ರಕ್ಷಣಾ ಸಚಿವಾಲಯ
ರಕ್ಷಾ ಮಂತ್ರಿ ಮತ್ತು ನಾಗರಿಕ ವಿಮಾನಯಾನ ಸಚಿವರ ಸಮ್ಮುಖದಲ್ಲಿ, ಎಚ್‌ಎಎಲ್ ಸಂಸ್ಥೆಯಿಂದ ಭಾರತೀಯ ವಾಯುಪಡೆಗೆ 2 ಎಲ್‌ಸಿಎ ಎಫ್‌ಒಸಿ ಟ್ವಿನ್ ಸಿಟರ್ ಟ್ರೈನರ್‌ಗಳು, 3 ಎಚ್‌ಟಿಟಿ 40 ಬೇಸಿಕ್ ಟ್ರೈನರ್‌ಗಳು ಮತ್ತು ಪವನ್ ಹನ್ಸ್ ಲಿಮಿಟೆಡ್‌ಗೆ 4 ಧ್ರುವ ಎನ್‌ಜಿ ಹೆಲಿಕಾಪ್ಟರ್‌ಗಳ ಹಸ್ತಾಂತರ
ಈ ಸಮಾರಂಭವು ಸ್ವದೇಶಿ ಏರೋಸ್ಪೇಸ್ ಸಾಮರ್ಥ್ಯ, ತಾಂತ್ರಿಕ ಆತ್ಮವಿಶ್ವಾಸ ಮತ್ತು ಆತ್ಮನಿರ್ಭರತೆಯತ್ತ ಭಾರತದ ಪ್ರಗತಿಯಲ್ಲಿ ಪ್ರಮುಖ ಮೈಲಿಗಲ್ಲಾಗಿದೆ: ಶ್ರೀ ರಾಜನಾಥ್ ಸಿಂಗ್
"ಸ್ವಾವಲಂಬನೆ ಮತ್ತು ಜಾಗತಿಕ ಸ್ಪರ್ಧಾತ್ಮಕತೆಯನ್ನು ಸಾಧಿಸಲು ಸ್ವದೇಶಿ ಏರೋಸ್ಪೇಸ್ ಸಾಮರ್ಥ್ಯ ಅತ್ಯಗತ್ಯ"
ಮುಂದಿನ ಪೀಳಿಗೆಯ ಸ್ವದೇಶಿ ಏರೋಸ್ಪೇಸ್ ಸಾಮರ್ಥ್ಯಗಳನ್ನು ನಿರ್ಮಿಸಲು ಸಾರ್ವಜನಿಕ-ಖಾಸಗಿ ಸಹಭಾಗಿತ್ವವನ್ನು ಬಲಪಡಿಸಲು ಕರೆ ನೀಡಿದ ರಕ್ಷಾ ಮಂತ್ರಿ
"ಜಾಗತಿಕ ಏರೋಸ್ಪೇಸ್ ಕ್ಷೇತ್ರದಲ್ಲಿ ಭಾರತದ ನಾಯಕತ್ವವನ್ನು ಕಾಯ್ದುಕೊಳ್ಳಲು, ಯುವ ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳು ಪರಿವರ್ತನಾತ್ಮಕ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಬೇಕು"
ಪ್ರಕಟಣಾ ದಿನಾಂಕ:
18 SEP 2026 7:34PM by PIB Bengaluru
ಹಿಂದುಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಸಂಸ್ಥೆಯು, 2026 ರ ಸೆಪ್ಟೆಂಬರ್ 18 ರಂದು ಕರ್ನಾಟಕದ ಬೆಂಗಳೂರಿನಲ್ಲಿ, ರಕ್ಷಾ ಮಂತ್ರಿ ಶ್ರೀ ರಾಜನಾಥ್ ಸಿಂಗ್ ಮತ್ತು ನಾಗರಿಕ ವಿಮಾನಯಾನ ಸಚಿವರಾದ ಶ್ರೀ ಕೆ ರಾಮ್ಮೋಹನ್ ನಾಯ್ಡು ಅವರ ಸಮ್ಮುಖದಲ್ಲಿ, ಭಾರತೀಯ ವಾಯುಪಡೆಗೆ (IAF) ಎರಡು ಲಘು ಯುದ್ಧ ವಿಮಾನ (LCA) ತೇಜಸ್ ಫೈನಲ್ ಆಪರೇಷನಲ್ ಕ್ಲಿಯರೆನ್ಸ್ (FOC) ಟ್ವಿನ್ ಸಿಟರ್ ಟ್ರೈನರ್‌ಗಳು ಮತ್ತು ಮೂರು ಎಚ್‌ಟಿಟಿ 40 ಬೇಸಿಕ್ ಟ್ರೈನರ್‌ಗಳನ್ನು ಹಾಗೂ ಪವನ್ ಹನ್ಸ್ ಲಿಮಿಟೆಡ್‌ಗೆ (PHL) ನಾಲ್ಕು ಧ್ರುವ ನೆಕ್ಸ್ಟ್ ಜನರೇಷನ್ (NG) ಹೆಲಿಕಾಪ್ಟರ್‌ಗಳನ್ನು ಹಸ್ತಾಂತರಿಸಿತು. ತಮ್ಮ ಭಾಷಣದಲ್ಲಿ ರಕ್ಷಾ ಮಂತ್ರಿಗಳು, ಈ ಹಸ್ತಾಂತರವು ಸ್ವದೇಶಿ ಏರೋಸ್ಪೇಸ್ ಸಾಮರ್ಥ್ಯ, ತಾಂತ್ರಿಕ ಆತ್ಮವಿಶ್ವಾಸ ಮತ್ತು ಸ್ವಾವಲಂಬನೆಯತ್ತ ದೇಶದ ಪ್ರಗತಿಯಲ್ಲಿ ಪ್ರಮುಖ ಮೈಲಿಗಲ್ಲಾಗಿದೆ ಎಂದು ಬಣ್ಣಿಸಿದರು. "ನಮ್ಮ ಏರೋಸ್ಪೇಸ್ ಅಗತ್ಯಗಳನ್ನು ಪೂರೈಸುವಲ್ಲಿ ಭಾರತವನ್ನು ಸಮರ್ಥ, ಸ್ವಾವಲಂಬಿ ಮತ್ತು ಜಾಗತಿಕವಾಗಿ ಸ್ಪರ್ಧಾತ್ಮಕವಾಗಿಸುವುದು ನಮ್ಮ ಗುರಿಯಾಗಿದೆ," ಎಂದು ಅವರು ಹೇಳಿದರು.


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರವು ಸ್ವಾವಲಂಬನೆಯ ಮೂಲ ಮಂತ್ರದೊಂದಿಗೆ ಕೆಲಸ ಮಾಡಲು ಪ್ರಾರಂಭಿಸಿದಾಗಿನಿಂದ ದೇಶವು ಅತ್ಯಾಧುನಿಕ ಉಪಕರಣಗಳನ್ನು ಸ್ವದೇಶಿಯಾಗಿ ತಯಾರಿಸುತ್ತಿರುವುದರಿಂದ, ರಕ್ಷಣಾ ಕ್ಷೇತ್ರದಲ್ಲಿ ಭಾರತವು ಸ್ವಾವಲಂಬನೆಯತ್ತ ವ್ಯವಸ್ಥಿತವಾಗಿ ಸಾಗುತ್ತಿದೆ ಎಂದು ಶ್ರೀ ರಾಜನಾಥ್ ಸಿಂಗ್ ಪ್ರತಿಪಾದಿಸಿದರು. "ರಕ್ಷಣಾ ವಲಯದಲ್ಲಿ ಮುನ್ನಡೆಯಲು ರಕ್ಷಣಾ ಸಾರ್ವಜನಿಕ ವಲಯದ ಉದ್ದಿಮೆಗಳಿಗೆ (DPSUs) ಅವಕಾಶವನ್ನು ಒದಗಿಸುವುದು ಮಾತ್ರವಲ್ಲದೆ, ಸಮಾನ ಅವಕಾಶಗಳನ್ನು ಖಚಿತಪಡಿಸುವ ಮೂಲಕ ಖಾಸಗಿ ಉದ್ಯಮವನ್ನು ಪ್ರೋತ್ಸಾಹಿಸಲು ನಾವು ಕ್ರಮಗಳನ್ನು ತೆಗೆದುಕೊಂಡಿದ್ದೇವೆ," ಎಂದು ಅವರು ರಕ್ಷಣಾ ಸಚಿವಾಲಯವು ಸ್ವಾವಲಂಬನೆಯನ್ನು ಉತ್ತೇಜಿಸಲು ತೆಗೆದುಕೊಂಡ ಕ್ರಮಗಳನ್ನು ಪಟ್ಟಿ ಮಾಡುತ್ತಾ ಹೇಳಿದರು.
