ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ಗುಜರಾತಿನ ಕೆವಾಡಿಯಾದಲ್ಲಿ ರಾಷ್ಟ್ರೀಯ ಏಕತಾ ದಿವಸ್ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಅವರ ಭಾಷಣದ ಕನ್ನಡ ಅವತರಣಿಕೆ

ಪ್ರಕಟಣಾ ದಿನಾಂಕ: 31 OCT 2026 9:34PM by PIB Bengaluru

 ನಾನು "ಸರ್ದಾರ್ ಪಟೇಲ್" ಎಂದು ಹೇಳುತ್ತೇನೆ ಮತ್ತು ನೀವೆಲ್ಲರೂ ಅದಕ್ಕೆ ಪ್ರತಿಕ್ರಿಯಿಸಿ, "ಶಾಶ್ವತವಾಗಿ ಅಮರ, ಶಾಶ್ವತವಾಗಿ ಅಮರ."

ಸರ್ದಾರ್ ಪಟೇಲ್ – ಶಾಶ್ವತವಾಗಿ ಅಮರ, ಶಾಶ್ವತವಾಗಿ ಅಮರ.

ಸರ್ದಾರ್ ಪಟೇಲ್ - ಶಾಶ್ವತವಾಗಿ ಅಮರ, ಶಾಶ್ವತವಾಗಿ ಅಮರ.

ಸರ್ದಾರ್ ಪಟೇಲ್ - ಶಾಶ್ವತವಾಗಿ ಅಮರ, ಶಾಶ್ವತವಾಗಿ ಅಮರ.

ನನ್ನ ಪ್ರೀತಿಯ ದೇಶವಾಸಿಗಳೇ,

ಇಂದಿನ ಕಾರ್ಯಕ್ರಮವು ಸ್ವಲ್ಪ ವಿಭಿನ್ನವಾಗಿದೆ. ಇಲ್ಲಿಯವರೆಗೆ, ನಾವು ಯಾವಾಗಲೂ ಏಕತಾ ದಿನದಂದು ಬೆಳಗ್ಗೆ ಈ ಕಾರ್ಯಕ್ರಮವನ್ನು ನಡೆಸುತ್ತಿದ್ದೆವು. ಈ ಬಾರಿ, ಸ್ವಲ್ಪ ಬದಲಾವಣೆಯಾಗಿದೆ. ನಾವೆಲ್ಲರೂ ಸಂಜೆ ಒಟ್ಟುಗೂಡಿದ್ದೇವೆ. ಬೆಳಿಗ್ಗೆ, ಲಕ್ಷಾಂತರ ನಾಗರಿಕರು ರಾಷ್ಟ್ರೀಯ ಏಕತೆಯ ಪ್ರತಿಜ್ಞೆಯೊಂದಿಗೆ ಏಕತಾ ಓಟದಲ್ಲಿ ಭಾಗವಹಿಸಿದರು. ಏಕತಾ ಓಟದಲ್ಲಿ ಜನರ ಉತ್ಸಾಹವನ್ನು ನಾವು ನೋಡಿದ್ದೇವೆ. ನಿನ್ನೆ ಸಂಜೆ, ಭಾರತ್ ಪರ್ವ್ ಪೆವಿಲಿಯನ್ನಲ್ಲಿ ಭವ್ಯವಾದ ಪ್ರಸ್ತುತಿಗಳನ್ನು ನಾನು ನೋಡಿದೆ. ಮತ್ತು ಈಗ, ಈ ರಾಷ್ಟ್ರೀಯ ಸಂದರ್ಭದಲ್ಲಿ, ನಾವು ಸರ್ದಾರ್ ಪಟೇಲ್ ಅವರ ಪಾದಗಳ ಬಳಿ ಉಪಸ್ಥಿತರಿದ್ದೇವೆ.

ಸ್ನೇಹಿತರೇ,

ಇದು ವಿಶ್ವದ ಅತಿ ಎತ್ತರದ ಪ್ರತಿಮೆ, ಏಕತಾ ಪ್ರತಿಮೆ. ಇದರ ನಿರ್ಮಾಣದಲ್ಲಿ ಇಡೀ ರಾಷ್ಟ್ರದ ಭಾಗವಹಿಸುವಿಕೆ, ಈ ಸ್ಥಳದ ವಿಶಿಷ್ಟ ಸೆಳವು ಮತ್ತು ಏಕತಾ ದಿನದ ಅಸಾಧಾರಣ ಶಕ್ತಿ ಮತ್ತು ಸ್ಫೂರ್ತಿ –ಯಾರೇ ಆದರೂ ಇಲ್ಲಿಗೆ ಬಂದಾಗ ಅವರ  ಹೃದಯವನ್ನು ಹೆಮ್ಮೆ ಮತ್ತು ಕೃತಜ್ಞತೆಯಿಂದ ತುಂಬುತ್ತದೆ. ಈ ಮಹಾನ್ ರಾಷ್ಟ್ರದ ಪ್ರಜೆಯಾಗಿರುವುದಕ್ಕೆ ಹೆಮ್ಮೆ ಮತ್ತು ಸ್ವಾತಂತ್ರ್ಯದ ನಂತರ 550 ಕ್ಕೂ ಹೆಚ್ಚು ರಾಜಪ್ರಭುತ್ವದ ರಾಜ್ಯಗಳನ್ನು ಒಂದುಗೂಡಿಸಿದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಿಗೆ ಕೃತಜ್ಞತಾ ಭಾವ. ಉಕ್ಕಿನ ಸಂಕಲ್ಪದೊಂದಿಗೆ, ಅವರು ಈ ರಾಷ್ಟ್ರವನ್ನು ಏಕತೆಯ ಎಳೆಯಲ್ಲಿ ಬಂಧಿಸಿದರು.

