ರೈಲ್ವೇ ಸಚಿವಾಲಯ
azadi ka amrit mahotsav

ದೆಹಲಿ ವಿಭಾಗೀಯ ನಿಯಂತ್ರಣ ಕಚೇರಿಯಲ್ಲಿ ಸುರಕ್ಷತೆ, ಕಾರ್ಯಾಚರಣೆ, ಸಮಯಪಾಲನೆ ಮತ್ತು ಸಾರ್ವಜನಿಕ ಕುಂದುಕೊರತೆಗಳನ್ನು ಪರಾಮರ್ಶಿಸಿದ ರೈಲ್ವೆ ಸಹಾಯಕ ಸಚಿವರಾದ ಶ್ರೀ ವಿ. ಸೋಮಣ್ಣ

ಪ್ರಕಟಣಾ ದಿನಾಂಕ: 09 SEP 2026 5:50PM by PIB Bengaluru

ರೈಲ್ವೆ ಮತ್ತು ಜಲಶಕ್ತಿ ಸಹಾಯಕ ಸಚಿವರಾದ ಶ್ರೀ ವಿ. ಸೋಮಣ್ಣ ಅವರು, ಇಂದು ದೆಹಲಿ ವಿಭಾಗದ ನಿಯಂತ್ರಣ ಕಚೇರಿಗೆ ಭೇಟಿ ನೀಡಿ ಸುರಕ್ಷತೆ, ರೈಲು ಕಾರ್ಯಾಚರಣೆ, ಸಮಯಪಾಲನೆ ಮತ್ತು ಸಾರ್ವಜನಿಕ ಕುಂದುಕೊರತೆಗಳು ಸೇರಿದಂತೆ ರೈಲ್ವೆ ಕಾರ್ಯಾಚರಣೆಯ ವಿವಿಧ ಮಗ್ಗಲುಗಳನ್ನು ಪರಿಶೀಲಿಸಿದರು. ಈ ಭೇಟಿಯ ಸಮಯದಲ್ಲಿ, ಸಚಿವರು ನಿಯಂತ್ರಣ ಕಚೇರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಯೊಂದಿಗೆ ಸಂವಾದ ನಡೆಸಿದರು. ದೆಹಲಿ ಡಿಆರ್‌ಎಮ್ (DRM) ಶ್ರೀ ಪುಷ್ಪೇಶ್ ಆರ್. ತ್ರಿಪಾಠಿ ಮತ್ತು ಅವರ ತಂಡದೊಂದಿಗೆ ಅವರು ವಿವರವಾದ ಚರ್ಚೆಗಳನ್ನು ನಡೆಸಿದರು.

ನಿಯಂತ್ರಣ ಕಚೇರಿಯು ರೈಲ್ವೆ ವಿಭಾಗದ ಪ್ರಮುಖ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ, ಅಲ್ಲಿ ರೈಲು ಸಂಚಾರ, ನಿರ್ವಹಣಾ ಯೋಜನೆ, ಮೇಲ್ವಿಚಾರಣೆ ಮತ್ತು ಸುರಕ್ಷತೆ-ಸಂಬಂಧಿತ ಚಟುವಟಿಕೆಗಳನ್ನು ಗಡಿಯಾರ ಸುತ್ತುವಂತೆ (ಚತುರ್ವಿಂಶತಿ ಗಂಟೆಯೂ) ಪರಿಶೀಲಿಸಲಾಗುತ್ತದೆ. ಈ ಕಾರ್ಯಗಳನ್ನು ದಿನದ 24 ಗಂಟೆಯೂ, ವಾರದ ಏಳೂ ದಿನ ಹಾಗೂ ವರ್ಷದ 365 ದಿನಗಳ ಕಾಲ ನಿರ್ವಹಿಸಲಾಗುತ್ತದೆ.

