ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ
ಪೌರ ಕಾರ್ಮಿಕರಿಂದ ಸ್ವಾವಲಂಬನೆಯತ್ತ: ಯಾಂತ್ರೀಕೃತ ಸ್ವಚ್ಛತಾ ಸೇವೆಯ ಮೂಲಕ ಶ್ರೀ ಹರೀಶ್ ಚಂದ್ರ ಪರ್ಬತ್ ಅವರ ಪಯಣ
ಪ್ರಕಟಣಾ ದಿನಾಂಕ:
13 SEP 2026 1:17PM by PIB Bengaluru
ಯಾಂತ್ರೀಕೃತ ಸ್ವಚ್ಛತಾ ಉಪಕರಣಗಳು ಮತ್ತು ಆರ್ಥಿಕ ನೆರವು ಲಭ್ಯವಾಗುವುದರಿಂದ, ಸ್ವಚ್ಛತಾ ವೃತ್ತಿಯಲ್ಲಿರುವವರು ತಮ್ಮ ಜೀವನೋಪಾಯವನ್ನು ಬಲಪಡಿಸಿಕೊಳ್ಳಲು ಮತ್ತು ಕೌಟುಂಬಿಕ ಜವಾಬ್ದಾರಿಗಳನ್ನು ಪೂರೈಸಲು ಸಾಧ್ಯವಾಗುತ್ತದೆ. ಜೀವನೋಪಾಯ ಅಭಿವೃದ್ಧಿಗೆ ಸಿಗುವ ಬೆಂಬಲವು ಹೇಗೆ ಆದಾಯದ ಅವಕಾಶಗಳನ್ನು ವೃದ್ಧಿಸುತ್ತದೆ ಮತ್ತು ಮುಂದಿನ ಪೀಳಿಗೆಯು ಉನ್ನತ ಶಿಕ್ಷಣವನ್ನು ಪಡೆಯಲು ಹೇಗೆ ಅನುವು ಮಾಡಿಕೊಡುತ್ತದೆ ಎಂಬುದನ್ನು ಶ್ರೀ ಹರೀಶ್ ಚಂದ್ರ ಪರ್ಬತ್ ಅವರ ಪಯಣವು ಪ್ರತಿಬಿಂಬಿಸುತ್ತದೆ.
ಬಿಹಾರದ ಸಿವಾನ್ ಜಿಲ್ಲೆಯವರಾದ 46 ವರ್ಷದ ಪೌರ ವೃತ್ತಿಪರ ಶ್ರೀ ಹರೀಶ್ ಚಂದ್ರ ಪರ್ಬತ್, 'ಸ್ವಚ್ಛತಾ ಉದ್ಯಮಿ ಯೋಜನೆ'ಯ (ಎಸ್ ಯುವೈ) ಅಡಿಯಲ್ಲಿ ಪಡೆದ ನೆರವಿನ ಮೂಲಕ ತಮ್ಮ ಜೀವನೋಪಾಯವನ್ನು ಬಲವರ್ಧನೆಪಡಿಸಿಕೊಂಡಿದ್ದಾರೆ.
ಒಬಿಸಿ/ಗೋಸ್ವಾಮಿ ಸಮುದಾಯಕ್ಕೆ ಸೇರಿದ ಮತ್ತು 12ನೇ ತರಗತಿಯವರೆಗೆ ಶಿಕ್ಷಣ ಪಡೆದಿರುವ ಇವರು, ಪ್ರಸ್ತುತ ಸಾಹಿಬಾಬಾದ್ ಕೈಗಾರಿಕಾ ಪ್ರದೇಶದಲ್ಲಿನ ಗಾಜಿಯಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ವ್ಯಾಪ್ತಿಯಲ್ಲಿ ಸ್ವಚ್ಛತಾ ಸೇವೆಗಾಗಿ ಟ್ರಾಕ್ಟರ್-ಕಮ್-ಸಕ್ಷನ್ (tractor-cum-suction) ಹೀರುವ ಯಂತ್ರವನ್ನು ನಿರ್ವಹಿಸುತ್ತಿದ್ದಾರೆ.
