ಪ್ರಕಟಣಾ ದಿನಾಂಕ:
02 NOV 2026 11:16AM by PIB Bengaluru
ಭಾರತ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯವು ವಿಕಸಿತ ಭಾರತ - ರೋಜ್ಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) ಗಾಗಿ ಖಾತರಿ: ವಿಬಿ-ಜಿ ರಾಮ್ ಜಿ - ಕುಂದುಕೊರತೆ ಪರಿಹಾರ ನಿಯಮಗಳು, 2026 ಅನ್ನು ಅಧಿಸೂಚನೆಯಲ್ಲಿ ಪ್ರಕಟಿಸಿದೆ. ಇದು ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದ ಕುಂದುಕೊರತೆಗಳನ್ನು ಪರಿಹರಿಸಲು ರಚನಾತ್ಮಕ, ಬಹು-ಹಂತದ ಮತ್ತು ಕಾಲಮಿತಿಯ ಕಾರ್ಯವಿಧಾನವನ್ನು ಒದಗಿಸುತ್ತದೆ. ಈ ನಿಯಮಗಳು ನಾಗರಿಕರ ಕಾಳಜಿಗಳತ್ತ ಸಕಾಲಿಕ ಗಮನ ಹರಿಸುವುದು ಮತ್ತು ಸೂಕ್ತ ಕ್ರಮಗಳನ್ನು ಕೈಗೊಳ್ಳುವುದನ್ನು ಖಚಿತಪಡಿಸಿಕೊಳ್ಳುವ ಜತೆಗೆ ಕುಂದುಕೊರತೆ ಪರಿಹಾರವನ್ನು ಹೆಚ್ಚು ಸುಲಭವಾಗಿ, ಪಾರದರ್ಶಕ ಮತ್ತು ಜವಾಬ್ದಾರಿಯುತವಾಗಿಸುವ ಗುರಿಯನ್ನು ಹೊಂದಿವೆ.
ಬಹು ಹಂತದ ಕುಂದುಕೊರತೆ ಪರಿಹಾರ ವ್ಯವಸ್ಥೆ
ಈ ನಿಯಮಗಳು ರಾಜ್ಯ ಸರ್ಕಾರಗಳಿಗೆ ಗ್ರಾಮ ಪಂಚಾಯತ್, ಬ್ಲಾಕ್ ಮತ್ತು ಜಿಲ್ಲಾ ಮಟ್ಟದಲ್ಲಿ ಕಾಲಮಿತಿಯ, ಬಹು ಹಂತದ ಕುಂದುಕೊರತೆ ಪರಿಹಾರ ವ್ಯವಸ್ಥೆಯನ್ನು ಸ್ಥಾಪಿಸಲು ಅವಕಾಶ ನೀಡುತ್ತವೆ. ನಿರ್ದಿಷ್ಟ ಹಂತಗಳಲ್ಲಿ ಗೊತ್ತುಪಡಿಸಿದ ಕುಂದುಕೊರತೆ ಪರಿಹಾರ ಅಧಿಕಾರಿಗಳು ಕುಂದುಕೊರತೆಗಳನ್ನು ಸ್ವೀಕರಿಸುವುದು, ನೋಂದಾಯಿಸುವುದು, ವಿಚಾರಣೆ ಮಾಡುವುದು ಮತ್ತು ವಿಲೇವಾರಿ ಮಾಡುವ ಜವಾಬ್ದಾರಿ ಹೊಂದಿರುತ್ತಾರೆ.
ಜಿಲ್ಲಾ ಕಾರ್ಯಕ್ರಮ ಸಂಯೋಜಕರು ಜಿಲ್ಲಾ ಮಟ್ಟದಲ್ಲಿ ಕುಂದುಕೊರತೆ ಪರಿಹಾರ ಮೇಲ್ವಿಚಾರಣೆ ಮಾಡುತ್ತಾರೆ ಮತ್ತು ಕುಂದುಕೊರತೆ ಪರಿಹಾರಕ್ಕಾಗಿ ನಿರ್ದಿಷ್ಟಪಡಿಸಿದ ಕಾರ್ಯವಿಧಾನ ಮತ್ತು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯದ ಮೂಲಕ ಕುಂದುಕೊರತೆಗಳನ್ನು ಪರಿಹರಿಸಲಾಗಿದೆಯೆ ಎಂದು ಖಾತ್ರಿಪಡಿಸಿಕೊಳ್ಳುತ್ತಾರೆ.
