ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ
azadi ka amrit mahotsav

ಬಿಆರ್‌ಇ ಶೃಂಗಸಭೆ ಮತ್ತು ಎಕ್ಸ್‌ಪೋ 2026 ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಪ್ರಮುಖ ಜಾಗತಿಕ ಶಕ್ತಿಯಾಗಿ ಭಾರತದ ಸ್ಥಾನವನ್ನು ಮತ್ತಷ್ಟು ಬಲಪಡಿಸಿದೆ: ಕೇಂದ್ರ ನೂತನ ಮತ್ತು ನವೀಕರಿಸಬಹುದಾದ ಇಂಧನ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ


ಈ ಶೃಂಗಸಭೆಯು ಸ್ಥಿತಿಸ್ಥಾಪಕ ಶುದ್ಧ-ಇಂಧನ ಆರ್ಥಿಕತೆಯಾಗಿ, ಆಕರ್ಷಕ ಹೂಡಿಕೆ ತಾಣವಾಗಿ ಮತ್ತು ಸುಸ್ಥಿರ ಅಭಿವೃದ್ಧಿಯ ಜಾಗತಿಕ ಪಾಲುದಾರನಾಗಿ ಭಾರತದ ಸ್ಥಾನವನ್ನು ಪುನರುಚ್ಚರಿಸುತ್ತದೆ: ಶ್ರೀ ಜೋಶಿ

ಪ್ರಕಟಣಾ ದಿನಾಂಕ: 05 NOV 2026 5:19PM by PIB Bengaluru

ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಭಾರತವು ಪ್ರಮುಖ ಜಾಗತಿಕ ಶಕ್ತಿಯಾಗಿ ಹೊರಹೊಮ್ಮಿದ್ದು, ವಿಶ್ವವೇ ಅದರ ಪ್ರಗತಿ ಮತ್ತು ಬೆಳೆಯುತ್ತಿರುವ ಆಕಾಂಕ್ಷೆಗಳನ್ನು ಗಮನಿಸುತ್ತಿದೆ ಎಂದು ಕೇಂದ್ರ ನೂತನ ಮತ್ತು ನವೀಕರಿಸಬಹುದಾದ ಇಂಧನ, ಶಿಕ್ಷಣ ಹಾಗೂ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಅವರು ಇಂದು ನವದೆಹಲಿಯಲ್ಲಿ ನಡೆದ 'ಭಾರತ್ ನವೀಕರಿಸಬಹುದಾದ ಇಂಧನ ಶೃಂಗಸಭೆ 2026'ರ ಸಮಾರೋಪ ಸಮಾರಭದ ವೇಳೆ ಮಾಧ್ಯಮಗಳನ್ನು ಉದ್ದೇಶಿಸಿ ಹೇಳಿದರು.

ಭಾರತ್ ಮಂಟಪವು, ಜಗತ್ತಿನಾದ್ಯಂತದ ಜಾಗತಿಕ ನೀತಿ ನಿರೂಪಕರು, ಹೂಡಿಕೆದಾರರು, ಉದ್ಯಮ ನಾಯಕರು ಮತ್ತು ಆವಿಷ್ಕಾರಕರನ್ನು ಒಂದೆಡೆ ತಂದಿದೆ ಎಂದು ಅವರು ಹೇಳಿದರು. 135ಕ್ಕೂ ಹೆಚ್ಚು ದೇಶಗಳ ಭಾಗವಹಿಸುವಿಕೆಯೊಂದಿಗೆ, ಈ ಶೃಂಗಸಭೆಯು ನವೀಕರಿಸಬಹುದಾದ ಇಂಧನ ವಲಯದಲ್ಲಿ ಭಾರತದ ಅತ್ಯಂತ ದೊಡ್ಡ ಜಾಗತಿಕ ವೇದಿಕೆಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ನವೀಕರಿಸಬಹುದಾದ ಇಂಧನ ವಲಯದ ಮೂರು ಪ್ರಮುಖ ಕಾರ್ಯಕ್ರಮಗಳನ್ನು ಒಟ್ಟಿಗೆ ಆಯೋಜಿಸಿರುವುದು ಇದೇ ಮೊದಲ ಬಾರಿಯಾಗಿದ್ದು, ದೇಶೀಯ ಮತ್ತು ಅಂತಾರಾಷ್ಟ್ರೀಯ ಪಾಲುದಾರರ ಅಭೂತಪೂರ್ವ ಭಾಗವಹಿಸುವಿಕೆಯು ಭಾರತದ ನವೀಕರಿಸಬಹುದಾದ ಇಂಧನ ಬೆಳವಣಿಗೆಯ ಯಶೋಗಾಥೆಯ ಮೇಲಿನ ಜಾಗತಿಕ ವಿಶ್ವಾಸವನ್ನು ತೋರಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಈ ಶೃಂಗಸಭೆಯನ್ನು, ಸನ್ಮಾನ್ಯ ಪ್ರಧಾನಮಂತ್ರಿಯವರು ನವೆಂಬರ್ 2, 2026 ರಂದು ಉದ್ಘಾಟಿಸಿದ್ದರು. ತಮ್ಮ ಭಾಷಣದಲ್ಲಿ ಸನ್ಮಾನ್ಯ ಪ್ರಧಾನಮಂತ್ರಿಯವರು, ಕೋವಿಡ್-19 ಸಾಂಕ್ರಾಮಿಕ ರೋಗ ಮತ್ತು ಪಶ್ಚಿಮ ಏಷ್ಯಾ ಬಿಕ್ಕಟ್ಟಿನಿಂದ ಉಂಟಾದ ಜಾಗತಿಕ ಅಡಚಣೆಗಳಿಗೆ ದೇಶದ ಸ್ಥಿತಿಸ್ಥಾಪಕತ್ವವನ್ನು ಬಲಪಡಿಸುವಲ್ಲಿ ಭಾರತವು ನವೀಕರಿಸಬಹುದಾದ ಇಂಧನದಲ್ಲಿ ಮಾಡಿದ ನಿರಂತರ ಹೂಡಿಕೆಗಳ ಕಾರ್ಯತಂತ್ರದ ಮಹತ್ವವದ ಬಗ್ಗೆ  ಒತ್ತಿ ಹೇಳಿದರು. ನವೀಕರಿಸಬಹುದಾದ ಇಂಧನ ವಲಯದಲ್ಲಿ ಭಾರತದ ಹೂಡಿಕೆಯು ದೇಶವನ್ನು ಈ ಅಡಚಣೆಗಳಿಂದ ಹೆಚ್ಚಾಗಿ ರಕ್ಷಿಸಿದೆ ಎಂದು ಅವರು ಅಭಿಪ್ರಾಯಪಟ್ಟರು.

