ರೈಲ್ವೇ ಸಚಿವಾಲಯ
ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಅವರಿಂದ ಶಿವಲಖಾ ಜಿಸಿಟಿ ಉದ್ಘಾಟನೆ, ರಾಷ್ಟ್ರಕ್ಕೆ 3 ಗತಿ ಶಕ್ತಿ ಕಾರ್ಗೊ ಟರ್ಮಿನಲ್(ಜಿಸಿಟಿ)ಗಳ ಸಮರ್ಪಣೆ ಮತ್ತು ಲಿಂಚ್ ಜಿಸಿಟಿಗೆ ಶಂಕುಸ್ಥಾಪನೆ
ಗತಿ ಶಕ್ತಿ ಕಾರ್ಗೋ ಟರ್ಮಿನಲ್ (ಜಿಸಿಟಿ)ಗಳು ವೇಗದ ಸರಕು ಸಾಗಣೆಗೆ ಬೆಂಬಲ ನೀಡುತ್ತವೆ, ಸರಕು ಸಾಗಣೆ ವೆಚ್ಚ ಕಡಿಮೆ ಮಾಡುತ್ತವೆ ಮತ್ತು ಪ್ರಾದೇಶಿಕ ವ್ಯವಹಾರಗಳನ್ನು ರಾಷ್ಟ್ರೀಯ ಮಾರುಕಟ್ಟೆಗಳೊಂದಿಗೆ ಸಂಪರ್ಕಿಸುತ್ತವೆ
ಶಿವಲಖಾ ಜಿಸಿಟಿಯಿಂದ ಮಿಥಾಪುರಕ್ಕೆ ಸಾಗುವ ಉಪ್ಪು ತುಂಬಿದ ಸರಕು ಸಾಗಣೆ ರೈಲಿಗೆ ಕೇಂದ್ರ ಸಚಿವರಿಂದ ಹಸಿರು ನಿಶಾನೆ
ಉಪ್ಪು ತುಂಬುವುದು, ಇಳಿಸುವುದು ಮತ್ತು ಸಾಗಣೆಯನ್ನು ಸುಲಭಗೊಳಿಸುತ್ತವೆ ಹಗುರವಾದ ಸ್ಟೇನ್‌ಲೆಸ್ ಸ್ಟೀಲ್ ಉಪ್ಪಿನ ಕಂಟೇನರ್ ಗಳು
ಪ್ರಕಟಣಾ ದಿನಾಂಕ:
15 SEP 2026 7:15PM by PIB Bengaluru
ಕೇಂದ್ರ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಗುಜರಾತ್‌ನಲ್ಲಿಂದು 5 ಗತಿ ಶಕ್ತಿ ಕಾರ್ಗೊ ಟರ್ಮಿನಲ್(ಜಿಸಿಟಿ)ಗಳನ್ನು ಉದ್ಘಾಟಿಸಿ, ರಾಷ್ಟ್ರಕ್ಕೆ ಸಮರ್ಪಿಸಿ, ಶಂಕುಸ್ಥಾಪನೆ ನೆರವೇರಿಸಿದರು. ಇದು ರಾಜ್ಯದ ಸರಕು ನಿರ್ವಹಣಾ ಸಾಮರ್ಥ್ಯವನ್ನು ಬಲಪಡಿಸುತ್ತದೆ, ಜತೆಗೆ ದೇಶಾದ್ಯಂತ ಪ್ರಾದೇಶಿಕ ಆರ್ಥಿಕ ಕೇಂದ್ರಗಳು, ಬಂದರುಗಳು ಮತ್ತು ಮಾರುಕಟ್ಟೆಗಳ ನಡುವಿನ ಸಂಪರ್ಕವನ್ನು ಸುಧಾರಿಸುತ್ತದೆ.
ಶಿವ್ಲಖಾ ಜಿಸಿಟಿಯಿಂದ ಮಿಥಾಪುರಕ್ಕೆ ಉಪ್ಪು ತುಂಬಿದ ಸರಕು ಸಾಗಣೆ ರೈಲಿಗೆ ಶ್ರೀ ವೈಷ್ಣವ್ ಅವರು ಹಸಿರು ನಿಶಾನೆ ತೋರಿದರು, ಇದು ಗುಜರಾತ್‌ನಿಂದ ತನ್ನ ಗಮ್ಯಸ್ಥಾನಕ್ಕೆ ಉಪ್ಪು ಸಾಗಿಸಲು ರೈಲಿನ ಹೆಚ್ಚಿನ ಬಳಕೆ ಮಾಡುವತ್ತ ಒಂದು ಪ್ರಮುಖ ಹೆಜ್ಜೆಯಾಗಿದೆ.

