ಹಣಕಾಸು ಸಚಿವಾಲಯ
ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಇಂದು ಥಾಯ್ಲೆಂಡ್ನ ಬ್ಯಾಂಕಾಕ್ನಲ್ಲಿ ನಡೆದ ವಿಶ್ವ ಬ್ಯಾಂಕ್ನ ಅಭಿವೃದ್ಧಿ ಸಮಿತಿಯ 114ನೇ ಸರ್ವಸದಸ್ಯರ ಸಭೆಯಲ್ಲಿ ಭಾಗವಹಿಸಿದರು
ಪ್ರಕಟಣಾ ದಿನಾಂಕ:
15 OCT 2026 9:21PM by PIB Bengaluru
ಬ್ಯಾಂಕಾಕ್, ಥಾಯ್ಲೆಂಡ್, 15 ಅಕ್ಟೋಬರ್ 2026
ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಇಂದು ಥಾಯ್ಲೆಂಡ್ನ ಬ್ಯಾಂಕಾಕ್ನಲ್ಲಿ ನಡೆದ ವಿಶ್ವ ಬ್ಯಾಂಕ್ನ ಅಭಿವೃದ್ಧಿ ಸಮಿತಿಯ 114ನೇ ಸರ್ವಸದಸ್ಯರ ಸಭೆಯಲ್ಲಿ ವಿಶ್ವ ಬ್ಯಾಂಕ್ನ ಗವರ್ನರ್ ಆಗಿ ಭಾಗವಹಿಸಿದರು. ಸಭೆಯ ಕಾರ್ಯಸೂಚಿಯ ವಿಷಯ “ಖಾಸಗಿ ಬಂಡವಾಳದ ಕ್ರೋಡೀಕರಣ ಮತ್ತು ಉದ್ಯೋಗಗಳು” ಆಗಿತ್ತು.
“ಖಾಸಗಿ ಬಂಡವಾಳದ ಕ್ರೋಡೀಕರಣ ಮತ್ತು ಉದ್ಯೋಗಗಳು” ಎಂಬ ವಿಷಯದ ಕುರಿತು ಭಾರತದ ಪರವಾಗಿ ಕೇಂದ್ರ ಹಣಕಾಸು ಸಚಿವರು ಮಾಡಿದ ಭಾಷಣದ ಪಠ್ಯ ಹೀಗಿದೆ:
“ಖಾಸಗಿ ಬಂಡವಾಳವನ್ನು ಕ್ರೋಡೀಕರಿಸುವ ಮತ್ತು ಉದ್ಯೋಗಗಳನ್ನು ಸೃಷ್ಟಿಸುವ ಪ್ರಯತ್ನಗಳಿಗೆ ನಿರಂತರ ಆದ್ಯತೆ ನೀಡುತ್ತಿರುವುದನ್ನು ನಾವು ಸ್ವಾಗತಿಸುತ್ತೇವೆ. ಇಂಧನ ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ಒತ್ತಡ, ವ್ಯಾಪಾರ ವಲಯದ ವಿಘಟನೆ, ಹವಾಮಾನ ಸಂಬಂಧಿತ ಸವಾಲುಗಳು ಮತ್ತು ತ್ವರಿತ ತಾಂತ್ರಿಕ ಬದಲಾವಣೆಗಳ ಈ ಸಮಯದಲ್ಲಿ, ಉತ್ಪಾದಕತೆ ಹೆಚ್ಚಿಸುವ ಹಾಗೂ ಉತ್ತಮ ವೇತನ ನೀಡುವ ಉದ್ಯೋಗಗಳು ಬಡತನ ನಿವಾರಣೆ ಮತ್ತು ಎಲ್ಲರಿಗೂ ಸಮೃದ್ಧಿ ಒದಗಿಸುವ ಅತ್ಯಂತ ಪರಿಣಾಮಕಾರಿ ಮಾರ್ಗಗಳಾಗಿವೆ.
ನಾನು ಆರು ಅಂಶಗಳನ್ನು ಸಂಕ್ಷಿಪ್ತವಾಗಿ ಪ್ರಸ್ತಾಪಿಸಲು ಬಯಸುತ್ತೇನೆ.
