ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ
ಭಾರತದಲ್ಲಿ ಅಗ್ರಿವಾಲ್ಟಾಯಿಕ್ಸ್ ವಿಶ್ವ ಸಮ್ಮೇಳನ 2026ರ ಆಯೋಜನೆ
ಜರ್ಮನಿಯ ಫೆಡರಲ್ ಪರಿಸರ, ಹವಾಮಾನ ಕ್ರಿಯೆ, ಪ್ರಕೃತಿ ಸಂರಕ್ಷಣೆ ಮತ್ತು ಪರಮಾಣು ಸುರಕ್ಷತೆ ಸಚಿವಾಲಯ ಹಾಗೂ ಕೊನೆಕ್ಸಿಯೊ-ಪಿಎಸ್ಇ ಬೆಂಬಲದೊಂದಿಗೆ ಸಮಾವೇಶವನ್ನು ಆಯೋಜಿಸಿದ ನೂತನ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ
ಆವಿಷ್ಕಾರ-ಚಾಲಿತ ಅಗ್ರಿವಾಲ್ಟಾಯಿಕ್ಸ್ ಮೂಲಕ ಭಾರತದ ಅನ್ನದಾತರನ್ನು ಉರ್ಜಾದಾತರನ್ನಾಗಿ ಪರಿವರ್ತಿಸಲು ಕರೆ
ಪ್ರಕಟಣಾ ದಿನಾಂಕ:
21 OCT 2026 6:08PM by PIB Bengaluru
ಕೃಷಿ ಮತ್ತು ನವೀಕರಿಸಬಹುದಾದ ಇಂಧನವನ್ನು ಸಂಯೋಜಿಸುವ ದೇಶದ ಶ್ರಮದಲ್ಲಿ, ಪ್ರಮುಖ ಮೈಲಿಗಲ್ಲನ್ನು ಗುರುತಿಸುವ 'ಅಗ್ರಿವಾಲ್ಟಾಯಿಕ್ಸ್ ವಿಶ್ವ ಸಮ್ಮೇಳನ'ದ 2026ರ, 7ನೇ ಆವೃತ್ತಿಯು ಇಂದು ನವದೆಹಲಿಯ ಭಾರತ್ ಮಂಟಪದಲ್ಲಿ ಪ್ರಾರಂಭವಾಯಿತು. ಈ ಪ್ರಮುಖ ಜಾಗತಿಕ ಶೃಂಗಸಭೆಯನ್ನು ಗ್ಲೋಬಲ್ ಸೌತ್ನಲ್ಲಿ (ದಕ್ಷಿಣದ ಜಾಗತಿಕ ರಾಷ್ಟ್ರಗಳು), ಪ್ರಥಮ ಬಾರಿಗೆ ಭಾರತದಲ್ಲಿ ಆಯೋಜಿಸಲಾಗುತ್ತಿದ್ದು, ಜಾಗತಿಕ ಆಹಾರ ಭದ್ರತೆ, ಇಂಧನ ಸ್ವಾವಲಂಬನೆ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಒಟ್ಟಿಗೆ ಮುನ್ನಡೆಸುವಲ್ಲಿ ಭಾರತದ ವಿಸ್ತರಿಸುತ್ತಿರುವ ನಾಯಕತ್ವವನ್ನು ಇದು ದೃಢವಾಗಿ ಬಲಪಡಿಸುತ್ತದೆ.
ಈ ಪ್ರತಿಷ್ಠಿತ ಮೂರು ದಿನಗಳ ಸಮಾವೇಶವನ್ನು ನೂತನ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯವು ಜರ್ಮನಿಯ ಫೆಡರಲ್ ಪರಿಸರ, ಹವಾಮಾನ ಕ್ರಿಯೆ, ಪ್ರಕೃತಿ ಸಂರಕ್ಷಣೆ ಮತ್ತು ಪರಮಾಣು ಸುರಕ್ಷತೆ ಸಚಿವಾಲಯದ ಬೆಂಬಲದೊಂದಿಗೆ ಆಯೋಜಿಸಿದ್ದು, "ಗ್ಲೋಬಲ್ ಸೌತ್ಗೆ ಶಕ್ತಿ ನೀಡುವುದು" ಎಂಬ ವಿಷಯವಸ್ತುನ ಅಡಿಯಲ್ಲಿ ಹಾಗೂ ಕೊನೆಕ್ಸಿಯೊ-ಪಿಎಸ್ಇ ಸಹಭಾಗಿತ್ವದಲ್ಲಿ ಆಯೋಜಿಸಲಾಗಿದೆ.