5 ಜಿಸಿಟಿಗಳ ಪೈಕಿ, ಕಛ್‌ನ ಶಿವ್ಲಖಾದಲ್ಲಿರುವ ಜಿಸಿಟಿ ಉದ್ಘಾಟಿಸಲಾಯಿತು. ಜತೆಗೆ, ಕಛ್‌ನ ಭೀಮಸರ್‌ನಲ್ಲಿರುವ ಜಿಸಿಟಿ, ಮೊರ್ಬಿಯ ದೇವಲಿಯಾದಲ್ಲಿರುವ ಜಿಸಿಟಿ ಮತ್ತು ಬನಸ್ಕಾಂತದ ಚಾಂಡಿಸರ್‌ನಲ್ಲಿರುವ ಜಿಸಿಟಿ ಗಳನ್ನು ರಾಷ್ಟ್ರಕ್ಕೆ ಸಮರ್ಪಿಸಲಾಯಿತು. ಮಹೇಸಾನದ ಲಿಂಚ್‌ನಲ್ಲಿ ಜಿಸಿಟಿ ಸ್ಥಾಪನೆಗೆ ಶಂಕುಸ್ಥಾಪನೆ ನೆರವೇರಿಸಲಾಯಿತು.
ಈ ಟರ್ಮಿನಲ್‌ಗಳು ಸರಕು ಸಾಗಣೆಗೆ ರೈಲುಗಳ ಸಾಮರ್ಥ್ಯ ವಿಸ್ತರಿಸಲು, ಬಂದರು ಸ್ಥಳಗಳಲ್ಲಿ ಸಂಚಾರ ದಟ್ಟಣೆ ಮತ್ತು ಅಡಚಣೆಗಳನ್ನು ಕಡಿಮೆ ಮಾಡಲು, ಗುಜರಾತ್ ಬಂದರುಗಳು ಮತ್ತು ಉತ್ತರ ಒಳನಾಡಿನ ಬಂದರುಗಳ ನಡುವೆ ಸರಕು ಸಂಪರ್ಕ ಬಲಪಡಿಸಲು ಸಹಾಯ ಮಾಡುತ್ತದೆ. ಸ್ಥಳೀಯ ಆರ್ಥಿಕ ಕೇಂದ್ರಗಳನ್ನು ವಿಶಾಲವಾದ ರಾಷ್ಟ್ರೀಯ ಮಾರುಕಟ್ಟೆಗಳು ಮತ್ತು ಬಂದರುಗಳೊಂದಿಗೆ ಸಂಪರ್ಕಿಸುವ ಮೂಲಕ ಜಿಸಿಟಿಗಳು, ಈ ಪ್ರದೇಶದಲ್ಲಿ ಬೆಳೆಯುತ್ತಿರುವ ಕೈಗಾರಿಕಾ, ವ್ಯಾಪಾರ ಮತ್ತು ವ್ಯಾಪಾರ ಚಟುವಟಿಕೆಗಳನ್ನು ಬೆಂಬಲಿಸುತ್ತವೆ.

ಉಪ್ಪು ಸಾಗಣೆಯ ಮಹತ್ವದ ಮೇಲೆ ಬೆಳಕು ಚೆಲ್ಲಿದ ಶ್ರೀ ವೈಷ್ಣವ್, ಬಡವರು ಮತ್ತು ಮಧ್ಯಮ ವರ್ಗದ ಕುಟುಂಬಗಳು ಸೇರಿದಂತೆ ಪ್ರತಿಯೊಂದು ಮನೆಯೂ ಸೇವಿಸುವ ಅತ್ಯಗತ್ಯ ವಸ್ತು ಉಪ್ಪು. ಗುಜರಾತ್ ವಿಶೇಷವಾಗಿ ಕಛ್, ಉಪ್ಪು ಉತ್ಪಾದಿಸುವ ಪ್ರಮುಖ ಪ್ರದೇಶವಾಗಿದ್ದು, ದೇಶದ ವಿವಿಧ ಭಾಗಗಳಿಗೆ ಉಪ್ಪು ಸಾಗಿಸುವುದು ಸಾಂಪ್ರದಾಯಿಕವಾಗಿ ಹಲವಾರು ಸವಾಲುಗಳನ್ನು ಒಡ್ಡಿದೆ ಎಂದು ಹೇಳಿದರು.