ಭಾರತದ ನವೀಕರಿಸಬಹುದಾದ ಇಂಧನ ಪಯಣವು ತನ್ನ ದೇಶೀಯ ಇಂಧನ ಚಿತ್ರಣವನ್ನು ಬದಲಾಯಿಸುವುದು ಮಾತ್ರವಲ್ಲದೆ, ಜಗತ್ತಿಗೆ ಪ್ರಯೋಜನಕಾರಿಯಾಗಬಲ್ಲ ಪರಿಹಾರಗಳು ಮತ್ತು ಅನುಭವಗಳನ್ನು ಸೃಷ್ಟಿಸುತ್ತಿದೆ ಎಂದು ಸನ್ಮಾನ್ಯ ಪ್ರಧಾನಮಂತ್ರಿಯವರು ಒತ್ತಿ ಹೇಳಿದರು. ತಮ್ಮ ಆವಿಷ್ಕಾರಗಳು ಮತ್ತು ಸಾಧನೆಗಳನ್ನು ಮಾನವಕುಲದೊಂದಿಗೆ ಹಂಚಿಕೊಳ್ಳುವ ಭಾರತದ ಬದ್ಧತೆಯನ್ನು ಶ್ಲಾಘಿಸಿದ ಅವರು, ಪ್ರಪಂಚದಾದ್ಯಂತದ ದೇಶಗಳಲ್ಲಿ ಇಂಧನ ಪರಿವರ್ತನೆಯನ್ನು ಬೆಂಬಲಿಸಲು ಭಾರತದ ಶುದ್ಧ ಇಂಧನ ಯಶಸ್ಸಿನ ಸಾಮರ್ಥ್ಯವನ್ನು ಪ್ರಮುಖವಾಗಿ ಪ್ರಸ್ತಾಪಿಸಿದರು. ಶುದ್ಧ ಇಂಧನ ಆವಿಷ್ಕಾರ ವ್ಯವಸ್ಥೆಯಲ್ಲಿ ಹೆಚ್ಚಿನ ಭಾಗವಹಿಸುವಿಕೆಗೆ ಕರೆ ನೀಡಿದ ಪ್ರಧಾನಮಂತ್ರಿಯವರು, ಶುದ್ಧ ಇಂಧನವನ್ನು ಬಳಸಿಕೊಂಡು ಹೆಚ್ಚಿನ ಸಂಖ್ಯೆಯ ಗೃಹಬಳಕೆಯ ಇಂಧನ ಅಗತ್ಯಗಳನ್ನು ಪೂರೈಸುವಂತಹ ಪರಿಹಾರಗಳು ಮತ್ತು ವ್ಯವಹಾರ ಮಾದರಿಗಳನ್ನು ಅಭಿವೃದ್ಧಿಪಡಿಸಲು ಸ್ಟಾರ್ಟ್‌ಅಪ್‌ಗಳು, ಐಐಟಿಗಳು, ಆವಿಷ್ಕಾರಕರು ಮತ್ತು ಉದ್ಯಮಿಗಳಿಗೆ ಆಹ್ವಾನ ನೀಡಿದರು.

ನವೆಂಬರ್ 2 ರಿಂದ 5 ರವರೆಗೆ ಆಯೋಜಿಸಲಾದ ಈ ನಾಲ್ಕು ದಿನಗಳ ಶೃಂಗಸಭೆಯು ಶುದ್ಧ ಇಂಧನ ಪರಿವರ್ತನೆಯನ್ನು ಮುನ್ನಡೆಸಲು ಜಾಗತಿಕ ನೀತಿ ನಿರೂಪಕರು, ಉದ್ಯಮ ನಾಯಕರು, ಹೂಡಿಕೆದಾರರು, ತಂತ್ರಜ್ಞಾನ ಪೂರೈಕೆದಾರರು, ಸಂಶೋಧಕರು, ಸ್ಟಾರ್ಟ್‌ಅಪ್‌ಗಳು ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳನ್ನು ಒಂದೇ ವೇದಿಕೆಯಲ್ಲಿ ತಂದಿತು. ಶೃಂಗಸಭೆಯು 75,000 ಕ್ಕೂ ಹೆಚ್ಚು ವೀಕ್ಷಕರು, 400 ಕ್ಕೂ ಹೆಚ್ಚು ಪ್ರದರ್ಶಕರು ಮತ್ತು 113 ಗೋಷ್ಠಿಗಳಲ್ಲಿ 627 ಕ್ಕೂ ಹೆಚ್ಚು ಭಾಷಣಕಾರರೊಂದಿಗೆ ಬಲವಾದ ಭಾಗವಹಿಸುವಿಕೆಗೆ ಸಾಕ್ಷಿಯಾಯಿತು. ಪಾಲುದಾರ ದೇಶಗಳು, ಐಎಸ್‌ಎ ಸದಸ್ಯರು, ಅಂತಾರಾಷ್ಟ್ರೀಯ ಸಂಸ್ಥೆಗಳು ಮತ್ತು ಭಾರತದಲ್ಲಿರುವ ರಾಜತಾಂತ್ರಿಕ ನಿಯೋಗಗಳು ಸೇರಿದಂತೆ 135 ದೇಶಗಳ ಸುಮಾರು 800 ಪ್ರತಿನಿಧಿಗಳು ಭಾಗವಹಿಸಿದ್ದರು. ಉನ್ನತ ಮಟ್ಟದ ಸಚಿವರ ಭಾಗವಹಿಸುವಿಕೆಯಲ್ಲಿ 32 ಅಂತಾರಾಷ್ಟ್ರೀಯ ಸಚಿವರು, 6 ಮುಖ್ಯಮಂತ್ರಿಗಳು ಮತ್ತು 10 ರಾಜ್ಯ ಇಂಧನ ಸಚಿವರು ಸೇರಿದ್ದು, ಇದು ರಾಷ್ಟ್ರೀಯ ಮತ್ತು ಉಪ-ರಾಷ್ಟ್ರೀಯ ಪಾಲುದಾರರಿಂದ ಬಲವಾದ ತೊಡಗಿಸಿಕೊಳ್ಳುವಿಕೆಯನ್ನು ಪ್ರತಿಫಲಿಸುತ್ತದೆ.

ನೀತಿ ನಿರೂಪಕರು, ಹೂಡಿಕೆದಾರರು, ಉದ್ಯಮ, ಸಂಶೋಧನಾ ಸಂಸ್ಥೆಗಳು, ಸ್ಟಾರ್ಟ್‌ಅಪ್‌ಗಳು ಮತ್ತು ಅಂತಾರಾಷ್ಟ್ರೀಯ ಅಭಿವೃದ್ಧಿ ಪಾಲುದಾರರನ್ನು ಒಂದೆಡೆ ತರುವ ಮೂಲಕ, ಶೃಂಗಸಭೆಯು ಭಾರತದ ಶುದ್ಧ ಇಂಧನ ಮಾರುಕಟ್ಟೆಯ ಮೇಲಿನ ವಿಶ್ವಾಸವನ್ನು ಬಲಪಡಿಸಿದೆ ಮತ್ತು ರಾಷ್ಟ್ರೀಯ ಹಾಗೂ ಜಾಗತಿಕ ಆಕಾಂಕ್ಷೆಗಳನ್ನು ಅನುಷ್ಠಾನಕ್ಕಾಗಿ ಭವಿಷ್ಯದ ಕಾರ್ಯಸೂಚಿಯಾಗಿ ಪರಿವರ್ತಿಸಲು ಸಹಾಯ ಮಾಡಿದೆ.

