ಅಂಕಿಅಂಶಗಳು ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ
azadi ka amrit mahotsav

ರಾಷ್ಟ್ರೀಯ ಸಾಂಖ್ಯಿಕ ಕಚೇರಿಯು (ಎನ್‌ಎಸ್‌ಒ) ನಿಗಮಿತವಲ್ಲದ ಕೃಷಿಯೇತರ ವಲಯಕ್ಕಾಗಿ ಇದೇ ಮೊದಲ ಬಾರಿಗೆ ಜಿಲ್ಲಾಮಟ್ಟದ ಅಂದಾಜುಗಳನ್ನು ಬಿಡುಗಡೆ ಮಾಡಿದೆ


ಕೃಷಿಯೇತರ ಕ್ಷೇತ್ರದ ಆರ್ಥಿಕ ಚಟುವಟಿಕೆಯಲ್ಲಿ ಒಟ್ಟಾರೆ ಶೇಕಡಾ ಮೂರನೇ ಒಂದರಷ್ಟು ಪಾಲನ್ನು ಅಗ್ರ 50 ಜಿಲ್ಲೆಗಳೇ ಹೊಂದಿವೆ

237 ಜಿಲ್ಲೆಗಳಲ್ಲಿ ಒಟ್ಟು ಕಾರ್ಮಿಕರ ಪೈಕಿ ಮೂರನೇ ಒಂದು ಭಾಗದಷ್ಟು ಮಹಿಳೆಯರಿದ್ದಾರೆ

ಪ್ರಕಟಣಾ ದಿನಾಂಕ: 10 SEP 2026 4:00PM by PIB Bengaluru

ಸಂಕ್ಷಿಪ್ತ ನೋಟ:

  • ಎನ್‌ಎಸ್‌ಒ ದೇಶದಲ್ಲೇ ಮೊದಲ ಬಾರಿಗೆ ಬೃಹತ್ ಮಟ್ಟದ ರಾಷ್ಟ್ರವ್ಯಾಪಿ ಉದ್ಯಮ ಸಮೀಕ್ಷೆಯ ಆಧಾರದಲ್ಲಿ ಜಿಲ್ಲಾವಾರು ಅಂದಾಜುಗಳನ್ನು ಪ್ರಕಟಿಸಿದ್ದು, ಇದು ಭಾರತದಲ್ಲಿ ಸೂಕ್ಷ್ಮ ಮಟ್ಟದ ರಾಜ್ಯಕ್ಕಿಂತ ಕೆಳಗಿನ ಹಂತದ) ಸಾಂಖ್ಯಿಕ ದತ್ತಾಂಶ ವ್ಯವಸ್ಥೆಯನ್ನು ಬಲಪಡಿಸುವತ್ತ ಇಟ್ಟ ಪ್ರಮುಖ ಹೆಜ್ಜೆಯಾಗಿದೆ.
  • ನಿಗಮಿತವಲ್ಲದ ಉದ್ಯಮಗಳ ಸಂಖ್ಯೆಯ ಆಧಾರದ ಮೇಲೆ ಶ್ರೇಯಾಂಕ ಪಡೆದ ಅಗ್ರ 50 ಜಿಲ್ಲೆಗಳು, ದೇಶದ ಒಟ್ಟು ಉದ್ಯಮ ಸಂಸ್ಥೆಗಳು, ಕಾರ್ಮಿಕಪಡೆ ಮತ್ತು ಒಟ್ಟು ಮೌಲ್ಯವರ್ಧನೆಯ (ಜಿವಿಎ) ಸುಮಾರು ಮೂರನೇ ಒಂದರಷ್ಟು ಪಾಲನ್ನು ಹೊಂದಿವೆ.
  • ದೇಶದ ಒಟ್ಟು ಜಿಲ್ಲೆಗಳ ಪೈಕಿ ಸುಮಾರು ಮೂರನೇ ಒಂದರಷ್ಟು ಜಿಲ್ಲೆಗಳಲ್ಲಿ, ಪ್ರತಿ ಜಿಲ್ಲೆಗೆ 1 ಲಕ್ಷಕ್ಕೂ ಹೆಚ್ಚು ನಿಗಮಿತವಲ್ಲದ ಉದ್ಯಮ ಘಟಕಗಳಿವೆ.
  • ಒಟ್ಟು 237 ಜಿಲ್ಲೆಗಳಲ್ಲಿ, ನಿಗಮಿತವಲ್ಲದ ವಲಯದ ಒಟ್ಟು ಕಾರ್ಮಿಕಪಡೆಯಲ್ಲಿ ಮಹಿಳೆಯರು ಕನಿಷ್ಠ ಮೂರನೇ ಒಂದರಷ್ಟು ಪಾಲನ್ನು ಹೊಂದಿದ್ದಾರೆ.
  • 280 ಜಿಲ್ಲೆಗಳಲ್ಲಿ, ತಲಾ ಕಾರ್ಮಿಕರ ಜಿವಿಎ (ಜಿವಿಎ) ಅಖಿಲ ಭಾರತ ಸರಾಸರಿಗಿಂತ ಹೆಚ್ಚಿದ್ದು, ಈ ಜಿಲ್ಲೆಗಳಲ್ಲಿ ತುಲನಾತ್ಮಕವಾಗಿ ಹೆಚ್ಚಿನ ಆರ್ಥಿಕ ಉತ್ಪಾದಕತೆ ಇರುವುದನ್ನು ಸೂಚಿಸುತ್ತದೆ.