ಸ್ನೇಹಿತರೇ,

ಯಾವುದೇ ರಾಷ್ಟ್ರಕ್ಕೆ ಸ್ವಾತಂತ್ರ್ಯ ಅತ್ಯಗತ್ಯ. ಒಂದು ರಾಷ್ಟ್ರವು ಸ್ವತಂತ್ರವಾದಾಗ, ಅದು ತನ್ನ ಭವಿಷ್ಯವನ್ನು ತಾನೇ ನಿರ್ಧರಿಸುತ್ತದೆ. ಆದರೆ ಗಣರಾಜ್ಯದ ಮೂಲಕ ಸ್ವಾತಂತ್ರ್ಯವು ಸರಿಯಾದ ದಿಕ್ಕನ್ನು ಪಡೆಯುತ್ತದೆ. ಗಣರಾಜ್ಯವು ಸಂವಿಧಾನದ ಚೌಕಟ್ಟಿನೊಳಗೆ ನಿರ್ಧಾರಗಳನ್ನು ತೆಗೆದುಕೊಳ್ಳುವ ಮಾರ್ಗವನ್ನು ನಮಗೆ ತೋರಿಸುತ್ತದೆ. ಸಂವಿಧಾನವು ನಮ್ಮನ್ನು ಜನರಿಗೆ ಜವಾಬ್ದಾರರನ್ನಾಗಿ ಮಾಡುತ್ತದೆ. ಮತ್ತು ಏಕತೆಯು ಒಂದು ರಾಷ್ಟ್ರವಾಗಿ ಮುಂದುವರಿಯಲು ನಮಗೆ ಶಕ್ತಿಯನ್ನು ನೀಡುತ್ತದೆ. ಅದಕ್ಕಾಗಿಯೇ ನಮ್ಮ ದೇಶದಲ್ಲಿ, ಸ್ವಾತಂತ್ರ್ಯ ದಿನ, ಗಣರಾಜ್ಯೋತ್ಸವ ಮತ್ತು ಏಕತಾ ದಿನವನ್ನು ರಾಷ್ಟ್ರೀಯ ಹಬ್ಬಗಳಾಗಿ ಬಹಳ ಉತ್ಸಾಹದಿಂದ ಆಚರಿಸಲಾಗುತ್ತದೆ.

ಸ್ನೇಹಿತರೇ,

ಇಂದು ಮತ್ತೊಮ್ಮೆ, ಏಕ್ತಾ ನಗರದಲ್ಲಿ, ನಾವು ಭಾರತದ ಏಕತೆಯ ಭವ್ಯ ದೃಷ್ಟಿಕೋನಕ್ಕೆ ಸಾಕ್ಷಿಯಾಗಿದ್ದೇವೆ. ಈ ವರ್ಷದ ರಾಷ್ಟ್ರೀಯ ಏಕತಾ ಪರೇಡ್ ಕೂಡ ಅಸಾಧಾರಣವಾಗಿದೆ. ಈ ಮೆರವಣಿಗೆಯು ನಮ್ಮ ಪೊಲೀಸ್ ಮತ್ತು ಭದ್ರತಾ ಪಡೆಗಳ ಧೈರ್ಯ ಮತ್ತು ಶೌರ್ಯಕ್ಕೆ ಸಮರ್ಪಿತವಾಗಿದೆ. ಸ್ತಬ್ಧಚಿತ್ರಗಳ ಮೂಲಕ, ರಾಷ್ಟ್ರದ ಪರಂಪರೆ ಮತ್ತು ಆಕಾಂಕ್ಷೆಗಳನ್ನು ದೇಶದ ಮುಂದೆ ಪ್ರಸ್ತುತಪಡಿಸಲಾಗಿದೆ. ಆದ್ದರಿಂದ, ಏಕತಾ ದಿನವು ಇನ್ನು ಮುಂದೆ ಕೇವಲ ಅಧಿಕೃತ ಕಾರ್ಯಕ್ರಮಗಳಿಗೆ ಸೀಮಿತವಾಗಿಲ್ಲ. ಸಾರ್ವಜನಿಕ ಸಹಭಾಗಿತ್ವದ ಮೂಲಕ, ಇದು ರಾಷ್ಟ್ರೀಯ ಹೆಮ್ಮೆಯ ಆಚರಣೆಯಾಗಿ ಮಾರ್ಪಟ್ಟಿದೆ. ಈ ಸಂದರ್ಭದಲ್ಲಿ, ನಾನು ಎಲ್ಲಾ ದೇಶವಾಸಿಗಳಿಗೆ ರಾಷ್ಟ್ರೀಯ ಏಕತಾ ದಿನದಂದು ನನ್ನ ಶುಭಾಶಯಗಳನ್ನು ಸಲ್ಲಿಸುತ್ತೇನೆ. ನಾನು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪಾದಗಳಿಗೆ ಅಪಾರ ಗೌರವದಿಂದ ನಮಸ್ಕರಿಸುತ್ತೇನೆ.

ಸ್ನೇಹಿತರೇ,

ಸರ್ದಾರ್ ಪಟೇಲ್ ಅವರು ಭಾರತದ ಇತಿಹಾಸದಲ್ಲಿ ಆ ಮಹಾನ್ ವ್ಯಕ್ತಿತ್ವವಾಗಿದ್ದು, ಅವರಿಲ್ಲದೆ ಇಂದಿನ ಭಾರತವನ್ನು ಕಲ್ಪಿಸಿಕೊಳ್ಳುವುದು ಸಹ ಕಷ್ಟ. ಇಂದು ನಮಗೆ ತಿಳಿದಿರುವ ಭಾರತವನ್ನು ರೂಪಿಸಿದವರು ಸರ್ದಾರ್ ಪಟೇಲ್. ವಿಭಜನೆಯ ನಂತರವೂ, ಹಿಮಾಲಯದಿಂದ ಹಿಂದೂ ಮಹಾಸಾಗರದವರೆಗೆ ಭಾರತವನ್ನು ಸುರಕ್ಷಿತವಾಗಿರಿಸಿದ ವ್ಯಕ್ತಿ ಸರ್ದಾರ್ ಪಟೇಲ್.

ಸ್ನೇಹಿತರೇ,

ಸರ್ದಾರ್ ಪಟೇಲ್ ಅವರು ಭಾರತದ ಗುಣಲಕ್ಷಣ ಮತ್ತು ಪ್ರಜ್ಞೆಯನ್ನು ಅರ್ಥಮಾಡಿಕೊಂಡಿದ್ದರಿಂದ ಇದನ್ನು ಮಾಡಲು ಸಾಧ್ಯವಾಯಿತು. ಭಾರತದ ವೈವಿಧ್ಯತೆಯು ಅದರ ದೌರ್ಬಲ್ಯವಲ್ಲ ಎಂದು ಅವರಿಗೆ ತಿಳಿದಿತ್ತು. ಭಾರತದ ವೈವಿಧ್ಯತೆಯು ವಾಸ್ತವವಾಗಿ ಅದರ ಏಕತೆಯ ನಿಜವಾದ ಅಡಿಪಾಯ ಎಂದು ಅವರಿಗೆ ತಿಳಿದಿತ್ತು. ಸಾವಿರಾರು ವರ್ಷಗಳಿಂದ ನಾವು ಈ ರೀತಿಯಾಗಿ ಬದುಕಿದ್ದೇವೆ. ಈ ಶಕ್ತಿಯಿಂದಲೇ ನಾವು ಪ್ರಗತಿ ಮತ್ತು ಸಮೃದ್ಧಿಯ ಉತ್ತುಂಗವನ್ನು ಮುಟ್ಟಿದ್ದೇವೆ.

