ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
azadi ka amrit mahotsav

ಭಾರತದ ಸೆಮಿಕಂಡಕ್ಟರ್ ಉದ್ಯಮಕ್ಕೆ ಪ್ರಮುಖ ಚಾಲನಾ ಶಕ್ತಿಯಾಗಿ ಹೊರಹೊಮ್ಮುತ್ತಿರುವ ನಿಖರ ಉತ್ಪಾದನಾ ಪರಿಸರ ವ್ಯವಸ್ಥೆ


400 ಎಂಜಿನಿಯರಿಂಗ್ ಕಾಲೇಜುಗಳು ಮತ್ತು 105 ಸ್ಟಾರ್ಟ್‌ಅಪ್‌ಗಳು ಉದ್ಯಮ-ಮಟ್ಟದ ಇಡಿಎ (EDA) ಉಪಕರಣಗಳ ಪ್ರವೇಶ ಪಡೆಯುವುದರೊಂದಿಗೆ 200 ಚಿಪ್ ಡಿಸೈನ್ ಕಂಪನಿಗಳನ್ನು ಗುರಿಯಾಗಿಸಿಕೊಂಡಿರುವ ಭಾರತ

ಐದು ಸೆಮಿಕಂಡಕ್ಟರ್ ಉತ್ಪಾದನಾ ಘಟಕಗಳಲ್ಲಿ ವಾಣಿಜ್ಯ ಉತ್ಪಾದನೆ ಪ್ರಾರಂಭ

ನಾಲ್ಕು ವರ್ಷಗಳಲ್ಲಿ ಸುಮಾರು 70,000 ಡಿಸೈನ್ ಎಂಜಿನಿಯರ್‌ಗಳಿಗೆ ತರಬೇತಿ; ಈಗ ಸಿಸ್ಟಮ್ ಡಿಸೈನ್ ಮತ್ತು ನಿಖರ ಉತ್ಪಾದನೆಗೆ ವಿಸ್ತರಿಸುವತ್ತ ಗಮನ

ಪ್ರಕಟಣಾ ದಿನಾಂಕ: 18 SEP 2026 7:26PM by PIB Bengaluru

ಭಾರತದ ಸೆಮಿಕಂಡಕ್ಟರ್ ಮಿಷನ್, ಈಗ ಅಡಿಪಾಯ ಹಾಕುವ ಹಂತದಿಂದ ಉದ್ಯಮವನ್ನು ದೊಡ್ಡ ಮಟ್ಟದಲ್ಲಿ ನಿರ್ಮಿಸುವ ಹಂತಕ್ಕೆ ಸಾಗಿದೆ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಇಂದು 'ಸೆಮಿಕಾನ್ ಇಂಡಿಯಾ 2026' ರಲ್ಲಿ ಹೇಳಿದರು. ಭಾರತೀಯ ಸೆಮಿಕಂಡಕ್ಟರ್ ಮಿಷನ್ (ISM) 2.0 ಅಡಿಯಲ್ಲಿ ಮುಂದಿನ ಹಂತವು ಸಂಪೂರ್ಣ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವುದರ ಮೇಲೆ ಗಮನ ಹರಿಸುತ್ತದೆ. 'ಸೆಮಿಕಾನ್ ಇಂಡಿಯಾ 2026' ರ ಸಂವಾದದಲ್ಲಿ ಮಾತನಾಡಿದ ಶ್ರೀ ವೈಷ್ಣವ್ ಅವರು, ಐಎಸ್‌ಎಂ (ISM) 1.0 ಮೂಲಭೂತ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸುವುದರ ಮೇಲೆ ಗಮನಹರಿಸಿದ್ದರೆ, ಐಎಸ್‌ಎಂ 2.0 ಆರು ಪ್ರಮುಖ ಆಧಾರ ಸ್ತಂಭಗಳಾದ್ಯಂತ ಸೆಮಿಕಂಡಕ್ಟರ್ ಉದ್ಯಮವನ್ನು ಮುನ್ನಡೆಸುತ್ತದೆ - ಡಿಸೈನ್; ಸಾಮಗ್ರಿಗಳು ಮತ್ತು ಯಂತ್ರಗಳು; ಹೆಚ್ಚಿನ ಫ್ಯಾಬ್‌ಗಳು; ಹೆಚ್ಚಿನ ಎಟಿಎಂಪಿ (ATMP) ಯೂನಿಟ್‌ಗಳು; ಸಂಶೋಧನೆ ಮತ್ತು ಅಭಿವೃದ್ಧಿ; ಮತ್ತು ಪ್ರತಿಭೆ.

