ಪ್ರಕಟಣಾ ದಿನಾಂಕ:
12 NOV 2026 2:44PM by PIB Bengaluru
ಕೇಂದ್ರ ಶಿಕ್ಷಣ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಅವರು ನವದೆಹಲಿಯಲ್ಲಿಂದು ಕೇಂದ್ರೀಯ ವಿದ್ಯಾಲಯ ಸಂಘಟನೆಯ (ಕೆವಿಎಸ್) ಮೂರು ಪ್ರಮುಖ ಡಿಜಿಟಲ್ ಉಪಕ್ರಮಗಳನ್ನು ಉದ್ಘಾಟಿಸಿದರು. ಇವುಗಳಲ್ಲಿ ಎಐ-ಸಂಯೋಜಿತ ವಿದ್ಯಾ ಸಮೀಕ್ಷಾ ಕೇಂದ್ರ (ವಿಎಸ್ಕೆ) ಮತ್ತು 'ಸಮೀಕ್ಷಾ' ಎಐ ಬೋಟ್, ‘ಕೆವಿಎಸ್-ಸಂವಾದ್ ಪೇರೆಂಟ್ ಕನೆಕ್ಟ್ ತಂತ್ರಾಂಶ’ ಮತ್ತು ವೆಬ್ ಪೋರ್ಟಲ್ ಹಾಗೂ ‘ಕೆವಿಎಸ್’ ಹಳೆಯ ವಿದ್ಯಾರ್ಥಿಗಳ ಸಂಪರ್ಕ ಪೋರ್ಟಲ್ ಸೇರಿವೆ. ತಂತ್ರಜ್ಞಾನ-ಸಶಕ್ತ, ಪಾರದರ್ಶಕ ಮತ್ತು ದಕ್ಷ ಆಡಳಿತದತ್ತ ‘ಕೆವಿಎಸ್’ನ ಪ್ರಯಾಣದಲ್ಲಿ ಇದು ಪ್ರಮುಖ ಮೈಲುಗಲ್ಲಾಗಿದೆ.
ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ)-2020 ರ ಉದ್ದೇಶಗಳನ್ನು ಸಾಕಾರಗೊಳಿಸುವ ಮತ್ತು ‘ಡಿಜಿಟಲ್ ಇಂಡಿಯಾ’ದ ದೃಷ್ಟಿಕೋನವನ್ನು ಮುನ್ನಡೆಸುವ ನಿಟ್ಟಿನಲ್ಲಿ ಈ ಉಪಕ್ರಮಗಳು ಮಹತ್ವದ ಹೆಜ್ಜೆ ಎಂದು ಬಣ್ಣಿಸಿದ ಸಚಿವರು, ತಂಡವನ್ನು ಅಭಿನಂದಿಸಿದರು. ಇದೇವೇಳೆ ವ್ಯಾಪಕ ಅಳವಡಿಕೆಗಾಗಿ ಉಪಕ್ರಮಗಳನ್ನು ಮತ್ತಷ್ಟು ಬಲಪಡಿಸಲು ಮತ್ತು ಪ್ರದರ್ಶಿಸಲು ಪಾಲುದಾರರು ಪ್ರೋತ್ಸಾಹಿಸಿದರು. ಎಲ್ಲಾ ತರಗತಿಗಳು ಮತ್ತು ಸ್ಥಳಗಳನ್ನು ಒಳಗೊಂಡಂತೆ ಪ್ರತಿ ಕೇಂದ್ರೀಯ ವಿದ್ಯಾಲಯಗಳಲ್ಲಿ ಉಪಕ್ರಮವನ್ನು ಹೆಚ್ಚಿಸಲು ಅವರು ಕರೆ ನೀಡಿದರು. ನಿರಂತರ ಕಲಿಕೆಯ ವಿಧಾನವನ್ನು ಅಳವಡಿಸಿಕೊಳ್ಳಲು, ಫಲಿತಾಂಶಗಳನ್ನು ನಿರ್ಣಯಿಸಲು ಮತ್ತು ಸುಧಾರಣೆಯ ಅಗತ್ಯವಿರುವ ಕ್ಷೇತ್ರಗಳನ್ನು ಪರಿಹರಿಸಲು ಅವರು ಪಾಲುದಾರರನ್ನು ಪ್ರೋತ್ಸಾಹಿಸಿದರು.