ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ
ಪೌರ ಕಾರ್ಮಿಕರ ಸುರಕ್ಷತೆ, ಕಲ್ಯಾಣ ಮತ್ತು ಘನತೆಯನ್ನು ಬಲಪಡಿಸುತ್ತಿರುವ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ
ಒಳಚರಂಡಿ ಮತ್ತು ಸೆಪ್ಟಿಕ್ ಟ್ಯಾಂಕ್ ಸ್ವಚ್ಛಗೊಳಿಸುವ 87,037 ಕಾರ್ಮಿಕರಿಗೆ ಪಿಪಿಇ ಕಿಟ್‌ಗಳ ಒದಗಿಸಲಾಗಿದೆ; ನೈರ್ಮಲ್ಯ ವಾಹನಗಳ ಖರೀದಿಗೆ ಬೆಂಬಲವಾಗಿ 34.17 ಕೋಟಿ ರೂ.ಗಳ ಬಂಡವಾಳ ಸಹಾಯಧನವನ್ನು ಬಿಡುಗಡೆ
ಜೂನ್ 2024 ರಿಂದ ಈ ಯೋಜನೆಯಡಿ ತ್ಯಾಜ್ಯ ಆಯುವವರ (waste pickers) ಸೇರ್ಪಡೆ; ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಒಟ್ಟು 3,78,547 ಮಂದಿಯ ವಿವರಗಳನ್ನು ದಾಖಲು (ಪ್ರೊಫೈಲಿಂಗ್)
ಪ್ರಕಟಣಾ ದಿನಾಂಕ:
13 SEP 2026 12:14PM by PIB Bengaluru
ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಕಾರ್ಮಿಕರ ವಿವರಗಳ ದಾಖಲಾತಿ (ಪ್ರೊಫೈಲಿಂಗ್), ರಕ್ಷಣಾ ಸಾಧನಗಳ ಪೂರೈಕೆ, ಆರೋಗ್ಯ ವಿಮಾ ರಕ್ಷಣೆ, ಆರ್ಥಿಕ ನೆರವು ಮತ್ತು ಸುರಕ್ಷತಾ ಮೂಲಸೌಕರ್ಯಗಳ ಬಲವರ್ಧನೆಯ ಮೂಲಕ ಪೌರ ಕಾರ್ಮಿಕರ ಕಲ್ಯಾಣ ಮತ್ತು ಘನತೆಗಾಗಿ ಕ್ರಮಗಳನ್ನು ಕೈಗೊಳ್ಳುತ್ತಿದೆ.
ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಕಾರ್ಯದರ್ಶಿ ಶ್ರೀ ಸುಧಾಂಶು ಪಂತ್ ಅವರು, ಒಳಚರಂಡಿ ಮತ್ತು ಸೆಪ್ಟಿಕ್ ಟ್ಯಾಂಕ್ ಸ್ವಚ್ಛಗೊಳಿಸುವ ಒಟ್ಟು 90,942 ಕಾರ್ಮಿಕರ ವಿವರಗಳನ್ನು ದಾಖಲಿಸಲಾಗಿದೆ ಮತ್ತು ಅವರಲ್ಲಿ 89,248 ಮಂದಿಯ ವಿವರಗಳನ್ನು ಪರಿಶೀಲಿಸಿ ದೃಢೀಕರಿಸಲಾಗಿದೆ ಎಂದು ತಿಳಿಸಿದರು. 87,037 ಕಾರ್ಮಿಕರಿಗೆ ವೈಯಕ್ತಿಕ ರಕ್ಷಣಾ ಸಾಧನಗಳ (ಪಿಪಿಇ) ಕಿಟ್‌ಗಳನ್ನು ಒದಗಿಸಲಾಗಿದೆ ಮತ್ತು 76,247 ಕಾರ್ಮಿಕರನ್ನು ವಿವಿಧ ಆರೋಗ್ಯ ವಿಮಾ ಯೋಜನೆಗಳ ವ್ಯಾಪ್ತಿಗೆ ತರಲಾಗಿದೆ; ಈ ಯೋಜನೆಗಳು ಸುರಕ್ಷಿತ ದುಡಿಯುವ ಪರಿಸ್ಥಿತಿಗಳು ಮತ್ತು ಆರೋಗ್ಯ ರಕ್ಷಣೆಯ ಸೌಲಭ್ಯವನ್ನು ಪಡೆಯಲು ನೆರವಾಗುತ್ತವೆ ಎಂದು ಅವರು ಹೇಳಿದರು.

ನೈರ್ಮಲ್ಯ ವಾಹನಗಳ ಲಭ್ಯತೆಯನ್ನು ಸುಲಭಗೊಳಿಸಲು, 364 ವಾಹನಗಳ ಖರೀದಿಗೆ 983 ನೈರ್ಮಲ್ಯ ಕಾರ್ಮಿಕರಿಗೆ 34.17 ಕೋಟಿ ರೂ.ಗಳ ಮುಂಗಡ ಬಂಡವಾಳ ಸಹಾಯಧನವನ್ನು ಬಿಡುಗಡೆ ಮಾಡಲಾಗಿದೆ ಎಂದು ಕಾರ್ಯದರ್ಶಿ ತಿಳಿಸಿದರು. ಈ ನೆರವು ಯಾಂತ್ರಿಕೃತ ನೈರ್ಮಲ್ಯ ಕಾರ್ಯಾಚರಣೆಗಳಿಗೆ ಮತ್ತು ಕಾರ್ಮಿಕರ ಜೀವನೋಪಾಯದ ಅವಕಾಶಗಳಿಗೆ ಬೆಂಬಲ ನೀಡುತ್ತದೆ ಎಂದು ಅವರು ಹೇಳಿದರು.
