ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಕರ್ನಾಟಕದ ಬೆಂಗಳೂರಿನಲ್ಲಿ ₹15,600 ಕೋಟಿಗೂ ಹೆಚ್ಚು ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಉದ್ಘಾಟನೆ, ರಾಷ್ಟ್ರಕ್ಕೆ ಸಮರ್ಪಣೆ, ಶಂಕುಸ್ಥಾಪನೆ ಮತ್ತು ಚಾಲನೆ ನೀಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ


ಯಾವುದೇ ರಾಷ್ಟ್ರದ ಅಭಿವೃದ್ಧಿ ಪಯಣದಲ್ಲಿ ಮೂಲಸೌಕರ್ಯವು ಪ್ರಮುಖ ಪಾತ್ರ ವಹಿಸುತ್ತದೆ; ಉತ್ತಮ ಸಂಪರ್ಕವು ಪ್ರಗತಿ, ಉದ್ಯೋಗ ಮತ್ತು ಉದ್ಯಮಕ್ಕೆ ಹೊಸ ಹಾದಿಗಳನ್ನು ಸೃಷ್ಟಿಸುತ್ತದೆ: ಪ್ರಧಾನಮಂತ್ರಿ

ಅಭಿವೃದ್ಧಿಯ ಅವಕಾಶಗಳು ಸಮಾಜದ ಪ್ರತಿಯೊಂದು ವರ್ಗವನ್ನು ತಲುಪಿದಾಗ, ಬಡತನದ ವಿರುದ್ಧದ ಹೋರಾಟವು ಮತ್ತಷ್ಟು ಶಕ್ತಿ ಪಡೆಯುತ್ತದೆ; ಇತ್ತೀಚಿನ ವರ್ಷಗಳಲ್ಲಿ ಸುಮಾರು 50 ಕೋಟಿ ನಾಗರಿಕರು ತೀವ್ರ ಬಡತನದಿಂದ ಹೊರಬಂದಿರುವುದು ಇದರ ನೇರ ಫಲಿತಾಂಶವಾಗಿದೆ: ಪ್ರಧಾನಮಂತ್ರಿ

ದೆಹಲಿ-ಎನ್‌ಸಿಆರ್ ಮತ್ತು ಮುಂಬೈ ಮಹಾನಗರ ಪ್ರದೇಶದ ನಂತರ, ಮೆಟ್ರೋ ಜಾಲವು ಶತಕ ಬಾರಿಸಿದ ದೇಶದ ಮೂರನೇ ನಗರವಾಗಿ ಬೆಂಗಳೂರು ಹೊರಹೊಮ್ಮಿದೆ: ಪ್ರಧಾನಮಂತ್ರಿ

ನಮ್ಮ ಮೆಟ್ರೋದ ಯಶಸ್ಸು ಕೇವಲ ಒಂದೇ ಯೋಜನೆಗೆ ಸೀಮಿತವಾಗಿಲ್ಲ; ಇದು ಸುಗಮ ಜೀವನ  ಮತ್ತು ಸುಗಮ ಪ್ರಯಾಣದ  ಕುರಿತು ದೇಶದ ಹೊಸ ದೃಷ್ಟಿಕೋನದ ಪ್ರಬಲ ಪ್ರತಿಫಲನವಾಗಿದೆ: ಪ್ರಧಾನಮಂತ್ರಿ

ಕೆಲವೇ ದಿನಗಳ ಹಿಂದೆ, ಕರ್ನಾಟಕವು ರಾಜ್ಯದ ಮೊಟ್ಟಮೊದಲ ವಂದೇ ಭಾರತ್ ಸ್ಲೀಪರ್ ರೈಲನ್ನು ಪಡೆಯಿತು; ಇಂದು ಕರ್ನಾಟಕದಿಂದ ಗೋವಾಕ್ಕೆ ಸಂಪರ್ಕ ಕಲ್ಪಿಸುವ ಮತ್ತೊಂದು ವಂದೇ ಭಾರತ್ ರೈಲನ್ನು ಸಮರ್ಪಿಸಲಾಗಿದೆ: ಪ್ರಧಾನಮಂತ್ರಿ

ಇಂದು ಭಾರತವು ಚಿಪ್‌ನಿಂದ ಹಡಗಿನವರೆಗೆ ಮತ್ತು ಎಐ (AI) ಹಾಗೂ ದತ್ತಾಂಶ ಕೇಂದ್ರಗಳಿಂದ ಕ್ವಾಂಟಮ್ ಕಂಪ್ಯೂಟಿಂಗ್‌ವರೆಗೆ ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ನಾಯಕತ್ವ ಸಾಧಿಸುವ ಗುರಿಯೊಂದಿಗೆ ಮುನ್ನಡೆಯುತ್ತಿದೆ: ಪ್ರಧಾನಮಂತ್ರಿ