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ (ಡಿಒಎಸ್ಇಎಲ್) ಸಹಯೋಗದೊಂದಿಗೆ ಇಡೀ ಶಾಲಾ ಶಿಕ್ಷಣ ಪರಿಸರ ವ್ಯವಸ್ಥೆಯ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಈ ಉಪಕ್ರಮವನ್ನು ಕೆವಿಎಸ್ ಅನ್ನು ಮೀರಿ ವಿಸ್ತರಿಸಬೇಕು ಎಂದು ಶ್ರೀ ಜೋಶಿ ಸಲಹೆ ನೀಡಿದರು. ಶಿಕ್ಷಕರ ಸಾಮರ್ಥ್ಯ ವೃದ್ಧಿಯ ಮಹತ್ವವನ್ನು ಒತ್ತಿ ಹೇಳಿದ ಅವರು, ಸಮಗ್ರ ಶಿಕ್ಷಕರ ತರಬೇತಿ ದತ್ತಾಂಶವನ್ನು ಪೋರ್ಟಲ್ನಲ್ಲಿ ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು. ಇದು ಶಿಕ್ಷಕರ ತರಬೇತಿ ಸ್ಥಿತಿ, ತರಬೇತಿ ಮಧ್ಯಂತರಗಳು, ಹಿಂದಿನ ತರಬೇತಿ ದಾಖಲೆಗಳು ಮತ್ತು ಮುಂಬರುವ ತರಬೇತಿ ಅವಶ್ಯಕತೆಗಳ ವಿವರಗಳನ್ನು ಒಳಗೊಂಡಿರಬೇಕು ಎಂದು ಅವರು ಹೇಳಿದರು. ಈ ವಿವರಗಳನ್ನು ಆನ್ಲೈನ್ ವೇದಿಕೆಗಳ ಜತೆ ಸಂಯೋಜಿಸುವುದರಿಂದ ಉತ್ತಮ ಮೇಲ್ವಿಚಾರಣೆ ಮತ್ತು ಸಮಯೋಚಿತ ತರಬೇತಿಯನ್ನು ಖಚಿತಪಡಿಸಿಕೊಳ್ಳಲು ಅನುಕೂಲವಾಗುತ್ತದೆ ಎಂದು ಅವರು ಒತ್ತಿ ಹೇಳಿದರು.
‘ಡಿಒಎಸ್ಇಎಲ್’ ಕಾರ್ಯದರ್ಶಿ ಶ್ರೀ ಟಿ.ಕೆ. ಅನಿಲ್ ಕುಮಾರ್; ‘ಡಿಒಎಸ್ಇಎಲ್’ ಜಂಟಿ ಕಾರ್ಯದರ್ಶಿ ಶ್ರೀಮತಿ ಪ್ರಾಚಿ ಪಾಂಡೆ; ಕೇಂದ್ರೀಯ ವಿದ್ಯಾಲಯ ಸಂಘಟನೆಯ ಆಯುಕ್ತ ಶ್ರೀ ವಿಕಾಸ್ ಗುಪ್ತಾ; ಮತ್ತು ಶಿಕ್ಷಣ ಸಚಿವಾಲಯದ ಹಿರಿಯ ಅಧಿಕಾರಿಗಳು ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಕೃತಕ ಬುದ್ಧಿಮತ್ತೆ-ಸಂಯೋಜಿತ ವಿದ್ಯಾ ಸಮೀಕ್ಷಾ ಕೇಂದ್ರ
‘ಎಐ-ಸಂಯೋಜಿತ ವಿದ್ಯಾ ಸಮೀಕ್ಷಾ ಕೇಂದ್ರ’ (samiksha.kvs.gov.in) ವಿದ್ಯಾರ್ಥಿ ಮತ್ತು ಸಿಬ್ಬಂದಿ ಹಾಜರಾತಿ, ಶೈಕ್ಷಣಿಕ ಕಾರ್ಯಕ್ಷಮತೆ, ಶಾಲಾ ಮೂಲಸೌಕರ್ಯ ಮತ್ತು ಪ್ರವೇಶಗಳ ಬಗ್ಗೆ ನೈಜ-ಸಮಯದ ಡ್ಯಾಶ್ಬೋರ್ಡ್ಗಳನ್ನು ಒದಗಿಸುತ್ತದೆ. ಇದರ 'ಸಮೀಕ್ಷಾ' ಎಐ ಬಾಟ್ ದತ್ತಾಂಶವನ್ನು ವಿಶ್ಲೇಷಿಸುತ್ತದೆ, ಅಂತರಗಳನ್ನು ಗುರುತಿಸುತ್ತದೆ ಮತ್ತು ಮಧ್ಯಸ್ಥಿಕೆಗಳನ್ನು ಸೂಚಿಸುತ್ತದೆ, ಮಾಹಿತಿಯುಕ್ತ ಮತ್ತು ಸಮಯೋಚಿತ ನಿರ್ಧಾರ ತೆಗೆದುಕೊಳ್ಳಲು ಅನುವು ಮಾಡಿಕೊಡುತ್ತದೆ.
