ಜಲ ಶಕ್ತಿ ಸಚಿವಾಲಯ
azadi ka amrit mahotsav

ಬೆಂಗಳೂರಿನ ಐಐಎಂನಲ್ಲಿ ಜಲ ಜೀವನ್ ಮಿಷನ್ 2.0 ಅಡಿಯಲ್ಲಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಪ್ರಾದೇಶಿಕ ಪರಿಶೀಲನಾ ಸಭೆಯನ್ನು ಡಿಡಿಡಬ್ಲ್ಯುಎಸ್ ಆಯೋಜಿಸಿತು


ಜಲ ಜೀವನ್ ಮಿಷನ್ 2.0 ಅಡಿಯಲ್ಲಿ ಜಲಮೂಲಗಳ ಸುಸ್ಥಿರತೆ, ನೀರಿನ ಗುಣಮಟ್ಟದ ಮೇಲ್ವಿಚಾರಣೆ ಮತ್ತು ಸೇವಾ ವಿತರಣೆಯನ್ನು ಬಲಪಡಿಸುವಂತೆ ರಾಜ್ಯಗಳಿಗೆ ಡಿಡಿಡಬ್ಲ್ಯುಎಸ್ ಕಾರ್ಯದರ್ಶಿ ಕರೆ

ಪ್ರಕಟಣಾ ದಿನಾಂಕ: 07 OCT 2026 7:00PM by PIB Bengaluru

ಜಲ ಶಕ್ತಿ ಸಚಿವಾಲಯದ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು (ಡಿಡಿಡಬ್ಲ್ಯುಎಸ್), ಜಲ ಜೀವನ್ ಮಿಷನ್ (ಜೆಜೆಎಂ) 2.0 ಅಡಿಯಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರಾದೇಶಿಕ ಪರಿಶೀಲನಾ ಸಭೆಯನ್ನು ಇಂದು ಬೆಂಗಳೂರಿನ ಭಾರತೀಯ ನಿರ್ವಹಣಾ ಸಂಸ್ಥೆ (ಐಐಎಂ ಬೆಂಗಳೂರು)ಯಲ್ಲಿ ಆಯೋಜಿಸಿತು. ಈ ಸಭೆಯ ಅಧ್ಯಕ್ಷತೆಯನ್ನು ಡಿಡಿಡಬ್ಲ್ಯೂಎಸ್ ಕಾರ್ಯದರ್ಶಿ ಶ್ರೀ ಅಶೋಕ್ ಕೆ. ಕೆ. ಮೀನಾ ವಹಿಸಿದ್ದರು. ರಾಷ್ಟ್ರೀಯ ಜಲ ಜೀವನ್ ಮಿಷನ್ (ಎನ್‌ಜೆಜೆಎಂ)ನ ಹೆಚ್ಚುವರಿ ಕಾರ್ಯದರ್ಶಿ ಮತ್ತು ಮಿಷನ್ ನಿರ್ದೇಶಕ ಶ್ರೀ ಕಮಲ್ ಕಿಶೋರ್ ಸೋನ್ ಹಾಗೂ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ಸಭೆಯಲ್ಲಿ ಜೆಜೆಎಂ 2.0ರ ಪ್ರಗತಿಯನ್ನು ಪರಿಶೀಲಿಸಲಾಯಿತು. ಅಲ್ಲದೆ, ಜಲಮೂಲಗಳ ಸುಸ್ಥಿರತೆ, ನೀರಿನ ಗುಣಮಟ್ಟದ ಮೇಲ್ವಿಚಾರಣೆ, ಡಿಜಿಟಲ್ ಆಡಳಿತ, ಸಮುದಾಯದ ಪಾಲ್ಗೊಳ್ಳುವಿಕೆ ಮತ್ತು ಗ್ರಾಮೀಣ ನೀರು ಸರಬರಾಜು ವ್ಯವಸ್ಥೆಗಳ ದೀರ್ಘಕಾಲೀನ ಸುಸ್ಥಿರತೆಗೆ ಸಂಬಂಧಿಸಿದ ಪ್ರಮುಖ ಸುಧಾರಣಾ ಕ್ರಮಗಳ ಕುರಿತು ಚರ್ಚಿಸಲಾಯಿತು.

A group of people in a roomAI-generated content may be incorrect.

