ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
azadi ka amrit mahotsav

ಸೆಪ್ಟೆಂಬರ್ 17 ರಂದು ‘ಸೆಮಿಕಾನ್ ಇಂಡಿಯಾ-2026’ರ ಐದನೇ ಆವೃತ್ತಿಯನ್ನು ಉದ್ಘಾಟಿಸಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ



ಸೆಪ್ಟೆಂಬರ್ 17-19 ರವರೆಗೆ ನವದೆಹಲಿಯ ‘ಯಶೋಭೂಮಿ’ಯಲ್ಲಿ ಭಾರತದ ಅತಿದೊಡ್ಡ ಸೆಮಿಕಂಡಕ್ಟರ್ ಮತ್ತು ಎಲೆಕ್ಟ್ರಾನಿಕ್ಸ್ ಕಾರ್ಯಕ್ರಮ ನಡೆಯಲಿದೆ

‘ಸೆಮಿಕಾನ್ ಇಂಡಿಯಾ-2026’ರಲ್ಲಿ 600 ಕ್ಕೂ ಹೆಚ್ಚು ಪ್ರದರ್ಶಕರು, 300 ಅಂತಾರಾಷ್ಟ್ರೀಯ ಕಂಪನಿಗಳು ಮತ್ತು 40ಕ್ಕೂ ಹೆಚ್ಚು ದೇಶಗಳ ನಿಯೋಗಗಳು ಭಾಗವಹಿಸಲಿವೆ

'ಸಿಲಿಕಾನ್‌ನಿಂದ ಸಿಸ್ಟಮ್ಸ್‌ಗೆ: ಪರಿಸರ ವ್ಯವಸ್ಥೆಯ ನಿರ್ಮಾಣ' ಎಂಬ ಧ್ಯೇಯವಾಕ್ಯದಡಿ ಸೆಮಿಕಂಡಕ್ಟರ್ ಮೌಲ್ಯ ಸರಪಳಿಯಾದ್ಯಂತ ಭಾರತದ ಬೆಳೆಯುತ್ತಿರುವ ಸಾಮರ್ಥ್ಯಗಳ ಪ್ರದರ್ಶನ

ಪ್ರಕಟಣಾ ದಿನಾಂಕ: 14 SEP 2026 12:44PM by PIB Bengaluru

ಭಾರತದ ಪ್ರಮುಖ ಸೆಮಿಕಂಡಕ್ಟರ್ ಮತ್ತು ಎಲೆಕ್ಟ್ರಾನಿಕ್ಸ್ ಸಮ್ಮೇಳನ ಮತ್ತು ಪ್ರದರ್ಶನವಾದ ‘ಸೆಮಿಕಾನ್ ಇಂಡಿಯಾ-2026’ರ ಐದನೇ ಆವೃತ್ತಿಯು 2026ರ ಸೆಪ್ಟೆಂಬರ್ 17 ರಿಂದ 19 ರವರೆಗೆ ನವದೆಹಲಿಯ ‘ಯಶೋಭೂಮಿ’ಯಲ್ಲಿ ನಡೆಯಲಿದೆ.  ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 17, 2026 ರಂದು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಇದು ಉನ್ನತ ಮಟ್ಟದ ಚರ್ಚೆಗಳು, ಉದ್ಯಮದ ತೊಡಗಿಸಿಕೊಳ್ಳುವಿಕೆ ಮತ್ತು ಭಾರತದ ವೇಗವಾಗಿ ವಿಸ್ತರಿಸುತ್ತಿರುವ ಸೆಮಿಕಂಡಕ್ಟರ್ ಮತ್ತು ಎಲೆಕ್ಟ್ರಾನಿಕ್ಸ್ ಪರಿಸರ ವ್ಯವಸ್ಥೆಯ ಪ್ರದರ್ಶನದ ಮೂರು ದಿನಗಳ ಕಾರ್ಯಕ್ರಮದ ಆರಂಭವನ್ನು ಸೂಚಿಸುತ್ತದೆ.

