ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
ಕಬ್ಬು ಬೆಳೆಗಾರರು ಮತ್ತು ಸಕ್ಕರೆ ವಲಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಶೀಲಿಸಲು ಕೇಂದ್ರ ಸರ್ಕಾರದಿಂದ ಸಮಿತಿ ರಚನೆ
ಪ್ರಕಟಣಾ ದಿನಾಂಕ:
14 OCT 2026 6:13PM by PIB Bengaluru
ಕಬ್ಬು ಬೆಳೆಗಾರರು ಎತ್ತಿರುವ ಸಮಸ್ಯೆಗಳನ್ನು ಪರಿಶೀಲಿಸಲು ಹಾಗೂ ಅವರ ಕಳವಳಗಳನ್ನು ಪರಿಹರಿಸಲು ಸೂಕ್ತ ಕ್ರಮಗಳನ್ನು ಶಿಫಾರಸು ಮಾಡಲು ನೀತಿ ಆಯೋಗದ ಮಾಜಿ ಸದಸ್ಯ ಪ್ರೊ. ರಮೇಶ್ ಚಂದ್ ಅವರ ಅಧ್ಯಕ್ಷತೆಯಲ್ಲಿ ಕೇಂದ್ರ ಸರ್ಕಾರ ಸಮಿತಿಯೊಂದನ್ನು ರಚಿಸಿದೆ.
ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವರು ಹಾಗೂ ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವರೊಂದಿಗೆ ಕರ್ನಾಟಕ ಮತ್ತು ಮಹಾರಾಷ್ಟ್ರದ ಕಬ್ಬು ಬೆಳೆಗಾರರ ಪ್ರತಿನಿಧಿಗಳು ನಡೆಸಿದ ಸಭೆಯಲ್ಲಿ ಕೈಗೊಂಡ ನಿರ್ಧಾರಗಳ ಅನುಸಾರ ಈ ಸಮಿತಿಯನ್ನು ರಚಿಸಲಾಗಿದೆ.
ಕೃಷಿ ವೆಚ್ಚಗಳು ಮತ್ತು ಇತರ ಸಂಬಂಧಿತ ಅಂಶಗಳನ್ನು ಪರಿಗಣಿಸಿ, ಕಬ್ಬು ಬೆಳೆಗಾರರಿಗೆ ಲಾಭದಾಯಕ ಬೆಲೆ ದೊರೆಯುವಂತೆ ಮಾಡಲು ಅದನ್ನು ಹೆಚ್ಚಿಸಬೇಕೆಂಬ ಬೇಡಿಕೆಯನ್ನು ಸಮಿತಿಯು ಪರಿಶೀಲಿಸಲಿದೆ. ಅಲ್ಲದೆ, ಸಕ್ಕರೆ ಉತ್ಪಾದನಾ ವೆಚ್ಚ, ಮಾರುಕಟ್ಟೆಯಲ್ಲಿ ದೊರೆಯುವ ಬೆಲೆ ಮತ್ತು ಸಕ್ಕರೆ ಕಾರ್ಖಾನೆಗಳ ಆರ್ಥಿಕ ಸುಸ್ಥಿರತೆಯನ್ನು ಗಮನದಲ್ಲಿಟ್ಟುಕೊಂಡು, ಕಾರ್ಖಾನೆ ನಿರ್ಗಮನ ಹಂತದಲ್ಲಿ ಸಕ್ಕರೆಗೆ ಅನ್ವಯಿಸುವ ಕನಿಷ್ಠ ಮಾರಾಟ ಬೆಲೆಯನ್ನು (ಎಂಎಸ್ಪಿ) ಪರಿಷ್ಕರಿಸಬೇಕೆಂಬ ಬೇಡಿಕೆಯನ್ನೂ ಸಮಿತಿಯು ಪರಿಶೀಲಿಸುತ್ತದೆ.
ಸಕ್ಕರೆಯ ಇಳುವರಿ ಪ್ರಮಾಣವನ್ನು ಪರೀಕ್ಷಿಸುವ ಮತ್ತು ವರದಿ ಮಾಡುವ ಪ್ರಸ್ತುತ ವ್ಯವಸ್ಥೆಗಳು, ಇಳುವರಿಯನ್ನು ಪಾರದರ್ಶಕವಾಗಿ ಪರಿಶೀಲಿಸಿ ದೃಢೀಕರಿಸುವ ಕ್ರಮಗಳು ಹಾಗೂ ಸಕ್ಕರೆ ಕಾರ್ಖಾನೆಗಳಲ್ಲಿ ಕಬ್ಬಿನ ತೂಕವನ್ನು ಅಳೆಯುವ ಪ್ರಸ್ತುತ ಪದ್ಧತಿಗಳು ಸಮಿತಿಯ ಪರಿಶೀಲನೆಯ ಇತರ ಪ್ರಮುಖ ವಿಷಯಗಳಾಗಿವೆ. ಇವುಗಳಲ್ಲಿ ತೂಕಮಾಪನ ಸಾಧನಗಳ ಮಾಪನಾಂಕ ನಿರ್ಣಯ, ತಪಾಸಣೆ ಮತ್ತು ಪರಿಶೀಲನಾ ವ್ಯವಸ್ಥೆಗಳು ಸಮರ್ಪಕವಾಗಿವೆಯೇ ಎಂಬುದನ್ನೂ ಸಮಿತಿಯು ಪರಿಶೀಲಿಸಲಿದೆ.