ಸಾಂಪ್ರದಾಯಿಕ ರೈಲ್ವೆ ವ್ಯಾಗನ್‌ಗಳಲ್ಲಿ ಉಪ್ಪು ಸಾಗಿಸಿದಾಗ, ವ್ಯಾಗನ್ ತನ್ನ ಸಾಮರ್ಥ್ಯದ ಗಮನಾರ್ಹ ಭಾಗವನ್ನು ಸ್ವತಃ ತೆಗೆದುಕೊಳ್ಳುತ್ತದೆ. ಇದಲ್ಲದೆ, ಉಪ್ಪು ತೇವಾಂಶ ಹೀರಿಕೊಳ್ಳುತ್ತದೆ, ಇದರ ಪರಿಣಾಮವಾಗಿ ಸಾಗಣೆ ಸಮಯದಲ್ಲಿ ಸರಕು ಒದ್ದೆಯಾಗುತ್ತದೆ. ಇದು ಲೋಡ್ ಮತ್ತು ಅನ್ ಲೋಡ್ ಸಮಯದಲ್ಲಿ ತೊಂದರೆಗಳನ್ನು ಸೃಷ್ಟಿಸುತ್ತದೆ. ಈ ಸವಾಲುಗಳನ್ನು ಎದುರಿಸಲು ಹೊಸ ಹಗುರವಾದ ಸ್ಟೇನ್‌ಲೆಸ್ ಸ್ಟೀಲ್ ಉಪ್ಪು ಕಂಟೇನಲ್ ಅನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಕಂಟೇನರ್ ಮೇಲಿನಿಂದ ಲೋಡ್ ಮಾಡಲು ಮತ್ತು ಬದಿಯಿಂದ ಇಳಿಸಲು ಅನುವು ಮಾಡಿಕೊಡುತ್ತದೆ. ಹೊಸ ಕಂಟೇನರ್ ಗಳು ದೇಶದ ವಿವಿಧ ಭಾಗಗಳಿಗೆ ಉಪ್ಪು ಸಾಗಿಸುವುದನ್ನು ಸುಲಭಗೊಳಿಸುತ್ತವೆ. ಲೋಡಿಂಗ್ ಮತ್ತು ಅನ್-ಲೋಡಿಂಗ್ ಪ್ರಕ್ರಿಯೆಯನ್ನು ಸುಗಮ ಮತ್ತು ಹೆಚ್ಚು ಪರಿಣಾಮಕಾರಿಯಾಗಿ ಮಾಡುತ್ತದೆ ಎಂದು ಸಚಿವರು ಹೇಳಿದರು.
ದೇಶಾದ್ಯಂತ 150 ಗತಿ ಶಕ್ತಿ ಕಾರ್ಗೊ ಟರ್ಮಿನಲ್‌ಗಳನ್ನು ಈಗ ಕಾರ್ಯಾರಂಭ ಮಾಡಲಾಗಿದೆ, ಇದು ಕೈಗಾರಿಕೆಗಳಿಗೆ ಪ್ರಯೋಜನಗಳನ್ನು ಒದಗಿಸುತ್ತದೆ, ಸರಕು ಸಂಪರ್ಕವನ್ನು ಸುಧಾರಿಸುತ್ತದೆ.
ಕಛ್‌ನಲ್ಲಿ ರೈಲ್ವೆ ಮೂಲಸೌಕರ್ಯ ಕುರಿತು ಮಾತನಾಡಿದ ಶ್ರೀ ವೈಷ್ಣವ್, ಕಛ್ ಪ್ರದೇಶದಲ್ಲಿ ಸುಮಾರು 5,600 ಕೋಟಿ ರೂ. ಮೌಲ್ಯದ ರೈಲ್ವೆ ಯೋಜನೆಗಳು ಪ್ರಸ್ತುತ ನಡೆಯುತ್ತಿವೆ. ಸಮಾಖಿಯಾಲಿ, ಭಚೌ, ಗಾಂಧಿಧಾಮ್, ಆದಿಪುರ ಮತ್ತು ಭುಜ್ ಅನ್ನು ಸಂಪರ್ಕಿಸುವ ಪ್ರಮುಖ ವಿಭಾಗಗಳಲ್ಲಿ ಸಾಮರ್ಥ್ಯ ವೃದ್ಧಿ ಮತ್ತು ಜೋಡಿ ಪಥದ ಕೆಲಸಗಳನ್ನು ಮಾಡಲಾಗುತ್ತಿದೆ. ಭುಜ್-ನಲಿಯಾ ಗೇಜ್ ಪರಿವರ್ತನೆ ಯೋಜನೆಯು ಈ ಪ್ರದೇಶದಲ್ಲಿ ರೈಲು ಸಂಪರ್ಕವನ್ನು ಬಲಪಡಿಸಿದೆ. ನಲಿಯಾ-ಜಖೌ ಬಂದರು ಹೊಸ ಬ್ರಾಡ್-ಗೇಜ್ ಮಾರ್ಗವನ್ನು ಸಹ ಮಂಜೂರು ಮಾಡಲಾಗಿದೆ, ಇದು ಈ ಪ್ರದೇಶದಲ್ಲಿ ಸಂಪರ್ಕವನ್ನು ಮತ್ತಷ್ಟು ಸುಧಾರಿಸುತ್ತದೆ ಎಂದು ಅವರು ಹೇಳಿದರು.