ಸ್ನೇಹಿತರೇ,

ಸರ್ದಾರ್ ಪಟೇಲ್ ಅವರು ಮತ್ತೊಮ್ಮೆ ಆ ಭಾರತಕ್ಕೆ ಅಡಿಪಾಯ ಹಾಕಿದರು. ಅವರು ಕೇವಲ ರಾಷ್ಟ್ರದ ಭೌಗೋಳಿಕತೆಯನ್ನು ರೂಪಿಸಿದ್ದಲ್ಲ; ಅವರು ಭಾವನಾತ್ಮಕ ಏಕತೆಯ ಮೂಲಕ ದೇಶವನ್ನು ಒಗ್ಗೂಡಿಸಿದರು. ಗುಜರಾತಿನ ಸೋಮನಾಥ ದೇವಾಲಯದ ಪುನರ್ ನಿರ್ಮಾಣದ ಮೂಲಕ, ಅವರು ರಾಷ್ಟ್ರದ ಸಾಂಸ್ಕೃತಿಕ ಪುನರುಜ್ಜೀವನಕ್ಕೆ ಚಾಲನೆ ನೀಡಿದರು.

ಸ್ನೇಹಿತರೇ,

ಈ ವರ್ಷ ಆ ಶ್ರೇಷ್ಟ ಕಾರ್ಯದ 75ನೇ ವಾರ್ಷಿಕೋತ್ಸವವೂ ಆಗಿದೆ. ಆಕ್ರಮಣಕಾರರು ಪದೇ ಪದೇ ನಾಶಪಡಿಸುವ ನಿಟಿನಲ್ಲಿ ನಡೆಸಿದ ಪ್ರಯತ್ನಗಳ ನಡುವೆಯೂ ಸೋಮನಾಥ ದೇವಾಲಯದ ಧ್ವಜವು ಸಾವಿರ ವರ್ಷಗಳಿಂದ ಹೆಮ್ಮೆಯಿಂದ ಹಾರಾಡುತ್ತಿರುವಂತೆಯೇ, ಅದೇ ಸ್ವಾಭಿಮಾನದ ಸ್ಪೂರ್ತಿಯು ಸೋಮನಾಥ ಸ್ವಾಭೀಮಾನ್ ಪರ್ವವನ್ನು ಆಚರಿಸಲು ನಮಗೆ ಪ್ರೇರಣೆ ನೀಡಿತು. ಮತ್ತು ಈ ವರ್ಷ, ರಾಷ್ಟ್ರವು ಆ ಸಂದರ್ಭವನ್ನು ಅಷ್ಟೇ ಉತ್ಸಾಹದಿಂದ ಆಚರಿಸುತ್ತಿದೆ.

ನನ್ನ ಪ್ರೀತಿಯ ದೇಶವಾಸಿಗಳೇ,

ಇಂದು, ರಾಷ್ಟ್ರೀಯ ಏಕತೆಯ ಈ ಮಹಾನ್ ಸಮಾರಂಭಗಳು, ಜಾಗತಿಕ ವೇದಿಕೆಯಲ್ಲಿ ಭಾರತದ ಏರುತ್ತಿರುವ ಸ್ಥಾನಮಾನ, ನಮ್ಮ ಆರ್ಥಿಕ ಪ್ರಗತಿಯ ತ್ವರಿತ ಗತಿ ಮತ್ತು ಕಾಶಿ ವಿಶ್ವನಾಥದಿಂದ ರಾಮ ಮಂದಿರದವರೆಗಿನ ನಮ್ಮ ಪವಿತ್ರ ಕೇಂದ್ರಗಳ ಪುನರುಜ್ಜೀವನ, ಇವೆಲ್ಲವೂ ಭಾರತವು ಸಾಗುತ್ತಿರುವ ದಿಕ್ಕಿನತ್ತ ಸೂಚಿಸುತ್ತವೆ. ಇದು ಸರ್ದಾರ್ ಪಟೇಲ್ ಅವರು ನಮಗೆ ತೋರಿಸಿದ ಮಾರ್ಗವಾಗಿದೆ. ಇದಕ್ಕಾಗಿ, ರಾಷ್ಟ್ರವು ಅವರಿಗೆ ಎಂದೆಂದಿಗೂ ಋಣಿಯಾಗಿರುತ್ತದೆ.

ಸ್ನೇಹಿತರೇ,

ಕಳೆದ ವರ್ಷ, ನಾವು ಸರ್ದಾರ್ ಪಟೇಲ್ ಅವರ 150ನೇ ಜನ್ಮ ದಿನವನ್ನು ಆಚರಿಸಿದ್ದೇವೆ. ಎರಡು ವರ್ಷಗಳ ಕಾಲ ದೇಶಾದ್ಯಂತ ಕಾರ್ಯಕ್ರಮಗಳು ಮತ್ತು ಆಚರಣೆಗಳನ್ನು ಆಯೋಜಿಸಲಾಯಿತು. ನಾವು ರಾಷ್ಟ್ರಕ್ಕಾಗಿ ಪ್ರಮುಖ ನಿರ್ಣಯಗಳನ್ನು ತೆಗೆದುಕೊಂಡಿದ್ದೇವೆ ಮತ್ತು ಅವುಗಳನ್ನು ಈಡೇರಿಸಲು ಪ್ರತಿಜ್ಞೆ ಮಾಡಿದ್ದೇವೆ. ಮತ್ತು ಇಂದು, ನಾವು ಅವರ 151ನೇ ಜನ್ಮ ದಿನಾಚರಣೆಯನ್ನು ಆಚರಿಸುತ್ತಿರುವಾಗ, ರಾಷ್ಟ್ರವು ಆ ನಿರ್ಣಯಗಳನ್ನು ಬಹಳ ಕಡಿಮೆ ಅವಧಿಯಲ್ಲಿ ಪೂರೈಸಿದೆ ಎಂದು ನಾವು ತೃಪ್ತಿಯಿಂದ ಹೇಳಬಹುದು. ಈ ಎರಡು ವರ್ಷಗಳಲ್ಲಿ, ದೇಶವು ಹಲವಾರು ಅಭೂತಪೂರ್ವ ಸಾಧನೆಗಳನ್ನು ಸಾಧಿಸಿದೆ.