ಉದ್ಯೋಗ ಮತ್ತು ಹೆಚ್ಚು ಸುರಕ್ಷಿತ ಭವಿಷ್ಯದ ಹುಡುಕಾಟದಲ್ಲಿ, ಶ್ರೀ ಪರ್ಬತ್ 2015 ರಲ್ಲಿ ದೆಹಲಿಗೆ ವಲಸೆ ಬಂದರು. ಅವರು ಸ್ವಚ್ಛತೆಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ಕೆಲಸ ಮಾಡಿದರು ಮತ್ತು ಕ್ರಮೇಣ ಒಳಚರಂಡಿ ಹಾಗೂ ಸೆಪ್ಟಿಕ್ ಟ್ಯಾಂಕ್ ನಿರ್ವಹಣಾ ಕಾರ್ಯಗಳಲ್ಲಿ ಪ್ರಾಯೋಗಿಕ ಅನುಭವವನ್ನು ಪಡೆದರು. 2015 ರಿಂದ 2020 ರವರೆಗೆ ಅವರು ಈ ಸೇವೆಗಳಲ್ಲಿ ಕೆಲಸ ಮುಂದುವರಿಸಿದರೂ, ಅವರ ಗಳಿಕೆಯು ಹೆಚ್ಚಾಗಿ ದೈನಂದಿನ ಮನೆಯ ಅಗತ್ಯಗಳಿಗೇ ಖರ್ಚಾಗುತ್ತಿತ್ತು.
ಅವರ ಹಿಂದಿನ ಮಾಸಿಕ ಆದಾಯವು ಸುಮಾರು 13,000 ರೂ.ಗಳಿಂದ 14 ಸಾವಿರ ರೂಪಾಯಿಯಷ್ಟಿದ್ದರಿಂದ, ಮನೆಯ ಖರ್ಚು, ಬಾಡಿಗೆ ಮತ್ತು ಮಕ್ಕಳ ಶೈಕ್ಷಣಿಕ ಅಗತ್ಯಗಳನ್ನು ನಿರ್ವಹಿಸುವುದು ಕಷ್ಟಕರವಾಗಿತ್ತು. ಬಿಹಾರದ ಸಿವಾನ್‌ನಲ್ಲಿ ವಾಸಿಸುತ್ತಿರುವ ತಮ್ಮ ತಾಯಿಯನ್ನು ಆರ್ಥಿಕವಾಗಿ ಬೆಂಬಲಿಸುವ ಜವಾಬ್ದಾರಿಯೂ ಅವರ ಮೇಲಿತ್ತು. ಸೀಮಿತ ಸಂಪನ್ಮೂಲಗಳಿಂದಾಗಿ ಉಳಿತಾಯ ಮಾಡಲು ಅಥವಾ ಜೀವನೋಪಾಯದ ಬೆಳವಣಿಗೆಗಾಗಿ ಹೂಡಿಕೆ ಮಾಡಲು ಹೆಚ್ಚಿನ ಅವಕಾಶವಿರಲಿಲ್ಲ.
ಈ ಸವಾಲುಗಳ ಹೊರತಾಗಿಯೂ, ಶ್ರೀ ಪರ್ಬತ್ ತಮ್ಮ ಕುಟುಂಬದ ಜೀವನಮಟ್ಟ ಸುಧಾರಿಸುವ ದೃಢ ನಿರ್ಧಾರ ಹೊಂದಿದ್ದರು. ಶಿಕ್ಷಣವು ತಮ್ಮ ಮಕ್ಕಳಿಗೆ ಉತ್ತಮ ಭವಿಷ್ಯವನ್ನು ರೂಪಿಸಬಲ್ಲದು ಎಂದು ಅವರು ನಂಬಿದ್ದರು ಮತ್ತು ಮಕ್ಕಳು ಉನ್ನತ ಶಿಕ್ಷಣವನ್ನು ಪಡೆಯಲು ಹಾಗೂ ಯಶಸ್ವಿ ವೃತ್ತಿಜೀವನವನ್ನು ರೂಪಿಸಿಕೊಳ್ಳಲು ಅನುವು ಮಾಡಿಕೊಡುವಂತಹ ಸ್ಥಿರವಾದ ಜೀವನೋಪಾಯ ಸ್ಥಾಪಿಸಲು ಅವರು ಆಶಿಸಿದ್ದರು.