ಜಿಲ್ಲಾಮಟ್ಟದಲ್ಲಿ ನಗರ ಪ್ರದೇಶದ ನಿಗಮಿತವಲ್ಲದ ಉದ್ಯಮಗಳ ಚಿತ್ರಣವನ್ನು ಎನ್ಎಸ್ ಬಿಡುಗಡೆ ಮಾಡಿದೆ

ಸೂಕ್ಷ್ಮ ಮಟ್ಟದ ಹಾಗೂ ಹೆಚ್ಚಿನ ಆವರ್ತನದ ದತ್ತಾಂಶದ ಮಹತ್ವವು ಇತ್ತೀಚಿನ ವರ್ಷಗಳಲ್ಲಿ ಗಣನೀಯವಾಗಿ ಹೆಚ್ಚಿದೆ. ಸಾಕ್ಷ್ಯಾಧಾರಿತ ನೀತಿ ನಿರೂಪಣೆ ಮತ್ತು ಉದ್ದೇಶಿತ ಮಧ್ಯಸ್ಥಿಕೆಗಳ ಅಗತ್ಯ ಹೆಚ್ಚುತ್ತಿರುವುದು ಇದಕ್ಕೆ ಕಾರಣವಾಗಿದೆ. ನಿರ್ದಿಷ್ಟವಾಗಿ, ರಾಜ್ಯಕ್ಕಿಂತ ಕೆಳಗಿನ ಹಂತದ ಅಂಕಿಅಂಶಗಳು ಪ್ರಾದೇಶಿಕ ವ್ಯತ್ಯಾಸಗಳು, ಉದಯೋನ್ಮುಖ ಸಾಮರ್ಥ್ಯಗಳು ಹಾಗೂ ಗಮನ ಹರಿಸಬೇಕಾದ ಕ್ಷೇತ್ರಗಳನ್ನು ಗುರುತಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇದರಿಂದ ಹೆಚ್ಚು ಉದ್ದೇಶಿತ ಮತ್ತು ಪ್ರದೇಶ-ನಿರ್ದಿಷ್ಟ ನೀತಿ ಮಧ್ಯಸ್ಥಿಕೆಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ.

ಪ್ರಯತ್ನದ ಭಾಗವಾಗಿ, ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯವು (MoSPI) 2011 ರ ಜನಗಣತಿ ಜನಸಂಖ್ಯೆಯ ಆಧಾರದ ಮೇಲೆ ಗುರುತಿಸಲಾದ ದೇಶದ 46 ದಶಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ನಗರಗಳಾದ್ಯಂತ ನಿಗಮಿತವಲ್ಲದ ವಲಯದ ಸಮಗ್ರ ಸಾಂಖ್ಯಿಕ ಚಿತ್ರಣವನ್ನು ಈಗಾಗಲೇ ಮೊದಲ ಬಾರಿಗೆ ಪ್ರಕಟಿಸಿದೆ. ಈ ಉಪಕ್ರಮವನ್ನು ಮತ್ತಷ್ಟು ಮುಂದುವರಿಸಿರುವ MoSPI ಈಗ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ಭಾರತದ ನಿಗಮಿತವಲ್ಲದ ಕೃಷಿಯೇತರ ವಲಯದ ಪ್ರಮಾಣ, ರಚನೆ ಮತ್ತು ಆರ್ಥಿಕ ಕಾರ್ಯಕ್ಷಮತೆಯ ಜಿಲ್ಲಾಮಟ್ಟದ ಚಿತ್ರಣವನ್ನು ಪ್ರಸ್ತುತಪಡಿಸಿದೆ. ಈ ವರದಿಯಲ್ಲಿ ಪ್ರಸ್ತುತಪಡಿಸಲಾದ ಜಿಲ್ಲಾಮಟ್ಟದ ಅಂದಾಜುಗಳು ಆಯಾ ಜಿಲ್ಲೆಗಳಲ್ಲಿ ನೆಲೆಗೊಂಡಿರುವ ಹತ್ತು ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇರುವ ನಗರಗಳ ಸಂಬಂಧಿತ ಅಂದಾಜುಗಳನ್ನು ಸಹ ಒಳಗೊಂಡಿವೆ. ಬೃಹತ್ ಪ್ರಮಾಣದ, ರಾಷ್ಟ್ರವ್ಯಾಪಿ ಸಮೀಕ್ಷೆಯಿಂದ ಜಿಲ್ಲಾಮಟ್ಟದ ಅಂದಾಜುಗಳನ್ನು ಪ್ರಸಾರ ಮಾಡಲು ರಾಷ್ಟ್ರೀಯ ಸಾಂಖ್ಯಿಕ ಕಚೇರಿ (ಎನ್‌ಎಸ್‌ಒ), MoSPI ಕೈಗೊಂಡ ಮೊದಲ ಉಪಕ್ರಮ ಇದಾಗಿದೆ. ವರದಿಯು ಸಚಿವಾಲಯದ ವೆಬ್‌ಸೈಟ್ https://mospi.gov.in ನಲ್ಲಿ ಲಭ್ಯವಿದೆ.