ಭಾರತದ ಶುದ್ಧ ಇಂಧನ ನೀತಿಗಳು ಮತ್ತು ಇಂಧನ ಪರಿವರ್ತನೆಯ ಪ್ರಜಾಪ್ರಭುತ್ವೀಕರಣವು, ಆರ್ಥಿಕ ಅಭಿವೃದ್ಧಿಯನ್ನು ಪಳೆಯುಳಿಕೆ-ಇಂಧನ ಹೊರಸೂಸುವಿಕೆಯಿಂದ ಪ್ರತ್ಯೇಕಿಸಿದೆ ಎಂಬುದನ್ನು ಈ ಶೃಂಗಸಭೆಯಲ್ಲಿ ಪ್ರಮುಖವಾಗಿ ಚರ್ಚಿಸಲಾಯಿತು. ಕಳೆದ ಕೆಲವು ವರ್ಷಗಳಲ್ಲಿ ಭಾರತವು ತನ್ನ ಇಂಧನ ಪರಿವರ್ತನೆಯನ್ನು ವೇಗಗೊಳಿಸಿದ್ದು, ಕಳೆದ ಹಣಕಾಸು ವರ್ಷದಲ್ಲಿ ಭಾರತದ ವಾರ್ಷಿಕ ವಿದ್ಯುತ್ ಬಳಕೆಯ ನಾಲ್ಕನೇ ಒಂದಕ್ಕಿಂತ ಹೆಚ್ಚು ಭಾಗವು ನವೀಕರಿಸಬಹುದಾದ ಇಂಧನ ಮೂಲಗಳಿಂದ ಬಂದಿದೆ. ಪೋಷಕ ಮತ್ತು ಸ್ಥಿರ ನೀತಿ ವ್ಯವಸ್ಥೆ, ಸಾಂಸ್ಥಿಕ ಸುಧಾರಣೆಗಳು ಮತ್ತು ತಾಂತ್ರಿಕ ಆವಿಷ್ಕಾರಗಳ ಬೆಂಬಲದೊಂದಿಗೆ ನವೀಕರಿಸಬಹುದಾದ ಇಂಧನದಲ್ಲಿ ಮಾಡುವ ನಿರಂತರ ಹೂಡಿಕೆಗಳು ಆರ್ಥಿಕ ಬೆಳವಣಿಗೆಗೆ ಬೆಂಬಲ ನೀಡುವ ಜೊತೆಗೆ ಇಂಧನ ಭದ್ರತೆಯನ್ನು ಬಲಪಡಿಸಬಲ್ಲವು ಎಂಬುದನ್ನು ಭಾರತದ ಸಾಮರ್ಥ್ಯವು ಸಾಬೀತುಪಡಿಸಿದೆ.

ಭಾರತದ ಶುದ್ಧ ಇಂಧನ ಹೂಡಿಕೆಯ ಅವಕಾಶದಲ್ಲಿ, ದೇಶೀಯ ಮತ್ತು ಅಂತಾರಾಷ್ಟ್ರೀಯ ಹೂಡಿಕೆದಾರರು ವ್ಯಕ್ತಪಡಿಸಿದ ದೃಢವಾದ ವಿಶ್ವಾಸವು ಶೃಂಗಸಭೆಯ ಪ್ರಮುಖ ಫಲಿತಾಂಶವಾಗಿತ್ತು. 500 GW ಪಳೆಯುಳಿಕೆಯೇತರ ಇಂಧನ ಸಾಮರ್ಥ್ಯದ ರಾಷ್ಟ್ರೀಯ ಗುರಿಯನ್ನು ಸಾಧಿಸಲು, ಭಾರತಕ್ಕೆ ಸುಮಾರು 220 ಬಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆಯ ಅಗತ್ಯವಿದೆ. ಶೃಂಗಸಭೆಯ ಚರ್ಚೆಗಳು ಬಂಡವಾಳದ ಲಭ್ಯತೆಯು ಒಂದು ಮಿತಿಯಲ್ಲ ಎಂಬುದನ್ನು ತೋರಿಸಿಕೊಟ್ಟವು, ಹೂಡಿಕೆದಾರರು ಸನ್ನಿಹಿತ 2030 ರ ಅಗತ್ಯಗಳನ್ನು ಮೀರಿದ ಭಾರತದ ದೀರ್ಘಕಾಲೀನ ಶುದ್ಧ ಇಂಧನ ಬೆಳವಣಿಗೆಯ ಮುನ್ನೋಟಗಳಲ್ಲಿ ಧನಾತ್ಮಕ ಆಸಕ್ತಿಯನ್ನು ವ್ಯಕ್ತಪಡಿಸಿದರು.

ಮುಖ್ಯವಾಗಿ, ಹೂಡಿಕೆದಾರರ ಭಾಗವಹಿಸುವಿಕೆಯು ಸಾಂಪ್ರದಾಯಿಕ ಕಾರ್ಯತಂತ್ರದ ಹೂಡಿಕೆದಾರರನ್ನು ಮೀರಿ ಪೆನ್ಷನ್ ಫಂಡ್‌ಗಳು, ಸಾಂಸ್ಥಿಕ ಹೂಡಿಕೆದಾರರು ಮತ್ತು ದೀರ್ಘಕಾಲೀನ ತಾಳ್ಮೆಯ ಬಂಡವಾಳ ಪೂರೈಕೆದಾರರನ್ನು ಒಳಗೊಂಡಿತ್ತು, ಇದು ಭಾರತದ ಶುದ್ಧ ಇಂಧನ ಆರ್ಥಿಕ ವ್ಯವಸ್ಥೆಯ ಹೆಚ್ಚುತ್ತಿರುವ ಆಳವನ್ನು ಪ್ರತಿಬಿಂಬಿಸುತ್ತದೆ.

ಬ್ಯಾಂಕಿಂಗ್ ಮಾಡಬಹುದಾದ ವಿದ್ಯುತ್ ಖರೀದಿ ಒಪ್ಪಂದಗಳು, ಮುನ್ಸೂಚಿಸಬಹುದಾದ ಆಫ್‌ಟೇಕ್ ವ್ಯವಸ್ಥೆಗಳು, ಸ್ಪಷ್ಟ ಅಪಾಯ ಹಂಚಿಕೆ ಮತ್ತು ಆಳವಾದ ಬಾಂಡ್ ಮಾರುಕಟ್ಟೆಗಳ ಮಹತ್ವವದ ಬಗ್ಗೆ ಚರ್ಚೆಗಳು ಪ್ರಮುಖವಾಗಿ ಬೆಳಕು ಚೆಲ್ಲಿದವು. ಬೃಹತ್ ಪ್ರಮಾಣದಲ್ಲಿ ಬಂಡವಾಳವನ್ನು ಕ್ರೋಢೀಕರಿಸುವಲ್ಲಿ ಮೂಲಸೌಕರ್ಯ ಹೂಡಿಕೆ ಟ್ರಸ್ಟ್‌ಗಳಂತಹ ಹೊಸ ಉಪಕರಣಗಳು ಮತ್ತು ಬ್ಲೆಂಡೆಡ್ ಫೈನಾನ್ಸ್‌ನ ಪಾತ್ರದ ಕುರಿತ ಸಹ ಚರ್ಚಿಸಲಾಯಿತು.

