ಪ್ರಕಟಣಾ ದಿನಾಂಕ:
12 NOV 2026 10:09PM by PIB Bengaluru
ದೀಪಾವಳಿಯ ಈ ಪವಿತ್ರ ಹಬ್ಬದ ಸಂದರ್ಭದಲ್ಲಿ ನಿಮಗೆಲ್ಲರಿಗೂ ನನ್ನ ಹೃತ್ಪೂರ್ವಕ ಶುಭಾಶಯಗಳು. ಹಾಗೆಯೇ, 'ಛಠಿ ಮೈಯಾ'(ಛಠ್ ಪೂಜೆ) ಹಬ್ಬವೂ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ, ನಾನು ಶುಭಾಶಯಗಳನ್ನು ಕೋರುತ್ತೇನೆ. ನಿಮ್ಮೆಲ್ಲರಿಗೂ ನನ್ನ ನಮಸ್ಕಾರಗಳು.
'ಇಂಡಿಯಾ ಟುಡೇ ಗ್ರೂಪ್'ನ ಅಧ್ಯಕ್ಷರು ಮತ್ತು ಪ್ರಧಾನ ಸಂಪಾದಕರಾದ ಶ್ರೀ ಅರುಣ್ ಪುರಿ ಜಿ, ಕೃಷಿ ವಿಜ್ಞಾನಿಗಳೆ, ಕೃಷಿ ಉದ್ಯಮಿಗಳೆ, ರೈತ ಮಿತ್ರರೆ, ದೇಶದ ವಿವಿಧ ಭಾಗಗಳಿಂದ ಈ ಕಾರ್ಯಕ್ರಮಕ್ಕೆ ಆಗಮಿಸಿರುವ ಎಲ್ಲಾ ಗಣ್ಯರೆ, ಮಹಿಳೆಯರೆ ಹಾಗೂ ಮಹನೀಯರೆ - ನಿಮ್ಮೆಲ್ಲರಿಗೂ ನನ್ನ ನಮಸ್ಕಾರಗಳು.
ಮೊದಲನೆಯದಾಗಿ, ಈ ನವೀನ ಉಪಕ್ರಮಕ್ಕಾಗಿ ನಾನು 'ಇಂಡಿಯಾ ಟುಡೇ ಗ್ರೂಪ್' ಅನ್ನು ಮನಃಪೂರ್ವಕವಾಗಿ ಅಭಿನಂದಿಸುತ್ತೇನೆ. ದೇಶವು ಸ್ವಚ್ಛತಾ ಅಭಿಯಾನ ಆರಂಭಿಸಿದಾಗ, 'ಇಂಡಿಯಾ ಟುಡೇ ಗ್ರೂಪ್' ಅದರಲ್ಲಿ ಅತ್ಯಂತ ಉತ್ಸಾಹದಿಂದ ಪಾಲ್ಗೊಂಡಿತ್ತು. ಈಗ ನೀವು ಈ 'ಕಿಸಾನ್ ಮೇಳ'ವನ್ನು ಆಯೋಜಿಸಿದ್ದೀರಿ. ಇದಕ್ಕಾಗಿ 2 ಪೂರ್ಣ ದಿನಗಳನ್ನು ಮೀಸಲಿಟ್ಟಿದ್ದೀರಿ. ಇದೊಂದು ಅತ್ಯಂತ ಸಕಾರಾತ್ಮಕ ಆರಂಭವಾಗಿದೆ. ನಿಮ್ಮೆಲ್ಲರಿಗೂ ನನ್ನ ಅಭಿನಂದನೆಗಳು. ಹಾಗೆಯೇ, ಅರುಣ್ ಜಿ ಅವರು ಅತ್ಯುತ್ತಮವಾಗಿ ಹಿಂದಿ ಭಾಷೆಯಲ್ಲಿ ಮಾತನಾಡಿದರು, ಅದಕ್ಕಾಗಿ ಅವರಿಗೆ ವಿಶೇಷ ಅಭಿನಂದನೆಗಳನ್ನು ಸಲ್ಲಿಸುತ್ತೇನೆ!
ಸ್ನೇಹಿತರೆ,
ಇಡೀ ದೇಶವು ಹಬ್ಬದ ವಾತಾವರಣದಲ್ಲಿರುವ ಈ ಸಮಯದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ. 2-3 ದಿನಗಳ ಹಿಂದಷ್ಟೇ ನಾವು ದೀಪಾವಳಿ ಹಬ್ಬ ಆಚರಿಸಿದೆವು, ಈಗ 'ಛಠ್ ಮಹಾಪರ್ವ'ದ ಸಂಭ್ರಮ ಎಲ್ಲೆಡೆ ಮನೆಮಾಡಿದೆ. ಛಠ್ ಹಬ್ಬವು ಕೃಷಿ ಜೀವನದೊಂದಿಗೆ ಆಳವಾದ ನಂಟು ಹೊಂದಿದೆ. ವಾಸ್ತವವಾಗಿ, ನಮ್ಮ ದೇಶದ ಬಹುತೇಕ ಹಬ್ಬಗಳು ಕೃಷಿ ಮತ್ತು ಕೃಷಿ ಚಟುವಟಿಕೆಗಳೊಂದಿಗೆ ಬೆಸೆದುಕೊಂಡಿವೆ. ಬಿಹು, ಪೊಂಗಲ್, ಓಣಂ, ಬೈಸಾಖಿ, ಸರಹುಲ್, ಪೋಲಾ - ಹೀಗೆ ಅನೇಕ ಹಬ್ಬಗಳು ಕೃಷಿಯೊಂದಿಗೆ ಸಂಬಂಧ ಹೊಂದಿವೆ. ಬೇರೆ ರೀತಿಯಲ್ಲಿ ಹೇಳುವುದಾದರೆ, ಕೃಷಿ ಎನ್ನುವುದು ನಮ್ಮ ಸಂಸ್ಕೃತಿ, ನಮ್ಮ ಪರಂಪರೆ ಮತ್ತು ನಮ್ಮ ಸಾಮಾಜಿಕ ಜೀವನದ ಅಡಿಪಾಯವಾಗಿದೆ.
ಸ್ನೇಹಿತರೆ,
ಕೆಂಪುಕೋಟೆಯಿಂದ ನಾನು 'ವಿಕಸಿತ ಭಾರತ'ಕ್ಕಾಗಿ ಶಕ್ತಿ ಸಾಮರ್ಥ್ಯದ 7 ಆಧಾರಸ್ತಂಭಗಳ (7 ಪ್ರಮುಖ ಕ್ಷೇತ್ರಗಳು) ಬಗ್ಗೆ ಮಾತನಾಡಿದ್ದೆ. ಅವುಗಳಲ್ಲಿ ಕೃಷಿಯು ಒಂದು ಪ್ರಮುಖ ಆಧಾರಸ್ತಂಭವಾಗಿದೆ. ಕೃಷಿಯನ್ನು ಅಭಿವೃದ್ಧಿಪಡಿಸದೆ, ಕೃಷಿ ಪದ್ಧತಿಗಳನ್ನು ಹೆಚ್ಚು ಆಧುನಿಕ ಮತ್ತು ಸ್ಮಾರ್ಟ್ ಆಗಿಸದೆ, ರೈತರನ್ನು ಸಬಲೀಕರಣಗೊಳಿಸದೆ 'ವಿಕಸಿತ ಭಾರತ' ಕಟ್ಟುವುದು ಅಸಾಧ್ಯ. ಇದೇ ಕಾರಣಕ್ಕಾಗಿ, ಇಂತಹ ರೈತ ಸಮ್ಮೇಳನಗಳ ಮಹತ್ವ ಇನ್ನಷ್ಟು ಹೆಚ್ಚಾಗುತ್ತದೆ.
ಸ್ನೇಹಿತರೆ,
ಕೃಷಿ ಮತ್ತು ದೇಶದ ಪ್ರಗತಿಯ ನಡುವಿನ ಸಂಬಂಧವನ್ನು ನೀವು 2 ಪ್ರಮುಖ ಸಂಗತಿಗಳ ಮೂಲಕ ಅರ್ಥ ಮಾಡಿಕೊಳ್ಳಬಹುದು. ಇತ್ತೀಚೆಗೆ, ಬಡತನ ಕುರಿತು ವಿಶ್ವ ಬ್ಯಾಂಕ್ನ ಅಧ್ಯಯನ ವರದಿ ಬಿಡುಗಡೆಯಾಗಿದೆ, ಇದರ ಬಗ್ಗೆ ಜಗತ್ತಿನಾದ್ಯಂತ ಚರ್ಚೆ ನಡೆಯುತ್ತಿದೆ. ಕೇವಲ 12-13 ವರ್ಷಗಳ ಅವಧಿಯಲ್ಲಿ, ಭಾರತದಲ್ಲಿ 50 ಕೋಟಿ ಬಡ ಜನರು ಬಡತನವನ್ನು ಜಯಿಸಿದ್ದಾರೆ ಎಂದು ಅದು ವರದಿ ಮಾಡಿದೆ. ಹಳ್ಳಿಗಳಲ್ಲಿ ಬಡತನವು ಅತ್ಯಂತ ವೇಗವಾಗಿ ಕಡಿಮೆಯಾಗಿದೆ ಎಂದೂ ಅದು ಹೇಳಿದೆ. ಇದರರ್ಥ, ಹೆಚ್ಚಿನ ಸಂಖ್ಯೆಯ ಸಣ್ಣ ರೈತರು ಮತ್ತು ಕೃಷಿ ಕಾರ್ಮಿಕರು ಬಡತನದಿಂದ ಹೊರಬಂದಿದ್ದಾರೆ. ಈಗ ಒಂದು ಆಸಕ್ತಿದಾಯಕ ಕಾಕತಾಳೀಯವನ್ನು ಗಮನಿಸಿ. ಕಳೆದ ದಶಕದಲ್ಲಿ, ಭಾರತದ ಕೃಷಿ ಬೆಳವಣಿಗೆ ದರವು ಶೇಕಡ 4ಕ್ಕಿಂತ ಹೆಚ್ಚಿದೆ. ಸ್ವಾತಂತ್ರ್ಯ ಬಂದ ನಂತರದ ದಶಕಗಳಲ್ಲಿ, ದೇಶದ ಕೃಷಿ ವಲಯವು ಸರಾಸರಿ ಶೇಕಡ 4ಕ್ಕಿಂತ ಹೆಚ್ಚಿನ ಬೆಳವಣಿಗೆ ದರ ಸಾಧಿಸಿರುವುದು ಇದೇ ಮೊದಲ ಬಾರಿಯಾಗಿದೆ. ಇದೇ ಅವಧಿಯಲ್ಲಿ, ಹಳ್ಳಿಗಳಲ್ಲಿನ ಅನೇಕ ಬಡ ಜನರು ಬಡತನವನ್ನು ಜಯಿಸಿದ್ದಾರೆ. ಆದರೆ ದುರದೃಷ್ಟವಶಾತ್, ಸುದ್ದಿ ಪ್ರಸಾರದಲ್ಲಿನ ವಿವಿಧ ದೃಷ್ಟಿಕೋನಗಳು ಮತ್ತು ಅಜೆಂಡಾಗಳಲ್ಲಿ ಸಿಲುಕಿಕೊಂಡಿರುವವರಿಗೆ, ದೇಶದ ಈ ಸಾಧನೆಯು ಗಮನಕ್ಕೆ ಬರುತ್ತಿಲ್ಲ.