ತಮ್ಮ ಉದ್ಘಾಟನಾ ಭಾಷಣದಲ್ಲಿ ಶ್ರೀ ಅಶೋಕ್ ಕೆ. ಕೆ. ಮೀನಾ ಅವರು, ಜಲ ಜೀವನ್ ಮಿಷನ್ 2.0ರ ಅಡಿಯಲ್ಲಿ ಮೂಲಸೌಕರ್ಯ ನಿರ್ಮಾಣದಿಂದ ಸುಸ್ಥಿರ ಮತ್ತು ಜವಾಬ್ದಾರಿಯುತ ಸೇವಾ ವಿತರಣೆಯತ್ತ ಮಹತ್ವದ ಬದಲಾವಣೆಗೆ ಒತ್ತು ನೀಡಲಾಗಿದೆ ಎಂದು ಹೇಳಿದರು. ಅನುಮೋದಿತ ಯೋಜನೆಗಳ ಅನುಷ್ಠಾನವನ್ನು ತ್ವರಿತಗೊಳಿಸುವಂತೆ ಹಾಗೂ ಲಭ್ಯವಿರುವ ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವಂತೆ ಅವರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕರೆ ನೀಡಿದರು. ಗ್ರಾಮೀಣ ಕುಟುಂಬಗಳಿಗೆ ವಿಶ್ವಾಸಾರ್ಹ ಕುಡಿಯುವ ನೀರಿನ ಸೇವೆಗಳನ್ನು ಒದಗಿಸುವ ಸಂಪೂರ್ಣ ಕಾರ್ಯನಿರ್ವಹಣೆಯಲ್ಲಿರುವ ಯೋಜನೆಗಳಿಗೆ ಹೂಡಿಕೆಗಳನ್ನು ಸಮರ್ಪಕವಾಗಿ ಬಳಸಬೇಕು ಎಂದು ಅವರು ತಿಳಿಸಿದರು. ಫಲಿತಾಂಶಾಧಾರಿತ ಅನುಷ್ಠಾನದ ಮಹತ್ವವನ್ನು ಒತ್ತಿಹೇಳಿದ ಅವರು, ವೆಚ್ಚವನ್ನು ಜಲಮೂಲದಿಂದ ಮನೆಗೆ ಸಂಪೂರ್ಣ ಸಂಪರ್ಕ ವ್ಯವಸ್ಥೆ, ದೃಢವಾದ ಡಿಜಿಟಲ್ ದಾಖಲೆಗಳು ಮತ್ತು ಪರಿಣಾಮಕಾರಿ ಮೇಲ್ವಿಚಾರಣಾ ವ್ಯವಸ್ಥೆಗಳನ್ನು ಒಳಗೊಂಡ ಕಾರ್ಯನಿರ್ವಹಣೆಯಲ್ಲಿರುವ ಮೂಲಸೌಕರ್ಯವಾಗಿ ಪರಿವರ್ತಿಸಬೇಕು ಎಂದು ಹೇಳಿದರು.

ಜಲ ಜೀವನ್ ಮಿಷನ್ ದೇಶಾದ್ಯಂತ ಗ್ರಾಮೀಣ ಕುಡಿಯುವ ನೀರಿನ ಲಭ್ಯತೆಯಲ್ಲಿ ಮಹತ್ವದ ಪರಿವರ್ತನೆ ತಂದಿದೆ ಎಂದು ಕಾರ್ಯದರ್ಶಿ ಶ್ರೀ ಮೀನಾ ಹೇಳಿದರು. ಮಿಷನ್ ಆರಂಭವಾದ 2019ರ ಆಗಸ್ಟ್‌ನಲ್ಲಿ ಕೇವಲ 3.27 ಕೋಟಿ ಗ್ರಾಮೀಣ ಕುಟುಂಬಗಳಿಗೆ ನಲ್ಲಿ ನೀರಿನ ಸಂಪರ್ಕವಿದ್ದರೆ, ಈಗ 15.96 ಕೋಟಿಗೂ ಅಧಿಕ ಗ್ರಾಮೀಣ ಕುಟುಂಬಗಳು ನಲ್ಲಿ ನೀರಿನ ಸಂಪರ್ಕವನ್ನು ಹೊಂದಿವೆ ಎಂದು ಅವರು ತಿಳಿಸಿದರು. ಜಲಮೂಲಗಳ ಸುಸ್ಥಿರತೆ, ಆರ್ಥಿಕ ಮತ್ತು ಕಾರ್ಯಾಚರಣೆಯ ದಕ್ಷತೆ, ನೀರಿನ ಗುಣಮಟ್ಟದ ಖಾತರಿ ಹಾಗೂ ನಾಗರಿಕಕೇಂದ್ರಿತ ಸೇವಾ ವಿತರಣೆಯ ಮೂಲಕ ಈ ಸಾಧನೆಗಳನ್ನು ಮುಂದುವರಿಸುವುದೇ ಜೆಜೆಎಂ 2.0ರ ಗಮನವಾಗಿದೆ ಎಂದು ಅವರು ಹೇಳಿದರು.

