ಪ್ರಕಟಣಾ ದಿನಾಂಕ:
15 NOV 2026 1:23PM by PIB Bengaluru
ಜೋಹಾರ್!
‘ಜನಜಾತೀಯ ಗೌರವ ದಿವಸ' (ಬುಡಕಟ್ಟು ಸಮುದಾಯದ ಗೌರವ ದಿನ)ದ ಈ ಸಂಭ್ರಮಾಚರಣೆಯಲ್ಲಿ ದೇಶಾದ್ಯಂತ ಪಾಲ್ಗೊಂಡಿರುವ ನಿಮ್ಮೆಲ್ಲರಿಗೂ ಹಾರ್ದಿಕ ಶುಭಾಶಯಗಳು. 'ಧರ್ತಿ ಆಬಾ' ಭಗವಾನ್ ಬಿರ್ಸಾ ಮುಂಡಾ ಅವರ ಜನ್ಮದಿನದಂದು, ನಾನು ಅವರಿಗೆ ಅತ್ಯಂತ ಗೌರವಪೂರ್ವಕವಾಗಿ ನಮಸ್ಕರಿಸುತ್ತೇನೆ. ‘ಜನಜಾತೀಯ ಗೌರವ ದಿವಸ'ವು ಬುಡಕಟ್ಟು ಸಮುದಾಯದ ಹೆಮ್ಮೆ ಮತ್ತು ಭಗವಾನ್ ಬಿರ್ಸಾ ಮುಂಡಾ ಅವರ ಸ್ಫೂರ್ತಿಯೊಂದಿಗೆ ಬೆಸೆದುಕೊಂಡಿರುವ ಒಂದು ರಾಷ್ಟ್ರೀಯ ಸಂದರ್ಭವಾಗಿದೆ. ಇದೇ ಸ್ಫೂರ್ತಿಯೊಂದಿಗೆ, '‘ಜನಜಾತೀಯ ಗೌರವ ದಿವಸ' ಆಚರಿಸಲು ಇಂದು ದೇಶಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ರಾಷ್ಟ್ರವು ತನ್ನ ಬುಡಕಟ್ಟು ಸಮುದಾಯದ ವೀರ ನಾರಿಯರನ್ನು ಹೆಮ್ಮೆಯಿಂದ ಸ್ಮರಿಸುತ್ತಿದೆ. ವಿಶೇಷವಾಗಿ ಮಹಾರಾಷ್ಟ್ರದ ಗಡ್ಚಿರೋಲಿಯಲ್ಲಿ ಇಂತಹ ಬೃಹತ್ ಸಮಾವೇಶ ನಡೆಯುತ್ತಿದೆ. ನನ್ನ ದೃಷ್ಟಿ ಹಾಯುವವರೆಗೂ ಎಲ್ಲೆಡೆ ಜನರೇ ಕಾಣುತ್ತಿದ್ದಾರೆ. ಗಡ್ಚಿರೋಲಿಯು ಶ್ರೀಮಂತ ಬುಡಕಟ್ಟು ಸಾಂಸ್ಕೃತಿಕ ಪರಂಪರೆ ಹೊಂದಿದೆ. ರಘುಜಿ ಭಂಗಾರೆ, ಭಗೋಜಿ ನಾಯಕ್ ಮತ್ತು ವೀರ ಬಾಬುರಾವ್ ಶೆಡ್ಮಾಕೆ ಅವರಂತಹ ವೀರರ ಕಥೆಗಳು ಈ ನೆಲದೊಂದಿಗೆ ತಳುಕುಹಾಕಿಕೊಂಡಿವೆ. ಈ ಸಂದರ್ಭದಲ್ಲಿ, ನಾನು ಎಲ್ಲಾ ಬುಡಕಟ್ಟು ವೀರರಿಗೆ ಗೌರವಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ. ಅಲ್ಲದೆ, ದೇಶಾದ್ಯಂತದಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಎಲ್ಲಾ ರಾಜ್ಯಪಾಲರು, ಗೌರವಾನ್ವಿತ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಮತ್ತು ಪ್ರತಿಯೊಬ್ಬ ಜನಪ್ರತಿನಿಧಿಗೂ ನಾನು ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ಸ್ನೇಹಿತರೆ,
2021 ನವೆಂಬರ್ 15ರಂದು ಆರಂಭವಾದ 'ಜನಜಾತೀಯ ಗೌರವ ದಿವಸ' ಆಚರಣೆಯು ಈಗ ಒಂದು ರಾಷ್ಟ್ರೀಯ ಉತ್ಸವವಾಗಿ ಮಾರ್ಪಟ್ಟಿದೆ. ಕಳೆದ ವರ್ಷ ಭಗವಾನ್ ಬಿರ್ಸಾ ಮುಂಡಾ ಅವರ 150ನೇ ಜನ್ಮದಿನದ ಸಂದರ್ಭದಲ್ಲಿ, ದೇಶಾದ್ಯಂತ 2 ಲಕ್ಷಕ್ಕೂ ಹೆಚ್ಚಿನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಕೋಟ್ಯಂತರ ನಾಗರಿಕರು ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಒಂದು ಕಾಲದಲ್ಲಿ ನಮ್ಮ ದೇಶದ ಅನೇಕ ಸ್ಮರಣೀಯ ದಿನಗಳು ಮತ್ತು ಆಚರಣೆಗಳನ್ನು ವಿದೇಶಿ ದೃಷ್ಟಿಕೋನದಿಂದ ರೂಪಿಸಲಾಗುತ್ತಿತ್ತು. ಆದರೆ ಇಂದು ಭಾರತವು ತನ್ನ ಪರಂಪರೆ, ಇತಿಹಾಸ ಮತ್ತು ವೀರರನ್ನು ಸ್ವದೇಶಿ ಸ್ವಾಭಿಮಾನದೊಂದಿಗೆ ಹೆಮ್ಮೆಯಿಂದ ಸ್ಮರಿಸುತ್ತಿದೆ. ಇದು ನಮ್ಮ ರಾಷ್ಟ್ರೀಯ ಪ್ರಜ್ಞೆಯಲ್ಲಿ ಆಗಿರುವ ಒಂದು ದೊಡ್ಡ ಬದಲಾವಣೆಯ ಸಂಕೇತವಾಗಿದೆ.