ಏರೋಸ್ಪೇಸ್ ವಲಯದಲ್ಲಿ ವ್ಯವಸ್ಥಿತವಾಗಿ ಮುನ್ನಡೆಯುವ ಅಗತ್ಯವನ್ನು ರಕ್ಷಾ ಮಂತ್ರಿಗಳು ಒತ್ತಿಹೇಳಿದರು, ಈ ಕ್ಷೇತ್ರದಲ್ಲಿ ಸ್ವಾವಲಂಬನೆಯು ಪ್ರಸ್ತುತ ಸಮಯದ ಅಗತ್ಯವಾಗಿದೆ ಎಂದು ಕರೆದರು. “ಏರೋಸ್ಪೇಸ್ ವ್ಯವಸ್ಥೆಗಳ ಅಭಿವೃದ್ಧಿಯಲ್ಲಿ ತಕ್ಷಣದ 'ದೊಡ್ಡ ಬದಲಾವಣೆ' ಇರಲು ಸಾಧ್ಯವಿಲ್ಲ. ಇದು ವ್ಯಾಪಕ ಶ್ರೇಣಿಯ ಘಟಕಗಳನ್ನು ಒಳಗೊಂಡಿರುವ ಬೃಹತ್ ಮತ್ತು ಹಂತ-ಹಂತದ ಪ್ರಕ್ರಿಯೆಯಾಗಿದೆ. ಇದರಲ್ಲಿರುವ ಎಲ್ಲಾ ಉತ್ಪನ್ನಗಳು ಮತ್ತು ಘಟಕಗಳು ಸುದೀರ್ಘ ಏಣಿಯ ಸಣ್ಣ ಮೆಟ್ಟಿಲುಗಳನ್ನು ಪ್ರತಿನಿಧಿಸುತ್ತವೆ; ನಾವು ಒಂದೊಂದೇ ಹೆಜ್ಜೆಯನ್ನು ಮುನ್ನಿಡಬೇಕು. ಸಹಜವಾಗಿ, ಸವಾಲುಗಳು ಇರುತ್ತವೆ, ಆದರೆ ಏರೋಸ್ಪೇಸ್‌ನಂತಹ ಸಂಕೀರ್ಣ ಮತ್ತು ನಿರ್ಣಾಯಕ ವಲಯದಲ್ಲಿ ಪ್ರಗತಿಯನ್ನು ಸಾಧಿಸಲು ನಾವು ಅವುಗಳನ್ನು ಬೃಹತ್ ರೋಡ್‌ಮ್ಯಾಪ್‌ನ ಮೈಲಿಗಲ್ಲುಗಳಾಗಿ ನೋಡಬೇಕಾಗಿದೆ,” ಎಂದು ಅವರು ಹೇಳಿದರು.
ನಾಗರೀಕ ವಿಮಾನಯಾನ ಮತ್ತು ರಕ್ಷಣಾ ಏರೋಸ್ಪೇಸ್ ಸಾಮರ್ಥ್ಯಗಳ ನಡುವೆ ಬೆಳೆಯುತ್ತಿರುವ ಸಹಭಾಗಿತ್ವದ ಸಂಕೇತವಾಗಿ ಈ ಹಸ್ತಾಂತರ ಸಮಾರಂಭವನ್ನು ಕರೆದ ಶ್ರೀ ರಾಜನಾಥ್ ಸಿಂಗ್, ಬಲವಾದ ಏರೋಸ್ಪೇಸ್ ಉದ್ಯಮದ ಅಭಿವೃದ್ಧಿಯು ಕೇವಲ ರಕ್ಷಣಾ ಅಗತ್ಯಗಳನ್ನು ಪೂರೈಸುವುದಕ್ಕೆ ಸೀಮಿತವಾಗಬಾರದು ಎಂದು ಒತ್ತಿಹೇಳಿದರು. ನಾಗರಿಕ ಮತ್ತು ಮಿಲಿಟರಿ ವಿಮಾನಯಾನ ವಲಯಗಳೆರಡರ ಅಗತ್ಯಗಳನ್ನು ಪರಿಣಾಮಕಾರಿಯಾಗಿ ಪೂರೈಸುವ ಸಾಮರ್ಥ್ಯವಿರುವ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ಅವರು ಕರೆ ನೀಡಿದರು. “ವಿಮಾನ ಡಿಸೈನ್, ಏವಿಯಾನಿಕ್ಸ್, ಪ್ರೊಪಲ್ಷನ್, ಕಾಂಪೋಸಿಟ್ ಸಾಮಗ್ರಿಗಳು, ಫ್ಲೈಟ್ ಕಂಟ್ರೋಲ್ ಸಿಸ್ಟಮ್‌ಗಳು, ಉತ್ಪಾದನೆ ಮತ್ತು ಪ್ರಮಾಣೀಕರಣದಂತಹ ಸಾಮರ್ಥ್ಯಗಳನ್ನು ದೇಶದೊಳಗೆ ಅಭಿವೃದ್ಧಿಪಡಿಸಿದಾಗ, ಅವು ಇಡೀ ಏರೋಸ್ಪೇಸ್ ವಲಯಕ್ಕೆ ಪ್ರಯೋಜನ ನೀಡುತ್ತವೆ. ನಾವು ಪ್ರತಿಯೊಂದು ಕ್ಷೇತ್ರದಲ್ಲೂ ಸ್ವಾವಲಂಬಿಯಾಗಿರುವ ಸಮಗ್ರ ಏರೋಸ್ಪೇಸ್ ಪರಿಸರ ವ್ಯವಸ್ಥೆಯನ್ನು ನಿರ್ಮಿಸಬೇಕು. ನಮ್ಮ ಸಾಮೂಹಿಕ ಶಕ್ತಿಯ ಮೂಲಕ ಈ ಪ್ರಯತ್ನವನ್ನು ಸಾಧಿಸುವ ವಿಶ್ವಾಸ ನನಗಿದೆ,” ಎಂದು ಅವರು ಹೇಳಿದರು.