ಭಾರತ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಇಂಡಿಯಾ ಸೆಮಿಕಂಡಕ್ಟರ್ ಮಿಷನ್’(ಐಎಸ್ಎಂ) ಮತ್ತು ಜಾಗತಿಕ ಉದ್ಯಮ ಸಂಘವಾದ ‘ಎಸ್‌ಇಎಂಐ’  ಜಂಟಿಯಾಗಿ ಇದನ್ನು ಆಯೋಜಿಸಿವೆ. ‘ಸೆಮಿಕಾನ್ ಇಂಡಿಯಾ-2026’ ಜಾಗತಿಕ ಸೆಮಿಕಂಡಕ್ಟರ್ ಮತ್ತು ಎಲೆಕ್ಟ್ರಾನಿಕ್ಸ್ ಕಂಪನಿಗಳು, ಉದ್ಯಮದ ನಾಯಕರು, ನೀತಿ ನಿರೂಪಕರು, ಹೂಡಿಕೆದಾರರು, ಸಂಶೋಧಕರು, ಶಿಕ್ಷಣ ತಜ್ಞರು, ನವೋದ್ಯಮಗಳು, ಮತ್ತು ವಿದ್ಯಾರ್ಥಿಗಳನ್ನು ಒಂದೇ ವೇದಿಕೆಯಲ್ಲಿ ಒಟ್ಟುಗೂಡಿಸಿ ವಿಚಾರ ವಿನಿಮಯ, ಪಾಲುದಾರಿಕೆಗಳ ನಿರ್ಮಾಣ ಮತ್ತು ಭಾರತದ ಸೆಮಿಕಂಡಕ್ಟರ್ ಮತ್ತು ಎಲೆಕ್ಟ್ರಾನಿಕ್ಸ್ ಪರಿಸರ ವ್ಯವಸ್ಥೆಯ ಭವಿಷ್ಯವನ್ನು ರೂಪಿಸಲು ನೆರವಾಗಲಿದೆ.

"ಸಿಲಿಕಾನ್ ಟು ಸಿಸ್ಟಮ್ಸ್: ಬಿಲ್ಡಿಂಗ್ ದಿ ಇಕೋಸಿಸ್ಟಮ್" ಎಂಬ ಧ್ಯೇಯವಾಕ್ಯದೊಂದಿಗೆ,  ‘ಸೆಮಿಕಾನ್ ಇಂಡಿಯಾ-2026’ ಭಾರತದ ಸೆಮಿಕಂಡಕ್ಟರ್ ಪ್ರಯಾಣದಲ್ಲಿ ಒಂದು ಪ್ರಮುಖ ಮೈಲುಗಲ್ಲಾಗಿದೆ. ಬಲವಾದ ಮತ್ತು ಕ್ಷಿಪ್ರ ನೀತಿ, ಬೆಳೆಯುತ್ತಿರುವ ಉದ್ಯಮದ ಕಾರ್ಯಗತಗೊಳಿಸುವಿಕೆ, ವಿಶ್ವಾಸಾರ್ಹ ಮತ್ತು ಸದೃಢ ಸೆಮಿಕಂಡಕ್ಟರ್ ಪೂರೈಕೆ ಸರಪಳಿಗಳಿಗೆ ಹೆಚ್ಚುತ್ತಿರುವ ಜಾಗತಿಕ ಬೇಡಿಕೆಯು ಜಾಗತಿಕ ಸೆಮಿಕಂಡಕ್ಟರ್ ಮೌಲ್ಯ ಸರಪಳಿಯಲ್ಲಿ ಭಾರತವನ್ನು ಹೆಚ್ಚು ಪ್ರಮುಖ ಪಾತ್ರಧಾರಿಯನ್ನಾಗಿ ನಿಲ್ಲಿಸಲು ಇದು ಸಹಾಯಕವಾಗಲಿದೆ.

ಇವೆಲ್ಲವೂ ‘ಸೆಮಿಕಾನ್ ಇಂಡಿಯಾ-2026’ ಅನ್ನು ಕೇವಲ ಒಂದು ಪ್ರದರ್ಶನಕ್ಕಿಂತ ಮಿಗಿಲಾಗಿರಿಸಿದೆ. ಮೂರು ದಿನಗಳ ಕಾಲ ‘ಯಶೋಭೂಮಿ’ಯಲ್ಲಿ 15,000 ಚದರ ಮೀಟರ್ ವಿಸ್ತೀರ್ಣದಲ್ಲಿ, 300 ಅಂತಾರಾಷ್ಟ್ರೀಯ ಕಂಪನಿಗಳು ಸೇರಿದಂತೆ 600ಕ್ಕೂ ಹೆಚ್ಚು ಪ್ರದರ್ಶಕರು ಮತ್ತು 150ಕ್ಕೂ ಹೆಚ್ಚು ಖ್ಯಾತ ವಾಗ್ಮಿಗಳು ತಮ್ಮ ಜ್ಞಾನ, ಅನುಭವ ಮತ್ತು ಒಳನೋಟಗಳನ್ನು ಹಂಚಿಕೊಳ್ಳಲಿದ್ದಾರೆ. ಆರು ದೇಶಗಳ ಪೆವಿಲಿಯನ್‌ಗಳು ಮತ್ತು 12 ರಾಜ್ಯ ಪೆವಿಲಿಯನ್‌ಗಳ ಜೊತೆಗೆ ನವೋದ್ಯಮ ಪ್ರದರ್ಶನ, ವಿದ್ಯಾರ್ಥಿ ಹ್ಯಾಕಥಾನ್, ಕಾರ್ಯಪಡೆ ಅಭಿವೃದ್ಧಿ ಪೆವಿಲಿಯನ್‌ ಹಾಗೂ ಮಹಿಳಾ ವೇದಿಕೆಗಳು ಭಾರತವು ಕಳೆದ ಐದು ವರ್ಷಗಳಲ್ಲಿ ನಿರ್ಮಿಸುತ್ತಿರುವ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಯ ವಿವಿಧ ಭಾಗಗಳನ್ನು ಅನಾವರಣಗೊಳಿಸಲಿವೆ.

