ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
azadi ka amrit mahotsav

ಸಾರ್ವತ್ರಿಕ ಮತ್ತು ಎಲ್ಲರನ್ನೂ ಒಳಗೊಳ್ಳುವ ಹಿರಿಯ ನಾಗರಿಕರ ಆರೈಕೆಗೆ ಉತ್ತೇಜನ: ಹಿರಿಯ ನಾಗರಿಕರ ಆರೋಗ್ಯ ಸೇವೆಯಲ್ಲಿ ಪರಿವರ್ತನೆ ತರುತ್ತಿರುವ 'ಆಯುಷ್ಮಾನ್ ವಯೋ ವಂದನಾ' ಯೋಜನೆ ಜಾರಿಯಾಗಿ ಎರಡು ವರ್ಷ ಪೂರ್ಣ


ಸಾಮಾಜಿಕ-ಆರ್ಥಿಕ ಸ್ಥಿತಿಗತಿ ಲೆಕ್ಕಿಸದೆ, 70 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ವಯಸ್ಸಿನ 6 ಕೋಟಿ ಹಿರಿಯ ನಾಗರಿಕರಿಗೆ ಘನತೆಯ ಹಾಗೂ ನಗದು ರಹಿತ (ಕ್ಯಾಶ್‌ಲೆಸ್) ಆರೋಗ್ಯ ರಕ್ಷಣೆಯ ಸಬಲೀಕರಣ

'ಆಯುಷ್ಮಾನ್ ವಯೋ ವಂದನಾ' ಯೋಜನೆಯಡಿ ಕಳೆದ ಎರಡು ವರ್ಷಗಳಲ್ಲಿ 5,668.80 ಕೋಟಿ ರೂಪಾಯಿ ಮೌಲ್ಯದ 23.46 ಲಕ್ಷ ಆಸ್ಪತ್ರೆ ದಾಖಲಾತಿ

ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಯಿಂದ ಹಿಡಿದು ಹೃದಯ ಸಂಬಂಧಿ ಚಿಕಿತ್ಸೆಗಳವರೆಗೆ: 70 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ನಗದು ರಹಿತ ಆಸ್ಪತ್ರೆ ಚಿಕಿತ್ಸೆಗಳನ್ನು ಒದಗಿಸುತ್ತಿರುವ 'ಆಯುಷ್ಮಾನ್ ವಯೋ ವಂದನಾ'

ಹಿರಿಯ ನಾಗರಿಕರ ಹೃದಯ ಸಂಬಂಧಿ ಆರೈಕೆಯಲ್ಲಿ ಪರಿವರ್ತನೆ: ಅತ್ಯಾಧುನಿಕ ಹೃದಯ ಸಂಬಂಧಿ ಚಿಕಿತ್ಸೆಗಳಿಗಾಗಿ 649 ಕೋಟಿಗೂ ಅಧಿಕ ಅನುದಾನ ಬಿಡುಗಡೆ

