ಅಂಕಿಅಂಶಗಳು ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ
ʻʻರಾಷ್ಟ್ರೀಯ ಲೆಕ್ಕಪತ್ರ ಅಂಕಿಅಂಶದ ಸಂಕಲನಕ್ಕಾಗಿ ಆಕರಗಳು ಮತ್ತು ವಿಧಾನಗಳು”
ಪ್ರಕಟಣಾ ದಿನಾಂಕ:
21 SEP 2026 4:27PM by PIB Bengaluru
ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯವು 2022-23 ಅನ್ನು ಆಧಾರ ವರ್ಷವನ್ನಾಗಿ ಹೊಂದಿರುವ ʻರಾಷ್ಟ್ರೀಯ ಲೆಕ್ಕಪತ್ರ ಅಂಕಿಅಂಶಗಳʼ ಹೊಸ ಸರಣಿಯನ್ನು 27 ಫೆಬ್ರವರಿ 2026 ರಂದು ಬಿಡುಗಡೆ ಮಾಡಿತು. ನಂತರ, ಜೂನ್ 2026ರಲ್ಲಿ ಬಿಡುಗಡೆಯಾದ ಹೊಸ ಸರಣಿಯ ಉತ್ಪಾದಕರ ಬೆಲೆ ಸೂಚ್ಯಂಕ (ಪಿಪಿಐ), ಕೈಗಾರಿಕಾ ಉತ್ಪಾದನಾ ಸೂಚ್ಯಂಕ (ಐಐಪಿ) ಇತ್ಯಾದಿಗಳ ಬದಲಾವಣೆಗಳನ್ನು ಸೇರ್ಪಡೆಗೊಳಿಸಲು ಆಗಸ್ಟ್ 31 ರಂದು ಇದನ್ನು ನವೀಕರಿಸಲಾಗಿತ್ತು. ಈ ಹೊಸ ಸರಣಿಯು 2011-12ರ ಆಧಾರ ವರ್ಷದ ಹಿಂದಿನ ಸರಣಿಯನ್ನು ಬದಲಾಯಿಸುತ್ತದೆ ಮತ್ತು ಭಾರತದ ರಾಷ್ಟ್ರೀಯ ಲೆಕ್ಕಪತ್ರ ಸಂಖ್ಯಾಶಾಸ್ತ್ರದ ಎಂಟನೇ ಆಧಾರ ವರ್ಷದ ಪರಿಷ್ಕರಣೆಯಾಗಿದೆ.
2. ಈ ಪತ್ರಿಕಾ ಪ್ರಕಟಣೆಯ ಮೂಲಕ, ಸಚಿವಾಲಯವು "ರಾಷ್ಟ್ರೀಯ ಲೆಕ್ಕಪತ್ರ ಅಂಕಿಅಂಶಗಳ ಸಂಕಲನಕ್ಕಾಗಿ ಆಕರಗಳು ಮತ್ತು ವಿಧಾನಗಳು" ಎಂಬ ಪ್ರಕಟಣೆಯನ್ನು ಬಿಡುಗಡೆ ಮಾಡುತ್ತಿದೆ. ಈ ಪ್ರಕಟಣೆಯು ಹೊಸ ಸರಣಿಯಲ್ಲಿ ಸಮಗ್ರವಾಗಿ ಅಳವಡಿಸಿಕೊಂಡಿರುವ ಪರಿಕಲ್ಪನೆಗಳು, ವ್ಯಾಖ್ಯಾನಗಳು, ದತ್ತಾಂಶ ಆಕರಗಳು , ಕಾರ್ಯವಿಧಾನಗಳು ಮತ್ತು ಸಂಕಲನ ಪದ್ಧತಿಗಳ ವಿವರವಾದ ಮಾಹಿತಿಯನ್ನು ಒದಗಿಸುತ್ತದೆ. ಹೊಸ ಸರಣಿಯ ಬಿಡುಗಡೆಯಾದ ಕೇವಲ ಏಳು ತಿಂಗಳ ದಾಖಲೆ ಸಮಯದಲ್ಲಿ ಇದನ್ನು ಹೊರತರಲಾಗುತ್ತಿದೆ.
