ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
azadi ka amrit mahotsav

ಸಗಟು ಗ್ರಾಹಕರಿಗೆ ಸಕ್ಕರೆ ದಾಸ್ತಾನು ಮಿತಿಯನ್ನು 15 ರಿಂದ 30 ದಿನಗಳಿಗೆ ಸಡಿಲಿಸಿದ ಸರ್ಕಾರ; ಮುಂಗಡ ಅಧಿಕಾರ ಯೋಜನೆ (ಎಎಎಸ್) ಮತ್ತು ಸುಂಕ ದರ ಕೋಟಾ (ಟಿ ಆರ್ ಕ್ಯೂ) ಅಡಿಯಲ್ಲಿ ಆಮದು ಮಾಡಿಕೊಂಡ ಸಕ್ಕರೆಯಿಂದ ಮಾತ್ರ ಹೆಚ್ಚುವರಿ ದಾಸ್ತಾನು ಪಡೆಯಬೇಕು


ಚಿಲ್ಲರೆ ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆಯಲ್ಲಿ ಸುಮಾರು 10% ಇಳಿಕೆ; ಗಿರಣಿ ಹಂತದ (ಎಕ್ಸ್-ಮಿಲ್) ಕಡಿಮೆ ಬೆಲೆಯ ಪ್ರಯೋಜನವನ್ನು ಗ್ರಾಹಕರಿಗೆ ತಲುಪಿಸಲು ವರ್ತಕರು ಮತ್ತು ಸಗಟು ವ್ಯಾಪಾರಿಗಳಿಗೆ ಸರ್ಕಾರದ ಆಗ್ರಹ

ಪ್ರಕಟಣಾ ದಿನಾಂಕ: 18 SEP 2026 2:47PM by PIB Bengaluru

ಸಗಟು ಗ್ರಾಹಕರಿಗೆ, ಬೃಹತ್ ಪ್ರಮಾಣದಲ್ಲಿ ಸಕ್ಕರೆ ಬಳಸುವವರಿಗೆ,   ಪ್ರಸ್ತುತ ಇರುವ 15 ದಿನಗಳ ಸಕ್ಕರೆ ದಾಸ್ತಾನು ಮಿತಿಯನ್ನು 30 ದಿನಗಳಿಗೆ ಸಡಿಲಿಸಲು ಸರ್ಕಾರ ನಿರ್ಧರಿಸಿದೆ. ಆದರೆ, ಹಾಲಿ ಇರುವ 15 ದಿನಗಳ ಮಿತಿಗಿಂತ ಹೆಚ್ಚುವರಿಯಾಗಿ ಇಟ್ಟುಕೊಳ್ಳುವ ದಾಸ್ತಾನನ್ನು ಮುಂಗಡ ಅಧಿಕಾರ ಯೋಜನೆ ('ಅಡ್ವಾನ್ಸ್ ಆಥರೈಸೇಶನ್ ಸ್ಕೀಮ್' - ಎಎಎಸ್) ಮತ್ತು ಸುಂಕ ದರ ಕೋಟಾ ('ಟ್ಯಾರಿಫ್ ರೇಟ್ ಕೋಟಾ' – ಟಿಆರ್ ಕ್ಯೂ) ಅಡಿಯಲ್ಲಿ ಆಮದು ಮಾಡಿಕೊಳ್ಳಲಾದ ಸಕ್ಕರೆಯಿಂದ ಮಾತ್ರವೇ ಪಡೆಯಬೇಕು ಎಂಬ ಷರತ್ತನ್ನು ವಿಧಿಸಲಾಗಿದೆ. ಮುಕ್ತ ಮಾರುಕಟ್ಟೆಯಿಂದ ಖರೀದಿಸುವ ಸಕ್ಕರೆಯ ದಾಸ್ತಾನು ಮಿತಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಮತ್ತು ಅದನ್ನು 15 ದಿನಗಳ ಬಳಕೆಗೆ  ಮಾತ್ರ ಸೀಮಿತಗೊಳಿಸಲಾಗಿರುತ್ತದೆ. ಸಗಟು ಗ್ರಾಹಕರು ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯ ಆನ್‌ಲೈನ್ ಪೋರ್ಟಲ್ https://foodstock.dfpd.gov.in ಮೂಲಕ ಪ್ರತಿ ಶುಕ್ರವಾರ ತಮ್ಮಲ್ಲಿರುವ ಸಕ್ಕರೆ ದಾಸ್ತಾನಿನ ಸ್ವಯಂ ಘೋಷಣೆ ಮತ್ತು ವಿವರ ಸಲ್ಲಿಕೆ ಮಾಡಲು ಸರ್ಕಾರ ವ್ಯವಸ್ಥೆ  ಮಾಡಿದೆ.

