ ಪತ್ರಿಕಾ ಮಂಡಳಿಯ ಸದಸ್ಯರಾದ ಡಾ. ಸುಧಾಂಶು ತ್ರಿವೇದಿ ಉಪಸ್ಥಿತರಿದ್ದರು. ಈ ವರ್ಷದ ಕಾರ್ಯಕ್ರಮದ ವಿಷಯವಸ್ತುವಾದ “ಪತ್ರಿಕೋದ್ಯಮ: ಜನಪ್ರಿಯತೆಯೋ ಅಥವಾ ಜವಾಬ್ದಾರಿಯುತವೋ” ಎಂಬುದು, ಮಾಹಿತಿ ಕ್ಷಿಪ್ರವಾಗಿ ಹರಡುತ್ತಿರುವ ಮತ್ತು ಡಿಜಿಟಲ್ ಪ್ರಭಾವ ಹೆಚ್ಚುತ್ತಿರುವ ಇಂದಿನ ಕಾಲಘಟ್ಟದಲ್ಲಿ ಪತ್ರಿಕೋದ್ಯಮದ ಬದಲಾಗುತ್ತಿರುವ ಪಾತ್ರವನ್ನು ಎತ್ತಿತೋರಿಸಿತು.
ನಾಗರಿಕರನ್ನು ಸಬಲೀಕರಣಗೊಳಿಸಲು ಮತ್ತು ಸಮಾಜವನ್ನು ಬಲಪಡಿಸಲು ಸಾಮೂಹಿಕ ಪ್ರಯತ್ನಗಳಿಗೆ ಶ್ರೀ ಅಶ್ವಿನಿ ವೈಷ್ಣವ್ ಕರೆ
ಸಭೆಯನ್ನುದ್ದೇಶಿಸಿ ಮಾತನಾಡಿದ ಶ್ರೀ ಅಶ್ವಿನಿ ವೈಷ್ಣವ್ ಅವರು, ತಂತ್ರಜ್ಞಾನ ಕ್ಷೇತ್ರದಲ್ಲಿ ಹಿಂದೆಂದೂ ಕಾಣದ ವೇಗದಲ್ಲಿ ಪರಿವರ್ತನೆಗಳು ನಡೆಯುತ್ತಿವೆ ಎಂದು ಹೇಳಿದರು. ಮುಂದಿನ ಐದು ವರ್ಷಗಳಲ್ಲಿ, ಕಳೆದ ಎರಡು ದಶಕಗಳಲ್ಲಿ ಕಂಡ ಬದಲಾವಣೆಗಳಿಗಿಂತಲೂ ಹೆಚ್ಚಿನ ಬದಲಾವಣೆಗಳು ಸಂಭವಿಸುವ ಸಾಧ್ಯತೆಯಿದೆ ಎಂದು ಅವರು ಅಭಿಪ್ರಾಯಪಟ್ಟರು. ಬದಲಾವಣೆಯನ್ನು ಸ್ವೀಕರಿಸಲು ಮತ್ತು ನಿರಂತರವಾಗಿ ತಮ್ಮ ಕೌಶಲ್ಯಗಳನ್ನು ಮೇಲ್ದರ್ಜೆಗೇರಿಸಿಕೊಳ್ಳಲು ಅವರು ಯುವ ಪತ್ರಕರ್ತರಿಗೆ ಕರೆ ನೀಡಿದರು.