ಜಿಲ್ಲಾಮಟ್ಟದಲ್ಲಿ ನಿಗಮಿತವಲ್ಲದ ವಲಯ: ASUSE 2025 ಒಳನೋಟಗಳು

ASUSE 2025ರ ದತ್ತಾಂಶವನ್ನು ಆಧರಿಸಿ, ಈ ವರದಿಯು ಜಿಲ್ಲಾ ಮಟ್ಟದಲ್ಲಿ ನಿಗಮಿತವಲ್ಲದ ವಲಯದ ಸಮಗ್ರ ಚಿತ್ರಣವನ್ನು ನೀಡುತ್ತದೆ. ಇದರಲ್ಲಿ ಉದ್ಯಮ ಘಟಕಗಳ ಪ್ರಮಾಣ ಮತ್ತು ರಚನೆ, ಉದ್ಯೋಗ ಮತ್ತು ವೇತನಭತ್ಯೆಗಳು ಹಾಗೂ ಆರ್ಥಿಕ ಕಾರ್ಯಕ್ಷಮತೆಯನ್ನು ಒಳಗೊಂಡ ಸಮತೋಲಿತ ಸೂಚಕಗಳ ಗುಂಪನ್ನು ಬಳಸಲಾಗಿದೆ. ಇವುಗಳಲ್ಲಿ ಉದ್ಯಮ ಘಟಕಗಳು ಮತ್ತು ಕಾರ್ಮಿಕರ ಅಂದಾಜುಗಳು, ಮಾಲೀಕತ್ವ ಮತ್ತು ಉದ್ಯೋಗ ರಚನೆ, ಮಹಿಳೆಯರ ಪಾಲ್ಗೊಳ್ಳುವಿಕೆ, ನೋಂದಣಿ ಸ್ಥಿತಿ, ನೇಮಕಗೊಂಡ ಪ್ರತಿ ಕಾರ್ಮಿಕನಿಗೆ ನೀಡಲಾಗುವ ವೇತನಭತ್ಯೆಗಳು ಹಾಗೂ ಮಾರುಕಟ್ಟೆ ಆಧಾರಿತ ಉದ್ಯಮ ಘಟಕಗಳಿಗೆ ಸಂಬಂಧಿಸಿದಂತೆ ಪ್ರತಿ ಉದ್ಯಮ ಘಟಕಕ್ಕೆ ಮತ್ತು ಪ್ರತಿ ಕಾರ್ಮಿಕನಿಗೆ ಲಭಿಸುವ ಒಟ್ಟು ಮೌಲ್ಯವರ್ಧನೆ (ಜಿವಿಎ) ಸೇರಿವೆ. ASUSE 2025ರ ಮಾದರಿ ಆಯ್ಕೆಯ ಸಂದರ್ಭದಲ್ಲಿ ಲಭ್ಯವಿದ್ದ 770 ಜಿಲ್ಲೆಗಳ ಪೈಕಿ 757 ಜಿಲ್ಲೆಗಳಿಗೆ ಈ ಸೂಚಕಗಳ ಅಂದಾಜುಗಳನ್ನು ನೀಡಲಾಗಿದೆ. ಇದರಿಂದ ರಾಷ್ಟ್ರೀಯವಾಗಿ ಪ್ರತಿನಿಧಿಸುವ ಸಮೀಕ್ಷಾ ದತ್ತಾಂಶದ ಆಧಾರದ ಮೇಲೆ ಸೂಕ್ಷ್ಮ ಜಿಲ್ಲಾ ಮಟ್ಟದ ಮಾಹಿತಿ ಲಭ್ಯವಾಗುತ್ತದೆ. ಆದಾಗ್ಯೂ, ಜಿಲ್ಲೆಗಳ ಗಡಿಗಳು, ಹೆಸರುಗಳಲ್ಲಿ ನಂತರದ ಬದಲಾವಣೆಗಳು ಅಥವಾ ಹೊಸ ಜಿಲ್ಲೆಗಳ ರಚನೆಯಿಂದಾಗಿ ಕೆಲವು ಜಿಲ್ಲೆಗಳ ಭೌಗೋಳಿಕ ವ್ಯಾಪ್ತಿ ಹಾಗೂ ಜಿಲ್ಲೆಗಳ ಸಂಖ್ಯೆಯು ಪ್ರಸ್ತುತ ಆಡಳಿತಾತ್ಮಕ ವಿನ್ಯಾಸಕ್ಕಿಂತ ಭಿನ್ನವಾಗಿರಬಹುದು.

ಲಕ್ಷದ್ವೀಪ ಮತ್ತು ಚಂಡೀಗಢ ತಲಾ ಒಂದು ಜಿಲ್ಲೆಯನ್ನು ಮಾತ್ರ ಒಳಗೊಂಡಿರುವುದರಿಂದ, ಈ ಕೇಂದ್ರಾಡಳಿತ ಪ್ರದೇಶಗಳಿಗೆ ಸಂಬಂಧಿಸಿದ ಜಿಲ್ಲಾ ಮಟ್ಟದ ಅಂದಾಜುಗಳು ಆಯಾ ಕೇಂದ್ರಾಡಳಿತ ಪ್ರದೇಶ ಮಟ್ಟದ ಅಂದಾಜುಗಳಿಗೆ ಸಮನಾಗಿದ್ದು, ASUSE 2025ರ ವರದಿಯಲ್ಲಿ ಈಗಾಗಲೇ ಪ್ರಕಟಿಸಲಾಗಿದೆ. ಆದ್ದರಿಂದ, ಈ ವರದಿಯಲ್ಲಿ ಲಕ್ಷದ್ವೀಪ ಮತ್ತು ಚಂಡೀಗಢಕ್ಕೆ ಪ್ರತ್ಯೇಕ ಜಿಲ್ಲಾ ಮಟ್ಟದ ಅಂದಾಜುಗಳನ್ನು ನೀಡಲಾಗಿಲ್ಲ. ಇದಲ್ಲದೆ, ದೆಹಲಿಯಲ್ಲಿ ಗ್ರಾಮೀಣ ಜನಸಂಖ್ಯೆ ಅತ್ಯಂತ ಕಡಿಮೆ ಇರುವುದರಿಂದ ಹಾಗೂ ಗ್ರಾಮಗಳ ಸಂಖ್ಯೆಯೂ ಸೀಮಿತವಾಗಿರುವುದರಿಂದ, ಮಾದರಿ ಆಯ್ಕೆಯ ಸಂದರ್ಭದಲ್ಲಿ ಗ್ರಾಮೀಣ ವಲಯಕ್ಕೆ ಸಂಬಂಧಿಸಿದ ಎಲ್ಲಾ ಜಿಲ್ಲೆಗಳನ್ನು ಒಂದೇ ಸ್ತರವಾಗಿ ಸಂಯೋಜಿಸಲಾಗಿತ್ತು ಮತ್ತು ಆ ಸ್ತರದಿಂದ ಮಾದರಿ ಎಫ್‌ಎಸ್‌ಯುಗಳನ್ನು ಆಯ್ಕೆ ಮಾಡಲಾಗಿತ್ತು. ನಗರ ವಲಯದಲ್ಲಿಯೂ ಇದೇ ವಿಧಾನವನ್ನು ಅನುಸರಿಸಲಾಯಿತು. ಹೀಗಾಗಿ, ದೆಹಲಿಗೆ ಜಿಲ್ಲಾ ಮಟ್ಟದ ಅಂದಾಜುಗಳನ್ನು ಸಿದ್ಧಪಡಿಸಲು ಸಾಧ್ಯವಾಗಿಲ್ಲ ಮತ್ತು ಆದ್ದರಿಂದ ಅವುಗಳನ್ನು ಈ ವರದಿಯಲ್ಲಿ ನೀಡಲಾಗಿಲ್ಲ.