ಭಾರತದ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಯನ್ನು ಪ್ರದರ್ಶ

‘ಸೆಮಿಕಾನ್ ಇಂಡಿಯಾ-2026’ ಸಮಗ್ರ ಮೌಲ್ಯ-ಸರಪಳಿ ವಿಧಾನವನ್ನು ಅಳವಡಿಸಿಕೊಳ್ಳಲಿದ್ದು, ಸೆಮಿಕಂಡಕ್ಟರ್ ವಸ್ತುಗಳು ಮತ್ತು ಉತ್ಪಾದನೆಯಿಂದ ಹಿಡಿದು ಸುಧಾರಿತ ಪ್ಯಾಕೇಜಿಂಗ್, ವಿನ್ಯಾಸ, ಎಲೆಕ್ಟ್ರಾನಿಕ್ಸ್ ಮತ್ತು ಸಿಸ್ಟಮ್‌ಗಳವರೆಗಿನ ಪ್ರಯಾಣವನ್ನು ಪ್ರದರ್ಶಿಸುತ್ತದೆ. ಹೊಸ 'ಮರಳಿನಿಂದ ಸಿಲಿಕಾನ್‌ಗೆ, ಸಿಲಿಕಾನ್‌ನಿಂದ ಸಿಸ್ಟಮ್ಸ್‌ಗೆ' ಮೌಲ್ಯ ಸರಪಳಿ ಅನುಭವವು ಸಂದರ್ಶಕರಿಗೆ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಯ ಸಮಗ್ರ ನೋಟವನ್ನು ಒದಗಿಸುತ್ತದೆ ಮತ್ತು ಮೌಲ್ಯ ಸರಪಳಿಯ ವಿವಿಧ ಹಂತಗಳಲ್ಲಿ ಭಾರತದ ವಿಸ್ತರಿಸುತ್ತಿರುವ ಸಾಮರ್ಥ್ಯಗಳನ್ನು ಪ್ರದರ್ಶಿಸುತ್ತದೆ.

ಪ್ರದರ್ಶನವು ಆರು ದೇಶಗಳ ಪೆವಿಲಿಯನ್‌ಗಳು ಮತ್ತು ಹನ್ನೆರಡು ರಾಜ್ಯ ಸರ್ಕಾರದ ಪೆವಿಲಿಯನ್‌ಗಳನ್ನು ಒಳಗೊಂಡಿರುತ್ತದೆ. ಜೊತೆಗೆ ಮೀಸಲಾದ ನವೋದ್ಯಮ ಪೆವಿಲಿಯನ್, ನಾವಿನ್ಯತೆ ಪ್ರದರ್ಶನ, ಸ್ಟಾರ್ಟ್ಅಪ್ ಪಿಚ್ ಸ್ಪರ್ಧೆ, ವಿದ್ಯಾರ್ಥಿ ಹ್ಯಾಕಥಾನ್ ಮತ್ತು ಕಾರ್ಯಪಡೆ ಅಭಿವೃದ್ಧಿ ಪೆವಿಲಿಯನ್ ಅನ್ನು ಒಳಗೊಂಡಿರುತ್ತದೆ. ಸ್ಟಾರ್ಟ್ಅಪ್ ಪೆವಿಲಿಯನ್ ಸುಮಾರು 40 ನವೋದ್ಯಮಗಳನ್ನು ಪ್ರದರ್ಶಿಸಿದರೆ, ಕಾರ್ಯಪಡೆ ಅಭಿವೃದ್ಧಿ ಪೆವಿಲಿಯನ್ ಮೈಕ್ರೋಎಲೆಕ್ಟ್ರಾನಿಕ್ಸ್ ವಲಯದಲ್ಲಿ ಪ್ರತಿಭೆ, ಕೌಶಲ್ಯ ಮತ್ತು ವೃತ್ತಿ ಅವಕಾಶಗಳಿಗೆ ಮೀಸಲಾದ ವೇದಿಕೆಯನ್ನು ಒದಗಿಸುತ್ತದೆ.

