ಪ್ರಕಟಣಾ ದಿನಾಂಕ:
12 NOV 2026 7:53PM by PIB Bengaluru
ಜಲ ಶಕ್ತಿ ಸಚಿವಾಲಯದ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು (DDWS), ತಮಿಳುನಾಡು ಸರ್ಕಾರದ ಸಹಯೋಗದೊಂದಿಗೆ ಆಯೋಜಿಸಿದ್ದ 'ಜಲ ಜೀವನ್ ಮಿಷನ್ (JJM) 2.0' ಕುರಿತ ಮೊದಲ ಪ್ರಾದೇಶಿಕ ಸಮ್ಮೇಳನವನ್ನು ಉದ್ದೇಶಿಸಿ, ಗೌರವಾನ್ವಿತ ಕೇಂದ್ರ ಜಲ ಶಕ್ತಿ ಸಚಿವರಾದ ಶ್ರೀ ಸಿ. ಆರ್. ಪಾಟೀಲ್ ಅವರು ಮಾತನಾಡಿದರು. 2026ರ ನವೆಂಬರ್ 12 ಮತ್ತು 13ರಂದು ನಡೆಯುತ್ತಿರುವ ಈ ಎರಡು ದಿನಗಳ ಸಮ್ಮೇಳನದಲ್ಲಿ, ದಕ್ಷಿಣ ಭಾರತದ ಏಳು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ ತಮಿಳುನಾಡು, ಕರ್ನಾಟಕ, ಕೇರಳಂ, ಆಂಧ್ರಪ್ರದೇಶ, ತೆಲಂಗಾಣ, ಪುದುಚೇರಿ ಮತ್ತು ಲಕ್ಷದ್ವೀಪಗಳ ಹಿರಿಯ ಅಧಿಕಾರಿಗಳು ಹಾಗೂ ಪ್ರತಿನಿಧಿಗಳು ಭಾಗವಹಿಸಿದ್ದಾರೆ. ಈ ಸಮ್ಮೇಳನವು ಯೋಜನೆಯ ಪ್ರಗತಿಯನ್ನು ಪರಿಶೀಲಿಸಲು, ಎದುರಾಗುತ್ತಿರುವ ಸವಾಲುಗಳನ್ನು ಚರ್ಚಿಸಲು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸುಸ್ಥಿರ ಕುಡಿಯುವ ನೀರಿನ ಸೇವೆಗಳನ್ನು ಬಲಪಡಿಸಲು ವೇದಿಕೆಯಾಗಿದೆ.

ಸಮ್ಮೇಳನದಲ್ಲಿ ಸಚಿವರ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದ ಕೇಂದ್ರ ಜಲಶಕ್ತಿ ಸಚಿವರು, 2019ರಲ್ಲಿ 'ಜಲ ಜೀವನ್ ಮಿಷನ್' ಅನ್ನು ಪ್ರಾರಂಭಿಸುವ ಹಿಂದಿದ್ದ ಗೌರವಾನ್ವಿತ ಪ್ರಧಾನ ಮಂತ್ರಿಯವರ ದೂರದೃಷ್ಟಿಯನ್ನು ಸ್ಮರಿಸಿದರು. ಪ್ರತಿಯೊಂದು ಗ್ರಾಮೀಣ ಕುಟುಂಬಕ್ಕೂ ನಲ್ಲಿಯ ಮೂಲಕ ನೀರು ಒದಗಿಸುವುದೇ ಈ ಮಿಷನ್ನ ಗುರಿಯಾಗಿದೆ. ಈ ಮಿಷನ್ ಅಡಿಯಲ್ಲಿ ಸಾಧಿಸಲಾದ ಗಮನಾರ್ಹ ಪ್ರಗತಿಯನ್ನು ಅವರು ಎತ್ತಿ ತೋರಿಸಿದರು; ಸುಮಾರು 16 ಕೋಟಿ ಗ್ರಾಮೀಣ ಕುಟುಂಬಗಳಿಗೆ ನಲ್ಲಿ ನೀರು ಸಂಪರ್ಕ ಕಲ್ಪಿಸಲಾಗಿದ್ದು, ಇದು ಗ್ರಾಮೀಣ ಸಮುದಾಯಗಳ, ವಿಶೇಷವಾಗಿ ಮಹಿಳೆಯರ ಜೀವನಮಟ್ಟವನ್ನು ಗಣನೀಯವಾಗಿ ಸುಧಾರಿಸಿದೆ.