ಪ್ರಕಟಣಾ ದಿನಾಂಕ: 29 OCT 2026 3:33PM by PIB Bengaluru

ಎಲ್ಲರನ್ನೂ ಒಳಗೊಳ್ಳುವ, ಸುಲಭವಾಗಿ ಲಭ್ಯವಿರುವ ಮತ್ತು ವಿಶ್ವ ದರ್ಜೆಯ ಆರೋಗ್ಯ ವ್ಯವಸ್ಥೆಯ ನಿರ್ಮಿಸುವ ನಿಟ್ಟಿನಲ್ಲಿ ಭಾರತ ಸರ್ಕಾರವು ನಡೆಸುತ್ತಿರುವ ನಿರಂತರ ಪ್ರಯತ್ನಗಳು ಮತ್ತು ದೃಢ ಸಂಕಲ್ಪದ ಪರಿಣಾಮವಾಗಿ 'ಆಯುಷ್ಮಾನ್ ವಯೋ ವಂದನಾ' ಯೋಜನೆಯು ಇಂದು ಯಶಸ್ವಿಯಾಗಿ ಎರಡು ವರ್ಷಗಳನ್ನು ಪೂರೈಸಿದೆ. ಗೌರವಾನ್ವಿತ ಪ್ರಧಾನಮಂತ್ರಿ ಅವರು 2024ರ ಅಕ್ಟೋಬರ್ 29ರಂದು ಆರಂಭಿಸಿದ ಈ ಮಹತ್ವದ ಯೋಜನೆಯು, ಸಾಮಾಜಿಕ-ಆರ್ಥಿಕ ಸ್ಥಿತಿಗತಿ ಪರಿಗಣಿಸದೆ, 70 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ವಯಸ್ಸಿನ ಪ್ರತಿಯೊಬ್ಬ ನಾಗರಿಕರಿಗೂ 'ಆಯುಷ್ಮಾನ್ ಭಾರತ್ - ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ'ಯ (ಎಬಿ-ಪಿಎಂ-ಜೆಎವೈ) ಪ್ರಯೋಜನಗಳನ್ನು ಒದಗಿಸುತ್ತದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಡಿಯಲ್ಲಿ 'ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ'ವು (ಎನ್ ಎಚ್ ಎ) ಜಾರಿಗೊಳಿಸುತ್ತಿರುವ ಈ ಯೋಜನೆಯು, ದೇಶಾದ್ಯಂತ ಸುಮಾರು 4.5 ಕೋಟಿ ಕುಟುಂಬಗಳಿಗೆ ಸೇರಿದ ಸುಮಾರು 6 ಕೋಟಿ ಹಿರಿಯ ನಾಗರಿಕರಿಗೆ ಆರೋಗ್ಯ ರಕ್ಷಣೆ ವಿಸ್ತರಿಸುವ ಮತ್ತು ಆರ್ಥಿಕ ಭದ್ರತೆ ಬಲಪಡಿಸುವ ನಿಟ್ಟಿನಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ.

'ಆಯುಷ್ಮಾನ್ ವಯೋ ವಂದನಾ' ಯೋಜನೆಯಡಿಯಲ್ಲಿ, 70 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ವಯಸ್ಸಿನ ಎಲ್ಲಾ ಹಿರಿಯ ನಾಗರಿಕರು, ದ್ವಿತೀಯ ಮತ್ತು ತೃತೀಯ ಹಂತದ ಆಸ್ಪತ್ರೆ ಚಿಕಿತ್ಸೆಗಳಿಗಾಗಿ ಪ್ರತಿ ಕುಟುಂಬಕ್ಕೆ ವರ್ಷಕ್ಕೆ 5 ಲಕ್ಷ ರೂಪಾಯಿವರೆಗಿನ ಆರೋಗ್ಯ ರಕ್ಷಣೆಯನ್ನು ಪಡೆಯಲು ಅರ್ಹರಾಗಿರುತ್ತಾರೆ.

ಈಗಾಗಲೇ 'ಎಬಿ ಪಿಎಂ-ಜೆಎವೈ' (ಎಬಿ ಪಿಎಂ-ಜೆಎವೈ) ಯೋಜನೆಯ ವ್ಯಾಪ್ತಿಗೆ ಒಳಪಟ್ಟಿರುವ ಕುಟುಂಬಗಳಲ್ಲಿನ 70 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ವಯಸ್ಸಿನ ಹಿರಿಯ ನಾಗರಿಕರಿಗೆ, ಹೆಚ್ಚುವರಿಯಾಗಿ ವರ್ಷಕ್ಕೆ 5 ಲಕ್ಷದವರೆಗಿನ 'ಟಾಪ್-ಅಪ್' ರಕ್ಷಣೆ ನೀಡಲಾಗುತ್ತದೆ. ಇದು 70 ವರ್ಷಕ್ಕಿಂತ ಕಡಿಮೆ ವಯಸ್ಸಿನ ಕುಟುಂಬದ ಇತರ ಸದಸ್ಯರಿಗೆ ಲಭ್ಯವಿರುವ ರಕ್ಷಣೆಯಿಂದ ಪ್ರತ್ಯೇಕವಾಗಿದ್ದು, ಕೇವಲ ಹಿರಿಯ ನಾಗರಿಕರಿಗೆ ಮಾತ್ರ ಮೀಸಲಾಗಿರುತ್ತದೆ. ಈ ವ್ಯವಸ್ಥೆಯು, ಕುಟುಂಬದ ಇತರ ಸದಸ್ಯರಿಗೆ ಲಭ್ಯವಿರುವ ಆರೋಗ್ಯ ರಕ್ಷಣೆಗೆ ಯಾವುದೇ ಧಕ್ಕೆಯಾಗದಂತೆ, 70 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ವಯಸ್ಸಿನ ಅರ್ಹ ಹಿರಿಯ ನಾಗರಿಕರಿಗೆ ಆರ್ಥಿಕ ಭದ್ರತೆ ವಿಸ್ತರಿಸುತ್ತದೆ.