ಸ್ನೇಹಿತರೆ,
ಖಾಸಿ ಬೆಟ್ಟಗಳಲ್ಲಿನ ತಿರೋಟ್ ಸಿಂಗ್ ಅವರ ಹೋರಾಟವಿರಲಿ, ಛೋಟಾ ನಾಗ್ಪುರದಲ್ಲಿನ 'ಕೋಲ್' ಚಳುವಳಿಯಿರಲಿ, ಅಥವಾ ಸಿಧೋ ಮತ್ತು ಕನ್ಹೋ ನೇತೃತ್ವದ ಸಾಂತಾಳ ಕ್ರಾಂತಿಯಿರಲಿ - ಬುಡಕಟ್ಟು ಸಮುದಾಯವು ಅನ್ಯಾಯದ ವಿರುದ್ಧ ಸದಾ ಧ್ವನಿ ಎತ್ತಿದೆ. ಮಂಗಢದ ನೆಲದಲ್ಲಿ ಗುರು ಗೋವಿಂದ ಅವರ ಅನುಯಾಯಿಗಳು ಸರ್ವೋಚ್ಚ ತ್ಯಾಗ ಮಾಡಿದರು. ರಾಣಿ ಗೈದಿನ್ಲಿಯು, ತಾಂತಿಯಾ ಭಿಲ್ ಮತ್ತು ಇತರೆ ಅನೇಕ ವೀರರು ಹಾಗೂ ವೀರ ನಾರಿಯರು ತಮ್ಮ ಧೈರ್ಯದ ಮೂಲಕ ರಾಷ್ಟ್ರಕ್ಕೆ ಸ್ಫೂರ್ತಿ ನೀಡಿದರು. ಅಲ್ಲೂರಿ ಸೀತಾರಾಮರಾಜು ಮತ್ತು ರಾಣಿ ದುರ್ಗಾವತಿಯಂತಹ ಮಹಾನ್ ವ್ಯಕ್ತಿಗಳು ಕೂಡ ಬುಡಕಟ್ಟು ಚಳುವಳಿಗಳಿಗೆ ಚೈತನ್ಯ ತುಂಬಿದರು. ಇಂತಹ ಧೈರ್ಯದ ಕಥೆಗಳ ಜತೆಗೆ, ಭಗವಾನ್ ಬಿರ್ಸಾ ಮುಂಡಾ ಅವರ 'ಉಲ್ಗುಲಾನ್'(ದಂಗೆ) ಮತ್ತು ಅತ್ಯಂತ ಕಿರಿಯ ವಯಸ್ಸಿನಲ್ಲಿ ಅವರು ನಡೆಸಿದ ಹೋರಾಟವು ಇಂದಿಗೂ ಕೋಟ್ಯಂತರ ಭಾರತೀಯರಿಗೆ ಸ್ಫೂರ್ತಿ ನೀಡುತ್ತಲೇ ಇದೆ.