ಡಿಜಿಟಲ್ ವೇದಿಕೆಗಳ ಹೊಣೆಗಾರಿಕೆಯನ್ನು ಒತ್ತಿಹೇಳಿದ ಅವರು, ಹೆಚ್ಚುತ್ತಿರುವ ತಪ್ಪು ಮಾಹಿತಿ, ಡೀಪ್ಫೇಕ್ಗಳು, ದಾರಿತಪ್ಪಿಸುವ ಜಾಹೀರಾತುಗಳು, ಡಿಜಿಟಲ್ ಬಂಧನಗಳು ಹಾಗೂ ಮಕ್ಕಳ ಮೇಲೆ ದುಷ್ಪರಿಣಾಮ ಬೀರುವ ವಿಷಯಗಳ ಪ್ರಸರಣದ ಸಂದರ್ಭದಲ್ಲಿ ಕೇವಲ ಸಮುದಾಯ ಮಾರ್ಗಸೂಚಿಗಳು ಸಾಕಾಗುತ್ತವೆಯೇ ಎಂಬ ಮಹತ್ವದ ಪ್ರಶ್ನೆಗಳನ್ನು ಮುಂದಿಟ್ಟರು. ನಾಗರಿಕರನ್ನು ಸಬಲೀಕರಣಗೊಳಿಸಲು ಮತ್ತು ಉದ್ಭವಿಸುತ್ತಿರುವ ಸವಾಲುಗಳನ್ನು ಎದುರಿಸಲು ಬದಲಾಗುತ್ತಿರುವ ಈ ಮಾಧ್ಯಮ ವ್ಯವಸ್ಥೆಯನ್ನು ಹೇಗೆ ನಿಯಂತ್ರಿಸಬೇಕು ಎಂಬುದರ ಕುರಿತು ಚರ್ಚಿಸುವ ಅಗತ್ಯವಿದೆ ಎಂದು ಅವರು ಹೇಳಿದರು.
ರೋಚಕತೆ ಮತ್ತು ಜವಾಬ್ದಾರಿಯ ನಡುವಿನ ತೆಳುವಾದ ಗೆರೆಯನ್ನು ಒತ್ತಿಹೇಳಿದ ಶ್ರೀ ರಜತ್ ಶರ್ಮಾ
ಮುಖ್ಯ ಭಾಷಣ ಮಾಡಿದ ಶ್ರೀ ರಜತ್ ಶರ್ಮಾ ಅವರು, ರೋಚಕತೆ (ಸೆನ್ಸೇಷನಲಿಸಂ) ಮತ್ತು ಜವಾಬ್ದಾರಿಯ ನಡುವೆ ಬಹಳ ತೆಳುವಾದ ಗೆರೆಯಿದೆ ಎಂದು ಒತ್ತಿಹೇಳುತ್ತಾ, ಸಂಪಾದಕೀಯ ವಿವೇಚನೆ ಮತ್ತು ಜವಾಬ್ದಾರಿಯುತ ವರದಿಗಾರಿಕೆಯ ಮಹತ್ವವನ್ನು ಪ್ರತಿಪಾದಿಸಿದರು. ತುರ್ತು ಪರಿಸ್ಥಿತಿ, 26/11 ಮುಂಬೈ ಭಯೋತ್ಪಾದಕ ದಾಳಿ ಮತ್ತು ಆಪರೇಷನ್ ಸಿಂಧೂರ್ ಸಂದರ್ಭದ ಅನುಭವಗಳನ್ನು ಸ್ಮರಿಸಿದ ಅವರು, ವಿಶೇಷವಾಗಿ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಷಯಗಳನ್ನು ವರದಿ ಮಾಡುವಾಗ ಸಂಯಮ, ಪರಿಶೀಲನೆ ಮತ್ತು ಸಂವೇದನಾಶೀಲತೆಯ ಅಗತ್ಯವನ್ನು ಉಲ್ಲೇಖಿಸಿದರು. ಡಿಜಿಟಲ್ ಮಾಧ್ಯಮ ಪರಿಸರ ವ್ಯವಸ್ಥೆಯಲ್ಲಿ ಹೆಚ್ಚಿನ ಉತ್ತರದಾಯಿತ್ವಕ್ಕೆ ಕರೆ ನೀಡಿದ ಅವರು, ರೋಚಕತೆಗಿಂತ ನಿಖರತೆಗೆ ಆದ್ಯತೆ ನೀಡುವಂತೆ ಪತ್ರಕರ್ತರನ್ನು ಒತ್ತಾಯಿಸಿದರು ಮತ್ತು “ಕಡಿಮೆ ಗದ್ದಲ, ಹೆಚ್ಚು ಸುದ್ದಿ; ಕಡಿಮೆ ರೋಚಕತೆ, ಹೆಚ್ಚು ಜವಾಬ್ದಾರಿ” ಎಂಬ ಸಂದೇಶದೊಂದಿಗೆ ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.