ದೂರುಗಳ ಸಲ್ಲಿಕೆಗೆ ಹಲವು ಮಾರ್ಗಗಳು
ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದ ಅಥವಾ ಅದರಿಂದ ಉದ್ಭವಿಸುವ ಯಾವುದೇ ವಿಷಯದ ಕುರಿತು ದೂರುಗಳನ್ನು ಸಲ್ಲಿಸಲು, ಪ್ರತಿಯೊಬ್ಬರಿಗೂ ಸುಲಭ ಅವಕಾಶ ಕಲ್ಪಿಸಲಾಗಿದೆ. ಈ ನಿಯಮಗಳಡಿಯಲ್ಲಿ, ದೂರುಗಳನ್ನು ಸಲ್ಲಿಸಲು ಈ ಕೆಳಗಿನ ಹಲವು ಮಾರ್ಗಗಳನ್ನು ಒದಗಿಸಲಾಗಿದೆ:
- ನಿಗದಿತ 'ದೂರು ಪರಿಹಾರ ಅಧಿಕಾರಿ'ಯ ಮುಂದೆ ಖುದ್ದಾಗಿ ಹಾಜರಾಗಿ;
- ತಲುಪಿದ ಬಗ್ಗೆ ಪುರಾವೆಯೊಂದಿಗೆ ಸ್ಪೀಡ್ ಪೋಸ್ಟ್ ಮೂಲಕ ದೂರು ಸಲ್ಲಿಕೆ;
- ಕೇಂದ್ರ ಸರ್ಕಾರವು ನಿಗದಿಪಡಿಸಿರುವ 'ದೂರು ಪರಿಹಾರಕ್ಕಾಗಿನ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ'ದ ಮೂಲಕ; ಮತ್ತು
- ದೂರವಾಣಿ, ನಿಗದಿತ ಸಹಾಯವಾಣಿಗಳು ಅಥವಾ ರಾಜ್ಯ ಸರ್ಕಾರವು ನಿರ್ಧರಿಸುವ ಇತರೆ ಯಾವುದೇ ವಿಧಾನದ ಮೂಲಕ.
ಗ್ರಾಮ ಪಂಚಾಯಿತಿ, ಬ್ಲಾಕ್ ಅಥವಾ ಜಿಲ್ಲಾ ಮಟ್ಟದಲ್ಲಿ ಭೌತಿಕ ರೂಪದಲ್ಲಿ (ಲಿಖಿತವಾಗಿ ಅಥವಾ ಕಾಗದದ ರೂಪದಲ್ಲಿ) ಸ್ವೀಕರಿಸಲಾದ ದೂರುಗಳನ್ನು, ಅವು ಸ್ವೀಕರಿಸಲ್ಪಟ್ಟ ದಿನದಂದೇ ಅಥವಾ ಅದು ಸಾಧ್ಯವಾಗದಿದ್ದಲ್ಲಿ, ಮುಂದಿನ ಕೆಲಸದ ದಿನದೊಳಗೆ ನಿಗದಿತ 'ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ'ದಲ್ಲಿ ದಾಖಲಿಸಬೇಕು ಮತ್ತು ನೋಂದಾಯಿಸಬೇಕು.
ದೂರು ನೋಂದಾಯಿಸಲ್ಪಟ್ಟ ನಂತರ, ದೂರುದಾರರಿಗೆ ಒಂದು ಸ್ವೀಕೃತಿ ಪತ್ರ ಸಿಗುತ್ತದೆ. ಅದರಲ್ಲಿ ನೋಂದಣಿ ಸಂಖ್ಯೆ, ಸ್ವೀಕರಿಸಿದ ದಿನಾಂಕ ಮತ್ತು ದೂರು ಸ್ವೀಕರಿಸಿದ ಅಧಿಕಾರಿಯ ಹುದ್ದೆಯ ವಿವರವಿರುತ್ತದೆ. ದೂರುಗಳನ್ನು ಡಿಜಿಟಲ್ ಮಾಧ್ಯಮದ ಮೂಲಕ ಸಲ್ಲಿಸಿದರೆ ಸ್ವೀಕೃತಿಯು ಡಿಜಿಟಲ್ ರೂಪದಲ್ಲಿಯೂ, ಭೌತಿಕವಾಗಿ ಸಲ್ಲಿಸಿದರೆ ಕಾಗದದ ರೂಪದಲ್ಲಿಯೂ ಲಭ್ಯವಾಗುತ್ತದೆ.