ಮೊದಲನೆಯದಾಗಿ, ಉದ್ಯೋಗ ಸೃಷ್ಟಿಗೆ ಬಿಡಿಬಿಡಿಯಾದ ಕ್ರಮಗಳಷ್ಟೇ ಸಾಲದು; ಅದಕ್ಕೆ ಪೂರಕವಾದ ವ್ಯವಸ್ಥೆ ಅಗತ್ಯ. ಸುಸ್ಥಿರ ಉದ್ಯೋಗ ಸೃಷ್ಟಿಗೆ ಉತ್ತಮ ಗುಣಮಟ್ಟದ ಮತ್ತು ಎಲ್ಲರನ್ನೂ ಒಳಗೊಳ್ಳುವ ಆರ್ಥಿಕ ಬೆಳವಣಿಗೆ ಅಗತ್ಯ. ಇದಕ್ಕಾಗಿ ಸ್ಥೂಲ ಆರ್ಥಿಕತೆಯ ಸ್ಥಿರತೆ, ದಕ್ಷ ಮೂಲಸೌಕರ್ಯ, ಸರಳ ಹಾಗೂ ಸ್ಪಷ್ಟ ನಿಯಮಾವಳಿಗಳು ಮತ್ತು ಹಣಕಾಸು ಹಾಗೂ ಕೌಶಲ್ಯಗಳಿಗೆ ವ್ಯಾಪಕ ಪ್ರವೇಶದ ಅವಕಾಶ ಇರಬೇಕು. ಇಂಧನ ಮತ್ತು ಉದ್ಯೋಗ ಮಾರುಕಟ್ಟೆಗಳಿಗೆ ಕೊನೆಯ ಮೈಲಿಯ ಸಂಪರ್ಕ ಸೌಲಭ್ಯ, ಬೃಹತ್ ಪ್ರಮಾಣದ ಭೌತಿಕ ಹಾಗೂ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ, ಹಣಕಾಸು ಒಳಗೊಳ್ಳುವಿಕೆ ಮತ್ತು ಮಾರುಕಟ್ಟೆ ಶಕ್ತಿಗಳ ಮೇಲಿನ ವಿಶ್ವಾಸವನ್ನು ಆಧರಿಸಿದ ನಿಯಂತ್ರಣ ವ್ಯವಸ್ಥೆಗಳು ಉತ್ಪಾದಕತೆಯನ್ನು ಹೆಚ್ಚಿಸಲು ಹಾಗೂ ದೊಡ್ಡ ಪ್ರಮಾಣದಲ್ಲಿ ಉದ್ಯೋಗಗಳನ್ನು ಸೃಷ್ಟಿಸಲು ನಿರ್ಣಾಯಕವಾಗಿವೆ ಎಂಬುದನ್ನು ನಮ್ಮ ಅನುಭವವಾಗಿದೆ.
ಎರಡನೆಯದಾಗಿ, ಖಾಸಗಿ ವಲಯವು ಅಭಿವೃದ್ಧಿ ಕಾರ್ಯಸೂಚಿಯ ಕೇಂದ್ರಬಿಂದುವಾಗಿರಬೇಕು. ಬಹುತೇಕ ಉದ್ಯೋಗಗಳನ್ನು ಖಾಸಗಿ ಉದ್ಯಮಗಳೇ ಸೃಷ್ಟಿಸಲಿವೆ ಮತ್ತು ಸೃಷ್ಟಿಸಬೇಕು. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು (ಎಂಎಸ್ಎಂಇಗಳು) ಹಾಗೂ ನವೋದ್ಯಮಗಳು ಇದರಲ್ಲಿ ಮಹತ್ವದ ಪಾತ್ರ ವಹಿಸಲಿವೆ. ಆದ್ದರಿಂದ, ಖಾಸಗಿ ಹೂಡಿಕೆಯನ್ನು ಕ್ರೋಡೀಕರಿಸುವುದು ಅತ್ಯಗತ್ಯ. ಅದೇ ಸಮಯದಲ್ಲಿ, ಕ್ರೋಡೀಕರಿಸಿದ ಹಣಕಾಸಿನ ಪ್ರಮಾಣದಿಂದ ಮಾತ್ರ ಯಶಸ್ಸನ್ನು ಅಳೆಯಬಾರದು; ಸೃಷ್ಟಿಯಾದ ಉದ್ಯೋಗಗಳು ಮತ್ತು ಉತ್ಪಾದಕತೆಯಲ್ಲಿನ ಹೆಚ್ಚಳ ಯಶಸ್ಸಿನ ಮಾನದಂಡಗಳಾಗಬೇಕು.