ಕೇಂದ್ರ ನೂತನ ಮತ್ತು ನವೀಕರಿಸಬಹುದಾದ ಇಂಧನ ಸಚಿವರು, ಶೃಂಗಸಭೆಯ ಸಮಯದಲ್ಲಿ ಸಿಇಒ ಮಟ್ಟದ ಶುದ್ಧ ಇಂಧನ ಹೂಡಿಕೆ ದುಂಡುಮೇಜಿನ ಸಭೆ ಸೇರಿದಂತೆ ಹಲವು ಉನ್ನತ ಮಟ್ಟದ ಕಾರ್ಯಕ್ರಮಗಳನ್ನು ನಡೆಸಿದರು, ಇದರಲ್ಲಿ ಮುಖ್ಯಮಂತ್ರಿಗಳು, ರಾಜ್ಯ ಇಂಧನ ಸಚಿವರು, ಹಿರಿಯ ಸರ್ಕಾರಿ ಅಧಿಕಾರಿಗಳು ಮತ್ತು ಉದ್ಯಮ ನಾಯಕರು ಭಾಗವಹಿಸಿದ್ದರು. ದುಂಡುಮೇಜಿನ ಸಭೆಯು ನವೀಕರಿಸಬಹುದಾದ ಇಂಧನ ಆಕಾಂಕ್ಷೆಯನ್ನು ಜಾರಿಗೆ ತರಲು ಆದ್ಯತೆಗಳನ್ನು ಗುರುತಿಸಿತು. ಇವುಗಳಲ್ಲಿ ಉತ್ಪಾದನೆ, ಸಾಗಣೆ, ಶೇಖರಣೆ ಮತ್ತು ಬೇಡಿಕೆ ಕೇಂದ್ರಗಳ ಸಂಯೋಜಿತ ಯೋಜನೆ ಹಾಗೂ ಭೂಮಿ, ಅನುಮೋದನೆಗಳು ಮತ್ತು ಅನುಷ್ಠಾನದಲ್ಲಿ ಹೆಚ್ಚಿನ ನಿಶ್ಚಿತತೆ ಸೇರಿವೆ. ಇದಲ್ಲದೆ, ಅವರು ಫ್ರಾನ್ಸ್‌ನ ಪರಿಸರ ಪರಿವರ್ತನೆಯ ಸಚಿವ ಪ್ರತಿನಿಧಿ ಮತ್ತು ಡೆನ್ಮಾರ್ಕ್‌ನ ವಾಣಿಜ್ಯ ಮತ್ತು ಸ್ಪರ್ಧಾತ್ಮಕತೆಯ ಸಚಿವರೊಂದಿಗೆ ದ್ವಿಪಕ್ಷೀಯ ಸಭೆಗಳನ್ನು ನಡೆಸಿದರು. ನಾಯಕರು ಜಂಟಿ ಹಿತಾಸಕ್ತಿಯ ವಿಷಯಗಳು ಮತ್ತು ಜಾಗತಿಕ ಇಂಧನ ಸನ್ನಿವೇಶಗಳ ಕುರಿತು ಚರ್ಚಿಸಿದರು. ಈ ಶೃಂಗಸಭೆಯು 100 ಕ್ಕೂ ಹೆಚ್ಚು ಬಿಸಿನೆಸ್-ಟು-ಬಿಸಿನೆಸ್ (B2B) ಸಭೆಗಳಿಗೆ ವೇದಿಕೆಯನ್ನು ಒದಗಿಸಿತು, ಇವು ಉದ್ಯಮಗಳಿಗೆ ಸಹಭಾಗಿತ್ವ ಮತ್ತು ಸಹಯೋಗಕ್ಕಾಗಿ ಅವಕಾಶಗಳನ್ನು ಒದಗಿಸಿದವು.

ಭಾರತದ ಶುದ್ಧ ಇಂಧನ ಕಾರ್ಯಸೂಚಿಯು ಸ್ಥಾಪಿತ ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ವಿಸ್ತರಿಸುವುದರಿಂದ ಹಿಡಿದು ವಿಶ್ವಾಸಾರ್ಹ, ನಮ್ಯತೆ ಹೊಂದಿರುವ ಮತ್ತು ಸಂಯೋಜಿತ ವಿದ್ಯುತ್ ವ್ಯವಸ್ಥೆಯನ್ನು ನಿರ್ಮಿಸುವತ್ತ ವಿಕಸನಗೊಂಡಿರುವುದನ್ನು ಶೃಂಗಸಭೆಯ ಚರ್ಚೆಗಳು ಪ್ರತಿಬಿಂಬಿಸಿದವು. ಉದ್ಯಮ, ತಂಪಾಗಿಸುವಿಕೆ, ಎಲೆಕ್ಟ್ರಿಕ್ ಚಲನಶೀಲತೆ ಮತ್ತು ದತ್ತಾಂಶ ಕೇಂದ್ರಗಳಿಂದ ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆಯೊಂದಿಗೆ, ಪರಿವರ್ತನೆಯ ಮುಂದಿನ ಹಂತಕ್ಕೆ ಇಂಧನ ಶೇಖರಣೆ, ಸಾಗಣೆ ಮೂಲಸೌಕರ್ಯ, ಗ್ರಿಡ್ ನಮ್ಯತೆ, ಸಹಾಯಕ ಸೇವೆಗಳು, ಮುನ್ನೋಟ, ಬೇಡಿಕೆ ಪ್ರತಿಕ್ರಿಯೆ ಮತ್ತು ಹಸಿರು ಮುಕ್ತ ಪ್ರವೇಶದ ಮೇಲೆ ಹೆಚ್ಚಿನ ಒತ್ತು ನೀಡುವ ಅಗತ್ಯವಿದೆ.

ಇಂಧನ ಶೇಖರಣೆಯು ಅತ್ಯಂತ ಅಲ್ಪಾವಧಿಯ ಪ್ರಮುಖ ಆದ್ಯತೆಯಾಗಿ ಹೊರಹೊಮ್ಮಿತು. ಪವನ ಮತ್ತು ಸೌರ ಶಕ್ತಿ ಉತ್ಪಾದನೆಯನ್ನು ಮುನ್ಸೂಚಿಸಲು ಸಂಸ್ಥೆಗಳು, ಗ್ರಿಡ್ ನಿರ್ವಹಣೆ ಮತ್ತು ಆಧುನಿಕ ಎಐ ಆಧಾರಿತ ವ್ಯವಸ್ಥೆಗಳನ್ನು ಬಲಪಡಿಸುವಾಗ, ಶೇಖರಣೆ ಮತ್ತು ಸಾಗಣೆ ಯೋಜನೆಯನ್ನು ನವೀಕರಿಸಬಹುದಾದ ಇಂಧನ ಸಂಗ್ರಹಣೆ ಹಾಗೂ ಉದಯೋನ್ಮುಖ ಬೇಡಿಕೆ ಕೇಂದ್ರಗಳೊಂದಿಗೆ ಸಂಯೋಜಿಸುವ ಅಗತ್ಯವನ್ನು ಚರ್ಚೆಗಳು ಒತ್ತಿ ಹೇಳಿದವು. ಇತ್ತೀಚಿನ ಎಸ್‌ಇಸಿಐ ಟೆಂಡರ್‌ನಲ್ಲಿ ಪತ್ತೆಯಾದ ಯೂನಿಟ್‌ಗೆ ₹5.25 ರ ಜಾಗತಿಕವಾಗಿ ಸ್ಪರ್ಧಾತ್ಮಕ ದರವನ್ನು ಒಳಗೊಂಡಂತೆ, 24/7 ನವೀಕರಿಸಬಹುದಾದ ಇಂಧನ ಮತ್ತು ಫರ್ಮ್ ಅಂಡ್ ಡಿಸ್ಪಾಚೇಬಲ್ ರಿನೂವಬಲ್ ಎನರ್ಜಿ ಯಂತಹ ಹೊಸ ಒಪ್ಪಂದಗಳು ಮತ್ತು ತಾಂತ್ರಿಕ ವಿನ್ಯಾಸಗಳ ಕುರಿತೂ ಚರ್ಚಿಸಲಾಯಿತು. ಇದು ವಿದೇಶಿ ಪ್ರತಿನಿಧಿಗಳು ಮತ್ತು ನೀತಿ ನಿರೂಪಕರಿಂದ ಭಾರಿ ಆಸಕ್ತಿಯನ್ನು ಆಕರ್ಷಿಸಿತು.