ಸ್ನೇಹಿತರೇ,

ಸರ್ದಾರ್ ಪಟೇಲ್ ಅವರ 150ನೇ ಜನ್ಮ ದಿನಾಚರಣೆಯ ಸಂದರ್ಭದಲ್ಲಿ, ಇಲ್ಲಿ ಅವರ ಪಾದಗಳ ಬಳಿ ನಿಂತು, "ದೇಶವು ನಕ್ಸಲಿಸಂ ಮತ್ತು ಮಾವೋವಾದಿ ಭಯೋತ್ಪಾದನೆಯಿಂದ ಸಂಪೂರ್ಣವಾಗಿ ಮುಕ್ತವಾಗುವವರೆಗೆ, ನಾವು ವಿರಮಿಸುವುದಿಲ್ಲ" ಎಂದು ಹೇಳಿದ್ದೆ. ಸರಿಯಾಗಿ ಒಂದು ವರ್ಷದ ನಂತರ, ನಾವು ಇಂದು ಇಲ್ಲಿ ನಿಂತಿರುವಂತೆ, ಆ ರಾಷ್ಟ್ರೀಯ ಸಂಕಲ್ಪವು ಈಡೇರಿದೆ. ಇಂದು, ದೇಶದಲ್ಲಿ ನಕ್ಸಲಿಸಂನ ಬೆನ್ನೆಲುಬು ಮುರಿದಿದೆ. 2015 ರಲ್ಲಿ, ದೇಶದ 126 ಜಿಲ್ಲೆಗಳು ಎಡಪಂಥೀಯ ಉಗ್ರವಾದದಿಂದ ಬಾಧಿತವಾಗಿದ್ದವು. ಮಾರ್ಚ್ 2026 ರ ಹೊತ್ತಿಗೆ, ನಕ್ಸಲಿಸಂನಿಂದ ಬಾಧಿತವಾಗಿರುವ ಒಂದೇ ಒಂದು ಜಿಲ್ಲೆಯೂ ದೇಶದಲ್ಲಿ ಉಳಿದಿಲ್ಲ. ದಶಕಗಳಿಂದ ಹಿಂಸಾಚಾರ ಮತ್ತು ರಕ್ತಪಾತದಿಂದ ಬಳಲುತ್ತಿದ್ದ ಈ ಜಿಲ್ಲೆಗಳು ಈಗ ಅಭಿವೃದ್ಧಿಯ ಮುಖ್ಯವಾಹಿನಿಯ ಭಾಗವಾಗುತ್ತಿವೆ. ಇಂದು, ಈ ಪ್ರದೇಶಗಳಲ್ಲಿ ರಸ್ತೆಗಳು ವಿಸ್ತರಿಸುತ್ತಿವೆ. ಮೊಬೈಲ್ ಜಾಲಗಳು ಜನರನ್ನು ತಲುಪುತ್ತಿವೆ. ಶೈಕ್ಷಣಿಕ ಮತ್ತು ಆರೋಗ್ಯ ಸೌಲಭ್ಯಗಳು ಹೆಚ್ಚುತ್ತಿವೆ. ಒಂದು ಕಾಲದಲ್ಲಿ ಅನಿಶ್ಚಿತತೆಯನ್ನು ಎದುರಿಸುತ್ತಿದ್ದ ಯುವಜನರಿಗೆ ಈಗ ಶಿಕ್ಷಣ, ಉದ್ಯೋಗ ಮತ್ತು ಪ್ರಗತಿಗೆ ಹೊಸ ಅವಕಾಶಗಳಿವೆ.

ಸ್ನೇಹಿತರೇ,

ಈ ಬಾರಿ, ಈ ಏಕತಾ ದಿನಾಚರಣೆಯಲ್ಲಿ, ನಕ್ಸಲ್ ಪೀಡಿತ ಪ್ರದೇಶಗಳ ಕುಟುಂಬಗಳು ಇಲ್ಲಿ ವಿಶೇಷ ಅತಿಥಿಗಳಾಗಿ ನಮ್ಮೊಂದಿಗೆ ಸೇರಿಕೊಂಡಿವೆ. ನಾನು ಅವರೆಲ್ಲರನ್ನೂ ಸ್ವಾಗತಿಸುತ್ತೇನೆ ಮತ್ತು ಅವರಿಗೆ ಉಜ್ವಲ ಭವಿಷ್ಯವನ್ನು ಹಾರೈಸುತ್ತೇನೆ. ಇಂದು, ದೇಶದ ಈ ಪ್ರದೇಶಗಳಲ್ಲಿ ಶಾಂತಿಯನ್ನು ಸ್ಥಾಪಿಸಲು ಸರ್ವೋಚ್ಚ ತ್ಯಾಗ ಮಾಡಿದ ಎಲ್ಲಾ ಧೈರ್ಯಶಾಲಿ ಭದ್ರತಾ ಸಿಬ್ಬಂದಿಗೆ ನಾನು ನನ್ನ ಗೌರವವನ್ನು ಸಲ್ಲಿಸುತ್ತೇನೆ.

ಸ್ನೇಹಿತರೇ,

ಇಂದು, ಭಾರತವು ಮೊದಲಿಗಿಂತ ಹೆಚ್ಚು ಸುರಕ್ಷಿತವಾಗಿದೆ. ಇಂದು, ಭಾರತವು ಮೊದಲಿಗಿಂತ ಹೆಚ್ಚು ದೃಢ ನಿಶ್ಚಯವನ್ನು ಹೊಂದಿದೆ. ಮತ್ತು ಇದಕ್ಕೆ ಒಂದು ಪ್ರಮುಖ ಕಾರಣವೆಂದರೆ ನಮ್ಮ ನಾಗರಿಕರಲ್ಲಿ ಹೆಚ್ಚಿದ ವಿಶ್ವಾಸ. ವಿಶ್ವಾಸವು ಸಾಧನೆಗಳಿಂದ ಬರುತ್ತದೆ. ಸರ್ಕಾರ ಮತ್ತು ವ್ಯವಸ್ಥೆಯ ಸೂಕ್ಷ್ಮತೆಯಿಂದ ಆತ್ಮವಿಶ್ವಾಸ ಬರುತ್ತದೆ. ಇಂದು, ನಾನು ಖಂಡಿತವಾಗಿಯೂ ಅಂತಹ ಒಂದು ಪ್ರಮುಖ ರಾಷ್ಟ್ರೀಯ ಸಾಧನೆಯ ಬಗ್ಗೆ ಮಾತನಾಡಲು ಬಯಸುತ್ತೇನೆ