ಈ ಸಮಾವೇಶವು ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪ್ರತಿಪಾದಿಸಿದ "ಸಮರ್ಥನೆಯಿಂದ ಸಶಕ್ತೀಕರಣದತ್ತ" ಎಂಬ ಮೂಲಭೂತ ದೃಷ್ಟಿಕೋನವನ್ನು ಒಳಗೊಂಡಿದೆ. ಭಾರತದ ಶುದ್ಧ ಇಂಧನ ಪರಿವರ್ತನೆಯು ಕೃಷಿ ಮಾದರಿಯನ್ನು ಸಕ್ರಿಯವಾಗಿ ಮರುವ್ಯಾಖ್ಯಾನಿಸುತ್ತಿದೆ, ರೈತರು ಕೇವಲ ಆಹಾರ ಧಾನ್ಯ ಉತ್ಪಾದಕರಾಗಿ (ಅನ್ನದಾತರು) ಉಳಿಯದೆ ಪ್ರವರ್ಧಮಾನಕ್ಕೆ ಬರುತ್ತಿರುವ ಶುದ್ಧ-ಇಂಧನ ಉತ್ಪಾದಕರಾಗಿ (ಉರ್ಜಾದಾತರು) ಹೊರಹೊಮ್ಮಲು ಅನುವು ಮಾಡಿಕೊಡುತ್ತದೆ ಎಂದು ಅವರು ಗಮನಿಸಿದರು. ಭಾರತದ ಶುದ್ಧ ಇಂಧನ ಪರಿವರ್ತನೆಯು ಗ್ರಾಮೀಣ ಉದ್ಯಮಶೀಲತೆಯ ವ್ಯವಸ್ಥೆಯನ್ನು ವಿಸ್ತರಿಸಲು, ಆರ್ಥಿಕ ಮಾದರಿಗಳನ್ನು ಹೊಂದುವಂತೆ ಮಾಡಲು ಮತ್ತು ದೇಶಾದ್ಯಂತ ದೀರ್ಘಕಾಲೀನ ಆರ್ಥಿಕ ಸ್ಥಿರತೆಯನ್ನು ಬೆಳೆಸಲು ಅಭೂತಪೂರ್ವ ಮಾರ್ಗಗಳನ್ನು ತೆರೆದಿದೆ ಎಂದು ಗೌರವಾನ್ವಿತ ಪ್ರಧಾನಮಂತ್ರಿಯವರು ಒತ್ತಿಹೇಳಿದರು ಹಾಗೂ ರೈತರ ಆದಾಯವನ್ನು ದ್ವಿಗುಣಗೊಳಿಸುವ ಜೊತೆಗೆ ಶುದ್ಧ ಇಂಧನ ಪರಿವರ್ತನೆಯನ್ನು ವೇಗಗೊಳಿಸುವ ನಿಖರ ಅಗ್ರಿವಾಲ್ಟಾಯಿಕ್ಸ್ ಪರಿಹಾರಗಳನ್ನು ಜಂಟಿಯಾಗಿ ವಿಸ್ತರಿಸಲು ಅಂತಾರಾಷ್ಟ್ರೀಯ ಪಾಲುದಾರರು, ವಿಜ್ಞಾನಿಗಳು ಮತ್ತು ಉದ್ಯಮದ ನಾಯಕರಿಗೆ ಕರೆ ನೀಡಿದರು.
ಮೊದಲ ದಿನದ ಉದ್ಘಾಟನಾ ಸಮಾರಂಭವು ಗಣ್ಯರ ಸ್ವಾಗತ ಮತ್ತು ದೀಪ ಬೆಳಗಿಸುವುದರೊಂದಿಗೆ ಪ್ರಾರಂಭವಾಯಿತು, ನಂತರ ನೂತನ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ಕಾರ್ಯದರ್ಶಿ ಶ್ರೀ ಸಂತೋಷ್ ಕೆ. ಸಾರಂಗಿ ಅವರು ಸ್ವಾಗತ ಮತ್ತು ಉದ್ಘಾಟನಾ ನುಡಿಗಳನ್ನಾಡಿದರು. ಮೂರು ದಿನಗಳ ಸಮಾವೇಶ ಮತ್ತು "ಗ್ಲೋಬಲ್ ಸೌತ್ಗೆ ಶಕ್ತಿ ನೀಡುವುದು" ಎಂಬ ವಿಷಯದ ಮೇಲಿನ ಅದರ ಗಮನವನ್ನು ಒಡಮೂಡಿಸುವ ಸಮ್ಮೇಳನದ ವಿಡಿಯೋವನ್ನು ಪ್ರದರ್ಶಿಸಲಾಯಿತು.