ಕೈಗಾರಿಕಾ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವಲ್ಲಿ, ರಫ್ತಿಗೆ ಬೆಂಬಲ ನೀಡುವಲ್ಲಿ ಮತ್ತು ಕೈಗಾರಿಕಾ ಇಂಗಾಲಮುಕ್ತಗೊಳಿಸುವಿಕೆಯನ್ನು ವೇಗಗೊಳಿಸುವಲ್ಲಿ ಹಸಿರು ಸಂಗ್ರಹಣೆಯ ಬೆಳೆಯುತ್ತಿರುವ ಮಹತ್ವವದ ಬಗ್ಗೆಯೂ ಈ ಶೃಂಗಸಭೆಯು ಪ್ರಾಮುಖ್ಯತೆ ನೀಡಿತು. ಪಳೆಯುಳಿಕೆ ಇಂಧನಗಳನ್ನು ನೆಚ್ಚಿಕೊಂಡಿರುವ ಪೆಟ್ರೋ-ಆರ್ಥಿಕತೆಯಿಂದ ಸ್ವತಂತ್ರ ವಿದ್ಯುತ್ ವ್ಯವಸ್ಥೆಗಳನ್ನು ಆಧರಿಸಿದ ಎಲೆಕ್ಟ್ರೋ-ಆರ್ಥಿಕತೆಗೆ ಪರಿವರ್ತನೆಯಾಗುವಲ್ಲಿ ಬೆಳೆಯುತ್ತಿರುವ ಆಸಕ್ತಿಯನ್ನೂ ಈ ಶೃಂಗಸಭೆಯಲ್ಲಿ ಪ್ರಮುಖವಾಗಿ ಪ್ರಸ್ತಾಪಿಸಲಾಯಿತು.

ಭಾರತದ ದೇಶೀಯ ಶುದ್ಧ ಇಂಧನ ಉತ್ಪಾದನಾ ವ್ಯವಸ್ಥೆಗೆ ಪುಷ್ಟಿ ನೀಡುವುದು,  ಬಿಆರ್‌ಇ ಶೃಂಗಸಭೆ ಮತ್ತು ಎಕ್ಸ್‌ಪೋ 2026 ರ ಮತ್ತೊಂದು ಪ್ರಮುಖ ಉದ್ದೇಶವಾಗಿತ್ತು. ಹಂಚಿಕೆಯ ಪ್ರಯೋಗಾಲಯಗಳು, ಪೈಲಟ್ ಉತ್ಪಾದನಾ ಮಾರ್ಗಗಳು, ಪ್ರದರ್ಶನ ಸೌಲಭ್ಯಗಳು ಮತ್ತು ಪರೀಕ್ಷೆ ಹಾಗೂ ಪ್ರಮಾಣೀಕರಣ ಮೂಲಸೌಕರ್ಯಗಳ ಬೆಂಬಲದೊಂದಿಗೆ ಅಸೆಂಬ್ಲಿಯನ್ನು ಮೀರಿ ಕಚ್ಚಾವಸ್ತುಗಳು, ಘಟಕಗಳು, ಉಪಕರಣಗಳು ಮತ್ತು ಸುಧಾರಿತ ತಂತ್ರಜ್ಞಾನಗಳ ದೇಶೀಯ ಉತ್ಪಾದನೆಯತ್ತ ಸಾಗುವ ಅಗತ್ಯವನ್ನು ಚರ್ಚೆಗಳು ಒತ್ತಿ ಹೇಳಿದವು.

ಮುಂದಿನ ಪೀಳಿಗೆಯ ಸೌರ ತಂತ್ರಜ್ಞಾನಗಳು, ಪೆರೋವ್‌ಸ್ಕೈಟ್ ಸೆಲ್‌ಗಳು, ಮರುಬಳಕೆ ಮಾಡಬಹುದಾದ ಪವನ ಶಕ್ತಿಗೆ ಬೇಕಾದ ಟರ್ಬೈನ್ ಸಾಮಗ್ರಿಗಳು, ದೀರ್ಘಾವಧಿಯ ಇಂಧನ ಶೇಖರಣೆ, ಎಲೆಕ್ಟ್ರೋಲೈಜರ್‌ಗಳು, ಇಂಧನ ಕೋಶಗಳು, ನವೀಕರಿಸಬಹುದಾದ ಇಂಧನದಲ್ಲಿ ಕೃತಕ ಬುದ್ಧಿಮತ್ತೆಯ ಬಳಕೆಯ ಪ್ರಕರಣಗಳು ಮತ್ತು ಫ್ಲೋಟಿಂಗ್ ಸೌರ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪಾಲುದಾರರನ್ನು ಈ ಶೃಂಗಸಭೆಯು ಒಂದೆಡೆ ತಂದಿತು.

ಸಂಶೋಧನೆ ಮತ್ತು ಆವಿಷ್ಕಾರಗಳನ್ನು ವಾಣಿಜ್ಯ ನಿಯೋಜನೆಯೊಂದಿಗೆ ಸಂಪರ್ಕಿಸುವುದಕ್ಕೆ ಈ ಶೃಂಗಸಭೆಯು ವಿಶೇಷ ಒತ್ತು ನೀಡಿತು. ಸಾರ್ವಜನಿಕ ಸಂಗ್ರಹಣೆ, ಕ್ಷೇತ್ರ ಪ್ರದರ್ಶನಗಳು, ಪರೀಕ್ಷೆ ಮತ್ತು ಪ್ರಮಾಣೀಕರಣ ಮೂಲಸೌಕರ್ಯ ಹಾಗೂ ಉದ್ಯಮ ಮತ್ತು ಸಂಶೋಧನಾ ಸಂಸ್ಥೆಗಳ ನಡುವಿನ ಸಹಯೋಗವನ್ನು ಭಾರತೀಯ ತಂತ್ರಜ್ಞಾನಗಳ ವಾಣಿಜ್ಯೀಕರಣವನ್ನು ವೇಗಗೊಳಿಸುವ ಪ್ರಮುಖ ಉಪಕರಣಗಳಾಗಿ ಗುರುತಿಸಲಾಗಿದೆ.

ಯುವಜನರ ಭಾಗವಹಿಸುವಿಕೆ ಮತ್ತು ಉದ್ಯಮಶೀಲತೆಯು ಆವಿಷ್ಕಾರ ಕಾರ್ಯಸೂಚಿಯ ಅವಿಭಾಜ್ಯ ಅಂಗವಾಗಿದ್ದವು. ಶೃಂಗಸಭೆಯು ಆರ್‌ಇ ಹ್ಯಾಕಥಾನ್‌ನಲ್ಲಿ ಬೆಳವಣಿಗೆ ಮತ್ತು ಆರಂಭಿಕ ಹಂತಗಳಾದ್ಯಂತ 300 ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳ ಬಲವಾದ ಭಾಗವಹಿಸುವಿಕೆಯನ್ನು ಕಂಡಿತು. ಆರ್‌ಇ ಜೆನ್ ಸ್ಪರ್ಧೆಯಲ್ಲಿ ಐಐಟಿ/ವಿಶ್ವವಿದ್ಯಾಲಯಗಳು/ಕಾಲೇಜುಗಳು/ಶಾಲೆಗಳ ಯುವಜನರ ಬಲವಾದ ಭಾಗವಹಿಸುವಿಕೆಯೂ ಕಂಡುಬಂದಿತು. ಎಕ್ಸ್‌ಪೋದಲ್ಲಿನ ಆವಿಷ್ಕಾರ ವ್ಯವಸ್ಥೆಯು 70 ಸ್ಟಾರ್ಟ್‌ಅಪ್ ಪಾಡ್‌ಗಳು, 40 ಶೈಕ್ಷಣಿಕ ಪೋಸ್ಟರ್‌ಗಳು ಮತ್ತು 10 ಸಂಶೋಧನಾ ಪ್ರಬಂಧಗಳನ್ನು ಒಳಗೊಂಡಿದ್ದು, ಭಾರತದ ಉದಯೋನ್ಮುಖ ಶುದ್ಧ ಇಂಧನ ತಂತ್ರಜ್ಞಾನ ವ್ಯವಸ್ಥೆಗೆ ಕೊಡುಗೆ ನೀಡಲು ಯುವ ಪ್ರತಿಭೆಗಳು, ಸಂಶೋಧಕರು ಮತ್ತು ಉದ್ಯಮಿಗಳನ್ನು ಒಂದೆಡೆ ತಂದಿತು.