ಮುಖ್ಯವಾಗಿ ದೂರಿನ ಸ್ವರೂಪ, ಭಾಷೆ, ಸಲ್ಲಿಸಿದ ರೀತಿ ಅಥವಾ ಪ್ರಕ್ರಿಯೆಯಲ್ಲಿನ ಯಾವುದೇ ನ್ಯೂನತೆಗಳ ಕಾರಣವಾಗಿ ನೀಡಿ, ದೂರು ನೋಂದಣಿ ನಿರಾಕರಿಸುವಂತಿಲ್ಲ. ಈ ನಿಬಂಧನೆಯು, ನಾಗರಿಕರು ಪ್ರಕ್ರಿಯೆಗಳಲ್ಲಿನ ಯಾವುದೇ ತೊಡಕುಗಳಿಲ್ಲದೆ ದೂರು ಪರಿಹಾರ ವ್ಯವಸ್ಥೆ ಸುಲಭವಾಗಿ ಬಳಸಿಕೊಳ್ಳುವುದನ್ನು ಖಾತ್ರಿಪಡಿಸುತ್ತದೆ.
ವಿಚಾರಣೆ ಮತ್ತು ಪರಿಹಾರಕ್ಕಾಗಿ ನಿಗದಿತ ಕಾಲಮಿತಿ
ಈ ನಿಯಮಗಳು ದೂರುಗಳನ್ನು ತ್ವರಿತವಾಗಿ ಪರಿಶೀಲಿಸಿ ಪರಿಹರಿಸುವುದನ್ನು ಖಾತ್ರಿಪಡಿಸಿಕೊಳ್ಳಲು, ನಿರ್ದಿಷ್ಟವಾದ ಕಾಲಮಿತಿಗಳನ್ನು ನಿಗದಿಪಡಿಸುತ್ತವೆ. ನಿಯೋಜಿತ 'ದೂರು ಪರಿಹಾರ ಅಧಿಕಾರಿ'ಯು ನೋಂದಾಯಿತ ಪ್ರತಿಯೊಂದು ದೂರನ್ನು ಪರಿಶೀಲಿಸಬೇಕು ಮತ್ತು ಅಗತ್ಯ ವಿಚಾರಣೆ ನಡೆಸಬೇಕು. ಈ ಉದ್ದೇಶಕ್ಕಾಗಿ ಆ ಅಧಿಕಾರಿಯು ಸಂಬಂಧಪಟ್ಟ ಪ್ರಾಧಿಕಾರಗಳು ಅಥವಾ ಅಧಿಕಾರಿಗಳಿಂದ ಅಗತ್ಯ ದಾಖಲೆಗಳು, ರಿಜಿಸ್ಟರ್ಗಳು, ವರದಿಗಳು, ಎಲೆಕ್ಟ್ರಾನಿಕ್ ದತ್ತಾಂಶ ಅಥವಾ ಇತರ ಮಾಹಿತಿ ಕೇಳಿ ಪಡೆಯಬಹುದು.
ಅಗತ್ಯಬಿದ್ದರೆ ದೂರು ಇತ್ಯರ್ಥಗೊಳ್ಳುವ ಮೊದಲು, ದೂರುದಾರರಿಗೆ ಖುದ್ದಾಗಿ ಅಥವಾ ಎಲೆಕ್ಟ್ರಾನಿಕ್ ಮಾಧ್ಯಮದ ಮೂಲಕ ತಮ್ಮ ಅಭಿಪ್ರಾಯ ಮಂಡಿಸಲು ಸೂಕ್ತ ಅವಕಾಶ ನೀಡಲಾಗುತ್ತದೆ.
ದೂರಿನ ಮೇಲಿನ ವಿಚಾರಣೆಯು, ದೂರು ಸ್ವೀಕರಿಸಿದ ದಿನಾಂಕದಿಂದ ಏಳು ಕೆಲಸದ ದಿನಗಳೊಳಗೆ ಪೂರ್ಣಗೊಳ್ಳಬೇಕು. ವಿಚಾರಣೆ ಪೂರ್ಣಗೊಂಡ ನಂತರ, ದೂರು ಪರಿಹಾರ ಅಧಿಕಾರಿಯು ತಮ್ಮ ತೀರ್ಮಾನಗಳನ್ನು ದಾಖಲಿಸುತ್ತಾರೆ ಮತ್ತು ಕಾಯಿದೆ ಹಾಗೂ ನಿಯಮಗಳಿಗೆ ಅನುಗುಣವಾಗಿ ಸೂಕ್ತ ತಿದ್ದುಪಡಿ ಅಥವಾ ಪರಿಹಾರ ಕ್ರಮ ಕೈಗೊಳ್ಳುತ್ತಾರೆ (ಅಥವಾ ಕೈಗೊಳ್ಳುವಂತೆ ಮಾಡುತ್ತಾರೆ). ದೂರು ಸ್ವೀಕರಿಸಿದ ದಿನಾಂಕದಿಂದ 15 ದಿನಗಳೊಳಗೆ ಅದನ್ನು ಪರಿಹರಿಸುವುದು ಕಡ್ಡಾಯವಾಗಿದೆ.
