ಪ್ರಕಟಣಾ ದಿನಾಂಕ:
11 NOV 2026 9:56AM by PIB Bengaluru
ಭಾರತದ ಅಲೈಡ್ ಮತ್ತು ಹೆಲ್ತ್ಕೇರ್ (ಅರೆ ವೈದ್ಯಕೀಯ) ಸಿಬ್ಬಂದಿ ವರ್ಗವನ್ನು ಬಲಪಡಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿ, ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಡಿಯಲ್ಲಿನ 'ಅರೆ ವೈಯಕೀಯ ವೃತ್ತಿಗಳ ಆಯೋಗ' ವು (ಎನ್ಸಿಎಹೆಚ್ಪಿ), ಅರ್ಹ ಅಲೈಡ್ ಮತ್ತು ಹೆಲ್ತ್ಕೇರ್ ವೃತ್ತಿಪರರ ತಾತ್ಕಾಲಿಕ ನೋಂದಣಿಗಾಗಿ ಸಮಗ್ರ ನಿಯಂತ್ರಣ ಚೌಕಟ್ಟನ್ನು ಪ್ರಸ್ತಾಪಿಸಿದೆ. ಕೌಶಲ್ಯ ಉನ್ನತೀಕರಣ, ಸಾಮರ್ಥ್ಯ ಮೌಲ್ಯಮಾಪನ ಮತ್ತು ಖಾಯಂ ನೋಂದಣಿಗೆ ಬದಲಾಗಲು ಇದು ಸ್ಪಷ್ಟವಾದ ಮಾರ್ಗಗಳನ್ನು ಹೊಂದಿದೆ.
ನಿಗದಿತ ಮಾನದಂಡಗಳಿಗೆ ಅನುಗುಣವಾಗಿ ತಮ್ಮ ಅರ್ಹತೆಗಳು ಮತ್ತು ಸಾಮರ್ಥ್ಯಗಳನ್ನು ಹೆಚ್ಚಿಸಿಕೊಳ್ಳಲು ಅರ್ಹ ವೃತ್ತಿಪರರಿಗೆ ರಚನಾತ್ಮಕ ಅವಕಾಶಗಳನ್ನು ಸೃಷ್ಟಿಸುವುದರೊಂದಿಗೆ, ವೃತ್ತಿಪರ ನೋಂದಣಿಯಲ್ಲಿ ಹೆಚ್ಚಿನ ಏಕರೂಪತೆ, ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ತರುವುದು ಪ್ರಸ್ತಾವಿತ ಚೌಕಟ್ಟಿನ ಗುರಿಯಾಗಿದೆ.
ಈ ನಿಟ್ಟಿನಲ್ಲಿ, ರಾಷ್ಟ್ರೀಯ ಅಲೈಡ್ ಮತ್ತು ಹೆಲ್ತ್ಕೇರ್ ವೃತ್ತಿಗಳ ಕಾಯ್ದೆ 2021 ರ ಅಡಿಯಲ್ಲಿ ರೂಪಿಸಲಾದ 'ಅಲೈಡ್ ಮತ್ತು ಹೆಲ್ತ್ಕೇರ್ ವೃತ್ತಿಪರರ ತಾತ್ಕಾಲಿಕ ನೋಂದಣಿ ಕರಡು ನಿಯಮಾವಳಿಗಳು, 2026' ರ ಕುರಿತು ಸಾರ್ವಜನಿಕರು ಮತ್ತು ಪಾಲುದಾರರಿಂದ ಎನ್ಸಿಎಹೆಚ್ಪಿ ಪ್ರತಿಕ್ರಿಯೆಗಳನ್ನು ಆಹ್ವಾನಿಸಿದೆ.