ಸುರಕ್ಷತಾ ಮೂಲಸೌಕರ್ಯವನ್ನು ಮತ್ತಷ್ಟು ಬಲಪಡಿಸಲು, ದೊಡ್ಡ ಪುರಸಭೆಗಳು ಮತ್ತು ಜಿಲ್ಲೆಗಳಲ್ಲಿ ಸ್ಥಾಪಿಸಲಾದ ತುರ್ತು ಪ್ರತಿಕ್ರಿಯೆ ನೈರ್ಮಲ್ಯ ಘಟಕಗಳಿಗೆ (ERSUs) 753 ಸುರಕ್ಷತಾ ಸಾಧನಗಳನ್ನು ಕಳುಹಿಸಲಾಗಿದೆ ಎಂದು ಶ್ರೀ ಪಂತ್ ತಿಳಿಸಿದರು.
ಆರ್ಥಿಕ ಮತ್ತು ಕಲ್ಯಾಣ ಬೆಂಬಲದ ಜೊತೆಗೆ, ದೇಶಾದ್ಯಂತ ಒಳಚರಂಡಿ ಮತ್ತು ಸೆಪ್ಟಿಕ್ ಟ್ಯಾಂಕ್‌ಗಳ ಅಪಾಯಕಾರಿ ಸ್ವಚ್ಛತೆಯನ್ನು ತಡೆಗಟ್ಟುವ ಕುರಿತು 1,562 ಕಾರ್ಯಾಗಾರಗಳನ್ನು ನಡೆಸಲಾಗಿದೆ ಎಂದು ಅವರು ಹೇಳಿದರು.
ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಘನತ್ಯಾಜ್ಯ ನಿರ್ವಹಣೆಯಲ್ಲಿ ತೊಡಗಿರುವ ತ್ಯಾಜ್ಯ ಆಯುವವರನ್ನೂ ಸೇರಿಸಿಕೊಳ್ಳುವ ಮೂಲಕ ಜೂನ್ 2024 ರಲ್ಲಿ ಈ ಯೋಜನೆಯ ವ್ಯಾಪ್ತಿಯನ್ನು ವಿಸ್ತರಿಸಲಾಗಿದೆ ಮತ್ತು ಈ ಮೂಲಕ ಈ ವರ್ಗದ ಕಾರ್ಮಿಕರಿಗೂ ಕಲ್ಯಾಣ ಹಾಗೂ ಸುರಕ್ಷತಾ ಬೆಂಬಲವನ್ನು ಒದಗಿಸಲಾಗಿದೆ ಎಂದು ಕಾರ್ಯದರ್ಶಿ ತಿಳಿಸಿದರು.
ಒಟ್ಟು 3,78,547 ತ್ಯಾಜ್ಯ ಆಯುವವರ ವಿವರಗಳನ್ನು ದಾಖಲಿಸಲಾಗಿದೆ ಮತ್ತು ಅವರಲ್ಲಿ 2,52,163 ಮಂದಿಯ ವಿವರಗಳನ್ನು ಇ-ಕೆವೈಸಿ (e-KYC) ಮೂಲಕ ದೃಢೀಕರಿಸಲಾಗಿದೆ ಎಂದು ಶ್ರೀ ಪಂತ್ ವಿವರಿಸಿದರು. ಸುಮಾರು 1,31,864 ತ್ಯಾಜ್ಯ ಸಂಗ್ರಹಕಾರರು ಪಿಪಿಇ (PPE) ಕಿಟ್‌ಗಳನ್ನು ಪಡೆದಿದ್ದಾರೆ ಮತ್ತು 1,24,835 ತ್ಯಾಜ್ಯ ಸಂಗ್ರಹಕಾರರ ಮಾಹಿತಿಯನ್ನು ಆಯುಷ್ಮಾನ್ ಕಾರ್ಡ್‌ಗಳ ವಿತರಣೆಗಾಗಿ ಸಂಸ್ಕರಿಸಲಾಗಿದೆ ಎಂದು ಅವರು ತಿಳಿಸಿದರು.
ನೈರ್ಮಲ್ಯ ಮತ್ತು ಘನತ್ಯಾಜ್ಯ ನಿರ್ವಹಣೆಯಲ್ಲಿ ತೊಡಗಿರುವ ಕಾರ್ಮಿಕರ ವೃತ್ತಿಪರ ಸುರಕ್ಷತೆಯನ್ನು ಬಲಪಡಿಸಲು, ಕಲ್ಯಾಣ ಸೌಲಭ್ಯಗಳ ಲಭ್ಯತೆಯನ್ನು ಸುಧಾರಿಸಲು ಮತ್ತು ಅವರ ಘನತೆಯನ್ನು ಎತ್ತಿಹಿಡಿಯಲು ಸಚಿವಾಲಯವು ಕೈಗೊಂಡಿರುವ ಪ್ರಯತ್ನಗಳನ್ನು ಈ ಕ್ರಮಗಳು ಪ್ರತಿಬಿಂಬಿಸುತ್ತವೆ ಎಂದು ಶ್ರೀ ಪಂತ್ ವಿಶ್ವಾಸ ವ್ಯಕ್ತಪಡಿಸಿದರು.
*****
(ಪ್ರಕಟಣೆ ಐ.ಡಿ.: 2310318)
ವಿಸಿಟರ್ ಕೌಂಟರ್ : 5