ಕೈಗೊಂಡ ತೀರ್ಮಾನಗಳು ಮತ್ತು ಕ್ರಮಗಳನ್ನು ನಿಗದಿತ 'ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ' ದಲ್ಲಿ ದಾಖಲಿಸಲಾಗುತ್ತದೆ ಮತ್ತು ದೂರುದಾರರಿಗೆ ತಿಳಿಸಲಾಗುತ್ತದೆ. ಒಂದು ವೇಳೆ ದೂರು ಭೌತಿಕ ರೂಪದಲ್ಲಿ (ಕಾಗದದ ರೂಪದಲ್ಲಿ) ಸ್ವೀಕರಿಸಲ್ಪಟ್ಟಿದ್ದರೆ, ಅದರ ಫಲಿತಾಂಶ ಮತ್ತು ಕೈಗೊಂಡ ಕ್ರಮವನ್ನು ದೂರುದಾರರಿಗೆ ಭೌತಿಕ ರೂಪದಲ್ಲೇ ತಿಳಿಸಲಾಗುತ್ತದೆ.
ಪರಿಹರಿಸಲಾಗದ ದೂರುಗಳ ಡಿಜಿಟಲ್ ಟ್ರ್ಯಾಕಿಂಗ್ ಮತ್ತು ಉನ್ನತ ಹಂತಕ್ಕೆ ವರ್ಗಾವಣೆ
ನಿಗದಿತ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವು, ದೂರು ನೋಂದಣಿಯಿಂದ ಹಿಡಿದು ಅಂತಿಮ ಇತ್ಯರ್ಥದವರೆಗೆ, ದೂರುಗಳ ಸಂಪೂರ್ಣ ಪ್ರಕ್ರಿಯೆ ಟ್ರ್ಯಾಕ್ ಮಾಡಲು ಅನುವು ಮಾಡಿಕೊಡುತ್ತದೆ. ಇದು ವಿಚಾರಣೆ, ತೀರ್ಮಾನಗಳು ಮತ್ತು ಕೈಗೊಂಡ ಕ್ರಮಗಳನ್ನು ಎಲೆಕ್ಟ್ರಾನಿಕ್ ರೂಪದಲ್ಲಿ ದಾಖಲಿಸಲು ಸಹಕರಿಸುತ್ತದೆ; ಆ ಮೂಲಕ ದೂರು ಪರಿಹಾರ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆ ಬಲವರ್ಧನೆಗೊಳಿಸುತ್ತದೆ.
ನಿಗದಿತ 15 ದಿನಗಳ ಅವಧಿಯೊಳಗೆ ಪರಿಹರಿಸಲಾಗದ ಯಾವುದೇ ದೂರು, ರಾಜ್ಯ ಸರ್ಕಾರವು ಸ್ಥಾಪಿಸಿರುವ ದೂರು ಪರಿಹಾರ ವ್ಯವಸ್ಥೆಯ ಮೂಲಕ ಮುಂದಿನ ಉನ್ನತ ಹಂತಕ್ಕೆ ವರ್ಗಾಯಿಸಲ್ಪಡುತ್ತದೆ. ಹೀಗೆ ವರ್ಗಾಯಿಸಲ್ಪಟ್ಟ ದೂರಿಗೆ ಸಂಬಂಧಿಸಿದ ಪ್ರಾಧಿಕಾರವು ವಿಷಯ ಪರಿಶೀಲಿಸಿ, ಅದನ್ನು ಇತ್ಯರ್ಥಪಡಿಸಲು ಸೂಕ್ತ ಕ್ರಮ ಕೈಗೊಳ್ಳುತ್ತದೆ. ಇಂತಹ ದೂರುಗಳು ಪರಿಹಾರಗೊಳ್ಳುವವರೆಗೂ ಎಲೆಕ್ಟ್ರಾನಿಕ್ ವ್ಯವಸ್ಥೆಯ ಮೂಲಕ ನಿರಂತರ ಮೇಲ್ವಿಚಾರಣೆಗೆ ಒಳಪಡುತ್ತವೆ.