3. ಹೊಸ ಸರಣಿಗೆ ಕಾರಣವಾದ ಪ್ರಕ್ರಿಯೆಯ ಭಾಗವಾಗಿ, ಸಚಿವಾಲಯವು ಜೂನ್ 27, 2024 ರಂದು ಆಧಾರ-ವರ್ಷ ಪರಿಷ್ಕರಣೆ ಕಾರ್ಯದ ನಿರ್ದಿಷ್ಟ ಅಂಶಗಳ ಕುರಿತು ಚರ್ಚಿಸಲು 'ಇನ್ಸ್ಟಿಟ್ಯೂಟ್ ಆಫ್ ಎಕನಾಮಿಕ್ ಗ್ರೋತ್' (ಐಇಜಿ) ನ ಸಂದರ್ಶಕ ಅಧ್ಯಾಪಕರಾದ ಬೋಧಕರಾದ ಪ್ರೊಫೆಸರ್ ಬಿ.ಎನ್. ಗೋಲ್ಡಾರ್ ಅವರ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಲೆಕ್ಕಪತ್ರ ಅಂಕಿಅಂಶಗಳ ಸಲಹಾ ಸಮಿತಿಯನ್ನು (ಎಸಿಎನ್ ಎ ಎಸ್) ರಚಿಸಿತು. ನಿರ್ದಿಷ್ಟ ಕ್ಷೇತ್ರಗಳಲ್ಲಿ ಗಮನಹರಿಸಿದ ಚರ್ಚೆಗಾಗಿ ಎಸಿಎನ್ ಎ ಎಸ್ ನಾಲ್ಕು ಉಪ-ಸಮಿತಿಗಳನ್ನು ರಚಿಸಿತು:
(i) ಶ್ರೀ ಮನೀಶ್ ಕುಮಾರ್ ಸಿನ್ಹಾ (ಸಿಇಒ, ಜಿಎಸ್ ಟಿಎನ್) ಅವರ ಅಧ್ಯಕ್ಷತೆಯಲ್ಲಿ 'ಹೊಸ ದತ್ತಾಂಶ ಆಕರಗಳು, ದರಗಳು ಮತ್ತು ಅನುಪಾತಗಳ ಸೇರ್ಪಡೆಗಾಗಿ ಉಪ-ಸಮಿತಿ'; (ii) ಡಾ. ಜಿ.ಸಿ. ಮನ್ನಾ (ಪ್ರೊಫೆಸರ್, ಇನ್ಸ್ಟಿಟ್ಯೂಟ್ ಫಾರ್ ಹ್ಯೂಮನ್ ಡೆವಲಪ್ಮೆಂಟ್) ಅವರ ಅಧ್ಯಕ್ಷತೆಯಲ್ಲಿ 'ಕಾರ್ಯವಿಧಾನದ ಸುಧಾರಣೆಗಾಗಿ ಉಪ-ಸಮಿತಿ'; (iii) ಪ್ರೊ. ಬಿ.ಎನ್. ಗೋಲ್ಡಾರ್ (ಸಂದರ್ಶಕ ಬೋಧಕರು, ಐಇಜಿ) ಅವರ ಅಧ್ಯಕ್ಷತೆಯಲ್ಲಿ 'ಸ್ಥಿರ ಬೆಲೆ ಅಂದಾಜುಗಳ ಉಪ-ಸಮಿತಿ'; ಮತ್ತು (iv) ಪ್ರೊ. ಆರ್ .ಎಚ್. ಧೋಲಕಿಯಾ (ನಿವೃತ್ತ ಪ್ರೊಫೆಸರ್, ಐಐಎಂ ಅಹಮದಾಬಾದ್) ಅವರ ಅಧ್ಯಕ್ಷತೆಯಲ್ಲಿ 'ಪ್ರಾದೇಶಿಕ ಲೆಕ್ಕಪತ್ರಗಳ ಉಪ-ಸಮಿತಿ'. ಎಸಿಎನ್ ಎ ಎಸ್ ಮತ್ತು ಅದರ ಉಪ-ಸಮಿತಿಗಳು ಅರ್ಥಶಾಸ್ತ್ರ, ರಾಷ್ಟ್ರೀಯ ಲೆಕ್ಕಪತ್ರ ನಿರ್ವಹಣೆ, ಅಂಕಿಅಂಶಗಳು, ಸಾರ್ವಜನಿಕ ನೀತಿ ಮತ್ತು ಸಂಬಂಧಿತ ಕ್ಷೇತ್ರಗಳು ಸೇರಿದಂತೆ ವಿವಿಧ ವಿಷಯಗಳ ಹೆಸರಾಂತ ಮತ್ತು ವೈವಿಧ್ಯಮಯ ವಿಷಯಗಳ ಶೈಕ್ಷಣಿಕ ತಜ್ಞರನ್ನು ಒಳಗೊಂಡಿದ್ದವು