ನಾಲ್ಕನೇ ಅಂತಾರಾಷ್ಟ್ರೀಯ ಗ್ರೀನ್ ಹೈಡ್ರೋಜನ್ ಸಮಾವೇಶವು, ಭಾರತದ ಗ್ರೀನ್ ಹೈಡ್ರೋಜನ್ ಆಕಾಂಕ್ಷೆಗಳನ್ನು ಮುನ್ನಡೆಸಲು ಪ್ರಮುಖ ವೇದಿಕೆಯನ್ನು ಒದಗಿಸಿತು, ನಂಬಿಕೆಗೆ ಅರ್ಹವಾದ ದೇಶೀಯ ಬೇಡಿಕೆಯ ಅಭಿವೃದ್ಧಿ, ದೀರ್ಘಕಾಲೀನ ಆಫ್‌ಟೇಕ್ ವ್ಯವಸ್ಥೆಗಳು, ರಫ್ತು ಅವಕಾಶಗಳು, ಮಾನದಂಡಗಳು ಮತ್ತು ಪ್ರಮಾಣೀಕರಣ, ಪರೀಕ್ಷೆ ಹಾಗೂ ಭದ್ರತಾ ಚೌಕಟ್ಟುಗಳ ಮೇಲೆ ಚರ್ಚೆಗಳು ಗಮನ ಹರಿಸಿದವು.

ಭಾರತದಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗೆ ಹಸಿರು ಅಣುಗಳ ಪೂರೈಕೆ ಮತ್ತು ಆಫ್‌ಟೇಕ್ ಅನ್ನು ಮುನ್ನಡೆಸಲು ಸೋಲಾರ್ ಎನರ್ಜಿ ಕಾರ್ಪೊರೇಷನ್ ಆಫ್ ಇಂಡಿಯಾ ಮತ್ತು ರೊಟರ್ಡ್ಯಾಮ್‌ನ ಪವರ್2ಎಕ್ಸ್ ನಡುವೆ ತಿಳುವಳಿಕಾ ಒಡಂಬಡಿಕೆಗೆ ಸಹಿ ಬಿದ್ದಿದ್ದು ಒಂದು ಪ್ರಮುಖ ವಾಣಿಜ್ಯ ಬೆಳವಣಿಗೆಯಾಗಿದೆ. ಮೊದಲ ಕಂತು ವರ್ಷಕ್ಕೆ 3 ಲಕ್ಷ ಟನ್ ಹಸಿರು ಮೆಥನಾಲ್ ಸಾಮರ್ಥ್ಯದ ಪ್ರಮಾಣವನ್ನು ಸೂಚಿಸಿದ್ದು, ಉದಯೋನ್ಮುಖ ಜಾಗತಿಕ ಹಸಿರು ಅಣು ಮಾರುಕಟ್ಟೆಗಳಲ್ಲಿ ಭಾರತಕ್ಕೆ ಬೆಳೆಯುತ್ತಿರುವ ಅವಕಾಶಗಳನ್ನು ಪ್ರತಿಬಿಂಬಿಸುತ್ತದೆ.

ಐಎಸ್‌ಎ ಅಸೆಂಬ್ಲಿಯ 9 ನೇ ಆವೃತ್ತಿಯು ಅಂತಾರಾಷ್ಟ್ರೀಯ ಸೌರ ಸಹಕಾರದಲ್ಲಿ ಪ್ರಮುಖ ಮೈಲಿಗಲ್ಲನ್ನು ಗುರುತಿಸಿತು. ಅಸೆಂಬ್ಲಿಯು 2026 ರ ಮಹಾನಿರ್ದೇಶಕರ ವರದಿ, 2027ರ ಕಾರ್ಯಯೋಜನೆ ಮತ್ತು ಬಜೆಟ್, 2025ರ ಲೆಕ್ಕಪರಿಶೋಧಿತ ಲೆಕ್ಕಪತ್ರಗಳು ಹಾಗೂ ಆಫ್ರಿಕನ್ ಯೂನಿಯನ್, ಸಿಒಎಮ್‌ಇಎಸ್‌ಎ, ಸೆಲ್ಕೋ, ಎಸ್‌ಎನ್‌ವಿ ಮತ್ತು ಅಖಿಲ ಭಾರತ ಡಿಸ್ಕಾಮ್‌ಗಳ ಸಂಘಕ್ಕೆ ಪಾಲುದಾರ ಸಂಸ್ಥೆಯ ಅರ್ಹತೆ ನೀಡುವ ಪ್ರಸ್ತಾಪಗಳನ್ನು ಪರಿಗಣಿಸಿತು.

ಆಫ್ರಿಕನ್ ದೇಶಗಳಾದ್ಯಂತ ಹಣಕಾಸಿನ ಹೆಚ್ಚಿನ ಲಭ್ಯತೆಯನ್ನು ಸುಗಮಗೊಳಿಸುವ ಮತ್ತು ಸೌರ ನಿಯೋಜನೆಯನ್ನು ವೇಗಗೊಳಿಸುವ ಗುರಿಯನ್ನು ಹೊಂದಿರುವ ಐಎಸ್‌ಎ ಅಡಿಯಲ್ಲಿ ಪ್ರಸ್ತಾಪಿಸಲಾದ 200 ಮಿಲಿಯನ್ ಅಮೆರಿಕನ್ ಡಾಲರ್ ವೆಚ್ಚದ ಆಫ್ರಿಕಾ ಸೋಲಾರ್ ಫೆಸಿಲಿಟಿಯು ಪ್ರಮುಖ ಅಂತಾರಾಷ್ಟ್ರೀಯ ಪ್ರಕಟಣೆಯಾಗಿತ್ತು. ಯೋಜನಾ ಸಂಯೋಜನೆ, ಬ್ಲೆಂಡೆಡ್ ಫೈನಾನ್ಸ್, ತಾಳ್ಮೆಯ ಬಂಡವಾಳ, ಸ್ಥಳೀಯ-ನಾಣ್ಯ ಹಣಕಾಸು ಮತ್ತು ಪಾವತಿ-ಅಪಾಯ ಶಮನವನ್ನು ಹೂಡಿಕೆ ಕ್ರೋಢೀಕರಿಸುವ ಪ್ರಮುಖ ಉಪಕರಣಗಳಾಗಿ ಚರ್ಚೆಗಳು ಗುರುತಿಸಿದವು. ಆಫ್ರಿಕಾ50 ಡಿಸ್ಟ್ರಿಬ್ಯೂಟೆಡ್ ರಿನೂವಬಲ್ ಎನರ್ಜಿ ಫಂಡ್ ಮತ್ತು ನೈಜೀರಿಯಾ ಡಿಆರ್‌ಇ ಫಂಡ್ ಅನ್ನು ಹಣಕಾಸು ಮಾದರಿಗಳಾಗಿ ಎತ್ತಿಹಿಡಿಯಲಾಯಿತು. ಆಫ್ರಿಕಾ50 ಡಿಆರ್‌ಇ ಫಂಡ್ ಅನ್ನು ಪ್ರಾದೇಶಿಕ ಮತ್ತು ಜಾಗತಿಕ ಹಣಕಾಸು ರಚನೆಗಳ ಸಂಯೋಜನೆಯ ಮೂಲಕ ಯೋಜನಾ-ಮಟ್ಟದ ಮತ್ತು ಪಾವತಿ ಅಪಾಯಗಳು ಸೇರಿದಂತೆ ಸಣ್ಣ ಡಿಆರ್‌ಇ ಯೋಜನೆಗಳಿಗೆ ಸಂಬಂಧಿಸಿದ ಹೂಡಿಕೆ ಅಡೆತಡೆಗಳನ್ನು ಪರಿಹರಿಸಲು ವಿನ್ಯಾಸಗೊಳಿಸಲಾಗಿದೆ. ಫ್ರಾಂಕೋಫೋನ್ ಮತ್ತು ಸಾಹೇಲ್ ಇಂಧನ ಸ್ಥಿತಿಸ್ಥಾಪಕತ್ವ ಉಪಕ್ರಮವನ್ನೂ ಎತ್ತಿಹಿಡಿಯಲಾಯಿತು, ಇದು ನಿರ್ಣಾಯಕ ವಿದ್ಯುತ್ ಅಗತ್ಯಗಳಿಗಾಗಿ ಸೌರ-ಪ್ಲಸ್-ಶೇಖರಣಾ ಪರಿಹಾರಗಳು, ಸಾರ್ವಜನಿಕ ಸೌಲಭ್ಯಗಳಿಗಾಗಿ ಮೇಲ್ಛಾವಣಿ ಸೌರ ಮತ್ತು ಕೃಷಿ ಹಾಗೂ ಜೀವನೋಪಾಯಕ್ಕಾಗಿ ಉತ್ಪಾದಕ-ಬಳಕೆಯ ಸೌರಶಕ್ತಿಯ ಮೇಲೆ ಗಮನ ಹರಿಸುತ್ತದೆ.