ASUSE 2025ರ ವ್ಯಾಪ್ತಿ, ಮಾದರಿ ಆಯ್ಕೆ ವಿಧಾನ ಹಾಗೂ ದತ್ತಾಂಶ ಸಂಗ್ರಹಣಾ ವ್ಯವಸ್ಥೆಯ ಸಂಕ್ಷಿಪ್ತ ವಿವರವನ್ನು ಕೊನೆಯ ಟಿಪ್ಪಣಿಯಲ್ಲಿ ನೀಡಲಾಗಿದೆ.

ನಿಗಮಿತವಲ್ಲದ ಉದ್ಯಮಗಳ ಚಿತ್ರಣದಿಂದ ಲಭಿಸಿದ ಪ್ರಮುಖ ಮಾಹಿತಿ

ನಿಗಮಿತವಲ್ಲದ ವಲಯದ ಭೌಗೋಳಿಕ ಕೇಂದ್ರೀಕರಣ ಮತ್ತು ಜಿಲ್ಲಾ ಮಟ್ಟದ ಬದಲಾವಣೆಗಳು

ನಿಗಮಿತವಲ್ಲದ ಕೃಷಿಯೇತರ ವಲಯವು ಜಿಲ್ಲೆಗಳಾದ್ಯಂತ ಆರ್ಥಿಕ ಚಟುವಟಿಕೆಗಳ ಗಮನಾರ್ಹ ಕೇಂದ್ರೀಕರಣವನ್ನು ಹೊಂದಿದೆ. ಅಂದಾಜು ಮಾಡಲಾದ ನಿಗಮಿತವಲ್ಲದ ಉದ್ಯಮ ಘಟಕಗಳ ಸಂಖ್ಯೆಯ ಆಧಾರದ ಮೇಲೆ ಸ್ಥಾನ ಪಡೆದಿರುವ ಅಗ್ರ 10 ಜಿಲ್ಲೆಗಳು ಒಟ್ಟಾಗಿ ಈ ವಲಯದ ಒಟ್ಟು ಉದ್ಯಮ ಘಟಕಗಳು, ಕಾರ್ಮಿಕರು ಮತ್ತು ಉತ್ಪಾದನೆಯಾಗುವ ಒಟ್ಟು ಮೌಲ್ಯವರ್ಧನೆಯ (ಜಿವಿಎ) ಸುಮಾರು ಹತ್ತನೇ ಒಂದು ಭಾಗವನ್ನು ಹೊಂದಿವೆ. ಅದೇ ವೇಳೆ, ಅಗ್ರ 50 ಜಿಲ್ಲೆಗಳು ಒಟ್ಟು ಉದ್ಯಮ ಘಟಕಗಳು, ಕಾರ್ಮಿಕರು ಮತ್ತು ಜಿವಿಎಯ ಸುಮಾರು ಮೂರನೇ ಒಂದು ಭಾಗವನ್ನು ಹೊಂದಿವೆ.

ಅಗ್ರ 10 ಜಿಲ್ಲೆಗಳು ಗುಜರಾತ್, ತೆಲಂಗಾಣ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ ನಾಲ್ಕು ರಾಜ್ಯಗಳಲ್ಲಿ ಹರಡಿಕೊಂಡಿವೆ. ಅಗ್ರ 50 ಜಿಲ್ಲೆಗಳು ಬಿಹಾರ, ಗುಜರಾತ್, ಕರ್ನಾಟಕ, ಕೇರಳ, ಮಹಾರಾಷ್ಟ್ರ, ಒಡಿಶಾ, ಪಂಜಾಬ್, ರಾಜಸ್ಥಾನ, ತಮಿಳುನಾಡು, ತೆಲಂಗಾಣ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ ಹನ್ನೆರಡು ರಾಜ್ಯಗಳಲ್ಲಿ ಹರಡಿಕೊಂಡಿವೆ.

ಜಿಲ್ಲಾ ಮಟ್ಟದ ಹಂಚಿಕೆಯು ದೇಶಾದ್ಯಂತ ನಿಗಮಿತವಲ್ಲದ ವಲಯದ ಪ್ರಮಾಣದಲ್ಲಿ ಗಣನೀಯ ವ್ಯತ್ಯಾಸವಿರುವುದನ್ನೂ ತೋರಿಸುತ್ತದೆ. ಸುಮಾರು ಮೂರನೇ ಒಂದು ಭಾಗದಷ್ಟು ಜಿಲ್ಲೆಗಳಲ್ಲಿ ಪ್ರತಿ ಜಿಲ್ಲೆಗೆ ಒಂದು ಲಕ್ಷಕ್ಕೂ ಅಧಿಕ ನಿಗಮಿತವಲ್ಲದ ಉದ್ಯಮ ಘಟಕಗಳಿವೆ. ಆದರೆ ಸುಮಾರು ಶೇ.9ರಷ್ಟು ಜಿಲ್ಲೆಗಳಲ್ಲಿ ಪ್ರತಿ ಜಿಲ್ಲೆಗೆ 10,000ಕ್ಕಿಂತ ಕಡಿಮೆ ಉದ್ಯಮ ಘಟಕಗಳಿವೆ. ಒಟ್ಟು 16 ಜಿಲ್ಲೆಗಳಲ್ಲಿ - ಪಶ್ಚಿಮ ಬಂಗಾಳದ ಎಂಟು, ಮಹಾರಾಷ್ಟ್ರದ ಮೂರು, ಗುಜರಾತ್‌ನ ಎರಡು ಹಾಗೂ ಕರ್ನಾಟಕ, ತೆಲಂಗಾಣ ಮತ್ತು ಉತ್ತರ ಪ್ರದೇಶದ ತಲಾ ಒಂದು ಜಿಲ್ಲೆಯಲ್ಲಿ - ಪ್ರತಿ ಜಿಲ್ಲೆಗೆ 5 ಲಕ್ಷಕ್ಕೂ ಅಧಿಕ ನಿಗಮಿತವಲ್ಲದ ಉದ್ಯಮ ಘಟಕಗಳಿವೆ.