ಯುದ್ಧದ ಸ್ವರೂಪವು ಕ್ಷಿಪ್ರವಾಗಿ ಬದಲಾಗುತ್ತಿದೆ ಮತ್ತು ಭವಿಷ್ಯದ ವಾಯು ಕಾರ್ಯಾಚರಣೆಗಳು ಮಾಹಿತಿ-ಬಹಳ ಮತ್ತು ತಂತ್ರಜ್ಞಾನ ಆಧಾರಿತವಾಗಿರುತ್ತವೆ ಎಂದು ಪ್ರತಿಪಾದಿಸಿದ ರಕ್ಷಾ ಮಂತ್ರಿಗಳು, ಸಂಕೀರ್ಣ ವ್ಯವಸ್ಥೆಗಳನ್ನು ಸ್ವದೇಶಿಯಾಗಿ ಅಭಿವೃದ್ಧಿಪಡಿಸುವ ಮಹತ್ವವನ್ನು ಎತ್ತಿಹಿಡಿದರು. ಉತ್ತಮ ತರಬೇತಿ ಪಡೆದ ಸಿಬ್ಬಂದಿ, ಸುಧಾರಿತ ತಂತ್ರಜ್ಞಾನ, ಸಂಯೋಜಿತ ವ್ಯವಸ್ಥೆಗಳು ಮತ್ತು ಕ್ಷಿಪ್ರ ನಿರ್ಧಾರ ತೆಗೆದುಕೊಳ್ಳುವಿಕೆಯ ಸಂಯೋಜನೆಯ ಮೂಲಕ ಮಾತ್ರ ಯುದ್ಧ ಪರಿಣಾಮಕಾರಿತ್ವವನ್ನು ಖಚಿತಪಡಿಸಿಕೊಳ್ಳಬಹುದು ಎಂದು ಅವರು ಹೇಳಿದರು. ಈ ಕಠಿಣ ಕಾರ್ಯಾಚರಣೆಯ ವಾತಾವರಣಕ್ಕೆ ಪೈಲಟ್‌ಗಳನ್ನು ಸಿದ್ಧಪಡಿಸುವಲ್ಲಿ ಎಲ್‌ಸಿಎ ಎಫ್‌ಒಸಿ ಟ್ರೈನರ್ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು. "ಧ್ರುವ-ಎನ್‌ಜಿ ನಮ್ಮ ಸ್ವದೇಶಿ ನಾಗರೀಕ ಏರೋಸ್ಪೇಸ್ ಸಾಮರ್ಥ್ಯವನ್ನು ಉದಾಹರಿಸಿದರೆ, ಎಲ್‌ಸಿಎ ಎಫ್‌ಒಸಿ ಟ್ರೈನರ್ ಸ್ವದೇಶಿ ಸೇನಾ ಏರೋಸ್ಪೇಸ್ ಸಾಮರ್ಥ್ಯ ಮತ್ತು ಅದರ ಯುದ್ಧ ವಿಮಾನ ಪರಿಸರ ವ್ಯವಸ್ಥೆಯ ಪ್ರಬುದ್ಧತೆಯ ಸಂಕೇತವಾಗಿ ನಿಲ್ಲುತ್ತದೆ," ಎಂದು ಅವರು ಹೇಳಿದರು.