ಪತ್ರಿಕಾ ಸ್ವಾತಂತ್ರ್ಯ ಮತ್ತು ಪತ್ರಿಕೋದ್ಯಮದ ಮಾನದಂಡಗಳನ್ನು ಎತ್ತಿಹಿಡಿಯುವ ಬದ್ಧತೆಯನ್ನು ಪುನರುಚ್ಚರಿಸಿದ ಪತ್ರಿಕಾ ಮಂಡಳಿ ಅಧ್ಯಕ್ಷೆ
ಭಾರತೀಯ ಪತ್ರಿಕಾ ಮಂಡಳಿಯ ಅಧ್ಯಕ್ಷೆ ನ್ಯಾಯಮೂರ್ತಿ (ನಿವೃತ್ತ) ರಂಜನಾ ಪ್ರಕಾಶ್ ದೇಸಾಯಿ ಅವರು ಪತ್ರಿಕಾ ಸ್ವಾತಂತ್ರ್ಯವನ್ನು ರಕ್ಷಿಸುವ ಮತ್ತು ಪತ್ರಿಕೋದ್ಯಮದ ಗುಣಮಟ್ಟವನ್ನು ಸುಧಾರಿಸುವ ಮಂಡಳಿಯ ಬದ್ಧತೆಯನ್ನು ಪುನರುಚ್ಚರಿಸಿದರು. ಮಾಧ್ಯಮ ಕ್ಷೇತ್ರದಲ್ಲಿ ಆಗುತ್ತಿರುವ ತ್ವರಿತ ಪರಿವರ್ತನೆಯನ್ನು ಉಲ್ಲೇಖಿಸಿದ ಅವರು, ತಾಂತ್ರಿಕ ಪ್ರಗತಿಯಿಂದಾಗಿ ಲಕ್ಷಾಂತರ ಜನರಿಗೆ ಕೆಲವೇ ಕ್ಷಣಗಳಲ್ಲಿ ಮಾಹಿತಿ ಲಭ್ಯವಾಗುತ್ತಿದೆ ಎಂದು ಹೇಳಿದರು. ಮೊಬೈಲ್ ಫೋನ್ ಮತ್ತು ಇಂಟರ್ನೆಟ್ ಸಂಪರ್ಕ ಹೊಂದಿರುವ ಯಾರೇ ಆದರೂ ಈಗ ಸುದ್ದಿಯ ಪ್ರಸಾರಕರಾಗಬಹುದು. ಆದರೆ, ಸುದ್ದಿ ವರದಿ ಮಾಡುವ ಪ್ರತಿಯೊಬ್ಬರೂ ಪತ್ರಿಕೋದ್ಯಮದ ನೀತಿಸಂಹಿತೆಯಲ್ಲಿ ತರಬೇತಿ ಪಡೆದಿರುವುದಿಲ್ಲ ಅಥವಾ ಅದಕ್ಕೆ ಬದ್ಧರಾಗಿರುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ಕೃತಕ ಬುದ್ಧಿಮತ್ತೆಯ ಯುಗದಲ್ಲಿ ನಿಖರತೆ, ಸಂಪಾದಕೀಯ ವಿವೇಚನೆ ಮತ್ತು ಮಾನವ ಹೊಣೆಗಾರಿಕೆಗೆ ಶ್ರೀ ಚಂಚಲ್ ಕುಮಾರ್ ಒತ್ತು
ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಚಂಚಲ್ ಕುಮಾರ್ ಅವರು, ಸಾರ್ವಜನಿಕರ ಪಾಲ್ಗೊಳ್ಳುವಿಕೆ ಮತ್ತು ವಿಶ್ವಾಸಾರ್ಹತೆಯ ನಡುವೆ ಪತ್ರಿಕೋದ್ಯಮ ಸಮತೋಲನ ಕಾಯ್ದುಕೊಳ್ಳಬೇಕು ಎಂದು ಒತ್ತಿಹೇಳಿದರು. ಜನಪ್ರಿಯತೆಯು ಸತ್ಯಕ್ಕಿಂತ ಹೆಚ್ಚಿನ ಆದ್ಯತೆ ಪಡೆಯಬಾರದು ಮತ್ತು ಮಾಹಿತಿಯ ಪರಿಶೀಲನೆಗಿಂತ ಕ್ಷಿಪ್ರವಾಗಿ ವ್ಯಾಪಕವಾಗಿ ಹರಡುವುದಕ್ಕೆ (ವೈರಲ್ ಆಗುವುದಕ್ಕೆ) ಹೆಚ್ಚಿನ ಮಹತ್ವ ನೀಡಬಾರದು ಎಂದು ಅವರು ಹೇಳಿದರು. ಟಿಆರ್ಪಿಗಳು, ಕ್ಲಿಕ್ಗಳು ಮತ್ತು ಡಿಜಿಟಲ್ ತೊಡಗಿಸಿಕೊಳ್ಳುವಿಕೆಯ ಪ್ರಭಾವ ಹೆಚ್ಚುತ್ತಿರುವುದನ್ನು ಉಲ್ಲೇಖಿಸಿದ ಅವರು, ಸಂಪಾದಕೀಯ ವಿವೇಚನೆ, ಸತ್ಯಾಸತ್ಯತೆ ಪರಿಶೀಲನೆ ಹಾಗೂ ಸುದ್ದಿ ಮತ್ತು ಅಭಿಪ್ರಾಯಗಳ ನಡುವಿನ ವ್ಯತ್ಯಾಸವನ್ನು ಗುರುತಿಸುವ ಮಹತ್ವವನ್ನು ಒತ್ತಿಹೇಳಿದರು. ಕೃತಕ ಬುದ್ಧಿಮತ್ತೆಯು ಪತ್ರಿಕೋದ್ಯಮಕ್ಕೆ ನೆರವಾಗಬಲ್ಲದು, ಆದರೆ ಪತ್ರಕರ್ತನ ಹೊಣೆಗಾರಿಕೆಯನ್ನು ಅದು ವಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಭಾರತೀಯ ಪತ್ರಿಕಾ ಮಂಡಳಿಯ ಸದಸ್ಯ ಹಾಗೂ ರಾಜ್ಯಸಭಾ ಸದಸ್ಯರಾದ ಡಾ. ಸುಧಾಂಶು ತ್ರಿವೇದಿ ಅವರು ಅಂತಾರಾಷ್ಟ್ರೀಯ ಸೂಚ್ಯಂಕಗಳನ್ನು ವಿಮರ್ಶಾತ್ಮಕವಾಗಿ ಪರಿಶೀಲಿಸುವ ಅಗತ್ಯವನ್ನು ಪ್ರತಿಪಾದಿಸಿದರು. ಭಾರತವು ಅಭಿವೃದ್ಧಿಯ ಹೊಸ ದಿಕ್ಕಿನತ್ತ ಮುನ್ನಡೆಯುತ್ತಿರುವ ಸಂದರ್ಭದಲ್ಲಿ ಸಮಗ್ರತೆ ಮತ್ತು ಜವಾಬ್ದಾರಿಯುತ ಮಾಹಿತಿ ಪ್ರಸರಣ ಅತ್ಯಗತ್ಯ ಎಂದು ಅವರು ಒತ್ತಿಹೇಳಿದರು.