ಯಂತ್ರಗಳ ಮೂಲಕ ಕಟಾವು ಮಾಡಿದ ಕಬ್ಬಿನ ತೂಕದಲ್ಲಿ ಕಡಿತ ಮಾಡುವ ಪ್ರಸ್ತುತ ಪದ್ಧತಿಗಳನ್ನು ಸಮಿತಿಯು ಪರಿಶೀಲಿಸಲಿದೆ. ಯಾಂತ್ರೀಕೃತ ಕಟಾವಿನಿಂದ ನೈಜವಾಗಿ ಯಾವುದೇ ನಷ್ಟ ಉಂಟಾಗಿದ್ದರೆ, ಅದರ ಮೌಲ್ಯಮಾಪನ ಮಾಡುತ್ತದೆ. ಪ್ರಸ್ತುತ ಪದ್ಧತಿಗಳು ರೈತರಿಗೆ ಪಾವತಿಸಬೇಕಾದ ಕಬ್ಬಿನ ಬೆಲೆಯ ಮೇಲೆ ಬೀರುವ ಆರ್ಥಿಕ ಪರಿಣಾಮವನ್ನು ಸಮಿತಿಯು ಮೌಲ್ಯಮಾಪನ ಮಾಡಲಿದೆ. ಅಗತ್ಯವೆಂದು ಪರಿಗಣಿಸಿದರೆ, ಇದಕ್ಕೆ ಸಂಬಂಧಿಸಿದ ಇತರ ವಿಷಯಗಳನ್ನೂ ಪರಿಶೀಲಿಸಬಹುದು.
ರೈತರ ಪ್ರತಿನಿಧಿಗಳು, ಸಕ್ಕರೆ ಕಾರ್ಖಾನೆಗಳ ಸಂಘಗಳು, ರಾಜ್ಯ ಸರ್ಕಾರಗಳು ಹಾಗೂ ಅಗತ್ಯವೆಂದು ಪರಿಗಣಿಸುವ ಇತರ ತಜ್ಞರು ಅಥವಾ ಸಂಸ್ಥೆಗಳು ಸೇರಿದಂತೆ ಎಲ್ಲ ಪಾಲುದಾರರೊಂದಿಗೆ ಸಮಿತಿಯು ಸಮಾಲೋಚನೆ ನಡೆಸಲಿದೆ. ಸಕ್ಷಮ ಪ್ರಾಧಿಕಾರದ ಪರಿಗಣನೆಗಾಗಿ ತನ್ನ ಪರಿಶೀಲನೆಯ ಫಲಿತಾಂಶಗಳು ಮತ್ತು ನಿರ್ದಿಷ್ಟ ಶಿಫಾರಸುಗಳನ್ನು ಒಳಗೊಂಡ ವರದಿಯನ್ನು ಸಾಧ್ಯವಾದಷ್ಟು ಶೀಘ್ರದಲ್ಲಿ ಸಮಿತಿಯು ಸಲ್ಲಿಸಲಿದೆ.
ಸಮಿತಿಯ ಅಧ್ಯಕ್ಷರಾದ ಪ್ರೊ. ರಮೇಶ್ ಚಂದ್ ಅವರು ಖ್ಯಾತ ಕೃಷಿ ಅರ್ಥಶಾಸ್ತ್ರಜ್ಞರು ಹಾಗೂ ಸಾರ್ವಜನಿಕ ನೀತಿ ತಜ್ಞರಾಗಿದ್ದಾರೆ. ಅವರು 2015ರಿಂದ 2026ರವರೆಗೆ ನೀತಿ ಆಯೋಗದ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಇದಕ್ಕೂ ಮೊದಲು, ಐಸಿಎಆರ್ – ಎನ್ಐಎಪಿ ನಿರ್ದೇಶಕರಾಗಿ ಹಾಗೂ ಹದಿನೈದನೇ ಹಣಕಾಸು ಆಯೋಗದ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. ಕೃಷಿ ಅಭಿವೃದ್ಧಿ, ರೈತರ ಸಮಸ್ಯೆಗಳು, ಆಹಾರ ಭದ್ರತೆ, ಕೃಷಿ ಮಾರುಕಟ್ಟೆಗಳು ಮತ್ತು ಬೆಲೆ ನಿಗದಿ ನೀತಿಯ ಕ್ಷೇತ್ರಗಳಲ್ಲಿ ಅವರು ಅಪಾರ ಪರಿಣತಿ ಹೊಂದಿದ್ದಾರೆ.
ಸಮಿತಿಯಲ್ಲಿ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಕೃಷಿ ಆಯುಕ್ತರು, ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯ ಜಂಟಿ ಕಾರ್ಯದರ್ಶಿ (ಸಕ್ಕರೆ) ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆಯ ಜಂಟಿ ಕಾರ್ಯದರ್ಶಿ (ಕಾನೂನು ಮಾಪನಶಾಸ್ತ್ರ) ಸದಸ್ಯರಾಗಿರುತ್ತಾರೆ.
******
(ಪ್ರಕಟಣೆ ಐ.ಡಿ.: 2323512)
ವಿಸಿಟರ್ ಕೌಂಟರ್ : 49