ಉದ್ಘಾಟನಾ ಸಮಾರಂಭದ ಕಾರ್ಯಕ್ರಮದಲ್ಲಿ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಹಾಗೂ ಕೇಂದ್ರ ನೂತನ ಮತ್ತು ನವೀಕರಿಸಬಹುದಾದ ಇಂಧನ, ಶಿಕ್ಷಣ ಮತ್ತು ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಅವರ ಭಾಷಣಗಳು, ನಂತರ ಜರ್ಮನಿಯ ಫೆಡರಲ್ ಪರಿಸರ, ಹವಾಮಾನ ಕ್ರಿಯೆ, ಪ್ರಕೃತಿ ಸಂರಕ್ಷಣೆ ಮತ್ತು ಪರಮಾಣು ಸುರಕ್ಷತೆ ಸಚಿವರಾದ ಶ್ರೀ ಕಾರ್ಸ್ಟನ್ ಷ್ನೈಡರ್ ಅವರ ವಿಡಿಯೋ ಸಂದೇಶ ಒಳಗೊಂಡಿತ್ತು. ಭಾರತ ಮತ್ತು ಭೂತಾನ್ ದೇಶಗಳ ಜರ್ಮನಿ ರಾಯಭಾರಿ ಡಾ. ಜ್ಯಾಸ್ಪರ್ ವೀಕ್ ವಿಶೇಷ ಸಮಾರೋಪ ನುಡಿಗಳನ್ನಾಡಿದರು. ಈ ಸಂದರ್ಭದಲ್ಲಿ ನೂತನ ಮತ್ತು ನವೀಕರಿಸಬಹುದಾದ ಇಂಧನ ಹಾಗೂ ವಿದ್ಯುತ್ ರಾಜ್ಯ ಸಚಿವರಾದ ಶ್ರೀ ಶ್ರೀಪಾದ್ ಯೆಸ್ಸೊ ನಾಯಕ್ ಉಪಸ್ಥಿತರಿದ್ದರು.
ಅಧಿಕೃತ ಚಾಲನಾ ಭಾಗದಲ್ಲಿ ಮೂರು ಜ್ಞಾನ ಸಂಪನ್ಮೂಲಗಳನ್ನು ಬಿಡುಗಡೆ ಮಾಡಲಾಯಿತು: 'ಇಂಡಿಯಾ ಅಗ್ರಿವಾಲ್ಟಾಯಿಕ್ಸ್ ಅಲೈಯನ್ಸ್' ಅಭಿವೃದ್ಧಿಪಡಿಸಿದ ಡಿಸಿಷನ್-ಮೇಕಿಂಗ್ ಟೂಲ್ (ನಿರ್ಧಾರ ತೆಗೆದುಕೊಳ್ಳುವ ಉಪಕರಣ), 'ಇಂಟರ್ನ್ಯಾಷನಲ್ ವಾಟರ್ ಮ್ಯಾನೇಜ್ಮೆಂಟ್ ಇನ್ಸ್ಟಿಟ್ಯೂಟ್' ಅಭಿವೃದ್ಧಿಪಡಿಸಿದ ಬುಕ್ ಆಫ್ ಅಬ್ಸ್ಟ್ರಾಕ್ಟ್ಸ್ ಮತ್ತು MNRE ನ ಅಗ್ರಿಪಿವಿ ಪಾಲಿಸಿ ಕೈಪಿಡಿ.