ಸ್ನೇಹಿತರೇ,

ಭಾರತದಲ್ಲಿ ಬಡತನವನ್ನು ತೊಡೆದುಹಾಕುವ ಮಾತುಗಳನ್ನು ಸ್ವಾತಂತ್ರ್ಯಾನಂತರ ಹೇಳುತ್ತಾ ಬರಲಾಗಿದೆ. ಬಡತನ ನಿರ್ಮೂಲನೆಯ ಹೆಸರಿನಲ್ಲಿ ಮತಗಳನ್ನು ಕೇಳಲಾಯಿತು. ಆದರೆ ದೇಶದಲ್ಲಿ ಬಡತನದ ನಿಜವಾದ ಸ್ಥಿತಿ ಏನೆಂದು ನಮಗೆಲ್ಲರಿಗೂ ತಿಳಿದಿದೆ. ಬಡತನವನ್ನು ತೊಡೆದುಹಾಕುವ ಘೋಷಣೆಯನ್ನು ಎತ್ತಿದವರು ಸ್ವತಃ ಶ್ರೀಮಂತರಾಗುತ್ತಲೇ ಇದ್ದರು. ಇತ್ತೀಚಿನ ವರ್ಷಗಳಲ್ಲಿ ಪರಿಸ್ಥಿತಿಗಳಲ್ಲಿ ಬದಲಾವಣೆ ಬರಲು ಪ್ರಾರಂಭಿಸಿತು. ಕೆಲವು ದಿನಗಳ ಹಿಂದೆ ವಿಶ್ವಬ್ಯಾಂಕ್ ವರದಿ ಬಿಡುಗಡೆಯಾಯಿತು. 2024ರ ಹಿಂದಿನ ಹತ್ತರಿಂದ ಹನ್ನೆರಡು ವರ್ಷಗಳಲ್ಲಿ ಐವತ್ತು ಕೋಟಿ ಭಾರತೀಯರು ಬಡತನವನ್ನು ಸೋಲಿಸಿದರು ಎಂದು ವರದಿ ಹೇಳುತ್ತದೆ. ಅಂದರೆ ಈ ಹಿಂದೆ ಪ್ರತಿ 100 ಜನರಲ್ಲಿ 27 ಮಂದಿ ಅಂದರೆ ಜನಸಂಖ್ಯೆಯ ನಾಲ್ಕನೇ ಒಂದು ಭಾಗಕ್ಕಿಂತ ಹೆಚ್ಚು ಜನರು ತೀವ್ರ ಬಡತನದಲ್ಲಿ ಸಿಲುಕಿದ್ದರು, ಇಂದು ಆ ಸಂಖ್ಯೆ ಪ್ರತಿ 100 ಜನರಲ್ಲಿ 3 ಕ್ಕಿಂತ ಕಡಿಮೆಯಾಗಿದೆ.

ಸ್ನೇಹಿತರೇ,

ಇದೊಂದು ದೊಡ್ಡ ಸಾಧನೆ ಎಂದು ಇಡೀ ಜಗತ್ತು ಒಪ್ಪಿಕೊಳ್ಳುತ್ತಿದೆ. ಆದರೆ ಇದು ಹೇಗೆ ಸಂಭವಿಸಿತು? ಕಳೆದ ಹನ್ನೆರಡು ವರ್ಷಗಳಿಂದ, ದೇಶವು ಬಡವರ ಕಲ್ಯಾಣ ಮತ್ತು ಸಬಲೀಕರಣಕ್ಕೆ ಆದ್ಯತೆ ನೀಡುತ್ತಿರುವುದರಿಂದ ಇದು ಸಂಭವಿಸಿತು. ಈ ಹನ್ನೆರಡು ವರ್ಷಗಳಲ್ಲಿ, ರಾಷ್ಟ್ರವು ಸೋರಿಕೆ ನಿರೋಧಕ ವ್ಯವಸ್ಥೆಯನ್ನು ಪಡೆದಿದೆ. ಡಿಬಿಟಿ ಮೂಲಕ, ದಿಲ್ಲಿಯಿಂದ ಕಳುಹಿಸುವ ಪ್ರತಿ ರೂಪಾಯಿ ಬಡವರನ್ನು ತಲುಪಿತು. ಉಚಿತ ಪಡಿತರ ಮತ್ತು ಉಚಿತ ಆರೋಗ್ಯ ರಕ್ಷಣೆಯು ಬಡ ಕುಟುಂಬಗಳಿಗೆ ಹಣವನ್ನು ಉಳಿಸಲು ಸಹಾಯ ಮಾಡಿತು. ಕೋಟ್ಯಂತರ ಶಾಶ್ವತ ಮನೆಗಳು, ಕೋಟ್ಯಂತರ ಶೌಚಾಲಯಗಳು ಮತ್ತು ಹೊಗೆ ಮುಕ್ತ ಅಡುಗೆಮನೆಗಳು ಬಡವರ ಜೀವನವನ್ನು ಸುಲಭಗೊಳಿಸಿದವು. ಕೋಟ್ಯಂತರ ಜನರು ವಿಮೆಯ ರಕ್ಷಣೆಯನ್ನು ಪಡೆದರು, ಇದು ಬಿಕ್ಕಟ್ಟಿನ ಸಮಯದಲ್ಲಿ ಬೆಂಬಲದ ಮೂಲವಾಯಿತು. 2014 ಕ್ಕಿಂತ ಮೊದಲು, ದೇಶದ 25 ಕೋಟಿ ಜನರು ಕೂಡಾ ಯಾವುದೇ ಸಾಮಾಜಿಕ ಭದ್ರತಾ ರಕ್ಷಣೆಯನ್ನು ಹೊಂದಿರಲಿಲ್ಲ. ಇಂದು, ದೇಶದಲ್ಲಿ ಸುಮಾರು 100 ಕೋಟಿ ಜನರು ಸಾಮಾಜಿಕ ಭದ್ರತಾ ಭದ್ರತಾ ಜಾಲಕ್ಕೆ ಸಂಪರ್ಕ ಹೊಂದಿದ್ದಾರೆ.

ಸ್ನೇಹಿತರೇ,

ಇಂದು, ಇಡೀ ರಾಷ್ಟ್ರವು ಸರ್ದಾರ್ ಸಾಹೇಬರನ್ನು ಸ್ಮರಿಸುತ್ತಿರುವಾಗ ಮತ್ತು ಅವರಿಗೆ ಗೌರವ ಸಲ್ಲಿಸುತ್ತಿರುವಾಗ, ಅವರ ಆತ್ಮವು ಖಂಡಿತವಾಗಿಯೂ ನಮ್ಮನ್ನು ಆಶೀರ್ವದಿಸುತ್ತಿರಬೇಕು. ಅಂತಹ ಪ್ರಯತ್ನಗಳ ಮೂಲಕ ನಾವು ದೇಶದಿಂದ ಬಡತನವನ್ನು ತೊಡೆದುಹಾಕುತ್ತೇವೆ ಮತ್ತು ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುತ್ತೇವೆ.