ಸ್ನೇಹಿತರೆ,
ಕೃಷಿಯಲ್ಲಿ ತೊಡಗಿರುವವರು ಮತ್ತು ಕೃಷಿ ತಜ್ಞರಿಗೆ ಕೃಷಿ ನೀತಿಗಳು ಮತ್ತು ಪದ್ಧತಿಗಳಲ್ಲಿ ನಿರಂತರ ಬದಲಾವಣೆ ಎಷ್ಟು ಅಗತ್ಯ ಎಂಬುದು ತಿಳಿದಿದೆ. ದಶಕಗಳ ಕಾಲ ಆಡಳಿತ ನಡೆಸಿದವರು, ದೇಶದ ರೈತರು ಕೇವಲ ಆಹಾರಧಾನ್ಯದ ಉಗ್ರಾಣಗಳನ್ನು ತುಂಬಿಸಿದ್ದಾರೆ ಎಂಬ ಕಾರಣಕ್ಕಷ್ಟೇ ತೃಪ್ತಿ ಹೊಂದಿದ್ದರು. ಆದರೆ ಆ ನಂತರ ರೈತರಿಗೆ ಸಿಕ್ಕಿದ್ದೇನು? ಕೇವಲ ಧಾನ್ಯದ ಉಗ್ರಾಣಗಳನ್ನು ತುಂಬಿಸುವುದು ಮಾತ್ರ ಸಾಕಾಗುವುದಿಲ್ಲ. ಕಾಲ ಕಳೆದಂತೆ ಜಗತ್ತು ಬದಲಾಯಿತು, ಮಾರುಕಟ್ಟೆಗಳು ಬದಲಾದವು, ಜನರ ಅಗತ್ಯಗಳು ಬದಲಾದವು, ಆಹಾರ ಪದ್ಧತಿಗಳು ಬದಲಾದವು, ಹವಾಮಾನ ಬದಲಾಯಿತು ಮತ್ತು ತಂತ್ರಜ್ಞಾನವೂ ಬದಲಾಯಿತು. ಈ ಬದಲಾವಣೆಗಳಿಗೆ ಅನುಗುಣವಾಗಿ, ನಮ್ಮ ರೈತರನ್ನು ಹೊಸ ರೀತಿಯಲ್ಲಿ ಸಬಲೀಕರಣಗೊಳಿಸುವ ಅಗತ್ಯವಿತ್ತು. ಆದರೆ ಹಿಂದೆ, ಈ ವಿಷಯದ ಕಡೆಗೆ ಗಮನವನ್ನೇ ಹರಿಸಿರಲಿಲ್ಲ.
ಸ್ನೇಹಿತರೆ,
ಕಳೆದ ದಶಕದಲ್ಲಿ, ಈ ಬದಲಾವಣೆಯ ವೇಗಕ್ಕೆ ತಕ್ಕಂತೆ ದೇಶವು ಕ್ರಮಗಳನ್ನು ಕೈಗೊಂಡಿತು, ಅದರ ಫಲಿತಾಂಶಗಳು ನಮ್ಮೆಲ್ಲರ ಮುಂದಿವೆ. ಇಂದು ಭಾರತವು ಪ್ರತಿವರ್ಷ 4 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಕೃಷಿ ಉತ್ಪನ್ನಗಳನ್ನು ರಫ್ತು ಮಾಡುತ್ತಿದೆ, ಈ ಹಣವು ನಮ್ಮ ರೈತರ ಆದಾಯ ಹೆಚ್ಚಿಸುತ್ತಿದೆ. ಇಂದು ಹಾಲು ಉತ್ಪಾದನೆಯಲ್ಲಿ ಭಾರತವು ಜಗತ್ತಿನಲ್ಲೇ ಮೊದಲ ಸ್ಥಾನದಲ್ಲಿದೆ. ಬೇಳೆಕಾಳುಗಳ ಉತ್ಪಾದನೆಯಲ್ಲೂ ಭಾರತ ಮೊದಲ ಸ್ಥಾನದಲ್ಲಿದೆ. ಸೆಣಬು ಉತ್ಪಾದನೆಯಲ್ಲಿ ಭಾರತ ಅಗ್ರಸ್ಥಾನದಲ್ಲಿದೆ. ಅಕ್ಕಿ(ಭತ್ತ) ಉತ್ಪಾದನೆಯಲ್ಲೂ ಭಾರತ ಮೊದಲ ಸ್ಥಾನ ಪಡೆದುಕೊಂಡಿದೆ. ಗೋಧಿ ಉತ್ಪಾದನೆಯಲ್ಲಿ ಭಾರತ ಜಗತ್ತಿನಲ್ಲಿ 2ನೇ ಸ್ಥಾನದಲ್ಲಿದೆ. ಹತ್ತಿ, ಹಣ್ಣುಗಳು ಮತ್ತು ತರಕಾರಿಗಳ ಉತ್ಪಾದನೆಯಲ್ಲೂ ಭಾರತ 2ನೇ ಸ್ಥಾನದಲ್ಲಿದೆ. ಮೀನು ಉತ್ಪಾದನೆಯಲ್ಲಿ ಭಾರತವು 2ನೇ ಸ್ಥಾನದಲ್ಲಿದೆ. ಸಿರಿಧಾನ್ಯಗಳ ಉತ್ಪಾದನೆಯಲ್ಲಿ ಜಗತ್ತಿನಲ್ಲೇ ಭಾರತ ಅತಿ ದೊಡ್ಡ ಉತ್ಪಾದಕ ದೇಶವಾಗಿದೆ. ಇವು ಕೇವಲ ಅಂಕಿಅಂಶಗಳಲ್ಲ, ಭಾರತದ ರೈತರ ಸಾಮರ್ಥ್ಯವು ಎಷ್ಟು ವೃದ್ಧಿಸಿದೆ ಎಂಬುದನ್ನು ಇವು ತೋರಿಸುತ್ತಿವೆ.
ಸ್ನೇಹಿತರೆ,
ಭಾರತದ ರೈತರ ಸಮೃದ್ಧಿಗಾಗಿ ಮತ್ತೊಂದು ವಿಷಯವೂ ಅಗತ್ಯವಾಗಿದೆ. ರೈತರು ಕೇವಲ ಗೋಧಿ, ಭತ್ತ ಮತ್ತು ಕಬ್ಬಿನಂತಹ ಸಾಂಪ್ರದಾಯಿಕ ಬೆಳೆಗಳ ಮೇಲೆಯೇ ಅವಲಂಬಿತರಾಗಿರಬಾರದು. ನಾನು ಮತ್ತೆ ಹೇಳುತ್ತೇನೆ, ರೈತ ಬಾಂಧವರು ಕೇವಲ ಗೋಧಿ, ಭತ್ತ ಮತ್ತು ಕಬ್ಬಿನ ಮೇಲೆ ಮಾತ್ರ ಅವಲಂಬಿತರಾಗಿರಬಾರದು. ಆದ್ದರಿಂದ, ಸರ್ಕಾರವು ಇತರೆ ಬೆಳೆಗಳಿಗೆ ಹಾಗೂ ಕೃಷಿಗೆ ಸಂಬಂಧಿಸಿದ ಇತರೆ ಚಟುವಟಿಕೆಗಳಿಗೆ ಒತ್ತು ನೀಡುತ್ತಿದೆ. 'ಇಂಡಿಯಾ ಟುಡೇ ಗ್ರೂಪ್'ಗೆ ಒಂದು ವಿಷಯ ನೆನಪಿಸಲು ಬಯಸುತ್ತೇನೆ. 'ಕ್ರಾಂತಿ' ಎಂಬ ಪದವು 'ಇಂಡಿಯಾ ಟುಡೇ ಗ್ರೂಪ್'ಗೆ ವಿಶೇಷವಾಗಿ ಇಷ್ಟವಾದ ಪದವಾಗಿದೆ. ಹಾಗಾಗಿ, ಈಗ ನಾನು ಕೆಲವು ಕ್ರಾಂತಿಗಳ ಬಗ್ಗೆ ಮಾತನಾಡಲಿದ್ದೇನೆ.