4. ತನ್ನ ಚರ್ಚೆಗಳ ಭಾಗವಾಗಿ, ಎಸಿಎನ್ ಎ ಎಸ್ ಒಂಬತ್ತು ಸುತ್ತಿನ ಸಭೆಗಳನ್ನು ನಡೆಸಿತು, ಜೊತೆಗೆ ಶಿಕ್ಷಣ ತಜ್ಞರು, ವಿಷಯ ತಜ್ಞರು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಇಲಾಖೆಗಳು, ನೀತಿ ಆಯೋಗ್ ಮತ್ತು ದೇಶಾದ್ಯಂತದ ವಿವಿಧ ಚಿಂತಕರ ಚಾವಡಿಗಳನ್ನು ಒಳಗೊಂಡ ಕಾರ್ಯಾಗಾರಗಳು ಮತ್ತು ವಿಚಾರ ಸಂಕಿರಣಗಳನ್ನು ಆಯೋಜಿಸಿತು. ಇದಲ್ಲದೆ, ಎಸಿಎನ್ ಎ ಎಸ್ ಅಡಿಯಲ್ಲಿ ರಚಿಸಲಾದ ಉಪ-ಸಮಿತಿಗಳು ನಿರ್ದಿಷ್ಟ ಕಾರ್ಯವಿಧಾನ ಮತ್ತು ದತ್ತಾಂಶ ಸಂಬಂಧಿತ ವಿಷಯಗಳ ಕುರಿತು ಚರ್ಚಿಸಲು 35 ಕ್ಕೂ ಹೆಚ್ಚು ಸುತ್ತಿನ ಸಭೆಗಳನ್ನು ನಡೆಸಿದವು. ಈ ಸಮಿತಿಯು ರಾಷ್ಟ್ರೀಯ ಲೆಕ್ಕಪತ್ರ ಅಂದಾಜುಗಳ ಕ್ರೋಡೀಕರಣವನ್ನು ಬಲಪಡಿಸಲು ಹೊಸ ಮತ್ತು ಸುಧಾರಿತ ದತ್ತಾಂಶ ಆಕರಗಳ ಸೇರ್ಪಡೆ, ಆರ್ಥಿಕ ವಿಶ್ಲೇಷಣೆ ಮತ್ತು ನೀತಿ ರೂಪಿಸಲು ರಾಷ್ಟ್ರೀಯ ಲೆಕ್ಕಪತ್ರ ಅಂಕಿಅಂಶಗಳ ಕ್ರೋಡೀಕರಣ ಮತ್ತು ಸಲ್ಲಿಕೆಯ ಕಾರ್ಯವಿಧಾನ, ಹಾಗೂ ವಿಶ್ವಸಂಸ್ಥೆಯು ನಿಗದಿಪಡಿಸಿದ ಇತ್ತೀಚಿನ ಅಂತರರಾಷ್ಟ್ರೀಯ ಮಾನದಂಡಗಳ ಅಳವಡಿಕೆ ಮತ್ತು ಅನುಷ್ಠಾನದ ಕುರಿತು ಸಚಿವಾಲಯಕ್ಕೆ ಸಲಹೆ ನೀಡಿದೆ. ಇದಲ್ಲದೆ, ವ್ಯಾಪಕ ಸಮಾಲೋಚನೆಗಾಗಿ ಉತ್ಪಾದನಾ ವಿಧಾನ, ವೆಚ್ಚದ ವಿಧಾನ, ಮತ್ತು ತ್ರೈಮಾಸಿಕ ಜಿಡಿಪಿ ಮತ್ತು ಉಪ-ರಾಷ್ಟ್ರೀಯ ಲೆಕ್ಕಪತ್ರಗಳ ವಿಷಯಗಳ ಅಡಿಯಲ್ಲಿ ಪ್ರಸ್ತಾವಿತ ಕಾರ್ಯವಿಧಾನದ ಬದಲಾವಣೆಗಳನ್ನು ವಿವರಿಸುವ ಮೂರು ಚರ್ಚಾ ಪತ್ರಿಕೆಗಳನ್ನು ಬಿಡುಗಡೆ ಮಾಡಲಾಗಿದೆ.
