ಪ್ರಕಟಣಾ ದಿನಾಂಕ:
10 NOV 2026 6:30PM by PIB Bengaluru
ವೈದ್ಯಕೀಯ ಉಪಕರಣಗಳ ದೇಶೀಯ ಉತ್ಪಾದನೆಯನ್ನು ಉತ್ತೇಜಿಸುವ ಉದ್ದೇಶದಿಂದ, ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ (PLI-MD) ಯೋಜನೆಯಡಿ ಭಾರತ ಸರ್ಕಾರವು ಹೊಸ ಅರ್ಜಿಗಳನ್ನು ಆಹ್ವಾನಿಸಿದ್ದು, ಈ ಯೋಜನೆಯನ್ನು ಈಗ 2035–36 ರವರೆಗೆ ವಿಸ್ತರಿಸಲಾಗಿದೆ. ಈ ಯೋಜನೆಯಡಿ ಲಭ್ಯವಿರುವ ಸುಮಾರು ₹2,700 ಕೋಟಿ ಅನುದಾನವನ್ನು ಈ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗುವುದು. ಮುಂದಿನ 10 ದಿನಗಳಲ್ಲಿ ಕಾರ್ಯಾಚರಣೆಗೆ ಬರಲಿರುವ ಆನ್ಲೈನ್ ಪೋರ್ಟಲ್ ಮೂಲಕ ಅರ್ಜಿದಾರರು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
2020-21ರಲ್ಲಿ ಪ್ರಾರಂಭಿಸಲಾದ ಪಿಎಲ್ಐ-ಎಮ್ಡಿ (PLI-MD) ಯೋಜನೆಯು ಇದುವರೆಗೆ ಎಕ್ಸ್-ರೇ ಟ್ಯೂಬ್ಗಳು ಮತ್ತು ಡಿಟೆಕ್ಟರ್ಗಳು, 1.5T MRI, LINAC, ಸಿಟಿ ಸ್ಕ್ಯಾನರ್ಗಳು, ಮ್ಯಾಮೊಗ್ರಫಿ ಯಂತ್ರಗಳು, ಕ್ಯಾಥ್ಲ್ಯಾಬ್, ಆರ್ಥೋಪಿಡಿಕ್ ಮತ್ತು ಕಾರ್ಡಿಯಾಕ್ ಇಂಪ್ಲಾಂಟ್ಗಳು, ಡಯಾಲೈಸರ್ಗಳು ಸೇರಿದಂತೆ 60 ಕ್ಕೂ ಹೆಚ್ಚು ಅತ್ಯಾಧುನಿಕ ವೈದ್ಯಕೀಯ ಉಪಕರಣಗಳು ಮತ್ತು ಬಿಡಿಭಾಗಗಳ ದೇಶೀಯ ಉತ್ಪಾದನೆಗೆ ಕಾರಣವಾಗಿದೆ. ಈ ಯೋಜನೆಯು ₹16,000 ಕೋಟಿಗೂ ಹೆಚ್ಚಿನ ಮೌಲ್ಯದ ಉತ್ಪಾದನೆಗೆ ಸಾಕ್ಷಿಯಾಗಿದೆ.
ಯೋಜನೆಯ ಮೊದಲ ಹಂತದ ಕಲಿಕೆಗಳ ಆಧಾರದ ಮೇಲೆ, ಅರ್ಹತಾ ಷರತ್ತುಗಳು ಹಾಗೂ ಅರ್ಜಿದಾರರು ಪ್ರೋತ್ಸಾಹಧನವನ್ನು ಪಡೆಯುವ ಪ್ರಕ್ರಿಯೆಯಲ್ಲಿ ಹಲವಾರು ಸರಳೀಕರಣಗಳನ್ನು ಮಾಡಲಾಗಿದೆ.