ಸ್ನೇಹಿತರೆ,
ಇಂದು 'ಜನಜಾತೀಯ ಗೌರವ ದಿವಸ'ದ ಅಂಗವಾಗಿ, ದೇಶದ ವಿವಿಧ ರಾಜ್ಯಗಳಲ್ಲಿ ಬುಡಕಟ್ಟು ಅಭಿವೃದ್ಧಿಗೆ ಸಂಬಂಧಿಸಿದ 170ಕ್ಕೂ ಹೆಚ್ಚು ಯೋಜನೆಗಳನ್ನು ಉದ್ಘಾಟಿಸಲಾಗಿದೆ, 70ಕ್ಕೂ ಹೆಚ್ಚು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಮಿಜೋರಾಂನಲ್ಲಿ ಮಹಾನ್ ಸ್ವಾತಂತ್ರ್ಯ ಹೋರಾಟಗಾರ್ತಿ ರೋಪುಯಿಲಿಯಾನಿ ಜಿ ಅವರಿಗೆ ಸಮರ್ಪಿತವಾದ ವಸ್ತುಸಂಗ್ರಹಾಲಯ ಉದ್ಘಾಟಿಸಲಾಗಿದೆ. ಅರುಣাচಲ ಪ್ರದೇಶದಲ್ಲಿ ಬುಡಕಟ್ಟು ಸಂಶೋಧನಾ ಸಂಸ್ಥೆಯ ಹೊಸ ಕಟ್ಟಡ ಉದ್ಘಾಟಿಸಲಾಗಿದೆ. ಇದಲ್ಲದೆ, ಉದ್ಘಾಟನೆಗೊಂಡ ಮತ್ತು ಪ್ರಾರಂಭಿಸಲಾದ ಯೋಜನೆಗಳಲ್ಲಿ ಶೈಕ್ಷಣಿಕ ಸಂಸ್ಥೆಗಳು, ಆರೋಗ್ಯ ಸೌಲಭ್ಯಗಳು, ಬುಡಕಟ್ಟು ಉತ್ಪನ್ನಗಳ ಮಾರುಕಟ್ಟೆ ಕೇಂದ್ರಗಳು ಮತ್ತು ಹಳ್ಳಿಗಳಲ್ಲಿ ಮೂಲಸೌಕರ್ಯಗಳನ್ನು ವಿಸ್ತರಿಸುವ ಅನೇಕ ಉಪಕ್ರಮಗಳು ಸೇರಿವೆ. ದೇಶದ ವಿವಿಧ ರಾಜ್ಯಗಳಲ್ಲಿ ಸುಮಾರು 3000 ಕೋಟಿ ರೂ. ಮೌಲ್ಯದ ಯೋಜನೆಗಳನ್ನು ಉದ್ಘಾಟಿಸಲಾಗಿದೆ, ಅವುಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಈ ಯೋಜನೆಗಳಿಗಾಗಿ ನಿಮ್ಮೆಲ್ಲರಿಗೂ ಹಾಗೂ ದೇಶದ ಜನರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ಸ್ನೇಹಿತರೆ,
ಇಂದಿನ ಕಾರ್ಯಕ್ರಮವು ದೇಶದ 2 ಪ್ರಮುಖ ಸಾಧನೆಗಳ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿರುವ ಸಮಯದಲ್ಲಿ ನಡೆಯುತ್ತಿದೆ. ಮೊದಲ ಸಾಧನೆಯೆಂದರೆ, ಸುಮಾರು 50 ಕೋಟಿ ಜನರು ತೀವ್ರ ಬಡತನದಿಂದ ಹೊರಬಂದಿದ್ದಾರೆ. ಎರಡನೆಯ ಸಾಧನೆಯೆಂದರೆ, ದೇಶವು ನಕ್ಸಲಿಸಂ ಮತ್ತು ಮಾವೋವಾದಿ ಭಯೋತ್ಪಾದನೆಯಿಂದ ಮುಕ್ತವಾಗಿದೆ. ಈ ಎರಡೂ ಸಾಧನೆಗಳು ನಮ್ಮ ಬುಡಕಟ್ಟು ಸಹೋದರ ಸಹೋದರಿಯರ ಜೀವನದೊಂದಿಗೆ ಆಳವಾಗಿ ಬೆಸೆದುಕೊಂಡಿವೆ. ಕೆಲವು ವಾರಗಳ ಹಿಂದೆ, ವಿಶ್ವ ಬ್ಯಾಂಕ್ ವರದಿಯು ಕಳೆದ 12-13 ವರ್ಷಗಳಲ್ಲಿ ಭಾರತದಲ್ಲಿ ಸುಮಾರು 50 ಕೋಟಿ ಜನರು ತೀವ್ರ ಬಡತನದಿಂದ ಹೊರಬಂದಿದ್ದಾರೆ ಎಂದು ತಿಳಿಸಿದೆ. 