2021ರ ನವೆಂಬರ್ 26 ರಂದು ಬಿಡುಗಡೆಯಾದ ಆರ್ಥಿಕ ನೆರವಿನಿಂದಾಗಿ ಅವರಿಗೆ ಟ್ರಾಕ್ಟರ್-ಕಮ್-ಸಕ್ಷನ್ ಯಂತ್ರವನ್ನು ಖರೀದಿಸಲು ಸಾಧ್ಯವಾಯಿತು. ಒಟ್ಟು ₹9,75,400 ಯೋಜನಾ ವೆಚ್ಚದ ಪೈಕಿ, ಅವರು ₹6,06,550 ಸಾಲ ಮತ್ತು ₹3,68,850 ರಷ್ಟು ಮುಂಗಡ ಬಂಡವಾಳ ಸಹಾಯಧನವನ್ನು (upfront capital subsidy) ಪಡೆದರು. ಈ ಬೆಂಬಲವು ಅವರ ಸ್ವಚ್ಛತಾ ಸೇವಾ ಕಾರ್ಯಗಳನ್ನು ಬಲಪಡಿಸಲು ಮತ್ತು ಆದಾಯ ಗಳಿಕೆಯ ಸಾಮರ್ಥ್ಯ ವೃದ್ಧಿಸಲು ಸಹಾಯ ಮಾಡಿತು.

ಯಾಂತ್ರಿಕ ಉಪಕರಣಗಳ ಲಭ್ಯತೆಯಿಂದಾಗಿ, ಶ್ರೀ ಪರ್ಬತ್ ಅವರ ಮಾಸಿಕ ಆದಾಯವು ಸುಮಾರು 40,000 ರೂ.ಗಳಿಂದ 45,000 ರೂಪಾಯಿಗೆ ಏರಿಕೆಯಾಯಿತು. ಈ ಸುಧಾರಣೆಯು ಅವರಿಗೆ ತಮ್ಮ ಕೌಟುಂಬಿಕ ಜವಾಬ್ದಾರಿಗಳನ್ನು ಉತ್ತಮವಾಗಿ ನಿರ್ವಹಿಸಲು ಮತ್ತು ಮಕ್ಕಳ ಶಿಕ್ಷಣದಲ್ಲಿ ಹೂಡಿಕೆ ಮಾಡಲು ಸಾಧ್ಯವಾಗಿಸಿತು. 2022 ರಲ್ಲಿ, ಅವರು ತಮ್ಮ ಪತ್ನಿ ಮತ್ತು ಮಕ್ಕಳನ್ನು ದೆಹಲಿಗೆ ಕರೆತಂದರು, ಇದರಿಂದಾಗಿ ಕುಟುಂಬವು ಒಟ್ಟಿಗೆ ವಾಸಿಸಲು ಮತ್ತು ಉತ್ತಮ ಶೈಕ್ಷಣಿಕ ಅವಕಾಶಗಳನ್ನು ಪಡೆಯಲು ಸಾಧ್ಯವಾಯಿತು.
ಇಂದು ಅವರ ಹಿರಿಯ ಮಗ ಪದವಿಯ ಅಂತಿಮ ವರ್ಷದಲ್ಲಿದ್ದಾನೆ, ಎರಡನೇ ಮಗ ಬಿ.ಟೆಕ್ ದ್ವಿತೀಯ ವರ್ಷದಲ್ಲಿ ಓದುತ್ತಿದ್ದಾನೆ ಮತ್ತು ಮಗಳು ಬಿ.ಟೆಕ್ ಪ್ರಥಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಈ ಮೂವರು ಮಕ್ಕಳೂ ದೆಹಲಿಯಲ್ಲೇ ಓದುತ್ತಿದ್ದಾರೆ. ಗೃಹಿಣಿಯಾಗಿರುವ ಅವರ ಪತ್ನಿ ಮನೆಯ ಜವಾಬ್ದಾರಿಗಳನ್ನು ನಿರ್ವಹಿಸುತ್ತಾರೆ.