ಸ್ನೇಹಿತರೆ,
ಒಂದು ಕಾಲವಿತ್ತು, ಆಗ 'ಹಸಿರು ಕ್ರಾಂತಿ'ಯ ಮೂಲಕ ದೇಶವು ಆಹಾರ ಧಾನ್ಯ ಉತ್ಪಾದನೆಯಲ್ಲಿ ಸ್ವಾವಲಂಬನೆಯತ್ತ ಐತಿಹಾಸಿಕ ಹೆಜ್ಜೆ ಇಟ್ಟಿತ್ತು. ತದನಂತರ, 'ಶ್ವೇತ ಕ್ರಾಂತಿ'ಯು ಭಾರತವನ್ನು ವಿಶ್ವದ ಅತಿದೊಡ್ಡ ಹಾಲು ಉತ್ಪಾದಕ ರಾಷ್ಟ್ರವನ್ನಾಗಿ ಮಾಡಿತು. ಈ ಪಯಣವು ಈಗ ಎಷ್ಟು ವೇಗವಾಗಿ ಮತ್ತು ಗಮನಾರ್ಹವಾಗಿ ಮುಂದುವರಿಯುತ್ತಿದೆ ಎಂಬುದನ್ನು ತೋರಿಸುವ ಕೆಲವು ಅಂಕಿಅಂಶಗಳನ್ನು ಇಂದು ನಾನು ನಿಮ್ಮ ಮುಂದೆ ಇಡಲಿದ್ದೇನೆ. ಕಳೆದ ದಶಕದಲ್ಲಿ, ಭಾರತದ ಹಾಲು ಉತ್ಪಾದನೆಯು ಸುಮಾರು ಶೇಕಡ 70ರಷ್ಟು ಹೆಚ್ಚಾಗಿದೆ. ಮೊಟ್ಟೆ ಉತ್ಪಾದನೆಯು ಕೂಡ ಸುಮಾರು ಶೇಕಡ 90ರಷ್ಟು ಏರಿಕೆಯಾಗಿದೆ. ಇನ್ನು 'ನೀಲಿ ಕ್ರಾಂತಿ'ಯ ವಿಷಯಕ್ಕೆ ಬಂದರೆ, ಕಳೆದ 10 ವರ್ಷಗಳಲ್ಲಿ ಭಾರತದ ಮೀನು ಉತ್ಪಾದನೆ 2 ಪಟ್ಟು ಹೆಚ್ಚಾಗಿದೆ. 'ಸಿಹಿ ಕ್ರಾಂತಿ'ಯ ಮೂಲಕ ಜೇನುಸಾಕಣೆ ಕ್ಷೇತ್ರದಲ್ಲಿ ಹೊಸ ಅವಕಾಶಗಳು ಸೃಷ್ಟಿಯಾಗಿವೆ. ಜೇನುತುಪ್ಪ ಉತ್ಪಾದನೆಯು ಸುಮಾರು 80 ಸಾವಿರ ಟನ್ಗಳಿಂದ 1 ಲಕ್ಷದ 50 ಸಾವಿರ ಟನ್ಗಳಿಗೆ ಏರಿಕೆಯಾಗಿದೆ. ತೋಟಗಾರಿಕಾ ವಲಯದಲ್ಲೂ, ಭಾರತದ ಉತ್ಪಾದನೆಯು 280 ದಶಲಕ್ಷ ಟನ್ಗಳಿಂದ 350 ದಶಲಕ್ಷ ಟನ್ಗಳಿಗಿಂತಲೂ ಹೆಚ್ಚಾಗಿದೆ.
ಸ್ನೇಹಿತರೆ,
ನಾವು ಈ ಎಲ್ಲಾ ಕ್ರಾಂತಿಗಳನ್ನು ಒಂದು ವಿಶಾಲ ದೃಷ್ಟಿಕೋನದೊಂದಿಗೆ ಜೋಡಿಸಿದಾಗ, ದೇಶದ ರೈತರಿಗೆ ಆದಾಯದ ಅನೇಕ ಮೂಲಗಳು ಸೃಷ್ಟಿಯಾಗುತ್ತವೆ. ಕೃಷಿಯ ಭವಿಷ್ಯಕ್ಕೆ ಇದು ಅತ್ಯಗತ್ಯವಾಗಿದೆ. ಇನ್ನೊಂದು ಉದಾಹರಣೆ ನೀಡುತ್ತೇನೆ; ಅದುವೇ 'ಸೌರಶಕ್ತಿ ಕ್ರಾಂತಿ'. ಈ ಕ್ರಾಂತಿಯು ಅನ್ನದಾತನನ್ನು 'ಶಕ್ತಿ ದಾತ'(ಇಂಧನ ಪೂರೈಕೆದಾರ)ನಾಗಿ ಪರಿವರ್ತಿಸಿದೆ. 'ಪ್ರಧಾನ ಮಂತ್ರಿ ಕುಸುಮ್' ಯೋಜನೆಯಡಿ, ಈಗಾಗಲೇ ಸುಮಾರು 12 ಲಕ್ಷ ಸೌರ ಪಂಪ್ಗಳನ್ನು ವಿತರಿಸಲಾಗಿದೆ. ಇದರಿಂದ ರೈತರ ವಿದ್ಯುತ್ ಬಿಲ್ಗಳ ಹೊರೆ ಕಡಿಮೆಯಾಗುತ್ತಿದೆ, ತಮ್ಮ ಜಮೀನುಗಳಲ್ಲಿ ಸೌರಶಕ್ತಿ ಘಟಕಗಳನ್ನು ಅಳವಡಿಸಿಕೊಳ್ಳುವ ಮೂಲಕ ರೈತರು ಆದಾಯ ಗಳಿಸಲು ಆರಂಭಿಸಿದ್ದಾರೆ. ಕೇವಲ ಉತ್ಪಾದನೆಯಷ್ಟೇ ಅಲ್ಲದೆ, ನಾವು ಉತ್ಪಾದಕತೆ ಮತ್ತು ರೈತರ ಲಾಭದ ಕಡೆಗೂ ಗಮನ ಹರಿಸಿದ್ದೇವೆ.
ಸ್ನೇಹಿತರೆ,
ಇತ್ತೀಚೆಗಷ್ಟೇ ನಾನು ಸರ್ಕಾರಿ ಮುಖ್ಯಸ್ಥನಾಗಿ(ಆಡಳಿತದ ಉನ್ನತ ಹುದ್ದೆಯಲ್ಲಿ) 25 ವರ್ಷಗಳನ್ನು ಪೂರೈಸಿದೆ. ನಾನು ಗುಜರಾತ್ನ ಮುಖ್ಯಮಂತ್ರಿಯಾಗಿದ್ದಾಗಲೂ, ಕೃಷಿ ಆಧುನೀಕರಿಸಲು ನಿರಂತರವಾಗಿ ಶ್ರಮಿಸುತ್ತಿದ್ದೆ. ಆ ಸಮಯದಲ್ಲಿ ನಾನು ಬೃಹತ್ ಕೃಷಿ ಉತ್ಸವಗಳನ್ನು ಆರಂಭಿಸಿದ್ದೆ. ನನಗೆ ನೆನಪಿದೆ, ಮೇ ಮತ್ತು ಜೂನ್ ತಿಂಗಳಲ್ಲಿ, 40-45 ಡಿಗ್ರಿ ಸೆಲ್ಸಿಯಸ್ ತಾಪಮಾನವಿದ್ದಾಗಲೂ, ನೂರಾರು ಕೃಷಿ ವಿಜ್ಞಾನಿಗಳು, ಕೃಷಿ ತಜ್ಞರು ಮತ್ತು ಪ್ರಗತಿಪರ ರೈತರು ಒಟ್ಟಿಗೆ ಸೇರುತ್ತಿದ್ದರು. ನಾವು 'ಕಿಸಾನ್ ರಥ'ಗಳನ್ನು ಸಿದ್ಧಪಡಿಸಿಕೊಂಡು ಅವುಗಳಲ್ಲಿ ಸಂಚರಿಸುತ್ತಿದ್ದೆವು. ಹಳ್ಳಿಗಳಿಗೆ ಮತ್ತು ಹೊಲಗಳಿಗೆ ಹೋಗಿ, ರೈತರ ಜಮೀನುಗಳಿಗೆ ಭೇಟಿ ನೀಡಿ, ಅವರೊಂದಿಗೆ ನೇರವಾಗಿ ಸಂವಾದ ನಡೆಸುತ್ತಿದ್ದೆವು. ಆ ಪ್ರದೇಶದಲ್ಲಿ ಯಾವ ರೀತಿಯ ಮಣ್ಣು ಇತ್ತು, ನೀರಿನ ಲಭ್ಯತೆ ಎಷ್ಟಿತ್ತು, ಅಲ್ಲಿ ಯಾವ ಬೆಳೆಗಳು ಚೆನ್ನಾಗಿ ಬೆಳೆಯಬಲ್ಲವು ಮತ್ತು ಯಾವ ರೀತಿಯ ಕೃಷಿ ಪದ್ಧತಿಯ ಅಗತ್ಯವಿತ್ತು - ಇಂತಹ ಪ್ರತಿಯೊಂದು ವಿಷಯದ ಬಗ್ಗೆಯೂ ರೈತರೊಂದಿಗೆ ನೇರವಾಗಿ ಚರ್ಚಿಸಲಾಗುತ್ತಿತ್ತು. ವಿಜ್ಞಾನಿಗಳ ಪ್ರಯೋಗಾಲಯಗಳಲ್ಲಿರುವ ಜ್ಞಾನವು ನೇರವಾಗಿ ರೈತರ ಜಮೀನುಗಳನ್ನು ತಲುಪಬೇಕು ಎಂಬುದು ನಮ್ಮ ಪ್ರಯತ್ನವಾಗಿತ್ತು. ಸರಳವಾಗಿ ಹೇಳುವುದಾದರೆ, ನಾವು 'ಪ್ರಯೋಗಾಲಯದಿಂದ ಜಮೀನಿನೆಡೆಗೆ' ಎಂಬ ಪರಿಕಲ್ಪನೆಯೊಂದಿಗೆ ಮುಂದುವರಿದೆವು, ಗುಜರಾತ್ನ ರೈತರು ಇದರಿಂದ ಅಪಾರ ಪ್ರಯೋಜನ ಪಡೆದರು.
