ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ
azadi ka amrit mahotsav

ನಮಸ್ತೆ (NAMASTE) ಯೋಜನೆಯು ನೈರ್ಮಲ್ಯ ಕಾರ್ಮಿಕರ ಸುರಕ್ಷತೆ, ಗೌರವ ಮತ್ತು ಜೀವನೋಪಾಯದ ಬೆಂಬಲವನ್ನು ಬಲಪಡಿಸುತ್ತದೆ


36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 90,186 ಒಳಚರಂಡಿ ಮತ್ತು ಸೆಪ್ಟಿಕ್ ಟ್ಯಾಂಕ್ ಕಾರ್ಮಿಕರ ಪರಿಶೀಲನೆ 

34 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 2,51,756 ತ್ಯಾಜ್ಯ ಆಯುವವರ  ಮಾಹಿತಿ ಸಂಗ್ರಹ

ಪ್ರಕಟಣಾ ದಿನಾಂಕ: 22 SEP 2026 1:39PM by PIB Bengaluru

ಯಾಂತ್ರಿಕೃತ ನೈರ್ಮಲ್ಯ ಪರಿಸರ ವ್ಯವಸ್ಥೆಯ ರಾಷ್ಟ್ರೀಯ ಕ್ರಿಯಾ 'ನಮಸ್ತೆ' (NAMASTE) ಯೋಜನೆಯು, ನೈರ್ಮಲ್ಯ ಮೂಲಸೌಕರ್ಯಗಳ ನಿರ್ವಹಣೆಯಲ್ಲಿ ನೈರ್ಮಲ್ಯ ಕಾರ್ಮಿಕರ ಕೊಡುಗೆಯನ್ನು ಗುರುತಿಸುವ ಮೂಲಕ ಅವರ ಸುರಕ್ಷತೆ ಮತ್ತು ಗೌರವವನ್ನು ಖಚಿತಪಡಿಸುವ ವಾತಾವರಣವನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ.

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಕಾರ್ಯದರ್ಶಿ ಶ್ರೀ ಸುಧಾಂಶು ಪಂತ್ ಮಾತನಾಡಿ, ನಮಸ್ತೆ ಯೋಜನೆಯಡಿಯಲ್ಲಿ ಸೆಪ್ಟೆಂಬರ್ 22 ರ ವೇಳೆಗೆ ಒಳಚರಂಡಿ ಮತ್ತು ಸೆಪ್ಟಿಕ್ ಟ್ಯಾಂಕ್ ಕಾರ್ಮಿಕರ ಘಟಕವು ಎಲ್ಲಾ 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡಿದ್ದು, 90,186 ಕಾರ್ಮಿಕರನ್ನು ಪರಿಶೀಲಿಸಲಾಗಿದೆ. ಪರಿಶೀಲಿಸಲ್ಪಟ್ಟ ಕಾರ್ಮಿಕರಲ್ಲಿ 86,468 ಪುರುಷರು, 3,713 ಮಹಿಳೆಯರು ಮತ್ತು ಐವರು ತೃತೀಯಲಿಂಗಿಗಳು ಸೇರಿದ್ದಾರೆ.

ಫಲಾನುಭವಿಗಳಿಗೆ 87,008 ಕ್ಕೂ ಹೆಚ್ಚು ವೈಯಕ್ತಿಕ ರಕ್ಷಣಾ ಉಪಕರಣ (PPE) ಕಿಟ್‌ಗಳು ಮತ್ತು 753 ತುರ್ತು ಸ್ಪಂದನಾ ನೈರ್ಮಲ್ಯ ಘಟಕದ (ERSU) ಸುರಕ್ಷತಾ ಉಪಕರಣಗಳ ಸೆಟ್‌ಗಳನ್ನು ವಿತರಿಸಲಾಗಿದೆ ಎಂದು ಶ್ರೀ ಪಂತ್ ತಿಳಿಸಿದರು. ಸಚಿವಾಲಯವು ಒಳಚರಂಡಿ ಮತ್ತು ಸೆಪ್ಟಿಕ್ ಟ್ಯಾಂಕ್ ಕಾರ್ಮಿಕರಿಗಾಗಿ 27,034 ಆರೋಗ್ಯ ವಿಮೆ eKYC ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದೆ, 5,449 ವೃತ್ತಿಪರ ತರಬೇತಿಗಳನ್ನು ನೀಡಿದೆ ಮತ್ತು 1,841 ಕಾರ್ಯಾಗಾರಗಳನ್ನು ನಡೆಸಿದೆ ಎಂದು ಅವರು ಹೇಳಿದರು.

