ಶಿಕ್ಷಣ ಸಚಿವಾಲಯ
azadi ka amrit mahotsav

ರಾಷ್ಟ್ರವ್ಯಾಪಿ ಇ-ತ್ಯಾಜ್ಯ ಜಾಗೃತಿ ಮತ್ತು ಸಂಗ್ರಹಣಾ ಅಭಿಯಾನದೊಂದಿಗೆ ಮುಕ್ತಾಯಗೊಂಡ ವಿಶೇಷ ಅಭಿಯಾನ 6


2.85 ಲಕ್ಷ ಶಾಲೆಗಳ 2 ಕೋಟಿಗೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಂದ 58.79 ಲಕ್ಷ ಇ-ತ್ಯಾಜ್ಯ ವಸ್ತುಗಳ ಸಂಗ್ರಹಣೆ

41,181 ಫೈಲ್‌ಗಳ ಪರಿಶೀಲನೆ ಮತ್ತು 31,010 ಫೈಲ್‌ಗಳ ವಿಲೇವಾರಿ; 1,84,828 ಚದರ ಅಡಿ ಕಚೇರಿ ಸ್ಥಳ ಮುಕ್ತ

ಶಾಲೆಗಳಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ

ಪ್ರಕಟಣಾ ದಿನಾಂಕ: 06 NOV 2026 12:43PM by PIB Bengaluru

ಕೇಂದ್ರ ಶಿಕ್ಷಣ ಸಚಿವಾಲಯದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಅಕ್ಟೋಬರ್ 2 ರಿಂದ 31, 2026 ರವರೆಗೆ ಆಡಳಿತಾತ್ಮಕ ದಕ್ಷತೆ, ನೈರ್ಮಲ್ಯ ಮತ್ತು ಜವಾಬ್ದಾರಿಯುತ ಇ-ತ್ಯಾಜ್ಯ ನಿರ್ವಹಣೆಯ ರಾಷ್ಟ್ರವ್ಯಾಪಿ ಗಮನ ಹರಿಸುವುದರೊಂದಿಗೆ, 'ವಿಶೇಷ ಅಭಿಯಾನ 6' ಅನ್ನು ಆಚರಿಸಿತು. ಈ ಅಭಿಯಾನವು ಮಿಷನ್ ಲೈಫ್‌ಗಾಗಿ ಎಕೋ ಕ್ಲಬ್‌ಗಳ (ಅಡಿಯಲ್ಲಿ ಸುಸ್ಥಿರ ಪದ್ಧತಿಗಳನ್ನು ಉತ್ತೇಜಿಸಲು ಮತ್ತು ಪರಿಸರ ಜಾಗೃತಿಯನ್ನು ಹೆಚ್ಚಿಸಲು, ಶಾಲೆಗಳು, ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಮುದಾಯವನ್ನು ಒಗ್ಗೂಡಿಸಿತು.

ಅಧಿಕೃತ ಕೆಲಸದಲ್ಲಿ ಬಾಕಿ ಉಳಿದಿರುವ  ಪ್ರಕರಣಗಳನ್ನು ಕನಿಷ್ಠಗೊಳಿಸುವುದು ಮತ್ತು ದಕ್ಷತೆಯನ್ನು ಹೆಚ್ಚಿಸುವುದು