2026ರ ಸೆಪ್ಟೆಂಬರ್ 1-2ರಂದು ನಡೆದ 'ನೀರಿಗೆ ಸಂಬಂಧಿಸಿದ ಇಲಾಖಾ ಶೃಂಗಸಭೆ'ಯ ಮುಂದುವರಿದ ಭಾಗವಾಗಿ ಈ ಪ್ರಾದೇಶಿಕ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದು ಕೇಂದ್ರ ಸಚಿವರು ತಿಳಿಸಿದರು. ಶೃಂಗಸಭೆಯಲ್ಲಿ ನಡೆದ ಚರ್ಚೆಗಳು ಮತ್ತು ಕೈಗೊಂಡ ನಿರ್ಧಾರಗಳನ್ನು ರಾಜ್ಯ, ಜಿಲ್ಲೆ ಮತ್ತು ಗ್ರಾಮ ಮಟ್ಟದಲ್ಲಿ ಕಾರ್ಯರೂಪಕ್ಕೆ ತರುವುದೇ ಇದರ ಉದ್ದೇಶವಾಗಿದೆ. ಮಿಷನ್ಗಾಗಿ ನಿಗದಿಪಡಿಸಿದ ಡಿಸೆಂಬರ್ 2028ರ ಗಡುವಿನೊಳಗೆ ಬಾಕಿ ಉಳಿದಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕೆಂದು ಅವರು ಒತ್ತಿ ಹೇಳಿದರು. ಅಲ್ಲದೆ, ಸಾಧ್ಯವಿರುವ ಕಡೆಗಳಲ್ಲಿ ಡಿಸೆಂಬರ್ 2027ರ ಒಳಗಾಗಿಯೇ ಈ ಕೆಲಸಗಳನ್ನು ಪೂರ್ಣಗೊಳಿಸಲು ಒಗ್ಗೂಡಿ ಪ್ರಯತ್ನಿಸುವಂತೆ ರಾಜ್ಯಗಳಿಗೆ ಅವರು ಮನವಿ ಮಾಡಿದರು.

ಜೆಜೆಎಂ 2.0 ಮೂಲಸೌಕರ್ಯ ಸೃಷ್ಟಿಯಿಂದ ಖಚಿತ ಮತ್ತು ಸುಸ್ಥಿರ ಕುಡಿಯುವ ನೀರಿನ ಸೇವಾ ವಿತರಣೆಗೆ ಪರಿವರ್ತನೆಯನ್ನು ಪ್ರತಿನಿಧಿಸುತ್ತದೆ ಎಂದು ಗೌರವಾನ್ವಿತ ಸಚಿವರು ಒತ್ತಿ ಹೇಳಿದರು. ರಾಜ್ಯಗಳು ನಿಗದಿತ ರಚನಾತ್ಮಕ ಸುಧಾರಣೆಗಳನ್ನು, ವಿಶೇಷವಾಗಿ ಕಾರ್ಯಾಚರಣೆ ಮತ್ತು ನಿರ್ವಹಣೆ (ಒ & ಎಂ), ಸಾಂಸ್ಥಿಕ ಹೊಣೆಗಾರಿಕೆ ಮತ್ತು ಗ್ರಾಮೀಣ ನೀರು ಸರಬರಾಜು ವ್ಯವಸ್ಥೆಗಳ ದೀರ್ಘಕಾಲೀನ ಕಾರ್ಯನಿರ್ವಹಣೆಗೆ ಸಂಬಂಧಿಸಿದವುಗಳನ್ನು ಕಾರ್ಯಗತಗೊಳಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು. ನಿಗದಿತ ಸುಧಾರಣಾ ಷರತ್ತುಗಳ ಅನುಸರಣೆಗೆ ಒಳಪಟ್ಟು ಅರ್ಹ ಕೆಲಸಗಳಿಗೆ ಹಣಕಾಸಿನ ನೆರವು ನೀಡುವ ಭಾರತ ಸರ್ಕಾರದ ಬದ್ಧತೆಯನ್ನು ಅವರು ಪುನರುಚ್ಚರಿಸಿದರು ಮತ್ತು ಲಭ್ಯವಿರುವ ಸಂಪನ್ಮೂಲಗಳ ಅನುಷ್ಠಾನ ಮತ್ತು ಪರಿಣಾಮಕಾರಿ ಬಳಕೆಯನ್ನು ವೇಗಗೊಳಿಸಲು ರಾಜ್ಯಗಳನ್ನು ಒತ್ತಾಯಿಸಿದರು.