ಐಬಿಆರ್ಡಿ, ಐಎಫ್ಸಿ ಮತ್ತು ಮಿಗಾ (MIGA) ಸಂಸ್ಥೆಗಳ ನಡುವಿನ ಸಹಯೋಗವನ್ನು ಮತ್ತಷ್ಟು ಬಲಪಡಿಸಲು ಹಾಗೂ ವಿಶ್ವ ಬ್ಯಾಂಕ್ ಸಮೂಹದ (WBG) ಖಾತರಿ ವೇದಿಕೆಯನ್ನು ತ್ವರಿತವಾಗಿ ಕಾರ್ಯಗತಗೊಳಿಸಲು ನಾವು ಪ್ರೋತ್ಸಾಹಿಸುತ್ತೇವೆ. ಅಭಿವೃದ್ಧಿಶೀಲ ಆರ್ಥಿಕತೆಗಳು ರಿಸ್ಕ್-ಕ್ಯಾಪಿಟಲ್ ಕೊರತೆಯನ್ನು ಎದುರಿಸುತ್ತಿವೆ. ಖಾತರಿಗಳು ಮತ್ತು ಅಪಾಯ ತಗ್ಗಿಸುವ ಸಾಧನಗಳು ರಿಸ್ಕ್-ಕ್ಯಾಪಿಟಲ್ ಸೃಷ್ಟಿಯನ್ನು ತ್ವರಿತಗೊಳಿಸಲು ಹಾಗೂ ಖಾಸಗಿ ಬಂಡವಾಳದ ಹರಿವನ್ನು ಹೆಚ್ಚಿಸಲು ಅತ್ಯಂತ ಪರಿಣಾಮಕಾರಿ ಸಾಧನಗಳಾಗಿವೆ.
ಮೂರನೆಯದಾಗಿ, ಸ್ಪರ್ಧಾತ್ಮಕ ಹಣಕಾಸು ನೆರವು ಪ್ರಮುಖ ಆದ್ಯತೆಯಾಗಿ ಉಳಿಯಬೇಕು. ಸ್ಥಳೀಯ ಕರೆನ್ಸಿಯಲ್ಲಿ ಹಣಕಾಸು ನೆರವು ಒದಗಿಸುವುದು, ಹೆಚ್ಚು ಪರಿಣಾಮಕಾರಿ ಖಾತರಿ ಉತ್ಪನ್ನಗಳನ್ನು ಬಳಸುವುದು ಮತ್ತು ವಹಿವಾಟಿನ ವೆಚ್ಚವನ್ನು ಕಡಿಮೆ ಮಾಡುವುದು ಸೇರಿದಂತೆ ವಿವಿಧ ಸಾಧನಗಳನ್ನು ಬಳಸಿಕೊಂಡು ವಿಶ್ವ ಬ್ಯಾಂಕ್ ಸ್ಪರ್ಧಾತ್ಮಕ ದರಗಳಲ್ಲಿ ಹಣಕಾಸು ನೆರವು ಒದಗಿಸುವ ಅಭಿವೃದ್ಧಿ ಪಾಲುದಾರನಾಗಿ ಮುಂದುವರಿಯಬೇಕು. ಮಧ್ಯಮ ಆದಾಯದ ದೇಶಗಳ ಕಾರ್ಯತಂತ್ರದಲ್ಲಿ ಕೈಗೆಟುಕುವ, ಊಹಿಸಬಹುದಾದ ಮತ್ತು ಸುಲಭವಾಗಿ ಲಭ್ಯವಾಗುವ ಹಣಕಾಸು ನೆರವು ಪ್ರಮುಖ ಸ್ಥಾನದಲ್ಲಿರಬೇಕು.
ನಾಲ್ಕನೆಯದಾಗಿ, ಜ್ಞಾನ ಬ್ಯಾಂಕ್ ಮಾರುಕಟ್ಟೆಯ ವೈಫಲ್ಯಗಳನ್ನು ಪರಿಹರಿಸಲು ನೆರವಾಗಬೇಕು. ನಗರೀಕರಣ, ಪ್ರವಾಸೋದ್ಯಮ, ಕೃಷಿ ರಫ್ತು ಮತ್ತು ನಿರ್ಣಾಯಕ ಖನಿಜಗಳಂತಹ ಪ್ರಮುಖ ಕ್ಷೇತ್ರಗಳಲ್ಲಿನ ಮಾರುಕಟ್ಟೆ ವೈಫಲ್ಯಗಳನ್ನು ಪರಿಹರಿಸುವುದು ವಿಶ್ವ ಬ್ಯಾಂಕ್ ಸಮೂಹದ ಅತ್ಯಂತ ಪರಿಣಾಮಕಾರಿ ಮಧ್ಯಸ್ಥಿಕೆಗಳಾಗಲಿವೆ. ಕೃತಕ ಬುದ್ಧಿಮತ್ತೆಯಿಂದ (ಎಐ) ದೇಶದ ಆಡಳಿತಾತ್ಮಕ ಸಾಮರ್ಥ್ಯವನ್ನು ಹೆಚ್ಚಿಸಬಹುದು; ಇದರಿಂದ ಅಭಿವೃದ್ಧಿಶೀಲ ದೇಶಗಳಿಗೆ ಅಪಾರ ಪ್ರಯೋಜನ ದೊರೆಯಲಿದೆ. ಆದ್ದರಿಂದ, ಬ್ಯಾಂಕ್ನ ಕಾರ್ಯಾಚರಣಾ ಮತ್ತು ಜ್ಞಾನ ಕಾರ್ಯಸೂಚಿಯಲ್ಲಿ ಈ ವಿಷಯಕ್ಕೆ ಹೆಚ್ಚಿನ ಗಮನ ನೀಡಬೇಕು.