ಎಚ್‌ಟಿಟಿ-40 ಕುರಿತು ಮಾತನಾಡಿದ ಶ್ರೀ ರಾಜನಾಥ್ ಸಿಂಗ್, ಭಾರತವು ವರ್ಷಗಳಿಂದ ತನ್ನ ಮೂಲಭೂತ ತರಬೇತಿ ಅಗತ್ಯಗಳನ್ನು ಪೂರೈಸಲು ಆಮದು ಮಾಡಿಕೊಂಡ ವಿಮಾನಗಳನ್ನು ನೆಚ್ಚಿಕೊಂಡಿತ್ತು, ಆದರೆ ಎಚ್‌ಎಎಲ್ ಈಗ ಐಎಎಫ್ (IAF) ಅಗತ್ಯಗಳನ್ನು ಪೂರೈಸಲು ಎಚ್‌ಟಿಟಿ-40 ಅನ್ನು ಸ್ವದೇಶಿಯಾಗಿ ತಯಾರಿಸುತ್ತಿದೆ ಎಂದು ಹೇಳಿದರು. ಈ ವಿಮಾನದ ರಫ್ತು ಸಾಮರ್ಥ್ಯದ ಬಗ್ಗೆ ಎತ್ತಿ ತೋರಿದ ಅವರು, ಎಚ್‌ಟಿಟಿ-40 ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬೇಡಿಕೆಯನ್ನು ಪಡೆಯುತ್ತದೆ ಮತ್ತು ಭಾರತದ ಏರೋಸ್ಪೇಸ್ ಸಾಮರ್ಥ್ಯಗಳನ್ನು ಬಲಪಡಿಸುವಲ್ಲಿ ತನ್ನ ಉದ್ದೇಶಿತ ಪಾತ್ರವನ್ನು ಪೂರೈಸುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ರಕ್ಷಾ ಮಂತ್ರಿಗಳು ವಿಮಾನ ತಯಾರಿಕೆ, ಹೆಲಿಕಾಪ್ಟರ್ ಅಭಿವೃದ್ಧಿ, ದುರಸ್ತಿ ಮತ್ತು ನಿರ್ವಹಣೆ ಹಾಗೂ ಏರೋಸ್ಪೇಸ್ ಎಂಜಿನಿಯರಿಯಿಂಗ್‌ನಲ್ಲಿ ಎಚ್‌ಎಎಲ್‌ನ ಪರಿಂತಿಯನ್ನು ಒತ್ತಿ ಹೇಳಿದರು ಮತ್ತು ಸ್ವದೇಶಿ ಏರೋಸ್ಪೇಸ್ ಸಾಮರ್ಥ್ಯಗಳನ್ನು ನಿರ್ಮಿಸುವ ಭಾರತದ ಶ್ರಮದಲ್ಲಿ ಇದನ್ನು ಒಂದು ಪ್ರಮುಖ ಸ್ತಂಭ ಎಂದು ಕರೆದರು. ಡಿಸೈನ್, ಅಭಿವೃದ್ಧಿ, ಉತ್ಪಾದನೆ, ಪ್ರಮಾಣೀಕರಣ, ಜೀವಿತಾವಧಿ ಬೆಂಬಲ ಮತ್ತು ಜಾಗತಿಕ ಮಾರುಕಟ್ಟೆ ಸೇರಿದಂತೆ ಇಡೀ ಏರೋಸ್ಪೇಸ್ ಮೌಲ್ಯ ಸರಪಳಿಯಾದ್ಯಂತ ತನ್ನ ಸಾಮರ್ಥ್ಯಗಳನ್ನು ಮತ್ತಷ್ಟು ವಿಸ್ತರಿಸಲು ಅವರು ಈ ರಕ್ಷಣಾ ಸಾರ್ವಜನಿಕ ವಲಯದ ಉದ್ದಿಮೆಗೆ ಕರೆ ನೀಡಿದರು.
ಪ್ರಸ್ತುತ ನಡೆಯುತ್ತಿರುವ ತಾಂತ್ರಿಕ ಯೋಜನೆಗಳಲ್ಲಿನ ವಿಳಂಬವನ್ನು ತಡೆಯಲು, ವಾಸ್ತವಿಕ ಯೋಜನೆ ಕಾಲಮಿತಿಯನ್ನು ನಿಗದಿಪಡಿಸುವಂತೆ ಶ್ರೀ ರಾಜನಾಥ್ ಸಿಂಗ್ ಆಗ್ರಹಿಸಿದರು. ವಿಳಂಬವು ನಿರ್ಣಾಯಕ ರಕ್ಷಣಾ ಅಗತ್ಯಗಳನ್ನು ಪೂರೈಸುವಲ್ಲಿ ಕೊರತೆಗಳನ್ನು ಸೃಷ್ಟಿಸಬಹುದು, ವೆಚ್ಚದ ಏರಿಕೆಗೆ ಕಾರಣವಾಗಬಹುದು ಮತ್ತು ತಂತ್ರಜ್ಞಾನವು ಹಳೆಯದಾಗುವ ಅಪಾಯವನ್ನು ಹೆಚ್ಚಿಸಬಹುದು ಎಂದು ಅವರು ತಿಳಿಸಿದರು.
ಸಂಶೋಧನೆ ಮತ್ತು ಅಭಿವೃದ್ಧಿಯನ್ನು (R&D) ನಿರ್ಣಾಯಕ ಆದ್ಯತೆಯ ಕ್ಷೇತ್ರ ಎಂದು ಬಣ್ಣಿಸಿದ ರಕ್ಷಾ ಮಂತ್ರಿಗಳು, ಇಂದು ಅಸ್ತಿತ್ವದಲ್ಲಿಲ್ಲದ ತಂತ್ರಜ್ಞಾನಗಳನ್ನು ಸೃಷ್ಟಿಸುವುದನ್ನು ಒಂದು ಸವಾಲಾಗಿ ತೆಗೆದುಕೊಳ್ಳುವಂತೆ ಯುವ ವಿಜ್ಞಾನಿಗಳು, ಎಂಜಿನಿಯರ್‌ಗಳು, ಡಿಸೈನರ್‌ಗಳು, ಟೆಸ್ಟ್ ಪೈಲಟ್‌ಗಳು ಮತ್ತು ತಂತ್ರಜ್ಞರನ್ನು ಆಗ್ರಹಿಸಿದರು. ಮುಂಬರುವ ದಶಕದಲ್ಲಿ ಜಾಗತಿಕ ಏರೋಸ್ಪೇಸ್ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತಕ್ಕೆ ಪ್ರಮುಖ ಸ್ಥಾನವನ್ನು ಕಾಯ್ದುಕೊಳ್ಳುವ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸುವಂತೆ ಅವರು ಕರೆ ನೀಡಿದರು.