ಜಲ ಭದ್ರತೆಯ ಮಹತ್ವವನ್ನು ಒತ್ತಿ ಹೇಳಿದ ಕೇಂದ್ರ ಸಚಿವರು, ಅಂತರ್ಜಲ ಮರುಪೂರಣ, ಮಳೆನೀರು ಕೊಯ್ಲು ಮತ್ತು ಸಮುದಾಯ ನೇತೃತ್ವದ ಜಲ ಸಂರಕ್ಷಣೆಗೆ ಹೆಚ್ಚಿನ ಗಮನ ನೀಡಬೇಕೆಂದು ಕರೆ ನೀಡಿದರು. ಜಲ ಸಂಚಯ್ ಜನ್ ಭಾಗೀದಾರಿ ಬಗ್ಗೆ ಉಲ್ಲೇಖಿಸುತ್ತಾ, ವಿಕೇಂದ್ರೀಕೃತ ಜಲ ಸಂರಕ್ಷಣಾ ರಚನೆಗಳ ಸಾಮರ್ಥ್ಯವನ್ನು ಅವರು ಎತ್ತಿ ತೋರಿಸಿದರು ಮತ್ತು ರಾಜ್ಯಗಳು ಇಲಾಖೆಗಳ ನಡುವೆ ಸಂಯೋಜನೆಯನ್ನು ಬಲಪಡಿಸಲು ಮತ್ತು ಮೂಲ ಸುಸ್ಥಿರತೆಯ ಕ್ರಮಗಳಲ್ಲಿ ಸಮುದಾಯಗಳನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳಲು ಒತ್ತಾಯಿಸಿದರು. ಅನುಷ್ಠಾನದ ಸವಾಲುಗಳನ್ನು ನಿವಾರಿಸಲು ಯಶಸ್ವಿ ಅಭ್ಯಾಸಗಳನ್ನು ವಿನಿಮಯ ಮಾಡಿಕೊಳ್ಳಲು ಮತ್ತು ಪ್ರಾಯೋಗಿಕ ಪರಿಹಾರಗಳನ್ನು ಅಳವಡಿಸಿಕೊಳ್ಳಲು ಭಾಗವಹಿಸುವ ರಾಜ್ಯಗಳನ್ನು ಅವರು ಪ್ರೋತ್ಸಾಹಿಸಿದರು.
ತಮಿಳುನಾಡು ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಮತ್ತು ಜಲಸಂಪನ್ಮೂಲ ಸಚಿವರಾದ ಶ್ರೀ ತಿರು ಎನ್. ಆನಂದ್, ಗ್ರಾಮೀಣ ಮನೆಗಳಿಗೆ ನೀರು ಸರಬರಾಜು ಸಂಪರ್ಕಗಳನ್ನು ವಿಸ್ತರಿಸುವಲ್ಲಿ ಮತ್ತು ಸಂಯೋಜಿತ ನೀರು ಸರಬರಾಜು ಯೋಜನೆಗಳು ಮತ್ತು ಅಸ್ತಿತ್ವದಲ್ಲಿರುವ ವ್ಯವಸ್ಥೆಗಳ ಸುಧಾರಣೆಯ ಮೂಲಕ ಕುಡಿಯುವ ನೀರಿನ ಮೂಲಸೌಕರ್ಯವನ್ನು ಬಲಪಡಿಸುವಲ್ಲಿ ರಾಜ್ಯದ ಪ್ರಗತಿಯನ್ನು ಎತ್ತಿ ತೋರಿಸಿದರು. ಕಾರ್ಯಾಚರಣೆ ಮತ್ತು ನಿರ್ವಹಣೆ, ಓವರ್ಹೆಡ್ ಟ್ಯಾಂಕ್ಗಳ ನಿಯತಕಾಲಿಕ ಶುಚಿಗೊಳಿಸುವಿಕೆ, ಸಮುದಾಯ ಆಧಾರಿತ ನೀರಿನ ಗುಣಮಟ್ಟ ಪರೀಕ್ಷೆ, ನೀರಿನ ಸೇವಾ ಶುಲ್ಕಗಳ ಸಂಗ್ರಹ ಮತ್ತು ಕುಡಿಯುವ ನೀರಿನ ಸೇವೆಗಳ ಜಿಲ್ಲಾ ಮಟ್ಟದ ಮೇಲ್ವಿಚಾರಣೆಗೆ ಸಂಬಂಧಿಸಿದ ಉಪಕ್ರಮಗಳನ್ನು ಅವರು ವಿವರಿಸಿದರು. ಜೆಜೆಎಂ 2.0 ಗೆ ತಮಿಳುನಾಡಿನ ಬದ್ಧತೆಯನ್ನು ಅವರು ಪುನರುಚ್ಚರಿಸಿದರು ಮತ್ತು ಉಳಿದ ಕೆಲಸಗಳನ್ನು ಪೂರ್ಣಗೊಳಿಸಲು ಮತ್ತು ಕುಡಿಯುವ ನೀರಿನ ಸೇವೆಗಳನ್ನು ಸುಸ್ಥಿರಗೊಳಿಸಲು ಕೇಂದ್ರ-ರಾಜ್ಯ ಸಹಕಾರವನ್ನು ಮುಂದುವರೆಸುವುದನ್ನು ಒತ್ತಿ ಹೇಳಿದರು.