ಸ್ನೇಹಿತರೆ,
ಗುಜರಾತ್ನಲ್ಲಿದ್ದ ದಿನಗಳ ನನ್ನ ಅನುಭವವು, ಕೇಂದ್ರ ಸರ್ಕಾರಕ್ಕೆ ಬಂದ ನಂತರ ನನಗೆ ಅತ್ಯಂತ ಉಪಯುಕ್ತವಾಗಿದೆ. 2014ರಲ್ಲಿ ದೇಶದಲ್ಲಿ ಕೇವಲ ಕೆಲವು 100 ಮಣ್ಣು ಪರೀಕ್ಷಾ ಪ್ರಯೋಗಾಲಯಗಳಿದ್ದವು. ಇಂದು ಅವುಗಳ ಸಂಖ್ಯೆ 8,400ಕ್ಕೂ ಹೆಚ್ಚಾಗಿದೆ. ವೈದ್ಯಕೀಯ ವಿಜ್ಞಾನದಲ್ಲಿ ರೋಗ ನಿರ್ಣಯ ಪ್ರಯೋಗಾಲಯಗಳು ಹೇಗೆ ವಿಸ್ತರಿಸುತ್ತಿದ್ದವೋ, ಅದೇ ರೀತಿ ಇಂದು ಮಣ್ಣು ಪರೀಕ್ಷಾ ಪ್ರಯೋಗಾಲಯಗಳೂ ವಿಸ್ತರಿಸುತ್ತಿವೆ. ಇಂದು ದೇಶಾದ್ಯಂತ 750ಕ್ಕೂ ಹೆಚ್ಚು 'ಕೃಷಿ ವಿಜ್ಞಾನ ಕೇಂದ್ರ'ಗಳಿವೆ. ನಾವು ಪ್ರಾಣಿಗಳನ್ನು ರೋಗಗಳಿಂದ ರಕ್ಷಿಸುವುದಕ್ಕೂ ಆದ್ಯತೆ ನೀಡುತ್ತಿದ್ದೇವೆ. ಜಾನುವಾರುಗಳನ್ನು 'ಕಾಲುಬಾಯಿ ರೋಗ'ದಿಂದ ರಕ್ಷಿಸಲು 8 ಕೋಟಿಗೂ ಹೆಚ್ಚು ರೈತರ ಜಾನುವಾರುಗಳಿಗೆ ಉಚಿತ ಲಸಿಕೆಗಳನ್ನು ನೀಡಲಾಗಿದೆ. ಕೋವಿಡ್ ಸಮಯದಲ್ಲಿ ನಾವು ಉಚಿತ ಲಸಿಕೆಗಳನ್ನು ಒದಗಿಸಿದ್ದೆವು, ಅದು ಎಲ್ಲರಿಗೂ ನೆನಪಿರಬಹುದು. ಆದರೆ ಇದೀಗ ಮೋದಿ ಆಡಳಿತದಲ್ಲಿ ಇಲ್ಲಿ ಪ್ರಾಣಿಗಳಿಗೂ ಉಚಿತ ಲಸಿಕೆಗಳನ್ನು ನೀಡಲಾಗುತ್ತಿದೆ.
ಸ್ನೇಹಿತರೆ,
ಹಳೆಯ ಆಲೋಚನಾ ಧೋರಣೆಗಳನ್ನು ಹೊಂದಿರುವ ಕೆಲವರು, ನಮ್ಮ ಹಳ್ಳಿಗಳಲ್ಲಿ ಬೃಹತ್ ಪ್ರಮಾಣದ ತಂತ್ರಜ್ಞಾನದ ಬಳಕೆ ಸಾಧ್ಯವಿಲ್ಲ ಎಂದು ನಂಬುತ್ತಾರೆ. ಆದರೆ 'ನಮೋ ಡ್ರೋನ್ ದೀದಿ'ಗಳು ಇಂತಹ ಜನರ ಅಭಿಪ್ರಾಯ ತಪ್ಪೆಂದು ಸಾಬೀತುಪಡಿಸಿದ್ದಾರೆ. ಒಮ್ಮೆ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಎಲ್ಲಾ 'ಡ್ರೋನ್ ದೀದಿ'ಗಳೊಂದಿಗೆ ಸಂವಾದ ನಡೆಸುತ್ತಿದ್ದಾಗ, ಜಾರ್ಖಂಡ್ನ ಹಳ್ಳಿಯೊಂದರ ಮಹಿಳೆಯೊಬ್ಬರು ನನಗೆ ಹೀಗೆ ಹೇಳಿದರು... "ಈಗ ನನ್ನ ಸ್ಥಾನಮಾನವೇ ಬದಲಾಗಿದೆ." ನಾನು "ಏಕೆ?" ಎಂದು ಕೇಳಿದೆ. ಅದಕ್ಕೆ ಅವರು, "ಇಡೀ ಊರಿನವರು ನನ್ನನ್ನು 'ಪೈಲಟ್' ಎಂದು ಕರೆಯುತ್ತಾರೆ, ನನ್ನ ಮೈದುನಂದಿರು ಕೂಡ ನನ್ನನ್ನು 'ಪೈಲಟ್ ಭಾಭಿ' ಎಂದು ಕರೆಯುತ್ತಾರೆ" ಎಂದು ಉತ್ತರಿಸಿದರು. ಯೋಚಿಸಿ ನೋಡಿ, ಇದರಿಂದ ಅವರ ಆತ್ಮಗೌರವ ಎಷ್ಟು ಹೆಚ್ಚಾಗಿದೆ! ಪ್ರಸ್ತುತ, 'ನಮೋ ಡ್ರೋನ್ ದೀದಿ'ಗಳು ರಸಗೊಬ್ಬರ ಮತ್ತು ಕೀಟನಾಶಕಗಳನ್ನು ಸಿಂಪಡಿಸಲು ಡ್ರೋನ್ಗಳನ್ನು ಬಳಸುತ್ತಿದ್ದಾರೆ. ಈಗ ಇವುಗಳ ಬಳಕೆಯ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸಲಾಗುತ್ತಿದೆ.