ಈ ಕಾರ್ಯಕ್ರಮವು ಭಾರತೀಯ ಮತ್ತು ಅಂತರರಾಷ್ಟ್ರೀಯ ಕಂಪನಿಗಳಿಗೆ ಪಾಲುದಾರಿಕೆಗಳು, ಹೂಡಿಕೆ ಅವಕಾಶಗಳು, ತಂತ್ರಜ್ಞಾನ ಸಹಯೋಗಗಳು ಮತ್ತು ಪೂರೈಕೆ-ಸರಪಳಿ ಸಂಪರ್ಕಗಳನ್ನು ಅನ್ವೇಷಿಸಲು ಪ್ರಮುಖ ಅವಕಾಶವನ್ನು ಒದಗಿಸುತ್ತದೆ, ವಿಶ್ವಾಸಾರ್ಹ ಜಾಗತಿಕ ಸೆಮಿಕಂಡಕ್ಟರ್ ಪಾಲುದಾರನಾಗಿ ಭಾರತದ ಸ್ಥಾನವನ್ನು ಮತ್ತಷ್ಟು ಬಲಪಡಿಸುತ್ತದೆ.

ಸಮಗ್ರ ಸಮ್ಮೇಳನ ಕಾರ್ಯಕ್ರಮ

ಮೂರು ದಿನಗಳ ಸಮ್ಮೇಳನ ಕಾರ್ಯಕ್ರಮವು ಸೆಮಿಕಂಡಕ್ಟರ್ ಮತ್ತು ಎಲೆಕ್ಟ್ರಾನಿಕ್ಸ್ ಪರಿಸರ ವ್ಯವಸ್ಥೆಯಾದ್ಯಂತ ಉದಯೋನ್ಮುಖ ಪ್ರವೃತ್ತಿಗಳು ಮತ್ತು ನಿರ್ಣಾಯಕ ಕ್ಷೇತ್ರಗಳ ಮೇಲೆ ಗಮನ ಕೇಂದ್ರೀಕರಿಸುವ ಉನ್ನತ ಮಟ್ಟದ ಭಾಷಣಗಳು, ಪ್ಯಾನಲ್‌ ಚರ್ಚೆಗಳು ಮತ್ತು ಕಾರ್ಯತಂತ್ರದ ಅಧಿವೇಶನಗಳನ್ನು ಒಳಗೊಂಡಿರುತ್ತದೆ. ಇದರಲ್ಲಿ ಸೆಮಿಕಂಡಕ್ಟರ್ ಉತ್ಪಾದನೆ ಮತ್ತು ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ, ಪೂರೈಕೆ-ಸರಪಳಿ, ಸುಧಾರಿತ ಪ್ಯಾಕೇಜಿಂಗ್, ವಸ್ತುಗಳು ಮತ್ತು ಉಪಕರಣಗಳು, ಚಿಪ್ ವಿನ್ಯಾಸ, ಸಂಶೋಧನೆ ಮತ್ತು ಅಭಿವೃದ್ಧಿ, ನವೋದ್ಯಮಗಳು, ನಾವೀನ್ಯತೆ ಮತ್ತು ಪ್ರತಿಭೆ ಅಭಿವೃದ್ಧಿ ಸೇರಿವೆ.

ಈ ಕಾರ್ಯಕ್ರಮವು ಆರು ಅಂತಾರಾಷ್ಟ್ರೀಯ ದೇಶಗಳ ದುಂಡುಮೇಜಿನ ಸಭೆಗಳು, ಮಹಿಳಾ ಸಬಲೀಕರಣ ಮತ್ತು ನಾಯಕತ್ವದ ಕುರಿತು ವಿಶೇಷ ಅಧಿವೇಶನ,  ಕಾರ್ಯಪಡೆ ಅಭಿವೃದ್ಧಿ ಅಧಿವೇಶನ ಮತ್ತು ಭಾರತದ ಇಎಸ್‌ಡಿಎಂ ಬೆಳವಣಿಗೆಗೆ ಸಹಕರಿಸುವ ಉದ್ಯಮ ಸಂಘಗಳು" ಎಂಬ ಶೀರ್ಷಿಕೆಯ ವಿಶೇಷ ಅಧಿವೇಶನವನ್ನು ಸಹ ಒಳಗೊಂಡಿರುತ್ತದೆ.

ಈ ಕಾರ್ಯಕ್ರಮದಲ್ಲಿ ಎಎಸ್ಎಂಎಲ್, ಅಪ್ಲೈಡ್ ಮೆಟೀರಿಯಲ್ಸ್, ಟೆರಾಡೈನ್, ಇನ್ಫಿನಿಯಾನ್, ಎಬಾರಾ, ಜಬಿಲ್, ಐಬಿಎಂ ರಿಸರ್ಚ್, ಎನ್ಎಕ್ಸ್‌ಪಿ, ಟಾಟಾ ಎಲೆಕ್ಟ್ರಾನಿಕ್ಸ್, ಮೈಕ್ರಾನ್, ಮರ್ಕ್ ಕೆಜಿಎಎ, ರಾಪಿಡಸ್, ಲ್ಯಾಮ್ ರಿಸರ್ಚ್, ಸಿಜಿ ಪವರ್, ಯುನೊ ಮಿಂಡಾ, ಅಡ್ವಾಂಟೆಸ್ಟ್, ಟೋಕಿಯೊ ಎಲೆಕ್ಟ್ರಾನ್ ಸೇರಿದಂತೆ ಸೆಮಿಕಂಡಕ್ಟರ್ ಮತ್ತು ಎಲೆಕ್ಟ್ರಾನಿಕ್ಸ್ ಪರಿಸರ ವ್ಯವಸ್ಥೆಯಾದ್ಯಂತ ಪ್ರಮುಖ ಜಾಗತಿಕ ಮತ್ತು ಭಾರತೀಯ ಕಂಪನಿಗಳು ಭಾಗವಹಿಸುವ ನಿರೀಕ್ಷೆಯಿದೆ.