ಸ್ನೇಹಿತರೇ,

ರಾಷ್ಟ್ರೀಯ ಏಕತೆಯು ರಾಷ್ಟ್ರದ ಸ್ಥಿರತೆ ಮತ್ತು ಯಶಸ್ಸನ್ನು ಖಾತರಿಪಡಿಸುತ್ತದೆ. ಮತ್ತು ಇಂತಹ ಜಾಗತಿಕ ಅಸ್ಥಿರತೆಯ ಸಮಯದಲ್ಲಿ, ಏಕತೆಯ ಮಹತ್ವವು ಇನ್ನಷ್ಟು ಹೆಚ್ಚಾಗಿದೆ. ಇಂದು ಜಗತ್ತು ಅಶಾಂತಿಯ ಬೆಂಕಿಯಲ್ಲಿ ಉರಿಯುತ್ತಿದೆ ಎಂದು ನಿಮಗೆಲ್ಲರಿಗೂ ತಿಳಿದಿದೆ. ಇದು ಕಳೆದ ಹಲವಾರು ದಶಕಗಳ ಅತ್ಯಂತ ಕಷ್ಟಕರ ಅವಧಿಗಳಲ್ಲಿ ಒಂದಾಗಿದೆ. ಪ್ರಪಂಚದಾದ್ಯಂತ ಅನೇಕ ದೇಶಗಳ ನಡುವೆ ಯುದ್ಧಗಳು ನಡೆಯುತ್ತಿವೆ. ಪ್ರಮುಖ ಆರ್ಥಿಕತೆಗಳು ಸವಾಲುಗಳೊಂದಿಗೆ ಹೋರಾಡುತ್ತಿವೆ. ಸಂಪನ್ಮೂಲಗಳ ಬಿಕ್ಕಟ್ಟು ಬೆಳೆಯುತ್ತಲೇ ಇದೆ. ಜಾಗತಿಕ ಪೂರೈಕೆ ಸರಪಳಿಗಳು ಛಿದ್ರಗೊಳ್ಳುತ್ತಿವೆ. ಅಂತಹ ಸಮಯದಲ್ಲಿ, ಭಾರತದ ಏಕತೆ, ಎಲ್ಲಾ ಭಾರತೀಯರ ಏಕತೆ ನಮ್ಮ ದೊಡ್ಡ ಶಕ್ತಿಯಾಗಿದೆ. ಏಕೆಂದರೆ ಈ ಏಕತೆಯೇ ಪ್ರತಿ ಬಿರುಗಾಳಿಯನ್ನು ನಿವಾರಿಸಲು ನಮಗೆ ಸಹಾಯ ಮಾಡುತ್ತದೆ.

ಸಹೋದರರೇ ಮತ್ತು ಸಹೋದರಿಯರೇ,

ಇತ್ತೀಚಿನ ತಿಂಗಳುಗಳಲ್ಲಿ, ಜಗತ್ತು ಇಂಧನ ಬಿಕ್ಕಟ್ಟಿನೊಂದಿಗೆ ಹೋರಾಡುತ್ತಿರುವುದನ್ನು ನಾವು ನೋಡಿದ್ದೇವೆ. ಕೆಲವು ದೇಶಗಳಲ್ಲಿ, ಪೆಟ್ರೋಲ್ ಮತ್ತು ಡೀಸೆಲ್ ಖರೀದಿಗೆ ಮಿತಿಗಳನ್ನು ಸಹ ವಿಧಿಸಲಾಯಿತು. ಭಾರತವು ಇಷ್ಟು ದೊಡ್ಡ ಜನಸಂಖ್ಯೆಯನ್ನು ಹೊಂದಿರುವುದರಿಂದ ಮತ್ತು ಸಾಕಷ್ಟು ಪೆಟ್ರೋಲಿಯಂ ಉತ್ಪಾದಿಸದ ಕಾರಣ ದೊಡ್ಡ ಬಿಕ್ಕಟ್ಟನ್ನು ಎದುರಿಸುತ್ತದೆ ಎಂದು ಹೇಳಲಾಗುತ್ತಿತ್ತು. ಈ ಕಳವಳಗಳ ನಡುವೆ, ಭಾರತ ವಿರೋಧಿ ಶಕ್ತಿಗಳು ಸಹ ಸಕ್ರಿಯವಾದವು.

ಆದರೆ ಸ್ನೇಹಿತರೇ,

ಇದು ಭಾರತದ ಶಕ್ತಿ. ಈ ಜಾಗತಿಕ ಇಂಧನ ಬಿಕ್ಕಟ್ಟಿನ ಪರಿಣಾಮ ನಮ್ಮ ನಾಗರಿಕರ ಮೇಲೆ ಬೀಳಲು ನಾವು ಬಿಡಲಿಲ್ಲ. ಇದು ಖಂಡಿತವಾಗಿಯೂ ದೇಶದ ರಾಜತಾಂತ್ರಿಕ ಮತ್ತು ವ್ಯೂಹಾತ್ಮಕ ಯಶಸ್ಸು, ಆದರೆ ನಮ್ಮ ಜನರ ಏಕತೆ ಮತ್ತು ಒಗ್ಗಟ್ಟು ಅಷ್ಟೇ ಪ್ರಮುಖ ಪಾತ್ರ ವಹಿಸಿದೆ. ರಾಷ್ಟ್ರವು ಬಾಹ್ಯ ಸವಾಲುಗಳಿಗೆ ಪರಿಹಾರಗಳನ್ನು ಹುಡುಕುತ್ತಿರುವಾಗ, ದೇಶದೊಳಗಿನ ಕೆಲವು ಶಕ್ತಿಗಳು ಅಸ್ಥಿರತೆಯನ್ನು ಸೃಷ್ಟಿಸುವ ಪ್ರಯತ್ನದಲ್ಲಿ ಸುಳ್ಳು ಮತ್ತು ವದಂತಿಗಳನ್ನು ಹರಡುವಲ್ಲಿ ನಿರತವಾಗಿದ್ದವು. ಆದರೆ ಭಾರತದ ಜನರು ರಾಷ್ಟ್ರದೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಿಂತರು. ಇದು ಈ ದೇಶದ ದೊಡ್ಡ ಶಕ್ತಿ. ಇದು ನಮ್ಮ ವಿಶ್ವಾಸದ ಬಲವಾದ ಅಡಿಪಾಯವಾಗಿದೆ.