ಕೃಷಿ ಪಂಪ್‌ಗಳನ್ನು ಸೌರೀಕರಣಗೊಳಿಸುವಲ್ಲಿ ಭಾರತದ ಅನುಭವವನ್ನು ಆಧರಿಸಿ, ಐಎಸ್‌ಎ ಜಾಗತಿಕವಾಗಿ ಒಂದು ಮಿಲಿಯನ್ ಸೌರ ಪಂಪ್‌ಗಳನ್ನು ನಿಯೋಜಿಸುವ ತನ್ನ ಆಕಾಂಕ್ಷೆಯನ್ನು ಮುನ್ನಡೆಸಿದೆ. ಐಎಸ್‌ಎ ಸಣ್ಣ ದ್ವೀಪ ಅಭಿವೃದ್ಧಿಶೀಲ ರಾಷ್ಟ್ರಗಳ (SIDS) ವೇದಿಕೆಯು 2030 ರ ವೇಳೆಗೆ ಎಸ್ಐಡಿಎಸ್ ನಾದ್ಯಂತ 500 MW ವರೆಗೆ ಸೌರ ಸಾಮರ್ಥ್ಯವನ್ನು ಸುಗಮಗೊಳಿಸುವ ಗುರಿಯನ್ನು ಹೊಂದಿದೆ. ಸನ್‌ರೈಸ್ ಫೋಟೋವೋಲ್ಟಾಯಿಕ್ ಮತ್ತು ಬ್ಯಾಟರಿ ವೃತ್ತಾಕಾರದ ಜಾಲವು 35 ದೇಶಗಳಿಗೆ ವಿಸ್ತರಿಸಿದೆ.

ಈ ಉಪಕ್ರಮಗಳು ಗ್ಲೋಬಲ್ ಸೌತ್‌ನ ಶುದ್ಧ ಇಂಧನ ಆಕಾಂಕ್ಷೆಗಳನ್ನು ಬೆಂಬಲಿಸಲು ದೇಶೀಯ ಅನುಭವ, ತಂತ್ರಜ್ಞಾನ, ಹಣಕಾಸು, ಸಾಮರ್ಥ್ಯ ವೃದ್ಧಿ ಮತ್ತು ಅನುಷ್ಠಾನ ಸಾಮರ್ಥ್ಯಗಳನ್ನು ಸಂಯೋಜಿಸುವ ಭಾರತದ ವಿಧಾನವನ್ನು ಪ್ರತಿಬಿಂಬಿಸುತ್ತವೆ.

ಈ ಶೃಂಗಸಭೆಯು ಗ್ರಿಡ್ ಸಂಬಂಧಿತ ಕ್ಷೇತ್ರಗಳಲ್ಲಿ ಸಾಮರ್ಥ್ಯ ವೃದ್ಧಿ, ಡಿಜಿಟಲ್ ಕಲಿಕೆ ಮತ್ತು ಸಹಕಾರವನ್ನು ಬಲಪಡಿಸುವ ಗುರಿಯನ್ನು ಹೊಂದಿರುವ ಐಎಸ್‌ಎ ಅಕಾಡೆಮಿ ಮತ್ತು ಗ್ಲೋಬಲ್ ಕ್ಯಾಪೆಬಿಲಿಟಿ ಸೆಂಟರ್ - ಶೈನ್ ನ ಚಾಲನೆಗೆ ಸಾಕ್ಷಿಯಾಯಿತು. ಶೃಂಗಸಭೆಯ ಅವಧಿಯಲ್ಲಿ ಒಟ್ಟು 10 ತಿಳುವಳಿಕಾ ಒಡಂಬಡಿಕೆಗಳು ಮತ್ತು ಚೌಕಟ್ಟಿನ ಒಪ್ಪಂದಗಳಿಗೆ ಸಹಿ ಬಿದ್ದು, ತಂತ್ರಜ್ಞಾನ, ಸಂಶೋಧನೆ, ಸಾಮರ್ಥ್ಯ ವೃದ್ಧಿ, ಉತ್ಪಾದನೆ ಮತ್ತು ಯೋಜನಾ ಅನುಷ್ಠಾನದಾದ್ಯಂತ ಸಹಕಾರವನ್ನು ವಿಸ್ತರಿಸಲಾಯಿತು.

ಬ್ರೇಕ್‌ಥ್ರೂ ಎನರ್ಜಿ ವೆಂಚರ್ಸ್, ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ (ಬರ್ಕ್ಲಿ) ಇಂಡಿಯಾ ಎನರ್ಜಿ & ಕ್ಲೈಮೇಟ್ ಸೆಂಟರ್ ಮತ್ತು ಶ್ನೈಡರ್ ಎಲೆಕ್ಟ್ರಿಕ್ ಫೌಂಡೇಶನ್‌ನೊಂದಿಗೆ ಐಎಸ್‌ಎ ಚೌಕಟ್ಟಿನ ಒಪ್ಪಂದಗಳಿಗೆ ಸಹಿ ಹಾಕಿತು. ಶೃಂಗಸಭೆಯಲ್ಲಿ ಪ್ರಕಟಿಸಲಾದ ಇತರ ಸಹಭಾಗಿತ್ವಗಳ ಪೈಕಿ ಶಕ್ತಿ ಪಂಪ್ಸ್ (ಇಂಡಿಯಾ) ಲಿಮಿಟೆಡ್ ಮತ್ತು ರೈಲ್ವೆ ಎನರ್ಜಿ ಮ್ಯಾನೇಜ್‌ಮೆಂಟ್ ಕಂಪನಿ ಲಿಮಿಟೆಡ್‌ನೊಂದಿಗೆ ಐಎಸ್‌ಎ ತಿಳುವಳಿಕಾ ಒಡಂಬಡಿಕೆಗಳಿಗೆ ಸಹಿ ಹಾಕಿತು.