ಸ್ನೇಹಿತರೆ,
ಇಂದಿನ ಭಾರತವು ಕೃಷಿ ಕ್ಷೇತ್ರದಲ್ಲಿ ಎಂಜಿನಿಯರಿಂಗ್ನ ಪಾತ್ರವನ್ನು ವಿಸ್ತರಿಸುತ್ತಿದೆ. ನಮ್ಮ ಕೃಷಿ ವಿಜ್ಞಾನಿಗಳು, ಎಂಜಿನಿಯರ್ಗಳು ಮತ್ತು ಯುವ ಜನರು ಒಟ್ಟಾಗಿ ಸೇರಿ ಕೃಷಿ ವೆಚ್ಚ ಕಡಿಮೆ ಮಾಡುವಂತಹ ಉಪಕರಣಗಳು ಮತ್ತು ಯಂತ್ರಗಳನ್ನು ಅಭಿವೃದ್ಧಿಪಡಿಸುತ್ತಿದ್ದಾರೆ. ಕೆಲವು ಕಡೆಗಳಲ್ಲಿ, ಬಿತ್ತನೆ ಮತ್ತು ಕೊಯ್ಲು ಪ್ರಕ್ರಿಯೆಗಳನ್ನು ಸುಲಭಗೊಳಿಸುವ ಯಂತ್ರಗಳನ್ನು ತಯಾರಿಸಲಾಗುತ್ತಿದೆ. ಇಲ್ಲಿ ಉಪಸ್ಥಿತರಿರುವ ಕೈಗಾರಿಕಾ ವಲಯದ ಪ್ರತಿನಿಧಿಗಳಿಗೆ, ರೈತರಿಗೆ ಬೇಕಾದ ಉಪಕರಣಗಳನ್ನು ತಯಾರಿಸುವವರಿಗೆ ಹಾಗೂ ನಮ್ಮ ಸ್ಟಾರ್ಟಪ್ ಸಂಸ್ಥಾಪಕರಿಗೆ ನಾನು ವಿಶೇಷವಾಗಿ ಮನವಿ ಮಾಡುತ್ತೇನೆ. ಇನ್ನು ಮುಂದೆ ನೀವು ತಯಾರಿಸುವ ಯಾವುದೇ ಉಪಕರಣವು ಸೌರಶಕ್ತಿಯಿಂದ ಚಲಿಸುವಂತಿರಲಿ. ಏಕೆಂದರೆ, ನಾವು ಪ್ರತಿ ಕೃಷಿ ಭೂಮಿಗೂ ಸೌರಶಕ್ತಿ ತಲುಪಿಸುತ್ತಿದ್ದೇವೆ. ಇಡೀ ಜಗತ್ತು ಈಗ ಎಲೆಕ್ಟ್ರಿಕ್ ವಾಹನಗಳತ್ತ ಹೇಗೆ ಮುಖ ಮಾಡಿದೆಯೋ, ಅದೇ ರೀತಿ ಕೃಷಿಗೆ ಬಳಸುವ ಪ್ರತಿಯೊಂದು ಉಪಕರಣವನ್ನೂ ಸೌರಶಕ್ತಿ ಚಾಲಿತವನ್ನಾಗಿ ಮಾಡಬೇಕೆಂಬುದು ನನ್ನ ಆಶಯ. ಈ ನಿಟ್ಟಿನಲ್ಲಿ ನಾನು ಕೂಡ ಗಂಭೀರ ಪ್ರಯತ್ನಗಳನ್ನು ಮಾಡುತ್ತಿದ್ದೇನೆ. ಎಲ್ಲಾ ಎಂಎಸ್ಎಂಇಗಳು ಮತ್ತು ಸಣ್ಣ ಕೈಗಾರಿಕೆಗಳು ಈ ವಿಷಯದತ್ತ ಗಮನ ಹರಿಸಬೇಕೆಂದು ನಾನು ಕೋರುತ್ತೇನೆ. ಇದು ಕೃಷಿ ಕ್ಷೇತ್ರದಲ್ಲಿ ಒಂದು ದೊಡ್ಡ ಕ್ರಾಂತಿಗೆ ನಾಂದಿ ಹಾಡಲಿದೆ. ಅಷ್ಟೇ ಅಲ್ಲ, ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಮತ್ತು ಸೆನ್ಸಾರ್ಗಳನ್ನು ಒಳಗೊಂಡ ಉಪಕರಣಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಇವು ರೈತರಿಗೆ ನಿಖರವಾದ ಮಾಹಿತಿ ಒದಗಿಸಬಲ್ಲವು, ಅತ್ಯಂತ ಸಣ್ಣ ರೈತರಿಗೂ ಕೈಗೆಟುಕುವ ದರದಲ್ಲಿ ಲಭ್ಯವಿರುತ್ತವೆ. ಮೊಬೈಲ್ ಫೋನ್ ಮೂಲಕ ಮಣ್ಣಿನ ಪರೀಕ್ಷೆ ನಡೆಸುವ ವ್ಯವಸ್ಥೆಗಳನ್ನು ಕೂಡ ರೂಪಿಸಲಾಗುತ್ತಿದೆ. ನೀವು ಕೇವಲ ಸ್ವಲ್ಪ ಮಣ್ಣನ್ನು ಮೊಬೈಲ್ ಆಧಾರಿತ ಸಾಧನದ ಮೇಲೆ ಇರಿಸಿದರೆ ಸಾಕು, ನಿಮ್ಮ ಮಣ್ಣು ಯಾವ ಬೆಳೆಗೆ ಸೂಕ್ತವಾಗಿದೆ, ಅದಕ್ಕೆ ಎಷ್ಟು ಮತ್ತು ಯಾವ ರೀತಿಯ ರಸಗೊಬ್ಬರ ಬೇಕು ಎಂಬ ಸಂಪೂರ್ಣ ವರದಿಯನ್ನು ನಿಮ್ಮ ಫೋನ್ ತಕ್ಷಣವೇ ನೀಡುತ್ತದೆ. ಒಟ್ಟಾರೆಯಾಗಿ ಹೇಳುವುದಾದರೆ, ಬದಲಾವಣೆ ಎಷ್ಟು ವೇಗವಾಗಿ ನಡೆಯುತ್ತಿದೆ ಎಂಬುದನ್ನು ಗಮನಿಸಿ! ಇಂದು, ಕೃಷಿ ಎಂಜಿನಿಯರಿಂಗ್ನಿಂದ ಹಿಡಿದು ಕೃಷಿ ಸ್ಟಾರ್ಟಪ್ಗಳವರೆಗೆ, ಭಾರತವು ಅವಕಾಶಗಳಿಂದ ತುಂಬಿದೆ. ನಾವು ನಮ್ಮ ಆಹಾರ ಉತ್ಪಾದಕರನ್ನು 'ಕೃಷಿ-ಉದ್ಯಮಿ'ಗಳನ್ನಾಗಿ ಪರಿವರ್ತಿಸಬೇಕಾಗಿದೆ. ಉತ್ಪಾದನೆ ನಡೆಯುವ ಸ್ಥಳದಲ್ಲೇ ಮೌಲ್ಯವರ್ಧನೆಯನ್ನು ಹೇಗೆ ಮಾಡಬಹುದು ಎಂಬುದರ ಕುರಿತು ಈಗ ದೇಶಾದ್ಯಂತ ವೇಗವಾಗಿ ಕೆಲಸ ನಡೆಯುತ್ತಿದೆ.
ಸ್ನೇಹಿತರೆ,
ಕಳೆದ ಕೆಲವು ವರ್ಷಗಳಲ್ಲಿ ಸಣ್ಣ ರೈತರು ಸರ್ಕಾರದೊಂದಿಗೆ ಕೈಜೋಡಿಸಿ, 10,000 ಎಫ್ಪಿಒ ಗಳನ್ನು, ಅಂದರೆ 'ರೈತ ಉತ್ಪಾದಕ ಸಂಸ್ಥೆ'ಗಳ ಬೃಹತ್ ಜಾಲ ನಿರ್ಮಿಸಿದ್ದಾರೆ. ಇವು ಸಣ್ಣ ರೈತರ ಗುಂಪುಗಳನ್ನು ಮೌಲ್ಯ ಸೃಷ್ಟಿಕರ್ತರನ್ನಾಗಿ ಪರಿವರ್ತಿಸುತ್ತಿವೆ, ಅವರನ್ನು ಆಹಾರ ಸಂಸ್ಕರಣಾ ಉದ್ಯಮದೊಂದಿಗೆ ಸಂಪರ್ಕಿಸುತ್ತಿವೆ. ಗುಜರಾತ್ನಲ್ಲಿದ್ದ ದಿನಗಳ ಒಂದು ಘಟನೆ ನನಗೆ ಈಗಲೂ ನೆನಪಿದೆ. ಗುಜರಾತ್ನಲ್ಲಿ ನಾವು 'ಜ್ಯೋತಿಗ್ರಾಮ ಯೋಜನೆ' ಜಾರಿಗೆ ತಂದಿದ್ದೆವು. ನಾವು ಕೃಷಿ ಉದ್ದೇಶದ ವಿದ್ಯುತ್ ಮಾರ್ಗಗಳನ್ನು ಗೃಹಬಳಕೆಯ ಮಾರ್ಗಗಳಿಂದ ಪ್ರತ್ಯೇಕಿಸಿ, ರೈತರಿಗೆ ಸಾಧ್ಯವಾದಷ್ಟು ಹೆಚ್ಚು ವಿದ್ಯುತ್ ಪೂರೈಸಲು ಆರಂಭಿಸಿದೆವು. ಇದರಿಂದ ರೈತರಿಗೆ ಅಪಾರ ಪ್ರಯೋಜನವಾಯಿತು. ಗಾಂಧಿನಗರದ ಸಮೀಪದಲ್ಲಿ ಕೆಲವು ಹಳ್ಳಿಗಳಿವೆ, ಅಲ್ಲಿ ಬಹುತೇಕ ಜನರು ಮೆಣಸಿನಕಾಯಿ ಬೆಳೆಯುತ್ತಾರೆ. ಆದರೆ ಅಲ್ಲಿನ ರೈತರು ಒಂದು ಸಮಸ್ಯೆ ಎದುರಿಸುತ್ತಿದ್ದರು. ಉತ್ಪಾದನೆ ಹೆಚ್ಚಾದರೆ ಬೆಲೆ ಕುಸಿಯುತ್ತಿತ್ತು, ಉತ್ಪಾದನೆ ಕಡಿಮೆಯಾದರೆ ಆದಾಯ ಕುಸಿಯುತ್ತಿತ್ತು. ಹೀಗೆ ಎರಡೂ ಸಂದರ್ಭಗಳಲ್ಲಿಯೂ ಅವರು ನಷ್ಟ ಅನುಭವಿಸುತ್ತಿದ್ದರು. ಹೆಚ್ಚು ಮೆಣಸಿನಕಾಯಿ ಬೆಳೆದರೆ ಅದನ್ನು ಮಾರಾಟ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಆದರೆ 'ಜ್ಯೋತಿಗ್ರಾಮ ಯೋಜನೆ'ಯ ಮೂಲಕ ವಿದ್ಯುತ್ ಸೌಲಭ್ಯ ಸಿಕ್ಕಿದ ನಂತರ, ಅವರು ಮೆಣಸಿನಕಾಯಿಯನ್ನು ಕೆಂಪು ಮೆಣಸಿನ ಪುಡಿಯಾಗಿ(ಖಾರದ ಪುಡಿ) ಪರಿವರ್ತಿಸಲು ಆರಂಭಿಸಿದರು. ಅವರು ಆ ಪುಡಿಯನ್ನು ಪ್ಯಾಕ್ ಮಾಡಿದರು, ಜಾಹೀರಾತುಗಳನ್ನು ಸಿದ್ಧಪಡಿಸಿದರು, ಪ್ಯಾಕೇಜಿಂಗ್ ಮೇಲೆ ಪ್ರಸಿದ್ಧ ವ್ಯಕ್ತಿಗಳ ಚಿತ್ರಗಳನ್ನು ಮುದ್ರಿಸಿದರು. ದೊಡ್ಡ ಪ್ರಮಾಣದಲ್ಲಿ ಮೆಣಸಿನ ಪುಡಿ ಮಾರಾಟ ಮಾಡಲು ಪ್ರಾರಂಭಿಸಿದರು. ಈ ಮೌಲ್ಯವರ್ಧನೆಯ ಮೂಲಕ ಅವರು ಉತ್ತಮ ಆದಾಯ ಗಳಿಸುವಲ್ಲಿ ಯಶಸ್ವಿಯಾದರು. ಹಿಂದೆ, ತಮ್ಮ ಮೆಣಸಿನಕಾಯಿಗೆ ಸರಿಯಾದ ಬೆಲೆಯೂ ಸಿಗುತ್ತಿರಲಿಲ್ಲ, ಆದರೆ ಈಗ ಅವರ ಉತ್ಪನ್ನಗಳು ಬ್ರಾಂಡ್ಗಳಾಗಿ ಮಾರ್ಪಟ್ಟಿವೆ. ಪ್ರತಿಯೊಂದು ಸಣ್ಣ ಅಂಶದ ಮೇಲೂ ಗಮನ ಹರಿಸಿದಾಗ ಏನನ್ನು ಸಾಧಿಸಬಹುದು ಎಂಬುದಕ್ಕೆ ಇದೊಂದು ಉದಾಹರಣೆಯಾಗಿದೆ. ಸಣ್ಣ ರೈತರನ್ನು ರಫ್ತು ಮಾರುಕಟ್ಟೆಗಳೊಂದಿಗೆ ಸಂಪರ್ಕಿಸುವ ಪ್ರಯತ್ನಗಳು ಕೂಡ ವೇಗವಾಗಿ ಸಾಗುತ್ತಿವೆ.