ಮೂಲತಃ ಆರು ವರ್ಷಗಳ ಕಾರ್ಯಕ್ರಮವಾಗಿ ಯೋಜಿಸಲಾಗಿದ್ದ ಐಎಸ್‌ಎಂ 1.0 ಕೇವಲ ನಾಲ್ಕು ವರ್ಷಗಳಲ್ಲಿ ತನ್ನ ಉದ್ದೇಶಗಳನ್ನು ಸಾಧಿಸಿದೆ ಎಂದು ಹೇಳಿದ ಸಚಿವರು, ಬಲವಾದ ಮತ್ತು ಬೆಳೆಯುತ್ತಿರುವ ಹೂಡಿಕೆದಾರರ ಆಸಕ್ತಿಯ ಬೆಂಬಲದೊಂದಿಗೆ ಐಎಸ್‌ಎಂ 2.0 ಸಹ ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಪ್ರಗತಿ ಸಾಧಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಐದು ಸೆಮಿಕಂಡಕ್ಟರ್ ಉತ್ಪಾದನಾ ಘಟಕಗಳಲ್ಲಿ ವಾಣಿಜ್ಯ ಉತ್ಪಾದನೆ ಪ್ರಾರಂಭ

ಭಾರತದಲ್ಲಿ ಚಿಪ್ ತಯಾರಿಸುವ ಐದು ಘಟಕಗಳು ವಾಣಿಜ್ಯ ಉತ್ಪಾದನೆಯನ್ನು ಪ್ರಾರಂಭಿಸಿವೆ ಮತ್ತು ಸ್ವದೇಶಿ ಅಗತ್ಯಗಳ ಜೊತೆಗೆ ಚಿಪ್‌ಗಳನ್ನು ರಫ್ತು ಮಾಡಲಾಗುತ್ತಿದೆ ಎಂದು ಶ್ರೀ ವೈಷ್ಣವ್ ಹೇಳಿದರು. ಜಾಗತಿಕ ಮಾರುಕಟ್ಟೆಯಲ್ಲಿ ಸ್ಪರ್ಧಿಸಲು ಅತ್ಯಗತ್ಯವಾಗಿರುವ ವೆಚ್ಚ ಮತ್ತು ಗುಣಮಟ್ಟದಲ್ಲಿ ಸ್ಪರ್ಧಿಸುವ ಭಾರತೀಯ ಸೆಮಿಕಂಡಕ್ಟರ್ ಉತ್ಪಾದನೆಯ ಸಾಮರ್ಥ್ಯವನ್ನು ಇದು ಪ್ರದರ್ಶಿಸುತ್ತದೆ ಎಂದು ಅವರು ಹೇಳಿದರು.

ಪ್ರಸ್ತುತ ಸೆಮಿಕಂಡಕ್ಟರ್ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಹಲವು ಕಂಪನಿಗಳು ಕ್ಷಿಪ್ರವಾಗಿ ಉತ್ಪಾದನೆಯನ್ನು ವಿಸ್ತರಿಸುತ್ತಿವೆ ಎಂದು ಸಚಿವರು ತಿಳಿಸಿದರು. 2028 ರಲ್ಲಿ ಪ್ರಾರಂಭವಾಗಲು ನಿಗದಿಯಾಗಿರುವ ಫ್ಯಾಬ್ ಒಂದರ ಸಾಮರ್ಥ್ಯದ ಬಹುಪಾಲು ಭಾಗ ಈಗಾಗಲೇ ಬುಕ್ ಆಗಿದೆ ಎಂದು ಅವರು ತಿಳಿಸಿದರು.