ಪ್ರಕಟಣಾ ದಿನಾಂಕ: 13 NOV 2026 4:17PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಕರ್ನಾಟಕದ ಬೆಂಗಳೂರಿನಲ್ಲಿ ₹15,600 ಕೋಟಿಗೂ ಹೆಚ್ಚು ಮೌಲ್ಯದ, ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಉದ್ಘಾಟನೆ, ರಾಷ್ಟ್ರಕ್ಕೆ ಸಮರ್ಪಣೆ, ಶಂಕುಸ್ಥಾಪನೆ ಮತ್ತು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಕನ್ನಡದಲ್ಲಿ ತಮ್ಮ ಶುಭಾಶಯಗಳನ್ನು ತಿಳಿಸಿದರು ಮತ್ತು ನಗರದ ಅಧಿದೇವತೆ ಅಣ್ಣಮ್ಮ ತಾಯಿ ಹಾಗೂ ನಾಡಪ್ರಭು ಕೆಂಪೇಗೌಡ ಅವರಿಗೆ ಗೌರವಪೂರ್ವಕ ನಮನಗಳನ್ನು ಸಲ್ಲಿಸಿದರು. ಸಂಪರ್ಕ ಮತ್ತು ಇಂಧನ ಭದ್ರತೆಯನ್ನು ಒಳಗೊಂಡ ಯೋಜನೆಗಳ ಮೂಲಕ ಬೆಂಗಳೂರು ಮತ್ತು ಕರ್ನಾಟಕದ ಅಭಿವೃದ್ಧಿ ಪಯಣಕ್ಕೆ ಹೊಸ ವೇಗವನ್ನು ನೀಡುವ ದಿನ ಇದಾಗಿದೆ ಎಂದು ಅವರು ಉಲ್ಲೇಖಿಸಿದರು. "ಮೆಟ್ರೋ ಮತ್ತು ರೈಲಿಗೆ ಸಂಬಂಧಿಸಿದ ಯೋಜನೆಗಳಿಂದ ಹಿಡಿದು ಇಂಧನ ಭದ್ರತೆಯ ಕಾಮಗಾರಿಗಳವರೆಗೆ, ಈ ಎಲ್ಲಾ ಯೋಜನೆಗಳು ಕರ್ನಾಟಕದ ಮೂಲಸೌಕರ್ಯಕ್ಕೆ ಹೊಸ ಶಕ್ತಿಯನ್ನು ನೀಡಲಿವೆ," ಎಂದು ಶ್ರೀ ಮೋದಿ ಪ್ರತಿಪಾದಿಸಿದರು.

ಮೂಲಸೌಕರ್ಯ ಮತ್ತು ಸುಧಾರಿತ ಸಂಪರ್ಕವು ಸಮಾಜದ ಪ್ರತಿಯೊಂದು ವರ್ಗವನ್ನು ತಲುಪುವ ಪ್ರಗತಿ, ಉದ್ಯೋಗ ಮತ್ತು ಉದ್ಯಮಕ್ಕೆ ಹೊಸ ಹಾದಿಗಳನ್ನು ಸೃಷ್ಟಿಸುತ್ತದೆ ಹಾಗೂ ಬಡತನದ ವಿರುದ್ಧದ ಹೋರಾಟವನ್ನು ಬಲಪಡಿಸುತ್ತದೆ ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಇತ್ತೀಚಿನ ವರ್ಷಗಳಲ್ಲಿ ಸುಮಾರು 50 ಕೋಟಿ ನಾಗರಿಕರು ತೀವ್ರ ಬಡತನದಿಂದ ಹೊರಬಂದಿರುವುದೇ ಇದಕ್ಕೆ ಸಾಕ್ಷಿಯಾಗಿದೆ ಎಂದರು ಮತ್ತು ಹೊಸದಾಗಿ ಚಾಲನೆ ನೀಡಲಾದ ಯೋಜನೆಗಳಿಗಾಗಿ ಕರ್ನಾಟಕದ ಜನತೆಗೆ ಶುಭಾಶಯಗಳನ್ನು ಕೋರಿದರು. "ಇವು ವಿಕಸಿತ ಕರ್ನಾಟಕದ ಮೂಲಕ ವಿಕಸಿತ ಭಾರತ ನಿರ್ಮಾಣಕ್ಕೆ ಹೊಸ ವೇಗವನ್ನು ನೀಡಲಿವೆ, ಮತ್ತು ಅದೇ ಸಮಯದಲ್ಲಿ ಟೆಕ್ ಸಿಟಿಯಾಗಿ ಬೆಂಗಳೂರಿನ ಗುರುತನ್ನು ಮತ್ತಷ್ಟು ಬಲಪಡಿಸಲಿವೆ," ಎಂದು ಪ್ರಧಾನ ಮಂತ್ರಿ ಮೋದಿ ದೃಢಪಡಿಸಿದರು.