ಏಕ-ಗ್ರಾಮ ಮತ್ತು ಬಹು-ಗ್ರಾಮ ನೀರು ಸರಬರಾಜು ಯೋಜನೆಗಳ ಅನುಷ್ಠಾನವನ್ನು, ವಿಶೇಷವಾಗಿ ನೀರಿನ ಗುಣಮಟ್ಟಕ್ಕೆ ಸಂಬಂಧಿಸಿದ ಸಮಸ್ಯೆ ಇರುವ ಪ್ರದೇಶಗಳಲ್ಲಿ, ತ್ವರಿತಗೊಳಿಸುವಂತೆ ಹಾಗೂ ಲಭ್ಯವಿರುವ ಸಂಪನ್ಮೂಲಗಳ ಸಮಯೋಚಿತ ಬಳಕೆಯನ್ನು ಖಚಿತಪಡಿಸಿಕೊಳ್ಳುವಂತೆ ಶ್ರೀ ಮೀನಾ ರಾಜ್ಯಗಳಿಗೆ ಕರೆ ನೀಡಿದರು. ನೀರಿನ ಆಡಳಿತಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ನಡೆದ ಕ್ಷೇತ್ರವಾರು ಚರ್ಚೆಗಳಲ್ಲಿ ಕೈಗೊಂಡ ನಿರ್ಧಾರಗಳನ್ನು ಉಲ್ಲೇಖಿಸಿದ ಅವರು, ಜೆಜೆಎಂ 2.0 ಅಡಿಯಲ್ಲಿ ಸೇವಾ ವಿತರಣೆಯನ್ನು ಮತ್ತಷ್ಟು ಬಲಪಡಿಸಲು ಒಪ್ಪಿಗೆಯಾದ ಸುಧಾರಣಾ ಕ್ರಮಗಳ ಮೇಲ್ವಿಚಾರಣೆ ಮತ್ತು ಅನುಷ್ಠಾನಕ್ಕೆ ಪರಿಣಾಮಕಾರಿ ವ್ಯವಸ್ಥೆಗಳನ್ನು ರೂಪಿಸುವಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿದರು.

ಜಲ ಸೇವಾ ಅಧ್ಯಯನದಿಂದ ಹೊರಹೊಮ್ಮಿರುವ ಅಂಶಗಳನ್ನು ಉಲ್ಲೇಖಿಸಿದ ಅವರು, ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲು ಪೈಪ್‌ಲೈನ್‌ಗಳಲ್ಲಿ ಸೋರಿಕೆ ಮತ್ತು ಒಡೆಯುವಿಕೆಯೇ ಪ್ರಮುಖ ಕಾರಣವಾಗಿದ್ದು, ನಂತರದ ಸ್ಥಾನದಲ್ಲಿ ವಿದ್ಯುತ್ ಕಡಿತ ಮತ್ತು ಕಡಿಮೆ ವೋಲ್ಟೇಜ್‌ಗೆ ಸಂಬಂಧಿಸಿದ ಸಮಸ್ಯೆಗಳಿವೆ ಎಂದು ಹೇಳಿದರು. ಗ್ರಾಮೀಣ ನೀರು ಸರಬರಾಜು ವ್ಯವಸ್ಥೆಗಳ ವಿಶ್ವಾಸಾರ್ಹತೆಯನ್ನು ಸುಧಾರಿಸಲು ಹಾಗೂ ಗ್ರಾಮೀಣ ಕುಟುಂಬಗಳಿಗೆ ನಿರಂತರ ಕುಡಿಯುವ ನೀರಿನ ಸೇವೆಯನ್ನು ಖಚಿತಪಡಿಸಲು ರಾಜ್ಯಗಳು ತಕ್ಷಣದ ಮತ್ತು ದೀರ್ಘಕಾಲೀನ ಎರಡೂ ರೀತಿಯ ಪರಿಹಾರಗಳನ್ನು ಅಳವಡಿಸಿಕೊಳ್ಳಬೇಕು ಎಂದು ಅವರು ಒತ್ತಿಹೇಳಿದರು.