ಸ್ನೇಹಿತರೆ,
ನಮ್ಮ ನೀತಿ ಮತ್ತು ನಮ್ಮ ಉದ್ದೇಶ ಅತ್ಯಂತ ಸ್ಪಷ್ಟವಾಗಿದೆ. ಕೃಷಿಯು ರೈತರಿಗೆ ಹೊರೆಯಾಗಬಾರದು ಎಂಬುದು ನಮ್ಮ ಆದ್ಯತೆಯಾಗಿದೆ. ರೈತರಿಗೆ ಕೈಗೆಟುಕುವ ದರದಲ್ಲಿ ರಸಗೊಬ್ಬರಗಳು ಲಭ್ಯವಾಗುವಂತೆ ಮಾಡಲು, ಕಳೆದ 12 ವರ್ಷಗಳಲ್ಲಿ ದೇಶವು 16 ಲಕ್ಷ ಕೋಟಿ ರೂಪಾಯಿ ವ್ಯಯಿಸಿದೆ. ಸ್ನೇಹಿತರೆ, ಇದೊಂದು ಬೃಹತ್ ಮೊತ್ತವಾಗಿದೆ. 16 ಲಕ್ಷ ಕೋಟಿ ರೂಪಾಯಿ ಎಂದರೆ ಅನೇಕ ದೇಶಗಳ ವಾರ್ಷಿಕ ಬಜೆಟ್ಗಿಂತಲೂ ಹೆಚ್ಚಿನ ಮೊತ್ತವಾಗಿದೆ. ಇರಾನ್ ಮತ್ತು ಗಲ್ಫ್ ರಾಷ್ಟ್ರಗಳ ಸುತ್ತಮುತ್ತ ಯುದ್ಧದ ಪರಿಸ್ಥಿತಿ ನಿರ್ಮಾಣವಾಗಿರುವ ಈ ಸಂದರ್ಭದಲ್ಲಿ, 5,000 ರೂಪಾಯಿ ಮೌಲ್ಯದ ಡಿಎಪಿ ರಸಗೊಬ್ಬರ ಚೀಲವನ್ನು ಭಾರತೀಯ ರೈತರಿಗೆ ಕೇವಲ 1,300 ರೂಪಾಯಿಗೆ ಒದಗಿಸಲಾಗುತ್ತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 3,000 ರೂಪಾಯಿ ಬೆಲೆಬಾಳುವ ಯೂರಿಯಾ ಚೀಲವನ್ನು ಭಾರತೀಯ ರೈತರಿಗೆ 300 ರೂಪಾಯಿಗಿಂತ ಕಡಿಮೆ ಬೆಲೆಗೆ ನೀಡಲಾಗುತ್ತಿದೆ.
ಸ್ನೇಹಿತರೆ,
ನಾನು ಮತ್ತೊಂದು ವಿಷಯ ಪ್ರಸ್ತಾಪಿಸಲು ಬಯಸುತ್ತೇನೆ. ಈ ಬಗ್ಗೆ ನಾನು ಈ ಹಿಂದೆಯೂ ಮಾತನಾಡಿದ್ದೇನೆ. ಆದರೆ, ಇಂದು ನಾನು ಹೇಳಲಿರುವ ವಿಷಯವು ನಿಮ್ಮ ಜಾಲಕ್ಕೆ ಮಾತ್ರ ಸೀಮಿತವಾದ ವಿಶೇಷ ಮಾಹಿತಿಯಾಗಿದೆ.
ಸ್ನೇಹಿತರೆ,
ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಪರಿಸ್ಥಿತಿ ಉಲ್ಬಣಗೊಂಡಾಗ, ಕೇವಲ ಕೆಲವೇ ವಾರಗಳಲ್ಲಿ ಕಚ್ಚಾ ತೈಲದ ಬೆಲೆಯು ಪ್ರತಿ ಬ್ಯಾರೆಲ್ಗೆ 70 ಡಾಲರ್ಗಳಿಂದ 122 ಡಾಲರ್ಗೆ ಏರಿಕೆಯಾಯಿತು. ಆ ಸಮಯದಲ್ಲಿ ಭಾರತವು ದೊಡ್ಡ ಸವಾಲು ಎದುರಿಸಬೇಕಾಯಿತು. ಡೀಸೆಲ್ ಬೆಲೆಯನ್ನು ಲೀಟರ್ಗೆ ಕನಿಷ್ಠ 50 ರೂಪಾಯಿ ಹೆಚ್ಚಿಸಬೇಕಾದ ಪರಿಸ್ಥಿತಿ ಎದುರಾಗಿತ್ತು. ಅಂದರೆ ಲೀಟರ್ಗೆ 50 ರೂಪಾಯಿ ಹೆಚ್ಚಳ ಅನಿವಾರ್ಯವಾಗಿತ್ತು. ಅಂತಹ ಸಂದರ್ಭದಲ್ಲಿ, ಸರ್ಕಾರವು ರೈತರ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಒಂದು ನಿರ್ಧಾರ ತೆಗೆದುಕೊಂಡಿತು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉಂಟಾದ ಈ ಆಘಾತದ ಸಂಪೂರ್ಣ ಹೊರೆಯನ್ನು ನಾಗರಿಕರ ಮತ್ತು ರೈತರ ಮೇಲೆ ಬೀಳದಂತೆ ನೋಡಿಕೊಳ್ಳಲು ನಾವು ನಿರ್ಧರಿಸಿದೆವು. ಸರ್ಕಾರವು ಡೀಸೆಲ್ ಬೆಲೆಯನ್ನು ಲೀಟರ್ಗೆ ಕೇವಲ 7 ರೂಪಾಯಿ ಮಾತ್ರ ಹೆಚ್ಚಿಸಿತು, ವಾಸ್ತವವಾಗಿ ಆಗಬೇಕಿದ್ದ ಹೆಚ್ಚಳ 50 ರೂಪಾಯಿ ಆಗಿತ್ತು. ಅಂದರೆ, ಲೀಟರ್ಗೆ 43 ರೂಪಾಯಿಯಷ್ಟು ಹೊರೆಯನ್ನು ಸರ್ಕಾರವೇ ತನ್ನ ಮೇಲೆ ಹೊತ್ತುಕೊಂಡಿತು. ನೆರೆಯ ದೇಶಗಳಲ್ಲಿ ಡೀಸೆಲ್ ಬೆಲೆ ಶೇಕಡ 40ರಿಂದ 50ರಷ್ಟು ಏರಿಕೆಯಾಗಿತ್ತು, ಆದರೆ ಭಾರತದಲ್ಲಿ ಹಾಗಾಗಲಿಲ್ಲ. ಅಂದಿನಿಂದ ಇಂದಿನವರೆಗೂ, ಸರ್ಕಾರವು ಪ್ರತಿ ತಿಂಗಳು 14,000 ಕೋಟಿ ರೂಪಾಯಿಗಳ ನಷ್ಟ ಭರಿಸುತ್ತಿದೆ. ಪ್ರತಿ ತಿಂಗಳೂ ಇದೇ ಪರಿಸ್ಥಿತಿ. ಆದರೂ, ದೇಶದ ರೈತರಿಗೆ ಯಾವುದೇ ತೊಂದರೆಯಾಗದಂತೆ ನಾವು ನೋಡಿಕೊಂಡಿದ್ದೇವೆ. ರೈತರ ಕಲ್ಯಾಣವೇ ಅತ್ಯುನ್ನತ ಆದ್ಯತೆಯಾದಾಗ ಮತ್ತು 'ನಾಗರಿಕರೇ ದೇವರು' ಎಂಬ ಭಾವನೆ ಇದ್ದಾಗ, ಇಂತಹ ಸೂಕ್ಷ್ಮ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ.