ಸಾರ್ವಜನಿಕ ಮತ್ತು ಖಾಸಗಿ ವಲಯಗಳನ್ನು ಸ್ಪರ್ಧಿಗಳಾಗಿ ನೋಡದೆ, ಸಹಯೋಗಿಗಳಾಗಿ ನೋಡುವ ಅಗತ್ಯವನ್ನು ಶ್ರೀ ರಾಜನಾಥ್ ಸಿಂಗ್ ಒತ್ತಿಹೇಳಿದರು. “ಮುಂದಿನ ಪೀಳಿಗೆಯ ಸ್ವದೇಶಿ ಏರೋಸ್ಪೇಸ್ ಸಾಮರ್ಥ್ಯಗಳನ್ನು ನಿರ್ಮಿಸಲು ಸಾರ್ವಜನಿಕ-ಖಾಸಗಿ ಸಹಭಾಗಿತ್ವವನ್ನು ಬಲಪಡಿಸುವ ಅಗತ್ಯವಿದೆ. ಒಟ್ಟಾಗಿ ಕೆಲಸ ಮಾಡುವ ಮೂಲಕ, ನಾವು ಭಾರತದ ಏರೋಸ್ಪೇಸ್ ವಲಯದ ಬೆಳವಣಿಗೆಯನ್ನು ವೇಗಗೊಳಿಸಬಹುದು. ಕೃತಕ ಬುದ್ಧಿಮತ್ತೆ, ಸ್ವಾಯತ್ತ ವ್ಯವಸ್ಥೆಗಳು, ಮಾನವರಹಿತ ವೈಮಾನಿಕ ವ್ಯವಸ್ಥೆಗಳು, ಎಲೆಕ್ಟ್ರಾನಿಕ್ ಯುದ್ಧ ತಂತ್ರಜ್ಞಾನಗಳು, ಸೈಬರ್ ತಂತ್ರಜ್ಞಾನಗಳು ಮತ್ತು ಮುಂದಿನ ಪೀಳಿಗೆಯ ಪ್ರೊಪಲ್ಷನ್ ಮೂಲಕ ಈ ವಲಯದ ಪರಿವರ್ತನೆಗೆ ನಾವು ಸಿದ್ಧರಾಗಬೇಕು, ಜೊತೆಗೆ ಇವುಗಳ ಸ್ವದೇಶಿ ಅಭಿವೃದ್ಧಿ ಮತ್ತು ಸಂಯೋಜನೆಯ ಮೇಲೆ ಬಲವಾದ ಗಮನ ಹರಿಸಬೇಕು. ಭಾರತವನ್ನು ಏರೋಸ್ಪೇಸ್ ತಂತ್ರಜ್ಞಾನ ಕ್ಷೇತ್ರದಲ್ಲಿ ಸ್ವಾವಲಂಬಿಯನ್ನಾಗಿ ಮಾಡುವುದು ಮಾತ್ರವಲ್ಲದೆ ಜಾಗತಿಕ ನಾಯಕನನ್ನಾಗಿ ಮಾಡಲು ನಾವೆಲ್ಲರೂ ಸಂಕಲ್ಪ ಮಾಡೋಣ,” ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ನಾಗರಿಕ ವಿಮಾನಯಾನ ಸಚಿವರಾದ ಶ್ರೀ ಕೆ ರಾಮ್ಮೋಹನ್ ನಾಯ್ಡು, ಧ್ರುವ ಎನ್‌ಜಿ ಹೆಲಿಕಾಪ್ಟರ್‌ನ ಪ್ರಮಾಣೀಕರಣ ಮತ್ತು ನಾಗರಿಕ ಕಾರ್ಯಾಚರಣೆಗೆ ಸೇರ್ಪಡೆಯು ಭಾರತದ ಸ್ವದೇಶಿ ನಾಗರಿಕ ವಿಮಾನಯಾನ ಪರಿಸರ ವ್ಯವಸ್ಥೆಯಲ್ಲಿ ಪ್ರಮುಖ ಮೈಲಿಗಲ್ಲಾಗಿದೆ ಎಂದು ಹೇಳಿದರು. ವಾಣಿಜ್ಯ ಅನ್ವಯಿಕೆಗಳಿಗಾಗಿ ಸುಧಾರಿತ ಏರೋಸ್ಪೇಸ್ ಪ್ಲಾಟ್‌ಫಾರ್ಮ್‌ಗಳನ್ನು ಅಭಿವೃದ್ಧಿಪಡಿಸುವ ಮತ್ತು ಬೆಂಬಲಿಸುವ ಭಾರತೀಯ ಉದ್ಯಮದ ಬೆಳೆಯುತ್ತಿರುವ ಸಾಮರ್ಥ್ಯದ ಪ್ರತಿಬಿಂಬ ಎಂದು ಅವರು ಬಣ್ಣಿಸಿದರು.
