ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ನವೆಂಬರ್ 15 ರಂದು ಜನಜಾತೀಯ ಗೌರವ ದಿವಸ್ ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಪ್ರಧಾನಮಂತ್ರಿ


ಧರ್ತಿ ಆಬಾ ಭಗವಾನ್ ಬಿರ್ಸಾ ಮುಂಡಾ ಅವರ 151 ನೇ ಜನ್ಮಜಯಂತಿಯ ಅಂಗವಾಗಿ ನಡೆಯಲಿರುವ ಕಾರ್ಯಕ್ರಮ

ಸುಮಾರು ₹3,000 ಕೋಟಿ ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಪ್ರಧಾನಮಂತ್ರಿಯವರಿಂದ ಉದ್ಘಾಟನೆ ಮತ್ತು ಶಂಕುಸ್ಥಾಪನೆ

ಶಿಕ್ಷಣ, ಆರೋಗ್ಯ ರಕ್ಷಣೆ, ಜೀವನೋಪಾಯ, ಬುಡಕಟ್ಟು ಪರಂಪರೆಯ ಸಂರಕ್ಷಣೆ ಮತ್ತು ಸಮುದಾಯ ಮೂಲಸೌಕರ್ಯವನ್ನು ಬಲಪಡಿಸುವುದರ ಮೇಲೆ ಗಮನಹರಿಸಿ ಬುಡಕಟ್ಟು ಸಬಲೀಕರಣದ ಗುರಿ ಹೊಂದಿರುವ ಯೋಜನೆಗಳು

ಮಿಜೋರಾಂನಲ್ಲಿ ರೋಪುಯಿಲಿಯಾನಿ ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರರ ವಸ್ತುಸಂಗ್ರಹಾಲಯವನ್ನೂ ಉದ್ಘಾಟಿಸಲಿರುವ ಸನ್ಮಾನ್ಯ ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 14 NOV 2026 4:11PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2026 ರ ನವೆಂಬರ್ 15 ರಂದು ಬೆಳಿಗ್ಗೆ 11 ಗಂಟೆಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಮಹಾರಾಷ್ಟ್ರದ ಗಡ್ಚಿರೋಲಿಯಲ್ಲಿ ನಡೆಯಲಿರುವ ಜನಜಾತೀಯ ಗೌರವ ದಿವಸ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಧರ್ತಿ ಆಬಾ ಭಗವಾನ್ ಬಿರ್ಸಾ ಮುಂಡಾ ಅವರ 151 ನೇ ಜನ್ಮದಿನಾಚರಣೆಯ ಸಂದರ್ಭದಲ್ಲಿ ಅವರು ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.

ಕಾರ್ಯಕ್ರಮದ ಸಂದರ್ಭದಲ್ಲಿ, ಸನ್ಮಾನ್ಯ ಪ್ರಧಾನಮಂತ್ರಿಯವರು ಸುಮಾರು ₹3,000 ಕೋಟಿ ಮೌಲ್ಯದ 246 ಅಭಿವೃದ್ಧಿ ಯೋಜನೆಗಳಿಗೆ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಯೋಜನೆಗಳು ದೇಶಾದ್ಯಂತ ಬುಡಕಟ್ಟು ಸಮುದಾಯಗಳಿಗೆ ಶಿಕ್ಷಣ, ಆರೋಗ್ಯ ರಕ್ಷಣೆ, ಜೀವನೋಪಾಯ ಮತ್ತು ಸಮುದಾಯ ಮೂಲಸೌಕರ್ಯವನ್ನು ಬಲಪಡಿಸುವ ಗುರಿಯನ್ನು ಹೊಂದಿವೆ.

ಸನ್ಮಾನ್ಯ ಪ್ರಧಾನಮಂತ್ರಿಯವರು ಬುಡಕಟ್ಟು ವಿದ್ಯಾರ್ಥಿಗಳಿಗಾಗಿ 38 ಏಕಲವ್ಯ ಮಾದರಿ ವಸತಿ ಶಾಲೆಗಳು ಮತ್ತು ಪ್ರಧಾನಮಂತ್ರಿ ಜನಜಾತಿ ಆದಿವಾಸಿ ನ್ಯಾಯ ಮಹಾ ಅಭಿಯಾನದ ಅಡಿಯಲ್ಲಿ 100 ಬಹುಪಯೋಗಿ ಕೇಂದ್ರಗಳು ಸೇರಿದಂತೆ 173 ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ, ಇವು ಸೇವಾ ವಿತರಣೆ ಮತ್ತು ಸಮುದಾಯ ಚಟುವಟಿಕೆಗಳ ಕೇಂದ್ರಗಳಾಗಿ ಕಾರ್ಯನಿರ್ವಹಿಸಲಿವೆ. ಅವರು ಪಿಎಂ-ಜನ್‌ಮನ್ ಮತ್ತು ಧರ್ತಿ ಆಬಾ ಜನಜಾತೀಯ ಗ್ರಾಮ ಉತ್ಕರ್ಷ ಅಭಿಯಾನದ ಅಡಿಯಲ್ಲಿ ವಿವಿಧ ಇತರ ಯೋಜನೆಗಳನ್ನೂ ಉದ್ಘಾಟಿಸಲಿದ್ದಾರೆ.