ಅರ್ಜಿದಾರರಿಗೆ 4 ವಿಭಾಗಗಳಲ್ಲಿ (Target Segments - TS) ಯಾವುದರಲ್ಲಾದರೂ ತಮ್ಮ ಉತ್ಪಾದನಾ ಸೌಲಭ್ಯಗಳನ್ನು ಸ್ಥಾಪಿಸಲು 3 ವರ್ಷಗಳ ಕಾಲಾವಕಾಶ ನೀಡಲಾಗುವುದು: ವೈದ್ಯಕೀಯ ಬಳಕೆ ವಸ್ತುಗಳು, ವಿಲೇವಾರಿ ಮಾಡಬಹುದಾದ ವಸ್ತುಗಳು ಮತ್ತು ಇಂಪ್ಲಾಂಟ್ಗಳು (TS 1), ಕ್ಲಿಷ್ಟಕರ ಬಿಡಿಭಾಗಗಳು (TS 2), ಪ್ರಸ್ತುತ ದೇಶೀಯ ಉತ್ಪಾದನೆಯ ಆರಂಭಿಕ ಹಂತದಲ್ಲಿರುವ ಅತ್ಯಾಧುನಿಕ ವೈದ್ಯಕೀಯ ಉಪಕರಣಗಳು (TS 3) ಮತ್ತು ಪ್ರಸ್ತುತ ದೇಶದಲ್ಲಿ ಕೇವಲ ಜೋಡಣೆ ಮಾತ್ರ ಮಾಡಲಾಗುತ್ತಿರುವ ಅತ್ಯಾಧುನಿಕ ವೈದ್ಯಕೀಯ ಉಪಕರಣಗಳು (TS 4). ಕ್ರಮೇಣ ಕಡಿಮೆಯಾಗುವ ಪ್ರೋತ್ಸಾಹಧನ ದರವು TS 1 ಗೆ ಸರಾಸರಿ ~5%, TS 2 ಮತ್ತು TS 3 ಗೆ ~9%, ಹಾಗೂ TS 4 ಗೆ 6% ಇರಲಿದೆ. ಬಳಕೆ ವಸ್ತುಗಳು ಮತ್ತು ಡಿಸ್ಪೋಸಬಲ್ಗಳ ವಲಯದಲ್ಲಿ ಉತ್ಪಾದನಾ ಪ್ರಮಾಣ ಹಾಗೂ ಜಾಗತಿಕ ಮಟ್ಟದ ಗುಣಮಟ್ಟವನ್ನು ಸೃಷ್ಟಿಸುವುದರ ಮೇಲೆ ಮುಖ್ಯ ಗಮನ ಹರಿಸಲಾಗುವುದು. TS 3 ಮತ್ತು 4ರಲ್ಲಿ ಮೌಲ್ಯ ಸರಪಳಿ ಸಂಯೋಜನೆಗೆ ಆದ್ಯತೆ ನೀಡಲಾಗುವುದು, ಇದರಿಂದ 'ಮೇಡ್ ಇನ್ ಇಂಡಿಯಾ' ಉಪಕರಣಗಳ ಒಟ್ಟಾರೆ ಸ್ಪರ್ಧಾತ್ಮಕತೆ ಮತ್ತು ಗುಣಮಟ್ಟ ಹೆಚ್ಚಾಗಲಿದೆ. ಈ ಯೋಜನೆಯಡಿ ಕ್ಲಿಷ್ಟಕರ ಬಿಡಿಭಾಗಗಳ ಉತ್ಪಾದನೆಗೆ ನೀಡಲಾದ ಗಮನವು ಮೌಲ್ಯ ಸರಪಳಿ ಸಂಯೋಜನೆಯನ್ನು ಸಾಧಿಸಲು ಸಹಾಯ ಮಾಡುತ್ತದೆ ಮತ್ತು ಎಂಎಸ್ಎಂಇ ವಲಯಕ್ಕೂ ಉತ್ತೇಜನ ನೀಡಲಿದೆ.
