ರೈಲ್ವೇ ಸಚಿವಾಲಯ
ದಕ್ಷಿಣ ಪೂರ್ವ ರೈಲ್ವೆಯ 6 ಕಿ.ಮೀ ಉದ್ದದ ಬಾರ್ಬಿಲ್-ಬೊಲಾನಿಖದಾನ್ ಮಾರ್ಗದ ದ್ವಿಪಥ (ಡಬ್ಲಿಂಗ್) ಯೋಜನೆಗೆ ಭಾರತೀಯ ರೈಲ್ವೆಯಿಂದ ₹122 ಕೋಟಿ ಅನುಮೋದನೆ
ಹೆಚ್ಚುತ್ತಿರುವ ಅದಿರು ಸಾಗಣೆಗೆ ಬೆಂಬಲ, ಖನಿಜ ಸಾಗಣೆ ಕಾರಿಡಾರ್ ಬಲವರ್ಧನೆ ಮತ್ತು ಭವಿಷ್ಯದ ಸಾಮರ್ಥ್ಯದ ಅಗತ್ಯಗಳನ್ನು ಪೂರೈಸಲು ದ್ವಿಪಥೀಕರಣ ಯೋಜನೆ
ಪ್ರಕಟಣಾ ದಿನಾಂಕ:
28 SEP 2026 5:32PM by PIB Bengaluru
ಭಾರತೀಯ ರೈಲ್ವೆಯು ದಕ್ಷಿಣ ಪೂರ್ವ ರೈಲ್ವೆಯ 6 ಕಿ.ಮೀ ಉದ್ದದ ಬಾರ್ಬಿಲ್-ಬೊಲಾನಿಖದಾನ್ ಮಾರ್ಗದಲ್ಲಿ ₹122 ಕೋಟಿ ರೂ. ವೆಚ್ಚದ ದ್ವಿಪಥ ಯೋಜನೆಗೆ ಅನುಮೋದನೆ ನೀಡಿದೆ. ಇದು ಪ್ರಮುಖ ಖನಿಜ ಸಾಗಣೆ ಕಾರಿಡಾರ್‌ನಲ್ಲಿ ಮೂಲಸೌಕರ್ಯವನ್ನು ಬಲಪಡಿಸುತ್ತದೆ.
ಹೆಚ್ಚುತ್ತಿರುವ ಸರಕು ಸಾಗಣೆಗೆ ಬೆಂಬಲ
ಯೋಜನೆ ಪೂರ್ಣಗೊಂಡ ನಂತರ, ಈ ಮಾರ್ಗದಲ್ಲಿ ವಾರ್ಷಿಕ ಹೆಚ್ಚುವರಿ 8.9 ಮಿಲಿಯನ್ ಟನ್ (MTPA) ಸರಕು ಸಾಗಣೆಗೆ ಅನುಕೂಲವಾಗಲಿದೆ. ದ್ವಿಪಥೀಕರಣವು ಸರಕು ಸಾಗಣೆ ರೈಲುಗಳ ವಿಳಂಬವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಬಾರ್ಬಿಲ್-ಬೊಲಾನಿಖದಾನ್ ವಿಭಾಗವನ್ನು ಭಾರತೀಯ ರೈಲ್ವೆಯ "ಇಂಧನ, ಖನಿಜ ಮತ್ತು ಸಿಮೆಂಟ್ ಕಾರಿಡಾರ್" ಅಡಿಯಲ್ಲಿ ಗುರುತಿಸಲಾಗಿದೆ. ಪ್ರಸ್ತುತ ಈ ವಿಭಾಗವು ಏಕ-ಮಾರ್ಗವನ್ನು (ಸಿಂಗಲ್ ಲೈನ್) ಹೊಂದಿದ್ದು, ದಿನಕ್ಕೆ ಸುಮಾರು 6 ಲೋಡ್ ರೇಕ್‌ಗಳ (ರೈಲು ಬೋಗಿಗಳ ಸಾಲು) ಮೂಲಕ ವಾರ್ಷಿಕ ಸುಮಾರು 9 ಮಿಲಿಯನ್ ಟನ್ (MTPA) ಕಬ್ಬಿಣದ ಅದಿರನ್ನು ಸಾಗಿಸುತ್ತಿದೆ. ಈ ಸಾಗಣೆಯು ಸಂಪೂರ್ಣವಾಗಿ ಉನ್ನತ ದರ್ಜೆಯ ಅದಿರು ಮತ್ತು ಪೆಲೆಟ್‌ಗಳಿಗೆ ಸಂಬಂಧಿಸಿದ್ದು, ಇವು SAIL (ಸೇಲ್) ನ ಬೊಲಾನಿ ಗಣಿಗಳು ಮತ್ತು ಖಾಸಗಿ ಸೈಡಿಂಗ್‌ಗಳಿಂದ (ರುಂಗ್ತಾ, ಖಟೌ ನರ್ಭೆರಾಮ್) ಪ್ರಮುಖ ಉಕ್ಕಿನ ಕಾರ್ಖಾನೆಗಳು ಮತ್ತು ಬಂದರುಗಳಿಗೆ ಸಾಗಿಸಲ್ಪಡುತ್ತವೆ.