ವೃತ್ತಿಪರ ನೋಂದಣಿ ಮತ್ತು ವೃತ್ತಿ ಪ್ರಗತಿಗೆ ರಚನಾತ್ಮಕ ಮಾರ್ಗ
ಎನ್ಸಿಎಹೆಚ್ಪಿ ಕಾಯ್ದೆ-2021 ರ ನಿಬಂಧನೆಗಳಿಗೆ ಅನುಗುಣವಾಗಿ ಅರ್ಹ ಅಲೈಡ್ ಮತ್ತು ಹೆಲ್ತ್ಕೇರ್ ವೃತ್ತಿಪರರ ತಾತ್ಕಾಲಿಕ ನೋಂದಣಿಗಾಗಿ ಪಾರದರ್ಶಕ ಮತ್ತು ಪ್ರಮಾಣಿತ ಕಾರ್ಯವಿಧಾನವನ್ನು ಸ್ಥಾಪಿಸುವುದು ಪ್ರಸ್ತಾವಿತ ನಿಯಮಾವಳಿಗಳ ಪ್ರಮುಖ ಉದ್ದೇಶವಾಗಿದೆ.
ಈ ಚೌಕಟ್ಟು ನಿಗದಿತ ಅರ್ಹತಾ ಮಾನದಂಡಗಳು, ರುಜುವಾತುಗಳ ಪರಿಶೀಲನೆ ಮತ್ತು ಸ್ಪಷ್ಟವಾಗಿ ವ್ಯಾಖ್ಯಾನಿಸಲಾದ ನೋಂದಣಿ ಕಾರ್ಯವಿಧಾನಗಳನ್ನು ಒದಗಿಸುತ್ತದೆ. ಇದರಿಂದಾಗಿ ವೃತ್ತಿಪರ ಮಾನ್ಯತೆಯು ಶಾಸನಬದ್ಧ ಅವಶ್ಯಕತೆಗಳು ಮತ್ತು ಸಾಮರ್ಥ್ಯದ ಮಾನದಂಡಗಳೊಂದಿಗೆ ಹೊಂದಿಕೆಯಾಗುವುದನ್ನು ಖಚಿತಪಡಿಸುತ್ತದೆ.
ಮುಖ್ಯವಾಗಿ, ಪ್ರಸ್ತಾವಿತ ನಿಯಮಾವಳಿಗಳು ಅರ್ಹ ತಾತ್ಕಾಲಿಕವಾಗಿ ನೋಂದಾಯಿತ ವೃತ್ತಿಪರರಿಗೆ ಖಾಯಂ ನೋಂದಣಿಯ ಅವಶ್ಯಕತೆಗಳನ್ನು ಪೂರೈಸಲು, ಅನ್ವಯವಾಗುವಲ್ಲಿ ಕೌಶಲ್ಯ ವರ್ಧನೆಗಾಗಿ ನಿಗದಿತ ಬ್ರಿಡ್ಜ್ ಕೋರ್ಸ್ಗಳು, ಮೇಲ್ವಿಚಾರಣೆಯ ಕ್ಲಿನಿಕಲ್ ತರಬೇತಿ ಮತ್ತು ಕನಿಷ್ಠ ಅರ್ಹತಾ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಅವಕಾಶಗಳನ್ನು ಒದಗಿಸುತ್ತವೆ.
ಈ ಸಾಮರ್ಥ್ಯ-ಆಧಾರಿತ ವಿಧಾನವು ನಿರಂತರ ವೃತ್ತಿಪರ ಅಭಿವೃದ್ಧಿಯನ್ನು ಉತ್ತೇಜಿಸಲು, ವೃತ್ತಿಜೀವನದ ಪ್ರಗತಿಯನ್ನು ಸುಗಮಗೊಳಿಸಲು ಮತ್ತು ಅಲೈಡ್ ಮತ್ತು ಹೆಲ್ತ್ಕೇರ್ ಸೇವೆಗಳ ಗುಣಮಟ್ಟವನ್ನು ಬಲಪಡಿಸಲು ಪ್ರಯತ್ನಿಸುತ್ತದೆ.
ವೃತ್ತಿಪರ ಮಾನದಂಡಗಳು ಮತ್ತು ಆರೋಗ್ಯ ಸೇವೆಯ ಗುಣಮಟ್ಟವನ್ನು ಬಲಪಡಿಸುವುದು
ಪ್ರಸ್ತಾವಿತ ಚೌಕಟ್ಟು ಕೌಶಲ್ಯ ಅಭಿವೃದ್ಧಿ, ವೃತ್ತಿಪರ ಸಾಮರ್ಥ್ಯ ಮತ್ತು ನಿಯಂತ್ರಕ ಹೊಣೆಗಾರಿಕೆಗೆ ಒತ್ತು ನೀಡುತ್ತದೆ.