ಸ್ನೇಹಿತರೇ,

ಸರ್ದಾರ್ ಪಟೇಲ್ ಮತ್ತು ಬಾಬಾಸಾಹೇಬ್ ಅಂಬೇಡ್ಕರ್ ಅವರಂತಹ ಮಹಾನ್ ನಾಯಕರು ಭಾರತದ ಸಂವಿಧಾನವನ್ನು ರಚಿಸಿದಾಗ, ಅವರು ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ವ್ಯವಸ್ಥೆಯನ್ನು ರೂಪಿಸಿದರು. ಈ ವ್ಯವಸ್ಥೆಯ ಮಹತ್ವವನ್ನೂ ಅವರು ವಿವರಿಸಿದ್ದರು. ಪ್ರಜಾಪ್ರಭುತ್ವದಲ್ಲಿ, ಸರ್ಕಾರದ ನೀತಿಗಳನ್ನು ವಿರೋಧಿಸುವುದು ವಿರೋಧ ಪಕ್ಷದ ಜವಾಬ್ದಾರಿಯಾಗಿದೆ. ಆದರೆ ದುರದೃಷ್ಟವಶಾತ್, ಇಂದಿನ ಭಾರತದಲ್ಲಿ ವಿರೋಧ ಪಕ್ಷವು ತನ್ನ ಕರ್ತವ್ಯವನ್ನು ಕೈಬಿಟ್ಟು, 'ವಿರೋಧ ಪಕ್ಷ' ಎಂಬುದರಿಂದ 'ಅಡ್ಡಿಪಡಿಸುವ ಶಕ್ತಿ'ಯಾಗಿ ಮಾರ್ಪಟ್ಟಿದೆ. ಹತಾಶೆ ಮತ್ತು ನಿರಾಶೆಯಿಂದಾಗಿ, ಅದು ದೇಶದ ಅಭಿವೃದ್ಧಿಯ ಹಾದಿಯಲ್ಲಿ ಅಡೆತಡೆಗಳನ್ನು ಸೃಷ್ಟಿಸಲು ಪ್ರಾರಂಭಿಸಿದೆ. ಇದೊಂದು ವಿರೋಧವಲ್ಲ, ಬದಲಾಗಿ ಅಡ್ಡಿಪಡಿಸುವ ಪ್ರಕ್ರಿಯೆಯಾಗಿದೆ. ಇದನ್ನೇ ಅವರು ತಮ್ಮ ರಾಜಕೀಯದ ಆಧಾರವನ್ನಾಗಿ ಮಾಡಿಕೊಂಡಿದ್ದಾರೆ. ಸಂವಿಧಾನದ ಘನತೆ ಮತ್ತು ಅದರ ಮೂಲ ಆಶಯವನ್ನು ಛಿದ್ರಗೊಳಿಸುವ ಕೆಲಸದಲ್ಲಿ ಅವರು ತೊಡಗಿದ್ದಾರೆ.

ಸ್ನೇಹಿತರೇ,

ಈ ಶಕ್ತಿಗಳು ರಾಷ್ಟ್ರವನ್ನು ವಿಭಜಿಸುವ ಸಂಚುಗಳಲ್ಲಿ ನಿರಂತರವಾಗಿ ತೊಡಗಿವೆ. 'ಭಾರತ ಮಾತೆ'ಯ ಮಕ್ಕಳನ್ನು ವಿಭಜಿಸಿ, ಅವರನ್ನು ಪರಸ್ಪರ ಎತ್ತಿ ಕಟ್ಟುವ ಪ್ರಯತ್ನಗಳು ನಡೆಯುತ್ತಿವೆ. ಒಂದು ದಶಕಕ್ಕೂ ಹೆಚ್ಚು ಕಾಲದ ಹತಾಶೆ ಮತ್ತು ನಿರಾಶೆಯ ಕಾರಣದಿಂದಾಗಿ, ಈ ಜನರು ಈಗ ಬಹಿರಂಗವಾಗಿ ಹೊರಬಂದಿದ್ದಾರೆ. ವಿದೇಶಗಳಲ್ಲಿ ಯಾರು ಯಾರೊಂದಿಗೆ ಗುಪ್ತವಾಗಿ ಸಭೆ ನಡೆಸುತ್ತಿದ್ದಾರೆ, ಭಾರತ ವಿರೋಧಿ ಶಕ್ತಿಗಳು ಯಾರಿಗೆ ಬೆಂಬಲ ನೀಡುತ್ತಿವೆ ಮತ್ತು ಯಾರು ಭಾರತದ ಶತ್ರುಗಳ ಭಾಷೆಯಲ್ಲಿ ಮಾತನಾಡುತ್ತಿದ್ದಾರೆ ಎಂಬುದನ್ನು ನಾವು ಗುರುತಿಸಬೇಕು. ಇಂತಹ ನಡೆಗಳನ್ನು ನಾವು ಅರಿತುಕೊಳ್ಳಬೇಕು. ನಾವೆಲ್ಲರೂ ಒಗ್ಗೂಡಿ ಇವರನ್ನು ಎದುರಿಸಬೇಕು. ವಿಶೇಷವಾಗಿ, ಸಾಮಾಜಿಕ ಜಾಲತಾಣಗಳನ್ನು ಒಂದು ಅಸ್ತ್ರವನ್ನಾಗಿ ಬಳಸಲಾಗುತ್ತಿರುವ ರೀತಿ, ವದಂತಿಗಳನ್ನು ಹರಡಲಾಗುತ್ತಿರುವ ಬಗೆ ಮತ್ತು ಭಾರತದ ವರ್ಚಸ್ಸಿಗೆ ಧಕ್ಕೆ ತರಲು ನಡೆಯುತ್ತಿರುವ ಪ್ರಯತ್ನಗಳನ್ನು ಗಮನಿಸಿದರೆ, ಇಂತಹ ಸವಾಲುಗಳನ್ನು ಎದುರಿಸಲು ದೇಶದ ಎಲ್ಲಾ ನಾಗರಿಕರು ಒಗ್ಗೂಡಬೇಕಿದೆ. ನಾವು ದೂರದ ಪ್ರದೇಶಗಳಲ್ಲಿ ನಕ್ಸಲಿಸಂ  ಕೊನೆಗೊಳಿಸಿದ್ದೇವೆ. ಆದರೆ, 'ಬೌದ್ಧಿಕ ನಕ್ಸಲಿಸಂ' (Intellectual Naxalism) ಎಂಬ ಅಪಾಯವು ಇನ್ನೂ ದೇಶದಿಂದ ಸಂಪೂರ್ಣವಾಗಿ ಮಾಯವಾಗಿಲ್ಲ. ಇಂತಹ ಬೌದ್ಧಿಕ ನಕ್ಸಲರ ವಿರುದ್ಧ ರಾಷ್ಟ್ರವು ಸದಾ ಜಾಗರೂಕತೆಯಿಂದ ಇರಬೇಕಿದೆ.