ಎಚ್‌ಎಎಲ್ ಸಿಎಂಡಿ ಶ್ರೀ ರವಿ ಕೆ ಮಾತನಾಡಿ, ತೇಜಸ್ ಎಫ್‌ಒಸಿ ಟ್ವಿನ್ ಸಿಟರ್ ಟ್ರೈನರ್‌ಗಳು, ಎಚ್‌ಟಿಟಿ 40 ಬೇಸಿಕ್ ಟ್ರೈನರ್‌ಗಳು ಮತ್ತು ಧ್ರುವ ಎನ್‌ಜಿ ಹೆಲಿಕಾಪ್ಟರ್‌ಗಳ ಹಸ್ತಾಂತರವು ವಿವಿಧ ಸಿವಿಲ್ ಮತ್ತು ರಕ್ಷಣಾ ಅಗತ್ಯಗಳಿಗಾಗಿ ಪ್ಲಾಟ್‌ಫಾರ್ಮ್‌ಗಳನ್ನು ಅಭಿವೃದ್ಧಿಪಡಿಸುವ ಮತ್ತು ತಲುಪಿಸುವ ಎಚ್‌ಎಎಲ್‌ನ ಸಾಮರ್ಥ್ಯವನ್ನು ಪ್ರದರ್ಶಿಸುತ್ತದೆ ಎಂದು ತಿಳಿಸಿದರು. ಈ ಎರಡು ಪ್ಲಾಟ್‌ಫಾರ್ಮ್‌ಗಳು, ಎಚ್‌ಎಎಲ್ ವರ್ಷಗಳಿಂದ ನಿರ್ಮಿಸಿರುವ ಅಗಾಧ ಸಾಮರ್ಥ್ಯವನ್ನು ಮತ್ತು ಅವುಗಳನ್ನು ಬೆಂಬಲಿಸುವ ಸ್ವದೇಶಿ ಏರೋಸ್ಪೇಸ್ ಪರಿಸರ ವ್ಯವಸ್ಥೆಯ ಶಕ್ತಿಯನ್ನು ಪ್ರತಿಬಿಂಬಿಸುತ್ತವೆ ಎಂದು ಅವರು ಹೇಳಿದರು.
ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಎಪಿ ಸಿಂಗ್, ರಕ್ಷಣಾ ಉತ್ಪಾದನಾ ಕಾರ್ಯದರ್ಶಿ ಶ್ರೀ ಸಂಜೀವ್ ಕುಮಾರ್ ಮತ್ತು ನಾಗರಿಕ ವಿಮಾನಯಾನ ಸಚಿವಾಲಯದ ಕಾರ್ಯದರ್ಶಿ ಶ್ರೀ ಸಮೀರ್ ಕುಮಾರ್ ಸಿನ್ಹಾ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಎಲ್‌ಸಿಎ ಟ್ವಿನ್ ಸಿಟರ್ ಟ್ರೈನರ್‌ಗಳು ಎಫ್‌ಒಸಿ ಒಪ್ಪಂದದ ಅಡಿಯಲ್ಲಿ ಕೊನೆಯ ಎರಡು ವಿಮಾನಗಳಾಗಿವೆ. ಈ ವಿಮಾನಗಳು ಭಾರತೀಯ ವಾಯುಪಡೆಯ ತರಬೇತಿ ಅಗತ್ಯಗಳನ್ನು ಬೆಂಬಲಿಸುತ್ತವೆ ಮತ್ತು ಪೈಲಟ್‌ಗಳಿಗೆ ಫ್ರಂಟ್‌ಲೈನ್ ಯುದ್ಧ ವಿಮಾನ ಕಾರ್ಯಾಚರಣೆಗಳಿಗೆ ಸ್ವದೇಶಿ ತರಬೇತಿ ಸರಣಿಯನ್ನು ಒದಗಿಸುತ್ತವೆ. ತೇಜಸ್ ಟ್ರೈನರ್ ಫ್ರಂಟ್‌ಲೈನ್ ಪ್ಲಾಟ್‌ಫಾರ್ಮ್‌ನ ಮೂಲಭೂತ ವ್ಯವಸ್ಥೆಗಳು ಮತ್ತು ಯುದ್ಧ ಸಾಮರ್ಥ್ಯವನ್ನು ಕಾಯ್ದುಕೊಂಡಿದ್ದು, ಪೈಲಟ್‌ಗಳು ಸೇವೆಯಲ್ಲಿ ಮುಂದೆ ಚಲಾಯಿಸುವ ವಿಮಾನದಲ್ಲೇ ತರಬೇತಿ ಪಡೆಯಲು ಅನುವು ಮಾಡಿಕೊಡುತ್ತದೆ.