ಕಾಂಡ್ಲಾ-ಗಂಧಿಧಾಮ್ ಕೈಗಾರಿಕಾ ಪ್ರದೇಶದ ರೈಲ್ವೆ ಮೂಲಸೌಕರ್ಯ ಕುರಿತು ಮಾತನಾಡಿದ ಶ್ರೀ ವೈಷ್ಣವ್, ಸಾಮರ್ಥ್ಯ ವೃದ್ಧಿ ಕಾರ್ಯಗಳ ಮೂಲಕ ರೈಲು ಸಂಪರ್ಕವನ್ನು ಬಲಪಡಿಸಲಾಗುತ್ತಿದೆ. ಸಮಾಖಿಯಾಲಿ-ಭಚೌ ವಿಭಾಗವನ್ನು ಈಗಾಗಲೇ ಚತುಷ್ಪಥ ಮಾರ್ಗಗಳನ್ನಾಗಿ ಮಾಡಲಾಗಿದೆ. ಗಾಂಧಿಧಾಮ-ಆದಿಪುರ ವಿಭಾಗವನ್ನು ಈಗಾಗಲೇ 4 ಮಾರ್ಗಗಳನ್ನಾಗಿ ಮಾಡಲಾಗಿದ್ದು, ಆದಿಪುರ-ಭುಜ್ ಏಕ ಮಾರ್ಗದ ವಿಭಾಗವನ್ನು ದ್ವಿಪಥವಾಗಿ ಮಾಡಲಾಗುತ್ತಿದೆ.
ಭುಜ್-ನಲಿಯಾ ವಿಭಾಗವನ್ನು ಇತ್ತೀಚೆಗೆ ಮೀಟರ್ ಗೇಜ್ ನಿಂದ ಬ್ರಾಡ್ ಗೇಜ್ ಗೆ ಪರಿವರ್ತಿಸಲಾಗಿದೆ. ನಲಿಯಾದಿಂದ ಜಖೌ ಬಂದರು, ವಾಯೋರ್, ಲೂನಾ, ಹಾಜಿಪುರ್ ಮತ್ತು ದೇಸಲ್ಪರ್ ವರೆಗಿನ ರೈಲ್ವೆ ಜಾಲವನ್ನು ಮತ್ತಷ್ಟು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಶ್ರೀ ವೈಷ್ಣವ್ ಹೇಳಿದರು.
ವಿಸ್ತೃತ ರೈಲ್ವೆ ಜಾಲವು ಕಛ್ ಪ್ರದೇಶಕ್ಕೆ ವಿಶೇಷವಾಗಿ ರಕ್ಷಣಾ ವಲಯ ಮತ್ತು ಉದ್ಯಮದ ಅಗತ್ಯತೆಗಳಿಗೆ ಗಮನಾರ್ಹ ಪ್ರಯೋಜನಗಳನ್ನು ಒದಗಿಸುತ್ತದೆ. ಇದು ಈ ಸವಾಲಿನ ಭೂಪ್ರದೇಶದಲ್ಲಿ ವಾಸಿಸುವ ನಿವಾಸಿಗಳಿಗೆ ಪ್ರಯೋಜನ ನೀಡುತ್ತದೆ. ಈ ಉಪಕ್ರಮಗಳು ಒಟ್ಟಾಗಿ ಗುಜರಾತ್‌ನಲ್ಲಿ ಸರಕು ಮತ್ತು ಪ್ರಯಾಣಿಕರ ಮೂಲಸೌಕರ್ಯ ಎರಡನ್ನೂ ಬಲಪಡಿಸುತ್ತವೆ. ರೈಲು ಸೇವೆಗಳು ಮತ್ತು ಸರಕು ಸೌಲಭ್ಯಗಳಿಗೆ ಪ್ರವೇಶವನ್ನು ಸುಧಾರಿಸುತ್ತವೆ. ಕೈಗಾರಿಕೆಗಳು, ವ್ಯವಹಾರಗಳು ಮತ್ತು ಸ್ಥಳೀಯ ಸಮುದಾಯಗಳು ಪರಿಣಾಮಕಾರಿ ರೈಲು ಸಂಪರ್ಕದಿಂದ ಪ್ರಯೋಜನ ಪಡೆಯಲು ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸುತ್ತವೆ.