ಡಿಡಿಡಬ್ಲ್ಯೂಎಸ್ ಕಾರ್ಯದರ್ಶಿ ಶ್ರೀ ಅಶೋಕ್ ಕೆ.ಕೆ. ಮೀನಾ, ತಿರುಚಿರಾಪಳ್ಳಿ ಸಮ್ಮೇಳನವು ಸೆಪ್ಟೆಂಬರ್ 2026 ರಲ್ಲಿ ನಡೆದ ನೀರಿನ ಕುರಿತಾದ ಇಲಾಖಾ ಶೃಂಗಸಭೆಯ ಫಲಿತಾಂಶಗಳನ್ನು ಕಾರ್ಯಸಾಧ್ಯ ಕ್ರಮಗಳಾಗಿ ಪರಿವರ್ತಿಸುವ ಗುರಿಯನ್ನು ಹೊಂದಿರುವ ಐದು ಪ್ರಾದೇಶಿಕ ಸಮ್ಮೇಳನಗಳ ಸರಣಿಯಲ್ಲಿ ಮೊದಲನೆಯದು ಎಂದು ಹೇಳಿದರು. ಅವರು ಮೂಲ ಸುಸ್ಥಿರತೆ, ಪರಿಣಾಮಕಾರಿ ಕಾರ್ಯಾಚರಣೆ ಮತ್ತು ನಿರ್ವಹಣೆ ವ್ಯವಸ್ಥೆಗಳು, ಆರ್ಥಿಕ ಸುಸ್ಥಿರತೆ, ಕೌಶಲ್ಯಪೂರ್ಣ ಸ್ಥಳೀಯ ಕಾರ್ಯಪಡೆ ಮತ್ತು ಗ್ರಾಮ ಪಂಚಾಯತ್ ನೇತೃತ್ವದ ಆಡಳಿತವನ್ನು ಬಲಪಡಿಸುವುದನ್ನು ಪ್ರಮುಖ ಆದ್ಯತೆಗಳಾಗಿ ಒತ್ತಿ ಹೇಳಿದರು. ಸುಜಲಾಂ ಭಾರತ್ ಸೇರಿದಂತೆ ಡಿಜಿಟಲ್ ವೇದಿಕೆಗಳ ಪ್ರಾಮುಖ್ಯತೆ ಮತ್ತು ಸುಸ್ಥಿರ ಸೇವಾ ವಿತರಣೆಯನ್ನು ಬೆಂಬಲಿಸಲು ಅಂತರ-ಸಚಿವಾಲಯಗಳ ಸಂಯೋಜನೆಯನ್ನೂ ಅವರು ಉಲ್ಲೇಖಿಸಿದರು.

ವಿವಿಧ ಪ್ರಸ್ತುತಿಗಳಲ್ಲಿನ ಸಂವಾದಗಳಲ್ಲಿ, ಎನ್ಜೆಜೆಎಂನ ಹೆಚ್ಚುವರಿ ಕಾರ್ಯದರ್ಶಿ ಮತ್ತು ಮಿಷನ್ ನಿರ್ದೇಶಕರಾದ ಶ್ರೀ ಕಮಲ್ ಕಿಶೋರ್ ಸೋನ್, ಸುಧಾರಣೆಗಳನ್ನು ಪರಿಣಾಮಕಾರಿ ಕ್ಷೇತ್ರ ಮಟ್ಟದ ಅನುಷ್ಠಾನಕ್ಕೆ ತರುವ ಮತ್ತು ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಮತ್ತು ಗ್ರಾಮೀಣ ನೀರು ಸರಬರಾಜು ಇಲಾಖೆಗಳ ನಡುವೆ ಅಂತರ-ಇಲಾಖೆಯ ಸಮನ್ವಯವನ್ನು ಬಲಪಡಿಸುವ ಅಗತ್ಯವನ್ನು ಒತ್ತಿ ಹೇಳಿದರು.