ಪ್ರಮುಖ ನಿಯಂತ್ರಣ ವಿಭಾಗಗಳ ಕಾರ್ಯನಿರ್ವಹಣೆಯನ್ನು ಪರಿಶೀಲಿಸಿದ ಸಚಿವರು

ತಮ್ಮ ಭೇಟಿಯ ಸಮಯದಲ್ಲಿ, ಶ್ರೀ ವಿ. ಸೋಮಣ್ಣ ಅವರು ಸೆಕ್ಷನ್ ಕಂಟ್ರೋಲರ್‌ಗಳು ಹಾಗೂ ಎಂಜಿನಿಯರಿಂಗ್, ಕೋಚಿಂಗ್, ಗೂಡ್ಸ್, ಕಮರ್ಷಿಯಲ್, ಸಿಗ್ನಲ್ ಮತ್ತು ಟೆಲಿಕಾಂ, ಟ್ರಾಕ್ಷನ್ ಮತ್ತು ಸೆಕ್ಯುರಿಟಿ ಕಂಟ್ರೋಲ್‌ಗಳು ಸೇರಿದಂತೆ ನಿಯಂತ್ರಣ ಕಚೇರಿಯ ವಿವಿಧ ಪ್ರಮುಖ ವಿಭಾಗಗಳ ಕಾರ್ಯನಿರ್ವಹಣೆಯನ್ನು ವೀಕ್ಷಿಸಿದರು. ಅವರು ಆಧುನಿಕ ತಂತ್ರಜ್ಞಾನದ ಸುಪರ್ವೈಸರಿ ಕಂಟ್ರೋಲ್ ಮತ್ತು ಡೇಟಾ ಅಕ್ವಿಸಿಷನ್ (SCADA) ಕೇಂದ್ರ ಮತ್ತು ದೆಹಲಿ ವಿಭಾಗದ ವಾರ್ ರೂಮ್‌ಗೂ ಭೇಟಿ ನೀಡಿದರು.

ದೆಹಲಿ ವಿಭಾಗವು ಭಾರತೀಯ ರೈಲ್ವೆ ಜಾಲದ ಅತ್ಯಂತ ಸಂಕೀರ್ಣ ಆಡಳಿತಾತ್ಮಕ ವಿಭಾಗಗಳಲ್ಲಿ ಒಂದಾಗಿದೆ. ಅಧಿಕಾರಿಗಳು ಮತ್ತು ಸಿಬ್ಬಂದಿಯೊಂದಿಗಿನ ತಮ್ಮ ಸಂವಾದದ ಸಮಯದಲ್ಲಿ, ಸಚಿವರು ರೈಲ್ವೆ ಕಾರ್ಯಾಚರಣೆಯ ಸಂಕೀರ್ಣತೆಗಳನ್ನು ಅರ್ಥೈಸಿಕೊಂಡರು ಮತ್ತು ಮತ್ತಷ್ಟು ಸುಧಾರಣೆಗಾಗಿ ಕ್ಷೇತ್ರಗಳನ್ನು ಗುರುತಿಸಲು ಮುಂಚೂಣಿ ಸಿಬ್ಬಂದಿಯಿಂದ ಒಳನೋಟಗಳನ್ನು ಅವರು ಪಡೆದರು.

ಈ ಚರ್ಚೆಗಳು ಹೆಚ್ಚಿನ ತಂತ್ರಜ್ಞಾನ ಅಳವಡಿಕೆಗೆ ಇರುವ ಅವಕಾಶಗಳು, ಸಿಬ್ಬಂದಿಯ ಕೆಲಸದ ವಾತಾವರಣದ ಸುಧಾರಣೆ ಮತ್ತು ರೈಲ್ವೆ ಕಾರ್ಯಾಚರಣೆಗಳು ಹಾಗೂ ಮೂಲಸೌಕರ್ಯಗಳ ಭವಿಷ್ಯದ ಅಭಿವೃದ್ಧಿಯನ್ನು ಒಳಗೊಂಡಿದ್ದವು.

