ಅತಿಸಣ್ಣ, ಸಣ್ಣ, ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ ಸಚಿವಾಲಯ
ಪ್ರಧಾನಮಂತ್ರಿ ಅವರ ಉದ್ಯೋಗ ಸೃಷ್ಟಿ ಕಾರ್ಯಕ್ರಮ: ಭಾರತದಾದ್ಯಂತ ಉದ್ಯಮಿಗಳ ಸಬಲೀಕರಣ ಮತ್ತು ಸಮಗ್ರ ಪ್ರಗತಿಗೆ ಉತ್ತೇಜನ
ಪಿ.ಎಮ್.ಇ.ಜಿ.ಪಿ ಯೋಜನೆಯು ಜೀವನೋಪಾಯ ಮತ್ತು ಉದ್ಯಮಗಳ ಬೆಳವಣಿಗೆಯ ಮೇಲೆ ಬೀರಿದ ಪರಿವರ್ತನಾಶೀಲ ಪ್ರಭಾವವನ್ನು ಬಿಂಬಿಸುವ ಯಶೋಗಾಥೆಗಳು
ಪ್ರಕಟಣಾ ದಿನಾಂಕ:
02 OCT 2026 7:53PM by PIB Bengaluru
ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮಗಳ (ಎಂ.ಎಸ್.ಎಂ.ಇ.) ಸಚಿವಾಲಯದ ಪ್ರಮುಖ ಉಪಕ್ರಮವಾದ ಹಾಗೂ ಖಾದಿ ಮತ್ತು ಗ್ರಾಮೀಣ ಉದ್ಯೋಗ ಆಯೋಗ (ಕೆ.ವಿ.ಐ.ಸಿ.) ಅನುಷ್ಠಾನಗೊಳಿಸುತ್ತಿರುವ 'ಪ್ರಧಾನ ಮಂತ್ರಿಯವರ ಉದ್ಯೋಗ ಸೃಷ್ಟಿ ಕಾರ್ಯಕ್ರಮ' (ಪಿ.ಎಮ್.ಇ.ಜಿ.ಪಿ ), ವಿಶೇಷವಾಗಿ ಗ್ರಾಮೀಣ ಮತ್ತು ಅರೆ ನಗರ ಪ್ರದೇಶಗಳ ಕೃಷಿಯೇತರ ವಲಯದಲ್ಲಿ ಹೊಸ ಅತಿ ಸಣ್ಣ ಉದ್ಯಮಗಳನ್ನು ಸ್ಥಾಪಿಸಲು ನೆರವಾಗುವ ಮೂಲಕ ಸ್ವಯಂ ಉದ್ಯೋಗವನ್ನು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಈ ಯೋಜನೆಯಡಿ, ಉದ್ಯಮ ಆರಂಭಿಸಲು ಆಸಕ್ತಿ ಹೊಂದಿರುವವರಿಗೆ ಬ್ಯಾಂಕ್ ನಿಂದ ಮಂಜೂರಾದ ಸಾಲಗಳ ಮೇಲೆ ಮಾರ್ಜಿನ್ ಮನಿ (ಎಂಎಂ) ಸಬ್ಸಿಡಿ ರೂಪದಲ್ಲಿ ಆರ್ಥಿಕ ನೆರವು ನೀಡಲಾಗುತ್ತಿದ್ದು, ಇದು ಉದ್ಯಮಗಳ ಸ್ಥಾಪನೆಗೆ ಅಗತ್ಯವಾದ ಪ್ರೋತ್ಸಾಹವನ್ನು ಒದಗಿಸುತ್ತದೆ.
ಆರ್ಥಿಕ ವರ್ಷ 2014-15 ರಿಂದೀಚೆಗೆ, ಪಿ.ಎಮ್.ಇ.ಜಿ.ಪಿ ಅಡಿಯಲ್ಲಿ ಸುಮಾರು 73.08 ಲಕ್ಷ ಜನರಿಗೆ ಸುಸ್ಥಿರ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು, ಸುಮಾರು 8.12 ಲಕ್ಷ ಅತಿ ಸಣ್ಣ ಉದ್ಯಮಿಗಳಿಗೆ ₹24,398.61 ಕೋಟಿ ಮೊತ್ತದ ಮಾರ್ಜಿನ್ ಮನಿ ಸಬ್ಸಿಡಿಯ ನೆರವು ನೀಡಲಾಗಿದೆ.