ಸೆಮಿಕಂಡಕ್ಟರ್‌ಗಳು ಮತ್ತು ಎಲೆಕ್ಟ್ರಾನಿಕ್ಸ್ ಜಾಗತೀಕರಣಗೊಂಡ ಉದ್ಯಮಗಳಾಗಿದ್ದು, ಜಾಗತಿಕ ಪೂರೈಕೆ ಸರಪಳಿಯ ಭಾಗವಾಗಿ ಬಿಡಿಭಾಗಗಳು ಮತ್ತು ಉತ್ಪನ್ನಗಳು ಅಂತರರಾಷ್ಟ್ರೀಯ ಗಡಿಗಳನ್ನು ದಾಟಿ ಚಲಿಸುತ್ತವೆ ಎಂದು ಅವರು ಹೇಳಿದರು.

ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಯನ್ನು ಮುನ್ನಡೆಸಲಿರುವ ಡಿಸೈನ್ ಸಾಮರ್ಥ್ಯ

ಡಿಸೈನ್ ಅನ್ನು ಭಾರತದ ಪ್ರಮುಖ ಶಕ್ತಿಗಳಲ್ಲಿ ಒಂದಾಗಿ ಎತ್ತಿ ತೋರಿದ ಶ್ರೀ ವೈಷ್ಣವ್ ಅವರು, ಐಟಿ ಉದ್ಯಮ ಮತ್ತು ಜಾಗತಿಕ ಸಾಮರ್ಥ್ಯ ಕೇಂದ್ರಗಳಲ್ಲಿ (GCCs) ಬೇರೂರಿರುವ ದೇಶದ ಡಿಸೈನ್ ಸಾಮರ್ಥ್ಯವು ಈಗ ಸೆಮಿಕಂಡಕ್ಟರ್ ವಲಯಕ್ಕೂ ವಿಸ್ತರಿಸುತ್ತಿದೆ ಎಂದು ಹೇಳಿದರು. ಐಎಸ್‌ಎಂ 2.0 ಅಡಿಯಲ್ಲಿ ಕನಿಷ್ಠ 200 ಚಿಪ್ ಡಿಸೈನ್ ಕಂಪನಿಗಳು ಹೊರಹೊಮ್ಮಲಿವೆ ಎಂದು ಸಚಿವರು ಅಂದಾಜಿಸಿದರು, ಇದನ್ನು ಸ್ವದೇಶಿ ಸೆಮಿಕಂಡಕ್ಟರ್ ಐಪಿ (IP) ನಿರ್ಮಿಸುವಲ್ಲಿ "ಗೇಮ್ ಚೇಂಜರ್" ಎಂದು ಕರೆದರು.

ಐಎಸ್‌ಎಂ 1.0ರ ಅಡಿಯಲ್ಲಿ ಚಿಪ್-ಡಿಸೈನ್ ಸ್ಟಾರ್ಟ್‌ಅಪ್‌ಗಳಿಗೆ ನೀಡಿದ ಬೆಂಬಲದ ಮೊದಲ ಹಂತವು ಎಲೆಕ್ಟ್ರಾನಿಕ್ ಡಿಸೈನ್ ಆಟೋಮೇಷನ್ (EDA) ಉಪಕರಣಗಳ ಹೆಚ್ಚಿನ ವೆಚ್ಚವನ್ನು ಸರಿದೂಗಿಸುವುದರ ಮೇಲೆ ಗಮನಹರಿಸಿತ್ತು. ಉಪಕ್ರಮದ ಮೂಲಕ 105 ಕ್ಕೂ ಹೆಚ್ಚು ಚಿಪ್ ಡಿಸೈನ್ ಸ್ಟಾರ್ಟ್‌ಅಪ್‌ಗಳು ಅತ್ಯಾಧುನಿಕ ಇಡಿಎ ಉಪಕರಣಗಳ ಪ್ರವೇಶವನ್ನು ಪಡೆದುಕೊಂಡವು, ಹಾಗೆಯೇ 20 ಸ್ಟಾರ್ಟ್‌ಅಪ್‌ಗಳು ವೆಂಚರ್ ಕ್ಯಾಪಿಟಲ್ ನಿಧಿಯನ್ನು ಪಡೆದುಕೊಂಡವು ಎಂದು ಸಚಿವರು ತಿಳಿಸಿದರು.