ಕೆಲವೇ ಹೊತ್ತಿನ ಮುಂಚೆ ಬೆಂಗಳೂರು ಮೆಟ್ರೋದ ಹೊಸ ಪಿಂಕ್ ಲೈನ್ ಅನ್ನು ಸಮರ್ಪಿಸಿರುವುದನ್ನು ಪ್ರಮುಖವಾಗಿ ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, ಈ ಮಾರ್ಗವು ಐಐಎಂ ಬೆಂಗಳೂರು, ಹಲವಾರು ಶಿಕ್ಷಣ ಸಂಸ್ಥೆಗಳು ಮತ್ತು ನಗರದಾದ್ಯಂತ ಇರುವ ಪ್ರಮುಖ ವ್ಯಾಪಾರ, ತಂತ್ರಜ್ಞಾನ ಹಾಗೂ ವಾಣಿಜ್ಯ ಕೇಂದ್ರಗಳಿಗೆ ಸಂಪರ್ಕವನ್ನು ಗಮನಾರ್ಹವಾಗಿ ಸುಧಾರಿಸಲಿದೆ ಎಂದು ಉಲ್ಲೇಖಿಸಿದರು. "ಬೆಂಗಳೂರಿನ ಲಕ್ಷಾಂತರ ಜನರಿಗೆ ಪ್ರಯಾಣದಲ್ಲಿ ಅನುಕೂಲವಾಗುವುದು ಮಾತ್ರವಲ್ಲದೆ, ಅವರ ಹಣ ಮತ್ತು ಸಮಯವೂ ಉಳಿತಾಯವಾಗಲಿದೆ," ಎಂದು ಶ್ರೀ ಮೋದಿ ಅಭಿಪ್ರಾಯಪಟ್ಟರು.

ಈ ಪ್ರದೇಶದೊಂದಿಗೆ ಆಳವಾದ ಬಾಂಧವ್ಯ ಹೊಂದಿದ್ದ ದಿವಂಗತ ಅನಂತ್ ಕುಮಾರ್ ಅವರ ಪುಣ್ಯತಿಥಿಯು ನಿನ್ನೆಯಾಗಿತ್ತು ಎಂಬುದನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ಅಗಲಿದ ನಾಯಕನಿಗೆ ಹೃತ್ಪೂರ್ವಕ ಶ್ರದ್ಧಾಂಜಲಿ ಸಲ್ಲಿಸಿದರು. "ಇಂದು ಈ ಮೆಟ್ರೋ ಮಾರ್ಗವನ್ನು ನೋಡಿ ಅವರ ಆತ್ಮಕ್ಕೂ ಸಂತೋಷವಾಗಿರಬೇಕು," ಎಂದು ಪ್ರಧಾನ ಮಂತ್ರಿ ಮೋದಿ ತಿಳಿಸಿದರು.