ಕುಡಿಯುವ ನೀರಿನ ಮೂಲಗಳ ನಿಯಮಿತ ಮೌಲ್ಯಮಾಪನ, ಹಣಕಾಸು ಆಯೋಗದ ಅನುದಾನಗಳ ಪರಿಣಾಮಕಾರಿ ಬಳಕೆ, ಗ್ರಾಮ ಪಂಚಾಯತ್ ಸ್ವಂತ ಮೂಲ ಆದಾಯವನ್ನು ಬಲಪಡಿಸುವುದು ಮತ್ತು ಕಾರ್ಯಾಚರಣೆ ಹಾಗು ನಿರ್ವಹಣೆಗೆ ಸುಸ್ಥಿರ ಹಣಕಾಸು ಒದಗಿಸುವುದನ್ನು ಖಚಿತಪಡಿಸಿಕೊಳ್ಳುವ ಅಗತ್ಯವನ್ನು ಅವರು ಉಲ್ಲೇಖಿಸಿದರು.
ಸಚಿವರು ಅಧಿವೇಶನದಲ್ಲಿ, ಡಿ.ಡಿ.ಡಬ್ಲ್ಯು.ಎಸ್. (DDWS) ನ ಜಂಟಿ ಕಾರ್ಯದರ್ಶಿ ಶ್ರೀ ಡಿ. ಸೆಂಥಿಲ್ ಪಾಂಡಿಯನ್ ಅವರು ಪ್ರಾದೇಶಿಕ ಸಮ್ಮೇಳನದ ಉದ್ದೇಶಗಳು ಮತ್ತು ಪ್ರಮುಖ ಚರ್ಚೆಗಳ ಕುರಿತು ಗೌರವಾನ್ವಿತ ಕೇಂದ್ರ ಸಚಿವರಿಗೆ ತಿಳಿಸಿದರು. ಪರಸ್ಪರ ಕಲಿಕೆ, ಉತ್ತಮ ಅಭ್ಯಾಸಗಳ ಹಂಚಿಕೆ ಮತ್ತು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ನಡುವೆ ಸಮನ್ವಯವನ್ನು ಬಲಪಡಿಸುವ ವೇದಿಕೆಗಳಾಗಿ ಪ್ರಾದೇಶಿಕ ಸಮ್ಮೇಳನಗಳ ಮಹತ್ವವನ್ನು ಅವರು ಎತ್ತಿ ತೋರಿಸಿದರು. ಕಲ್ಲನೈ ಅಣೆಕಟ್ಟು ಮತ್ತು ಕಾವೇರಿ ನೀರು ನಿರ್ವಹಣಾ ವ್ಯವಸ್ಥೆಯ ಐತಿಹಾಸಿಕ ಮಹತ್ವವನ್ನು ಉಲ್ಲೇಖಿಸುತ್ತಾ, ಜಲ ಜೀವನ್ ಮಿಷನ್ 2.0 ಅಡಿಯಲ್ಲಿ ಸುಸ್ಥಿರ ಗ್ರಾಮೀಣ ಕುಡಿಯುವ ನೀರಿನ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ಸಮುದಾಯ ಮಾಲೀಕತ್ವ, ಪರಿಣಾಮಕಾರಿ ಕಾರ್ಯಾಚರಣೆ ಮತ್ತು ನಿರ್ವಹಣೆ ಮತ್ತು ಅಂತರ-ಇಲಾಖೆಯ ಸಂಯೋಜನೆಯನ್ನು ಅವರು ಒತ್ತಿ ಹೇಳಿದರು.

ತಮಿಳುನಾಡಿನ ಜೆಜೆಎಂ ಮಿಷನ್ ನಿರ್ದೇಶಕರಾದ ಶ್ರೀ ದಿನೇಶ್ ಪೊನ್ರಾಜ್ ಆಲಿವರ್ ಅವರ ಸ್ವಾಗತ ಭಾಷಣದೊಂದಿಗೆ ಸಮ್ಮೇಳನ ಪ್ರಾರಂಭವಾಯಿತು. ತಮಿಳುನಾಡು ಸರ್ಕಾರದ ಹಿರಿಯ ಅಧಿಕಾರಿಗಳು ಮತ್ತು ಭಾಗವಹಿಸುವ ರಾಜ್ಯಗಳು ಹಾಗು ಕೇಂದ್ರಾಡಳಿತ ಪ್ರದೇಶಗಳ ಪ್ರತಿನಿಧಿಗಳು ಸಹ ಚರ್ಚೆಗಳಲ್ಲಿ ಭಾಗವಹಿಸಿದ್ದರು.
