ರಕ್ಷಣಾ ಸಚಿವಾಲಯ
azadi ka amrit mahotsav

ಹೊಸ ಬಗೆಯ ಬೆದರಿಕೆಗಳ ವಿರುದ್ಧ ಕಾರ್ಯಾಚರಣೆಯ ಸನ್ನದ್ಧತೆಯನ್ನು ಹೆಚ್ಚಿಸಲು ಅಚ್ಚರಿ, ತಾಂತ್ರಿಕ ಶ್ರೇಷ್ಠತೆ ಮತ್ತು ಜಂಟಿ ಕಾರ್ಯತಂತ್ರವು ಪ್ರಮುಖ ಅಂಶವಾಗಿದೆ: ವಾಯುಪಡೆಯ ಕಮಾಂಡರ್‌ಗಳ ಸಮ್ಮೇಳನದಲ್ಲಿ ರಕ್ಷಣಾ ಸಚಿವರ ಹೇಳಿಕೆ


ಕಾರ್ಯಾಚರಣೆ, ಆಡಳಿತ ಮತ್ತು ಏರೋಸ್ಪೇಸ್ ಸುರಕ್ಷತೆಗಾಗಿ ಉಡಾನ್ ಆಂತರಿಕವಾಗಿ ಅಭಿವೃದ್ಧಿಪಡಿಸಿದ ಎಐ ಅಪ್ಲಿಕೇಷನ್‌ ಬಿಡುಗಡೆ ಮಾಡಿದ ಶ್ರೀ ರಾಜನಾಥ್ ಸಿಂಗ್

ಪ್ರಕಟಣಾ ದಿನಾಂಕ: 12 NOV 2026 2:04PM by PIB Bengaluru

ಕ್ಷಿಪ್ರ ತಾಂತ್ರಿಕ ಪ್ರಗತಿಗಳು ಮತ್ತು ವಿಕಸನಗೊಳ್ಳುತ್ತಿರುವ ಆಧುನಿಕ ಯುದ್ಧದ ಸ್ವರೂಪದಿಂದ ಉಂಟಾಗುವ ಸಾಂಪ್ರದಾಯಿಕ ಮತ್ತು ಹೊಸ ಬಗೆಯ ಬೆದರಿಕೆಗಳ ವಿರುದ್ಧ ಕಾರ್ಯಾಚರಣೆಯ ಸನ್ನದ್ಧತೆಯನ್ನು ಕಾಪಾಡಿಕೊಳ್ಳಲು 'ಆಶ್ಚರ್ಯ ಅಂಶ'ದ ಆಕ್ರಮಣಕಾರಿ ಮತ್ತು ರಕ್ಷಣಾತ್ಮಕ ಆಯಾಮಗಳನ್ನು ಬಲವರ್ಧನೆಗೊಳಿಸಲು ಮತ್ತು ಸುಸ್ಥಿರವಾಗಿ ಉಳಿಸಿಕೊಳ್ಳಲು ರಕ್ಷಣಾ ಸಚಿವರಾದ ಶ್ರೀ ರಾಜನಾಥ್ ಸಿಂಗ್ ಅವರು ರಕ್ಷಣಾ ಪಡೆಗಳಿಗೆ ಕರೆ ನೀಡಿದ್ದಾರೆ. 2026ರ ನವೆಂಬರ್ 12 ರಂದು ನವದೆಹಲಿಯಲ್ಲಿ ನಡೆದ ವಾಯುಪಡೆಯ ಕಮಾಂಡರ್‌ಗಳ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಅವರು, ಗುಪ್ತಚರ ಮತ್ತು ಕಣ್ಗಾವಲು ಸಾಮರ್ಥ್ಯಗಳನ್ನು ಬಲವರ್ಧನೆಗೊಳಿಸುವುದನ್ನು ಮುಂದುವರಿಸುವ, ವ್ಯವಸ್ಥೆಗಳ ನಡುವೆ ಏಕೀಕರಣ ವೃದ್ಧಿಸುವ ಮತ್ತು ಸಂಭಾವ್ಯ ಬೆದರಿಕೆಗಳನ್ನು ಅವು ತೆರೆದುಕೊಳ್ಳುವ ಮೊದಲು ಗುರುತಿಸುವ ಅಗತ್ಯತೆಯನ್ನು ಬಲವಾಗಿ ಪ್ರತಿಪಾದಿಸಿದರು.