ಸ್ನೇಹಿತರೆ,
ರಾಷ್ಟ್ರದ ಹಿತಾಸಕ್ತಿಗೆ ಸಂಬಂಧಿಸಿದ ಇಷ್ಟೆಲ್ಲಾ ಚರ್ಚೆಗಳ ನಡುವೆ, 'ಆಜ್ ತಕ್' ವಾಹಿನಿಯವರಿಗೆ, "ಇಲ್ಲಿಯವರೆಗೆ ಯಾವುದೇ ನಕಾರಾತ್ಮಕ ಮುಖ್ಯಾಂಶ ಏಕೆ ಬಂದಿಲ್ಲ?" ಎಂದು ಆಶ್ಚರ್ಯವಾಗುತ್ತಿರಬಹುದು. ಹಾಗಾಗಿ, ಈಗ ನಾವು ಸುದ್ದಿಯಾಗಬಲ್ಲಂತಹ ವಿಷಯವೊಂದರ ಬಗ್ಗೆ ಚರ್ಚಿಸೋಣವೇ? ಇಲ್ಲಿಯವರೆಗೆ ನಾನು ದೇಶದ ಬಗ್ಗೆ ಮಾತನಾಡುತ್ತಿದ್ದೆ, ಬಹುಶಃ ಅದಕ್ಕೆ ಮಾಧ್ಯಮಗಳಲ್ಲಿ ಅಷ್ಟೇನೂ ಗಮನ ಸಿಕ್ಕಿರಲಿಕ್ಕಿಲ್ಲ. ಹಾಗಾದರೆ ಈಗ, ವಿವಾದದ ಬಗ್ಗೆ ಮಾತನಾಡೋಣ.
ಸ್ನೇಹಿತರೆ,
ಇತ್ತೀಚಿನ ದಿನಗಳಲ್ಲಿ ಕೆಲವರು ತಮ್ಮ ಜೇಬಿನಿಂದ ಸಂವಿಧಾನವನ್ನು ಹೊರತೆಗೆಯುತ್ತಾರೆ. ಅವರು ಏನು ಮಾಡುತ್ತಿದ್ದಾರೆ ಎಂಬುದು ದೇಶಕ್ಕೆ ಚೆನ್ನಾಗಿ ತಿಳಿದಿದೆ. ರಾಷ್ಟ್ರದ ಸಂವಿಧಾನ ಮತ್ತು ಪ್ರಜಾಪ್ರಭುತ್ವವೆಲ್ಲವೂ ತಮ್ಮ ಜೇಬಿನಲ್ಲೇ ಇವೆ ಎಂದು ಅವರು ಭಾವಿಸಿದಂತಿದೆ. ಅಧಿಕಾರದಲ್ಲಿ ಇಲ್ಲದಿದ್ದರೂ, ಅವರು ಅಧಿಕಾರದ ಅಮಲಿನಲ್ಲೇ ಇದ್ದಾರೆ. ಆದರೆ, ಇದೇ ಜನರು ಅಧಿಕಾರದಲ್ಲಿದ್ದಾಗ ಅವರ ನಡೆ ನುಡಿ ಹೇಗಿತ್ತು? ಒಂದು ಸಣ್ಣ ಘಟನೆಯನ್ನು ನಿಮಗೆ ವಿವರಿಸುತ್ತೇನೆ.
ಸ್ನೇಹಿತರೆ,
ಒಂದು ಕಾಲದಲ್ಲಿ ಮಾಧ್ಯಮಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ರಾಜ್ಯಗಳಿಗೆ ಶ್ರೇಯಾಂಕ ನೀಡಲಾಗುತ್ತಿತ್ತು ಎಂಬುದು ನಿಮಗೆ ನೆನಪಿರಬಹುದು. ಆರ್ಥಿಕತೆಗೆ ಸಂಬಂಧಿಸಿದ ಅಂತಹ ಒಂದು ಶ್ರೇಯಾಂಕದಲ್ಲಿ ಗುಜರಾತ್ ಮೊದಲ ಸ್ಥಾನ ಪಡೆದಿತ್ತು. ಆ ಸಮಯದಲ್ಲಿ ನಾನು ಗುಜರಾತ್ನ ಮುಖ್ಯಮಂತ್ರಿಯಾಗಿದ್ದೆ. ಗುಜರಾತ್ಗೆ ಮೊದಲ ಸ್ಥಾನ ನೀಡಿದ ಆ ಸಂಸ್ಥೆಗೆ ಭಾರತದ ಮಾಜಿ ಪ್ರಧಾನಿಯೊಬ್ಬರ ಹೆಸರು ಇಡಲಾಗಿತ್ತು. ಈ ಸುಳಿವು ಸಾಕು... ಆ ಸಂಸ್ಥೆಯ ಹೆಸರನ್ನು ನೀವೇ ಕಂಡುಕೊಳ್ಳಬಹುದು. ದೇಶದ ಅತ್ಯಂತ ಗೌರವಾನ್ವಿತ ಅರ್ಥಶಾಸ್ತ್ರಜ್ಞರು ನಡೆಸಿದ ಸಂಶೋಧನೆಯ ಆಧಾರದ ಮೇಲೆ ಈ ಶ್ರೇಯಾಂಕ ನೀಡಲಾಗಿತ್ತು. ಆದರೆ, ದೆಹಲಿಯಲ್ಲಿ ಅಧಿಕಾರದಲ್ಲಿದ್ದವರಿಗೆ ಗುಜರಾತ್ಗೆ ಸಿಕ್ಕ ಈ ಮನ್ನಣೆ ಇಷ್ಟವಾಗಲಿಲ್ಲ. ಸಂಶೋಧನೆ ನಡೆಸುತ್ತಿದ್ದವರಿಗೆ, "ಇನ್ನು ಮುಂದೆ ಹೀಗೆ ನಡೆಯಬಾರದು" ಎಂದು ಅವರು ಅಧಿಕೃತವಾಗಿ ಸೂಚನೆ ನೀಡಿದರು. ಇನ್ನು ಮುಂದೆ ಯಾವುದೇ ವರದಿಯನ್ನು ತಮ್ಮ ಅನುಮತಿಯಿಲ್ಲದೆ ಪ್ರಕಟಿಸುವಂತಿಲ್ಲ ಎಂದು ಅವರು ಚೂಚನೆ ನೀಡಿದರು.
ಸ್ನೇಹಿತರೆ,
ಅಂದು ಪರಿಸ್ಥಿತಿ ಹೀಗಿತ್ತು, ಆದರೆ ಇಂದು ಅದೇ ಜನರು ಸಹಿಷ್ಣುತೆ ಮತ್ತು ಪ್ರಜಾಪ್ರಭುತ್ವದ ಬಗ್ಗೆ ಉಪನ್ಯಾಸಗಳನ್ನು ನೀಡುತ್ತಾ ಓಡಾಡುತ್ತಿದ್ದಾರೆ. ಇದು ಯಾವಾಗ ನಡೆಯಿತು? ಆ ನಂತರ ಏನಾಯಿತು? ಈ ವಿವರಗಳನ್ನು ನೀವು ಸ್ವತಃ ಸಂಶೋಧಿಸಿ ಕಂಡುಕೊಳ್ಳಬಹುದು. ಈಗ ನಾನು ನನ್ನ ಮಾತುಗಳನ್ನು ಮುಕ್ತಾಯದತ್ತ ಕೊಂಡೊಯ್ಯುತ್ತೇನೆ.