50 ಕೋಟಿ ಎಂಬುದು ಬಹಳ ದೊಡ್ಡ ಸಂಖ್ಯೆ. ಸ್ವಾತಂತ್ರ್ಯಾನಂತರದ ದೇಶದ ಅತ್ಯಂತ ದೊಡ್ಡ ಸಾಧನೆಗಳಲ್ಲಿ ಇದೂ ಒಂದೆಂದು ನಾನು ಪರಿಗಣಿಸುತ್ತೇನೆ. ಈ ಸಾಧನೆಯು ಇಡೀ ರಾಷ್ಟ್ರಕ್ಕೆ ಸೇರಿದ್ದು, ಇದರ ಶ್ರೇಯಸ್ಸು ಯಾವುದೇ ಒಂದು ಸರ್ಕಾರಕ್ಕೆ ಮಾತ್ರ ಸಲ್ಲುವುದಿಲ್ಲ. ಇದರ ಹಿಂದೆ ಸಮಾಜದ ಸಾಮೂಹಿಕ ಶಕ್ತಿ ಹಾಗೂ ಪ್ರತಿಯೊಬ್ಬ ನಾಗರಿಕರ ಪ್ರಯತ್ನ ಮತ್ತು ಕಠಿಣ ಪರಿಶ್ರಮವಿದೆ. ಇತ್ತೀಚಿನ ವರ್ಷಗಳಲ್ಲಿ ಕೇಂದ್ರ ಸರ್ಕಾರ ತೆಗೆದುಕೊಂಡ ನಿರ್ಧಾರಗಳು, ಬುಡಕಟ್ಟು ಜನಾಂಗದ ಕಲ್ಯಾಣಕ್ಕಾಗಿ ಜಾರಿಗೆ ತಂದ ಯೋಜನೆಗಳು ಕೂಡ ಈ ಸಾಧನೆಯಲ್ಲಿ ಪ್ರಮುಖ ಪಾತ್ರ ವಹಿಸಿವೆ. ಈ ಸಾಧನೆಗಾಗಿ ನಾನು ದೇಶದ ಎಲ್ಲಾ ನಾಗರಿಕರಿಗೆ, ವಿಶೇಷವಾಗಿ ನನ್ನ ಬುಡಕಟ್ಟು ಸಹೋದರ ಸಹೋದರಿಯರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ಸ್ನೇಹಿತರೆ,
ಇಷ್ಟು ದೊಡ್ಡ ಸಂಖ್ಯೆಯ ಜನರು ಬಡತನದಿಂದ ಹೊರಬರುವುದು ಸ್ವತಃ ಒಂದು ದೊಡ್ಡ ಪರಿವರ್ತನೆಯಾಗಿದೆ. ಈ ಪರಿವರ್ತನೆಯು ಸಂಕಲ್ಪದಿಂದ ಸಾಧನೆಯವರೆಗಿನ ಸುದೀರ್ಘ ಪಯಣದ ಯಶೋಗಾಥೆಯಾಗಿದೆ. ಭಾರತವು ತನ್ನ ಸಂಕಲ್ಪಗಳನ್ನು ಈಡೇರಿಸಬಲ್ಲದು ಮತ್ತು ಪ್ರತಿಯೊಬ್ಬ ಭಾರತೀಯನೂ ದೊಡ್ಡ ಗುರಿಗಳನ್ನು ಸಾಧಿಸಬಲ್ಲದು ಎಂಬ ವಿಶ್ವಾಸವನ್ನು ಇದು ಮೂಡಿಸಿದೆ. ದಶಕಗಳಿಂದ ಅಭಿವೃದ್ಧಿಯ ಫಲಗಳಿಂದ ವಂಚಿತರಾದವರಿಗೆ ಆದ್ಯತೆ ನೀಡಬೇಕೆಂದು ನಾವು ಸಂಕಲ್ಪ ಮಾಡಿದ್ದೆವು. ನಮ್ಮ ಸಂಕಲ್ಪಗಳು ವಾಸ್ತವಿಕ ರೂಪ ಪಡೆಯುತ್ತಿದ್ದಂತೆ, ಸಕಾರಾತ್ಮಕ ಬದಲಾವಣೆಗಳ ಸರಣಿಯೇ ಪ್ರಾರಂಭವಾಯಿತು. ಅತ್ಯಂತ ಹಿಂದುಳಿದ ಬುಡಕಟ್ಟು ಪ್ರದೇಶಗಳಲ್ಲಿ, ಅಲ್ಲಿನ ಜನರಿಗೆ ಜೀವನಕ್ಕೆ ಅಗತ್ಯವಾದ ಮೂಲಭೂತ ಸೌಕರ್ಯಗಳು ಕೂಡ ತಲುಪಿರಲಿಲ್ಲ. ಅಂತಹ ಪ್ರದೇಶಗಳ ಅಭಿವೃದ್ಧಿಗಾಗಿ ನಮ್ಮ ಸರ್ಕಾರ ತನ್ನ ಸಂಪೂರ್ಣ ಶಕ್ತಿ ವಿನಿಯೋಗಿಸಿದೆ. 'ಪಿಎಂ-ಜನ್ಮನ್' ಯೋಜನೆ ಮತ್ತು 'ಧರ್ತಿ ಆಬಾ ಜನಜಾತೀಯ ಗ್ರಾಮ ಉತ್ಕರ್ಷ ಅಭಿಯಾನ'ಕ್ಕಾಗಿ ನಾವು 1 ಲಕ್ಷ ಕೋಟಿ ರೂಪಾಯಿಗೂ ಹೆಚ್ಚಿನ ಬಜೆಟ್ ಮೀಸಲಿಟ್ಟಿದ್ದೇವೆ. ಸ್ವಾತಂತ್ರ್ಯಾನಂತರ ಯಾವ ಕುಟುಂಬಗಳಿಗೆ ಸೌಲಭ್ಯಗಳು ಅತಿ ತಡವಾಗಿ ತಲುಪಿದ್ದವೋ, ಅಂತಹ ಕುಟುಂಬಗಳಿಗೆ ಈಗ ಅವು ಅತಿ ವೇಗವಾಗಿ ತಲುಪುವಂತೆ ಮಾಡುವುದು ನಮ್ಮ ಪ್ರಯತ್ನವಾಗಿತ್ತು.