ಈ ಯೋಜನೆಯಡಿ ಪ್ರೋತ್ಸಾಹಧನವನ್ನು ಪಡೆಯಲು ಕನಿಷ್ಠ ಮಾರಾಟದ ಮಿತಿಯ ಅಗತ್ಯತೆಯನ್ನು ರದ್ದುಗೊಳಿಸಲಾಗಿದೆ ಮತ್ತು ಕನಿಷ್ಠ ಹೂಡಿಕೆಯ ಅಗತ್ಯತೆಯನ್ನೂ ಸಹ ಕಡಿತಗೊಳಿಸಲಾಗಿದೆ. ವ್ಯಾಪಾರ ಸುಲಭಗೊಳಿಸುವಿಕೆಯನ್ನು ಹೆಚ್ಚಿಸಲು, ಯೋಜನೆಯ ಮಾರ್ಗದರ್ಶಿ ಸೂತ್ರಗಳನ್ನು ಹೆಚ್ಚು ಸರಳ ಮತ್ತು ಹೂಡಿಕೆದಾರ ಸ್ನೇಹಿಯಾಗಿ ಮಾಡಲಾಗಿದೆ. ಅರ್ಜಿದಾರರು ಒಂದಕ್ಕಿಂತ ಹೆಚ್ಚು ಗುರಿ ವಲಯಗಳಲ್ಲಿ (TS) ಎಷ್ಟು ಸಂಖ್ಯೆಯ ಅರ್ಜಿಗಳನ್ನು ಬೇಕಾದರೂ ಸಲ್ಲಿಸಲು ಮುಕ್ತರಾಗಿದ್ದು, ಅರ್ಜಿ ಸಲ್ಲಿಸುವ ಅವಧಿಯು ಸುದೀರ್ಘ ಅವಧಿಯವರೆಗೆ ನಿರಂತರವಾಗಿ ತೆರೆದಿರುತ್ತದೆ.
ಪಿಎಲ್ಐ-ಎಮ್ಡಿ 2.0 ಸ್ವಾವಲಂಬಿ ಭಾರತ ಮತ್ತು ಮೇಕ್ ಇನ್ ಇಂಡಿಯಾ ಕಲ್ಪನೆಯನ್ನು ಈಡೇರಿಸುವ, ದೇಶೀಯ ಪೂರೈಕೆ ಸರಪಳಿಗಳನ್ನು ಅಭಿವೃದ್ಧಿಪಡಿಸುವ, ಹೂಡಿಕೆಯನ್ನು ಆಕರ್ಷಿಸುವ, ಉದ್ಯೋಗ ಸೃಷ್ಟಿಸುವ, ಮೇಡ್ ಇನ್ ಇಂಡಿಯಾ ಉಪಕರಣಗಳ ಗುಣಮಟ್ಟವನ್ನು ಸುಧಾರಿಸುವ, ವೈದ್ಯಕೀಯ ಉಪಕರಣಗಳ ಬೆಲೆಯನ್ನು ತಗ್ಗಿಸುವ ಮತ್ತು ಅತ್ಯಾಧುನಿಕ ವೈದ್ಯಕೀಯ ತಂತ್ರಜ್ಞಾನಗಳಲ್ಲಿ ಭಾರತದ ಜಾಗತಿಕ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ವೈದ್ಯಕೀಯ ಉಪಕರಣಗಳ ಆಳವಾದ ಉತ್ಪಾದನೆಯನ್ನು ಉತ್ತೇಜಿಸುವುದು ಹಾಗೂ ಪ್ರಸ್ತುತ ದೇಶದಲ್ಲಿ ಉತ್ಪಾದನೆಯಾಗದ 3T MRI, PET-CT, ಅಲ್ಟ್ರಾಸೌಂಡ್ ಪ್ರೋಬ್ಸ್ & ಕನ್ಸೋಲ್ಸ್, ಹೈ-ಥ್ರೂಪುಟ್ IVD ಅನಲೈಜರ್ಗಳಂತಹ ಅತ್ಯಾಧುನಿಕ ವೈದ್ಯಕೀಯ ಉಪಕರಣಗಳ ಉತ್ಪಾದನೆಯನ್ನು ಉತ್ತೇಜಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
*****