ಸ್ನೇಹಿತರೇ,

ಪರಿಸ್ಥಿತಿ ಎಷ್ಟೇ ಕಠಿಣವಾಗಿದ್ದರೂ, ರಾಷ್ಟ್ರೀಯ ಏಕತೆಯ ಈ ಮಹಾನ್ ಧ್ಯೇಯವನ್ನು ಹಾಗೂ ಬಲಿಷ್ಠ ಮತ್ತು ಸಮರ್ಥ ಭಾರತದತ್ತ ಸಾಗುತ್ತಿರುವ ಈ ಪಯಣವನ್ನು ನಾವು ನಿಲ್ಲಲು ಬಿಡಬಾರದು. ಈಗ ನಾವು ಮುಂದಿನ ಪ್ರಮುಖ ಗುರಿಗಳ ಸಾಧನೆಗಾಗಿ ಶ್ರಮಿಸಬೇಕಿದೆ. ರಾಷ್ಟ್ರದ ಗಡಿಗಳನ್ನು ಸಂಪೂರ್ಣವಾಗಿ ಭದ್ರಪಡಿಸಿಕೊಳ್ಳಬೇಕು. ಒಳನುಸುಳುವಿಕೆಯನ್ನು ಮತ್ತು ಅದರಿಂದ ಉಂಟಾಗುವ ಜನಸಂಖ್ಯಾ ಸ್ವರೂಪದ ಬದಲಾವಣೆಗಳನ್ನು ತಡೆಯಬೇಕು. ಜೊತೆಗೆ, ನಾವು 'ಜಾತ್ಯತೀತ ನಾಗರಿಕ ಸಂಹಿತೆ'ಯ (Secular Civil Code) ಕಡೆಗೂ ಮುನ್ನಡೆಯಬೇಕಿದೆ.

ಸ್ನೇಹಿತರೇ,

ಯಾವುದೇ ರಾಷ್ಟ್ರವು ಮಹತ್ತರವಾದ ನಿರ್ಣಯಗಳನ್ನು ಕೈಗೊಂಡಾಗ ಅಥವಾ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಾಗ, ಸಹಜವಾಗಿಯೇ ಅಡೆತಡೆಗಳು ಎದುರಾಗುತ್ತವೆ, ಕಷ್ಟಗಳು ಕಾಣಿಸಿಕೊಳ್ಳುತ್ತವೆ ಮತ್ತು ಬಿರುಗಾಳಿಗಳನ್ನು ಎದುರಿಸಬೇಕಾಗುತ್ತದೆ. ಆದರೆ, ಭಾರತ ಇನ್ನು ಮುಂದೆ ನಿಲ್ಲುವುದಿಲ್ಲ. 'ಏಕ ಭಾರತ್, ಶ್ರೇಷ್ಠ ಭಾರತ್' ಎಂಬ ಮಂತ್ರ ಮತ್ತು 'ವಿಕಸಿತ ಭಾರತ'ದ ಗುರಿಯು ಈಗ ಭಾರತದ ದೃಢ ಸಂಕಲ್ಪವಾಗಿದೆ. ನಾವು ಕಠಿಣ ಪರಿಶ್ರಮದ ಪರಮಾವಧಿಯನ್ನು ತಲುಪುವವರೆಗೆ ಶ್ರಮಿಸುತ್ತೇವೆ. ಎದುರಾಗುವ ಪ್ರತಿಯೊಂದು ಬಿರುಗಾಳಿಯನ್ನೂ ದೃಢ ನಿಶ್ಚಯದಿಂದ ಎದುರಿಸುತ್ತೇವೆ. ಆದರೆ, ನಮ್ಮ ದೃಷ್ಟಿ ಒಂದೇ ಗುರಿಯ ಮೇಲೆ ನೆಟ್ಟಿರುತ್ತದೆ: ಸ್ವಾತಂತ್ರ್ಯದ 100 ವರ್ಷಗಳನ್ನು ಪೂರೈಸುವ 2047ರ ವೇಳೆಗೆ, ಒಂದು ಬಲಿಷ್ಠ, ಸಮರ್ಥ ಮತ್ತು ವಿಕಸಿತ ಭಾರತವನ್ನು ನಿರ್ಮಿಸುವುದು. ಈ ಛಲವು ನಮ್ಮ ಪ್ರತಿಯೊಂದು ಪ್ರಯತ್ನದಲ್ಲಿಯೂ, ನಾವು ತೆಗೆದುಕೊಳ್ಳುವ ಪ್ರತಿಯೊಂದು ಉಸಿರಿನಲ್ಲಿಯೂ ಇರಬೇಕು. ನಮ್ಮ ಹೃದಯದ ಪ್ರತಿಯೊಂದು ಬಡಿತದಲ್ಲೂ ಈ ಆಲೋಚನೆಯು ಮಿಡಿಯುತ್ತಿರಬೇಕು. ಇದೇ ಸಂಕಲ್ಪದೊಂದಿಗೆ, 'ರಾಷ್ಟ್ರೀಯ ಏಕತಾ ದಿವಸ'ದ (National Unity Day) ಸಂದರ್ಭದಲ್ಲಿ ನಿಮ್ಮೆಲ್ಲರಿಗೂ ಮತ್ತೊಮ್ಮೆ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಕೋರುತ್ತೇನೆ.

ಭಾರತ ಮಾತೆಗೆ ಜಯವಾಗಲಿ!

ಭಾರತ ಮಾತೆಗೆ ಜಯವಾಗಲಿ!

ಭಾರತ ಮಾತೆಗೆ ಜಯವಾಗಲಿ!

ವಂದೇ ಮಾತರಂ

ವಂದೇ ಮಾತರಂ

ವಂದೇ ಮಾತರಂ

ತುಂಬಾ ಧನ್ಯವಾದಗಳು.

ಘೋಷಣೆ: ಇದು ಪ್ರಧಾನಮಂತ್ರಿ ಅವರ ಭಾಷಣದ ಸರಿಸುಮಾರಾದ ಅನುವಾದವಾಗಿದೆ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಗಿದೆ. 

 

*****


(ಪ್ರಕಟಣೆ ಐ.ಡಿ.: 2331367) ವಿಸಿಟರ್ ಕೌಂಟರ್ : 22
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Bengali , Manipuri , Assamese , Punjabi , Gujarati