ಭಾರತೀಯ ಪತ್ರಿಕಾ ಮಂಡಳಿಯಿಂದ ‘ಪತ್ರಿಕೋದ್ಯಮ ನೀತಿ ಸಂಹಿತೆಯ 2026ನೇ ಆವೃತ್ತಿ’ ಬಿಡುಗಡೆ
ರಾಷ್ಟ್ರೀಯ ಪತ್ರಿಕಾ ದಿನಾಚರಣೆಯ ಪ್ರಮುಖ ಕಾರ್ಯಕ್ರಮಗಳಲ್ಲಿ ಒಂದಾಗಿ, ಭಾರತೀಯ ಪತ್ರಿಕಾ ಮಂಡಳಿಯು ‘ಪತ್ರಿಕೋದ್ಯಮ ನೀತಿ ಸಂಹಿತೆಯ 2026ನೇ ಆವೃತ್ತಿ’ ಯನ್ನು ಬಿಡುಗಡೆ ಮಾಡಿತು. ಇದರಲ್ಲಿ ಈ ಕೆಳಗಿನ ವಿಷಯಗಳಿಗೆ ಸಂಬಂಧಿಸಿದ ಪರಿಷ್ಕೃತ ಮಾರ್ಗಸೂಚಿಗಳನ್ನು ಸೇರ್ಪಡೆಗೊಳಿಸಲಾಗಿದೆ:
- ನೈಸರ್ಗಿಕ ವಿಕೋಪಗಳು ಮತ್ತು ಸಂಘರ್ಷದ ಸಂದರ್ಭಗಳ ವರದಿಗಾರಿಕೆ.
- ಪ್ರತಿಭಟನೆಗಳು ಮತ್ತು ಪ್ರದರ್ಶನಗಳ ವರದಿಗಾರಿಕೆ.
- ಲೈಂಗಿಕ ಕಾರ್ಯಕರ್ತರು ಮತ್ತು ವಿಶೇಷ ಚೇತನರ ಕುರಿತ ವರದಿಗಾರಿಕೆ.
- ಮಕ್ಕಳ ಖಾಸಗಿತನದ ರಕ್ಷಣೆ.
- ಆನ್ಲೈನ್ ಗೇಮಿಂಗ್ ಉತ್ತೇಜನ ಮತ್ತು ನಿಯಂತ್ರಣ ಕಾಯ್ದೆ, 2025ಕ್ಕೆ ಅನುಗುಣವಾಗಿ ಆನ್ಲೈನ್ ಮನಿ ಗೇಮ್ಸ್ (ಹಣದ ಆಟಗಳು) ಗೆ ಸಂಬಂಧಿಸಿದ ಜಾಹೀರಾತುಗಳು.
ಭಾರತೀಯ ಪತ್ರಿಕಾ ಮಂಡಳಿ ಕುರಿತು
ಮುಕ್ತ ಮತ್ತು ಜವಾಬ್ದಾರಿಯುತ ವರದಿಗಾರಿಕೆಯನ್ನು ಖಾತರಿಪಡಿಸಲು ಮುದ್ರಣ ಮಾಧ್ಯಮಕ್ಕೆ ಆಂತರಿಕ ಸ್ವಯಂ ನಿಯಂತ್ರಣ ವ್ಯವಸ್ಥೆಯನ್ನು ಒದಗಿಸುವ ಉದ್ದೇಶದಿಂದ, ಭಾರತೀಯ ಪತ್ರಿಕಾ ಮಂಡಳಿಯನ್ನು 1966ರಲ್ಲಿ ಸಂಸತ್ತಿನ ಕಾಯ್ದೆಯ ಮೂಲಕ ಅರೆ-ನ್ಯಾಯಾಂಗ ಪ್ರಾಧಿಕಾರವಾಗಿ ಸ್ಥಾಪಿಸಲಾಯಿತು. ನಂತರ 1979ರಲ್ಲಿ ಅದನ್ನು ಪುನರ್ಸ್ಥಾಪಿಸಲಾಯಿತು. ಸ್ಥಾಪನೆಯಾದಾಗಿನಿಂದಲೂ ಪತ್ರಿಕಾ ಸ್ವಾತಂತ್ರ್ಯವನ್ನು ರಕ್ಷಿಸಲು ಮತ್ತು ಸಂರಕ್ಷಿಸಲು ಹಾಗೂ ದೇಶದ ಪತ್ರಿಕೆಗಳು ಮತ್ತು ಸುದ್ದಿ ಸಂಸ್ಥೆಗಳ ಗುಣಮಟ್ಟವನ್ನು ಹೆಚ್ಚಿಸಲು ಮಂಡಳಿಯು ನಿರಂತರವಾಗಿ ಶ್ರಮಿಸುತ್ತಿದೆ.
*****