ಉತ್ಪನ್ನಗಳಿಗಾಗಿ ಅಭಿವೃದ್ಧಿಪಡಿಸಲಾಗುತ್ತಿರುವ ಚಿಪ್‌ಗಳು ಸೇರಿದಂತೆ ಈ ವಲಯದಲ್ಲಿ ಸ್ಟಾರ್ಟ್‌ಅಪ್‌ಗಳ ಪ್ರಗತಿಯನ್ನು ಗುರುತಿಸಿದ ಅವರು, ಇದು ಕಾರ್ಯಕ್ರಮದ ವಿಸ್ತರಣೆಗೆ ಮತ್ತು ದೊಡ್ಡ ಕಂಪನಿಗಳು ಹಾಗೂ ಜಾಗತಿಕವಾಗಿ ಕೆಲಸ ಮಾಡುವ ಭಾರತೀಯ ಮೂಲದ ಎಂಜಿನಿಯರ್‌ಗಳಿಂದ ಹೆಚ್ಚಿನ ಭಾಗಿತ್ವಕ್ಕೆ ಪ್ರೋತ್ಸಾಹ ನೀಡಿದೆ ಎಂದು ಹೇಳಿದರು.

ನಿಖರ ಉತ್ಪಾದನೆ ಮತ್ತು ಅನ್ವಯಿಕ ಸಂಶೋಧನೆ ಮತ್ತು ಅಭಿವೃದ್ಧಿ (R&D)

ಎಲೆಕ್ಟ್ರಾನಿಕ್ಸ್ ಉತ್ಪಾದನಾ ಪರಿಸರ ವ್ಯವಸ್ಥೆಯು ನಿಖರ ಉತ್ಪಾದನಾ (precision manufacturing) ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡಿದೆ, ವಿಶೇಷವಾಗಿ ಸಣ್ಣ ಮತ್ತು ಮಧ್ಯಮ ಉದ್ಯಮಗಳಲ್ಲಿ (MSMEs) ಈ ಸಾಮರ್ಥ್ಯ ಬೆಳೆದಿದ್ದು, ಇವು ಈಗ ಎಲೆಕ್ಟ್ರಾನಿಕ್ಸ್, ಮೊಬೈಲ್ ಉತ್ಪಾದನೆ, ಏರೋಸ್ಪೇಸ್, ವಿಮಾನಯಾನ, ರಕ್ಷಣೆ ಮತ್ತು ಸೆಮಿಕಂಡಕ್ಟರ್‌ಗಳು ಸೇರಿದಂತೆ ಹಲವು ವಲಯಗಳಿಗೆ ಬೆಂಬಲ ನೀಡುತ್ತಿವೆ ಎಂದು ಶ್ರೀ ವೈಷ್ಣವ್ ಹೇಳಿದರು.

ಉತ್ಪನ್ನಗಳ ಗುಣಮಟ್ಟ ಮತ್ತು ಉತ್ಪಾದನಾ ಪ್ರಕ್ರಿಯೆಗಳನ್ನು ಸುಧಾರಿಸುವ ಉದ್ದೇಶದಿಂದ, ಉತ್ಪಾದನಾ ಘಟಕಗಳ ಒಳಗಡೆಯೇ ಅನ್ವಯಿಕ ಸಂಶೋಧನೆ ಮತ್ತು ಅಭಿವೃದ್ಧಿ (applied R&D) ಕೈಗೊಳ್ಳುವುದರ ಮೇಲೆ ಮುಂದಿನ ಗಮನ ಇರಬೇಕು ಎಂದು ಅವರು ಹೇಳಿದರು.