ಜಿಲ್ಲೆಗಳಾದ್ಯಂತ ಉತ್ಪಾದಕತೆಯ ಕಾರ್ಯಕ್ಷಮತೆ

ಜಿಲ್ಲಾ ಮಟ್ಟದ ಅಂದಾಜುಗಳು ನಿಗಮಿತವಲ್ಲದ ವಲಯದ ಉತ್ಪಾದಕತೆಯ ಕಾರ್ಯಕ್ಷಮತೆಯಲ್ಲಿನ ವ್ಯತ್ಯಾಸಗಳನ್ನೂ ಎತ್ತಿ ತೋರಿಸುತ್ತವೆ. ಸುಮಾರು 331 ಜಿಲ್ಲೆಗಳಲ್ಲಿ ಪ್ರತಿ ಕಾರ್ಮಿಕನಿಗೆ ಲಭಿಸುವ ಜಿವಿಎ ₹1 ಲಕ್ಷದಿಂದ ₹1.5 ಲಕ್ಷದ ನಡುವೆ ಇದೆ ಎಂದು ಅಂದಾಜಿಸಲಾಗಿದೆ. 280 ಜಿಲ್ಲೆಗಳಲ್ಲಿ ಪ್ರತಿ ಕಾರ್ಮಿಕನಿಗೆ ಲಭಿಸುವ ಜಿವಿಎ ಅಖಿಲ ಭಾರತ ಸರಾಸರಿಯಾದ ₹1,56,539ಕ್ಕಿಂತ ಹೆಚ್ಚಾಗಿದೆ. ಇದು ಈ ಜಿಲ್ಲೆಗಳಲ್ಲಿ ತುಲನಾತ್ಮಕವಾಗಿ ಹೆಚ್ಚಿನ ಮಟ್ಟದ ಆರ್ಥಿಕ ಉತ್ಪಾದಕತೆಯನ್ನು ಸೂಚಿಸುತ್ತದೆ.

ಜಿಲ್ಲಾ ಮಟ್ಟದಲ್ಲಿ ಮಹಿಳಾ ಉದ್ಯಮಶೀಲತೆಯ ಚಿತ್ರಣ

ಜಿಲ್ಲಾ ಮಟ್ಟದ ಅಂದಾಜುಗಳು ಮಹಿಳಾ ಉದ್ಯಮಶೀಲತೆಯಲ್ಲಿ ಗಮನಾರ್ಹ ಪ್ರಾದೇಶಿಕ ಮಾದರಿಗಳನ್ನು ಬಹಿರಂಗಪಡಿಸುತ್ತವೆ. ಮಹಿಳೆಯರ ನೇತೃತ್ವದ ನಿಗಮಿತವಲ್ಲದ ಉದ್ಯಮ ಘಟಕಗಳ ಪಾಲು ಅತ್ಯಧಿಕವಾಗಿರುವ ಅಗ್ರ 10 ಜಿಲ್ಲೆಗಳು ತೆಲಂಗಾಣ, ಮಣಿಪುರ ಮತ್ತು ಮೇಘಾಲಯದಲ್ಲಿವೆ. ಮಿಜೋರಾಂನಲ್ಲಿ ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲೂ ಮಹಿಳೆಯರ ಒಡೆತನದ ಏಕಮಾಲೀಕತ್ವದ ಉದ್ಯಮ ಘಟಕಗಳು ಒಟ್ಟು ಉದ್ಯಮ ಘಟಕಗಳ ಪೈಕಿ ಕನಿಷ್ಠ ಶೇ.50ರಷ್ಟಿವೆ.

ಕಾರ್ಮಿಕ ವರ್ಗದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯಲ್ಲಿಯೂ ಇದೇ ರೀತಿಯ ಮಾದರಿ ಕಂಡುಬರುತ್ತದೆ. ಮಹಿಳಾ ಕಾರ್ಮಿಕರ ಪಾಲು ಅತ್ಯಧಿಕವಾಗಿರುವ ಅಗ್ರ ಹತ್ತು ಜಿಲ್ಲೆಗಳು ತೆಲಂಗಾಣ, ಮಣಿಪುರ, ಮೇಘಾಲಯ ಮತ್ತು ಮಿಜೋರಾಂನಲ್ಲಿವೆ. ಈ ರಾಜ್ಯಗಳ ನಿಗಮಿತವಲ್ಲದ ವಲಯದಲ್ಲಿ ಮಹಿಳೆಯರು ವಹಿಸುತ್ತಿರುವ ಮಹತ್ವದ ಪಾತ್ರವನ್ನು ಇದು ಪ್ರತಿಬಿಂಬಿಸುತ್ತದೆ. 237 ಜಿಲ್ಲೆಗಳಲ್ಲಿ ನಿಗಮಿತವಲ್ಲದ ವಲಯದ ಒಟ್ಟು ಕಾರ್ಮಿಕರ ಪೈಕಿ ಮಹಿಳೆಯರ ಪ್ರಮಾಣ ಮೂರನೇ ಒಂದು ಭಾಗದಷ್ಟಿದೆ. ಇದೇ ವೇಳೆ, 25 ಜಿಲ್ಲೆಗಳಲ್ಲಿ ಮಹಿಳಾ ಕಾರ್ಮಿಕರ ಪ್ರಮಾಣವು ಒಟ್ಟು ಕಾರ್ಮಿಕರ ಪೈಕಿ ಶೇ.50ಕ್ಕಿಂತ ಹೆಚ್ಚಿದೆ.

ಕೋಷ್ಟಕ 1ರಲ್ಲಿ 33 ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಪೈಕಿ ಪ್ರತಿಯೊಂದರಲ್ಲೂ ಅತಿ ಹೆಚ್ಚು ಕೊಡುಗೆ ನೀಡುವ ಜಿಲ್ಲೆ ಹಾಗೂ ರಾಜ್ಯ/ಕೇಂದ್ರಾಡಳಿತ ಪ್ರದೇಶದ ಒಟ್ಟು ನಿಗಮಿತವಲ್ಲದ ಉದ್ಯಮ ಘಟಕಗಳಲ್ಲಿ ಅದರ ಶೇಕಡಾವಾರು ಕೊಡುಗೆಯನ್ನು ನೀಡಲಾಗಿದೆ.