ಕೆವಿಎಸ್-ಸಂವಾದ್ - ಪೋಷಕ ಸಂಪರ್ಕ ತಂತ್ರಾಂಶ ಮತ್ತು ವೆಬ್ ಪೋರ್ಟಲ್
ಕೆವಿಎಸ್ ಸಂವಾದ್ ಪೇರೆಂಟ್ ಕನೆಕ್ಟ್ ತಂತ್ರಾಂಶ ಮತ್ತು ವೆಬ್ ಪೋರ್ಟಲ್ (samvaad.kvs.gov.in) ನೈಜ-ಸಮಯದ ಹಾಜರಾತಿ, ಪಠ್ಯಕ್ರಮದ ಪ್ರಗತಿ, ಶೈಕ್ಷಣಿಕ ಫಲಿತಾಂಶಗಳು, ಕಲಿಕೆಯ ಸಂಪನ್ಮೂಲಗಳು ಮತ್ತು ಡಿಜಿಟಲ್ ವಿದ್ಯಾರ್ಥಿ ಗುರುತಿನ ಚೀಟಿಗಳನ್ನು ಒದಗಿಸುವ ಮೂಲಕ ಶಾಲೆಗಳನ್ನು ಪೋಷಕರಿಗೆ ಹತ್ತಿರವಾಗಿಸುತ್ತದೆ. ಪೋಷಕರು ವಿದ್ಯಾರ್ಥಿ ಮತ್ತು ಶಿಕ್ಷಕರ ಡೈರಿಗಳನ್ನು ಪ್ರವೇಶಿಸುವುದರ ಜೊತೆಗೆ ಬೋನಫೈಡ್ ಮತ್ತು ‘ಸಿಇಎ’ ಪ್ರಮಾಣಪತ್ರಗಳು ಮತ್ತು ವಿದ್ಯಾರ್ಥಿ ರಜೆಗಾಗಿ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು. ಇದು ಪೋಷಕರು-ಶಿಕ್ಷಕರ ಸಂವಹನವನ್ನು ಬಲಪಡಿಸುವ ಜೊತೆಗೆ ಕಾಗದಪತ್ರಗಳು ಮತ್ತು ಅನಗತ್ಯ ಶಾಲಾ ಭೇಟಿಗಳನ್ನು ಕಡಿಮೆ ಮಾಡುತ್ತದೆ.

ಕೆವಿಎಸ್ ಹಳೆಯ ವಿದ್ಯಾರ್ಥಿಗಳ ಪೋರ್ಟಲ್
ಕೆವಿಎಸ್ ಹಳೆಯ ವಿದ್ಯಾರ್ಥಿಗಳ ಪೋರ್ಟಲ್ (alumni.kvs.gov.in) ಮಾಜಿ ವಿದ್ಯಾರ್ಥಿಗಳಿಗೆ ತಮ್ಮ ಶಾಲೆಗಳು ಮತ್ತು ಸಹಪಾಠಿಗಳೊಂದಿಗೆ ಮರುಸಂಪರ್ಕ, ಸಾಧನೆಗಳು ಮತ್ತು ಅನುಭವಗಳನ್ನು ಹಂಚಿಕೊಳ್ಳಲು ಮತ್ತು ಮಾರ್ಗದರ್ಶನ, ವೃತ್ತಿ ಮಾರ್ಗದರ್ಶನ ಮತ್ತು ಸಾಂಸ್ಥಿಕ ಅಭಿವೃದ್ಧಿಗೆ ಕೊಡುಗೆ ನೀಡಲು ಮೀಸಲಾದ ವೇದಿಕೆಯನ್ನು ಒದಗಿಸುತ್ತದೆ.
ಕೆವಿಎಸ್ ಕೇಂದ್ರ ಕಚೇರಿಯ ಐಟಿ ಸೇವಾ ಕೋಶವು ಆಂತರಿಕವಾಗಿ ಅಭಿವೃದ್ಧಿಪಡಿಸಿದ ಈ ವೇದಿಕೆಗಳು ಅಗತ್ಯ ಮಾಹಿತಿ ಮತ್ತು ಸೇವೆಗಳನ್ನು ಒಂದೇ ಕ್ಲಿಕ್ನಲ್ಲಿ ಲಭ್ಯವಾಗುವಂತೆ ಮಾಡುವ ಗುರಿಯನ್ನು ಹೊಂದಿವೆ. ಪೋಷಕರು, ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಆಡಳಿತಗಾರರಿಗೆ ಅಮೂಲ್ಯವಾದ ಸಮಯ ಮತ್ತು ಶ್ರಮವನ್ನು ಉಳಿಸುತ್ತವೆ. ಶೈಕ್ಷಣಿಕ ಸೇವೆಗಳನ್ನು ಹೆಚ್ಚು ಪ್ರವೇಶಿಸುವ, ಸ್ಪಂದಿಸುವ, ಪಾರದರ್ಶಕ ಮತ್ತು ಪರಿಣಾಮಕಾರಿಯಾಗಿಸುವ ಕೆವಿಎಸ್ನ ಬದ್ಧತೆಯನ್ನು ಅವು ಪುನರುಚ್ಚರಿಸುತ್ತವೆ.

*****