ಸಮರ್ಪಿತ ಸರಕು ಕಾರಿಡಾರ್‌ಗಳನ್ನು ಉಲ್ಲೇಖಿಸಿದ ಶ್ರೀ ವೈಷ್ಣವ್, ಇತ್ತೀಚೆಗೆ ಕಾರ್ಯಾರಂಭ ಮಾಡಿದ ಮೂಲಸೌಕರ್ಯವು ಸರಕುಗಳ ವೇಗ ಮತ್ತು ಹೆಚ್ಚು ಪರಿಣಾಮಕಾರಿ ಚಲನೆಯನ್ನು ಸಕ್ರಿಯಗೊಳಿಸುವ ಮೂಲಕ ಸರಕು ಸಾಗಣೆಗೆ ಗಮನಾರ್ಹ ಪ್ರಯೋಜನಗಳನ್ನು ಒದಗಿಸುತ್ತಿದೆ. ಪೂರ್ವ-ಪಶ್ಚಿಮ ಸರಕು ಸಂಪರ್ಕ ವಿಸ್ತರಿಸುವ ಕೆಲಸವನ್ನು ಸಹ ಮುಂದುವರಿಸಲಾಗುತ್ತಿದೆ ಎಂದು ಅವರು ಹೇಳಿದರು.
ಮುಂಬೈ-ಅಹಮದಾಬಾದ್ ಹೈ-ಸ್ಪೀಡ್ ರೈಲು ಯೋಜನೆ ಕುರಿತು ಮಾತನಾಡಿದ ಅವರು, 2026 ಡಿಸೆಂಬರ್ ಒಳಗೆ ವಾಪಿ-ಸೂರತ್ ವಿಭಾಗದಲ್ಲಿ ನಿರ್ಮಾಣವನ್ನು ಗುರಿಯಾಗಿರಿಸಿಕೊಳ್ಳಲಾಗಿದೆ. ಪರೀಕ್ಷೆ ಮತ್ತು ಇತರೆ ಸಂಬಂಧಿತ ಕೆಲಸಗಳನ್ನು ಮಾಡಲಾಗುವುದು. ಭಾರತದ ಸ್ಥಳೀಯ ಹೈ-ಸ್ಪೀಡ್ ರೈಲಿನ ಮೊದಲ ಕೋಚ್ ಸಿದ್ಧಪಡಿಸಿದ್ದು, ವಿವಿಧ ಪರೀಕ್ಷೆಗಳಿಗೆ ಒಳಪಡಿಸಲಾಗುತ್ತಿದೆ. ಆತ್ಮನಿರ್ಭರ ಭಾರತ ಮತ್ತು ಹೈ-ಸ್ಪೀಡ್ ರೈಲು ತಂತ್ರಜ್ಞಾನದ ಹೆಚ್ಚಿನ ದೇಶೀಕರಣದ ಕಡೆಗೆ ದೇಶದ ಪ್ರಯತ್ನಗಳ ಭಾಗವಾಗಿ ರೈಲನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಅವರು ಹೇಳಿದರು.
ಈ ಕಾರ್ಯಕ್ರಮದಲ್ಲಿ ಗುಜರಾತ್ ಸರ್ಕಾರದ ರಾಜ್ಯ ಸಚಿವರಾದ ಶ್ರೀ ತ್ರಿಕಂಭಾಯಿ ಛಂಗಾ, ಸಂಸತ್ ಸದಸ್ಯರಾದ ಶ್ರೀ ವಿನೋದಭಾಯಿ ಚಾವ್ಡಾ, ಶ್ರೀ ಹರಿಭಾಯಿ ಪಟೇಲ್, ಶ್ರೀ ರಾಜುಭಾಯಿ ಶುಕ್ಲಾ, ಶ್ರೀ ಚಂದುಭಾಯಿ ಶಿಹೋರಾ, ಇತರೆ ಅಧಿಕಾರಿಗಳು ಮತ್ತು ಗಣ್ಯರು ಉಪಸ್ಥಿತರಿದ್ದರು.
*****
(ಪ್ರಕಟಣೆ ಐ.ಡಿ.: 2310701)
ವಿಸಿಟರ್ ಕೌಂಟರ್ : 25