ಗ್ರಾಮೀಣ ಕುಡಿಯುವ ನೀರಿನ ಮೂಲಸೌಕರ್ಯಕ್ಕೆ ನವೀಕರಿಸಬಹುದಾದ ಇಂಧನದ ಪರಿಹಾರಗಳನ್ನು ಅಳವಡಿಸಿಕೊಳ್ಳುವ ಸಾಧ್ಯತೆಗಳನ್ನು ಪರಿಶೀಲಿಸುವ ಅಗತ್ಯವನ್ನೂ ಕಾರ್ಯದರ್ಶಿಯವರು ಒತ್ತಿಹೇಳಿದರು. ದೇಶಾದ್ಯಂತ ಕುಡಿಯುವ ನೀರಿನ ಆಸ್ತಿಗಳ ಸೌರೀಕರಣವನ್ನು ಪರಿಶೀಲಿಸಲು ನವೀಕರಿಸಬಹುದಾದ ಇಂಧನ ಸಚಿವಾಲಯ (ಎಂಎನ್‌ಆರ್‌ಇ)ದೊಂದಿಗೆ ಚರ್ಚೆಗಳು ನಡೆಯುತ್ತಿವೆ ಎಂದು ಅವರು ತಿಳಿಸಿದರು. ಸೌರಶಕ್ತಿಯನ್ನು ಬಳಸಿಕೊಂಡು ನವೀನ ವಿಧಾನಗಳನ್ನು ಅಳವಡಿಸಿಕೊಳ್ಳುವುದರಿಂದ ಕಾರ್ಯಾಚರಣಾ ವೆಚ್ಚವನ್ನು ಕಡಿಮೆ ಮಾಡಬಹುದು, ಸೇವೆಗಳ ವಿಶ್ವಾಸಾರ್ಹತೆಯನ್ನು ಸುಧಾರಿಸಬಹುದು ಮತ್ತು ಗ್ರಾಮೀಣ ಕುಡಿಯುವ ನೀರಿನ ವ್ಯವಸ್ಥೆಗಳ ದೀರ್ಘಕಾಲೀನ ಸುಸ್ಥಿರತೆಯನ್ನು ಬಲಪಡಿಸಬಹುದು ಎಂದು ಅವರು ಹೇಳಿದರು.