ಸ್ಥಿರ ಮತ್ತು ಶಿಸ್ತುಬದ್ಧ ಸಕ್ಕರೆ ಮಾರುಕಟ್ಟೆಯನ್ನು ಕಾಯ್ದುಕೊಳ್ಳುವ ಉದ್ದೇಶದಿಂದ ಸರ್ಕಾರವು ಪ್ರಮುಖ ಸಗಟು ಸಕ್ಕರೆ ಗ್ರಾಹಕರೊಂದಿಗೆ ವಿವರವಾದ ಸಮಾಲೋಚನೆ ನಡೆಸಿದ್ದು, ಅವರ ಸಲಹೆಗಳನ್ನು ಸೂಕ್ತವಾಗಿ ಪರಿಗಣಿಸಲಾಗಿದೆ.

ಪ್ರಸ್ತುತ, ಉತ್ಪಾದನೆ, ಬಳಕೆ ಅಥವಾ ಇತರ ಉದ್ದೇಶಗಳಿಗಾಗಿ ತಿಂಗಳಿಗೆ 10 ಮೆಟ್ರಿಕ್ ಟನ್ ಗಿಂತ ಹೆಚ್ಚು ಸಕ್ಕರೆಯನ್ನು ಕಚ್ಚಾವಸ್ತುವಾಗಿ ಬಳಸುವ ಸಗಟು ಗ್ರಾಹಕರು 15 ದಿನಗಳಿಗೆ  ಮೀರದಷ್ಟು ಸಕ್ಕರೆ ದಾಸ್ತಾನನ್ನು ಮಾತ್ರ ಇಟ್ಟುಕೊಳ್ಳಲು ರಅನುಮತಿ ಇತ್ತು. ಮುಂಬರುವ ಹಬ್ಬದ ಋತುವನ್ನು ಗಮನದಲ್ಲಿಟ್ಟುಕೊಂಡು ಈ ಮಿತಿಯನ್ನು ಹೆಚ್ಚಿಸಬೇಕೆಂದು ಸಗಟು ಗ್ರಾಹಕರು ಮನವಿ ಮಾಡಿದ್ದರು. ಅಲ್ಲದೆ, ದೇಶೀಯ ಪೂರೈಕೆಯ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಬೀರದಂತೆ, ಕೈಗಾರಿಕಾ ಬಳಕೆಗೆ ನಿರಂತರವಾಗಿ ಸಕ್ಕರೆ ಸಿಗುವಂತಾಗಲು 'ಅಡ್ವಾನ್ಸ್ ಆಥರೈಸೇಶನ್ ಸ್ಕೀಮ್' ಮತ್ತು 'ಟ್ಯಾರಿಫ್ ರೇಟ್ ಕೋಟಾ' ಅಡಿಯಲ್ಲಿ  ಆಮದು ಮಾಡಿಕೊಂಡ ಆಮದುದಾರರಿಂದ ನೇರವಾಗಿ ಸಕ್ಕರೆ ಪಡೆಯಲು ಅನುಮತಿ ನೀಡುವಂತೆಯೂ ಅವರು ಸಲಹೆ ನೀಡಿದ್ದರು.

ಸಗಟು ಗ್ರಾಹಕರ ಹಿತಾಸಕ್ತಿ ಮತ್ತು ದೇಶೀಯ ಸಕ್ಕರೆ ಮಾರುಕಟ್ಟೆಯಲ್ಲಿ ಸ್ಥಿರತೆಯನ್ನು ಕಾಯ್ದುಕೊಳ್ಳುವ ಅಗತ್ಯತೆ ನಡುವೆ ಸಮತೋಲನ ಸಾಧಿಸುವುದು ಈ ಕ್ರಮದ ಉದ್ದೇಶವಾಗಿದೆ. ಇದು ಮುಂಬರುವ ಹಬ್ಬದ ಋತುವಿನಲ್ಲಿ ನೈಜ ಕೈಗಾರಿಕಾ ಗ್ರಾಹಕರಿಗೆ ಹೆಚ್ಚಿನ ಕಾರ್ಯಚರಣೆಯ ಸೌಲಭ್ಯವನ್ನು  ನೀಡುತ್ತದೆ; ಜೊತೆಗೆ ಹೆಚ್ಚುವರಿ ದಾಸ್ತಾನನ್ನು ಆಮದು ಮಾಡಿದ ಸಕ್ಕರೆಯಿಂದ ಪಡೆಯುವುದರಿಂದ ದೇಶೀಯ ದಾಸ್ತಾನಿನ ಮೇಲೆ ಅನಗತ್ಯ ಒತ್ತಡ ಬೀಳುವುದು ತಪ್ಪುತ್ತದೆ.