5. ಪಾಲುದಾರರ ತೊಡಗಿಸಿಕೊಳ್ಳುವಿಕೆಯನ್ನು ಸುಗಮಗೊಳಿಸಲು ಮತ್ತು ಮೌಲ್ಯಯುತ ಪ್ರತಿಕ್ರಿಯೆಯನ್ನು ಪಡೆಯಲು, ಮುಂಬೈ (26 ನವೆಂಬರ್ 2025), ನವದೆಹಲಿ (23 ಡಿಸೆಂಬರ್ 2025) ಮತ್ತು ಚೆನ್ನೈ (30 ಜನವರಿ 2026) ನಗರಗಳಲ್ಲಿ ಮೂರು ದತ್ತಾಂಶ ಬಳಕೆದಾರರ ಸಮ್ಮೇಳನಗಳನ್ನು ಆಯೋಜಿಸಲಾಯಿತು. ಇವುಗಳಲ್ಲಿ ವಿವಿಧ ಕ್ಷೇತ್ರಗಳ ತಜ್ಞರು, ಶಿಕ್ಷಣ ತಜ್ಞರು, ನೀತಿ ನಿರೂಪಕರು ಮತ್ತು ದತ್ತಾಂಶ ಬಳಕೆದಾರರು ಭಾಗವಹಿಸಿದ್ದರು. ಜಿಡಿಪಿಯ ಆಧಾರ ವರ್ಷದ ಪರಿಷ್ಕರಣೆಯ ವಿವಿಧ ಮೌಲ್ಯಗಳ ಕುರಿತು ಸಚಿವಾಲಯವು ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಯೊಂದಿಗೆ ಸಹ ವಿವರವಾದ ಸಮಾಲೋಚನೆ ನಡೆಸಿತು. ಸಂಬಂಧಪಟ್ಟವರೊಂದಿಗಿನ ವ್ಯಾಪಕ ಚರ್ಚೆಗಳ ಆಧಾರದ ಮೇಲೆ, ಮೊದಲ ಮೂರು ಉಪ-ಸಮಿತಿಗಳ ಶಿಫಾರಸುಗಳ ವರದಿಗಳು ಮತ್ತು ನಾಲ್ಕನೇ ಉಪ-ಸಮಿತಿಯ ಶಿಫಾರಸುಗಳ ಆಧಾರದ ಮೇಲಿನ ಜಿ ಎಸ್ ಡಿ ಪಿ ಯ ಮಾರ್ಗಸೂಚಿಗಳು ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ ಜಾಲತಾಣದಲ್ಲಿ ಲಭ್ಯವಿದೆ. ಉಪ-ಸಮಿತಿಗಳ ವರದಿಗಳಲ್ಲಿ ಶಿಫಾರಸು ಮಾಡಲಾದ ರಾಷ್ಟ್ರೀಯ ಲೆಕ್ಕಪತ್ರ ಅಂಕಿಅಂಶಗಳ ಹೊಸ ಸರಣಿಯ ಕ್ರೋಡೀಕರಣದ ಕಾರ್ಯವಿಧಾನಗಳನ್ನು ಈ “ರಾಷ್ಟ್ರೀಯ ಲೆಕ್ಕಪತ್ರ ಸಂಖ್ಯಾಶಾಸ್ತ್ರದ ಸಂಕಲನಕ್ಕೆ ಆಕರಗಳು ಮತ್ತು ವಿಧಾನಗಳು” ಪ್ರಕಟಣೆಯಲ್ಲಿ ಸೇರಿಸಲಾಗಿದೆ.