ಸ್ನೇಹಿತರೆ,
ಸೌಲಭ್ಯವಂಚಿತರಿಗೆ ಆದ್ಯತೆ ನೀಡುವುದೇ ನಮ್ಮ ಆದ್ಯತೆಯಾಗಿದೆ. ನಾವು ದೇಶಾದ್ಯಂತ ಬಡ ಕುಟುಂಬಗಳಿಗಾಗಿ 4 ಕೋಟಿಗೂ ಹೆಚ್ಚು ಕಾಯಂ ಮನೆಗಳನ್ನು ನಿರ್ಮಿಸಿದ್ದೇವೆ. ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ ವಿದ್ಯುತ್ ಸೌಲಭ್ಯ ತಲುಪದಿದ್ದ 18,000 ಹಳ್ಳಿಗಳಿಗೆ ನಾವು ವಿದ್ಯುತ್ ಒದಗಿಸಿದ್ದೇವೆ. 'ಆಯುಷ್ಮಾನ್ ಭಾರತ್' ಯೋಜನೆಯ ಮೂಲಕ 5 ಲಕ್ಷ ರೂಪಾಯಿವರೆಗೆ ಉಚಿತ ಆರೋಗ್ಯ ಸೇವೆ ಒದಗಿಸಲಾಗಿದೆ. ದೇಶಾದ್ಯಂತ 1.75 ಲಕ್ಷಕ್ಕೂ ಹೆಚ್ಚು 'ಆಯುಷ್ಮಾನ್ ಆರೋಗ್ಯ ಮಂದಿರ'ಗಳನ್ನು ಸ್ಥಾಪಿಸಲಾಗಿದ್ದು, ಇದರ ಮೂಲಕ ದೂರದ ಬುಡಕಟ್ಟು ಪ್ರದೇಶಗಳಿಗೂ ಆರೋಗ್ಯ ಸೇವೆಗಳು ತಲುಪುವಂತಾಗಿದೆ. ಬಡ ಕುಟುಂಬಗಳಿಗೆ ಶೌಚಾಲಯ ಸೌಲಭ್ಯಗಳು ದೊರೆತು ನೈರ್ಮಲ್ಯ ಸುಧಾರಿಸಿದಾಗ, ಅನೇಕ ರೋಗಗಳ ಅಪಾಯವೂ ಕಡಿಮೆಯಾಗಿದೆ.
ಸ್ನೇಹಿತರೆ,
ಬಡತನ ಹೋಗಲಾಡಿಸಲು, ಬಡ ಕುಟುಂಬಗಳಿಗೆ ಆದಾಯ ಗಳಿಸುವ ಅವಕಾಶಗಳನ್ನು ಹೆಚ್ಚಿಸುವುದು ಕೂಡ ಅಷ್ಟೇ ಮುಖ್ಯವಾಗಿತ್ತು. 'ಮುದ್ರಾ ಯೋಜನೆ'ಯ ಮೂಲಕ ನಾವು ಯಾವುದೇ ಆಸ್ತಿ ಅಥವಾ ದಾಖಲೆಗಳನ್ನು ಅಡಮಾನವಿಡದೆಯೇ ಸಾಲಗಳನ್ನು ಒದಗಿಸಿದೆವು. ಈ ಯೋಜನೆಯ ಅಡಿ, ಲಕ್ಷಾಂತರ ಕೋಟಿ ರೂಪಾಯಿ ನೆರವು ನೀಡಲಾಗಿದೆ. ಈ ಎಲ್ಲಾ ಯೋಜನೆಗಳ ಪ್ರಯೋಜನಗಳು ಬಡವರಿಗೆ, ದಲಿತರಿಗೆ, ಹಿಂದುಳಿದ ಸಮುದಾಯಗಳಿಗೆ ಹಾಗೂ ನಮ್ಮ ಬುಡಕಟ್ಟು ಸಹೋದರ ಸಹೋದರಿಯರಿಗೆ ತಲುಪಿವೆ. ಇದು ಅವರಲ್ಲಿ ಮುಂದೆ ಸಾಗಲು ಹೊಸ ಆತ್ಮವಿಶ್ವಾಸ ಮೂಡಿಸಿದೆ.
ಸ್ನೇಹಿತರೆ,
ದೀರ್ಘಕಾಲದವರೆಗೆ ಅಭಿವೃದ್ಧಿಯಲ್ಲಿ ಹಿಂದುಳಿದಿದ್ದ ಪ್ರದೇಶಗಳ ಕಡೆಗೂ ನಾವು ವಿಶೇಷ ಗಮನ ಹರಿಸಿದೆವು. ಅಭಿವೃದ್ಧಿ, ಉತ್ತಮ ಸೌಲಭ್ಯಗಳು ಮತ್ತು ನಾಗರಿಕರ ಹಕ್ಕುಗಳ ರಕ್ಷಣೆಗಾಗಿ 100ಕ್ಕೂ ಹೆಚ್ಚು 'ಆಕಾಂಕ್ಷಿತ ಜಿಲ್ಲೆ'ಗಳಲ್ಲಿ ಮತ್ತು 500ಕ್ಕೂ ಹೆಚ್ಚು 'ಆಕಾಂಕ್ಷಿತ ಬ್ಲಾಕ್'ಗಳಲ್ಲಿ ವಿಶೇಷ ಅಭಿಯಾನ ಆರಂಭಿಸಲಾಯಿತು. ಇಂತಹ ಅನೇಕ ಪ್ರದೇಶಗಳಲ್ಲಿ ಬುಡಕಟ್ಟು ಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈಗ, 'ಪ್ರಧಾನ ಮಂತ್ರಿ ಕೃಷಿ ಧನ ಧಾನ್ಯ ಯೋಜನೆ'ಯ ಅಡಿ, ಕೃಷಿ ಕ್ಷೇತ್ರದಲ್ಲಿ ಹಿಂದುಳಿದಿರುವ 100 ಜಿಲ್ಲೆಗಳ ಕಡೆಗೂ ವಿಶೇಷ ಗಮನ ನೀಡಲಾಗುತ್ತಿದೆ. ಈ ಪ್ರದೇಶಗಳಲ್ಲಿ ರೈತರು, ಬಡ ಕುಟುಂಬಗಳು ಮತ್ತು ಬುಡಕಟ್ಟು ಸಮುದಾಯಗಳಿಗೆ ಹೊಸ ಅವಕಾಶಗಳನ್ನು ಕಲ್ಪಿಸಿಕೊಡುವುದು ನಮ್ಮ ಪ್ರಯತ್ನವಾಗಿದೆ. ಇಂತಹ ಸಾಮೂಹಿಕ ಪ್ರಯತ್ನಗಳು ಹಾಗೂ 'ಸಬ್ಕಾ ಸಾಥ್, ಸಬ್ಕಾ ವಿಕಾಸ್' ಎಂಬ ಮಂತ್ರವು ದೇಶದ ಬಡವರಿಗೆ ಹೊಸ ಆತ್ಮವಿಶ್ವಾಸ ತುಂಬಿದೆ. ಪರಿಣಾಮವಾಗಿ ಕೋಟ್ಯಂತರ ಬಡವರು ಬಡತನದಿಂದ ಹೊರಬರುವಲ್ಲಿ ಯಶಸ್ವಿಯಾಗಿದ್ದಾರೆ.