ನೀತಿಯಿಂದ ಉತ್ಪಾದನೆಯವರೆಗೆ

ಭಾರತದ ಸೆಮಿಕಂಡಕ್ಟರ್ ಪಯಣದ ಮಹತ್ವದ ಘಟ್ಟದಲ್ಲಿ ‘ಸೆಮಿಕಾನ್ ಇಂಡಿಯಾ-2026’ ನಡೆಯುತ್ತಿದೆ. ‘ಸೆಮಿಕಾನ್ ಇಂಡಿಯಾ ಕಾರ್ಯಕ್ರಮ’ದ ಅಡಿಯಲ್ಲಿ, ದೇಶದಲ್ಲಿ ದೃಢವಾದ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಯನ್ನು ಸ್ಥಾಪಿಸುವ ಉದ್ದೇಶದಿಂದ ಸರ್ಕಾರವು 12 ಸೆಮಿಕಂಡಕ್ಟರ್ ಯೋಜನೆಗಳಿಗೆ ಅನುಮೋದನೆ ನೀಡಿದೆ.

ಪ್ರಗತಿಯು ಈಗ ಯೋಜನಾ ಅನುಮೋದನೆಗಳನ್ನು ಮೀರಿ ಸಾಗಿದೆ. ಸೆಮಿಕಾನ್ 1.0 ಅಡಿಯಲ್ಲಿ ಅನುಮೋದಿಸಲಾದ 12 ಯೋಜನೆಗಳಲ್ಲಿ 3 ವಾಣಿಜ್ಯ ಉತ್ಪಾದನೆಯನ್ನು ಪ್ರಾರಂಭಿಸಿವೆ. ಇದೇವೇಳೆ, ಭಾರತದ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆಯ ಅಭಿವೃದ್ಧಿಯನ್ನು ಇನ್ನಷ್ಟು ವೇಗಗೊಳಿಸುವ ಗುರಿಯನ್ನು ಹೊಂದಿರುವ ಆರು ಪ್ರಮುಖ ಆಧಾರಸ್ತಂಭಗಳೊಂದಿಗೆ ಕೇಂದ್ರ ಸಚಿವ ಸಂಪುಟವು ಮುಂದಿನ ಹಂತವಾದ ಸೆಮಿಕಾನ್ 2.0 ಗೆ ಅನುಮೋದನೆ ನೀಡಿದೆ.

ಸರ್ಕಾರವು ಸೆಮಿಕಂಡಕ್ಟರ್ ಸಂಶೋಧನೆ, ನಾವೀನ್ಯತೆ ಮತ್ತು ವಿನ್ಯಾಸವನ್ನು ಸಹ ಬೆಂಬಲಿಸುತ್ತಿದೆ.

ಅತ್ಯಾಧುನಿಕ ಎಲೆಕ್ಟ್ರಾನಿಕ್ ಡಿಸೈನ್ ಆಟೋಮೇಷನ್  ಪರಿಕರಗಳನ್ನು 400ಕ್ಕೂ ಹೆಚ್ಚು ಶೈಕ್ಷಣಿಕ ಸಂಸ್ಥೆಗಳು ಮತ್ತು 105 ನವೋದ್ಯಮಗಳಿಗೆ ಲಭ್ಯವಾಗುವಂತೆ ಮಾಡಲಾಗಿದೆ. ಜೊತೆಗೆ ನವೀನ ಸೆಮಿಕಂಡಕ್ಟರ್ ಉತ್ಪನ್ನಗಳು ಮತ್ತು ತಂತ್ರಾಂಶಗಳನ್ನು ವಿನ್ಯಾಸಗೊಳಿಸಲು ವಿನ್ಯಾಸಧರಿತ ಪ್ರೋತ್ಸಾಹಧನ (ಡಿಲ್‌) ಯೋಜನೆಯಡಿ 24 ನವೋದ್ಯಮಗಳಿಗೆ ಅನುಮೋದನೆ ನೀಡಲಾಗಿದೆ.