ಸ್ನೇಹಿತರೆ,
ಕಳೆದ ಕೆಲವು ವರ್ಷಗಳಲ್ಲಿ ದೇಶದ ರೈತರು ಸಾಧಿಸಿರುವ ಪ್ರಗತಿ ನಿಸ್ಸಂದೇಹವಾಗಿ ಗಮನಾರ್ಹವಾಗಿದೆ. 'ವಿಕಸಿತ ಭಾರತ' ನಿರ್ಮಿಸಲು ನಾವು ನಮ್ಮ ಪ್ರಯತ್ನಗಳನ್ನು ಇನ್ನಷ್ಟು ವಿಸ್ತರಿಸಬೇಕಾಗಿದೆ. ರೈತರು ಸಮೃದ್ಧರಾಗಿರುವ, ಹಳ್ಳಿಗಳು ಸಮೃದ್ಧವಾಗಿರುವ ಹಾಗೂ ಕೃಷಿಯು ಆಧುನಿಕ ಮತ್ತು ಲಾಭದಾಯಕವಾಗಿರುವ ಭವಿಷ್ಯವನ್ನು ನಾವು ರೂಪಿಸಬೇಕು. ಇಲ್ಲಿ ನಡೆಯುತ್ತಿರುವ ಚರ್ಚೆಗಳು ದೇಶಕ್ಕೆ ಪ್ರಯೋಜನಕಾರಿಯಾಗುತ್ತವೆ ಎಂಬ ವಿಶ್ವಾಸ ನನಗಿದೆ. ಇಲ್ಲಿಂದ ಹೊರಹೊಮ್ಮುವ ಅತ್ಯುತ್ತಮ ಸಲಹೆಗಳು ಮತ್ತು ಪರಿಹಾರಗಳ ಮೇಲೆ ಸರ್ಕಾರವು ಕೆಲಸ ಮಾಡಲಿದೆ. ಇಂದು ನಾನು ನಿಮ್ಮ ನಡುವೆ ಬಂದಿರುವುದರಿಂದ, ಒಂದು ಮನವಿ ಮಾಡಿಕೊಳ್ಳಲು ಬಯಸುತ್ತೇನೆ. ಆರಂಭದಲ್ಲಿ ಅಂಜನಾ ಜಿ ಅವರು ತಮ್ಮ ಪ್ರಾಸ್ತಾವಿಕ ನುಡಿಗಳಲ್ಲಿ, ರೈತರು 2 ವಿಷಯಗಳೊಂದಿಗೆ ನಂಟು ಹೊಂದಿದ್ದಾರೆ ಎಂದು ಹೇಳಿದರು. ಅನ್ನದಾತ ಮತ್ತು ಭೂಮಿ ತಾಯಿ. ನನ್ನ ರೈತ ಸಹೋದರ ಸಹೋದರಿಯರನ್ನು ನಾನು ಕೇಳಲು ಬಯಸುತ್ತೇನೆ. ನಾವು ನಿಜವಾಗಿಯೂ ನಮ್ಮ ಈ ಭೂಮಿ ತಾಯಿಯನ್ನು ರಕ್ಷಿಸುತ್ತಿದ್ದೇವೆಯೇ? ಪ್ರಾಮಾಣಿಕವಾಗಿ ನಿಮ್ಮನ್ನೇ ನೀವು ಕೇಳಿಕೊಳ್ಳಿ. ನಾವು ರಾಸಾಯನಿಕಗಳ ಅತಿಯಾದ ಬಳಕೆಯ ಮೂಲಕ ಭೂಮಿ ತಾಯಿಯನ್ನು ನಾಶಪಡಿಸುತ್ತಿದ್ದೇವೆ. ನಾವು ಆಕೆಯ ಮಕ್ಕಳು! ನಾವು ನಮ್ಮ ಕಣ್ಣ ಮುಂದೆಯೇ ಈ ತಾಯಿಯನ್ನು ಕೊಲ್ಲುತ್ತಿದ್ದೇವೆ. ನಾವು ಸಮಯಕ್ಕೆ ಸರಿಯಾಗಿ ಎಚ್ಚೆತ್ತುಕೊಳ್ಳದಿದ್ದರೆ, ಭೂಮಿ ತಾಯಿಯನ್ನು ಉಳಿಸಲು ಪ್ರಯತ್ನಿಸದಿದ್ದರೆ, ಇಂದು ನಮಗೆ ಅನ್ನ ನೀಡುತ್ತಿರುವ ಈ ತಾಯಿ ಮುಂದೊಂದು ದಿನ ನಮ್ಮ ಕೈತಪ್ಪಿ ಹೋಗಬಹುದು. ಅಂತಹ ಪರಿಸ್ಥಿತಿ ಎದುರಾಗಬಹುದು. ಅದಕ್ಕಾಗಿಯೇ ಸರ್ಕಾರವು ನೈಸರ್ಗಿಕ ಕೃಷಿಗೆ ಒತ್ತು ನೀಡಿದೆ. ನೈಸರ್ಗಿಕ ಕೃಷಿಯನ್ನು ಪ್ರಯೋಗ ಮಾಡಿ ನೋಡಿದವರು ದೊಡ್ಡ ಯಶಸ್ಸು ಸಾಧಿಸಿದ್ದಾರೆ. ಕೇವಲ ಒಂದು ಹಸು 30 ಎಕರೆ ಜಮೀನಿನಲ್ಲಿ ನೈಸರ್ಗಿಕ ಕೃಷಿಗೆ ಬೇಕಾದಷ್ಟು ಗೊಬ್ಬರ ಒದಗಿಸಬಲ್ಲದು. ಇದಕ್ಕೆ ಯಾವುದೇ ರಾಸಾಯನಿಕಗಳ ಅಗತ್ಯವಿಲ್ಲ. ಇಂದಿನ ನಿಮ್ಮ ಚರ್ಚೆಗಳಲ್ಲಿ ಇಂತಹ ಅನೇಕ ವಿಷಯಗಳು ಪ್ರಸ್ತಾಪವಾಗಿರಬಹುದು. ಆದ್ದರಿಂದ, ನಾವೆಲ್ಲರೂ ರಾಸಾಯನಿಕ ಮುಕ್ತ ಕೃಷಿಯತ್ತ ಸಾಗಬೇಕು ಎಂದು ನಾನು ಎಲ್ಲಾ ರೈತರಲ್ಲಿ ಮನವಿ ಮಾಡುತ್ತೇನೆ. ನಾನು ಸಾವಯವ ಕೃಷಿಯ ಬಗ್ಗೆ ಮಾತನಾಡುತ್ತಿಲ್ಲ. ನಾನು ನೈಸರ್ಗಿಕ ಕೃಷಿಯ ಬಗ್ಗೆ ಮಾತನಾಡುತ್ತಿದ್ದೇನೆ, ಇದನ್ನು ಪ್ರತಿಯೊಬ್ಬ ರೈತರೂ ಸುಲಭವಾಗಿ ಅಳವಡಿಸಿಕೊಳ್ಳಬಹುದು. ರಾಸಾಯನಿಕಗಳಿಂದ ಮುಕ್ತರಾಗುವ ಮೂಲಕ ನಾವು ನಮ್ಮ ಮಣ್ಣನ್ನು ಉಳಿಸಲು ಕ್ರಮ ಕೈಗೊಳ್ಳಬಹುದು. ನಮ್ಮ ರೈತ ಸಹೋದರ ಸಹೋದರಿಯರ ವಿಷಯದಲ್ಲಿ ಒಂದು ಸವಾಲೆಂದರೆ, ಅವರು ತಮ್ಮ ಕಣ್ಣಾರೆ ನೋಡುವವರೆಗೂ ಯಾವುದನ್ನೂ ಒಪ್ಪಿಕೊಳ್ಳುವುದಿಲ್ಲ. ಎಷ್ಟೇ ಸುದೀರ್ಘ ಭಾಷಣಗಳನ್ನು ಮಾಡಿದರೂ, ರೈತರು ಸುಲಭವಾಗಿ ಯಾವುದನ್ನೂ ನಂಬುವುದಿಲ್ಲ. ಅವರು ಕಣ್ಣಾರೆ ಕಂಡ ನಂತರವಷ್ಟೇ ನಂಬುತ್ತಾರೆ. ಇಲ್ಲದಿದ್ದರೆ, ಅವರ ಮನಸ್ಸಿನಲ್ಲಿ ಉಳಿಯುವುದು ಇಷ್ಟೇ. 'ಹಳದಿ ಪುಡಿ ಹಾಕಬೇಕು, ಹಸಿರು ಬಾಟಲಿ ಬಳಸಬೇಕು, ಹಸಿರು ಡಬ್ಬಿ ಬಳಸಬೇಕು, ಕೆಂಪು ಡಬ್ಬಿ ತರಬೇಕು'. ಅಷ್ಟೇ ಅಲ್ಲ, ಪಕ್ಕದ ರೈತ 2 ಚೀಲಗಳನ್ನು ಬಳಸಿದರೆ ಇವರೂ 2 ಚೀಲಗಳನ್ನು ಬಳಸುತ್ತಾರೆ; ಅವರು 4 ಚೀಲಗಳನ್ನು ಬಳಸಿದರೆ ಇವರೂ 4 ಚೀಲಗಳನ್ನು ಬಳಸುತ್ತಾರೆ. ಇಂತಹ ಮನಸ್ಥಿತಿಯಿಂದ ಅವರನ್ನು ಹೊರತರುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ, ವಿಶೇಷವಾಗಿ ಪ್ರಗತಿಪರ ರೈತರ ಮೇಲಿದೆ. ಅವರು ರಾಸಾಯನಿಕ ಮುಕ್ತ ನೈಸರ್ಗಿಕ ಕೃಷಿಯತ್ತ ಸಾಗಲು ನಾವು ಅವರಿಗೆ ಸಹಾಯ ಮಾಡಬೇಕು. ಮೊದಲ ಕೆಲಸವೆಂದರೆ ನಮ್ಮ 'ಭೂಮಿ ತಾಯಿಯನ್ನು' ಉಳಿಸುವುದಾಗಿದೆ. ಈ ಭೂಮಿ ತಾಯಿಯು ನಮಗೆ ಬೇಕಾದ ಎಲ್ಲವನ್ನೂ ಒದಗಿಸುವ ಸಾಮರ್ಥ್ಯ ಹೊಂದಿದ್ದಾಳೆ. ನಾವು ಅವಳನ್ನು ರಕ್ಷಿಸಿದರೆ, ನಮಗೆ ಎಂದಿಗೂ ಯಾವುದರ ಕೊರತೆಯೂ ಉಂಟಾಗದಂತೆ ಅವಳು ನೋಡಿಕೊಳ್ಳುತ್ತಾಳೆ. ನಾವೆಲ್ಲರೂ ಭೂಮಿ ತಾಯಿಯ ಮಕ್ಕಳು. ಆಕೆಯ ಪುತ್ರ ಪುತ್ರಿಯರಾಗಿ, ಭೂಮಿ ತಾಯಿಯ ಮಕ್ಕಳಾಗಿ ಈ ಜವಾಬ್ದಾರಿ ನಿರ್ವಹಿಸುವುದು ನಮ್ಮ ಕರ್ತವ್ಯ. ಇದೇ ದೃಢವಿಶ್ವಾಸದೊಂದಿಗೆ, ನಿಮ್ಮೆಲ್ಲರಿಗೂ ನನ್ನ ಶುಭಾಶಯಗಳನ್ನು ಕೋರುತ್ತೇನೆ. 'ಇಂಡಿಯಾ ಟುಡೇ ಗ್ರೂಪ್'ಗೂ ನಾನು ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಮುಂಬರುವ ವರ್ಷಗಳಲ್ಲಿ ದೇಶಕ್ಕೆ ಅಪಾರ ಸಹಾಯವಾಗುವಂತಹ ಒಂದು ಮಹತ್ವದ ಕಾರ್ಯವನ್ನು ನೀವು ಕೈಗೊಂಡಿದ್ದೀರಿ.
ತುಂಬು ಧನ್ಯವಾದಗಳು.
ಹಕ್ಕು ನಿರಾಕರಣೆ: ಪ್ರಧಾನಮಂತ್ರಿ ಅವರ ಭಾಷಣದ ಅಂದಾಜು ಕನ್ನಡ ಅನುವಾದ ಇದಾಗಿದೆ. ಅವರು ಮೂಲತಃ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ್ದಾರೆ.
*****