"ನಮ್ಮ ರಕ್ಷಣಾ ಪಡೆಗಳು ಶತ್ರುಗಳಿಗೆ ಪ್ರತಿಕ್ರಿಯಿಸಲು ಅಥವಾ ಚೇತರಿಸಿಕೊಳ್ಳಲು ಸಮಯವಿಲ್ಲದ ಸಾಮರ್ಥ್ಯಗಳು ಮತ್ತು ವಿಧಾನಗಳನ್ನು ಅಭಿವೃದ್ಧಿಪಡಿಸಬೇಕು, ಅದೇ ಸಮಯದಲ್ಲಿ ಶತ್ರುಗಳ ಅನಿರೀಕ್ಷಿತ ನಡೆಯಿಂದ ನಾವು ಎಂದಿಗೂ ತಪ್ಪಿಸಿಕೊಳ್ಳುವುದಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು. ಆಶ್ಚರ್ಯವು ಸಾಂಪ್ರದಾಯಿಕ ಮತ್ತು ಎಲೆಕ್ಟ್ರಾನಿಕ್ ಎರಡೂ ರೂಪಗಳಲ್ಲಿ ಪ್ರಕಟವಾಗಬಹುದು. ನಮ್ಮ ಸಿಬ್ಬಂದಿ ಜಾಗರೂಕರಾಗಿ, ಚುರುಕಾಗಿ ಮತ್ತು ಯಾವುದೇ ಉದಯೋನ್ಮುಖ ಸವಾಲಿಗೆ ಪರಿಣಾಮಕಾರಿಯಾಗಿ ಪ್ರತಿಕ್ರಿಯಿಸಲು ಸಜ್ಜಾಗಿರುವುದನ್ನು ಖಾತ್ರಿಪಡಿಸಿಕೊಳ್ಳಲು ನಮ್ಮ ಗುಪ್ತಚರ ಮತ್ತು ಕಣ್ಗಾವಲು ಕಾರ್ಯವಿಧಾನಗಳನ್ನು ಮತ್ತಷ್ಟು ಬಲವರ್ಧನೆಗೊಳಿಸಬೇಕು ಮತ್ತು ಕಾರ್ಯಾಚರಣೆಯ ಸನ್ನದ್ಧತೆಯನ್ನು ವೃದ್ಧಿಸಬೇಕು, ”ಎಂದು ರಕ್ಷಣಾ ಸಚಿವರು ಹೇಳಿದರು.

ಸಮಕಾಲೀನ ಸಂಘರ್ಷಗಳು ಸಾಂಪ್ರದಾಯಿಕ ಯುದ್ಧಭೂಮಿಗಳನ್ನು ಮೀರಿ ಸಂಪರ್ಕವಿಲ್ಲದ ಕ್ಷೇತ್ರಗಳಿಗೆ ವಿಸ್ತರಿಸುತ್ತಿವೆ, ಕ್ಷಿಪಣಿಗಳು, ಡ್ರೋನ್‌ಗಳು ಮತ್ತು ಸುಧಾರಿತ ಶಸ್ತ್ರಾಸ್ತ್ರ ವ್ಯವಸ್ಥೆಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ಶ್ರೀ ರಾಜನಾಥ್ ಸಿಂಗ್ ಪ್ರತಿಪಾದಿಸಿದರು. ರಷ್ಯಾ-ಉಕ್ರೇನ್ ಮತ್ತು ಇಸ್ರೇಲ್-ಹಮಾಸ್ ಸಂಘರ್ಷಗಳನ್ನು ಉಲ್ಲೇಖಿಸಿದ ಅವರು, ಡ್ರೋನ್‌ಗಳು ಮತ್ತು ವಾಯು ರಕ್ಷಣಾ ವ್ಯವಸ್ಥೆಗಳು ಆಧುನಿಕ ಯುದ್ಧದ ನಿರ್ಣಾಯಕ ಅಂಶಗಳಾಗಿ ಹೊರಹೊಮ್ಮಿವೆ ಎಂದು ಅವರು ಹೇಳಿದರು. ಕಾಮಿಕಾಜ್ ಡ್ರೋನ್‌ಗಳು, ಕಣ್ಗಾವಲು ಮತ್ತು ಪ್ರತಿ-ಡ್ರೋನ್ ಕಾರ್ಯಾಚರಣೆಗಳಂತಹ ಉದಯೋನ್ಮುಖ ಸವಾಲುಗಳಿಗೆ ಸಿದ್ಧರಾಗಿರಲು ಅವರು ಕಮಾಂಡರ್‌ಗಳನ್ನು ಉತ್ತೇಜಿಸಿದರು.

