ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ
azadi ka amrit mahotsav

ಹಿರಿಯ ನಾಗರಿಕರ ಕಲ್ಯಾಣ, ಆರೋಗ್ಯ ರಕ್ಷಣೆ ಮತ್ತು ಗೌರವಯುವ ಜೀವನಕ್ಕೆ ಬೆಂಬಲ ಬಲವರ್ಧನೆ



ಅಗತ್ಯ ಆರೈಕೆ ಮತ್ತು ನೆರವಿನ ಸೇವೆಗಳಿಂದ 2.88 ಲಕ್ಷಕ್ಕೂ ಅಧಿಕ ಹಿರಿಯ ನಾಗರಿಕರಿಗೆ ಪ್ರಯೋಜನ; 142 ಹೊಸ ಹಿರಿಯ ನಾಗರಿಕರ ವಸತಿ ಗೃಹಗಳಿಗೆ  ಅನುಮೋದನೆ

228 ಶಿಬಿರಗಳ ಮೂಲಕ 4.91 ಲಕ್ಷಕ್ಕೂ ಅಧಿಕ ಫಲಾನುಭವಿಗಳಿಗೆ ಸೇವೆ; ಸುಮಾರು 23.93 ಲಕ್ಷ ಉಚಿತ ಸಹಾಯಕ ಸಾಧನಗಳ ವಿತರಣೆ

ಪ್ರಕಟಣಾ ದಿನಾಂಕ: 13 SEP 2026 12:31PM by PIB Bengaluru

 

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಹಿರಿಯ ನಾಗರಿಕರ ಕಲ್ಯಾಣ, ರಕ್ಷಣೆ, ಆರೋಗ್ಯ ರಕ್ಷಣೆ ಮತ್ತು ಗೌರವಯುತ ಜೀವನವನ್ನು ಬಲವರ್ಧನೆಗೊಳಿಸಲು ನಿರಂತರ ಕ್ರಮಗಳನ್ನು ಕೈಗೊಳ್ಳುತ್ತಿದೆ. ಈ ಪ್ರಯತ್ನಗಳು ಸಾಂಸ್ಥಿಕ ಆರೈಕೆಯನ್ನು ವಿಸ್ತರಿಸುವುದು, ಅಗತ್ಯ ಸೇವೆಗಳನ್ನು ಒದಗಿಸುವುದು ಮತ್ತು ಹಿರಿಯರಿಗೆ ದೈನಂದಿನ ಜೀವನಕ್ಕೆ ಸಹಾಯಕವಾಗುವ ಸಾಧನಗಳ ಲಭ್ಯತೆಯನ್ನು ಸುಧಾರಿಸುವುದರ ಮೇಲೆ ಕೇಂದ್ರೀಕರಿಸುತ್ತವೆ.

ವಿವರಗಳನ್ನು ನೀಡಿದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಕಾರ್ಯದರ್ಶಿ ಶ್ರೀ ಸುಧಾಂಶು ಪಂತ್ ಅವರು, ವಸತಿ, ಪೌಷ್ಟಿಕ ಆಹಾರ, ಆರೋಗ್ಯ ಸೇವೆಗಳು, ಫಿಸಿಯೋಥೆರಪಿ, ಮನರಂಜನೆ ಮತ್ತು ಇತರ ಅಗತ್ಯ ಬೆಂಬಲ ಸೌಲಭ್ಯಗಳ ಮೂಲಕ 2.88 ಲಕ್ಷಕ್ಕೂ ಅಧಿಕ ಹಿರಿಯ ನಾಗರಿಕರು ಪ್ರಯೋಜನ ಪಡೆದಿದ್ದಾರೆ ಎಂದು ಹೇಳಿದರು. ಈ ಸೇವೆಗಳು ಅವರ ದೈನಂದಿನ ಅಗತ್ಯಗಳನ್ನು ಪೂರೈಸುವುದಲ್ಲದೆ, ಅವರ ದೈಹಿಕ ಕ್ಷೇಮ ಮತ್ತು ಜೀವನದ ಗುಣಮಟ್ಟವನ್ನು ಹೆಚ್ಚಿಸಲು ಸಹಕಾರಿಯಾಗಿವೆ.

ಸಾಂಸ್ಥಿಕ ಆರೈಕೆ ಮತ್ತು ಬೆಂಬಲ ಮೂಲಸೌಕರ್ಯವನ್ನು ವಿಸ್ತರಿಸಲು ದೇಶದ ವಿವಿಧ ಭಾಗಗಳಲ್ಲಿ 142 ಹೊಸ ಹಿರಿಯ ನಾಗರಿಕರ ವಸತಿ ಗೃಹಗಳಿಗೆ ಅನುಮೋದನೆ ನೀಡಲಾಗಿದೆ ಎಂದು ಅವರು ತಿಳಿಸಿದರು. ಈ ಹೆಚ್ಚುವರಿ ವಸತಿ ಗೃಹಗಳು ಹಿರಿಯರಿಗೆ ಆರೈಕೆ ಮತ್ತು ಅಗತ್ಯ ಬೆಂಬಲದ ಲಭ್ಯತೆಯನ್ನು ಬಲಪಡಿಸುತ್ತವೆ ಎಂದು ಅವರು ಹೇಳಿದರು.