ನಿಗದಿತ ಶೈಕ್ಷಣಿಕ ಮತ್ತು ಸಾಮರ್ಥ್ಯದ ಅವಶ್ಯಕತೆಗಳೊಂದಿಗೆ ಖಾಯಂ ನೋಂದಣಿಗೆ ಪ್ರಗತಿಯನ್ನು ಜೋಡಿಸುವ ಮೂಲಕ, ಅಲೈಡ್ ಮತ್ತು ಹೆಲ್ತ್ಕೇರ್ ವೃತ್ತಿಪರರು ಗುಣಮಟ್ಟದ ಆರೋಗ್ಯ ಸೇವೆಗಳನ್ನು ನೀಡಲು ಅಗತ್ಯವಾದ ಜ್ಞಾನ, ಕೌಶಲ್ಯ ಮತ್ತು ಕ್ಲಿನಿಕಲ್ ಸಾಮರ್ಥ್ಯಗಳನ್ನು ಹೊಂದಿದ್ದಾರೆಂದು ಖಚಿತಪಡಿಸಿಕೊಳ್ಳಲು ಈ ನಿಯಮಾವಳಿಗಳು ಪ್ರಯತ್ನಿಸುತ್ತವೆ.
ಈ ಉಪಕ್ರಮವು ರೋಗಿಗಳ ಸುರಕ್ಷತೆ ಮತ್ತು ಆರೋಗ್ಯ ಸೇವೆಯ ವಿತರಣೆಯ ಮಾನದಂಡಗಳನ್ನು ಬಲಪಡಿಸುವ ಜೊತೆಗೆ ಹೆಚ್ಚು ನುರಿತ, ಸಂಘಟಿತ ಮತ್ತು ವೃತ್ತಿಪರವಾಗಿ ಜವಾಬ್ದಾರಿಯುತ ಸಿಬ್ಬಂದಿ ವರ್ಗವನ್ನು ನಿರ್ಮಿಸಲು ಕೊಡುಗೆ ನೀಡುವ ನಿರೀಕ್ಷೆಯಿದೆ.
ಹೆಚ್ಚಿನ ಪಾರದರ್ಶಕತೆ ಮತ್ತು ದಕ್ಷತೆಗಾಗಿ ಡಿಜಿಟಲ್ ನೋಂದಣಿ
ಅರ್ಜಿ ಸಲ್ಲಿಕೆ, ರುಜುವಾತು ಪರಿಶೀಲನೆ, ಅರ್ಹತಾ ಮೌಲ್ಯಮಾಪನ ಮತ್ತು ತಾತ್ಕಾಲಿಕ ನೋಂದಣಿ ಪ್ರಮಾಣಪತ್ರಗಳ ವಿತರಣೆಯನ್ನು ಸುಗಮಗೊಳಿಸಲು ಸಮಗ್ರ ಆನ್ಲೈನ್ ನೋಂದಣಿ ವ್ಯವಸ್ಥೆಯನ್ನು ಕರಡು ನಿಯಮಾವಳಿಗಳು ಒಳಗೊಂಡಿವೆ.
ತಾತ್ಕಾಲಿಕ ನೋಂದಣಿಯನ್ನು ಪಡೆದ ಅರ್ಹ ವೃತ್ತಿಪರರು 'ತಾತ್ಕಾಲಿಕ ನೋಂದಣಿ ವಿಶಿಷ್ಟ ಗುರುತಿನ ಸಂಖ್ಯೆಯನ್ನು' (ಪಿಆರ್-ಯುಐಡಿ) ಸ್ವೀಕರಿಸುತ್ತಾರೆ, ಇದು ವ್ಯವಸ್ಥಿತ ಗುರುತಿಸುವಿಕೆ ಮತ್ತು ನಿಯಂತ್ರಕ ಮೇಲ್ವಿಚಾರಣೆಯನ್ನು ಸಕ್ರಿಯಗೊಳಿಸುತ್ತದೆ.