ಬೆಂಗಳೂರನ್ನು ದೇಶದ ಐಟಿ ರಫ್ತಿನ ಮೂರನೇ ಒಂದು ಭಾಗಕ್ಕಿಂತ ಹೆಚ್ಚಿನ ಕೊಡುಗೆ ನೀಡುವ ಹಾಗೂ ಆವಿಷ್ಕಾರ ಮತ್ತು ಆರ್ಥಿಕ ಬೆಳವಣಿಗೆಯ ಪ್ರಮುಖ ಎಂಜಿನ್ ಆಗಿ ಕಾರ್ಯನಿರ್ವಹಿಸುವ 'ಭಾರತದ ಸಿಲಿಕಾನ್ ವ್ಯಾಲಿ' ಎಂದು ಬಣ್ಣಿಸಿದ ಪ್ರಧಾನಮಂತ್ರಿಯವರು, ಕೇಂದ್ರ ಸರ್ಕಾರವು ಬೆಂಗಳೂರು ಪ್ರದೇಶದ ಕ್ಷಿಪ್ರ ಅಭಿವೃದ್ಧಿಗೆ ಆದ್ಯತೆ ನೀಡಿದೆ ಎಂದರು. 2014 ರಲ್ಲಿ ಕೇವಲ 17 ಕಿಲೋಮೀಟರ್‌ಗಳಷ್ಟಿದ್ದ ನಮ್ಮ ಮೆಟ್ರೋವನ್ನು ಇಂದು 100 ಕಿಲೋಮೀಟರ್‌ಗಳಿಗಿಂತ ಹೆಚ್ಚಿನ ದೂರಕ್ಕೆ ವಿಸ್ತರಿಸಲಾಗಿದ್ದು, ದೆಹಲಿ-ಎನ್‌ಸಿಆರ್ ಮತ್ತು ಮುಂಬೈ ಮಹಾನಗರ ಪ್ರದೇಶದ ನಂತರ 100 ಕಿಲೋಮೀಟರ್ ಮೆಟ್ರೋ ಮೈಲಿಗಲ್ಲನ್ನು ದಾಟಿದ ಭಾರತದ ಮೂರನೇ ನಗರವಾಗಿ ಬೆಂಗಳೂರು ಹೊರಹೊಮ್ಮಿದೆ. "ನಮ್ಮ ಮೆಟ್ರೋದ ಈ ಯಶಸ್ಸು ಸುಗಮ ಜೀವನ (Ease of Living) ಮತ್ತು ಸುಗಮ ಪ್ರಯಾಣದ (Ease of Travel) ಕುರಿತು ದೇಶದ ಹೊಸ ಆಲೋಚನೆಯ ಫಲಿತಾಂಶವಾಗಿದೆ, ಹಾಗೂ ಮಧ್ಯಮ ವರ್ಗದ ಕುಟುಂಬಗಳ ಜೀವನವನ್ನು ಉತ್ತಮಗೊಳಿಸುವ ದೇಶದ ಬದ್ಧತೆಯ ಫಲವಾಗಿದೆ," ಎಂದು ಶ್ರೀ ಮೋದಿ ಪ್ರತಿಪಾದಿಸಿದರು.

ಭಾರತೀಯ ರೈಲ್ವೆಯು ವಸಾಹತುಶಾಹಿ ಯುಗದ ಮನಸ್ಥಿತಿಯನ್ನು ತೊರೆದು ಹೊಸ ಪರಂಪರೆಯನ್ನು ನಿರ್ಮಿಸುತ್ತಿದೆ ಎಂದ ಪ್ರಧಾನಮಂತ್ರಿಯವರು, ವಂದೇ ಭಾರತ್ ರೈಲುಗಳು ಮತ್ತು ಚಾಮರಾಜನಗರ, ಚಿಕ್ಕಮಗಳೂರು, ಸಕಲೇಶಪುರ ಹಾಗೂ ಸುಬ್ರಹ್ಮಣ್ಯ ರೋಡ್ ಜೊತೆಗೆ ಕರ್ನಾಟಕದ 60 ಕ್ಕೂ ಹೆಚ್ಚು ನಿಲ್ದಾಣಗಳನ್ನು ಒಳಗೊಂಡ ಅಮೃತ ಭಾರತ್ ನಿಲ್ದಾಣಗಳ ಮೂಲಕ ನಿಲ್ದಾಣಗಳು, ಎಂಜಿನ್‌ಗಳು ಮತ್ತು ಬೋಗಿಗಳು ಭಾರತದ ವಿಶಿಷ್ಟ ಗುರುತನ್ನು ಹೊಂದಿವೆ ಎಂದರು. ಹಿರಿಯ ನಾಗರಿಕರು ಮತ್ತು ವಿಶೇಷ ಚೇತನರಿಗೆ ವಿಶೇಷ ಸೌಲಭ್ಯಗಳನ್ನು ಒದಗಿಸುವ ಮೂಲಕ ಈ ನಿಲ್ದಾಣಗಳು ಆಧುನಿಕತೆಯನ್ನು ಸಂವೇದನಾಶೀಲತೆಯೊಂದಿಗೆ ಹೇಗೆ ಬೆಸೆಯುತ್ತಿವೆ ಎಂಬುದನ್ನು ಅವರು ಒತ್ತಿ ಹೇಳಿದರು. "ಈ ಹಿಂದೆ ವಿಮಾನ ನಿಲ್ದಾಣಗಳಲ್ಲಿ ಕಂಡುಬರುತ್ತಿದ್ದ ಸೌಲಭ್ಯಗಳನ್ನು ಈಗ ರೈಲು ನಿಲ್ದಾಣಗಳಲ್ಲಿ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಒದಗಿಸಲು ಪ್ರಯತ್ನಿಸಲಾಗುತ್ತಿದೆ," ಎಂದು ಪ್ರಧಾನ ಮಂತ್ರಿ ಮೋದಿ ಉಲ್ಲೇಖಿಸಿದರು.