2026ರ ಅಕ್ಟೋಬರ್ 20ರ ವೇಳೆಗೆ ಈ ಯೋಜನೆಯಡಿಯಲ್ಲಿ 70 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ವಯಸ್ಸಿನ ಅರ್ಹ ಹಿರಿಯ ನಾಗರಿಕರು ಆಸ್ಪತ್ರೆ ಸೇವೆಗಳನ್ನು ಪಡೆದುಕೊಂಡಿದ್ದು, ಒಟ್ಟು 23.46 ಲಕ್ಷ ಆಸ್ಪತ್ರೆ ದಾಖಲಾತಿಗಳು ದಾಖಲಾಗಿವೆ. ಈ ದಾಖಲಾತಿಗಳ ಒಟ್ಟು ಮೌಲ್ಯ 5,668.80 ಕೋಟಿ ರೂಪಾಯಿಗಳಷ್ಟಾಗಿದ್ದು, ಇದು ಯೋಜನೆಯಡಿ ಅನುಮೋದಿಸಲಾದ ಆಸ್ಪತ್ರೆ ಚಿಕಿತ್ಸೆಗಳ ಮೌಲ್ಯವನ್ನು ಸೂಚಿಸುತ್ತದೆ.

ಕಣ್ಣಿನ ಪೊರೆ  ಶಸ್ತ್ರಚಿಕಿತ್ಸೆಯು ಅತಿ ಹೆಚ್ಚು ಬಾರಿ ಪಡೆಯಲಾದ ಚಿಕಿತ್ಸೆಯಾಗಿದ್ದು, ಒಟ್ಟು 4.71 ಲಕ್ಷ ಚಿಕಿತ್ಸೆಗಳು ನಡೆದಿವೆ; ಇದು ಅನುಮೋದಿಸಲಾದ ಒಟ್ಟು ಚಿಕಿತ್ಸೆಗಳಲ್ಲಿ ಸುಮಾರು ಶೇ. 20.1 ರಷ್ಟಿದೆ.  ಇಷ್ಟು ಹೆಚ್ಚಿನ ಸಂಖ್ಯೆಯ ಶಸ್ತ್ರಚಿಕಿತ್ಸೆಗಳು, ವೃದ್ಧರಲ್ಲಿ ಕಣ್ಣಿನ ಆರೈಕೆಗೆ ಸಂಬಂಧಿಸಿದಂತೆ ದೀರ್ಘಕಾಲದಿಂದ್ದ ಕೊರತೆಯನ್ನು ಈ ಯೋಜನೆಯು ನೀಗಿಸುತ್ತಿದೆ ಎಂಬುದನ್ನು ತೋರಿಸುತ್ತವೆ.

ಅದರ ನಂತರದ ಸ್ಥಾನದಲ್ಲಿ 'ದೀರ್ಘಕಾಲೀನ ಹೀಮೋಡಯಾಲಿಸಿಸ್' ಇದ್ದು, ಸುಮಾರು 2.90 ಲಕ್ಷ ಚಿಕಿತ್ಸೆಗಳನ್ನು ನೀಡಲಾಗಿದೆ. ಮೂತ್ರಪಿಂಡ ಕಾಯಿಲೆಗಾಗಿ ಆಸ್ಪತ್ರೆಯಲ್ಲಿ ನಿಗದಿತ ಚಿಕಿತ್ಸೆಯ ಅಗತ್ಯವಿರುವ ಫಲಾನುಭವಿಗಳಿಗೆ ಇದು ನಿರಂತರ ಬೆಂಬಲವನ್ನು ಒದಗಿಸುತ್ತದೆ.