ಸಭೆಯಲ್ಲಿ ಮಾತನಾಡಿದ ಎನ್‌ಜೆಜೆಎಂ ಹೆಚ್ಚುವರಿ ಕಾರ್ಯದರ್ಶಿ ಮತ್ತು ಮಿಷನ್ ನಿರ್ದೇಶಕ ಶ್ರೀ ಕಮಲ್ ಕಿಶೋರ್ ಸೋನ್, ಗ್ರಾಮೀಣ ನೀರು ಸರಬರಾಜು ಯೋಜನೆಗಳ ಕಾರ್ಯಾಚರಣೆಗೆ ಸಂಬಂಧಿಸಿದ ಸವಾಲುಗಳನ್ನು ಪರಿಹರಿಸುವ ಮಹತ್ವವನ್ನು ಒತ್ತಿಹೇಳಿದರು. ಜಲ ಸೇವಾ ಅಧ್ಯಯನ ಮತ್ತು ಸಂಬಂಧಿತ ಮೌಲ್ಯಮಾಪನಗಳಿಂದ ಹೊರಹೊಮ್ಮಿರುವ ಅಂಶಗಳನ್ನು ಉಲ್ಲೇಖಿಸಿದ ಅವರು, ಹಲವು ಪ್ರದೇಶಗಳಲ್ಲಿ ಕಡಿಮೆ ವೋಲ್ಟೇಜ್ ಮತ್ತು ವಿದ್ಯುತ್ ಗುಣಮಟ್ಟದಲ್ಲಿನ ಕೊರತೆಗಳು ಸೇವಾ ವಿತರಣೆಯ ಮೇಲೆ ಪರಿಣಾಮ ಬೀರುತ್ತಿವೆ ಎಂದು ಹೇಳಿದರು. ವಿದ್ಯುತ್‌ಗೆ ಸಂಬಂಧಿಸಿದ ವೆಚ್ಚವನ್ನು ಕಡಿಮೆ ಮಾಡುವುದರಿಂದ ಕಾರ್ಯಾಚರಣೆಯ ಸುಸ್ಥಿರತೆಯನ್ನು ಗಣನೀಯವಾಗಿ ಸುಧಾರಿಸಬಹುದು. ಆದ್ದರಿಂದ, ಇಂಧನ ದಕ್ಷತೆಯನ್ನು ಸುಧಾರಿಸಲು ಹಾಗೂ ಪುನರಾವರ್ತಿತ ಕಾರ್ಯಾಚರಣೆ ಮತ್ತು ನಿರ್ವಹಣಾ ವೆಚ್ಚವನ್ನು ಕಡಿಮೆ ಮಾಡಲು ಪ್ರಾಯೋಗಿಕ ಪರಿಹಾರಗಳನ್ನು ಗುರುತಿಸುವ ನಿಟ್ಟಿನಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಒಟ್ಟಾಗಿ ಕಾರ್ಯನಿರ್ವಹಿಸಬೇಕು ಎಂದು ಅವರು ಕರೆ ನೀಡಿದರು.

ಐಐಎಂ ಬೆಂಗಳೂರಿನ ಜೆಜೆಎಂ ಪ್ರೊಫೆಸರ್ ಚೇರ್ ಪ್ರೊ. ಗೋಪಾಲ್ ನಾಯಕ್ ಅವರು, “ಜೆಜೆಎಂ ಯೋಜನೆಯಲ್ಲಿ ವಿದ್ಯುತ್ ವೆಚ್ಚದ ಉತ್ತಮೀಕರಣ” ಎಂಬ ಶೀರ್ಷಿಕೆಯ ಅಧ್ಯಯನವನ್ನು ಮಂಡಿಸಿದರು. ಗ್ರಾಮೀಣ ನೀರು ಸರಬರಾಜು ವ್ಯವಸ್ಥೆಗಳಿಗೆ ಸಂಬಂಧಿಸಿದ ಗ್ರಿಡ್ ಆಧಾರಿತ ಮತ್ತು ಸೌರಶಕ್ತಿ ಆಧಾರಿತ ಮಾದರಿಗಳು ಸೇರಿದಂತೆ ವಿವಿಧ ಇಂಧನ ವ್ಯವಸ್ಥೆಗಳನ್ನು ಅಧ್ಯಯನದಲ್ಲಿ ಪರಿಶೀಲಿಸಲಾಯಿತು. ಅಲ್ಲದೆ, ಅವುಗಳ ಕಾರ್ಯಾಚರಣಾ ವೆಚ್ಚ ಮತ್ತು ಜೀವಿತಾವಧಿಯ ವೆಚ್ಚದ ಮೇಲಿನ ಪರಿಣಾಮಗಳನ್ನು ಮೌಲ್ಯಮಾಪನ ಮಾಡಲಾಯಿತು. ನವೀನ ಇಂಧನ ಪರಿಹಾರಗಳ ಮೂಲಕ ಪುನರಾವರ್ತಿತ ಕಾರ್ಯಾಚರಣೆ ಮತ್ತು ನಿರ್ವಹಣಾ ವೆಚ್ಚವನ್ನು ಕಡಿಮೆ ಮಾಡುವುದು, ನೀರು ಸರಬರಾಜು ಸೇವೆಗಳನ್ನು ಕೈಗೆಟುಕುವಂತೆ ಮಾಡುವುದು ಹಾಗೂ ಗ್ರಾಮೀಣ ನೀರು ಸರಬರಾಜು ಯೋಜನೆಗಳ ಆರ್ಥಿಕ ಸುಸ್ಥಿರತೆಯನ್ನು ಹೆಚ್ಚಿಸುವ ಅವಕಾಶಗಳನ್ನು ಪ್ರಸ್ತುತಿಯಲ್ಲಿ ವಿವರಿಸಲಾಯಿತು.