ಮೇಲ್ಮನವಿಗಳಿಗೆ ಅವಕಾಶ
ಕುಂದುಕೊರತೆ ಪರಿಹಾರ ಕಾರ್ಯವಿಧಾನದಡಿಯಲ್ಲಿ ಹೊರಡಿಸಲಾದ ಆದೇಶಗಳ ವಿರುದ್ಧ ಮೇಲ್ಮನವಿಗಳನ್ನು ಸಲ್ಲಿಸಲು ನಿಯಮಗಳಲ್ಲಿ ಅವಕಾಶ ನೀಡಲಾಗಿದೆ. ಅಂತಹ ಮೇಲ್ಮನವಿಗಳನ್ನು ವಿಬಿ-ಜಿ ರಾಮ್ ಜಿ ಕಾಯ್ದೆ, 2025 ರ ಶೆಡ್ಯೂಲ್ I ರ ಪ್ರಕಾರ ಸಲ್ಲಿಸಲಾಗುತ್ತದೆ ಮತ್ತು ವಿಲೇವಾರಿ ಮಾಡಲಾಗುತ್ತದೆ.
ಈ ನಿಯಮಗಳ ಮೂಲಕ ಕೇಂದ್ರ ಸರ್ಕಾರವು ವಿಬಿ-ಜಿ ರಾಮ್ ಜಿ ಅಡಿಯಲ್ಲಿ ನಾಗರಿಕ-ಸ್ನೇಹಿ, ಸುಲಭವಾಗಿ ಲಭ್ಯವಾಗಬಹುದಾದ ಮತ್ತು ಕಾಲಮಿತಿಯ ಕುಂದುಕೊರತೆ ಪರಿಹಾರ ಚೌಕಟ್ಟನ್ನು ಸಾಂಸ್ಥೀಕರಣಗೊಳಿಸಲು ಪ್ರಯತ್ನಿಸುತ್ತದೆ. ಬಹು ಹಂತದ ಸಾಂಸ್ಥಿಕ ಕಾರ್ಯವಿಧಾನ, ಕುಂದುಕೊರತೆ ಸಲ್ಲಿಕೆಗೆ ಹಲವು ಮಾರ್ಗಗಳು, ಕಡ್ಡಾಯ ನೋಂದಣಿ, ನಿರ್ದಿಷ್ಟಪಡಿಸಿದ ಕಾಲಮಿತಿಗಳು, ಡಿಜಿಟಲ್ ಟ್ರ್ಯಾಕಿಂಗ್ ಮತ್ತು ಬಗೆಹರಿಸದ ಕುಂದುಕೊರತೆಗಳನ್ನು ಉನ್ನತ ಹಂತಕ್ಕೆ ವರ್ಗಾಯಿಸುವ ಆಡಳಿತಾತ್ಮಕ ಹೊಣೆಗಾರಿಕೆ ಬಲಪಡಿಸುತ್ತದೆ ಮತ್ತು ಯೋಜನೆಯ ಅನುಷ್ಠಾನದ ಸ್ಪಂದನೆಯನ್ನು ಸುಧಾರಿಸುತ್ತದೆಂದು ನಿರೀಕ್ಷಿಸಲಾಗಿದೆ.
ವಿಬಿ–ಜಿ ರಾಮ್ ಜಿ ಅನುಷ್ಠಾನಕ್ಕೆ ಸಂಬಂಧಿಸಿದ ಕುಂದುಕೊರತೆಗಳನ್ನು ವ್ಯವಸ್ಥಿತವಾಗಿ, ಪಾರದರ್ಶಕವಾಗಿ ಮತ್ತು ನಿಗದಿತ ಸಮಯದೊಳಗೆ ಪರಿಹರಿಸಲಾಗಿದೆ ಎಂದು ಖಾತ್ರಿಪಡಿಸಿಕೊಳ್ಳುವಲ್ಲಿ ಈ ಅಧಿಸೂಚನೆಯು ಒಂದು ಪ್ರಮುಖ ಹೆಜ್ಜೆಯಾಗಿದೆ. ಇದರಿಂದಾಗಿ ಯೋಜನೆಯಡಿಯಲ್ಲಿ ಗ್ರಾಮೀಣ ಕುಟುಂಬಗಳ ಹಕ್ಕುಗಳು ಮತ್ತು ಸವಲತ್ತುಗಳು ತಲುಪುವುದನ್ನು ಪುನರುಚ್ಚರಿಸುತ್ತದೆ.
*****