ಬಿಆರ್‌ಇ ಶೃಂಗಸಭೆ ಮತ್ತು ಎಕ್ಸ್‌ಪೋ 2026, 37 ವರದಿಗಳು, ಮೌಲ್ಯಮಾಪನಗಳು, ಮಾರ್ಗದರ್ಶಿ ಪುಸ್ತಕಗಳು ಮತ್ತು ಡಿಜಿಟಲ್ ವೇದಿಕೆಗಳ ಬಿಡುಗಡೆಯ ಮೂಲಕ ಭಾರತದ ನವೀಕರಿಸಬಹುದಾದ ಇಂಧನ ವ್ಯವಸ್ಥೆಯ ಜ್ಞಾನ ಮತ್ತು ಸಾಕ್ಷ್ಯಾಧಾರವನ್ನು ಬಲಪಡಿಸಿತು.

ಕಾರ್ಯಕ್ರಮದಲ್ಲಿ ಬಿಡುಗಡೆಯಾದ ಪ್ರಕಟಣೆಗಳು ನೀತಿ, ಉತ್ಪಾದನೆ, ನಿಯೋಜನೆ, ಕೌಶಲ್ಯ ಮತ್ತು ಭದ್ರತೆಯನ್ನು ಒಳಗೊಂಡಿದ್ದು, ಈ ಪ್ರತಿಯೊಂದು ರಂಗಗಳಲ್ಲೂ ನವೀಕರಿಸಬಹುದಾದ ಇಂಧನ ವ್ಯವಸ್ಥೆಯನ್ನು ಬಲಪಡಿಸಬೇಕು. 'ಈಸ್ ಆಫ್ ಡೂಯಿಂಗ್ ಸೋಲಾರ್' ಮತ್ತು 'ರಿನೂವಬಲ್ ಎನರ್ಜಿ ಸ್ಟೇಟ್ ಅಸೆಸ್ಮೆಂಟ್ ಫ್ರೇಮ್‌ವರ್ಕ್' (RE-SAF) ನೀತಿ ನಿರೂಪಕರು ಮತ್ತು ರಾಜ್ಯಗಳಿಗೆ ಪ್ರಗತಿಯನ್ನು ಬೆಂಚ್‌ಮಾರ್ಕ್ ಮಾಡಲು ಮತ್ತು ಅಡೆತಡೆಗಳನ್ನು ಗುರುತಿಸಲು ಜಂಟಿ ಆಧಾರವನ್ನು ಒದಗಿಸುತ್ತವೆ. ರಾಷ್ಟ್ರೀಯ ಹೈಡ್ರೋಜನ್ ಸಮೀಕ್ಷೆಯು ಗ್ರೀನ್ ಹೈಡ್ರೋಜನ್ ವಲಯಕ್ಕೆ ಇದನ್ನು ಸೇರಿಸುತ್ತದೆ. ಸೌರ ಉತ್ಪಾದನೆ, ಪವನ ದೇಶೀಕರಣ ಮತ್ತು ಬ್ಯಾಟರಿ ಎಲೆಕ್ಟ್ರೋಲೈಟ್ ಕುರಿತ ಅಧ್ಯಯನಗಳು ದೇಶೀಯ ಸಾಮರ್ಥ್ಯದ ಕೊರತೆಗಳು ಎಲ್ಲೆಲ್ಲಿ ಉಳಿದಿವೆ ಮತ್ತು ಉದ್ಯಮವು ಪೂರೈಕೆ ಸರಪಳಿಗಳನ್ನು ಎಲ್ಲಿ ನಿರ್ಮಿಸಬಹುದು ಎಂಬುದನ್ನು ತೋರಿಸುತ್ತವೆ. ಟಾಪ್ 100 ಆರ್‌ಇ ಜಿಲ್ಲೆಗಳ ಕೌಶಲ್ಯ ನೀಲನಕ್ಷೆಯು ಕಾರ್ಯಪಡೆಯ ಸಿದ್ಧತೆಯನ್ನು ನಿಯೋಜನೆಗೆ ಸಂಪರ್ಕಿಸುತ್ತದೆ. ಒಟ್ಟಾರೆಯಾಗಿ ತೆಗೆದುಕೊಂಡರೆ, ಈ ಪ್ರಕಟಣೆಗಳು ಹೂಡಿಕೆದಾರರು, ಡೆವಲಪರ್‌ಗಳು, ಯುಟಿಲಿಟಿಗಳು ಮತ್ತು ರಾಜ್ಯ ಸಂಸ್ಥೆಗಳಿಗೆ ಯೋಜನೆ ರೂಪಿಸಲು ಮತ್ತು ನಿರ್ಧರಿಸಲು ಸ್ಪಷ್ಟ ಸಾಕ್ಷ್ಯಾಧಾರಗಳನ್ನು ಒದಗಿಸಬೇಕು. ಇವು ಸರ್ಕಾರ, ಉದ್ಯಮ ಮತ್ತು ಅಭಿವೃದ್ಧಿ ಪಾಲುದಾರರ ನಡುವಿನ ಸಮನ್ವಯವನ್ನು ಸುಧಾರಿಸಬೇಕು ಹಾಗೂ ದೇಶೀಯ ಉತ್ಪಾದನೆ ಮತ್ತು ವೇಗದ ನಿಯೋಜನೆಗಾಗಿ ಭಾರತದ ಪ್ರಯತ್ನವನ್ನು ಬೆಂಬಲಿಸಬೇಕು.

ಈ ಶೃಂಗಸಭೆಯು ಜಾಗತಿಕ ಇಂಧನ ಭದ್ರತೆ, ಸುಸ್ಥಿರ ಅಭಿವೃದ್ಧಿ ಮತ್ತು ಹವಾಮಾನ ಕ್ರಿಯೆಗೆ ಕೊಡುಗೆ ನೀಡುವಾಗ ತನ್ನ ಶುದ್ಧ ಇಂಧನ ಗುರಿಗಳನ್ನು ಸಾಧಿಸುವ ಭಾರತದ ಬದ್ಧತೆಯನ್ನು ಪುನರುಚ್ಚರಿಸಿತು. ಭಾರತದ ನವೀಕರಿಸಬಹುದಾದ ಇಂಧನ ಪಯಣವನ್ನು ಕೇವಲ ಸಾಮರ್ಥ್ಯ ಸೇರ್ಪಡೆಯ ಪ್ರಮಾಣದಿಂದ ಮಾತ್ರವಲ್ಲದೆ, ಸಂಯೋಜಿತ ಇಂಧನ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವ, ದೀರ್ಘಕಾಲೀನ ಹೂಡಿಕೆಯನ್ನು ಆಕರ್ಷಿಸುವ, ಆವಿಷ್ಕಾರಗಳನ್ನು ಪೋಷಿಸುವ, ದೇಶೀಯ ಉತ್ಪಾದನೆಯನ್ನು ಬಲಪಡಿಸುವ ಮತ್ತು ಯಶಸ್ವಿ ಪರಿಹಾರಗಳನ್ನು ಜಗತ್ತಿನೊಂದಿಗೆ ಹಂಚಿಕೊಳ್ಳುವ ಅದರ ಸಾಮರ್ಥ್ಯದಿಂದ ಹೆಚ್ಚಾಗಿ ವ್ಯಾಖ್ಯಾನಿಸಲಾಗುತ್ತಿದೆ ಎಂಬುದನ್ನೂ ಇದು ಪ್ರದರ್ಶಿಸಿತು.

 

*****


(ಪ್ರಕಟಣೆ ಐ.ಡಿ.: 2333220) ವಿಸಿಟರ್ ಕೌಂಟರ್ : 21
ಪ್ರಕಟಣೆಯನ್ನು ಇದರಲ್ಲಿ ಓದಿ: English , Gujarati , Urdu , हिन्दी , Tamil