ಕಳೆದ 10 ರಿಂದ 12 ವರ್ಷಗಳಲ್ಲಿ ಭಾರತದ ರೈಲ್ವೆ ಬಜೆಟ್ ಹಲವು ಪಟ್ಟು ಹೆಚ್ಚಾಗಿದ್ದು, ಕರ್ನಾಟಕದ ಅನುದಾನದಲ್ಲಿ ಒಂಬತ್ತು ಪಟ್ಟು ಹೆಚ್ಚಳವಾಗಿದೆ ಎಂದು ತಿಳಿಸಿದ ಪ್ರಧಾನಮಂತ್ರಿಯವರು, ರಾಜ್ಯವು ತನ್ನ ಮೊದಲ ವಂದೇ ಭಾರತ್ ಸ್ಲೀಪರ್ ರೈಲನ್ನು ಪಡೆದ ಕೆಲವೇ ದಿನಗಳಲ್ಲಿ ಇಂದು ನಾಲ್ಕು ಅಮೃತ ನಿಲ್ದಾಣಗಳು, ಎರಡು ದ್ವಿಗುಣಗೊಳಿಸುವಿಕೆ ಮತ್ತು ವಿದ್ಯುದ್ದೀಕರಣ ಯೋಜನೆಗಳು ಹಾಗೂ ಕರ್ನಾಟಕವನ್ನು ಗೋವಾದೊಂದಿಗೆ ಬೆಸೆಯುವ ಹೊಸ ವಂದೇ ಭಾರತ್ ರೈಲನ್ನು ಪಡೆದುಕೊಂಡಿದೆ ಎಂದು ಉಲ್ಲೇಖಿಸಿದರು. "ಈ ರೈಲಿನ ಮೂಲಕ, ಮಂಗಳೂರು ಸೇರಿದಂತೆ ಕರ್ನಾಟಕದ ಇಡೀ ಕರಾವಳಿ ಮಾರ್ಗದ ಸಹಪ್ರಯಾಣಿಕರಿಗೆ ಸೆಮಿ-ಹೈ-ಸ್ಪೀಡ್ ರೈಲಿನ ಹೊಸ ಅನುಭವ ಸಿಗಲಿದೆ," ಎಂದು ಶ್ರೀ ಮೋದಿ ಅಭಿಪ್ರಾಯಪಟ್ಟರು.

ಇರಾನ್ ಮತ್ತು ಗಲ್ಫ್ ಪ್ರದೇಶದ ಸುತ್ತಲೂ ನಡೆಯುತ್ತಿರುವ ಯುದ್ಧವು ಇಂಧನ ಭದ್ರತೆಯ ಪ್ರಮುಖ ಮಹತ್ವವನ್ನು ತೋರಿಸಿಕೊಟ್ಟಿದೆ ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಕಳೆದ ದಶಕದಲ್ಲಿ ತೆಗೆದುಕೊಂಡ ಕ್ರಮಗಳಿಂದಾಗಿ ಭಾರತವು ಈ ಸವಾಲಿನ ಅವಧಿಯನ್ನು ದೃಢವಾಗಿ ಎದುರಿಸಿತು ಎಂದು ವಿವರಿಸಿದರು. ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿ ಉತ್ಪಾದನೆ, ಕಚ್ಚಾ ತೈಲ ಸಂಗ್ರಹಣೆ, ಸೌರ, ಜಲ ಮತ್ತು ಪವನ ಶಕ್ತಿ, ಬಹುತೇಕ ಸಂಪೂರ್ಣ ರೈಲು ವಿದ್ಯುದ್ದೀಕರಣ ಮತ್ತು ಮೆಟ್ರೋ ಜಾಲಗಳನ್ನು ವಿಸ್ತರಿಸಲಾಗಿದ್ದು, ಕರ್ನಾಟಕದ ಮೂರು ಹೊಸ ಯೋಜನೆಗಳನ್ನು ಅವರು ವಿವರಿಸಿದರು: 80,000 ಮೆಟ್ರಿಕ್ ಟನ್ ಶೇಖರಣಾ ಸಾಮರ್ಥ್ಯವನ್ನು ಸೇರಿಸುವ ಮಂಗಳೂರು ಎಲ್‌ಪಿಜಿ ಯೋಜನೆ, ಪೆಟ್ರೋಲ್, ಡೀಸೆಲ್ ಮತ್ತು ವಿಮಾನ ಇಂಧನ ಪೂರೈಕೆಯನ್ನು ಸುಗಮಗೊಳಿಸುವ ದೇವನಗೊಂದಿ ಮಾರ್ಕೆಟಿಂಗ್ ಟರ್ಮಿನಲ್, ಮತ್ತು ಪ್ರತಿದಿನ 13 ಟನ್ ಜೈವಿಕ ಅನಿಲವನ್ನು ಉತ್ಪಾದಿಸುವ ಬೆಂಗಳೂರು ಸಿಬಿಜಿ (CBG) ಸ್ಥಾವರ. "ಇದು ತ್ಯಾಜ್ಯ ನಿರ್ವಹಣೆಯನ್ನು ಸುಧಾರಿಸುತ್ತದೆ ಮತ್ತು ನೈಸರ್ಗಿಕ ಅನಿಲ ಆಮದಿನ ಮೇಲೆ ಖರ್ಚು ಮಾಡುವ ಹಣವೂ ಉಳಿತಾಯವಾಗಲಿದೆ," ಎಂದು ಪ್ರಧಾನ ಮಂತ್ರಿ ಮೋದಿ ಅವರು ಉಲ್ಲೇಖಿಸಿದರು.