ಎಲೆಕ್ಟ್ರಾನಿಕ್, ಸೈಬರ್ ಮತ್ತು ಬಾಹ್ಯಾಕಾಶ ಸೇರಿ ಯುದ್ಧದ ಉದಯೋನ್ಮುಖ ಕ್ಷೇತ್ರಗಳಿಗೆ ಮೀಸಲಾದ ಸಿದ್ಧಾಂತಗಳು ಮತ್ತು ವಾಸ್ತುಶಿಲ್ಪಗಳನ್ನು ಅಭಿವೃದ್ಧಿಪಡಿಸಲು ರಕ್ಷಣಾ ಸಚಿವರು ಭಾರತೀಯ ವಾಯುಪಡೆಗೆ  ಕರೆ ನೀಡಿದರು. ಈ ಕ್ಷೇತ್ರಗಳಲ್ಲಿ ವರ್ಧಿತ ಸನ್ನದ್ಧತೆಯು ಭವಿಷ್ಯದ ಸವಾಲುಗಳನ್ನು ಎದುರಿಸುವ ಸಾಮರ್ಥ್ಯ ಬಲವರ್ಧನೆಗೊಳಿಸುತ್ತದೆ ಎಂದು ಬಲವಾಗಿ ಪ್ರತಿಪಾದಿಸಿದ ಅವರು, "ಭವಿಷ್ಯದ ಸಂಘರ್ಷಗಳಲ್ಲಿ ಗೆಲುವು ಕೇವಲ ವಿಮಾನಗಳ ಸಂಖ್ಯೆಯ ಮೇಲೆ ಮಾತ್ರವಲ್ಲ, ತಾಂತ್ರಿಕ ಅತ್ಯಾಧುನಿಕತೆ, ಪ್ರತಿಕ್ರಿಯೆಯ ವೇಗ ಮತ್ತು ಸಿದ್ಧತೆಗಳ ನಿಖರತೆಯ ಮೇಲೂ ಅವಲಂಬಿತವಾಗಿರುತ್ತದೆ" ಎಂದು ಹೇಳಿದರು, ಈ ಉದಯೋನ್ಮುಖ ಸವಾಲುಗಳನ್ನು ಸಾಂಸ್ಥಿಕ ಚಿಂತನೆ, ಯೋಜನೆ ಮತ್ತು ಕಾರ್ಯಾಚರಣೆಯ ಪ್ರಕ್ರಿಯೆಗಳಲ್ಲಿ ಸಂಯೋಜಿಸುವತ್ತ ಗಮನಹರಿಸಿ ಪ್ರಮುಖ ಆದ್ಯತೆಯನ್ನಾಗಿ ಮಾಡಲು ಕಮಾಂಡರ್‌ಗಳಿಗೆ ಕರೆ ನೀಡಿದರು.

ಸಾಂಸ್ಥಿಕ ರಚನೆಗಳು, ಜಂಟಿ ಹೋರಾಟ ಮತ್ತು ಏಕೀಕರಣ ಮತ್ತು ಕಾರ್ಯಾಚರಣೆಯ ಪರಿಕಲ್ಪನೆಗಳು ಸೇರಿದಂತೆ ವ್ಯಾಪಕ ಶ್ರೇಣಿಯ ಕ್ಷೇತ್ರಗಳಲ್ಲಿ ಸುಧಾರಣೆಗಳನ್ನು ಒಳಗೊಂಡಂತೆ ರಕ್ಷಣಾ ಪಡೆಗಳು ಪರಿವರ್ತನಾ ಹಂತಕ್ಕೆ ಒಳಗಾಗುತ್ತಿವೆ ಎಂದು ಶ್ರೀ ರಾಜನಾಥ್ ಸಿಂಗ್ ಪ್ರಮುಖವಾಗಿ ಪ್ರಸ್ತಾಪಿಸಿದರು. ಬದಲಾಗುತ್ತಿರುವ ಭದ್ರತಾ ವಾತಾವರಣವು ನಿರಂತರ ಹೊಂದಾಣಿಕೆ ಮತ್ತು ಮಿಲಿಟರಿ ಸನ್ನದ್ಧತೆಗೆ ಭವಿಷ್ಯವನ್ನು ನೋಡುವ ವಿಧಾನವನ್ನು ಅಗತ್ಯವೆಂದು ಅವರು ಹೇಳಿದರು.