ಈ ಉಪಕ್ರಮಗಳು ಸೆಮಿಕಂಡಕ್ಟರ್ ಮೌಲ್ಯ ಸರಪಳಿಯಾದ್ಯಂತ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸುವ ಮತ್ತು ಜಾಗತಿಕವಾಗಿ ಸ್ಪರ್ಧಾತ್ಮಕ ಸೆಮಿಕಂಡಕ್ಟರ್ ಮತ್ತು ಎಲೆಕ್ಟ್ರಾನಿಕ್ಸ್ ಉತ್ಪಾದನಾ ಪರಿಸರ ವ್ಯವಸ್ಥೆಯತ್ತ ಭಾರತದ ಪರಿವರ್ತನೆಗೆ ಬಲವಾದ ಅಡಿಪಾಯವನ್ನು ರಚಿಸುವ ಗುರಿಯನ್ನು ಹೊಂದಿವೆ.

ವಿಶ್ವಾಸಾರ್ಹ ಜಾಗತಿಕ ಸೆಮಿಕಂಡಕ್ಟರ್ ಪಾಲುದಾರನಾಗಿ ಭಾರತ

ಕೃತಕ ಬುದ್ಧಿಮತ್ತೆ, ಡಿಜಿಟಲ್ ತಂತ್ರಜ್ಞಾನಗಳು, ಸುಧಾರಿತ ಕಂಪ್ಯೂಟಿಂಗ್, ಎಲೆಕ್ಟ್ರಿಕ್ ಮೊಬಿಲಿಟಿ, ದೂರಸಂಪರ್ಕ ಮತ್ತು ಇತರ ಉದಯೋನ್ಮುಖ ತಂತ್ರಜ್ಞಾನಗಳ ವಿಸ್ತರಣೆಯಿಂದಾಗಿ ಜಾಗತಿಕ ಸೆಮಿಕಂಡಕ್ಟರ್ ಉದ್ಯಮವು ತ್ವರಿತ ರೂಪಾಂತರಕ್ಕೆ ಒಳಗಾಗುತ್ತಿದೆ.

ಕೃತಕ ಬುದ್ಧಿಮತ್ತೆ, ಡಿಜಿಟಲ್ ತಂತ್ರಜ್ಞಾನಗಳು, ಸುಧಾರಿತ ಕಂಪ್ಯೂಟಿಂಗ್, ಎಲೆಕ್ಟ್ರಿಕ್ ಮೊಬಿಲಿಟಿ, ದೂರಸಂಪರ್ಕ ಮತ್ತು ಇತರ ಉದಯೋನ್ಮುಖ ತಂತ್ರಜ್ಞಾನಗಳ ವಿಸ್ತರಣೆಯಿಂದಾಗಿ ಜಾಗತಿಕ ಸೆಮಿಕಂಡಕ್ಟರ್ ಉದ್ಯಮವು ತ್ವರಿತ ರೂಪಾಂತರಕ್ಕೆ ಒಳಗಾಗುತ್ತಿದೆ.

ಈ ಹಿನ್ನೆಲೆಯಲ್ಲಿ, ಪ್ರಗತಿಪರ ಸರ್ಕಾರಿ ನೀತಿಗಳು, ನುರಿತ ವೃತ್ತಿಪರರ ದೊಡ್ಡ ಸಮೂಹ, ಬಲವಾದ ದೇಶೀಯ ಬೇಡಿಕೆ ಮತ್ತು ಜಾಗತಿಕ ಉದ್ಯಮದಿಂದ ಬೆಳೆಯುತ್ತಿರುವ ಆಸಕ್ತಿಯಿಂದ ಬೆಂಬಲಿತವಾಗಿರುವ ಭಾರತವು ಸೆಮಿಕಂಡಕ್ಟರ್ ವಿನ್ಯಾಸ, ಉತ್ಪಾದನೆ, ಸಂಶೋಧನೆ, ನಾವೀನ್ಯತೆ ಮತ್ತು ಹೂಡಿಕೆಗೆ ಗಮನಾರ್ಹ ತಾಣವಾಗಿ ಹೊರಹೊಮ್ಮುತ್ತಿದೆ.

2025 ರಲ್ಲಿ ಸುಮಾರು 796 ಶತಕೋಟಿ ಡಾಲರ್‌ ಮೌಲ್ಯದ ಜಾಗತಿಕ ಸೆಮಿಕಂಡಕ್ಟರ್ ಮಾರುಕಟ್ಟೆಯು 2030 ರ ವೇಳೆಗೆ 2 ಟ್ರಿಲಿಯನ್ ಡಾಲರ್‌ ಅನ್ನು ಮೀರುವ ನಿರೀಕ್ಷೆಯಿದೆ. ಪ್ರಸ್ತುತ 50 ಶತಕೋಟಿ ಡಾಲರ್‌ ಎಂದು ಅಂದಾಜಿಸಲಾಗಿರುವ ಭಾರತದ ಸೆಮಿಕಂಡಕ್ಟರ್ ಬೇಡಿಕೆಯು 2030ರ ವೇಳೆಗೆ 103 ಶತಕೋಟಿ ಡಾಲರ್‌ಗೆ ತಲುಪುವ ನಿರೀಕ್ಷೆಯಿದೆ, ಇದು ಸೆಮಿಕಂಡಕ್ಟರ್ ವಲಯದಲ್ಲಿ ದೇಶದ ಗಮನಾರ್ಹ ಬೆಳವಣಿಗೆಯ ಸಾಮರ್ಥ್ಯವನ್ನು ಎತ್ತಿ ತೋರಿಸುತ್ತದೆ.