 

ರಾಜ್ಯ

ರಾಜ್ಯದಲ್ಲಿ ಹೆಚ್ಚು ಅಂದಾಜು ಉದ್ಯಮಗಳನ್ನು ಹೊಂದಿರುವ ಜಿಲ್ಲೆ

ರಾಜ್ಯ/ಕೇಂದ್ರಾಡಳಿತ ಪ್ರದೇಶದೊಳಗಿನ ಶೇಕಡಾವಾರು ಕೊಡುಗೆ

ರಾಜ್ಯ

ಹೆಚ್ಚು ಅಂದಾಜು ಉದ್ಯಮಗಳನ್ನು ಹೊಂದಿರುವ ಜಿಲ್ಲೆ

ರಾಜ್ಯ/ಕೇಂದ್ರಾಡಳಿತ ಪ್ರದೇಶದೊಳಗಿನ ಶೇಕಡಾವಾರು ಕೊಡುಗೆ

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು

ದಕ್ಷಿಣ ಅಂಡಮಾನ್

61.04

ಮಹಾರಾಷ್ಟ್ರ

ಪುಣೆ

9.14

ಆಂಧ್ರ ಪ್ರದೇಶ

ಪ್ರಕಾಶಂ

5.61

ಮಣಿಪುರ

ಇಂಫಾಲ ಪಶ್ಚಿಮ

24.75

ಅರುಣಾಚಲ ಪ್ರದೇಶ

ಪಾಪಂ ಪಾರೇ

24.57

ಮೇಘಾಲಯ

ಪೂರ್ವ ಖಾಸಿ ಹಿಲ್ಸ್

26.85

ಅಸ್ಸಾಂ

ಧುಬ್ರಿ

8.14

ಮಿಜೋರಾಂ

ಐಜ್ವಾಲ್

31.49

ಬಿಹಾರ

ಪಾಟ್ನಾ

8.23

ನಾಗಾಲ್ಯಾಂಡ್

ಕೊಹಿಮಾ

17.54

ಛತ್ತೀಸ್‌ಗಢ

ದುರ್ಗ್

11.08

ಒಡಿಶಾ

ಮಯೂರ್‌ಭಂಜ್

10.65

ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ದಿಯು

ದಾದ್ರಾ ಮತ್ತು ನಗರ ಹವೇಲಿ

65.48

ಪುದುಚೇರಿ

ಪುದುಚೇರಿ

76.64

ಗೋವಾ

ಉತ್ತರ ಗೋವಾ

77.66

ಪಂಜಾಬ್

ಲೂಧಿಯಾನ

14.74

ಗುಜರಾತ್

ಸೂರತ್

19.43

ರಾಜಸ್ಥಾನ

ಜೈಪುರ

11.70

ಹರಿಯಾಣ

ಗುರುಗ್ರಾಮ

9.96

ಸಿಕ್ಕಿಂ

ಗ್ಯಾಂಗ್ಟಕ್

27.97

ಹಿಮಾಚಲ ಪ್ರದೇಶ

ಕಾಂಗ್ರಾ

19.02

ತಮಿಳುನಾಡು

ಚೆನ್ನೈ

7.13

ಜಮ್ಮು ಮತ್ತು ಕಾಶ್ಮೀರ

ಶ್ರೀನಗರ

18.49

ತೆಲಂಗಾಣ

ರಂಗಾರೆಡ್ಡಿ

23.53

ಜಾರ್ಖಂಡ್

ಗಿರ್ದಿಹ್

10.70

ತ್ರಿಪುರ

ಪಶ್ಚಿಮ ತ್ರಿಪುರ

32.66

ಕರ್ನಾಟಕ

ಬೆಂಗಳೂರು (ನಗರ)

12.83

ಉತ್ತರ ಪ್ರದೇಶ

ಪ್ರಯಾಗ್‌ರಾಜ್

5.77

ಕೇರಳ

ತಿರುವನಂತಪುರಂ

12.38

ಉತ್ತರಾಖಂಡ

ಉಧಮ್ ಸಿಂಗ್ ನಗರ

23.03

ಲಡಾಖ್

ಲೇಹ್

59.00

ಪಶ್ಚಿಮ ಬಂಗಾಳ

ಉತ್ತರ ಇಪ್ಪತ್ತನಾಲ್ಕು ಪರಗಣ

15.99

ಮಧ್ಯಪ್ರದೇಶ

ಜಬಲ್‌ಪುರ

6.03

     

 

ನಿಗಮಿತವಲ್ಲದ ವಲಯದ ಉದ್ಯಮಗಳ ವಾರ್ಷಿಕ ಸಮೀಕ್ಷೆಯ (ASUSE) ವ್ಯಾಪ್ತಿ, ಮಾದರಿ ಯೋಜನೆ ಮತ್ತು ದತ್ತಾಂಶ ಸಂಗ್ರಹಣೆ ಕಾರ್ಯವಿಧಾನದ ಬಗ್ಗೆ ಸಂಕ್ಷಿಪ್ತ ವಿವರಣೆ:

A. ವ್ಯಾಪ್ತಿ:

A.1. ಭೌಗೋಳಿಕವಾಗಿ, ಈ ಸಮೀಕ್ಷೆಯು ಇಡೀ ಭಾರತದ ಗ್ರಾಮೀಣ ಮತ್ತು ನಗರ ಪ್ರದೇಶಗಳನ್ನು ಒಳಗೊಂಡಿದೆ (ತಲುಪಲು ಕಷ್ಟವಾಗಿರುವ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಕೆಲವು ಗ್ರಾಮಗಳನ್ನು ಹೊರತುಪಡಿಸಿ).