ಭವಿಷ್ಯದ ಸರಕು ಸಾಗಣೆ ಅಗತ್ಯಗಳನ್ನು ಪೂರೈಸುವುದು
SAILನ ಗಣಿ ವಿಸ್ತರಣೆ ಮತ್ತು ಬಂದರು/ಕಾರ್ಖಾನೆಯ ಸಾಮರ್ಥ್ಯ ವೃದ್ಧಿಯ ಸಂಪೂರ್ಣ ಅನುಷ್ಠಾನಕ್ಕೆ ಮುಂಚಿತವಾಗಿಯೇ ಈ 6 ಕಿ.ಮೀ ಮಾರ್ಗವನ್ನು ದ್ವಿಪಥೀಕರಣಗೊಳಿಸುವುದರಿಂದ, ನಿಗದಿತ ಖನಿಜ ಕಾರಿಡಾರ್‌ನಲ್ಲಿ ಉಂಟಾಗಬಹುದಾದ ಸಾಮರ್ಥ್ಯದ ಕೊರತೆಯನ್ನು ತಡೆಯಲು ಸಹಾಯವಾಗುತ್ತದೆ.
ಅನುಮೋದಿತ ಕೆಲಸವು ಹೆಚ್ಚುತ್ತಿರುವ ಸರಕು ಸಾಗಣೆ ಅಗತ್ಯಗಳನ್ನು ಬೆಂಬಲಿಸುತ್ತದೆ, ಉಕ್ಕಿನ ಕಾರ್ಖಾನೆಗಳು ಮತ್ತು ಬಂದರುಗಳಿಗೆ ಕಬ್ಬಿಣದ ಅದಿರು ಸಾಗಣೆಗೆ ರೈಲು ಸಂಪರ್ಕವನ್ನು ಸುಧಾರಿಸುತ್ತದೆ ಮತ್ತು ಈ ಪ್ರದೇಶದಲ್ಲಿ ಗಣಿಗಾರಿಕೆ, ಕೈಗಾರಿಕಾ ಹಾಗೂ ಬಂದರು ಚಟುವಟಿಕೆಗಳು ವಿಸ್ತರಿಸುತ್ತಿದ್ದಂತೆ ರೈಲು ಸಾಗಣೆ ಸಾಮರ್ಥ್ಯವನ್ನು ಬಲಪಡಿಸುತ್ತದೆ. ಇದು 'ಇಂಧನ, ಖನಿಜ ಮತ್ತು ಸಿಮೆಂಟ್ ಕಾರಿಡಾರ್' ಅನ್ನು ಬಲಪಡಿಸುವುದಲ್ಲದೇ, ಈ ಪ್ರಮುಖ ಮಾರ್ಗದಲ್ಲಿ ಸರಕುಗಳ ಸುಗಮ ಸಾಗಣೆಗೆ ಸಹಕಾರಿಯಾಗಲಿದೆ.
******
(ಪ್ರಕಟಣೆ ಐ.ಡಿ.: 2316104)
ವಿಸಿಟರ್ ಕೌಂಟರ್ : 14