ಸ್ನೇಹಿತರೆ,
ನಾನು ಉಲ್ಲೇಖಿಸಿದ ಎರಡನೆಯ ಸಾಧನೆಯೆಂದರೆ, ನಕ್ಸಲಿಸಂ ಮತ್ತು ಮಾವೋವಾದದಿಂದ ಮುಕ್ತಿ. ಗಡ್ಚಿರೋಲಿಯ ಜನರು ಹಾಗೂ ದೇಶಾದ್ಯಂತ ಇರುವ ಬುಡಕಟ್ಟು ಪ್ರದೇಶಗಳ ಜನರಿಗೆ ಚೆನ್ನಾಗಿ ತಿಳಿದಿದೆ. ನಕ್ಸಲೀಯ ಹಿಂಸಾಚಾರವು ನಮ್ಮ ಬುಡಕಟ್ಟು ಸಮುದಾಯಗಳಿಗೆ ಅತಿ ದೊಡ್ಡ ಹಾನಿ ಉಂಟುಮಾಡಿದೆ ಎಂಬುದು. 2014ರಲ್ಲಿ ದೇಶದ ಸುಮಾರು 125 ಜಿಲ್ಲೆಗಳು ಮಾವೋವಾದ ಮತ್ತು ನಕ್ಸಲಿಸಂನಿಂದ ಬಾಧಿತವಾಗಿದ್ದವು. ಪ್ರತಿ ವರ್ಷ ನೂರಾರು ಹಿಂಸಾತ್ಮಕ ಘಟನೆಗಳು ನಡೆಯುತ್ತಿದ್ದವು. ಇಂತಹ ಘಟನೆಗಳಲ್ಲಿ ಸಾವಿರಾರು ಅಮಾಯಕರು ತಮ್ಮ ಪ್ರಾಣ ಕಳೆದುಕೊಂಡರು. ಅವರಲ್ಲಿ ಬಹುದೊಡ್ಡ ಸಂಖ್ಯೆಯವರು ನಮ್ಮ ಬುಡಕಟ್ಟು ಜನಾಂಗದ ಸಹೋದರ ಸಹೋದರಿಯರೇ ಆಗಿದ್ದರು.
ಆದರೆ ಸ್ನೇಹಿತರೆ,
ಆ ಅವಧಿಯಲ್ಲಿ ಮಾವೋವಾದ ಮತ್ತು ನಕ್ಸಲಿಸಂನಿಂದ ಬಾಧಿತರಾದ ಆ ಜನರನ್ನು ಅಂದರೆ ನನ್ನ ಸಹೋದರ ಸಹೋದರಿಯರನ್ನು ಅಂದಿನ ಸರ್ಕಾರಗಳು ಅವರ ಪಾಡಿಗೆ ಬಿಟ್ಟುಬಿಟ್ಟಿದ್ದವು. ಅವರ ಹಕ್ಕುಗಳನ್ನು ಕಸಿದುಕೊಳ್ಳಲಾಗಿತ್ತು. ಎಲ್ಲರೂ ಮೌನವಾಗಿ, ಸುಮ್ಮನೆ ಕುಳಿತಿದ್ದರು. ನಿಮಗೆ ಆಶ್ಚರ್ಯವಾಗಬಹುದು, ನಮ್ಮ ಬುಡಕಟ್ಟು ಸಮುದಾಯಗಳ ಈ ಸಹೋದರ ಸಹೋದರಿಯರಿಗೆ ಮತ ಚಲಾಯಿಸುವ ಹಕ್ಕು ನೀಡಿರಲಿಲ್ಲ! ಅಂದಿನ ಸರ್ಕಾರಗಳು ಕೇವಲ ಮೂಕ ಪ್ರೇಕ್ಷಕರಾಗಿ, ಕಣ್ಣು ಮುಚ್ಚಿಕೊಂಡು ಕುಳಿತಿದ್ದವು. ಮಾವೋವಾದಿಗಳು ಮತ್ತು ನಕ್ಸಲೀಯರು ಬಡ ತಾಯಂದಿರ ಪುಟ್ಟ ಮಕ್ಕಳನ್ನು ಎತ್ತಿಕೊಂಡು ಹೋಗುತ್ತಿದ್ದರು, ಆದರೆ ಯಾರೂ ಏನನ್ನೂ ಮಾಡಲು ಸಾಧ್ಯವಾಗುತ್ತಿರಲಿಲ್ಲ. ನಕ್ಸಲೀಯರು ನಮ್ಮ ಮನೆಗಳ ಹೆಣ್ಣು ಮಕ್ಕಳನ್ನು ಅಪಹರಿಸುತ್ತಿದ್ದರು. ಆಗ ಎಲ್ಲರೂ ಅಸಹಾಯಕರಾಗಿ, ತೀವ್ರ ವೇದನೆಯಿಂದ ಅದನ್ನು ನೋಡುತ್ತಾ ಉಳಿಯಬೇಕಾದ ಪರಿಸ್ಥಿತಿ ಇತ್ತು.