ಆಕಾಂಕ್ಷೆಗಳನ್ನು ಉದ್ಯಮಗಳಾಗಿ ಪರಿವರ್ತಿಸುವುದು: ತಳಮಟ್ಟದಲ್ಲಿ ಬದಲಾವಣೆ ತರುತ್ತಿರುವ ಪಿ.ಎಮ್.ಇ.ಜಿ.ಪಿ
ಮಾರ್ಜಿನ್ ಮನಿ ಸಬ್ಸಿಡಿಯ ಬೆಂಬಲದೊಂದಿಗೆ ಸುಲಭವಾಗಿ ಸಾಲ ಸೌಲಭ್ಯ ಒದಗಿಸುವ ಮೂಲಕ, ಪಿ.ಎಮ್.ಇ.ಜಿ.ಪಿ. ಯೋಜನೆಯು ಸಾಮಾನ್ಯ ವ್ಯಕ್ತಿಗಳ ಆಕಾಂಕ್ಷೆಗಳನ್ನು ಯಶಸ್ವಿ ಉದ್ಯಮಗಳಾಗಿ ಪರಿವರ್ತಿಸುತ್ತಿದೆ. ಇದು ಮೊದಲ ತಲೆಮಾರಿನ ಉದ್ಯಮಿಗಳು ಲಾಭದಾಯಕ ಉದ್ಯಮಗಳನ್ನು ಸ್ಥಾಪಿಸಲು ಸಹಾಯ ಮಾಡುವ ಮೂಲಕ, ಉದ್ಯೋಗಾಕಾಂಕ್ಷಿಗಳನ್ನು ಉದ್ಯೋಗ ನೀಡುವವರನ್ನಾಗಿ ಪರಿವರ್ತಿಸುತ್ತದೆ.
ಪಿ.ಎಮ್.ಇ.ಜಿ.ಪಿ. ಯೋಜನೆಯ ಯಶಸ್ಸು, ತಮ್ಮ ಉದ್ಯಮಶೀಲತೆಯ ಕನಸುಗಳನ್ನು ಯಶಸ್ವಿ ಉದ್ಯಮಗಳಾಗಿ ಪರಿವರ್ತಿಸಿದ ಫಲಾನುಭವಿಗಳ ಸ್ಪೂರ್ತಿದಾಯಕ ಪ್ರಯಾಣದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ.
ಸ್ಕಿನ್ ಕಾಂತಿ ಆಯುರ್ವೇದ – ಅತಿ ಸಣ್ಣ ಉದ್ಯಮದಿಂದ ದೇಶದ ಪ್ರಮುಖ ಸಂಸ್ಥೆಯಾಗುವವರೆಗೆ: ಹಿಮಾಚಲ ಪ್ರದೇಶದ ಪರ್ವಾನೋ ಮೂಲದ ಶ್ರೀಮತಿ ಪೂಜಾ ಶರ್ಮಾ ಅವರು ಸ್ಥಾಪಿಸಿದ 'ಸ್ಕಿನ್ಕಾಂತಿ ಆಯುರ್ವೇದ' ಉದ್ಯಮವು, ಸಣ್ಣ ಪ್ರಮಾಣದ ಉದ್ಯಮದಿಂದ ಭಾರತದ ಅತಿದೊಡ್ಡ ಕೈಯಿಂದ ತಯಾರಿಸಿದ ಸೋಪ್ ಉತ್ಪಾದನಾ ಘಟಕವಾಗಿ ಬೆಳೆದ ಅತ್ಯದ್ಭುತ ಬೆಳವಣಿಗೆಗೆ ಉದಾಹರಣೆಯಾಗಿದೆ. ₹25 ಲಕ್ಷದ ಯೋಜನಾ ವೆಚ್ಚದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಬೆಂಬಲದೊಂದಿಗೆ ಸ್ಥಾಪಿತವಾದ ಈ ಉದ್ಯಮವು, ಇಂದು ₹30 ಕೋಟಿಯಷ್ಟು ಬೃಹತ್ ವಾರ್ಷಿಕ ವಹಿವಾಟು ನಡೆಸುತ್ತಿದ್ದು, 300 ಜನರಿಗೆ ಉದ್ಯೋಗ ನೀಡಿದೆ. ಇವರಲ್ಲಿ 95% ರಷ್ಟು ಜನರು ಮಹಿಳೆಯರಾಗಿದ್ದಾರೆ. ಆಯುರ್ವೇದ ತತ್ವಗಳನ್ನು ಆಧುನಿಕ ವೈಜ್ಞಾನಿಕ ತಂತ್ರಜ್ಞಾನದೊಂದಿಗೆ ಸಂಯೋಜಿಸುವ ಮೂಲಕ, ಈ ಘಟಕವು ಉತ್ಪಾದನಾ ದಕ್ಷತೆ ಹೆಚ್ಚಳ ಮತ್ತು ವೆಚ್ಚ ಕಡಿತ ಸೇರಿದಂತೆ ಮಹತ್ವದ ತಾಂತ್ರಿಕ ಪ್ರಗತಿಯನ್ನು ಸಾಧಿಸಿದೆ. ಜೊತೆಗೆ, ವಿವಿಧ ಚಿಲ್ಲರೆ ಹಾಗೂ ಸಾಂಸ್ಥಿಕ ಜಾಲಗಳ ಮೂಲಕ ಭಾರತದಾದ್ಯಂತ ಉತ್ಪನ್ನಗಳನ್ನು ಪೂರೈಸುತ್ತಿದೆ.