A.2. ವಲಯವಾರು, ಈ ಸಮೀಕ್ಷೆಯು ಉತ್ಪಾದನೆ, ವ್ಯಾಪಾರ ಮತ್ತು ಇತರೆ ಸೇವೆಗಳು ಎಂಬ ಮೂರು ವಲಯಗಳಿಗೆ ಸೇರಿದ ನಿಗಮಿತವಲ್ಲದ ಕೃಷಿಯೇತರ ಉದ್ಯಮ ಘಟಕಗಳನ್ನು ಒಳಗೊಂಡಿದೆ.

A.3. ಮಾಲೀಕತ್ವದ ಆಧಾರದ ಮೇಲೆ, ಏಕಮಾಲೀಕತ್ವ, ಪಾಲುದಾರಿಕೆ (ಸೀಮಿತ ಹೊಣೆಗಾರಿಕೆ ಪಾಲುದಾರಿಕೆಗಳನ್ನು ಹೊರತುಪಡಿಸಿ), ಸಹಕಾರ ಸಂಘಗಳು, ಸಂಘಗಳು/ಟ್ರಸ್ಟ್‌ಗಳು ಇತ್ಯಾದಿಗಳಿಗೆ ಸೇರಿದ ನಿಗಮಿತವಲ್ಲದ ಕೃಷಿಯೇತರ ಉದ್ಯಮ ಘಟಕಗಳು ಈ ಸಮೀಕ್ಷೆಯಲ್ಲಿ ಒಳಗೊಂಡಿವೆ.

B. ಮಾದರಿ ಆಯ್ಕೆ ಯೋಜನೆ:

ಈ ಸಮೀಕ್ಷೆಯನ್ನು ಬಹುಹಂತದ ಸ್ತರೀಕೃತ ಮಾದರಿ ಆಯ್ಕೆ ಯೋಜನೆಯನ್ನು ಅನುಸರಿಸಿ ನಡೆಸಲಾಗಿದೆ. ಇದರಲ್ಲಿ ಮೊದಲ ಹಂತದ ಘಟಕಗಳು (ಎಫ್‌ ಎಸ್‌ ಯು) ಗ್ರಾಮೀಣ ಪ್ರದೇಶಗಳಲ್ಲಿ ಜನಗಣತಿ ಗ್ರಾಮಗಳಾಗಿವೆ (ಗ್ರಾಮೀಣ ಕೇರಳವನ್ನು ಹೊರತುಪಡಿಸಿ; ಅಲ್ಲಿ ಪಂಚಾಯತ್ ವಾರ್ಡ್‌ಗಳನ್ನು ಎಫ್‌ ಎಸ್‌ ಯು ಆಗಿ ಪರಿಗಣಿಸಲಾಗಿದೆ). ನಗರ ಪ್ರದೇಶಗಳಲ್ಲಿ ನಿಯತಕಾಲಿಕವಾಗಿ ನವೀಕರಿಸಲಾಗುವ ಯು ಎಫ್‌ ಎಸ್ (ನಗರ ಚೌಕಟ್ಟು ಸಮೀಕ್ಷೆ) ಬ್ಲಾಕ್‌ಗಳನ್ನು ಮೊದಲ ಹಂತದ ಘಟಕಗಳಾಗಿ ಪರಿಗಣಿಸಲಾಗಿದೆ. ಅಂತಿಮ ಹಂತದ ಘಟಕಗಳು (ಯು ಎಸ್‌ ಯು) ಎರಡೂ ವಲಯಗಳಲ್ಲಿ ಉದ್ಯಮ ಘಟಕಗಳಾಗಿವೆ. ದೊಡ್ಡ ಗಾತ್ರದ ಎಫ್‌ ಎಸ್‌ ಯು ಗಳ ಸಂದರ್ಭದಲ್ಲಿ, ಗ್ರಾಮೀಣ ಪ್ರದೇಶಗಳಲ್ಲಿ ಹ್ಯಾಮ್ಲೆಟ್ ಗುಂಪುಗಳು ಮತ್ತು ನಗರ ಪ್ರದೇಶಗಳಲ್ಲಿ ಉಪ-ಬ್ಲಾಕ್‌ಗಳ ರೂಪದಲ್ಲಿ ಒಂದು ಮಧ್ಯಂತರ ಹಂತದ ಮಾದರಿ ಆಯ್ಕೆಯನ್ನು ಕೈಗೊಳ್ಳಲಾಗಿದೆ.

ದೆಹಲಿಯ ಗ್ರಾಮೀಣ ವಲಯದಲ್ಲಿ ಜನಸಂಖ್ಯೆ ಅತ್ಯಂತ ಕಡಿಮೆ ಇರುವುದರಿಂದ ಮತ್ತು ಗ್ರಾಮಗಳ ಸಂಖ್ಯೆಯೂ ಬಹಳ ಕಡಿಮೆ ಇರುವುದರಿಂದ, ದೆಹಲಿಯ ಎಲ್ಲಾ ಜಿಲ್ಲೆಗಳನ್ನು ಒಂದೇ ಸ್ತರವಾಗಿ ವಿಲೀನಗೊಳಿಸಿ, ಆ ಸ್ತರದಿಂದ ಗ್ರಾಮೀಣ ಪ್ರದೇಶಗಳಲ್ಲಿನ ಮಾದರಿ ಎಫ್‌ ಎಸ್‌ ಯು ಗಳನ್ನು ಆಯ್ಕೆ ಮಾಡಲಾಗಿದೆ. ನಗರ ಪ್ರದೇಶಗಳಲ್ಲಿಯೂ ಇದೇ ವಿಧಾನವನ್ನು ಅನುಸರಿಸಲಾಗಿದೆ. ಆದ್ದರಿಂದ, ದೆಹಲಿಗೆ ಜಿಲ್ಲಾ ಮಟ್ಟದ ಅಂದಾಜುಗಳನ್ನು ಸಿದ್ಧಪಡಿಸಲು ಮತ್ತು ಈ ವರದಿಯಲ್ಲಿ ಪ್ರಸ್ತುತಪಡಿಸಲು ಸಾಧ್ಯವಾಗಿಲ್ಲ.