ಡಿಡಿಡಬ್ಲ್ಯೂಎಸ್ ನಿರ್ದೇಶಕರಾದ ಶ್ರೀ ಹರಿ ನಾರಾಯಣ್ ಮುರುಗುನ್ ಅವರು ಜೆಜೆಎಂ 2.0 ಅಡಿಯಲ್ಲಿ ಚಿಂತನಾ ದೃಷ್ಟಿ ಮತ್ತು ಪ್ರಮುಖ ರಚನಾತ್ಮಕ ಸುಧಾರಣೆಗಳ ಪ್ರಸ್ತುತಿಯನ್ನು ಮಂಡಿಸಿದರು ಮತ್ತು ವಿವಿಧ ಸುಧಾರಣಾ ನಿಯತಾಂಕಗಳ ಕುರಿತು ಭಾಗವಹಿಸುವ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರಗತಿಯನ್ನು ಪರಿಶೀಲಿಸಿದರು. ಪ್ರಸ್ತುತಿಯು ಸಾಂಸ್ಥಿಕ ಬಲವರ್ಧನೆ, ಸೇವಾ ಉಪಯುಕ್ತತೆ ವ್ಯವಸ್ಥೆಗಳು, ಮೂಲ ಸುಸ್ಥಿರತೆ, ನೀರಿನ ಗುಣಮಟ್ಟದ ಆಡಳಿತ, ಡಿಜಿಟಲ್ ಮೇಲ್ವಿಚಾರಣೆ, ಸಾಮರ್ಥ್ಯ ವೃದ್ಧಿ ಮತ್ತು ಕೌಶಲ್ಯಪೂರ್ಣ ಮಾನವ ಸಂಪನ್ಮೂಲಗಳನ್ನು ಎತ್ತಿ ತೋರಿಸಿತು.
ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತಾ ಸಚಿವಾಲಯದ ಪ್ರತಿನಿಧಿಯಾಗಿ, ಆರ್ಡಿಎಸ್ಡಿಇ (RDSDE) ಪ್ರಾದೇಶಿಕ ನಿರ್ದೇಶಕರಾದ ಡಾ. ಎಂ. ಜಯಪ್ರಕಾಶನ್ ಅವರು, ಗ್ರಾಮೀಣ ಕುಡಿಯುವ ನೀರಿನ ವ್ಯವಸ್ಥೆಗಳ ನಿರ್ವಹಣೆ ಮತ್ತು ಕಾರ್ಯಾಚರಣೆಗಾಗಿ ಸ್ಥಳೀಯ ಮಟ್ಟದಲ್ಲಿ ಕೌಶಲ್ಯಯುತ ಕಾರ್ಯಪಡೆಯನ್ನು ಸಿದ್ಧಪಡಿಸುವ ಮಹತ್ವವನ್ನು ಒತ್ತಿ ಹೇಳಿದರು. ಇದರಲ್ಲಿ ಗ್ರಾಮ ಮಟ್ಟದ ಸಿಬ್ಬಂದಿಗೆ ತರಬೇತಿ ನೀಡುವುದು ಮತ್ತು ಅವರಿಗೆ ಪ್ರಮಾಣಪತ್ರಗಳನ್ನು ಒದಗಿಸುವುದು ಒಳಗೊಂಡಿದೆ.
ಡಿಡಿಡಬ್ಲ್ಯೂಎಸ್ ನಿರ್ದೇಶಕರಾದ ಶ್ರೀ ವೈ. ಕೆ. ಸಿಂಗ್ ಅವರು, ಬುಡಕಟ್ಟು ಪ್ರದೇಶಗಳು ಹಾಗೂ ವಿಶೇಷವಾಗಿ ದುರ್ಬಲ ಬುಡಕಟ್ಟು ಗುಂಪುಗಳು ವಾಸಿಸುವ ನೆಲೆಗಳಲ್ಲಿ ಕುಡಿಯುವ ನೀರಿನ ಅಗತ್ಯಗಳನ್ನು ಪೂರೈಸಲು, 'ಪಿಎಂ-ಜನ್ಮನ್' (PM-JANMAN) ಮತ್ತು 'ಧರ್ತಿ ಆಬಾ ಜಂಜಾತೀಯ ಗ್ರಾಮ ಉತ್ಕರ್ಷ ಅಭಿಯಾನ' ದಂತಹ ಪ್ರಮುಖ ಬುಡಕಟ್ಟು ಅಭಿವೃದ್ಧಿ ಯೋಜನೆಗಳೊಂದಿಗೆ ಸಮನ್ವಯ ಸಾಧಿಸುವ ಅವಕಾಶಗಳನ್ನು ವಿವರಿಸಿದರು.