ಡಿಜಿಟಲ್ ಕಾರ್ಯವಿಧಾನವು ನೋಂದಣಿ ಪ್ರಕ್ರಿಯೆಗಳನ್ನು ಸರಳಗೊಳಿಸುವ, ಪ್ರವೇಶಿಸುವಿಕೆಯನ್ನು ಸುಧಾರಿಸುವ ಮತ್ತು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಾದ್ಯಂತ ಹೆಚ್ಚಿನ ಪಾರದರ್ಶಕತೆ, ದಕ್ಷತೆ ಮತ್ತು ಏಕರೂಪತೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.
ಪ್ರಸ್ತಾವಿತ ನಿಯಮಾವಳಿಗಳ ಪ್ರಮುಖ ವೈಶಿಷ್ಟ್ಯಗಳು
ಕರಡು ನಿಯಮಾವಳಿಗಳು ಈ ಕೆಳಗಿನವುಗಳನ್ನು ಒದಗಿಸುತ್ತವೆ:
- ತಾತ್ಕಾಲಿಕ ನೋಂದಣಿಗಾಗಿ ಪ್ರಮಾಣಿತ ಅರ್ಹತಾ ಮಾನದಂಡಗಳು ಮತ್ತು ಕಾರ್ಯವಿಧಾನಗಳು.
- ಆನ್ಲೈನ್ ಅರ್ಜಿ, ಪರಿಶೀಲನೆ ಮತ್ತು ವಿಶಿಷ್ಟ ಗುರುತಿನ ಸಂಖ್ಯೆಗಳೊಂದಿಗೆ ನೋಂದಣಿ ಪ್ರಮಾಣಪತ್ರಗಳ ವಿತರಣೆ.
- ತಾತ್ಕಾಲಿಕ ನೋಂದಣಿಗೆ ಸಂಬಂಧಿಸಿದ ಮಾನ್ಯತೆ, ವಿಸ್ತರಣೆ, ಮುಕ್ತಾಯ ಮತ್ತು ಮೇಲ್ಮನವಿಗಳಿಗೆ ಸ್ಪಷ್ಟವಾಗಿ ವ್ಯಾಖ್ಯಾನಿಸಲಾದ ನಿಬಂಧನೆಗಳು.
- ಅನ್ವಯಿಸುವಲ್ಲಿ, ಕೌಶಲ್ಯ ವರ್ಧನೆ, ಸಾಮರ್ಥ್ಯ ಮೌಲ್ಯಮಾಪನ ಮತ್ತು ಅರ್ಹತಾ ಪರೀಕ್ಷೆಗಳಿಗಾಗಿ ನಿಗದಿತ ಬ್ರಿಡ್ಜ್ ಕೋರ್ಸ್ಗಳು.
- ಮೇಲ್ವಿಚಾರಣೆಯ ಕ್ಲಿನಿಕಲ್ ತರಬೇತಿ ಮತ್ತು ವೃತ್ತಿಪರ ಕೌಶಲ್ಯ ಅಭಿವೃದ್ಧಿಗೆ ಸಾಂಸ್ಥಿಕ ಅವಶ್ಯಕತೆಗಳು.
- ನಿಗದಿತ ಷರತ್ತುಗಳ ಪೂರೈಕೆಗೆ ಒಳಪಟ್ಟು ಸೂಕ್ತವಾದ ಕೇಂದ್ರ ಅಥವಾ ರಾಜ್ಯ ರಿಜಿಸ್ಟರ್ನಲ್ಲಿ ಖಾಯಂ ನೋಂದಣಿಗೆ ಬದಲಾವಣೆ.
ಒಟ್ಟಾರೆಯಾಗಿ, ಈ ನಿಬಂಧನೆಗಳು ಆರೋಗ್ಯ ಸೇವೆಗಳ ಮಾನದಂಡಗಳನ್ನು ಕಾಯ್ದುಕೊಳ್ಳುವ ಜೊತೆಗೆ ವೃತ್ತಿಪರ ಅಭಿವೃದ್ಧಿಯನ್ನು ಬೆಂಬಲಿಸುವ ದೃಢವಾದ, ಪಾರದರ್ಶಕ ಮತ್ತು ಸಾಮರ್ಥ್ಯ-ಆಧಾರಿತ ನೋಂದಣಿ ವ್ಯವಸ್ಥೆಯನ್ನು ಸ್ಥಾಪಿಸುವ ಗುರಿಯನ್ನು ಹೊಂದಿವೆ.