ಚಿಲ್ಲರೆ ಸಕ್ಕರೆ ಬೆಲೆಯಲ್ಲಿ 10% ಇಳಿಕೆ

ಚಿಲ್ಲರೆ ಸಕ್ಕರೆ ಬೆಲೆಗಳು ತಮ್ಮ ಗರಿಷ್ಠ ಮಟ್ಟದಿಂದ ಸುಮಾರು 10% ನಷ್ಟು ಇಳಿಕೆಯಾಗಿವೆ (ಆಗಸ್ಟ್ ನಲ್ಲಿ ಕೆಜಿಗೆ ₹65 ರಿಂದ ₹58.50 ಕ್ಕೆ). ಆದರೆ, ಗಿರಣಿ ಹಂತದ (ಎಕ್ಸ್-ಮಿಲ್) ಬೆಲೆಗಳು ಈಗಾಗಲೇ ಸುಮಾರು 25% ರಷ್ಟು ಕುಸಿದಿವೆ. ಎಕ್ಸ್-ಮಿಲ್ ಬೆಲೆಗಳ ಇಳಿಕೆಯ ಲಾಭವು ಸರಬರಾಜು ಸರಪಳಿಯ ಮೂಲಕ ಗ್ರಾಹಕರಿಗೆ ಇನ್ನೂ ಸಂಪೂರ್ಣವಾಗಿ ತಲುಪಿಲ್ಲ ಎಂಬುದನ್ನು ಚಿಲ್ಲರೆ ಬೆಲೆಗಳ ನಿಧಾನಗತಿಯ ಇಳಿಕೆ ತೋರಿಸುತ್ತದೆ ಎಂದು ಸರ್ಕಾರ ಗಮನಿಸಿದೆ.

ಐಎಸ್ ಎಂಎ, ರಾಷ್ಟ್ರೀಯ ಸಹಕಾರಿ ಸಕ್ಕರೆ ಕಾರ್ಖಾನೆಗಳ ಒಕ್ಕೂಟ ಮತ್ತು ಸಕ್ಕರೆ ವ್ಯಾಪಾರ ಕ್ಷೇತ್ರದ ಪ್ರತಿನಿಧಿಗಳೊಂದಿಗೆ ಇಂದು ನಡೆದ ಜಂಟಿ ಸಭೆಯಲ್ಲಿ, ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯ ಕಾರ್ಯದರ್ಶಿಯವರು, ಎಕ್ಸ್-ಮಿಲ್ ಬೆಲೆಗಳಲ್ಲಿನ ಇಳಿಕೆಯು ಚಿಲ್ಲರೆ ಬೆಲೆಗಳಲ್ಲಿ ಇನ್ನು ಪೂರ್ಣವಾಗಿ ಪ್ರತಿಫಲಿಸಿಲ್ಲ ಎಂಬುದನ್ನು ಒತ್ತಿಹೇಳಿದರು.

ಗಿರಣಿ ಹಂತದಲ್ಲಿ ಆಗಿರುವ ಗಮನಾರ್ಹ ಬೆಲೆ ಇಳಿಕೆಯ ಪ್ರಯೋಜನವನ್ನು ತಕ್ಷಣವೇ ಗ್ರಾಹಕರಿಗೆ ತಲುಪಿಸುವಂತೆ ಸಕ್ಕರೆ ವ್ಯಾಪಾರಿಗಳು, ಸಗಟು ವ್ಯಾಪಾರಿಗಳು ಮತ್ತು ಚಿಲ್ಲರೆ ವ್ಯಾಪಾರಿಗಳಿಗೆ ಸರ್ಕಾರ ಇಂದು ಬಲವಾದ ಮನವಿ ಮಾಡಿದೆ. ಮುಂಬರುವ ಹಬ್ಬಗಳ ಸಂದರ್ಭದಲ್ಲಿ ಸಕ್ಕರೆ ಮತ್ತು ಸಕ್ಕರೆ ಆಧಾರಿತ ಉತ್ಪನ್ನಗಳು ಗ್ರಾಹಕರಿಗೆ ಸುಲಭವಾಗಿ ಕೈಗೆಟುಕುವಂತೆ ಮತ್ತು ಕೈಗೆಟುಕುವ ದರದಲ್ಲಿ ಸಿಗುವಂತೆ ಸಂಪೂರ್ಣ ಸಕ್ಕರೆ ಮೌಲ್ಯ ಸರಪಳಿಯು ಜಂಟಿಯಾಗಿ ಶ್ರಮಿಸಬೇಕೆಂದು ಸರ್ಕಾರ ಕರೆ ನೀಡಿದೆ.