ನಿಖರ ಉತ್ಪಾದನೆಗೆ ಅಗತ್ಯವಿರುವ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವ ಅಗತ್ಯವನ್ನೂ ಸಚಿವರು ಎತ್ತಿಹಿಡಿದರು. ನಿಖರ ಉತ್ಪಾದನಾ ಪರಿಸರ ವ್ಯವಸ್ಥೆಗೆ ಅಗತ್ಯವಿರುವ ಕುಶಲ ಸಿಬ್ಬಂದಿಯ ಅಗತ್ಯವನ್ನು ಪೂರೈಸಲು ಬಹು-ಹಂತದ ತರಬೇತಿ ಮಾದರಿಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

ನಾಲ್ಕು ವರ್ಷಗಳಲ್ಲಿ 70,000 ಡಿಸೈನ್ ಎಂಜಿನಿಯರ್‌ಗಳಿಗೆ ತರಬೇತಿ

ಸೆಮಿಕಂಡಕ್ಟರ್ ಕೌಶಲ್ಯ ತರಬೇತಿಯ ಕುರಿತು ಮಾತನಾಡಿದ ಶ್ರೀ ವೈಷ್ಣವ್ ಅವರು, ಭಾರತವು ಆರಂಭದಲ್ಲಿ 10 ವರ್ಷಗಳಲ್ಲಿ 85,000 ಡಿಸೈನ್ ಎಂಜಿನಿಯರ್‌ಗಳಿಗೆ ತರಬೇತಿ ನೀಡುವ ಗುರಿಯನ್ನು ಹೊಂದಿತ್ತು ಮತ್ತು ಈಗಾಗಲೇ ನಾಲ್ಕು ವರ್ಷಗಳಲ್ಲಿ ಸುಮಾರು 70,000 ಡಿಸೈನ್ ಎಂಜಿನಿಯರ್‌ಗಳಿಗೆ ತರಬೇತಿ ನೀಡಿದೆ ಎಂದು ಹೇಳಿದರು.

ಸಣ್ಣ ನಗರಗಳಲ್ಲಿನ ಸಂಸ್ಥೆಗಳು ಸೇರಿದಂತೆ ಸುಮಾರು 400 ಎಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳು ಉದ್ಯಮ-ಮಟ್ಟದ ಇಡಿಎ (EDA) ಉಪಕರಣಗಳ ಪ್ರವೇಶವನ್ನು ಪಡೆದುಕೊಂಡಿದ್ದಾರೆ ಎಂದು ಅವರು ಹೇಳಿದರು. ವಿದ್ಯಾರ್ಥಿಗಳು ತಮ್ಮ ಡಿಸೈನ್‌ಗಳನ್ನು ಟೇಪ್-ಔಟ್ ಹಂತದವರೆಗೆ ಕೊಂಡೊಯ್ಯಲು ಮತ್ತು ತಮ್ಮ ಕಲ್ಪನೆಗಳು ಉತ್ಪನ್ನಗಳಾಗಿ ಅಭಿವೃದ್ಧಿ ಹೊಂದುವುದನ್ನು ನೋಡಲು ಅವಕಾಶಗಳನ್ನು ಪಡೆಯುತ್ತಿದ್ದಾರೆ.

ಐಎಸ್‌ಎಂ (ISM) 2.0ರ ಅಡಿಯಲ್ಲಿ, ಕೌಶಲ್ಯ ತರಬೇತಿಯ ಗಮನವು ಚಿಪ್ ಡಿಸೈನ್‌ನಿಂದ ಮುನ್ನಡೆದು ಸಿಸ್ಟಮ್ ಡಿಸೈನ್‌ನತ್ತ ಸಾಗಲಿದೆ, ಉದ್ಯಮಕ್ಕೆ ಅತ್ಯಂತ ಅಗತ್ಯವಿರುವ ಪ್ರತಿಭೆಯನ್ನು ಸೃಷ್ಟಿಸುವುದು ಇದರ ಉದ್ದೇಶವಾಗಿದೆ.

ಕ್ಲೀನ್‌ರೂಮ್ ತಂತ್ರಜ್ಞರು ಮತ್ತು ನಿರ್ವಹಣಾ ಸಿಬ್ಬಂದಿಗೆ ಬೇಡಿಕೆ ಹೆಚ್ಚಾಗುತ್ತಿದೆ ಎಂದು ಸಚಿವರು ಹೇಳಿದರು, ಮತ್ತು ಉದ್ಯಮದ ಬೇಡಿಕೆಯನ್ನು ಪರಿಗಣಿಸಿ ಐಎಸ್‌ಎಂ 2.0 ಅಡಿಯಲ್ಲಿ 1 ಲಕ್ಷ ತಂತ್ರಜ್ಞರಿಗೆ ತರಬೇತಿ ನೀಡುವ ಗುರಿಯನ್ನು ಮತ್ತಷ್ಟು ಹೆಚ್ಚಿಸುವ ಅಗತ್ಯವಿರಬಹುದು ಎಂದು ತಿಳಿಸಿದರು.