ಎಚ್‌ಟಿಟಿ-40 (ಹಿಂದೂಸ್ತಾನ್ ಟರ್ಬೊ ಟ್ರೈನರ್-40) ಎಂಬುದು ರಕ್ಷಣಾ ಪಡೆಗಳ ಪ್ರಾಥಮಿಕ ತರಬೇತಿ ಅಗತ್ಯಗಳನ್ನು ಪೂರೈಸಲು ಸ್ವದೇಶಿಯಾಗಿ ವಿನ್ಯಾಸಗೊಳಿಸಲಾದ ಮತ್ತು ಅಭಿವೃದ್ಧಿಪಡಿಸಲಾದ ಬೇಸಿಕ್ ಟ್ರೈನರ್ ವಿಮಾನವಾಗಿದೆ. ಈ ವಿಮಾನವನ್ನು ಸಾಬೀತಾದ ಟರ್ಬೊಪ್ರಾಪ್ ಎಂಜಿನ್ ಸುತ್ತಲೂ ನಿರ್ಮಿಸಲಾಗಿದ್ದು, ಕಡಿಮೆ ವೇಗದಲ್ಲಿ ಉತ್ತಮ ನಿಯಂತ್ರಣ ಗುಣಲಕ್ಷಣಗಳನ್ನು ಮತ್ತು ತರಬೇತಿ ಪಡೆಯುವ ಪೈಲಟ್‌ಗಳಿಗೆ ಪರಿಣಾಮಕಾರಿ ತರಬೇತಿಯನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ. ಇದು ಆಧುನಿಕ ಕಾಕ್‌ಪಿಟ್ ಮತ್ತು ಏವಿಯಾನಿಕ್ಸ್ ಸೂಟ್ ಅನ್ನು ಒಳಗೊಂಡಿದ್ದು, ಏರೋಬ್ಯಾಟಿಕ್ಸ್, ಜನರಲ್ ಹ್ಯಾಂಡ್ಲಿಂಗ್, ಇನ್ಸ್ಟ್ರುಮೆಂಟ್ ಫ್ಲೈಯಿಂಗ್, ನ್ಯಾವಿಗೇಷನ್, ನೈಟ್ ಫ್ಲೈಯಿಂಗ್ ಮತ್ತು ಕ್ಲೋಸ್ ಫಾರ್ಮೇಷನ್ ಫ್ಲೈಯಿಂಗ್ ಸೇರಿದಂತೆ ಹಲವಾರು ಮೂಲಭೂತ ತರಬೇತಿ ಮತ್ತು ಹಾರಾಟದ ಪಾತ್ರಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ.

ನಾಗರೀಕ ಮತ್ತು ವಾಣಿಜ್ಯ ಹೆಲಿಕಾಪ್ಟರ್ ವಲಯಕ್ಕೆ ಎಚ್‌ಎಎಲ್‌ನ ಪ್ರವೇಶದಲ್ಲಿ ಧ್ರುವ ಎನ್‌ಜಿ ಒಂದು ಪ್ರಮುಖ ಹೆಜ್ಜೆಯನ್ನು ಗುರುತಿಸುತ್ತದೆ. ನಾಗರಿಕ ಕಾರ್ಯಾಚರಣೆಗಳಿಗಾಗಿ ವಿನ್ಯಾಸಗೊಳಿಸಲಾದ ಈ ಹೆಲಿಕಾಪ್ಟರ್ ಸುಧಾರಿತ ವ್ಯವಸ್ಥೆಗಳು, ಆಧುನಿಕ ಏವಿಯಾನಿಕ್ಸ್ ಮತ್ತು ಹೆಚ್ಚು ಶಕ್ತಿಯುತ ಎಂಜಿನ್ ಅನ್ನು ಒಳಗೊಂಡಿದೆ. ಇದನ್ನು ಪ್ರಯಾಣಿಕರ ಸಾರಿಗೆ, ತುರ್ತು ವೈದ್ಯಕೀಯ ಸೇವೆಗಳು ಮತ್ತು ಆಫ್‌ಶೋರ್ ಲಾಜಿಸ್ಟಿಕ್ಸ್ ಬೆಂಬಲ ಸೇರಿದಂತೆ ವಿವಿಧ ಅನ್ವಯಿಕೆಗಳಿಗಾಗಿ ಬಳಸಲು ಉದ್ದೇಶಿಸಲಾಗಿದೆ.
*****
(ಪ್ರಕಟಣೆ ಐ.ಡಿ.: 2312269)
ವಿಸಿಟರ್ ಕೌಂಟರ್ : 10