ಸಿಂಧೂರ್ ಕಾರ್ಯಾಚರಣೆಯ ಸಮಯದಲ್ಲಿ ಮತ್ತು ನಂತರ ಐಎಎಫ್ ತನ್ನ ಸಿದ್ಧಾಂತಗಳು ಮತ್ತು ಕಾರ್ಯಾಚರಣೆಯ ವಿಧಾನಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದ್ದಕ್ಕಾಗಿ ವಾಯು ಯೋಧರು ತಮಗೆ ನಿಯೋಜಿಸಲಾದ ಕಾರ್ಯಗಳನ್ನು ಯಶಸ್ವಿಯಾಗಿ ನಿರ್ವಹಿಸುವಲ್ಲಿ ಪ್ರದರ್ಶಿಸಿದ ವೃತ್ತಿಪರತೆ, ಸಂಯಮವನ್ನು ರಕ್ಷಣಾ ಸಚಿವರು ಶ್ಲಾಘಿಸಿದರು. ಕಾರ್ಯಾಚರಣೆಯ ಸಮಯದಲ್ಲಿ ಕಲಿತ ಪಾಠಗಳು ಐಎಎಫ್‌ನ ವಿಕಸನಗೊಳ್ಳುತ್ತಿರುವ ಕಾರ್ಯಾಚರಣೆಯ ಕಾರ್ಯವಿಧಾನಗಳಲ್ಲಿ, ವಿಶೇಷವಾಗಿ ರಾಷ್ಟ್ರೀಯ ಭದ್ರತೆಗೆ ಪ್ರಮುಖವಾದ ಡ್ರೋನ್‌ಗಳು ಮತ್ತು ವಾಯು ರಕ್ಷಣಾ ವ್ಯವಸ್ಥೆಗಳ ಮೇಲಿನ ಹೆಚ್ಚಿನ ಒತ್ತು ಮೂಲಕ ಸ್ಪಷ್ಟವಾಗಿ ಪ್ರತಿಫಲಿಸುತ್ತದೆ ಎಂದು ಅವರು ಹೇಳಿದರು. ಈ ಪಾಠಗಳು ರಕ್ಷಣಾ ಪಡೆಗಳಲ್ಲಿ ನಡೆಯುತ್ತಿರುವ ಪರಿವರ್ತನಾತ್ಮಕ ಬದಲಾವಣೆಗಳ ವೇಗ ಮತ್ತು ದಿಕ್ಕನ್ನು ರೂಪಿಸುತ್ತಿವೆ ಎಂದು ಅವರು ಹೇಳಿದರು.

ಸಿಂಧೂರ್ ಕಾರ್ಯಾಚರಣೆ ವೇಳೆ ಪರಿಣಾಮಕಾರಿಯಾಗಿ ಪ್ರದರ್ಶಿಸಲಾದ ಮೂರು ಪಡೆಗಳ ಸಂಘಟಿತ ಮತ್ತು ಪೂರಕ ಕೊಡುಗೆಗಳನ್ನು ಪ್ರಮುಖವಾಗಿ ಪ್ರಸ್ತಾಪಿಸಿದ ಶ್ರೀ ರಾಜನಾಥ್ ಸಿಂಗ್, ರಕ್ಷಣಾ ಪಡೆಗಳ ನಡುವಿನ ಸಮನ್ವಯ ಮತ್ತು ಏಕೀಕರಣಕ್ಕಾಗಿ ಅವರನ್ನು ಅಭಿನಂದಿಸಿದರು. ಮಿಲಿಟರಿ ಯೋಜನೆ ಮತ್ತು ಕಾರ್ಯಾಚರಣೆಯ ಅನುಷ್ಠಾನಕ್ಕೆ ಮಾರ್ಗದರ್ಶನ ನೀಡಲು ಜಂಟಿ ಮತ್ತು ಸಮಗ್ರ ಪ್ರಯತ್ನಗಳು ಮುಂದುವರಿಯಬೇಕು ಎಂದು ಅವರು ಪ್ರತಿಪಾದಿಸಿದರು.