6. ಕಾರ್ಪೊರೇಟ್, ಹಣಕಾಸು, ಸರ್ಕಾರಿ ಮತ್ತು ಗೃಹಬಳಕೆ ವಲಯಗಳ ಅಂದಾಜು ಕಾರ್ಯವಿಧಾನಗಳ ಆಧುನಿಕೀಕರಣವು ಈ ಪ್ರಕಟಣೆಯ ಪ್ರಮುಖ ವಿಷಯವಾಗಿದೆ. ಹಣಕಾಸೇತರ ಖಾಸಗಿ ಕಾರ್ಪೊರೇಟ್ (ಎನ್ ಎಫ್ ಪಿ ಸಿ) ವಲಯಕ್ಕೆ ಸಂಬಂಧಿಸಿದಂತೆ, ಕೈಗಾರಿಕಾ ವರ್ಗೀಕರಣ, ಆರ್ಥಿಕ ಚಟುವಟಿಕೆಯ ಮಾಪನ ಮತ್ತು ವಿವಿಧ ವಾಣಿಜ್ಯ ವಿಭಾಗಗಳಲ್ಲಿ ಉತ್ಪಾದನೆಯ ಹಂಚಿಕೆಯನ್ನು ಸುಧಾರಿಸಲು ಕಾರ್ಪೊರೇಟ್ ಸಲ್ಲಿಕೆಗಳು, ಎಲ್ ಎಲ್ ಪಿ ದಾಖಲೆಗಳು ಮತ್ತು ಹೆಚ್ಚಿದ ಕಂಪನಿ ಮಟ್ಟದ ಮಾಹಿತಿಯ ವಿವರವಾದ ಬಳಕೆಯನ್ನು ವರದಿ ಎತ್ತಿ ತೋರಿಸುತ್ತದೆ. ಹಣಕಾಸು ವಲಯದ ದತ್ತಾಂಶ ವ್ಯಾಪ್ತಿಯನ್ನು ಗಣನೀಯವಾಗಿ ವಿಸ್ತರಿಸಲಾಗಿದೆ. ಸಾಮಾನ್ಯ ಸರ್ಕಾರಿ ವಲಯಕ್ಕೆ ಸಂಬಂಧಿಸಿದಂತೆ, ಈ ಬದಲಾವಣೆಗಳು ಸಾಂಸ್ಥಿಕ ವ್ಯಾಪ್ತಿ, ಪಿಂಚಣಿ ಪಾವತಿಗಳ ಪ್ರಕ್ರಿಯೆಯ ಶುದ್ಧೀಕರಣ ಮತ್ತು ಉದ್ಯೋಗಿಗಳಿಗೆ ಒದಗಿಸಲಾದ ವಸತಿ ಸೌಲಭ್ಯಗಳ ಮೌಲ್ಯದ ಸೇರ್ಪಡೆಗೆ ವಿಸ್ತರಿಸಲ್ಪಟ್ಟಿವೆ. ಗೃಹಬಳಕೆ ವಲಯದಲ್ಲಿ, ಹಲವಾರು ಪರ್ಯಾಯ ಕಾರ್ಯವಿಧಾನಗಳನ್ನು ಮೌಲ್ಯಮಾಪನ ಮಾಡಿದ ನಂತರ, ಸಚಿವಾಲಯದ ಎರಡು ಸಮೀಕ್ಷೆಗಳಾದ 'ಅಸಂಘಟಿತ ವಲಯದ ಉದ್ಯಮಗಳ ವಾರ್ಷಿಕ ಸಮೀಕ್ಷೆ' (ಎಎಸ್ ಯುಎಸ್ ಇ) ಮತ್ತು 'ಆವರ್ತಕ ಕಾರ್ಮಿಕ ಬಲ ಸಮೀಕ್ಷೆ' (ಪಿ ಎಲ್ ಎಫ್ ಎಸ್) ಯಿಂದ ನೇರ ಅಂದಾಜನ್ನು ಮಾಡುವ ವಿಧಾನವನ್ನು ಅಳವಡಿಸಿಕೊಳ್ಳಲಾಗಿದೆ.