ಕುಡಿಯುವ ನೀರಿನ ಗುಣಮಟ್ಟದ ಮೇಲ್ವಿಚಾರಣೆ ಮತ್ತು ನಿರ್ವಹಣೆಗೆ ಸಂಬಂಧಿಸಿದ ಸಂಶೋಧನೆಗಳ ಕುರಿತು ನೀರಿನ ಗುಣಮಟ್ಟ ನಿರ್ವಹಣಾ ಮಾಹಿತಿ ವ್ಯವಸ್ಥೆ (ಡಬ್ಲ್ಯೂಕ್ಯೂಎಂಐಎಸ್) ದತ್ತಾಂಶವನ್ನು ಬಳಸಿಕೊಂಡು ಪ್ರಸ್ತುತಿಗಳನ್ನೂ ಕಾರ್ಯಕ್ರಮದಲ್ಲಿ ಮಂಡಿಸಲಾಯಿತು. ಜಲ ಜೀವನ್ ಮಿಷನ್ ಅನುಷ್ಠಾನದ ನಂತರ ಹಲವು ಮಾನದಂಡಗಳಲ್ಲಿ ಕುಡಿಯುವ ನೀರಿನ ಗುಣಮಟ್ಟದ ಅನುಸರಣೆ ಗಮನಾರ್ಹವಾಗಿ ಸುಧಾರಿಸಿದೆ ಎಂದು ಅಧ್ಯಯನದ ಅಂಶಗಳು ತೋರಿಸಿವೆ. ಪ್ರಯೋಗಾಲಯ ವ್ಯವಸ್ಥೆಯನ್ನು ಬಲಪಡಿಸುವುದು, ಸ್ವತಂತ್ರ ಮೇಲ್ವಿಚಾರಣಾ ವ್ಯವಸ್ಥೆಗಳನ್ನು ರೂಪಿಸುವುದು ಹಾಗೂ ಸಮುದಾಯದ ನೇತೃತ್ವದಲ್ಲಿ ನೀರಿನ ಗುಣಮಟ್ಟ ನಿರ್ವಹಣೆಯನ್ನು ಬಲಪಡಿಸುವ ಅವಕಾಶಗಳನ್ನೂ ಅವುಗಳು ಎತ್ತಿ ತೋರಿಸಿವೆ.

ಚರ್ಚೆಯ ಸಂದರ್ಭದಲ್ಲಿ, ಡಿಡಿಡಬ್ಲ್ಯುಎಸ್ ಕಾರ್ಯದರ್ಶಿ ಗ್ರಾಮೀಣ ನೀರು ಸರಬರಾಜು ವ್ಯವಸ್ಥೆಗಳಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಬಲಪಡಿಸಲು ಸ್ವತಂತ್ರ ನೀರಿನ ಗುಣಮಟ್ಟದ ಮೇಲ್ವಿಚಾರಣಾ ವ್ಯವಸ್ಥೆಗಳನ್ನು ಸ್ಥಾಪಿಸುವ ಮಹತ್ವವನ್ನು ಒತ್ತಿಹೇಳಿದರು. ನೀರಿನ ಗುಣಮಟ್ಟಕ್ಕೆ ಸಂಬಂಧಿಸಿದ ಮಾಹಿತಿಯನ್ನು ಗ್ರಾಮ ಪಂಚಾಯಿತಿಗಳು ಮತ್ತು ಸಮುದಾಯಗಳಿಗೆ ಲಭ್ಯವಾಗುವಂತೆ ಮಾಡಬೇಕು ಎಂದು ಅವರು ಹೇಳಿದರು. ನೀರಿನ ಗುಣಮಟ್ಟದ ಕುರಿತು ದೊರೆಯುವ ಮಾಹಿತಿಯನ್ನು ಗ್ರಾಮಸಭೆಗಳು ಪರಿಶೀಲಿಸಿ, ಅಗತ್ಯ ಪರಿಹಾರ ಕ್ರಮಗಳನ್ನು ಗುರುತಿಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದು ಅವರು ತಿಳಿಸಿದರು. ಸಮುದಾಯದ ಪಾಲ್ಗೊಳ್ಳುವಿಕೆ ಮತ್ತು ದತ್ತಾಂಶ ಆಧಾರಿತ ನಿರ್ಧಾರ ಕೈಗೊಳ್ಳುವಿಕೆ ಜೆಜೆಎಂ 2.0 ಅಡಿಯಲ್ಲಿ ದೀರ್ಘಕಾಲೀನ ಸೇವಾ ವಿತರಣೆಯ ಫಲಿತಾಂಶಗಳನ್ನು ಸುಧಾರಿಸುವಲ್ಲಿ ನಿರ್ಣಾಯಕವಾಗಲಿದೆ ಎಂದು ಅವರು ಹೇಳಿದರು.