ಗ್ರಾಮೀಣಾಭಿವೃದ್ಧಿ ಸಚಿವಾಲಯದ ಪ್ರತಿನಿಧಿಗಳಾದ ಸಹಾಯಕ ಆಯುಕ್ತರಾದ ಕುಮಾರಿ ದೀಕ್ಷಾ ಸುಪ್ಯಾಲ್ ಬಿಷ್ಟ್ ಮತ್ತು ಯೋಜನಾ ಅಧಿಕಾರಿ ಶ್ರೀ ಗೌರಿ ಶಂಕರ್ ಅವರು, 'ವಿಬಿ-ಜಿ ರಾಮ್ ಜಿ' ಯೋಜನೆಯಡಿ ನೀರಿನ ಸಂರಕ್ಷಣೆ, ಅಂತರ್ಜಲ ಮರುಪೂರಣ, ನೀರಿನ ಮೂಲಗಳ ಸುಸ್ಥಿರತೆ ಹಾಗೂ ನಿರ್ವಹಣೆಗೆ ಸಂಬಂಧಿಸಿದ ಅರ್ಹ ಚಟುವಟಿಕೆಗಳನ್ನು ಕೈಗೊಳ್ಳಲು ಲಭ್ಯವಿರುವ ಸಮನ್ವಯ ಅವಕಾಶಗಳ ಬಗ್ಗೆ ಮಾಹಿತಿ ನೀಡಿದರು.
ಪಂಚಾಯತ್ ರಾಜ್ ಸಚಿವಾಲಯದ ನಿರ್ದೇಶಕರಾದ ಶ್ರೀ ವಿಪುಲ್ ಉಜ್ವಲ್, ಗ್ರಾಮೀಣ ಕುಡಿಯುವ ನೀರಿನ ಸೇವೆಗಳನ್ನು ಸುಸ್ಥಿರಗೊಳಿಸುವಲ್ಲಿ ಗ್ರಾಮ ಪಂಚಾಯತ್ಗಳ ಕೇಂದ್ರ ಪಾತ್ರವನ್ನು ಎತ್ತಿ ತೋರಿಸಿದರು, ನಿರ್ದಿಷ್ಟವಾಗಿ ಕಾರ್ಯಾಚರಣೆ ಮತ್ತು ನಿರ್ವಹಣೆ ಹಣಕಾಸು, ಕುಡಿಯುವ ನೀರಿನ ಅವಶ್ಯಕತೆಗಳನ್ನು ಗ್ರಾಮ ಪಂಚಾಯತ್ ಅಭಿವೃದ್ಧಿ ಯೋಜನೆಗಳಲ್ಲಿ (GPDPs) ಸಂಯೋಜಿಸುವುದು ಮತ್ತು ಹಣಕಾಸು ಆಯೋಗದ ಅನುದಾನಗಳ ಬಳಕೆಗೆ ಒತ್ತು ನೀಡಿದರು. ರಾಷ್ಟ್ರೀಯ ಗ್ರಾಮ ಸ್ವರಾಜ್ ಅಭಿಯಾನ (RGSA) ತರಬೇತಿ ಚೌಕಟ್ಟಿನೊಂದಿಗೆ (ಜೆ.ಜೆ.ಎಂ. ) JJM 2.0 ಅಡಿಯಲ್ಲಿ ಅಭಿವೃದ್ಧಿಪಡಿಸಲಾದ ಸಾಮರ್ಥ್ಯ-ನಿರ್ಮಾಣ ಮಾಡ್ಯೂಲ್ಗಳ ಒಮ್ಮುಖತೆಯನ್ನು ಚರ್ಚೆಗಳು ಒತ್ತಿ ಹೇಳಿದವು.
ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಷನ್ ಟೆಕ್ನಾಲಜಿಯ ಯೋಜನಾ ನಿರ್ದೇಶಕರಾದ ಫಣಿ ಕುಮಾರ್, ಕನಿಷ್ಠ ಪರಿಸರ ಪ್ರಭಾವದೊಂದಿಗೆ ಸುರಕ್ಷಿತ ಕುಡಿಯುವ ನೀರನ್ನು ಒದಗಿಸಲು ಲಕ್ಷದ್ವೀಪದಲ್ಲಿ ಎಂಟು ಸ್ಥಾವರಗಳನ್ನು ಸ್ಥಾಪಿಸುವುದರೊಂದಿಗೆ ಅದರ ಸ್ಥಳೀಯ ಕಡಿಮೆ ತಾಪಮಾನದ ಉಷ್ಣ ನಿರ್ಲವಣೀಕರಣ ತಂತ್ರಜ್ಞಾನವನ್ನು ಉಲ್ಲೇಖಿಸಿದರು. ದ್ವೀಪದ ನೀರಿನ ಸುರಕ್ಷತೆಯನ್ನು ಬಲಪಡಿಸಲು ನವೀಕರಿಸಬಹುದಾದ ಇಂಧನ ಉತ್ಪಾದನೆಯನ್ನು ನಿರ್ಲವಣೀಕರಣದೊಂದಿಗೆ ಸಂಯೋಜಿಸುವ ನವೀನ ಸಾಗರ ಉಷ್ಣ ಶಕ್ತಿ ಪರಿವರ್ತನೆ ಯೋಜನೆಯನ್ನು ಸಹ ಇದು ಪ್ರದರ್ಶಿಸಿತು.
ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ, ತೆಲಂಗಾಣ, ಪುದುಚೇರಿ ಮತ್ತು ಲಕ್ಷದ್ವೀಪ - ಏಳು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಪ್ರತಿನಿಧಿಗಳು ಜಲ ಜೀವನ್ ಮಿಷನ್ 2.0 ಅಡಿಯಲ್ಲಿ ತಮ್ಮ ಸಾಧನೆಗಳು, ಪ್ರಮುಖ ಸವಾಲುಗಳು, ಉತ್ತಮ ಅಭ್ಯಾಸಗಳು ಮತ್ತು ಸುಧಾರಣೆಗಳ ಪ್ರಗತಿಯನ್ನು ಪ್ರಸ್ತುತಪಡಿಸಿದರು. ಪ್ರಸ್ತುತಿಗಳು ಯೋಜನೆಗಳ ಭೌತಿಕ ಮತ್ತು ಆರ್ಥಿಕ ಪೂರ್ಣಗೊಳಿಸುವಿಕೆ, ಸುಜಲಂ ಭಾರತ್ ಡಿಜಿಟಲ್ ಉಪಕ್ರಮಗಳು, ನೀರು ಸರಬರಾಜು ಸ್ವತ್ತುಗಳ ಜಿಯೋ-ಟ್ಯಾಗಿಂಗ್, ಜಲ ಅರ್ಪಣ್ ಮತ್ತು ಹರ್ ಘರ್ ಜಲ ಪ್ರಮಾಣೀಕರಣ, ಕುಡಿಯುವ ನೀರಿನ ಸೇವಾ ವಿತರಣಾ ಮೌಲ್ಯಮಾಪನ, ಸಾಮರ್ಥ್ಯ ವೃದ್ಧಿ ಮತ್ತು ಕೌಶಲ್ಯ, ಸಮುದಾಯ ಭಾಗವಹಿಸುವಿಕೆ ಮತ್ತು ಸಾಂಸ್ಥಿಕ, ಹಣಕಾಸು ಮತ್ತು ಮೂಲ ಸುಸ್ಥಿರತೆಯ ಕ್ರಮಗಳನ್ನು ಒಳಗೊಂಡಿವೆ. ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಸುಧಾರಣೆಗಳನ್ನು ವೇಗಗೊಳಿಸಲು ಮತ್ತು ಸುಸ್ಥಿರ ಗ್ರಾಮೀಣ ಕುಡಿಯುವ ನೀರಿನ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ನವೀನ ವಿಧಾನಗಳು, ಅನುಷ್ಠಾನ ಸವಾಲುಗಳು ಮತ್ತು ಸಮಯಕ್ಕೆ ಅನುಗುಣವಾಗಿ ಕ್ರಿಯಾ ಯೋಜನೆಗಳನ್ನು ಹಂಚಿಕೊಂಡವು.
ಈ ಸಮ್ಮೇಳನವು ಕೇಂದ್ರ-ರಾಜ್ಯ ಸಮನ್ವಯವನ್ನು ಬಲಪಡಿಸಲು, ಅಂತರ-ಇಲಾಖೆಯ ಸಮನ್ವಯವನ್ನು ಉತ್ತೇಜಿಸಲು ಮತ್ತು ಪ್ರತಿ ಗ್ರಾಮೀಣ ಮನೆಗೂ ಸುಸ್ಥಿರ ಕುಡಿಯುವ ನೀರಿನ ಸೇವೆಗಳ ಕಡೆಗೆ ಜೆ.ಜೆ.ಎಂ.(JJM) 2.0 ಸುಧಾರಣೆಗಳ ಅನುಷ್ಠಾನವನ್ನು ವೇಗಗೊಳಿಸಲು ಪ್ರಮುಖ ವೇದಿಕೆಯನ್ನು ಒದಗಿಸುತ್ತದೆ.
*****