ಅನುಮೋದಿಸಲಾದ ಚಿಕಿತ್ಸಾ ಮೌಲ್ಯದ ದೃಷ್ಟಿಯಿಂದ ನೋಡಿದರೆ, 'ಪರ್ಕ್ಯುಟೇನಿಯಸ್ ಟ್ರಾನ್ಸ್‌ಲುಮಿನಲ್ ಕೊರೊನರಿ ಆಂಜಿಯೋಪ್ಲ್ಯಾಸ್ಟಿ' (ಪಿಟಿಸಿಎ) ಅತಿ ದೊಡ್ಡ ಪಾಲನ್ನು ಹೊಂದಿದೆ; ಇದರ ಮೌಲ್ಯ ಸುಮಾರು 649 ಕೋಟಿ ರೂಪಾಯಿಗಳಷ್ಟಿದೆ. ವಿಶೇಷ ಹೃದಯ ಚಿಕಿತ್ಸೆಗಳಿಗೆ ತಗಲುವ ಹೆಚ್ಚಿನ ವೆಚ್ಚದಿಂದ ಫಲಾನುಭವಿಗಳನ್ನು ರಕ್ಷಿಸುವಲ್ಲಿ ಈ ಯೋಜನೆಯು ಪ್ರಮುಖ ಪಾತ್ರ ವಹಿಸುತ್ತದೆ ಎಂಬುದನ್ನು ಇದು ಎತ್ತಿ ತೋರಿಸುತ್ತದೆ.

ಇತರ ಪ್ರಮುಖ ಚಿಕಿತ್ಸಾ ವಿಭಾಗಗಳಲ್ಲಿ ಸಂಪೂರ್ಣ ಮೊಣಕಾಲು ಬದಲಿ ಚಿಕಿತ್ಸೆ, ದೀರ್ಘಕಾಲದ ಪ್ರತಿರೋಧಕ ಶ್ವಾಸಕೋಶ ಕಾಯಿಲೆ (ಸಿಒಪಿಡಿ)ಯ ತೀವ್ರ ಉಲ್ಬಣದ ನಿರ್ವಹಣೆ, ತೀವ್ರ ಜ್ವರ ಮತ್ತು ತೀವ್ರವಾದ ಮೂತ್ರಪಿಂಡದ ಗಾಯ ಮತ್ತು ಮೂತ್ರಪಿಂಡ ವೈಫಲ್ಯ ಸೇರಿವೆ. ಒಟ್ಟಾರೆ ಈ ಕಾರ್ಯವಿಧಾನಗಳು ದಿನನಿತ್ಯದ ಶಸ್ತ್ರಚಿಕಿತ್ಸಾ ಮಧ್ಯಸ್ಥಿಕೆಗಳಿಂದ ಹಿಡಿದು ಸಂಕೀರ್ಣ ಮತ್ತು ನಿರ್ಣಾಯಕ ಪರಿಸ್ಥಿತಿಗಳ ನಿರ್ವಹಣೆಯವರೆಗೆ ಆಸ್ಪತ್ರೆಯ ಆರೈಕೆಯ ನಿರಂತರತೆಯನ್ನು ಒದಗಿಸುತ್ತವೆ.

ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಸುನಿಲ್ ಕುಮಾರ್ ಬರ್ನ್ವಾಲ್, “70 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ವಯಸ್ಸಿನ ಹಿರಿಯ ನಾಗರಿಕರು ಘನತೆ, ಭದ್ರತೆ ಮತ್ತು ಮನಸ್ಸಿನ ಶಾಂತಿಯಿಂದ ಆರೋಗ್ಯ ಸೇವೆ ಪಡೆಯುವುದನ್ನು ಖಾತ್ರಿಪಡಿಸಿಕೊಳ್ಳುವ ನಮ್ಮ ಬದ್ಧತೆಯನ್ನು ಆಯುಷ್ಮಾನ್ ವಯೋ ವಂದನಾ ಸಾಕಾರಗೊಳಿಸುತ್ತದೆ. ಸಾಮಾಜಿಕ-ಆರ್ಥಿಕ ಸ್ಥಿತಿ ಲೆಕ್ಕಿಸದೆ, 70 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ವಯಸ್ಸಿನ ಎಲ್ಲಾ ಅರ್ಹ ನಾಗರಿಕರಿಗೆ ಎಬಿ ಪಿಎಂ-ಜೆಎವೈ ವ್ಯಾಪ್ತಿಯನ್ನು ವಿಸ್ತರಿಸುವ ಮೂಲಕ, ಈ ಉಪಕ್ರಮವು ವೃದ್ಧ ಕುಟುಂಬಗಳಿಗೆ ಆರ್ಥಿಕ ರಕ್ಷಣೆ ಬಲಪಡಿಸುತ್ತದೆ. ನಮ್ಮ ಹಿರಿಯ ನಾಗರಿಕರ ಅಗತ್ಯತೆಗಳನ್ನು ಗುರುತಿಸುವ ಮತ್ತು ಹಣಕಾಸಿನ ನಿರ್ಬಂಧಗಳು ಅಗತ್ಯ ಆಸ್ಪತ್ರೆ ಆರೈಕೆಗೆ ಅಡ್ಡಿಯಾಗದಂತೆ ನೋಡಿಕೊಳ್ಳುವ ಎಲ್ಲರನ್ನೂ ಒಳಗೊಳ್ಳುವ ಆರೋಗ್ಯ ವ್ಯವಸ್ಥೆ ನಿರ್ಮಿಸುವತ್ತ ಇದು ಒಂದು ಪ್ರಮುಖ ಹೆಜ್ಜೆಯಾಗಿದೆ.”ಎಂದರು.

ಸಾಮಾಜಿಕ-ಆರ್ಥಿಕ ಸ್ಥಿತಿಗತಿಯನ್ನು ಲೆಕ್ಕಿಸದೆ ಎಲ್ಲಾ ಅರ್ಹ ಹಿರಿಯ ನಾಗರಿಕರಿಗೆ ಎಬಿ ಪಿಎಂ-ಜೆಎವೈ ಪ್ರಯೋಜನಗಳನ್ನು ವಿಸ್ತರಿಸುವ ಮೂಲಕ, ಆಯುಷ್ಮಾನ್ ವಯೋ ವಂದನವು ವೃದ್ಧಾಪ್ಯದಲ್ಲಿ ಸಮಗ್ರ ಆರೋಗ್ಯ ರಕ್ಷಣೆ ಮತ್ತು ಆರ್ಥಿಕ ರಕ್ಷಣೆಗೆ ಭಾರತ ಸರ್ಕಾರದ ಬದ್ಧತೆಯನ್ನು ಬಲವರ್ಧನೆಗೊಳಿಸಿದೆ. ಈ ಉಪಕ್ರಮವು ತನ್ನ ಮೂರನೇ ವರ್ಷಕ್ಕೆ ಕಾಲಿಡುತ್ತಿರುವಂತೆಯೇ,  ಇದು ಸಾರ್ವಜನಿಕವಾಗಿ ಧನಸಹಾಯ ಪಡೆದ ಆರೋಗ್ಯ ರಕ್ಷಣೆಯ ವ್ಯಾಪ್ತಿ ವಿಸ್ತರಿಸುವುದನ್ನು ಮುಂದುವರಿಸುತ್ತದೆ ಮತ್ತು ಹಿರಿಯ ನಾಗರಿಕರು ಮತ್ತು ಅವರ ಕುಟುಂಬಗಳ ಮೇಲಿನ ಆಸ್ಪತ್ರೆ ದಾಖಲಾತಿಯ ಆರ್ಥಿಕ ಹೊರೆ ತಗ್ಗಿಸುತ್ತದೆ.

 

*****


(ಪ್ರಕಟಣೆ ಐ.ಡಿ.: 2330112) ವಿಸಿಟರ್ ಕೌಂಟರ್ : 14
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Tamil