ರೈಲ್ವೆ ಸುರಕ್ಷತೆ ಮತ್ತು ಕಾರ್ಯಾಚರಣೆಯನ್ನು ಬಲಪಡಿಸುತ್ತಿರುವ ತಂತ್ರಜ್ಞಾನ ಅಳವಡಿಕೆ

ರೈಲು ಕಾರ್ಯಾಚರಣೆ, ಸುರಕ್ಷತಾ ಮೇಲ್ವಿಚಾರಣೆ ಮತ್ತು ನಿರ್ವಹಣಾ ಪರಿಶೀಲನೆ ಸೇರಿದಂತೆ ರೈಲ್ವೆ ಕಾರ್ಯನಿರ್ವಹಣೆಯ ವಿವಿಧ ಮಗ್ಗಲುಗಳಲ್ಲಿ ತಂತ್ರಜ್ಞಾನವನ್ನು ಕ್ಷಿಪ್ರವಾಗಿ ಅಳವಡಿಸಿಕೊಳ್ಳುತ್ತಿರುವುದನ್ನು ಶ್ರೀ ವಿ. ಸೋಮಣ್ಣ ಎತ್ತಿ ತೋರಿದರು. ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಮತ್ತು ಕೇಂದ್ರ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರ ಮಾರ್ಗದರ್ಶನದಲ್ಲಿ, ಭಾರತೀಯ ರೈಲ್ವೆಯಲ್ಲಿ ತಂತ್ರಜ್ಞಾನ ಅಳವಡಿಕೆಯು ಈ ಎಲ್ಲಾ ಕ್ಷೇತ್ರಗಳಲ್ಲಿ ಗಮನಾರ್ಹವಾಗಿ ವೇಗ ಪಡೆದುಕೊಂಡಿದೆ ಎಂದು ಅವರು ಒತ್ತಿ ಹೇಳಿದರು.

ತಂತ್ರಜ್ಞಾನ-ಚಾಲಿತ ವ್ಯವಸ್ಥೆಗಳು ಮಾನವ ಸಹಜ ತಪ್ಪುಗಳನ್ನು ಕಡಿಮೆ ಮಾಡಲು ಮತ್ತು ಸುರಕ್ಷತೆಯನ್ನು ಹೆಚ್ಚಿಸಲು ಸಹಾಯ ಮಾಡಿವೆ, ಮತ್ತು 'ಮೇಕ್ ಇನ್ ಇಂಡಿಯಾ' ಹಾಗೂ ಇತರ ನೀತಿ ಉಪಕ್ರಮಗಳ ಮೇಲಿನ ನಿರಂತರ ಗಮನದೊಂದಿಗೆ ಈ ಶ್ರಮವನ್ನು ಭವಿಷ್ಯದಲ್ಲಿ ಇನ್ನಷ್ಟು ಬಲಪಡಿಸಲಾಗುವುದು ಎಂದು ಶ್ರೀ ವಿ. ಸೋಮಣ್ಣ ಉಲ್ಲೇಖಿಸಿದರು.

ರೈಲ್ವೆ ಸಿಬ್ಬಂದಿಯ ಶಿಸ್ತು, ಸಮರ್ಪಣೆ ಮತ್ತು ಶ್ರಮವನ್ನು ಪ್ರಶಂಸಿಸಿದ ಶ್ರೀ ಸೋಮಣ್ಣ ಅವರು, ರೈಲ್ವೆ ಉದ್ಯೋಗಿಗಳು ಸೇನೆಗೆ ಹೋಲಿಸಬಹುದಾದ ಬದ್ಧತೆಯ ಮಟ್ಟದೊಂದಿಗೆ ಗಡಿಯಾರ ಸುತ್ತುವಂತೆ ಹಗಲಿರುಳು ಕೆಲಸ ಮಾಡುತ್ತಾರೆ ಎಂದು ಹೇಳಿದರು.

ಭೇಟಿಯು ಭಾರತೀಯ ರೈಲ್ವೆಯ ಕಾರ್ಯಕ್ಷಮತೆಯನ್ನು ಮತ್ತಷ್ಟು ಹೆಚ್ಚಿಸಲು ತಂತ್ರಜ್ಞಾನ-ಚಾಲಿತ ಮೇಲ್ವಿಚಾರಣೆ, ಕಾರ್ಯಾಚರಣೆಯ ದಕ್ಷತೆ, ಸುರಕ್ಷತಾ ಪರಿಶೀಲನೆ ಮತ್ತು ಸಿಬ್ಬಂದಿ-ಕೇಂದ್ರಿತ ಸುಧಾರಣೆಗಳನ್ನು ಬಲಪಡಿಸುವ ಮಹತ್ವವನ್ನು ಪುನರುಚ್ಚರಿಸಿತು.

******


(ಪ್ರಕಟಣೆ ಐ.ಡಿ.: 2308478) ವಿಸಿಟರ್ ಕೌಂಟರ್ : 7
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Tamil