D. ದತ್ತಾಂಶ ಸಂಗ್ರಹಣಾ ವ್ಯವಸ್ಥೆ:

ಈ ಸಮೀಕ್ಷೆಯನ್ನು ಪ್ರದೇಶ ಚೌಕಟ್ಟಿನ ಆಧಾರದ ಮೇಲೆ ನಡೆಸಲಾಗಿದೆ. ಗ್ರಾಮೀಣ ಮತ್ತು ನಗರ ಎರಡೂ ವಲಯಗಳ ಆಯ್ದ ಎಫ್‌ ಎಸ್‌ ಯು ಗಳಲ್ಲಿ ಉದ್ಯಮ ಘಟಕಗಳ ಪಟ್ಟಿಯನ್ನು ಸಿದ್ಧಪಡಿಸಲಾಯಿತು. ಮಾದರಿ ಆಯ್ಕೆ ವಿನ್ಯಾಸದ ಪ್ರಕಾರ, ಈ ಎಫ್‌ ಎಸ್‌ ಯು ಗಳಲ್ಲಿ ಸಿದ್ಧಪಡಿಸಲಾದ ಪಟ್ಟಿಯಲ್ಲಿರುವ ಉದ್ಯಮ ಘಟಕಗಳ ಪೈಕಿ ಅಗತ್ಯ ಸಂಖ್ಯೆಯ ಉದ್ಯಮ ಘಟಕಗಳ ಸಮೀಕ್ಷೆ ನಡೆಸಲಾಯಿತು. ಸಾಮಾನ್ಯವಾಗಿ, ‘ಮಾಸಿಕ’ ಉಲ್ಲೇಖ ಅವಧಿಗೆ ಸಂಬಂಧಿಸಿದ ಮಾಹಿತಿಯನ್ನು ಆಯ್ದ ಉದ್ಯಮ ಘಟಕಗಳಿಂದ ಮೌಖಿಕ ವಿಚಾರಣೆಯ ಮೂಲಕ ಸಂಗ್ರಹಿಸಲಾಯಿತು. ಸಮೀಕ್ಷೆಯ ದತ್ತಾಂಶವನ್ನು ಕಂಪ್ಯೂಟರ್ ನೆರವಿನ ವೈಯಕ್ತಿಕ ಸಂದರ್ಶನ ವಿಧಾನ (CAPI) ಬಳಸಿ ಟ್ಯಾಬ್ಲೆಟ್‌ ಗಳಲ್ಲಿ ಸಂಗ್ರಹಿಸಲಾಯಿತು.

E. ಬಳಕೆದಾರರಿಗೆ ಸೂಚನೆ ಮತ್ತು ಗಮನಿಸಬೇಕಾದ ಅಂಶಗಳು:

ಜಿಲ್ಲಾ ಮಟ್ಟದ ಅಂದಾಜುಗಳು ಮಾದರಿ ಸಮೀಕ್ಷೆಯ ದತ್ತಾಂಶವನ್ನು ಆಧರಿಸಿವೆ. ಆದ್ದರಿಂದ, ಆರ್ಥಿಕ ಮತ್ತು ಜನಸಂಖ್ಯಾ ಲಕ್ಷಣಗಳು, ಕೈಗಾರಿಕಾ ಸಂಯೋಜನೆಯಲ್ಲಿನ ವ್ಯತ್ಯಾಸಗಳು, ಸ್ಥಳೀಯ ಪರಿಸ್ಥಿತಿಗಳು ಮತ್ತು ಮಾದರಿ ಆಯ್ಕೆಯಿಂದ ಉಂಟಾಗುವ ವ್ಯತ್ಯಾಸಗಳನ್ನು ಪರಿಗಣಿಸಿ ಈ ಅಂದಾಜುಗಳನ್ನು ಅರ್ಥೈಸಬೇಕು. ಅಂದಾಜುಗಳ ಸೂಕ್ತ ಬಳಕೆಗೆ ಅನುಕೂಲವಾಗುವಂತೆ, ಸಾಪೇಕ್ಷ ಪ್ರಮಾಣಿತ ದೋಷಗಳ (ಆರ್‌ ಎಸ್‌ ಇ) ರೂಪದಲ್ಲಿ ಅಂಕಿಅಂಶಗಳ ವಿಶ್ವಾಸಾರ್ಹತೆಯ ಮಾಪನಗಳನ್ನು ಒದಗಿಸಲಾಗಿದೆ. ಕೆಲವು ಸಂದರ್ಭಗಳಲ್ಲಿ, ಈ ವರದಿಯಲ್ಲಿ ನೀಡಲಾಗಿರುವ ಸಾಪೇಕ್ಷ ಪ್ರಮಾಣಿತ ದೋಷಗಳು (ಆರ್‌ ಎಸ್‌ ಇ) ಹೆಚ್ಚಾಗಿವೆ. ಆದ್ದರಿಂದ, ಅಂತಹ ಸಂದರ್ಭಗಳನ್ನು ಆಧರಿಸಿ ನಿರ್ಣಯಗಳನ್ನು ಕೈಗೊಳ್ಳುವಾಗ ಸೂಕ್ತ ಎಚ್ಚರಿಕೆ ವಹಿಸಬೇಕು.

 

ಜಿಲ್ಲಾಮಟ್ಟದಲ್ಲಿ ನಿಗಮಿತವಲ್ಲದ ವಲಯ: ASUSE 2025ರ ಒಳನೋಟಗಳು ವರದಿಯು ಸಚಿವಾಲಯದ ವೆಬ್‌ಸೈಟ್‌ನಲ್ಲಿ (https://www.mospi.gov.in) ಲಭ್ಯವಿದೆ. ಪ್ರಕಟಣೆಗಳು/ವರದಿಗಳನ್ನು ಪ್ರವೇಶಿಸಲು ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿ.

*****

 


(ಪ್ರಕಟಣೆ ಐ.ಡಿ.: 2308811) ವಿಸಿಟರ್ ಕೌಂಟರ್ : 12
ಪ್ರಕಟಣೆಯನ್ನು ಇದರಲ್ಲಿ ಓದಿ: English , Gujarati , Urdu , हिन्दी