"ಸಿಲಿಕಾನ್‌ನಿಂದ ಸಿಸ್ಟಮ್ಸ್‌ಗೆ: ಪರಿಸರ ವ್ಯವಸ್ಥೆಯ ನಿರ್ಮಾಣ" ಎಂಬ ಧ್ಯೇಯವು ಸೆಮಿಕಂಡಕ್ಟರ್ ಮೌಲ್ಯ ಸರಪಳಿಯಾದ್ಯಂತ ವಿಶ್ವಾಸಾರ್ಹತೆಯನ್ನು ನಿರ್ಮಿಸುವುದರಿಂದ ಹಿಡಿದು ಸಾಮರ್ಥ್ಯವನ್ನು ಪ್ರದರ್ಶಿಸುವವರೆಗಿನ ಭಾರತದ ಪರಿವರ್ತನೆಯನ್ನು ಸೆರೆಹಿಡಿಯುತ್ತದೆ.

ಸೆಮಿಕಾನ್ ಇಂಡಿಯಾ ಜಾಗತಿಕ ಉದ್ಯಮದ ನಾಯಕರು, ನೀತಿ ನಿರೂಪಕರು, ಸಂಶೋಧಕರು, ನವೋದ್ಯಮಗಳು ಮತ್ತು ಹೂಡಿಕೆದಾರರಿಗೆ ಪ್ರಮುಖ ವಾರ್ಷಿಕ ಒಮ್ಮುಖ ಬಿಂದುವಾಗಿ ವಿಕಸನಗೊಂಡಿದೆ. 2026 ರ ಆವೃತ್ತಿಯು ಸಹಯೋಗ, ತಂತ್ರಜ್ಞಾನ ಪಾಲುದಾರಿಕೆ, ಹೂಡಿಕೆ, ಪ್ರತಿಭೆ ಅಭಿವೃದ್ಧಿ ಮತ್ತು ಜ್ಞಾನ ವಿನಿಮಯಕ್ಕೆ ವೇದಿಕೆಯನ್ನು ಒದಗಿಸುವ ಮೂಲಕ, ಪರಿಸರ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಮೂಲಕ ಮತ್ತು ಸೆಮಿಕಂಡಕ್ಟರ್ ಮತ್ತು ಎಲೆಕ್ಟ್ರಾನಿಕ್ಸ್ ಉತ್ಪಾದನೆಗೆ ಜಾಗತಿಕ ಕೇಂದ್ರವಾಗಿ ಹೊರಹೊಮ್ಮುವ ಭಾರತದ ದೃಷ್ಟಿಕೋನವನ್ನು ಬೆಂಬಲಿಸುವ ಮೂಲಕ ಈ ಆವೇಗವನ್ನು ನಿರ್ಮಿಸಲು ಪ್ರಯತ್ನಿಸುತ್ತದೆ.

ಸೆಮಿಕಾನ್ ಇಂಡಿಯಾ ಜಾಗತಿಕ ಉದ್ಯಮದ ನಾಯಕರು, ನೀತಿ ನಿರೂಪಕರು, ಸಂಶೋಧಕರು, ಸ್ಟಾರ್ಟ್-ಅಪ್‌ಗಳು ಮತ್ತು ಹೂಡಿಕೆದಾರರಿಗೆ ಒಂದು ಪ್ರಮುಖ ವಾರ್ಷಿಕ ಒಮ್ಮುಖ ಬಿಂದುವಾಗಿ (ಸಂಗಮವಾಗಿ) ವಿಕಸನಗೊಂಡಿದೆ. 2026ರ ಆವೃತ್ತಿಯು ಸಹಯೋಗ, ತಂತ್ರಜ್ಞಾನ ಪಾಲುದಾರಿಕೆ, ಹೂಡಿಕೆ, ಪ್ರತಿಭೆ ಅಭಿವೃದ್ಧಿ ಮತ್ತು ಜ್ಞಾನ ವಿನಿಮಯಕ್ಕಾಗಿ ವೇದಿಕೆಯನ್ನು ಒದಗಿಸುವ ಮೂಲಕ ಈ ವೇಗವನ್ನು ಮತ್ತಷ್ಟು ಮುನ್ನಡೆಸಲು ಪ್ರಯತ್ನಿಸುತ್ತದೆ. ಅಲ್ಲದೆ, ಇದು ಪರಿಸರ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುತ್ತಾ, ಸೆಮಿಕಂಡಕ್ಟರ್ ಮತ್ತು ಎಲೆಕ್ಟ್ರಾನಿಕ್ಸ್ ಉತ್ಪಾದನೆಯ ಜಾಗತಿಕ ಕೇಂದ್ರವಾಗಿ ಹೊರಹೊಮ್ಮುವ ಭಾರತದ ದೃಷ್ಟಿಕೋನವನ್ನು ಬೆಂಬಲಿಸುತ್ತದೆ.