ಈ ಸಮಾವೇಶವು 150ಕ್ಕೂ ಹೆಚ್ಚು ವಿದೇಶಿ ಭಾಗವಹಿಸುವವರು ಸೇರಿದಂತೆ, 1200ಕ್ಕೂ ಹೆಚ್ಚು ಪ್ರತಿನಿಧಿಗಳನ್ನು ಒಂದೆಡೆ ತಂದಿದ್ದು, ಅದರಲ್ಲಿ ಅಂತಾರಾಷ್ಟ್ರೀಯ ತಜ್ಞರು, ನೀತಿ ನಿರೂಪಕರು, ಸಂಶೋಧಕರು, ಉದ್ಯಮದ ನಾಯಕರು, ಆವಿಷ್ಕಾರಕರು, ಸ್ಟಾರ್ಟ್ಅಪ್ಗಳು ಮತ್ತು ಅಭಿವೃದ್ಧಿ ಪಾಲುದಾರರು ಸೇರಿದ್ದಾರೆ. ಈ ಕಾರ್ಯಕ್ರಮವು ಜ್ಞಾನ ವಿನಿಮಯ, ತಂತ್ರಜ್ಞಾನ ಸಹಯೋಗ ಮತ್ತು ದಕ್ಷಿಣ-ದಕ್ಷಿಣ ರಾಷ್ಟ್ರಗಳ ಸಹಕಾರಕ್ಕೆ ವೇದಿಕೆಯನ್ನು ಒದಗಿಸುತ್ತದೆ. ಮೇಲಿನ ಭಾಗವಹಿಸುವಿಕೆಯು ಕೃಷಿ ಭದ್ರತೆಯೊಂದಿಗೆ ಇಂಧನ ಸ್ವಾವಲಂಬನೆಯನ್ನು ಜೋಡಿಸುವ ಅತ್ಯಂತ ಸಂಯೋಜಿತ ಆಡಳಿತ ತಂತ್ರವನ್ನು ಪ್ರದರ್ಶಿಸುತ್ತದೆ.
ಈ ಕಾರ್ಯಕ್ರಮವು ವಿಜ್ಞಾನ, ನೀತಿ ಮತ್ತು ಆವಿಷ್ಕಾರಗಳಿಗೆ ಸಂಬಂಧಿಸಿದಂತೆ ಸಮಗ್ರ ವ್ಯವಸ್ಥೆಯ ಸಂಯೋಜನೆಯನ್ನು ಒಳಗೊಂಡಿತ್ತು. ಇದರಡಿಯಲ್ಲಿ, ಕಾರ್ಯಕ್ರಮವು ಎರಡು ಸಮಾನಾಂತರ ವೈಜ್ಞಾನಿಕ ಟ್ರ್ಯಾಕ್ಗಳ ಜೊತೆಗೆ ಮೀಸಲಾದ 'ಇಂಡಿಯಾ ಫೋಕಸ್ ಟ್ರ್ಯಾಕ್' ಅನ್ನು ಒಳಗೊಂಡಿದೆ. ಸಮಾವೇಶದಾದ್ಯಂತದ ಚರ್ಚೆಗಳು ಆವಿಷ್ಕಾರ, ರಾಜ್ಯಗಳ ನಾಯಕತ್ವ, ಬೆಳೆ ಉತ್ಪಾದಕತೆ, ನೀತಿ ಚೌಕಟ್ಟುಗಳು, ಹಣಕಾಸು ಮಾದರಿಗಳು, ತಂತ್ರಜ್ಞಾನ ನಿಯೋಜನೆ, ಹವಾಮಾನ ಸ್ಥಿತಿಸ್ಥಾಪಕತ್ವ ಮತ್ತು ರೈತ-ಕೇಂದ್ರಿತ ವ್ಯವಹಾರ ಮಾದರಿಗಳನ್ನು ಒಳಗೊಂಡಿರುತ್ತವೆ.
ಇದಲ್ಲದೆ, ಸಂವಾದಾತ್ಮಕ 'ಅಗ್ರಿವಾಲ್ಟಾಯಿಕ್ಸ್ ಪಿಚ್ ಹಬ್' ಅನ್ನು ಒಳಗೊಂಡಿರುವ ಮೀಸಲಾದ ಸ್ಟಾರ್ಟ್ಅಪ್ ಮತ್ತು ಆವಿಷ್ಕಾರ ವೇದಿಕೆಯು ಮುಂದಿನ ಪೀಳಿಗೆಯ ತಾಂತ್ರಿಕ ಪರಿಹಾರಗಳನ್ನು ಪ್ರದರ್ಶಿಸುತ್ತಿದೆ, ಇದು ಕ್ಲೀನ್-ಟೆಕ್ ಆವಿಷ್ಕಾರಕರು, ಸ್ಟಾರ್ಟ್ಅಪ್ಗಳು, ವೆಂಚರ್ ಕ್ಯಾಪಿಟಲಿಸ್ಟ್ಗಳು ಮತ್ತು ಜಾಗತಿಕ ಉದ್ಯಮ ನಾಯಕರ ನಡುವಿನ ಅಂತರವನ್ನು ಕಡಿಮೆ ಮಾಡುತ್ತದೆ.