ಶ್ರೀ ಪರ್ಬತ್ ಅವರು ಶಿಕ್ಷಣ ಮತ್ತು ಮನೆಯ ಖರ್ಚುಗಳ ಜೊತೆಗೆ, ಸುಮಾರು 12,000 ರೂ. ಮಾಸಿಕ ಬಾಡಿಗೆ ಮತ್ತು 13,500 ರೂ.ಸಾಲದ ಕಂತನ್ನು ಪಾವತಿಸುವುದನ್ನು ಮುಂದುವರಿಸಿದ್ದಾರೆ. ಅಲ್ಲದೆ ಸಿವಾನ್‌ನಲ್ಲಿರುವ ತಮ್ಮ ತಾಯಿಯ ನಿರ್ವಹಣೆಗಾಗಿ ಅವರು ಪ್ರತಿ ತಿಂಗಳು ಸುಮಾರು 3,000 ರೂ. ಹಣವನ್ನು ಕಳುಹಿಸುತ್ತಾರೆ. 2026 ರ ಮೇ 27 ಹೊತ್ತಿಗೆ, ಅವರ ಬಾಕಿ ಸಾಲದ ಮೊತ್ತವು 1,27,490 ರೂಪಾಯಿ ಆಗಿತ್ತು. ಈ ಆರ್ಥಿಕ ಬದ್ಧತೆಗಳು ಅವರ ಉಳಿತಾಯವನ್ನು ಮಿತಿಗೊಳಿಸಿದರೂ, ಸುಧಾರಿತ ಆದಾಯವು ಅವರ ಕುಟುಂಬವನ್ನು ಪೋಷಿಸುವ ಮತ್ತು ಸಾಲವನ್ನು ಮರುಪಾವತಿಸುವ ಸಾಮರ್ಥ್ಯ ಬಲಪಡಿಸಿದೆ.
ತಮ್ಮ ಪ್ರಗತಿಯ ಕುರಿತು ಮಾತನಾಡುತ್ತಾ ಶ್ರೀ ಪರ್ಬತ್ ಹೀಗೆ ಹೇಳಿದರು: "ನನ್ನ ಮಕ್ಕಳು ಉನ್ನತ ಶಿಕ್ಷಣ ಪಡೆಯುತ್ತಿರುವುದನ್ನು ಮತ್ತು ಉಜ್ವಲ ಭವಿಷ್ಯದತ್ತ ಸಾಗುತ್ತಿರುವುದನ್ನು ನೋಡುವುದೇ ನನ್ನ ಜೀವನದ ಅತಿದೊಡ್ಡ ಸಾಧನೆ. ಇಂದು, ನಾನು ಕ್ರಮೇಣ ನನ್ನ ಸಾಲವನ್ನು ಮರುಪಾವತಿಸುತ್ತಿದ್ದೇನೆ ಮತ್ತು ಆತ್ಮವಿಶ್ವಾಸ ಹಾಗೂ ಘನತೆಯಿಂದ ಮುನ್ನಡೆಯುತ್ತಿದ್ದೇನೆ."
ಶ್ರೀ ಹರೀಶ್ ಚಂದ್ರ ಪರ್ಬತ್ ಅವರ ಈ ಪಯಣವು, ಆರ್ಥಿಕ ಸ್ವಾವಲಂಬನೆಯನ್ನು ಬೆಂಬಲಿಸುವಲ್ಲಿ ಜೀವನೋಪಾಯದ ನೆರವು ಮತ್ತು ಯಾಂತ್ರಿಕ ನೈರ್ಮಲ್ಯ ಉಪಕರಣಗಳ ಪಾತ್ರವನ್ನು ಉಲ್ಲೇಖಿಸುತ್ತದೆ. ಅವರ ಪ್ರಗತಿಯು ಕುಟುಂಬದ ಆರ್ಥಿಕ ಸ್ಥಿತಿಯನ್ನು ಬಲಪಡಿಸಿದೆ ಮತ್ತು ಅವರ ಮೂವರು ಮಕ್ಕಳಿಗೂ ಉನ್ನತ ಶಿಕ್ಷಣವನ್ನು ಪಡೆಯುವ ಅವಕಾಶಗಳನ್ನು ಸೃಷ್ಟಿಸಿದೆ.
*****
(ಪ್ರಕಟಣೆ ಐ.ಡಿ.: 2310324)
ವಿಸಿಟರ್ ಕೌಂಟರ್ : 11