ಒಟ್ಟಿಗೆ ಬೆಳೆಯುತ್ತಿರುವ ಎಲೆಕ್ಟ್ರಾನಿಕ್ಸ್, ಎಐ ಮತ್ತು ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆ

ಎಲೆಕ್ಟ್ರಾನಿಕ್ಸ್, ಸೆಮಿಕಂಡಕ್ಟರ್‌ಗಳು ಮತ್ತು ಎಐ (AI) ಅನ್ವಯಿಕೆಗಳು ಪರಸ್ಪರ ನಿಕಟವಾಗಿ ಸಂಪರ್ಕ ಹೊಂದಿವೆ ಎಂದು ಶ್ರೀ ವೈಷ್ಣವ್ ಹೇಳಿದರು. ಎಐ ಸರ್ವರ್‌ಗಳಿಗಾಗಿ ಬೆಳೆಯುತ್ತಿರುವ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ಅವರು ಹೈಲೈಟ್ ಮಾಡಿದರು ಮತ್ತು ಪ್ರಮುಖ ಸರ್ವರ್ ತಯಾರಕರು ಭಾರತದಲ್ಲಿ ಉತ್ಪಾದನೆಯನ್ನು ಸ್ಥಾಪಿಸಲು ಆಸಕ್ತಿ ತೋರಿಸುತ್ತಿದ್ದಾರೆ ಎಂದು ತಿಳಿಸಿದರು.

ಬಿಡಿಭಾಗಗಳು, ಸಿದ್ಧ ಉತ್ಪನ್ನಗಳು, ಲ್ಯಾಪ್‌ಟಾಪ್‌ಗಳು, ಸರ್ವರ್‌ಗಳು ಮತ್ತು ಪರಿಕರಗಳನ್ನು ಒಳಗೊಂಡ ಪರಿಸರ ವ್ಯವಸ್ಥೆಯು ಕ್ರಮೇಣ ರೂಪುಗೊಳ್ಳುತ್ತಿದೆ, ಮತ್ತು ಪರಿಸರ ವ್ಯವಸ್ಥೆಯು ಒಮ್ಮೆ ಸ್ಥಾಪಿತವಾದರೆ, ಬೆಳವಣಿಗೆಯು ಇನ್ನಷ್ಟು ಸ್ಥಿರವಾಗಬಹುದು ಎಂದು ಅವರು ಹೇಳಿದರು.

ಭಾರತದ ಡಿಸೈನ್ ಸಾಮರ್ಥ್ಯ ಮತ್ತು ನಂಬಿಕಸ್ಥ ಪರಿಸರ ವ್ಯವಸ್ಥೆ

ಬಲವಾದ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ಮತ್ತು ಹೆಚ್ಚಿನ ಸ್ಥಳೀಯಕರಣವನ್ನು ಸಕ್ರಿಯಗೊಳಿಸಲು ಭಾರತದ ಡಿಸೈನ್ ಸಾಮರ್ಥ್ಯವು ಒಂದು ಪ್ರಮುಖ ಅನುಕೂಲವಾಗಿದೆ ಎಂದು ಸಚಿವರು ಹೇಳಿದರು.

ಜಾಗತಿಕ ಸೆಮಿಕಂಡಕ್ಟರ್ ಮತ್ತು ಎಲೆಕ್ಟ್ರಾನಿಕ್ಸ್ ಕಂಪನಿಗಳನ್ನು ಆಕರ್ಷಿಸುವಲ್ಲಿ ನಂಬಿಕಸ್ಥ ದೇಶವಾಗಿ ಭಾರತದ ಸ್ಥಾನವನ್ನು ಹಾಗೂ ನಂಬಿಕೆ ಮತ್ತು ಬೌದ್ಧಿಕ ಆಸ್ತಿ (IP) ಸಂರಕ್ಷಣೆಯ ಮಹತ್ವವನ್ನು ಅವರು ಒತ್ತಿ ಹೇಳಿದರು.