7. ಈ ವರದಿಯು ವೆಚ್ಚ-ಆಧಾರಿತ ಅಂದಾಜುಗಳು ಮತ್ತು ತ್ರೈಮಾಸಿಕ ಜಿಡಿಪಿ ಕ್ರೋಡೀಕರಣದಲ್ಲಿ ಗಮನಾರ್ಹ ಸುಧಾರಣೆಗಳನ್ನು ಒಳಗೊಂಡಿದೆ. ʻಖಾಸಗಿ ಅಂತಿಮ ಬಳಕೆ ವೆಚ್ಚವುʼ (ಪಿ ಎಫ್ ಸಿ ಇ) ವಿಶ್ವಸಂಸ್ಥೆಯ 'ಉದ್ದೇಶಕ್ಕೆ ಅನುಗುಣವಾಗಿ ವೈಯಕ್ತಿಕ ಬಳಕೆಯ ವರ್ಗೀಕರಣ' (ಸಿಒಐಸಿಒಪಿ) 2018 ವರ್ಗೀಕರಣ ಚೌಕಟ್ಟನ್ನು ಅಳವಡಿಸಿಕೊಂಡಿದೆ. ಇದಕ್ಕೆ ಇನ್ನಷ್ಟು ವಿವರವಾದ ಬಳಕೆಯ ದತ್ತಾಂಶ ಮತ್ತು ಆಡಳಿತಾತ್ಮಕ ಆಕರಗಳ ಬೆಂಬಲವಿದೆ. ನಿರ್ಮಾಣ, ಕೃಷಿ, ಪಶುಸಂಗೋಪನೆ, ಅರಣ್ಯ ಮತ್ತು ಸೇವೆಗಳಂತಹ ಉದ್ಯಮಗಳ ಕ್ರೋಡೀಕರಣ ವಿಧಾನಗಳನ್ನು ಸಹ ಇತ್ತೀಚಿನ ಆರ್ಥಿಕ ವಾಸ್ತವತೆಗಳು ಮತ್ತು ಸುಧಾರಿತ ದತ್ತಾಂಶ ಲಭ್ಯತೆಯನ್ನು ಪ್ರತಿಬಿಂಬಿಸುವಂತೆ ಆರ್ಥಿಕ ಚಟುವಟಿಕೆಯ ಅಂದಾಜಿನಲ್ಲಿ ಹೆಚ್ಚಿನ ಸುಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಪರಿಷ್ಕರಿಸಲಾಗಿದೆ. ತ್ರೈಮಾಸಿಕ ರಾಷ್ಟ್ರೀಯ ಲೆಕ್ಕಪತ್ರಗಳಿಗಾಗಿ, ಅಸ್ತಿತ್ವದಲ್ಲಿರುವ ಬೆಂಚ್ಮಾರ್ಕಿಂಗ್ (Benchmarking) ವಿಧಾನದ ಬದಲಿಗೆ 'ಪ್ರಪೋರ್ಷನಲ್ ಡೆಂಟನ್' (Proportional Denton) ವಿಧಾನದ ಬಳಕೆ, ಸರಕು ಮತ್ತು ಸೇವಾ ತೆರಿಗೆ (ಜಿ ಎಸ್ ಟಿ ಮತ್ತು ಇತರ ಆಡಳಿತಾತ್ಮಕ ದತ್ತಾಂಶಗಳ ಹೆಚ್ಚಿನ ಬಳಕೆಯನ್ನು ವರದಿ ಮುಖ್ಯವಾಗಿ ಹೇಳುತ್ತದೆ. ಒಟ್ಟಾರೆಯಾಗಿ, ಈ ವರದಿಯು ಭಾರತೀಯ ಆರ್ಥಿಕತೆಯ ವಿಕಸನಗೊಳ್ಳುತ್ತಿರುವ ಸ್ವರೂಪವನ್ನು ಉತ್ತಮವಾಗಿ ಸೆರೆಹಿಡಿಯುವ ಹೆಚ್ಚು ದೃಢವಾದ, ಪಾರದರ್ಶಕ ಮತ್ತು ದತ್ತಾಂಶ-ಚಾಲಿತ ರಾಷ್ಟ್ರೀಯ ಲೆಕ್ಕಪತ್ರ ಚೌಕಟ್ಟಿಗೆ ಕಾರ್ಯವಿಧಾನದ ಅಡಿಪಾಯವನ್ನು ಹಾಕುತ್ತದೆ. ಈ ವರದಿಯು 'ಪೂರೈಕೆ ಬಳಕೆ ಕೋಷ್ಟಕಗಳ' (ಎಸ್ ಯು ಟಿ) ಸಂಕಲನದ ಕಾರ್ಯವಿಧಾನ ಮತ್ತು ಪ್ರಾದೇಶಿಕ ಲೆಕ್ಕಪತ್ರಗಳ ಮಾರ್ಗಸೂಚಿಗಳನ್ನು ಸಹ ಒಳಗೊಂಡಿದೆ.
8. ಈ ಪ್ರಕಟಣೆಯು, ಇತರ ವಿಷಯಗಳ ಜೊತೆಗೆ, ವರದಿಗಳಲ್ಲಿ ಮಾಡಲಾದ ಶಿಫಾರಸುಗಳನ್ನು (ಈಗಾಗಲೇ ಸಾರ್ವಜನಿಕವಾಗಿ ಲಭ್ಯವಿದೆ) ಒಂದೆಡೆ ತರುತ್ತದೆ ಮತ್ತು ರಾಷ್ಟ್ರೀಯ ಲೆಕ್ಕಪತ್ರ ಅಂಕಿಅಂಶದ ಹೊಸ ಸರಣಿಯಲ್ಲಿ ಪ್ರಮುಖ ಸ್ಥೂಲ ಆರ್ಥಿಕ ಒಟ್ಟು ಮೊತ್ತವನ್ನು ಕ್ರೋಡೀಕರಿಸುವಲ್ಲಿ ಅನುಸರಿಸಲಾದ ಸಾಂಖ್ಯಿಕ ಚೌಕಟ್ಟು ಮತ್ತು ಪ್ರಕ್ರಿಯೆಗಳನ್ನು ಕ್ರೋಡೀಕೃತ ಮತ್ತು ಸಮಗ್ರ ರೀತಿಯಲ್ಲಿ ಪ್ರಸ್ತುತಪಡಿಸುತ್ತದೆ. ಇವುಗಳಲ್ಲಿ ಒಟ್ಟು ದೇಶೀಯ ಉತ್ಪಾದನೆ (ಜಿಡಿಪಿ), ರಾಷ್ಟ್ರೀಯ ಆದಾಯ, ಖಾಸಗಿ ಅಂತಿಮ ಬಳಕೆ ವೆಚ್ಚ (ಪಿಎಫ್ ಸಿ ಇ), ಒಟ್ಟು ಸ್ಥಿರ ಬಂಡವಾಳ ರಚನೆ (ಜಿಎಫ್ ಸಿ ಎಫ್) ಮತ್ತು ಉಳಿತಾಯ ಸೇರಿವೆ. ಪ್ರತಿಯೊಂದು ಅಧ್ಯಾಯದ ಕೊನೆಯಲ್ಲಿ, ತ್ವರಿತ ಮಾಹಿತಿಗಾಗಿ ಮತ್ತು ಸುಲಭ ಉಲ್ಲೇಖಕ್ಕಾಗಿ 2011-12 ಸರಣಿ ಮತ್ತು 2022-23 ಸರಣಿಯ ಪ್ರಕಾರ ಪ್ರಸ್ತುತ ಬೆಲೆಗಳಲ್ಲಿ 2022-23 ರ ವರ್ಷದ 'ಒಟ್ಟು ಮೌಲ್ಯ ವರ್ಧಿತ' (ಜಿವಿ ಎ) ಅಂದಾಜುಗಳ ಸಾರಾಂಶವನ್ನು ಸೇರಿಸಲಾಗಿದೆ. ಈ ದತ್ತಾಂಶವು ಈಗಾಗಲೇ ಸಾರ್ವಜನಿಕವಾಗಿ ಲಭ್ಯವಿದ್ದು, ಯಾವುದೇ ಹೊಸ ದತ್ತಾಂಶವನ್ನು ಸೇರಿಸಲಾಗಿಲ್ಲ.