ಉದ್ಘಾಟನೆಗೊಳ್ಳಲಿರುವ ಇತರ ಪ್ರಮುಖ ಯೋಜನೆಗಳಲ್ಲಿ ಬುಡಕಟ್ಟು ಸಂಸ್ಕೃತಿ ಮತ್ತು ಪರಂಪರೆಯನ್ನು ಸಂರಕ್ಷಿಸುವ ಗುರಿಯನ್ನು ಹೊಂದಿರುವ ಅರುಣಾಚಲ ಪ್ರದೇಶದ ಇಟಾನಗರದಲ್ಲಿರುವ ಬುಡಕಟ್ಟು ಸಂಶೋಧನಾ ಸಂಸ್ಥೆಯ ಕಟ್ಟಡ ಮತ್ತು ಮಿಜೋರಾಂನ ಐಜ್ವಾಲ್‌ನಲ್ಲಿರುವ ರೋಪುಯಿಲಿಯಾನಿ ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರರ ವಸ್ತುಸಂಗ್ರಹಾಲಯ ಸೇರಿವೆ. ಈ ವಸ್ತುಸಂಗ್ರಹಾಲಯವು ಮಿಜೋ ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರರ ಧೈರ್ಯ, ಶೌರ್ಯ ಮತ್ತು ತ್ಯಾಗಗಳನ್ನು ಸ್ಮರಿಸುವ ಜೊತೆಗೆ ಮಿಜೋ ಜನರ ಶ್ರೀಮಂತ ಸಾಂಸ್ಕೃತಿಕ ಸಂಪ್ರದಾಯಗಳು, ಐತಿಹಾಸಿಕ ಪರಂಪರೆ ಮತ್ತು ವಾರಸುದಾರಿಕೆಯನ್ನು ಪ್ರದರ್ಶಿಸುತ್ತದೆ. ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯನ್ನು ಧೈರ್ಯದಿಂದ ವಿರೋಧಿಸಿದ ಮತ್ತು ಬುಡಕಟ್ಟು ಪ್ರತಿರೋಧ ಹಾಗೂ ತ್ಯಾಗದ ಸಂಕೇತವಾಗಿ ಸ್ಮರಿಸಲ್ಪಡುವ ಹತ್ತೊಂಬತ್ತನೇ ಶತಮಾನದ ಮಿಜೋ ನಾಯಕಿ ರೋಪುಯಿಲಿಯಾನಿ ಅವರ ಹೆಸರನ್ನು ಇದಕ್ಕೆ ಇಡಲಾಗಿದೆ.

ಸನ್ಮಾನ್ಯ ಪ್ರಧಾನಮಂತ್ರಿಯವರು 19 ಹೊಸ ಏಕಲವ್ಯ ಮಾದರಿ ವಸತಿ ಶಾಲೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದು, ಬುಡಕಟ್ಟು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಬದ್ಧತೆಯನ್ನು ಮತ್ತಷ್ಟು ಬಲಪಡಿಸಲಿದ್ದಾರೆ. ಬುಡಕಟ್ಟು ಉತ್ಪಾದಕರಿಗೆ ಮಾರುಕಟ್ಟೆ ಪ್ರವೇಶವನ್ನು ಬಲಪಡಿಸಲು 12 ಬುಡಕಟ್ಟು ಬಹುಪಯೋಗಿ ಮಾರುಕಟ್ಟೆ ಕೇಂದ್ರಗಳಿಗೆ ಅವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇದರ ಜೊತೆಗೆ, ಪಿಎಂ-ಜನ್‌ಮನ್ ಮತ್ತು ಡಿಎಜೆಜಿಯುಎ ಅಡಿಯಲ್ಲಿ 42 ಇತರ ಯೋಜನೆಗಳಿಗೂ ಪ್ರಧಾನಮಂತ್ರಿಯವರು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಈ ಕಾರ್ಯಕ್ರಮವು, 2026 ರ ನವೆಂಬರ್ 1 ರಿಂದ 15 ರವರೆಗೆ ದೇಶಾದ್ಯಂತ ಆಚರಿಸಲಾಗುತ್ತಿರುವ 'ಜನಜಾತೀಯ ಗೌರವ ಪಖ್ವಾಡ'ದ ಸಮಾರೋಪವನ್ನು ಗುರುತಿಸಲಿದೆ. ಈ ಪಖ್ವಾಡದ ಸಮಯದಲ್ಲಿ, ಇಎಂಆರ್‌ಎಸ್ (EMRS) ವಿದ್ಯಾರ್ಥಿಗಳೊಂದಿಗೆ ಸನ್ಮಾನ್ಯ ರಾಷ್ಟ್ರಪತಿಗಳ ಸಂವಾದ, ರಾಷ್ಟ್ರೀಯ ಬುಡಕಟ್ಟು ಸಾಹಿತ್ಯೋತ್ಸವ, ಬುಡಕಟ್ಟು ವೈದ್ಯರಿಗೆ ತರಬೇತಿ ಕಾರ್ಯಕ್ರಮಗಳು, ವಿಶೇಷವಾಗಿ ದುರ್ಬಲ ಬುಡಕಟ್ಟು ಗುಂಪುಗಳಿಗೆ ಆರೋಗ್ಯ ಮತ್ತು ಪೌಷ್ಟಿಕಾಂಶ ಶಿಬಿರಗಳು ಹಾಗೂ ಧರ್ತಿ ಆಬಾ ಜನಭಾಗಿದಾರಿ ಅಭಿಯಾನದ ಅಡಿಯಲ್ಲಿ ಬುಡಕಟ್ಟು ಗ್ರಾಮಗಳಲ್ಲಿ ಸಮುದಾಯ ಸೇವಾ ಅಭಿಯಾನಗಳು ಸೇರಿದಂತೆ ಹಲವಾರು ರಾಷ್ಟ್ರೀಯ ಮತ್ತು ತಳಮಟ್ಟದ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

 

*****


(ಪ್ರಕಟಣೆ ಐ.ಡಿ.: 2336323) ವಿಸಿಟರ್ ಕೌಂಟರ್ : 20