ಸ್ವಚ್ಛತಾ ಉದ್ಯಮಿ ಯೋಜನೆಯ ಮೂಲಕ ಯಾಂತ್ರೀಕರಣಕ್ಕಾಗಿ ಬಂಡವಾಳ ಸಬ್ಸಿಡಿ ನೆರವಿನಡಿಯಲ್ಲಿ, 983 ಫಲಾನುಭವಿಗಳಿಗೆ 34.16 ಕೋಟಿ ರೂ.ಗಳ ಬೆಂಬಲ ನೀಡಲಾಗಿದೆ ಎಂದು ಹೇಳಿದರು. ಇದುವರೆಗೆ 87,037 ಪಿಪಿಇ ಕಿಟ್‌ಗಳಿಗೆ ಕೋರಿಕೆ ಸಲ್ಲಿಸಲಾಗಿದ್ದು, 87,008 ಕಿಟ್‌ಗಳನ್ನು ವಿತರಿಸಲಾಗಿದೆ ಎಂದು ಅವರು ಹೇಳಿದರು.

ತ್ಯಾಜ್ಯ ಆಯುವವರ ಘಟಕದಡಿಯಲ್ಲಿ 34 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 2,51,756 ತ್ಯಾಜ್ಯ ಆಯುವವರ ವಿವರಗಳನ್ನು ದಾಖಲಿಸಲಾಗಿದೆ. ಇದರಲ್ಲಿ 1,35,233 ಪುರುಷರು, 1,16,498 ಮಹಿಳೆಯರು ಮತ್ತು 25 ತೃತೀಯಲಿಂಗಿಗಳು ಸೇರಿದ್ದಾರೆ ಎಂದು ಶ್ರೀ ಪಂತ್ ತಿಳಿಸಿದರು.

ಸಚಿವಾಲಯವು 7,526 ಆರೋಗ್ಯ ವಿಮೆ eKYC ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದೆ, ಜೊತೆಗೆ 17 ತರಬೇತಿ ಸಂಸ್ಥೆಗಳು ಮತ್ತು 33 ಸಂಪನ್ಮೂಲ ಸಂಸ್ಥೆಗಳು ಈ ಯೋಜನೆಯ ಅನುಷ್ಠಾನಕ್ಕೆ ಬೆಂಬಲ ನೀಡುತ್ತಿವೆ ಎಂದು ಅವರು ಹೇಳಿದರು.

ಮಾಹಿತಿ ಸಂಗ್ರಹಣೆ, ವೃತ್ತಿಪರ ಸುರಕ್ಷತೆ, ಆರೋಗ್ಯ ವಿಮೆ ರಕ್ಷಣೆ, ಸಾಮರ್ಥ್ಯ ವೃದ್ಧಿ ಮತ್ತು ಯಾಂತ್ರೀಕರಣದ ಮೇಲಿನ ಜಂಟಿ ಗಮನದ ಮೂಲಕ ನಮಸ್ತೆ ಯೋಜನೆಯು ಸುರಕ್ಷಿತ ಮತ್ತು ಹೆಚ್ಚು ಗೌರವಾನ್ವಿತ ನೈರ್ಮಲ್ಯ ಪರಿಸರ ವ್ಯವಸ್ಥೆಯನ್ನು ಬಲಪಡಿಸುತ್ತಿದೆ; ಜೊತೆಗೆ ನೈರ್ಮಲ್ಯ ಕಾರ್ಮಿಕರು ಮತ್ತು ತ್ಯಾಜ್ಯ ಆಯುವವರಿಗೆ ಜೀವನೋಪಾಯ ಮತ್ತು ಸಾಮಾಜಿಕ ಭದ್ರತೆಯ ಬೆಂಬಲವನ್ನು ವಿಸ್ತರಿಸುತ್ತಿದೆ ಎಂದು ಅವರು ವಿವರಿಸಿದರು.

ರಾಷ್ಟ್ರೀಯ ಸಫಾಯಿ ಕರ್ಮಚಾರಿಗಳ ಹಣಕಾಸು ಮತ್ತು ಅಭಿವೃದ್ಧಿ ನಿಗಮ (NSKFDC) ಜಾರಿಗೆ ತರುತ್ತಿರುವ ವಿವಿಧ ಕಾರ್ಯಕ್ರಮಗಳ ಮೂಲಕ ಈ ಯೋಜನೆಯು ಸುಸ್ಥಿರ ಜೀವನೋಪಾಯ, ಸಾಮರ್ಥ್ಯ ವೃದ್ಧಿ, ಸುರಕ್ಷತಾ ಉಪಕರಣಗಳ ಲಭ್ಯತೆ ಮತ್ತು ಯಾಂತ್ರೀಕರಣವನ್ನು ಉತ್ತೇಜಿಸುತ್ತದೆ ಎಂದು ಶ್ರೀ ಪಂತ್ ಉಲ್ಲೇಖಿಸಿದರು.


(ಪ್ರಕಟಣೆ ಐ.ಡಿ.: 2313487) ವಿಸಿಟರ್ ಕೌಂಟರ್ : 28
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Bengali , Tamil