ಎಸ್. ಪಿ. ಕ್ವಾಲಿಟಿ ಪ್ರೊಡಕ್ಟ್ಸ್ – ಪಿ.ಎಮ್.ಇ.ಜಿ.ಪಿ. ನೆರವಿನಿಂದ ಜಾಗತಿಕ ಮನ್ನಣೆಗೆ: ಪಂಜಾಬ್ ರಾಜ್ಯದ ಮೊಹಾಲಿಯಲ್ಲಿ ಶ್ರೀ ಸುರೇಂದರ್ ಪಾಲ್ ಸಿಂಗ್ ನೇಗಿ ಅವರು ಸ್ಥಾಪಿಸಿದ 'ಎಸ್. ಪಿ. ಕ್ವಾಲಿಟಿ ಪ್ರೊಡಕ್ಟ್ಸ್' ಜಾಗತಿಕ ಮಟ್ಟದಲ್ಲಿ ಸ್ಪರ್ಧಾತ್ಮಕ ಆಹಾರ ಸಂಸ್ಕರಣಾ ಉದ್ಯಮವಾಗಿ ಹೊರಹೊಮ್ಮಿದೆ. ಬ್ಯಾಂಕ್ ಆಫ್ ಬರೋಡಾದಿಂದ ಆರ್ಥಿಕ ನೆರವು ಪಡೆದು ₹21 ಲಕ್ಷದ ಆರಂಭಿಕ ಯೋಜನಾ ವೆಚ್ಚದೊಂದಿಗೆ ಪ್ರಾರಂಭವಾದ ಈ ಘಟಕವು, ಇಂದು ₹38 ಕೋಟಿ ವಹಿವಾಟು ನಡೆಸುವ ಉದ್ಯಮವಾಗಿ ಬೆಳೆದಿದ್ದು, ಸುಮಾರು 130 ಜನರಿಗೆ ಉದ್ಯೋಗ ನೀಡಿದೆ. ಈ ಸಂಸ್ಥೆಯು ಜೇನುತುಪ್ಪ, ಕುಕೀಸ್ ಮತ್ತು ಫ್ರೂಟ್ ಜಾಮ್ಗಳನ್ನು ತಯಾರಿಸುತ್ತಿದ್ದು, ಅಮೆರಿಕ, ಆಸ್ಟ್ರೇಲಿಯಾ ಮತ್ತು ಫ್ರಾನ್ಸ್ ಸೇರಿದಂತೆ 26 ದೇಶಗಳಿಗೆ ರಫ್ತು ಮಾಡುತ್ತಿದೆ. ಪ್ರಖ್ಯಾತ ಎಎ+ ಬಿಆರ್ ಸಿಜಿಎಸ್ ಪ್ರಮಾಣಪತ್ರವನ್ನು ಪಡೆದುಕೊಂಡಿರುವುದು, ಇದು ಜಾಗತಿಕ ಗುಣಮಟ್ಟ ಮತ್ತು ಸುರಕ್ಷತಾ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿರುವುದನ್ನು ಉಲ್ಲೇಖಿಸುತ್ತದೆ.

ಪಿ.ಎಮ್.ಇ.ಜಿ.ಪಿ. ಉದ್ಯಮಿಗಳ ಈ ಯಶೋಗಾಥೆಗಳು ಉದ್ಯಮಶೀಲತೆಯನ್ನು ಉತ್ತೇಜಿಸುವಲ್ಲಿ,ಅತಿ ಸಣ್ಣ ಉದ್ಯಮಗಳ ವಿಸ್ತರಣೆಗೆ ಬೆಂಬಲ ನೀಡುವಲ್ಲಿ ಹಾಗೂ ದೇಶಾದ್ಯಂತ ಉದ್ಯೋಗ ಸೃಷ್ಟಿ ಮತ್ತು ಸಮಗ್ರ ಪ್ರಗತಿಗೆ ಪ್ರಮುಖ ಚಾಲಕಶಕ್ತಿಯಾಗಿ ಕಾರ್ಯ ನಿರ್ವಹಿಸುವಲ್ಲಿ ಯೋಜನೆಯ ಪರಿವರ್ತನಾಶೀಲ ಪ್ರಭಾವವನ್ನು ತೋರಿಸುತ್ತವೆ.
ಆಸಕ್ತರು ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಮತ್ತು ಅಧಿಕೃತ ಪಿ.ಎಮ್.ಇ.ಜಿ.ಪಿ. ಪೋರ್ಟಲ್: https://pmegp.msme.gov.in/ ಮೂಲಕ ಅರ್ಜಿ ಸಲ್ಲಿಸಬಹುದು.
*****
(ಪ್ರಕಟಣೆ ಐ.ಡಿ.: 2318468)
ವಿಸಿಟರ್ ಕೌಂಟರ್ : 15