9. ʻರಾಷ್ಟ್ರೀಯ ಲೆಕ್ಕಪತ್ರ ಅಂಕಿಅಂಶಗಳ ಸಲಹಾ ಸಮಿತಿʼ (ಎ ಸಿ ಎನ್ ಎ ಎಸ್) ಮತ್ತು ಅದರ ವಿವಿಧ ಉಪ-ಸಮಿತಿಗಳು ಹಾಗೂ ತಜ್ಞ ಸದಸ್ಯರ ಮೌಲ್ಯಯುತ ಮಾರ್ಗದರ್ಶನ ಮತ್ತು ಕೊಡುಗೆಗಳನ್ನು ಸಚಿವಾಲಯವು ಕೃತಜ್ಞತೆಯಿಂದ ಸ್ಮರಿಸುತ್ತದೆ, ಅವರ ಒಳನೋಟಗಳು ಮತ್ತು ಶಿಫಾರಸುಗಳು ಈ ಪ್ರಕಟಣೆಯನ್ನು ಸಮೃದ್ಧಗೊಳಿಸಿವೆ. ಈ ಕಾರ್ಯವನ್ನು ಸಾಧ್ಯವಾಗಿಸಿದ ಕೇಂದ್ರ ಸಚಿವಾಲಯಗಳು ಮತ್ತು ಇಲಾಖೆಗಳು, ರಾಜ್ಯ ಸರ್ಕಾರಗಳು, ಕೇಂದ್ರಾಡಳಿತ ಪ್ರದೇಶಗಳ ಆಡಳಿತಗಳು, ನಿಯಂತ್ರಣ ಸಂಸ್ಥೆಗಳು ಮತ್ತು ಇತರ ಸಂಬಂಧಪಟ್ಟ ಸಂಸ್ಥೆಗಳ ನಿರಂತರ ಬೆಂಬಲ, ಸಹಕಾರ ಮತ್ತು ನಿರ್ಣಾಯಕ ದತ್ತಾಂಶ ಹಾಗೂ ಮಾಹಿತಿಯನ್ನು ಒದಗಿಸಿದ್ದಕ್ಕಾಗಿ ನಾವು ನಮ್ಮ ಹೃತ್ಪೂರ್ವಕ ಕೃತಜ್ಞತೆಯನ್ನು ಸಲ್ಲಿಸುತ್ತೇವೆ.
10. ಈ ಪ್ರಕಟಣೆಯು ರಾಷ್ಟ್ರೀಯ ಲೆಕ್ಕಪತ್ರ ಸಂಕಲನ ಚೌಕಟ್ಟಿನ ಉತ್ತಮ ತಿಳುವಳಿಕೆಯನ್ನು ಉತ್ತೇಜಿಸಲು ನೀತಿ ನಿರೂಪಕರು, ಸಂಶೋಧಕರು, ವಿಶ್ಲೇಷಕರು, ಶಿಕ್ಷಣ ತಜ್ಞರು ಮತ್ತು ರಾಷ್ಟ್ರೀಯ ಲೆಕ್ಕಪತ್ರ ಅಂಕಿಅಂಶಗಳ ಇತರ ಬಳಕೆದಾರರಿಗೆ ಸಮಗ್ರ ಆಕರ ದಾಖಲೆಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.
ಈ ಪ್ರಕಟಣೆಯು ಈಗ ಸಚಿವಾಲಯದ ಅಧಿಕೃತ ಜಾಲತಾಣದಲ್ಲಿ ಲಭ್ಯವಿದೆ: ( https://www.mospi.gov.in/uploads/documents/pressRelease/1789976245319-Sources%20and%20Methods%20for%20Compilation%20of%20National%20Accounts%20Statistics.pdf).
*****
(ಪ್ರಕಟಣೆ ಐ.ಡಿ.: 2313227)
ವಿಸಿಟರ್ ಕೌಂಟರ್ : 13