ಸ್ನೇಹಿತರೆ,
ಮಾವೋವಾದ ಮತ್ತು ನಕ್ಸಲ್ ವಾದವನ್ನು ಸೋಲಿಸಿರುವುದರಿಂದ, ನಮ್ಮ ಬುಡಕಟ್ಟು ಸಮುದಾಯದ ತಾಯಂದಿರು ಮತ್ತು ಸಹೋದರಿಯರು ಇಂದು ನಮಗೆ ಅಪಾರ ಆಶೀರ್ವಾದಗಳನ್ನು ನೀಡುತ್ತಿದ್ದಾರೆ. ಈಗ ಸುರಕ್ಷಿತ ಭಾವನೆ ಹೊಂದಿರುವ ಸಹೋದರಿಯರು ನಮ್ಮನ್ನು ಹರಸುತ್ತಿದ್ದಾರೆ. ಒಂದು ಕಾಲದಲ್ಲಿ ಬಾಲ್ಯವನ್ನೇ ಕಳೆದುಕೊಂಡಿದ್ದ ಮಕ್ಕಳು, ಇಂದು ಯುವ ಜನರಾಗಿ ನಮ್ಮೊಂದಿಗೆ ಕೈಜೋಡಿಸುತ್ತಿದ್ದಾರೆ. ಅವರಿಗೆ ಶಿಕ್ಷಣ ಮತ್ತು ಉದ್ಯೋಗಾವಕಾಶಗಳು ಲಭ್ಯವಾಗುತ್ತಿವೆ. ಛತ್ತೀಸ್ಗಢದ ಬಸ್ತಾರ್ನಂತಹ ಪ್ರದೇಶಗಳಲ್ಲಿ, ಹಿಂದೆ ಜನರು ಹೋಗಲು ಭಯಪಡುತ್ತಿದ್ದರು; ಆದರೆ ಇತ್ತೀಚೆಗಷ್ಟೇ ನಾನು ಸ್ವತಃ ಆ ಪ್ರದೇಶದ ಹೃದಯ ಭಾಗದಲ್ಲಿ ನಮ್ಮ ಭದ್ರತಾ ಪಡೆಗಳೊಂದಿಗೆ ದೀಪಾವಳಿ ಆಚರಿಸಿದೆ. ಈ ದೀಪಾವಳಿಯಂದು, ಗಡ್ಚಿರೋಲಿ ಸೇರಿದಂತೆ ಹಿಂದೆ ನಕ್ಸಲ್ ಪೀಡಿತವಾಗಿದ್ದ ಎಲ್ಲಾ ಪ್ರದೇಶಗಳಲ್ಲಿನ ಜನರು ಕೇವಲ ದೀಪಗಳ ಬೆಳಕನ್ನಷ್ಟೇ ಅಲ್ಲ, ಬದಲಾಗಿ ಭರವಸೆಯ ಬೆಳಕನ್ನೂ ಪಡೆದಿದ್ದಾರೆ.
ಸ್ನೇಹಿತರೆ,
ಇಂದು ನಮ್ಮ ಬುಡಕಟ್ಟು ಸಮಾಜವು ರಾಷ್ಟ್ರದ ಪ್ರಗತಿಯಲ್ಲಿ ಉತ್ಸಾಹದಿಂದ ಕೊಡುಗೆ ನೀಡುತ್ತಿದೆ. ಇಂದಿನ ದಿನದಲ್ಲಿ, ದೇಶದ ಅತ್ಯುನ್ನತ ನಾಯಕತ್ವವೂ ಸಹ ಬುಡಕಟ್ಟು ಸಮುದಾಯದ ಮಗಳೊಬ್ಬರ ಕೈಯಲ್ಲಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಬಗ್ಗೆ ನಮಗೆಲ್ಲರಿಗೂ ಹೆಮ್ಮೆಯಿದೆ.