ಚಿಪ್‌ನಿಂದ ಹಡಗಿನವರೆಗೆ ಮತ್ತು ಎಐ (AI) ಹಾಗೂ ದತ್ತಾಂಶ ಕೇಂದ್ರಗಳಿಂದ ಕ್ವಾಂಟಮ್ ಕಂಪ್ಯೂಟಿಂಗ್‌ವರೆಗೆ ಹೊಸ ತಂತ್ರಜ್ಞಾನಗಳಲ್ಲಿ ಭಾರತವು ಜಾಗತಿಕ ನಾಯಕತ್ವಕ್ಕಾಗಿ ಶ್ರಮಿಸುತ್ತಿರುವುದರಿಂದ ವಿಶ್ವಾಸಾರ್ಹ ವಿದ್ಯುತ್ ಉತ್ಪಾದನೆಯು ಅತ್ಯಗತ್ಯವಾಗಿದೆ ಎಂದು ಪ್ರಮುಖವಾಗಿ ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, ಶುದ್ಧ ಇಂಧನ ಗುರಿಗಳನ್ನು ಸಾಧಿಸಲು ದೇಶವು ತನ್ನ ಪರಮಾಣು ವಿದ್ಯುತ್ ಸ್ಥಾವರಗಳನ್ನು ವಿಸ್ತರಿಸುತ್ತಿದೆ ಎಂದು ಉಲ್ಲೇಖಿಸಿದರು. "ಇಂದು ಭಾರತದ ನವೀಕರಿಸಬಹುದಾದ ಇಂಧನ ಸಾಮರ್ಥ್ಯವು 300 ಗಿಗಾವ್ಯಾಟ್‌ಗಳನ್ನು ಮೀರಿದೆ," ಎಂದು ಶ್ರೀ ಮೋದಿ ಅಭಿಪ್ರಾಯಪಟ್ಟರು.

ಕೇಂದ್ರದ ಯೋಜನೆಗಳು ಭಾರತೀಯ ನಾಗರಿಕರನ್ನು ವಿದ್ಯುತ್ ಗ್ರಾಹಕರಿಂದ ವಿದ್ಯುತ್ ಉತ್ಪಾದಕರನ್ನಾಗಿ ಪರಿವರ್ತಿಸುತ್ತಿವೆ ಎಂದು ತಿಳಿಸಿದ ಪ್ರಧಾನಮಂತ್ರಿಯವರು, ಪಿಎಂ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆಯಡಿ ಪ್ರತಿ ಕುಟುಂಬಕ್ಕೆ ಸುಮಾರು 80,000 ರೂಪಾಯಿಗಳ ಕೇಂದ್ರದ ನೆರವಿನೊಂದಿಗೆ ಕರ್ನಾಟಕದ 40,000 ಕ್ಕೂ ಹೆಚ್ಚು ಕುಟುಂಬಗಳು ಸೇರಿದಂತೆ ದೇಶಾದ್ಯಂತ 60 ಲಕ್ಷಕ್ಕೂ ಹೆಚ್ಚು ಮನೆಗಳು ಮೇಲ್ಛಾವಣಿ ಸೌರ ಸ್ಥಾವರಗಳನ್ನು ಅಳವಡಿಸಿಕೊಂಡಿವೆ ಎಂದು ಉಲ್ಲೇಖಿಸಿದರು. ಅಲ್ಲದೆ, ವಿದ್ಯುತ್ ವೆಚ್ಚವನ್ನು ಕಡಿತಗೊಳಿಸಲು ಹಾಗೂ ಹೊಸ ಆದಾಯ ಮತ್ತು ಉದ್ಯೋಗಗಳನ್ನು ಸೃಷ್ಟಿಸಲು ಪಿಎಂ ಕುಸುಮ್ ಯೋಜನೆಯಡಿ ಕರ್ನಾಟಕದ ರೈತರಿಗೆ 8 ಲಕ್ಷಕ್ಕೂ ಹೆಚ್ಚು ಸೌರ ಪಂಪ್‌ಗಳ ಮೂಲಕ ನೀರಾವರಿ ವ್ಯವಸ್ಥೆ ಮಾಡಲಾಗುತ್ತಿದೆ. "ಅಂದರೆ, ಕರ್ನಾಟಕದ ಅನ್ನದಾತರು ಈಗ ಊರ್ಜಾದಾತರಾಗಿಯೂ ಬದಲಾಗುತ್ತಿದ್ದಾರೆ," ಎಂದು ಪ್ರಧಾನಮಂತ್ರಿ ಮೋದಿ ತಿಳಿಸಿದರು.