ಪರಿಶೀಲನಾ ಸಭೆಯಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಜೆಜೆಎಂ 2.0ರ ಪ್ರಮುಖ ಆದ್ಯತೆಗಳಾದ ರಾಜ್ಯ ಅನುಷ್ಠಾನ ಯೋಜನೆಗಳು, ಹಣಕಾಸು ಸಮನ್ವಯ, ಪಿಎಂ-ಜನ್‌ಮನ್ ಗ್ರಾಮಗಳಲ್ಲಿ ‘ಹರ್ ಘರ್ ಜಲ್’ ಪ್ರಮಾಣೀಕರಣ, ಜಲ ಅರ್ಪಣ್, ಡಿಜಿಟಲ್ ಆಡಳಿತ ಉಪಕ್ರಮಗಳು ಮತ್ತು ನೀರಿನ ಗುಣಮಟ್ಟ ನಿರ್ವಹಣೆಯ ಪ್ರಗತಿಯ ಬಗ್ಗೆಯೂ ಚರ್ಚಿಸಿದವು. ಸುಸ್ಥಿರ ಜಲ ಭದ್ರತೆಯ ಮಿಷನ್‌ನ ದೃಷ್ಟಿಕೋನವನ್ನು ಸಹಕಾರಿ ಒಕ್ಕೂಟ ವ್ಯವಸ್ಥೆ, ತಂತ್ರಜ್ಞಾನ ಆಧಾರಿತ ಆಡಳಿತ ಮತ್ತು ಜನಭಾಗೀದಾರಿಕೆಯ ಮೂಲಕ ಮುನ್ನಡೆಸುವ ಬದ್ಧತೆಯನ್ನು ಪುನರುಚ್ಚರಿಸುವುದರೊಂದಿಗೆ ಸಭೆ ಮುಕ್ತಾಯಗೊಂಡಿತು. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ತಮ್ಮ ಪ್ರಗತಿ, ಸವಾಲುಗಳು ಮತ್ತು ಉತ್ತಮ ಕಾರ್ಯಪದ್ಧತಿಗಳನ್ನು ಹಂಚಿಕೊಂಡವು.

A group of men sitting in chairs in a roomAI-generated content may be incorrect.

ತಮ್ಮ ಮುಕ್ತಾಯದ ನುಡಿಗಳಲ್ಲಿ, ಎನ್‌ಜೆಜೆಎಂ ಹೆಚ್ಚುವರಿ ಕಾರ್ಯದರ್ಶಿ ಮತ್ತು ಮಿಷನ್ ನಿರ್ದೇಶಕ ಶ್ರೀ ಕಮಲ್ ಕಿಶೋರ್ ಸೋನ್ ಅವರು ಜೆಜೆಎಂ 2.0 ಅಡಿಯಲ್ಲಿ ಪ್ರಮುಖ ಸುಧಾರಣಾ ಉಪಕ್ರಮಗಳ ಅನುಷ್ಠಾನವನ್ನು ತ್ವರಿತಗೊಳಿಸುವಂತೆ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಕರೆ ನೀಡಿದರು. ಯೋಜನೆಗಳನ್ನು ಗ್ರಾಮ ಪಂಚಾಯಿತಿ ಮತ್ತು ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿಗೆ ಔಪಚಾರಿಕವಾಗಿ ಹಸ್ತಾಂತರಿಸುವ ಪ್ರಕ್ರಿಯೆಯಾದ ಜಲ ಅರ್ಪಣ್ ಅನ್ನು ಉಲ್ಲೇಖಿಸಿದ ಅವರು, ಎಲ್ಲಾ ಹರ್ ಘರ್ ಜಲ್ ಗ್ರಾಮಗಳಲ್ಲಿ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ, ಅನುಮೋದಿತ ಪ್ರಾದೇಶಿಕ ಭಾಷೆಗಳಲ್ಲಿ ಪ್ರಮಾಣಪತ್ರಗಳ ಸೃಜನೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ಹೇಳಿದರು.