ರೈತರು ಮತ್ತು ಗ್ರಾಹಕರು ಭಾರತದ ಸಕ್ಕರೆ ನೀತಿಯ ಎರಡು ಪ್ರಮುಖ ಆಧಾರಸ್ತಂಭಗಳಾಗಿದ್ದಾರೆ   ಎಂದು ಕಾರ್ಯದರ್ಶಿ ಪ್ರತಿಪಾದಿಸಿದರು. ಕಬ್ಬು ಬೆಳೆಗಾರರ ಹಿತಾಸಕ್ತಿಯನ್ನು ಕಾಯುವುದರ ಜೊತೆಗೆ ಗ್ರಾಹಕರಿಗೆ ಸ್ಥಿರ ಮತ್ತು ಸಮಂಜಸವಾದ ಬೆಲೆಯಲ್ಲಿ ಸಕ್ಕರೆ ಸಿಗುವಂತೆ ಮಾಡಲು ಸರ್ಕಾರ ನಿರಂತರವಾಗಿ ಶ್ರಮಿಸುತ್ತಿದೆ. ಹೊಸ ಸಕ್ಕರೆ ಋತುವಿನ ಆರಂಭದೊಂದಿಗೆ, ಅಕ್ಟೋಬರ್ 1, 2026 ರಿಂದ ಕಬ್ಬು ಬೆಳೆಗಾರರು ಕ್ವಿಂಟಲ್ಗೆ ₹365 ರ ಹೆಚ್ಚಿಸಿದ ನ್ಯಾಯಯುತ ಮತ್ತು ಲಾಭದಾಯಕ ಬೆಲೆಯನ್ನು (ಎಫ್ ಆರ್ ಪಿ) ಪಡೆಯಲಿದ್ದಾರೆ. ಕಬ್ಬು ಬೆಳೆಗಾರರಿಗೆ ಲಾಭದಾಯಕ ಆದಾಯವನ್ನು ಖಚಿತಪಡಿಸುವ ಜೊತೆಗೆ ಸಕ್ಕರೆ ವಲಯದಲ್ಲಿ ಸಮತೋಲನವನ್ನು ಕಾಯ್ದುಕೊಳ್ಳಲು ಸರ್ಕಾರವು ಪ್ರತಿ ವರ್ಷ ಎಫ್ ಆರ್ ಪಿ ಯನ್ನು ಹೆಚ್ಚಿಸುತ್ತಿದೆ.

ದೇಶೀಯ ಮಾರುಕಟ್ಟೆಯಲ್ಲಿ ಸಕ್ಕರೆಯ ಲಭ್ಯತೆ ಮತ್ತು ಬೆಲೆಗಳನ್ನು ಸರ್ಕಾರವು ನಿಕಟವಾಗಿ ಮೇಲ್ವಿಚಾರಣೆ ಮಾಡುವುದನ್ನು ಮುಂದುವರಿಸುತ್ತದೆ ಹಾಗೂ ಗ್ರಾಹಕರಿಗೆ ಮತ್ತು ಆಹಾರ ಸಂಸ್ಕರಣೆ ಹಾಗೂ ಇತರ ಕೈಗಾರಿಕೆಗಳ ಅಗತ್ಯತೆಗಳಿಗೆ ಸಕ್ಕರೆಯ ಸುಲಭ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಅಗತ್ಯ ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತದೆ.

 

*****


(ಪ್ರಕಟಣೆ ಐ.ಡಿ.: 2312015) ವಿಸಿಟರ್ ಕೌಂಟರ್ : 5
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Bengali , Gujarati , Telugu