ಇಲಾಖೆ ಮತ್ತು ಅದರ ಸ್ವಾಯತ್ತ ಸಂಸ್ಥೆಗಳು ಅಧಿಕೃತ ಕೆಲಸದಲ್ಲಿ ಬಾಕಿಯನ್ನು ಕನಿಷ್ಠಗೊಳಿಸುವುದು, ವಿವಿಧ ವರ್ಗಗಳಾದ್ಯಂತ ಫೈಲ್‌ಗಳನ್ನು ಪರಿಶೀಲಿಸುವುದು, ಹಳೆಯ ಫೈಲ್‌ಗಳನ್ನು ವಿಲೇವಾರಿ ಮಾಡುವುದು ಮತ್ತು ದಾಖಲೆ ನಿರ್ವಹಣಾ ಪದ್ಧತಿಗಳನ್ನು ಬಲಪಡಿಸುವುದರ ಮೇಲೆ ಗಮನ ಹರಿಸಿದವು. ಈ ಪ್ರಯತ್ನದ ಒಂದು ಭಾಗವಾಗಿ, 41,181 ಫೈಲ್‌ಗಳನ್ನು ಪರಿಶೀಲಿಸಲಾಯಿತು ಮತ್ತು 31,010 ಫೈಲ್‌ಗಳನ್ನು ವಿಲೇವಾರಿ ಮಾಡಲಾಯಿತು. ಈ ಅಭಿಯಾನದ ಪರಿಣಾಮವಾಗಿ 1,84,828 ಚದರ ಅಡಿ ಕಚೇರಿ ಸ್ಥಳವು ಮುಕ್ತವಾಯಿತು ಮತ್ತು ಗುಜರಿ ವಸ್ತುಗಳ ವಿಲೇವಾರಿಯ ಮೂಲಕ ₹67.27 ಲಕ್ಷ ಆದಾಯ ಗಳಿಕೆಯಾಯಿತು. ಇಲಾಖೆಯ ಅಡಿಯಲ್ಲಿರುವ ಶಾಲೆಗಳು ಮತ್ತು ಕಚೇರಿಗಳಲ್ಲಿ ಏಳು ಲಕ್ಷಕ್ಕೂ ಹೆಚ್ಚು ಸ್ವಚ್ಛತಾ ಅಭಿಯಾನಗಳನ್ನು ನಡೆಸಲಾಯಿತು. 16.9.2026 ರಿಂದ 31.10.2026 ರವರೆಗೆ ನಡೆದ ವಿಶೇಷ ಅಭಿಯಾನ 6 ರ ಆಯೋಜನಾ ಮತ್ತು ಅನುಷ್ಠಾನದ ಹಂತದಲ್ಲಿ ದೇಶಾದ್ಯಂತ 2.85 ಲಕ್ಷ ಶಾಲೆಗಳಿಂದ 2.02 ಕೋಟಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು 58.79 ಲಕ್ಷ ಇ-ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸಿದರು.

ಅಕ್ಟೋಬರ್ 28, 2026 ರಂದು ನಡೆದ ಏಕದಿನ ರಾಷ್ಟ್ರವ್ಯಾಪಿ ಕಾರ್ಯಕ್ರಮ

ವಿಶೇಷ ಅಭಿಯಾನ 6 ರ ಭಾಗವಾಗಿ, ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಸ್ವಾಯತ್ತ ಸಂಸ್ಥೆಗಳಾದ್ಯಂತದ ಶಾಲೆಗಳು ಅಕ್ಟೋಬರ್ 28, 2026 ರಂದು ಬೃಹತ್ ಇ-ತ್ಯಾಜ್ಯ ನಿರ್ವಹಣಾ ಅಭಿಯಾನದಲ್ಲಿ ಭಾಗವಹಿಸಿದ್ದವು. ಇ-ತ್ಯಾಜ್ಯವನ್ನು ಕಡಿಮೆ ಮಾಡುವುದು, ಸಾಧ್ಯವಿರುವ ಕಡೆಯಲ್ಲಿ ಎಲೆಕ್ಟ್ರಾನಿಕ್ ವಸ್ತುಗಳನ್ನು ಮರುಬಳಕೆ ಮಾಡುವುದು ಮತ್ತು ದುರಸ್ತಿ ಮಾಡುವುದು ಹಾಗೂ ತ್ಯಜಿಸಿದ ವಸ್ತುಗಳನ್ನು ಅಧಿಕೃತ ಮರುಬಳಕೆದಾರರು (recyclers) ಮತ್ತು ರಿಫರ್ಬಿಷರ್‌ಗಳಿಗೆ ಹಸ್ತಾಂತರಿಸುವುದನ್ನು ಖಚಿತಪಡಿಸಿಕೊಳ್ಳುವುದು ಈ ಉಪಕ್ರಮದ ಉದ್ದೇಶಗಳಾಗಿದ್ದವು. ಸುಮಾರು 1.89 ಲಕ್ಷ ಶಾಲೆಗಳು ಬೆಳಗಿನ ಪ್ರಾರ್ಥನಾ ಸಭೆಯಲ್ಲಿ ಇ-ತ್ಯಾಜ್ಯದ ಕುರಿತು ರಸಪ್ರಶ್ನೆಯನ್ನು ಆಯೋಜಿಸಿದ್ದವು.