ಶ್ರೀ ಸೋನ್ ಅವರು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ನೀರಿನ ಗುಣಮಟ್ಟ ಪರೀಕ್ಷೆಯನ್ನು ತ್ವರಿತಗೊಳಿಸುವಂತೆ, ವಿಶೇಷವಾಗಿ ಅಂಗನವಾಡಿ ಕೇಂದ್ರಗಳು ಮತ್ತು ಇತರ ಸಾರ್ವಜನಿಕ ಸಂಸ್ಥೆಗಳಲ್ಲಿ ಪರೀಕ್ಷೆಯನ್ನು ವೇಗಗೊಳಿಸುವಂತೆ ಹಾಗೂ ಪರೀಕ್ಷಾ ಫಲಿತಾಂಶಗಳನ್ನು ನಿಗದಿತ ಡಿಜಿಟಲ್ ವೇದಿಕೆಗಳಲ್ಲಿ ಸಮಯಕ್ಕೆ ಸರಿಯಾಗಿ ಅಪ್‌ಲೋಡ್ ಮಾಡುವಂತೆ ಕರೆ ನೀಡಿದರು. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಾರ್ಯಾಚರಣೆ ಮತ್ತು ನಿರ್ವಹಣಾ (ಒ & ಎಂ) ಕೈಪಿಡಿಯನ್ನು ಅನುಷ್ಠಾನಗೊಳಿಸುವಂತೆ, ಜಲಮೂಲಗಳ ಸುಸ್ಥಿರತೆಯ ಯೋಜನೆ ಮತ್ತು ಮೇಲ್ವಿಚಾರಣೆಗೆ ನಿರ್ಧಾರ ಬೆಂಬಲ ವ್ಯವಸ್ಥೆ (ಡಿಎಸ್‌ಎಸ್)ಯನ್ನು ಸಕ್ರಿಯವಾಗಿ ಬಳಸಿಕೊಳ್ಳುವಂತೆ ಹಾಗೂ ಗ್ರಾಮೀಣ ನೀರು ಸರಬರಾಜು ವ್ಯವಸ್ಥೆಗಳ ಪರಿಣಾಮಕಾರಿ ನಿರ್ವಹಣೆಗಾಗಿ ಪಂಚಾಯತ್ ರಾಜ್ ಸಂಸ್ಥೆಗಳೊಂದಿಗೆ ಸಮನ್ವಯವನ್ನು ಬಲಪಡಿಸುವಂತೆ ಅವರು ಸೂಚಿಸಿದರು. ಡಿಎಸ್‌ಎಸ್‌ಗೆ ಸಂಬಂಧಿಸಿದ ಮಾಹಿತಿಯನ್ನು ಸಮಯಕ್ಕೆ ಸರಿಯಾಗಿ ಸಲ್ಲಿಸುವುದು, ಸಾಮರ್ಥ್ಯವೃದ್ಧಿ ಚಟುವಟಿಕೆಗಳನ್ನು ಪೂರ್ಣಗೊಳಿಸುವುದು, ಹಣಕಾಸು ಆಯೋಗದ ಅನುಸರಣೆ ಅಗತ್ಯಗಳನ್ನು ಪಾಲಿಸುವುದು ಮತ್ತು ಜೆಜೆಎಂ 2.0ರ ಸುಧಾರಣಾ ಮೈಲಿಗಲ್ಲುಗಳನ್ನು ಸಾಧಿಸಲು ಸ್ಪಷ್ಟವಾದ ಅನುಷ್ಠಾನ ಯೋಜನೆಗಳನ್ನು ಸಿದ್ಧಪಡಿಸುವುದಕ್ಕೂ ಅವರು ಒತ್ತು ನೀಡಿದರು.

 

*****

 


(ಪ್ರಕಟಣೆ ಐ.ಡಿ.: 2320428) ವಿಸಿಟರ್ ಕೌಂಟರ್ : 21
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Assamese