ಕ್ಷಿಪ್ರ ತಾಂತ್ರಿಕ ಪ್ರಗತಿಗೆ ಅನುಗುಣವಾಗಿ ಐಎಎಫ್ ತನ್ನ ಸಿಬ್ಬಂದಿಯ ಕೌಶಲ್ಯ ಮತ್ತು ಸಾಮರ್ಥ್ಯಗಳನ್ನು ಹೆಚ್ಚಿಸಿದ್ದಕ್ಕಾಗಿ ಶ್ಲಾಘಿಸಿದ ಅವರು, ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ವಾಯು ಯೋಧರಿಗೆ ತರಬೇತಿ ನೀಡುವ ಪ್ರಯತ್ನಗಳನ್ನು ಮುಂದುವರಿಸಲು ರಕ್ಷಣಾ ಸಚಿವರು ಕಮಾಂಡರ್‌ಗಳಿಗೆ ಕರೆ ನೀಡಿದರು. ಯುವ ನೇಮಕಾತಿದಾರರ ತಾಂತ್ರಿಕ ಜ್ಞಾನ ಮತ್ತು ಪರಿಣತಿಯನ್ನು ಬಳಸಿಕೊಳ್ಳುವ ಪ್ರಾಮುಖ್ಯತೆಯನ್ನು ತಿಳಿಸಿದ ಅವರು, ಅವರ ಸಾಮರ್ಥ್ಯಗಳು ಬಲವಾದ ನಿರ್ಧಾರ ತೆಗೆದುಕೊಳ್ಳುವಿಕೆ ಮತ್ತು ಸಾಂಸ್ಥಿಕ ಅಭಿವೃದ್ಧಿಗೆ ಗಮನಾರ್ಹವಾಗಿ ಕೊಡುಗೆ ನೀಡಬಹುದು ಎಂದು ಹೇಳಿದರು.

ಅಗ್ನಿವೀರ್‌ಗಳಿಗಾಗಿ ಎರಡನೇ ಕರ್ತವ್ಯ ಪ್ರವಾಸದ ಕುರಿತು ಮಾತನಾಡಿದ ಶ್ರೀ ರಾಜನಾಥ್ ಸಿಂಗ್ ರಕ್ಷಣಾ ಪಡೆಗಳಿಂದ ಬಂದ ಪ್ರತಿಕ್ರಿಯೆಯ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು. ನೀತಿ ನಿರ್ಧಾರಗಳಲ್ಲಿ ಸೇವೆಗಳ ಸಲಹೆಗಳನ್ನು ಸೇರಿಸುವ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿದರು. 'ಎರಡನೇ ಕರ್ತವ್ಯ ಪ್ರವಾಸ' ಉಪಕ್ರಮವು ಮೂರು ಸೇವೆಗಳನ್ನು ಮತ್ತಷ್ಟು ಬಲಪಡಿಸಲು ಕೊಡುಗೆ ನೀಡುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಈ ಸಮ್ಮೇಳನದ ಭಾಗವಾಗಿ, ಭಾರತೀಯ ವಾಯುಪಡೆಯ (ಐಎಎಫ್) 'ಡಿಜಿಟಲೀಕರಣ, ಸ್ವಯಂಚಾಲನೆ, ಕೃತಕ ಬುದ್ಧಿಮತ್ತೆ ಮತ್ತು ಅಪ್ಲಿಕೇಶನ್ ನೆಟ್‌ವರ್ಕಿಂಗ್ ಘಟಕ'ದ (UDAAN) 'ಕೃತಕ ಬುದ್ಧಿಮತ್ತೆ ಶ್ರೇಷ್ಠತಾ ಕೇಂದ್ರ'ವು  ಸ್ವತಃ ಅಭಿವೃದ್ಧಿಪಡಿಸಿದ ಕೃತಕ ಬುದ್ಧಿಮತ್ತೆ (ಎಐ) ಅಪ್ಲಿಕೇಷನ್‌ಗಳ ಸರಣಿಯನ್ನು ರಕ್ಷಣಾ ಸಚಿವರು ಬಿಡುಗಡೆ ಮಾಡಿದರು. ಈ ಅಪ್ಲಿಕೇಶನ್‌ಗಳನ್ನು ಕಾರ್ಯಾಚರಣೆ, ಆಡಳಿತ ಮತ್ತು ಏರೋಸ್ಪೇಸ್ ಸುರಕ್ಷತೆಗೆ ಸಂಬಂಧಿಸಿದ ಕಾರ್ಯಗಳನ್ನು ಸ್ವಯಂಚಾಲಿತಗೊಳಿಸಲು ಹಾಗೂ ತ್ವರಿತಗೊಳಿಸಲು ಬಳಸಲಾಗುತ್ತದೆ ಮತ್ತು ಇವುಗಳನ್ನು ಭಾರತೀಯ ವಾಯುಪಡೆಯ ಸುರಕ್ಷಿತ ನೆಟ್‌ವರ್ಕ್‌ನಲ್ಲಿ ಅಳವಡಿಸಲಾಗಿದೆ. ಈ ಉಪಕ್ರಮವು ತಂತ್ರಜ್ಞಾನ-ಆಧಾರಿತ ಪರಿವರ್ತನೆ ಮತ್ತು ವರ್ಧಿತ ಕಾರ್ಯಾಚರಣಾ ಸಾಮರ್ಥ್ಯಗಳನ್ನು ಸಾಧಿಸುವ ನಿಟ್ಟಿನಲ್ಲಿ ಭಾರತೀಯ ವಾಯುಪಡೆಯು ಕೈಗೊಂಡಿರುವ ಪ್ರಯತ್ನದಲ್ಲಿ ಒಂದು ಪ್ರಮುಖ ಮೈಲಿಗಲ್ಲಾಗಿದೆ.

ಉದ್ಘಾಟನಾ ಗೋಷ್ಠಿಯಲ್ಲಿ ರಕ್ಷಣಾ ರಾಜ್ಯ ಖಾತೆ ಸಚಿವರಾದ ಶ್ರೀ ಸಂಜಯ್ ಸೇಠ್, ವಾಯುಪಡೆ ಮುಖ್ಯಸ್ಥರಾದ ಏರ್ ಚೀಫ್ ಮಾರ್ಷಲ್ ಅಶುತೋಷ್ ದೀಕ್ಷಿತ್, ರಕ್ಷಣಾ ಕಾರ್ಯದರ್ಶಿ ಶ್ರೀ ರಾಜೇಶ್ ಕುಮಾರ್ ಸಿಂಗ್, ರಕ್ಷಣಾ ಉತ್ಪಾದನಾ ಕಾರ್ಯದರ್ಶಿ ಶ್ರೀ ಸಂಜೀವ್ ಕುಮಾರ್ ಮತ್ತು ರಕ್ಷಣಾ ಹಣಕಾಸು ಕಾರ್ಯದರ್ಶಿ ಶ್ರೀ ವಿಶ್ವಜಿತ್ ಸಹಾಯ್ ಅವರು ಉಪಸ್ಥಿತರಿದ್ದರು. ಎರಡು ದಿನಗಳ ಕಾಲ ನಡೆಯುವ ಈ ಸಮ್ಮೇಳನದಲ್ಲಿ ಭಾರತೀಯ ವಾಯುಪಡೆಯ ಎಲ್ಲಾ ಕಮಾಂಡ್‌ಗಳ 'ಏರ್ ಆಫೀಸರ್ಸ್ ಕಮಾಂಡಿಂಗ್-ಇನ್-ಚೀಫ್'ಗಳು, ಎಲ್ಲಾ ಪ್ರಧಾನ ಸಿಬ್ಬಂದಿ ಅಧಿಕಾರಿಗಳು ಮತ್ತು ಎಲ್ಲಾ ಮಹಾನಿರ್ದೇಶಕರು  ಭಾಗವಹಿಸುತ್ತಿದ್ದಾರೆ.

ಈ ವರ್ಷದ ಸಮ್ಮೇಳನದ ಘೋಷವಾಕ್ಯವು 'ಸಬಲೀಕರಣದ ವರ್ಷ: ವಿಕೇಂದ್ರೀಕರಣದ ಮೂಲಕ ದಕ್ಷತೆ ಗರಿಷ್ಠಗೊಳಿಸುವುದು'  ಎಂಬುದಾಗಿದೆ. ಈ ಸಮ್ಮೇಳನವು ಭಾರತೀಯ ವಾಯುಪಡೆಯ ಹಿರಿಯ ನಾಯಕತ್ವಕ್ಕೆ ಕಾರ್ಯಾಚರಣೆ, ನಿರ್ವಹಣೆ ಮತ್ತು ಆಡಳಿತಕ್ಕೆ ಸಂಬಂಧಿಸಿದ ನಿರ್ಣಾಯಕ ವಿಷಯಗಳ ಕುರಿತು ಚರ್ಚಿಸಲು ಒಂದು ವೇದಿಕೆಯನ್ನು ಒದಗಿಸುತ್ತದೆ.

 

*****


(ಪ್ರಕಟಣೆ ಐ.ಡಿ.: 2335384) ವಿಸಿಟರ್ ಕೌಂಟರ್ : 8
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Tamil