ಐದನೆಯದಾಗಿ, ವಿಶ್ವವ್ಯಾಪಿ ಆಡಳಿತ ಸೂಚ್ಯಂಕಗಳು ಮತ್ತು ಇಂತಹ ಇತರ ಸಂಯೋಜಿತ ಮೌಲ್ಯಮಾಪನಗಳ ಕುರಿತು ನಮ್ಮ ದೀರ್ಘಕಾಲದ ಕಳವಳಗಳನ್ನು ನಾವು ಮತ್ತೊಮ್ಮೆ ಒತ್ತಿಹೇಳುತ್ತೇವೆ. ಇವು ದೂರಗಾಮಿ ಪರಿಣಾಮಗಳನ್ನು ಬೀರುವುದರಿಂದ, ಪ್ರಸ್ತುತ ವಿಧಾನಗಳು ಪಾರದರ್ಶಕ, ವಸ್ತುನಿಷ್ಠ, ಸಾಕ್ಷ್ಯಾಧಾರಿತವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಹಾಗೂ ಸದಸ್ಯ ರಾಷ್ಟ್ರಗಳ ಇಂದಿನ ವಾಸ್ತವಿಕ ಪರಿಸ್ಥಿತಿಗಳು ಮತ್ತು ವೈವಿಧ್ಯಮಯ ಅಭಿವೃದ್ಧಿ ಅನುಭವಗಳಿಗೆ ಹೆಚ್ಚು ಹೊಂದಿಕೆಯಾಗುವಂತೆ ಮಾಡಲು ಸಮಗ್ರ ಪರಿಶೀಲನೆ ಮತ್ತು ಪರಿಷ್ಕರಣೆ ಅಗತ್ಯವಾಗಿದೆ. ಬ್ಯಾಂಕ್ನ ಜ್ಞಾನಾಧಾರಿತ ಉತ್ಪನ್ನಗಳ ವಿಶ್ವಾಸಾರ್ಹತೆಯನ್ನು ಕಾಪಾಡಲು ಇದು ಅತ್ಯಗತ್ಯ.
ಕೊನೆಯದಾಗಿ, ಸುಧಾರಣೆಗಳು ವಿಕಸನಗೊಳ್ಳುವಾಗ ಅಭಿವೃದ್ಧಿಶೀಲ ದೇಶಗಳ ಧ್ವನಿಗೆ ಮತ್ತು ಅಭಿವೃದ್ಧಿಯ ಪರಿಣಾಮಗಳಿಗೆ ಹೆಚ್ಚಿನ ಬಲ ದೊರೆಯಬೇಕು. ಸುಧಾರಣೆಗಳು ದೇಶಗಳಿಗೆ ಉದ್ಯೋಗ ಸೃಷ್ಟಿಸಲು, ಉತ್ಪಾದಕತೆ ಹೆಚ್ಚಿಸಲು, ಬಡತನ ಕಡಿಮೆ ಮಾಡಲು ಮತ್ತು ಜೀವನಮಟ್ಟ ಸುಧಾರಿಸಲು ನೆರವಾಗುತ್ತಿವೆಯೇ ಎಂಬುದೇ ಯಶಸ್ಸಿನ ಅಂತಿಮ ಮಾನದಂಡವಾಗಿದೆ. ಬ್ಯಾಂಕ್ನ ಆಡಳಿತ ವ್ಯವಸ್ಥೆಯಲ್ಲಿ ಅಭಿವೃದ್ಧಿಶೀಲ ದೇಶಗಳ ಧ್ವನಿ ಮತ್ತು ಪ್ರಾತಿನಿಧ್ಯವನ್ನು ಬಲಪಡಿಸುವ ಮಹತ್ವವನ್ನು ನಾವು ಪುನರುಚ್ಚರಿಸುತ್ತೇವೆ.
ಈ ಉದ್ದೇಶಗಳನ್ನು ಈಡೇರಿಸಲು ಇತರ ಷೇರುದಾರರು, ಆಡಳಿತ ಮಂಡಳಿ ಮತ್ತು ಅಭಿವೃದ್ಧಿ ಪಾಲುದಾರರೊಂದಿಗೆ ಕಾರ್ಯನಿರ್ವಹಿಸಲು ನಮ್ಮ ಸದಸ್ಯ ರಾಷ್ಟ್ರಗಳ ಗುಂಪು ಸಿದ್ಧವಾಗಿದೆ.”
******
(ಪ್ರಕಟಣೆ ಐ.ಡಿ.: 2324173)
ವಿಸಿಟರ್ ಕೌಂಟರ್ : 5