ವಿದ್ಯಾರ್ಥಿಗಳು, ನವದೆಹಲಿಯಲ್ಲಿ ತ್ಯಜಿಸಿದ ಇ-ತ್ಯಾಜ್ಯ ವಸ್ತುಗಳನ್ನು ಬಳಸಿ ತಯಾರಿಸಿದ 'ವೇಸ್ಟ್ ಟು ವಂಡರ್' ಕಲಾಕೃತಿಗಳ ಪ್ರದರ್ಶನದ ಮೂಲಕ ತಮ್ಮ ಸೃಜನಶೀಲತೆಯನ್ನು ಪ್ರದರ್ಶಿಸಿದರು. ತ್ಯಜಿಸಿದ ಎಲೆಕ್ಟ್ರಾನಿಕ್ ಉಪಕರಣಗಳು/ಅವುಗಳ ಭಾಗಗಳನ್ನು ಸೃಜನಶೀಲ ಮತ್ತು ಉಪಯುಕ್ತ ವಸ್ತುಗಳಾಗಿ ಮರುರೂಪಿಸಲಾಯಿತು. ಶಿಕ್ಷಣ ಸಹಾಯಕ ಸಚಿವರಾದ ಶ್ರೀ ಜಯಂತ್ ಚೌಧರಿ ಅವರು ಅದೇ ದಿನ (ಅಕ್ಟೋಬರ್ 28, 2026) ಪ್ರದರ್ಶನಕ್ಕೆ ಭೇಟಿ ನೀಡಿದ್ದರು.

 

ನವದೆಹಲಿಯಲ್ಲಿ ಆಯೋಜಿಸಲಾದ ರಾಷ್ಟ್ರೀಯ ಮಟ್ಟದ ಕಾರ್ಯಕ್ರಮದಲ್ಲಿ, ಅಭಿಯಾನದ ಸಮಯದಲ್ಲಿ ಸಂಗ್ರಹಿಸಲಾದ ಇ-ತ್ಯಾಜ್ಯವನ್ನು ಆಡಳಿತಾತ್ಮಕ ಸುಧಾರಣೆಗಳು ಮತ್ತು ಸಾರ್ವಜನಿಕ ಕುಂದುಕೊರತೆಗಳ ಇಲಾಖೆಯ ಕಾರ್ಯದರ್ಶಿ ಶ್ರೀಮತಿ ನಿವೇದಿತಾ ಶುಕ್ಲಾ ವರ್ಮಾ ಮತ್ತು ಡಿಒಎಸ್ಇಎಲ್ ಕಾರ್ಯದರ್ಶಿ ಶ್ರೀ ಟಿ. ಕೆ. ಅನಿಲ್ ಕುಮಾರ್ ಅವರು ವಿಲೇವಾರಿ ಮತ್ತು ಸಂಸ್ಕರಣೆಗಾಗಿ ಸಿಪಿಸಿಬಿ (CPCB) ಪ್ರಮಾಣೀಕೃತ ಮರುಬಳಕೆದಾರರಿಗೆ ಹಸ್ತಾಂತರಿಸಿದರು.