ಆಹಾರ ಮತ್ತು ಶುದ್ಧ ಇಂಧನವೆರಡಕ್ಕೂ ಭೂಮಿಯ ದ್ವಿಪದ ಬಳಕೆಯ ಮೂಲಕ ಗ್ರಾಮೀಣ ನಿರುದ್ಯೋಗವನ್ನು ಕಡಿಮೆ ಮಾಡಲು, ಸ್ಥಳೀಯ ಉದ್ಯಮಶೀಲತೆಯನ್ನು ಬೆಳೆಸಲು, ರೈತರ ಆದಾಯವನ್ನು ಹೆಚ್ಚಿಸಲು, ಬೆಳೆಗಳ ಸೂಕ್ಷ್ಮ ಹವಾಮಾನವನ್ನು ರಕ್ಷಿಸಲು ಮತ್ತು ಹವಾಮಾನ ವೈಪರೀತ್ಯದ ವಿರುದ್ಧ ಸುಸ್ಥಿರ ಜೀವನೋಪಾಯವನ್ನು ಭದ್ರಪಡಿಸಲು ಅಗ್ರಿವಾಲ್ಟಾಯಿಕ್ಸ್ ಪರಿವರ್ತನಾತ್ಮಕ ಅವಕಾಶವನ್ನು ಒದಗಿಸುತ್ತದೆ. ಸಮಾವೇಶದಲ್ಲಿ ಪ್ರತಿನಿಧಿಗಳು ಹವಾಮಾನ-ಸ್ಥಿತಿಸ್ಥಾಪಕ ಕೃಷಿಯನ್ನು ನಿರ್ಮಿಸುವಲ್ಲಿ ಮತ್ತು ಗ್ರಾಮೀಣ ಭಾರತದಲ್ಲಿ ಸುಸ್ಥಿರ ಜೀವನೋಪಾಯವನ್ನು ಸೃಷ್ಟಿಸುವಲ್ಲಿ ಅಗ್ರಿವಾಲ್ಟಾಯಿಕ್ಸ್ನ ಪಾತ್ರವನ್ನು ಎತ್ತಿಹಿಡಿದರು.
ಕೃಷಿಯ ಭವಿಷ್ಯವು, ಶುದ್ಧ ಇಂಧನ ಮತ್ತು ಡಿಜಿಟಲ್ ತಂತ್ರಜ್ಞಾನದ ಸಮ್ಮಿಲನದಲ್ಲಿದೆ ಎಂಬುದನ್ನು ಈ ಕಲಾಪಗಳು ಜಂಟಿಯಾಗಿ ಒತ್ತಿಹೇಳಿದವು. ಅಗ್ರಿವಾಲ್ಟಾಯಿಕ್ಸ್ ಭಾರತದಲ್ಲಿ ಸಾಂಪ್ರದಾಯಿಕ ಕೃಷಿಯಿಂದ ತಂತ್ರಜ್ಞಾನ ಆಧಾರಿತ ಕೃಷಿಗೆ ಬೃಹತ್ ಪರಿವರ್ತನೆಯನ್ನು ಪ್ರತಿನಿಧಿಸುತ್ತದೆ, ಇದು ಸೌರ ಇಂಧನವನ್ನು ನಿಖರವಾದ ಕೃಷಿ, ಸ್ಮಾರ್ಟ್ ನೀರಾವರಿ, ಡಿಜಿಟಲ್ ತಂತ್ರಜ್ಞಾನಗಳು ಮತ್ತು ನವೀನ ವ್ಯವಹಾರ ಮಾದರಿಗಳೊಂದಿಗೆ ಸಂಯೋಜಿಸುತ್ತದೆ.
7ನೇ ಅಗ್ರಿವಾಲ್ಟಾಯಿಕ್ಸ್ ವಿಶ್ವ ಸಮ್ಮೇಳನ ಅಂತಾರಾಷ್ಟ್ರೀಯ ಸಹಯೋಗವನ್ನು ನಿರ್ಣಾಯಕವಾಗಿ ವೇಗಗೊಳಿಸುತ್ತದೆ, ಜಾಗತಿಕ ಆಹಾರ ಮತ್ತು ಇಂಧನ ವ್ಯವಸ್ಥೆಗಳಿಗೆ ಸ್ಥಿತಿಸ್ಥಾಪಕ, ಸುಸ್ಥಿರ ಭವಿಷ್ಯವನ್ನು ನಿರ್ಮಿಸುವ ಮುಂಚೂಣಿಯಲ್ಲಿ ಭಾರತದ ಪಾತ್ರವನ್ನು ದೃಢಪಡಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.

*****
(ಪ್ರಕಟಣೆ ಐ.ಡಿ.: 2326268)
ವಿಸಿಟರ್ ಕೌಂಟರ್ : 9