ಸ್ನೇಹಿತರೆ,
ಭಗವಾನ್ ಬಿರ್ಸಾ ಮುಂಡಾ ಅವರಿಂದ ಸ್ಫೂರ್ತಿ ಪಡೆದು, 'ವಿಕಸಿತ ಭಾರತ'ದ ಕನಸನ್ನು ನನಸಾಗಿಸಲು ನಮ್ಮ ಸಂಪೂರ್ಣ ಶಕ್ತಿ ವಿನಿಯೋಗಿಸಬೇಕಾದ ಸಮಯ ಇದಾಗಿದೆ. ಈ ಕರೆ ನೀಡುತ್ತಾ, ಭಗವಾನ್ ಬಿರ್ಸಾ ಮುಂಡಾ ಅವರಿಗೆ ನಮನ ಸಲ್ಲಿಸುತ್ತಾ, 'ಜನಜಾತೀಯ ಗೌರವ ದಿವಸ'ದ ಸಂದರ್ಭದಲ್ಲಿ ನಿಮ್ಮೆಲ್ಲರಿಗೂ ನನ್ನ ಹೃದಯಪೂರ್ವಕ ಶುಭಾಶಯಗಳನ್ನು ಕೋರುತ್ತೇನೆ. ಪ್ರತಿ ವರ್ಷ ನವೆಂಬರ್ 15ರ ದಿನಕ್ಕಾಗಿ ನಾವೆಲ್ಲರೂ ಉತ್ಸಾಹದಿಂದ ಕಾಯಬೇಕು ಎಂದು ನಾನು ಕೋರುತ್ತೇನೆ. ಭಗವಾನ್ ಬಿರ್ಸಾ ಮುಂಡಾ ಅವರ ಜನ್ಮದಿನವಾದ 'ಜನಜಾತೀಯ ಗೌರವ ದಿವಸ'ವು ಇಡೀ ರಾಷ್ಟ್ರದ ಹೆಮ್ಮೆ ಮತ್ತು ಆತ್ಮಗೌರವದ ಸಂಕೇತವಾಗಿದೆ. ಪ್ರತಿ ವರ್ಷ ನವೆಂಬರ್ 15ರಂದು ಹಿಂದಿಗಿಂತಲೂ ಹೆಚ್ಚಿನ ಶಕ್ತಿಯೊಂದಿಗೆ, ಹೆಚ್ಚಿನ ಉತ್ಸಾಹದೊಂದಿಗೆ ಮತ್ತು ಇನ್ನೂ ದೊಡ್ಡ ಪ್ರಮಾಣದಲ್ಲಿ ನಾವು ಈ ದಿನ ಆಚರಿಸುವುದನ್ನು ಮುಂದುವರಿಸಬೇಕು. 'ಜನಜಾತೀಯ ಗೌರವ ದಿವಸ'ದಂದು ನಾವು ಹೊಸ ಸಂಕಲ್ಪಗಳನ್ನು ಕೈಗೊಳ್ಳಬೇಕು, ನಿಗದಿತ ಸಮಯದೊಳಗೆ ಆ ಸಂಕಲ್ಪಗಳನ್ನು ಈಡೇರಿಸಲು ನಮ್ಮ ಸಂಪೂರ್ಣ ಶಕ್ತಿ ಸಮರ್ಪಿಸಬೇಕು. ಸ್ವಾತಂತ್ರ್ಯಾನಂತರದ ದಶಕಗಳಲ್ಲಿ ಸಾಧಿಸಲು ಸಾಧ್ಯವಾಗದಿದ್ದನ್ನು ನಾವು ಈಗ ಅಲ್ಪಾವಧಿಯಲ್ಲೇ ಸಾಧಿಸಬೇಕಾಗಿದೆ. ಮತ್ತೊಮ್ಮೆ, ನಾನು ಪರದೆಯತ್ತ ನೋಡಿದಾಗ, ಅನೇಕ ಕಡೆಗಳಲ್ಲಿ ಜನರು ಸೇರಿರುವುದನ್ನು ಕಾಣುತ್ತಿದ್ದೇನೆ. ಅವರೆಲ್ಲರಲ್ಲೂ ಎದ್ದು ಕಾಣುವ ಉತ್ಸಾಹ ಮತ್ತು ಸಂಭ್ರಮವನ್ನು ನಾನು ಗಮನಿಸಬಲ್ಲೆ. ಈ ದೃಶ್ಯವೇ 'ಜನಜಾತೀಯ ಗೌರವ ದಿವಸ'ದ ಹೆಮ್ಮೆ, ವೈಭವ ಮತ್ತು ಭವ್ಯತೆಯ ಸಂಕೇತವಾಗಿದೆ. ಇಂತಹ ಯಶಸ್ವಿ ಪ್ರಯತ್ನಕ್ಕಾಗಿ, ಬುಡಕಟ್ಟು ಸಮುದಾಯದ ನೀವೆಲ್ಲರೂ ಅಭಿನಂದನೆಗೆ ಅರ್ಹರು. ನಾನು ನಿಮ್ಮೆಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ನಿಮ್ಮೆಲ್ಲರಿಗೂ ನನ್ನ ಧನ್ಯವಾದಗಳು.
ಜೋಹಾರ್.
ಹಕ್ಕು ನಿರಾಕರಣೆ: ಪ್ರಧಾನಮಂತ್ರಿ ಅವರ ಭಾಷಣದ ಅಂದಾಜು ಕನ್ನಡ ಅನುವಾದ ಇದಾಗಿದೆ. ಅವರು ಮೂಲತಃ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ್ದಾರೆ.
*****