 

ಸೆಮಿಕಾನ್ ಇಂಡಿಯಾ-2026 ಗಾಗಿ ಸಂದರ್ಶಕರ ನೋಂದಣಿ ಈಗ ಮುಕ್ತವಾಗಿದೆ ಈಗ ಇಲ್ಲಿ ನೋಂದಾಯಿಸಿಕೊಳ್ಳಿhttps://portal.semiconindia.org/register

ಸೆಮಿಕಾನ್ ಇಂಡಿಯಾ ಬಗ್ಗೆ

‘ಸೆಮಿಕಾನ್ ಇಂಡಿಯಾ;ವು ಭಾರತದ ಪ್ರಮುಖ ಸೆಮಿಕಂಡಕ್ಟರ್ ಸಮ್ಮೇಳನ ಮತ್ತು ಪ್ರದರ್ಶನವಾಗಿದ್ದು, ಇದನ್ನು ಭಾರತ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಇಂಡಿಯಾ ಸೆಮಿಕಂಡಕ್ಟರ್ ಮಿಷನ್’ (ಐಎಸ್‌ಎಂ) ಮತ್ತು ಸ್‌ಇಎಂಇ’ ಜಂಟಿಯಾಗಿ ಆಯೋಜಿಸಿವೆ. ಇದು ಜಾಗತಿಕ ಸೆಮಿಕಂಡಕ್ಟರ್ ಮತ್ತು ಎಲೆಕ್ಟ್ರಾನಿಕ್ಸ್ ಉತ್ಪಾದನೆಗೆ ವಿಶ್ವಾಸಾರ್ಹ ಜಾಗತಿಕ ಕೇಂದ್ರವಾಗುವ ಭಾರತದ ದೃಷ್ಟಿಕೋನವನ್ನು ಬೆಂಬಲಿಸುತ್ತಾ, ಸಹಯೋಗ, ನಾವೀನ್ಯತೆ, ಉತ್ಪಾದನೆ, ಹೂಡಿಕೆ ಮತ್ತು ಪ್ರತಿಭೆ ಅಭಿವೃದ್ಧಿಯನ್ನು ಮುನ್ನಡೆಸಲು ಪ್ರಮುಖ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ.

ಇಂಡಿಯಾ ಸೆಮಿಕಂಡಕ್ಟರ್ ಮಿಷನ್ ಬಗ್ಗೆ

ಇಂಡಿಯಾ ಸೆಮಿಕಂಡಕ್ಟರ್ ಮಿಷನ್ (ಐಎಸ್‌ಎಂ) ಬಲವಾದ ಸೆಮಿಕಂಡಕ್ಟರ್ ಮತ್ತು ಡಿಸ್ಪ್ಲೇ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವ ಮತ್ತು ಎಲೆಕ್ಟ್ರಾನಿಕ್ಸ್ ಉತ್ಪಾದನೆ ಹಾಗೂ ವಿನ್ಯಾಸದ ಜಾಗತಿಕ ಕೇಂದ್ರವಾಗಿ ಭಾರತವನ್ನು ರೂಪಿಸುವ ಗುರಿಯನ್ನು ಹೊಂದಿದೆ. ಸೆಮಿಕಂಡಕ್ಟರ್ ಮತ್ತು ಡಿಸ್ಪ್ಲೇ ಯೋಜನೆಗಳ ಸಮರ್ಥ ಮತ್ತು ತಡೆರಹಿತ ಅನುಷ್ಠಾನಕ್ಕಾಗಿ ನೋಡಲ್ ಏಜೆನ್ಸಿಯಾಗಿ ಇದು ಕಾರ್ಯನಿರ್ವಹಿಸುತ್ತದೆ ಮತ್ತು ಸರ್ಕಾರಿ ಸಚಿವಾಲಯಗಳು, ಇಲಾಖೆಗಳು, ಏಜೆನ್ಸಿಗಳು, ಉದ್ಯಮ ಮತ್ತು ಶೈಕ್ಷಣಿಕ ಸಂಸ್ಥೆಗಳೊಂದಿಗೆ ಸಮಾಲೋಚಿಸಿ ಕೆಲಸ ಮಾಡುತ್ತದೆ.

 

*****


(ಪ್ರಕಟಣೆ ಐ.ಡಿ.: 2310068) ವಿಸಿಟರ್ ಕೌಂಟರ್ : 4
ಪ್ರಕಟಣೆಯನ್ನು ಇದರಲ್ಲಿ ಓದಿ: Assamese , Bengali , English , Urdu , हिन्दी , Gujarati