2014 ರ ನಂತರದ 'ಸಬ್ ಕಾ ಸಾಥ್, ಸಬ್ ಕಾ ವಿಕಾಸ್' ಸಂಕಲ್ಪದ ಅಡಿಯಲ್ಲಿ ಉದ್ದೇಶಪೂರ್ವಕ ರಾಷ್ಟ್ರೀಯ ಅನುಷ್ಠಾನ, ಸಾರ್ವಜನಿಕರ ಪಾಲ್ಗೊಳ್ಳುವಿಕೆ ಮತ್ತು ತೆರಿಗೆದಾರರ ಹಣದ ಸಮರ್ಪಕ ಬಳಕೆಯು ಮಧ್ಯಮ ವರ್ಗವನ್ನು ವಿಸ್ತರಿಸಿದೆ ಮತ್ತು ಗೃಹೋಪಯೋಗಿ ಉಪಕರಣಗಳು, ದ್ವಿಚಕ್ರ ವಾಹನಗಳು, ಗುಣಮಟ್ಟದ ಶಿಕ್ಷಣ, ಪೌಷ್ಟಿಕಾಂಶ, ಆರೋಗ್ಯ ರಕ್ಷಣೆ ಹಾಗೂ ಪ್ರವಾಸೋದ್ಯಮದ ಅನುಭವಗಳನ್ನು ಬಯಸುವ ಹೊಸ 'ಮಹತ್ವಾಕಾಂಕ್ಷೆಯ ವರ್ಗ'ವನ್ನು (Aspirational Class) ಸೃಷ್ಟಿಸಿದೆ ಎಂಬುದನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಈ ಹೆಚ್ಚುತ್ತಿರುವ ಆಕಾಂಕ್ಷೆಗಳು ಆಟೋಮೊಬೈಲ್, ಎಲೆಕ್ಟ್ರಾನಿಕ್ಸ್, ಪ್ರವಾಸೋದ್ಯಮ ಮತ್ತು ಸೇವಾ ವಲಯಗಳಲ್ಲಿ ಹೊಸ ಕೈಗಾರಿಕಾ ಮತ್ತು ಉದ್ಯೋಗ ಬೆಳವಣಿಗೆಯನ್ನು ಮುನ್ನಡೆಸುತ್ತಿವೆ, ಆ ಮೂಲಕ ನವ ಮಧ್ಯಮ ವರ್ಗವನ್ನು ಭಾರತದ ಆರ್ಥಿಕ ಬೆಳವಣಿಗೆಯ ಪ್ರಮುಖ ಎಂಜಿನ್ ಆಗಿ ಮಾಡಿವೆ ಎಂದು ತಿಳಿಸಿದರು. "ಕರ್ನಾಟಕದಲ್ಲಿ ಮತ್ತು ಬೆಂಗಳೂರಿನಲ್ಲೂ ಹೆಚ್ಚಿನ ಸಂಖ್ಯೆಯಲ್ಲಿರುವ ಈ ನವ ಮಧ್ಯಮ ವರ್ಗದ ಹಿತಾಸಕ್ತಿಯು ಕೇಂದ್ರ ಸರ್ಕಾರದ ಆದ್ಯತೆಗಳಲ್ಲಿ ಒಂದಾಗಿದೆ," ಎಂದು ಶ್ರೀ ಮೋದಿ ದೃಢಪಡಿಸಿದರು.