ಈ ಹಿಂದೆ ತಮ್ಮ ಮಾತೃದೇಶದ ಹೊರಗೆ ಕಾರ್ಯಾಚರಣೆಗಳನ್ನು ಸ್ಥಾಪಿಸದ ಕಂಪನಿಗಳು ಈಗ ಭಾರತಕ್ಕೆ ಮರಳಿ ಬರುತ್ತಿವೆ ಎಂದು ಶ್ರೀ ವೈಷ್ಣವ್ ಹೇಳಿದರು, ಇದನ್ನು ಭಾರತದ ಸಾಮರ್ಥ್ಯಗಳ ಮೇಲೆ ಇಡಲಾಗುತ್ತಿರುವ ವಿಶ್ವಾಸದ ಪ್ರಮುಖ ಸೂಚನೆ ಎಂದು ಅವರು ಬಣ್ಣಿಸಿದರು.

'ಮೇಡ್-ಇನ್-ಇಂಡಿಯಾ' ಮತ್ತು 'ಡಿಸೈನ್ಡ್-ಇನ್-ಇಂಡಿಯಾ' ಚಿಪ್‌ಗಳತ್ತ ದಾಪುಗಾಲು

ಭಾರತವು 'ಉತ್ಪನ್ನ ರಾಷ್ಟ್ರ'ವಾಗುವತ್ತ (product nation) ವ್ಯವಸ್ಥಿತವಾಗಿ ಮುನ್ನಡೆಯುತ್ತಿದೆ ಎಂದು ಶ್ರೀ ವೈಷ್ಣವ್ ಹೇಳಿದರು. ಭಾರತದಲ್ಲಿ ಅಭಿವೃದ್ಧಿಪಡಿಸಲಾಗುತ್ತಿರುವ ಕೆಲವು ಚಿಪ್‌ಗಳನ್ನು ಈಗಾಗಲೇ ಆಯಕಟ್ಟಿನ ವಲಯಗಳಲ್ಲಿ ಬಳಸಲಾಗುತ್ತಿದೆ, ಹಾಗೆಯೇ ಚಿಪ್‌ಗಳನ್ನು ರಫ್ತು ಕೂಡ ಮಾಡಲಾಗುತ್ತಿದೆ ಎಂದು ಅವರು ಒತ್ತಿ ಹೇಳಿದರು.

ಸೆಮಿಕಂಡಕ್ಟರ್ ಕಾರ್ಯಕ್ರಮದ ಅವಧಿಯಲ್ಲಿ ಇನ್ನು ಹೆಚ್ಚಿನ 'ಮೇಡ್-ಇನ್-ಇಂಡಿಯಾ' ಮತ್ತು 'ಡಿಸೈನ್ಡ್-ಇನ್-ಇಂಡಿಯಾ' ಚಿಪ್‌ಗಳು ಹೊರಹೊಮ್ಮುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು.

ಎಟಿಎಂಪಿ (ATMP) ಯೂನಿಟ್‌ಗಳು ಈಗಾಗಲೇ ಜಪಾನ್‌ಗೆ ರಫ್ತು ಮಾಡುತ್ತಿವೆ, ಹಾಗೆಯೇ ಅಮೆರಿಕ ಮತ್ತು ಸ್ವಿಟ್ಜರ್‌ಲ್ಯಾಂಡ್ ಹಾಗೂ ಜರ್ಮನಿಯಂತಹ ಯುರೋಪಿಯನ್ ಯೂನಿಯನ್ ದೇಶಗಳಿಗೆ ರಫ್ತು ಮಾಡಲಾಗುವ ಉತ್ಪನ್ನಗಳಲ್ಲಿ ಭಾರತೀಯ ಚಿಪ್‌ಗಳನ್ನು ಸೇರಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.

 

*****


(ಪ್ರಕಟಣೆ ಐ.ಡಿ.: 2312289) ವಿಸಿಟರ್ ಕೌಂಟರ್ : 7
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी