ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

'ವಿಶೇಷ ಅಭಿಯಾನ 6.0'  ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ;  ಅಭಿಯಾನದ ಮೂಲಕ 1.63 ಲಕ್ಷ ಕೆಜಿಗೂ ಅಧಿಕ ತ್ಯಾಜ್ಯ ವಿಲೇವಾರಿ ಮಾಡಲಾಗಿದ್ದು, 40,278 ಚದರ ಅಡಿ ಕಚೇರಿ ಜಾಗ ಬಳಕೆಗೆ ಲಭ್ಯ

ಪ್ರಕಟಣಾ ದಿನಾಂಕ: 06 NOV 2026 1:55PM by PIB Bengaluru

ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯವು ದೇಶಾದ್ಯಂತ ಇರುವ ತನ್ನ ಕಚೇರಿಗಳು ಮತ್ತು ಮಾಧ್ಯಮ ಘಟಕಗಳಲ್ಲಿ ಸ್ವಚ್ಛತೆ ಸುಧಾರಣೆ, ವ್ಯವಸ್ಥಿತ ದಾಖಲೆ ನಿರ್ವಹಣೆ ಮತ್ತು ಬಾಕಿ ಉಳಿದಿರುವ ಕೆಲಸಗಳನ್ನು ಕಡಿಮೆ ಮಾಡುವುದಕ್ಕೆ ಹೆಚ್ಚಿನ ಆದ್ಯತೆ ನೀಡುವ ಮೂಲಕ 2026ರ ಅಕ್ಟೋಬರ್ 2 ರಿಂದ ಅಕ್ಟೋಬರ್ 31 ರವರೆಗೆ 'ವಿಶೇಷ ಅಭಿಯಾನ 6.0' ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿತು.

ಈ ಅಭಿಯಾನದ ಅವಧಿಯಲ್ಲಿ, ಸಚಿವಾಲಯವು 1,63,213 ಕೆಜಿ ತ್ಯಾಜ್ಯ ವಿಲೇವಾರಿ ಮಾಡಿತು, ಇದರಿಂದ ಒಟ್ಟು 40,278 ಚದರ ಅಡಿ ಕಚೇರಿ ಜಾಗವು ಬಳಕೆಗೆ ಲಭ್ಯವಾಯಿತು. ಅಲ್ಲದೆ, ಬಳಕೆಗೆ ಯೋಗ್ಯವಲ್ಲದ 35 ವಾಹನಗಳನ್ನು ವಿಲೇವಾರಿ ಮಾಡಲಾಯಿತು. ಜತೆಗೆ ಅಭಿಯಾನದ ಭಾಗವಾಗಿ 1,348 ಜಾಗಗಳಲ್ಲಿ ಸ್ವಚ್ಛತಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು, ಒಟ್ಟು 1,519 ಸ್ಥಳಗಳನ್ನು ಸ್ವಚ್ಛಗೊಳಿಸಲಾಯಿತು.

ದಾಖಲೆಗಳ ನಿರ್ವಹಣೆ ಮತ್ತು ಬಾಕಿ ಇರುವ ಕಡತಗಳನ್ನು ಇತ್ಯರ್ಥಪಡಿಸುವಲ್ಲಿ ಗಮನಾರ್ಹ ಪ್ರಗತಿ ಸಾಧಿಸಲಾಗಿದೆ. ಒಟ್ಟು 39,545 ಭೌತಿಕ ಕಡತಗಳನ್ನು ಪರಿಶೀಲಿಸಲಾಯಿತು, ಅದರಲ್ಲಿ 8,823 ಕಡತಗಳನ್ನು ವಿಲೇವಾರಿ ಮಾಡಲಾಯಿತು. ಅದೇ ರೀತಿ, 12,609 ಇ-ಕಡತ ಪರಿಶೀಲಿಸಲಾಯಿತು ಮತ್ತು ಈ ಅಭಿಯಾನದ ಅವಧಿಯಲ್ಲಿ 11,199 ಕಡತಗಳನ್ನು ಮುಕ್ತಾಯಗೊಳಿಸಲಾಯಿತು.

ಕೇಂದ್ರ ವಾರ್ತಾ ಮತ್ತು ಪ್ರಸಾರ, ರೈಲ್ವೆ ಹಾಗೂ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಶ್ರೀ ಅಶ್ವಿನಿ ವೈಷ್ಣವ್ ಅವರು, ಅಭಿಯಾನದ ಪೂರ್ವಸಿದ್ಧತಾ ಹಂತದಲ್ಲಿ ಸಚಿವಾಲಯ ಮತ್ತು ಅದರ ಮಾಧ್ಯಮ ಘಟಕಗಳ ಹಿರಿಯ ಅಧಿಕಾರಿಗಳೊಂದಿಗೆ ಸಂವಾದ ನಡೆಸಿದರು. ಅತ್ಯಂತ ತಳಮಟ್ಟದ ಕ್ಷೇತ್ರ ಘಟಕಗಳು ಸೇರಿ ಪ್ರತಿಯೊಂದು ಕಚೇರಿಯನ್ನೂ ಈ ಅಭಿಯಾನದ ವ್ಯಾಪ್ತಿಗೆ ತರುವ ಅಗತ್ಯತೆಯನ್ನು ಅವರು ಬಲವಾಗಿ ಪ್ರತಿಪಾದಿಸಿದ್ದರು. ಅಲ್ಲದೆ, ಈ ಸ್ವಚ್ಛತಾ ಅಭಿಯಾನವು 2026ರ ಅಕ್ಟೋಬರ್ 31ರ ನಂತರವೂ ವರ್ಷವಿಡೀ ನಡೆಯುವ ಕಾರ್ಯಕ್ರಮವಾಗಿ ಮುಂದುವರಿಯಬೇಕು ಎಂದು ನಿರ್ದೇಶನ ನೀಡಿದ್ದರು. ಸಾರ್ವಜನಿಕರೊಂದಿಗೆ ನೇರ ಸಂಪರ್ಕ ಹೊಂದಿರುವ ಕಚೇರಿಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದೂ ಅವರು ಪ್ರತಿಪಾದಿಸಿದರು.

ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಶ್ರೀ ಚಂಚಲ್ ಕುಮಾರ್ ಅವರು, ಅಭಿಯಾನದ ಪ್ರಗತಿಯನ್ನು ನಿರಂತರವಾಗಿ ಪರಿಶೀಲಿಸಿದರು. ಮಾಧ್ಯಮ ಘಟಕಗಳು ಸ್ವಚ್ಛತೆಯನ್ನು ತಮ್ಮ ನಿತ್ಯದ ಅಭ್ಯಾಸವನ್ನಾಗಿ ಮಾಡಿಕೊಳ್ಳಬೇಕು ಮತ್ತು 'ಸ್ವಚ್ಛತೆಯೇ ಸೇವೆ'  ಎಂಬ ಮನೋಭಾವ ಅಭಿಯಾನದ ಅವಧಿಯ ನಂತರವೂ ಮುಂದುವರಿಸಿ, ಅದನ್ನು ವರ್ಷವಿಡೀ ಕೈಗೊಳ್ಳುವ ಬದ್ಧತೆಯನ್ನಾಗಿ ಹಾಗೂ ತಮ್ಮ ಸಾಂಸ್ಥಿಕ ಸಂಸ್ಕೃತಿಯ ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಳ್ಳಬೇಕು ಎಂದು ಅವರು ಬಲವಾಗಿ ಪ್ರತಿಪಾದಿಸಿದರು.

ದೇಶಾದ್ಯಂತ ಇರುವ ಆಕಾಶವಾಣಿ ಕೇಂದ್ರಗಳೂ ಸಹ  ವಿವಿಧ ಬಗೆಯ ಸ್ವಚ್ಛತಾ ಚಟುವಟಿಕೆಗಳನ್ನು ಕೈಗೊಂಡವು. ಉದಾಹರಣೆಗೆ ಕೋಲ್ಕತ್ತಾದಲ್ಲಿ ಹಳೆಯ ಕಡತಗಳು ಮತ್ತು ಕಾಗದಪತ್ರಗಳನ್ನು ವಿಲೇವಾರಿ ಮಾಡಲಾಯಿತು; ಕಟಕ್‌ನಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಆಲದ ಮರದ ಸುತ್ತಲಿನ ಪ್ರದೇಶಕ್ಕೆ ಮರುಜೀವ ನೀಡಲಾಯಿತು; ಗುಜರಾತ್‌ನ ಹಿಮ್ಮತ್‌ನಗರದಲ್ಲಿ 'ತ್ಯಾಜ್ಯದಿಂದ ಸಂಪತ್ತು'  ಪರಿಕಲ್ಪನೆಯಡಿ, ಬಳಕೆಯಲ್ಲಿಲ್ಲದ ಹಳೆಯ ಡಿಶ್ ಆಂಟೆನಾವನ್ನು ಭದ್ರತಾ ಸಿಬ್ಬಂದಿ ಕುಳಿತುಕೊಳ್ಳುವ ಆಸನವನ್ನಾಗಿ ಪರಿವರ್ತಿಸಲಾಯಿತು. ಜೋಧ್‌ಪುರ ಆಕಾಶವಾಣಿ ಕೇಂದ್ರವು ತ್ಯಾಜ್ಯ ವಿಲೇವಾರಿ ಚಟುವಟಿಕೆಗಳನ್ನು ಕೈಗೊಂಡರೆ, ಭುವನೇಶ್ವರದ ಎನ್‌ಎಬಿಎಂ (ಎನ್ ಎಬಿಎಂ) ನಲ್ಲಿ ಮಕ್ಕಳ ಉದ್ಯಾನವನವನ್ನು ಸ್ವಚ್ಛಗೊಳಿಸುವ ಅಭಿಯಾನ ನಡೆಸಿತು.