ಮಧ್ಯಮ ವರ್ಗದ ಉಳಿತಾಯವನ್ನು ಹೆಚ್ಚಿಸಲು ಮತ್ತು ಅವರ ಕೈಯಲ್ಲಿ ಹೆಚ್ಚು ಖರ್ಚು ಮಾಡಬಹುದಾದ ಆದಾಯವನ್ನು ಇರಿಸಲು ಕೇಂದ್ರ ಸರ್ಕಾರವು ನಿರಂತರವಾಗಿ ಶ್ರಮಿಸುತ್ತಿದೆ ಎಂದು ಹೇಳಿದ ಪ್ರಧಾನಮಂತ್ರಿಯವರು, 12 ಲಕ್ಷ ರೂಪಾಯಿಗಳವರೆಗಿನ ವಾರ್ಷಿಕ ಆದಾಯಕ್ಕೆ ಆದಾಯ ತೆರಿಗೆಯಿಂದ ವಿನಾಯಿತಿ ನೀಡಿರುವುದು, ಹಿರಿಯ ನಾಗರಿಕರು ಮತ್ತು ಬಾಡಿಗೆ ಆದಾಯ ಗಳಿಸುವವರಿಗೆ ಅನುಕೂಲವಾಗುವಂತೆ ಟಿಡಿಎಸ್ ನಿಯಮಗಳನ್ನು ಪರಿಷ್ಕರಿಸಿರುವುದು ಹಾಗೂ ಮುಂದಿನ ಪೀಳಿಗೆಯ ಜಿಎಸ್‌ಟಿ (GST) ಸುಧಾರಣೆಗಳ ಮೂಲಕ ದೈನಂದಿನ ಬಳಕೆಯ ವಸ್ತುಗಳ ಬೆಲೆಯನ್ನು ತಗ್ಗಿಸಿರುವಂತಹ ಕ್ರಮಗಳನ್ನು ಪ್ರಮುಖವಾಗಿ ಪ್ರಸ್ತಾಪಿಸಿದರು. "ವೈಯಕ್ತಿಕ ಆರೋಗ್ಯ ಮತ್ತು ಜೀವ ವಿಮೆಯ ಮೇಲಿನ ಜಿಎಸ್‌ಟಿಯನ್ನು ರದ್ದುಗೊಳಿಸುವ ಮೂಲಕ ನಾವು ವಿಮೆಯನ್ನು ಹೆಚ್ಚು ಕೈಗೆಟುಕುವಂತೆ ಮಾಡಿದ್ದೇವೆ," ಎಂದು ಪ್ರಧಾನ ಮಂತ್ರಿ ಮೋದಿ ಉಲ್ಲೇಖಿಸಿದರು.

ಕರ್ನಾಟಕದಲ್ಲಿ ಇಂದಿನ ಯೋಜನೆಗಳು ರಾಷ್ಟ್ರದ ಅಭಿವೃದ್ಧಿಯ ಪಥವನ್ನು ಮತ್ತಷ್ಟು ವೇಗಗೊಳಿಸಲಿವೆ ಎಂದು ಹೇಳುವ ಮೂಲಕ ಮತ್ತು ಜನತೆಗೆ ತಮ್ಮ ಶುಭಾಶಯಗಳನ್ನು ಕೋರುವ ಮೂಲಕ ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದ ಪ್ರಧಾನಮಂತ್ರಿಯವರು, ಮಧ್ಯಮ ವರ್ಗದ ಕುಟುಂಬಗಳನ್ನು ಸಶಕ್ತಗೊಳಿಸುವ ಸರ್ಕಾರದ ಬದ್ಧತೆಯನ್ನು ಒತ್ತಿ ಹೇಳಿದರು. "ಮಧ್ಯಮ ವರ್ಗದವರ ಉಳಿತಾಯ ಹೆಚ್ಚಾಗಬೇಕು, ಅವರ ಕೊಳ್ಳುವ ಶಕ್ತಿ ಬಲಗೊಳ್ಳಬೇಕು ಮತ್ತು ತಮ್ಮ ಕುಟುಂಬದ ಕನಸುಗಳನ್ನು ನನಸಾಗಿಸುವ ಜೊತೆಗೆ ದೇಶದ ಆರ್ಥಿಕ ಪ್ರಗತಿಯಲ್ಲೂ ಅವರು ಪಾಲುದಾರರಾಗಬೇಕು ಎಂಬುದೇ ನಮ್ಮ ಪ್ರಯತ್ನವಾಗಿದೆ," ಎಂದು ಶ್ರೀ ಮೋದಿ ದೃಢಪಡಿಸಿದರು.

 

*****


(ಪ್ರಕಟಣೆ ಐ.ಡಿ.: 2335880) ವಿಸಿಟರ್ ಕೌಂಟರ್ : 47
ಪ್ರಕಟಣೆಯನ್ನು ಇದರಲ್ಲಿ ಓದಿ: Malayalam , English , Urdu , हिन्दी , Gujarati , Tamil