4 ಡಿಸೆಂಬರ್ 2026ರ ಒಳಗೆ ಪಾಲುದಾರರ ಪ್ರತಿಕ್ರಿಯೆ ಆಹ್ವಾನಿಸಿದ ಎನ್ಸಿಎಹೆಚ್ಪಿ
ಪಾರದರ್ಶಕ ಮತ್ತು ಪಾಲ್ಗೊಳ್ಳುವಿಕೆಯ ನಿಯಂತ್ರಣದ ಬದ್ಧತೆಯ ಭಾಗವಾಗಿ, ಅಲೈಡ್ ಮತ್ತು ಹೆಲ್ತ್ಕೇರ್ ವೃತ್ತಿಪರರು, ವೃತ್ತಿಪರ ಸಂಘಗಳು, ಶೈಕ್ಷಣಿಕ ಸಂಸ್ಥೆಗಳು, ರಾಜ್ಯ ಅಲೈಡ್ ಮತ್ತು ಹೆಲ್ತ್ಕೇರ್ ಕೌನ್ಸಿಲ್ಗಳು, ಆರೋಗ್ಯ ಸಂಸ್ಥೆಗಳು, ತಜ್ಞರು ಮತ್ತು ಸಾರ್ವಜನಿಕರಿಂದ ಪ್ರತಿಕ್ರಿಯೆಗಳು, ಸಲಹೆಗಳು ಮತ್ತು ಆಕ್ಷೇಪಣೆಗಳನ್ನು ಎನ್ಸಿಎಹೆಚ್ಪಿ ಆಹ್ವಾನಿಸಿದೆ.
ಕರಡು ನಿಯಮಾವಳಿಗಳು ಎನ್ಸಿಎಹೆಚ್ಪಿ ಅಧಿಕೃತ ವೆಬ್ಸೈಟ್ನಲ್ಲಿ ಲಭ್ಯವಿವೆ: https://ncahp.abdm.gov.in/
ಪಾಲುದಾರರು ತಮ್ಮ ಪ್ರತಿಕ್ರಿಯೆಯನ್ನು ncahp.regulations@ncahp.mohfw.gov.in ವಿಳಾಸಕ್ಕೆ 4 ಡಿಸೆಂಬರ್ 2026 ರೊಳಗೆ ಸಲ್ಲಿಸಬಹುದು.
ಸ್ವೀಕರಿಸಿದ ಅಭಿಪ್ರಾಯಗಳನ್ನು ನಿಯಮಾವಳಿಗಳನ್ನು ಅಂತಿಮಗೊಳಿಸುವ ಮೊದಲು ಪರಿಗಣಿಸಲಾಗುತ್ತದೆ.
ದೇಶದ ವಿಕಸನಗೊಳ್ಳುತ್ತಿರುವ ಆರೋಗ್ಯ ಅಗತ್ಯಗಳನ್ನು ಪೂರೈಸಲು, ಭಾರತದ ಅಲೈಡ್ ಮತ್ತು ಹೆಲ್ತ್ಕೇರ್ ಸಿಬ್ಬಂದಿಯನ್ನು ಬಲಪಡಿಸುವ ಹಾಗೂ ವೃತ್ತಿಪರ ಬೆಳವಣಿಗೆಯನ್ನು ಬೆಂಬಲಿಸುವ, ಹೆಚ್ಚು ಪಾರದರ್ಶಕ, ಅಂತರ್ಗತ ಮತ್ತು ಸಾಮರ್ಥ್ಯ-ಚಾಲಿತ ನಿಯಂತ್ರಕ ಪರಿಸರ ವ್ಯವಸ್ಥೆಯನ್ನು ಸ್ಥಾಪಿಸುವ ನಿಟ್ಟಿನಲ್ಲಿ ಪ್ರಸ್ತಾವಿತ ಉಪಕ್ರಮವು ಪ್ರಮುಖ ಹೆಜ್ಜೆಯಾಗಿದೆ.
*****