ಕರ್ತವ್ಯ ಭವನ 2 ರಲ್ಲಿ ಇ-ತ್ಯಾಜ್ಯ ಬಿನ್‌ಗಳು ಮತ್ತು ಮುರಾಲ್ (ಗೋಡೆಚಿತ್ರ) ಸ್ಥಾಪನೆ

ಅಕ್ಟೋಬರ್ 14, 2026 ರಂದು ಅಂತಾರಾಷ್ಟ್ರೀಯ ಇ-ತ್ಯಾಜ್ಯ ದಿನದ ನೆನಪಿಗಾಗಿ, ಡಿಒಎಸ್ಇಎಲ್ (DoSEL) ಕರ್ತವ್ಯ ಭವನ 2 ರಲ್ಲಿ ಇ-ತ್ಯಾಜ್ಯ ಮುರಾಲ್ ಮತ್ತು ಇ-ತ್ಯಾಜ್ಯ ಬಿನ್‌ಗಳನ್ನು ಸ್ಥಾಪಿಸಿತು. ಈ ಮುರಾಲ್ ಅನ್ನು ಶಾಲಾ ವಿದ್ಯಾರ್ಥಿಗಳು ಸಂಗ್ರಹಿಸಿದ 60 ಕೆಜಿ ಇ-ತ್ಯಾಜ್ಯದಿಂದ ತಯಾರಿಸಲಾಗಿತ್ತು.

ಶಾಲಾ ಶಿಕ್ಷಣದ ಮೂಲಕ ಪರಿಸರ ಜವಾಬ್ದಾರಿಯನ್ನು ಬಲಪಡಿಸುವುದು

‘ವಿಶೇಷ ಅಭಿಯಾನ 6’ ಮಕ್ಕಳು ಮತ್ತು ಯುವಜನರಲ್ಲಿ ಪರಿಸರ ಜವಾಬ್ದಾರಿಯುತ ನಡವಳಿಕೆಯನ್ನು ಅಭಿವೃದ್ಧಿಪಡಿಸುವಲ್ಲಿ ಶಾಲೆಗಳ ಪ್ರಮುಖ ಪಾತ್ರವನ್ನು ಪುನರುಚ್ಚರಿಸಿತು. ವಿಶೇಷ ಅಭಿಯಾನ 6 ರ ಆಯೋಜನಾ ಹಂತದಲ್ಲಿ ದೇಶಾದ್ಯಂತದ ಶಾಲೆಗಳಲ್ಲಿ 6.29 ಲಕ್ಷಕ್ಕೂ ಹೆಚ್ಚು ಇ-ತ್ಯಾಜ್ಯ ಜಾಗೃತಿ ಕಾರ್ಯಾಗಾರಗಳನ್ನು ಆಯೋಜಿಸಲಾಗಿತ್ತು. ಇ-ತ್ಯಾಜ್ಯ ಸಂಗ್ರಹಣಾ ಅಭಿಯಾನಗಳು, ಜಾಗೃತಿ ಚಟುವಟಿಕೆಗಳು, ಸೃಜನಶೀಲ ಪ್ರದರ್ಶನಗಳು ಮತ್ತು ಸ್ವಚ್ಛತಾ ಅಭಿಯಾನಗಳ ಮೂಲಕ, ವಿದ್ಯಾರ್ಥಿಗಳಿಗೆ ಪರಿಸರ ಜಾಗೃತಿಯನ್ನು ಅರ್ಥಪೂರ್ಣ ಕ್ರಿಯೆಯಾಗಿ ಪರಿವರ್ತಿಸಲು ಅವಕಾಶಗಳನ್ನು ಒದಗಿಸಲಾಯಿತು.

ಸುಸ್ಥಿರ ಜೀವನಶೈಲಿ ಪದ್ಧತಿಗಳು, ಜವಾಬ್ದಾರಿಯುತ ತ್ಯಾಜ್ಯ ನಿರ್ವಹಣೆ ಮತ್ತು ಶುಚಿಯಾದ ಹಾಗೂ ಆರೋಗ್ಯಕರ ಕಲಿಕಾ ವಾತಾವರಣವನ್ನು ಉತ್ತೇಜಿಸಲು ಮಿಷನ್ ಲೈಫ್‌ಗಾಗಿ ಎಕೋ ಕ್ಲಬ್‌ಗಳ ಅಡಿಯಲ್ಲಿ ಇಲಾಖೆಯು ಶಾಲೆಗಳು ಮತ್ತು ಸಮುದಾಯಗಳಲ್ಲಿ ರಾಷ್ಟ್ರವ್ಯಾಪಿ ಚಟುವಟಿಕೆಗಳನ್ನು ಆಯೋಜಿಸಿತ್ತು.

 

*****


(ಪ್ರಕಟಣೆ ಐ.ಡಿ.: 2333671) ವಿಸಿಟರ್ ಕೌಂಟರ್ : 6
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Tamil