ಸಹಜ ಚಲನವಲನ ಮತ್ತು ಸ್ವತಂತ್ರ ಜೀವನವನ್ನು ಉತ್ತೇಜಿಸಲು, 228 ಶಿಬಿರಗಳನ್ನು ಆಯೋಜಿಸಿ 4.91 ಲಕ್ಷಕ್ಕೂ ಅಧಿಕ ಫಲಾನುಭವಿಗಳಿಗೆ ಸೇವೆ ಒದಗಿಸಲಾಗಿದೆ ಮತ್ತು ಸುಮಾರು 23.93 ಲಕ್ಷ ಉಚಿತ ಸಹಾಯಕ ಸಾಧನಗಳನ್ನು ವಿತರಿಸಲಾಗಿದೆ ಎಂದು ಕಾರ್ಯದರ್ಶಿ ತಿಳಿಸಿದರು. ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ವರ್ಗಗಳು ಮತ್ತು ಕಡಿಮೆ ಆದಾಯದ ಗುಂಪುಗಳಿಗೆ ಸೇರಿದ ಅರ್ಹ ಹಿರಿಯ ನಾಗರಿಕರಿಗೆ ವ್ಹೀಲ್‌ಚೇರ್‌ಗಳು, ಶ್ರವಣ ಸಾಧನಗಳು, ವಾಕಿಂಗ್ ಸ್ಟಿಕ್‌ಗಳು (ಊರುಗೋಲುಗಳು) ಮತ್ತು ಕನ್ನಡಕಗಳನ್ನು ಇದರಲ್ಲಿ ವಿತರಿಸಲಾಗಿದೆ. ಇವು ಅವರ ಚಲನಶೀಲತೆ, ಸಂವಹನ ಮತ್ತು ದೈನಂದಿನ ಚಟುವಟಿಕೆಗಳಲ್ಲಿ ಭಾಗವಹಿಸುವಿಕೆಗೆ ನೆರವಾಗುತ್ತವೆ ಎಂದು ಅವರು ಹೇಳಿದರು.

ಮಾಹಿತಿ ಲಭ್ಯತೆಯನ್ನು ಮತ್ತಷ್ಟು ಬಲಪಡಿಸಲು, ಭಾರತದ ಗೌರವಾನ್ವಿತ ರಾಷ್ಟ್ರಪತಿಗಳು 'ಹಿರಿಯ ನಾಗರಿಕರ ಕಲ್ಯಾಣ ಪೋರ್ಟಲ್ ಅನ್ನು ಆರಂಭಿಸಿದ್ದಾರೆ ಎಂದು ಶ್ರೀ ಪಂತ್ ತಿಳಿಸಿದರು. ಇದು ಹಿರಿಯ ನಾಗರಿಕರ ಕಲ್ಯಾಣಕ್ಕೆ ಸಂಬಂಧಿಸಿದ ಮಾಹಿತಿಯನ್ನು ಪಡೆಯಲು ಸಾಮಾನ್ಯ ವೇದಿಕೆಯನ್ನು ಒದಗಿಸುವ ಮೂಲಕ, ಮಾಹಿತಿ ಪ್ರಸಾರಕ್ಕೆ 'ಒಂದು-ನಿಲುಗಡೆ ಪರಿಹಾರ'ವಾಗಿ (one-stop solution) ಕಾರ್ಯನಿರ್ವಹಿಸುತ್ತದೆ.

ಸುಲಭವಾಗಿ ಲಭ್ಯವಿರುವ ಆರೈಕೆ, ಸುಧಾರಿತ ಕಲ್ಯಾಣ ಮೂಲಸೌಕರ್ಯ ಮತ್ತು ಗೌರವಯುತ ಹಾಗೂ ಸ್ವತಂತ್ರ ಜೀವನ ನಡೆಸಲು ನೆರವಾಗುವಂತಹ ಸಹಾಯದ ಮೂಲಕ ಹಿರಿಯ ನಾಗರಿಕರನ್ನು ಬೆಂಬಲಿಸುವ ಸಚಿವಾಲಯದ ಬದ್ಧತೆಯನ್ನು ಈ ಕ್ರಮಗಳು ಬಲಪಡಿಸುತ್ತವೆ ಎಂದು ಕಾರ್ಯದರ್ಶಿ ಹೇಳಿದರು.

 

*****


(ಪ್ರಕಟಣೆ ಐ.ಡಿ.: 2310320) ವಿಸಿಟರ್ ಕೌಂಟರ್ : 7
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Tamil