ತ್ಯಾಜ್ಯದಿಂದ ಸಂಪತ್ತು: ಗುಜರಾತ್‌ನ ಆಕಾಶವಾಣಿ ಹಿಮತ್‌ನಗರದಲ್ಲಿ ಹಳೆಯ ತ್ಯಾಜ್ಯವನ್ನು ಭದ್ರತಾ ಸಿಬ್ಬಂದಿ ಕುಳಿತುಕೊಳ್ಳುವ ಕೇಂದ್ರವಾಗಿ ಪರಿವರ್ತಿಸಲಾಗಿದೆ

ಈ ಅಭಿಯಾನದ ಸಮಯದಲ್ಲಿ ಹಲವಾರು ಇತರ ಮಾಧ್ಯಮ ಘಟಕಗಳು ನವೀನ ಸ್ವಚ್ಛತೆ ಮತ್ತು ಸುಂದರೀಕರಣ ಉಪಕ್ರಮಗಳನ್ನು ಕೈಗೊಂಡವು. ಕೊಟ್ಟಾಯಂನ ಐಐಎಂಸಿ ಗೋಡೆ ವರ್ಣಚಿತ್ರಗಳ ಮೂಲಕ ಕ್ಯಾಂಪಸ್ ಸುಂದರೀಕರಣವನ್ನು ಕೈಗೊಂಡರೆ, ಶ್ರೀನಗರದ ದೂರದರ್ಶನ ಕೇಂದ್ರವು ಶಂಕರಾಚಾರ್ಯ ಬೆಟ್ಟದಲ್ಲಿ ಅರಣ್ಯ ಇಲಾಖೆ ಮತ್ತು ಸಿಆರ್‌ಪಿಎಫ್‌ನೊಂದಿಗೆ ಜಂಟಿ ಸ್ವಚ್ಛತಾ ಅಭಿಯಾನವನ್ನು ಆಯೋಜಿಸಿತು. ಡೆಹ್ರಾಡೂನ್‌ನ ದೂರದರ್ಶನ ಕೇಂದ್ರ, ಅಹಮದಾಬಾದ್‌ನ ಪಿಐಬಿ ಮತ್ತು ಸಿಬಿಸಿ ಕಚೇರಿಗಳು ಮತ್ತು ನವದೆಹಲಿಯ ಪ್ರಕಾಶನ ನಿರ್ದೇಶನಾಲಯ ವಿಭಾಗದಲ್ಲಿಯೂ ಸ್ವಚ್ಛತಾ ಅಭಿಯಾನಗಳನ್ನು ನಡೆಸಲಾಯಿತು.

ಐಐಎಂಸಿ ಕೊಟ್ಟಾಯಂ ವತಿಯಿಂದ ಕ್ಯಾಂಪಸ್ ಗೋಡೆಗಳ ಮೇಲೆ ಚಿತ್ರಕಲೆ ಬಿಡಿಸುವ ಮೂಲಕ ಸೌಂದರ್ಯವರ್ಧನೆ

ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಸಾರ್ವಜನಿಕ ಪಾಲ್ಗೊಳ್ಳುವಿಕೆಯನ್ನು ಪ್ರೋತ್ಸಾಹಿಸಲು ಮುದ್ರಣ, ಎಲೆಕ್ಟ್ರಾನಿಕ್ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರಚಾರ ಹಾಗೂ ಸಂಪರ್ಕ ಕಾರ್ಯಕ್ರಮಗಳನ್ನು ಕೈಗೊಳ್ಳಲಾಯಿತು.

'ವಿಶೇಷ ಅಭಿಯಾನ 6.0' ಯಶಸ್ವಿಯಾಗಿ ಪೂರ್ಣಗೊಂಡಿರುವುದು, ಸಾಂಸ್ಥಿಕ ಸ್ವಚ್ಛತೆ, ದಾಖಲೆಗಳ ಸಮರ್ಥ ನಿರ್ವಹಣೆ, ಬಾಕಿ ಇರುವ ವಿಷಯಗಳನ್ನು ಸಕಾಲದಲ್ಲಿ ಇತ್ಯರ್ಥಪಡಿಸುವುದು ಮತ್ತು ಸಾರ್ವಜನಿಕ ಸೇವಾ ವಿತರಣೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಸಚಿವಾಲಯದ ನಿರಂತರ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.

 

*****


(ಪ್ರಕಟಣೆ ಐ.ಡಿ.: 2333558) ವಿಸಿಟರ್ ಕೌಂಟರ್ : 6
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Gujarati , Malayalam